ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಎಲ್ಲವನ್ನು ಸೃಷ್ಟಿಸಲಾಯಿತೆಂಬ ನನ್ನ ನಂಬಿಕೆಯನ್ನು ಹೇಗೆ ಸಮರ್ಥಿಸಬಲ್ಲೆ?

ಎಲ್ಲವನ್ನು ಸೃಷ್ಟಿಸಲಾಯಿತೆಂಬ ನನ್ನ ನಂಬಿಕೆಯನ್ನು ಹೇಗೆ ಸಮರ್ಥಿಸಬಲ್ಲೆ?

ಯುವ ಜನರು ಪ್ರಶ್ನಿಸುವುದು . . .

ಎಲ್ಲವನ್ನು ಸೃಷ್ಟಿಸಲಾಯಿತೆಂಬ ನನ್ನ ನಂಬಿಕೆಯನ್ನು ಹೇಗೆ ಸಮರ್ಥಿಸಬಲ್ಲೆ?

“ತರಗತಿಯಲ್ಲಿ ಚರ್ಚಿಸಲ್ಪಟ್ಟ ಜೀವವಿಕಾಸದ ವಿಷಯವು, ನನಗೇನನ್ನು ಕಲಿಸಲಾಗಿತ್ತೊ ಅದೆಲ್ಲದಕ್ಕಿಂತಲೂ ತುಂಬ ಭಿನ್ನವಾಗಿತ್ತು. ಅಲ್ಲದೆ, ಅದನ್ನು ಒಂದು ವಾಸ್ತವಾಂಶವೆಂಬಂತೆ ಪ್ರಸ್ತುತಪಡಿಸಲಾಗಿತ್ತು. ಇದರಿಂದಾಗಿ ನನಗೆ ಗಾಬರಿಯಾಯಿತು.” ​​—⁠ ರೈಅನ್‌, 18.

“ನಾನು ಸುಮಾರು 12 ವರ್ಷದವನಾಗಿದ್ದಾಗ ನನಗೆ ಶಿಕ್ಷಕಿಯಾಗಿದ್ದವರು ಪಕ್ಕಾ ವಿಕಾಸವಾದಿಯಾಗಿದ್ದರು. ಅವರು ತಮ್ಮ ಕಾರ್‌ ಮೇಲೆಯೂ ಡಾರ್ವಿನನ ಲಾಂಛನವನ್ನು ಅಂಟಿಸಿದ್ದರು! ಇದು, ದೇವರು ಎಲ್ಲವನ್ನು ಸೃಷ್ಟಿಸಿದನೆಂಬ ನನ್ನ ನಂಬಿಕೆಯನ್ನು ಸಮರ್ಥಿಸಲು ಹಿಂಜರಿಯುವಂತೆ ಮಾಡಿತು.”​​—⁠ ಟೈಲರ್‌, 19.

“ನನ್ನ ಸಾಮಾಜಿಕ ಅಧ್ಯಯನಗಳ ಟೀಚರ್‌ ನಮ್ಮ ಮುಂದಿನ ಪಾಠವು ಜೀವವಿಕಾಸದ ಬಗ್ಗೆ ಎಂದು ಹೇಳಿದಾಗ ನಾನು ದಿಗಿಲುಗೊಂಡೆ. ಏಕೆಂದರೆ ಈ ವಿವಾದಾಸ್ಪದ ವಿಷಯದ ಬಗ್ಗೆ ನನ್ನ ಅಭಿಪ್ರಾಯವೇನೆಂಬುದನ್ನು ಇಡೀ ತರಗತಿಗೆ ವಿವರಿಸಬೇಕಾಗಬಹುದೆಂದು ನನಗೆ ಗೊತ್ತಿತ್ತು.”​​—⁠ ರಾಕೆಲ್‌, 14.

ರೈಅನ್‌, ಟೈಲರ್‌ ಮತ್ತು ರಾಕೆಲ್‌ಳಂತೆ, ತರಗತಿಯಲ್ಲಿ ಜೀವವಿಕಾಸದ ವಿಷಯವು ಬರುವಾಗ ನಿಮಗೂ ಸ್ವಲ್ಪ ಕಸಿವಿಸಿಯಾಗಬಹುದು. ಏಕೆಂದರೆ ದೇವರೇ ‘ಸಮಸ್ತವನ್ನು ಸೃಷ್ಟಿಸಿದನು’ ಎಂದು ನೀವು ನಂಬುತ್ತೀರಿ. (ಪ್ರಕಟನೆ 4:11) ಮಾತ್ರವಲ್ಲದೆ, ಬುದ್ಧಿವಂತಿಕೆಯಿಂದ ಮಾಡಲ್ಪಟ್ಟಿರುವ ವಿನ್ಯಾಸಕ್ಕೆ ನಿಮ್ಮ ಸುತ್ತಮುತ್ತಲೂ ಪುರಾವೆಯಿರುವುದನ್ನು ನೀವು ನೋಡುತ್ತೀರಿ. ಆದರೆ ಪಠ್ಯಪುಸ್ತಕಗಳು ನಾವು ವಿಕಾಸದಿಂದ ಬಂದಿದ್ದೇವೆಂದು ಹೇಳುತ್ತವೆ ಮತ್ತು ನಿಮ್ಮ ಶಿಕ್ಷಕರೂ ಅದನ್ನೇ ಹೇಳುತ್ತಾರೆ. ಆದುದರಿಂದ, ‘ಈ ಎಲ್ಲ ದೊಡ್ಡ “ಪರಿಣತ”ರೊಂದಿಗೆ ವಾದಮಾಡಲು ನಾನ್ಯಾರು?’ ಅಲ್ಲದೆ, ‘ನಾನು ದೇವರ ಬಗ್ಗೆ ಮಾತಾಡಲಾರಂಭಿಸಿದರೆ ನನ್ನ ಸಹಪಾಠಿಗಳು ನನ್ನ ಬಗ್ಗೆ ಏನು ನೆನಸುವರು?’ ಎಂದು ನೀವು ಯೋಚಿಸಬಹುದು.

ಈ ಪ್ರಶ್ನೆಗಳ ಬಗ್ಗೆ ನೀವು ತಲೆಕೆಡಿಸಿಕೊಂಡಿದ್ದೀರೊ? ಹಾಗಿದ್ದರೆ, ಚಿಂತಿಸಬೇಡಿ! ಎಲ್ಲವನ್ನೂ ಸೃಷ್ಟಿಸಲಾಯಿತೆಂದು ನಂಬುವವರು ನೀವೊಬ್ಬರೇ ಅಲ್ಲ. ನಿಜ ಹೇಳಬೇಕಾದರೆ, ಹಲವಾರು ವಿಜ್ಞಾನಿಗಳು ಸಹ ಜೀವವಿಕಾಸದ ಸಿದ್ಧಾಂತವನ್ನು ಒಪ್ಪಿಕೊಳ್ಳುವುದಿಲ್ಲ. ಅನೇಕ ಶಿಕ್ಷಕರೂ ಅದನ್ನು ನಂಬುವುದಿಲ್ಲ. ಒಂದು ದೇಶದಲ್ಲಿ, 5 ವಿದ್ಯಾರ್ಥಿಗಳಲ್ಲಿ 4 ಮಂದಿ ಒಬ್ಬ ಸೃಷ್ಟಿಕರ್ತನಿದ್ದಾನೆಂದು ನಂಬುತ್ತಾರೆ. ಪಠ್ಯಪುಸ್ತಕಗಳು ಏನು ಹೇಳುತ್ತವೆಂದು ಇವರಿಗೆ ಗೊತ್ತಿದ್ದರೂ ಅವರು ಹೀಗೆ ನಂಬುತ್ತಾರೆ!

ಆದರೆ, ‘ಎಲ್ಲವನ್ನು ಸೃಷ್ಟಿಸಲಾಯಿತೆಂಬ ನನ್ನ ನಂಬಿಕೆಯನ್ನು ಸಮರ್ಥಿಸಲು ನಾನೇನು ಹೇಳಬಲ್ಲೆ?’ ಎಂದು ನೀವು ಕೇಳಬಹುದು. ಒಂದುವೇಳೆ ನೀವು ಅಂಜುವ ಸ್ವಭಾವದವರಾಗಿದ್ದರೂ ನಿಮ್ಮ ನಿಲುವನ್ನು ಖಂಡಿತವಾಗಿಯೂ ಭರವಸೆಯಿಂದ ವ್ಯಕ್ತಪಡಿಸಬಲ್ಲಿರೆಂಬ ನಿಶ್ಚಯ ನಿಮಗಿರಸಾಧ್ಯವಿದೆ. ಆದರೆ ಅದಕ್ಕಾಗಿ ಸ್ವಲ್ಪ ತಯಾರಿ ಅಗತ್ಯ.

ನಿಮ್ಮ ನಂಬಿಕೆಗಳನ್ನು ಪರೀಕ್ಷಿಸಿರಿ

ಒಂದುವೇಳೆ ನೀವು ಕ್ರೈಸ್ತ ಹೆತ್ತವರಿಂದ ಬೆಳೆಸಲ್ಪಡುತ್ತಿರುವುದಾದರೆ, ಅವರು ನಿಮಗೆ ಸೃಷ್ಟಿಯ ಬಗ್ಗೆ ಕಲಿಸಿದ್ದಾರೆಂಬ ಕಾರಣಕ್ಕಾಗಿ ಮಾತ್ರ ನೀವದನ್ನು ನಂಬುತ್ತಿರಬಹುದು. ಆದರೆ ನೀವೀಗ ದೊಡ್ಡವರಾಗುತ್ತಿದ್ದೀರಿ, ಆದುದರಿಂದ ನೀವು ನಿಮ್ಮ ನಂಬಿಕೆಗಳಿಗಾಗಿ ದೃಢವಾದ ಅಸ್ತಿವಾರವನ್ನು ಹೊಂದಿದ್ದು, ನಿಮ್ಮ ಸ್ವಂತ “ತರ್ಕಶಕ್ತಿ”ಯಿಂದ ದೇವರನ್ನು ಆರಾಧಿಸಬೇಕು. (ರೋಮಾಪುರ 12:⁠1, NW) ಪ್ರಥಮ ಶತಮಾನದ ಕ್ರೈಸ್ತರು ‘ಎಲ್ಲವನ್ನೂ ಪರಿಶೋಧಿಸುವಂತೆ’ ಪೌಲನು ಉತ್ತೇಜಿಸಿದನು. (1 ಥೆಸಲೊನೀಕ 5:21) ಎಲ್ಲವನ್ನು ಸೃಷ್ಟಿಸಲಾಯಿತೆಂಬ ನಿಮ್ಮ ನಂಬಿಕೆಗಳ ವಿಷಯದಲ್ಲಿ ನೀವಿದನ್ನು ಹೇಗೆ ಮಾಡಬಲ್ಲಿರಿ?

ಪ್ರಥಮವಾಗಿ, ಪೌಲನು ದೇವರ ಬಗ್ಗೆ ಬರೆದಂಥ ಒಂದು ವಿಷಯವನ್ನು ಪರಿಗಣಿಸಿರಿ: “ಕಣ್ಣಿಗೆ ಕಾಣದಿರುವ ಆತನ ಗುಣಲಕ್ಷಣಗಳು ಅಂದರೆ ಆತನ ನಿತ್ಯಶಕ್ತಿಯೂ ದೇವತ್ವವೂ ಜಗದುತ್ಪತ್ತಿ ಮೊದಲುಗೊಂಡು ಆತನು ಮಾಡಿದ ಸೃಷ್ಟಿಗಳ ಮೂಲಕ ಬುದ್ಧಿಗೆ ಗೊತ್ತಾಗಿ ಕಾಣಬರುತ್ತವೆ.” (ರೋಮಾಪುರ 1:20) ಈ ಮಾತುಗಳನ್ನು ಮನಸ್ಸಿನಲ್ಲಿಟ್ಟು ಮಾನವ ಶರೀರ, ಭೂಮಿ, ವಿಶಾಲವಾದ ವಿಶ್ವ, ಸಾಗರದ ಆಳಗಳನ್ನು ನಿಕಟವಾಗಿ ಪರಿಶೀಲಿಸಿರಿ. ಕೀಟಗಳ, ಸಸ್ಯಗಳ, ಪ್ರಾಣಿಗಳ ಚಿತ್ತಾಕರ್ಷಕ ಜಗತ್ತನ್ನು, ಅಂದರೆ ಒಟ್ಟಿನಲ್ಲಿ ನಿಮಗೆ ಸ್ವಾರಸ್ಯಕರವಾಗಿರುವ ಯಾವುದೇ ಕ್ಷೇತ್ರವನ್ನು ಪರೀಕ್ಷಿಸಿರಿ. ತದನಂತರ ನಿಮ್ಮ “ತರ್ಕಶಕ್ತಿಯನ್ನು” ಬಳಸುತ್ತಾ ನಿಮ್ಮನ್ನು ಹೀಗೆ ಕೇಳಿಕೊಳ್ಳಿ: ‘ಒಬ್ಬ ಸೃಷ್ಟಿಕರ್ತನಿದ್ದಾನೆಂದು ನನಗೆ ಯಾವುದರಿಂದ ಮನದಟ್ಟಾಗುತ್ತದೆ?’

ಈ ಪ್ರಶ್ನೆಯನ್ನು ಉತ್ತರಿಸಲು 14 ವರ್ಷದವನಾದ ಸ್ಯಾಮ್‌ ಕೊಡುವ ಉದಾಹರಣೆಯು ಮಾನವ ಶರೀರದ್ದಾಗಿದೆ. “ಅದರಲ್ಲಿ ಎಷ್ಟು ವಿವರಗಳಿವೆ ಮತ್ತು ಅದೆಷ್ಟು ಜಟಿಲವಾಗಿದೆ. ಅಲ್ಲದೆ, ಅದರ ಎಲ್ಲ ಅಂಗಗಳು ಎಷ್ಟು ಉತ್ತಮವಾಗಿ ಹೊಂದಿಕೆಯಿಂದ ಕೆಲಸಮಾಡುತ್ತವೆ. ಮಾನವ ಶರೀರವು ನಿಶ್ಚಯವಾಗಿಯೂ ವಿಕಾಸಹೊಂದಿರಲು ಸಾಧ್ಯವೇ ಇಲ್ಲ!” ಎಂದವನು ಹೇಳುತ್ತಾನೆ. ಈ ಮಾತನ್ನು 16 ವರ್ಷದ ಹಾಲಿ ಒಪ್ಪಿಕೊಳ್ಳುತ್ತಾ ಹೇಳುವುದು: “ನನಗೆ ಡೈಅಬಿಟೀಸ್‌ ಕಾಯಿಲೆ ಇದೆಯೆಂದು ಪತ್ತೆಮಾಡಲ್ಪಟ್ಟಂದಿನಿಂದ, ದೇಹವು ಹೇಗೆ ಕೆಲಸಮಾಡುತ್ತದೆಂಬುದರ ಬಗ್ಗೆ ನಾನು ಬಹಳಷ್ಟನ್ನು ಕಲಿತಿದ್ದೇನೆ. ಉದಾಹರಣೆಗಾಗಿ, ರಕ್ತ ಹಾಗೂ ಇತರ ಅಂಗಗಳು ಕಾರ್ಯನಿರ್ವಹಿಸುತ್ತಾ ಇರುವಂತೆ ಮಾಡುವುದರಲ್ಲಿ ಹೊಟ್ಟೆಯ ಹಿಂಬದಿಯಿರುವ ಒಂದು ಪುಟ್ಟ ಅಂಗವಾದ ಮೇದೋಜೀರಕ ಗ್ರಂಥಿಯು ಎಷ್ಟು ಬೃಹತ್‌ ಕೆಲಸವನ್ನು ಮಾಡುತ್ತದೆಂಬುದು ಅಚ್ಚರಿಯ ಸಂಗತಿಯಾಗಿದೆ.”

ಬೇರೆ ಯುವಜನರು ಈ ವಿಷಯವನ್ನು ಭಿನ್ನ ದೃಷ್ಟಿಕೋನದಿಂದ ನೋಡುತ್ತಾರೆ. 19 ವರ್ಷದ ಜ್ಯಾರೆಡ್‌ ಎಂಬವನು ಹೇಳುವುದು: “ನನಗಿರುವ ಅತಿ ದೊಡ್ಡ ರುಜುವಾತೇನೆಂದರೆ, ಮಾನವರಾದ ನಮಗೆ ಆಧ್ಯಾತ್ಮಿಕತೆಯ ಸಾಮರ್ಥ್ಯವಿದೆ ಮತ್ತು ಅದರ ಅಗತ್ಯವೂ ಇದೆ. ಅಷ್ಟುಮಾತ್ರವಲ್ಲದೆ, ಸೌಂದರ್ಯವನ್ನು ಸವಿಯುವ ಮತ್ತು ಕಲಿಯಬೇಕೆಂಬ ಆಸೆಯೂ ನಮ್ಮಲ್ಲಿದೆ. ಜೀವವಿಕಾಸ ಸಿದ್ಧಾಂತಕ್ಕನುಸಾರ ಉಳಿವಿಗಾಗಿ ಇವೆಲ್ಲದ್ದರ ಅಗತ್ಯವಿಲ್ಲ. ಹೀಗಿರುವುದರಿಂದ ಜೀವನದಲ್ಲಿ ಆನಂದಿಸಲಿಕ್ಕಾಗಿ ನಮ್ಮನ್ನು ಇಲ್ಲಿ ಸೃಷ್ಟಿಸಲಾಗಿತ್ತೆಂಬ ವಿವರಣೆಯೇ ನನಗೆ ಅರ್ಥವತ್ತಾಗಿ ತೋರುತ್ತದೆ.” ಆರಂಭದಲ್ಲಿ ತಿಳಿಸಲ್ಪಟ್ಟಿರುವ ಟೈಲರ್‌ ಸಹ ಅದೇ ತೀರ್ಮಾನಕ್ಕೆ ಬಂದನು. ಅವನು ಹೇಳಿದ್ದು: “ಜೀವಪೋಷಣೆಯಲ್ಲಿ ಸಸ್ಯಗಳ ಪಾತ್ರ ಮತ್ತು ಅವುಗಳ ರಚನೆಯಲ್ಲಿನ ದಂಗುಗೊಳಿಸುವಂಥ ಜಟಿಲತೆಯನ್ನು ಪರಿಗಣಿಸುವಾಗ, ಒಬ್ಬ ಸೃಷ್ಟಿಕರ್ತನು ಇರಲೇಬೇಕೆಂದು ನನಗೆ ಮನದಟ್ಟಾಗುತ್ತದೆ.”

ಎಲ್ಲವನ್ನೂ ಸೃಷ್ಟಿಸಲಾಯಿತೆಂಬುದರ ಬಗ್ಗೆ ಚೆನ್ನಾಗಿ ಯೋಚಿಸಿ ಅದರ ಬಗ್ಗೆ ನಿಮಗೆ ನಿಜವಾಗಿಯೂ ಮನದಟ್ಟಾಗಿರುವಲ್ಲಿ, ಅದನ್ನು ಸಮರ್ಥಿಸುತ್ತಾ ಎಲ್ಲರ ಮುಂದೆ ಮಾತಾಡಲು ಹೆಚ್ಚು ಸುಲಭವಾಗುವುದು. ಆದುದರಿಂದ ಸ್ಯಾಮ್‌, ಹಾಲಿ, ಜ್ಯಾರೆಡ್‌ ಮತ್ತು ಟೈಲರ್‌ನಂತೆ ದೇವರ ಕೈಕೃತಿಗಳ ಅದ್ಭುತಗಳನ್ನು ಪರಿಗಣಿಸಲು ಸ್ವಲ್ಪ ಸಮಯತೆಗೆದುಕೊಳ್ಳಿ. ತದನಂತರ, ಈ ವಿಷಯಗಳು ನಿಮಗೆ ಏನು “ಹೇಳುತ್ತಿವೆ” ಎಂಬುದಕ್ಕೆ “ಕಿವಿಗೊಡಿ.” ಆಗ ನೀವು ಸಹ ಅಪೊಸ್ತಲ ಪೌಲನಂತೆಯೇ, ದೇವರಿದ್ದಾನೆಂಬುದನ್ನು ಮಾತ್ರವಲ್ಲ ಆತನ ಗುಣಗಳನ್ನೂ ‘ಸೃಷ್ಟಿಗಳ ಮೂಲಕ’ ಸ್ಪಷ್ಟವಾಗಿ ನೋಡಸಾಧ್ಯವಿದೆ ಎಂಬ ತೀರ್ಮಾನಕ್ಕೆ ಬರುವಿರೆಂಬುದರಲ್ಲಿ ಸಂದೇಹವೇ ಇಲ್ಲ. *

ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆಂದು ತಿಳಿದುಕೊಳ್ಳಿರಿ

ಎಲ್ಲವನ್ನು ಸೃಷ್ಟಿಸಲಾಯಿತೆಂಬದನ್ನು ಸಮರ್ಥಿಸಲಿಕ್ಕೋಸ್ಕರ, ದೇವರು ಉಂಟುಮಾಡಿರುವ ವಿಷಯಗಳನ್ನು ಪರಿಶೀಲಿಸುವುದರ ಜೊತೆಗೆ ಬೈಬಲ್‌ ಆ ವಿಷಯದ ಕುರಿತು ನಿಜವಾಗಿ ಏನನ್ನು ಬೋಧಿಸುತ್ತದೆಂದು ನೀವು ತಿಳಿಯುವ ಅಗತ್ಯವೂ ಇದೆ. ಬೈಬಲ್‌ ನೇರವಾಗಿ ಏನನ್ನು ಹೇಳುವುದಿಲ್ಲವೊ ಅದರ ಬಗ್ಗೆ ವಾದಿಸುವ ಅಗತ್ಯವಿಲ್ಲ. ಇದರ ಕೆಲವು ಉದಾಹರಣೆಗಳು ಇಲ್ಲಿ ಕೊಡಲ್ಪಟ್ಟಿವೆ.

ನನ್ನ ವಿಜ್ಞಾನದ ಪಠ್ಯಪುಸ್ತಕವು, ಭೂಮಿ ಮತ್ತು ಸೌರವ್ಯೂಹ ಕೋಟ್ಯನುಕೋಟಿ ವರ್ಷಗಳಿಂದ ಅಸ್ತಿತ್ವದಲ್ಲಿದೆಯೆಂದು ಹೇಳುತ್ತದೆ. ಈ ಭೂಮಿ ಇಲ್ಲವೆ ಸೌರವ್ಯೂಹದ ವಯಸ್ಸಿನ ಬಗ್ಗೆ ಬೈಬಲ್‌ ಏನೂ ಹೇಳುವುದಿಲ್ಲ. ವಾಸ್ತವದಲ್ಲಿ ಅದೇನು ಹೇಳುತ್ತದೊ ಅದು, ಈ ಇಡೀ ವಿಶ್ವವು ಪ್ರಥಮ ಸೃಷ್ಟಿಯ ‘ದಿನಕ್ಕೆ’ ಮುಂಚೆಯೇ ಕೋಟ್ಯನುಕೋಟಿ ವರ್ಷಗಳಿಂದ ಅಸ್ತಿತ್ವದಲ್ಲಿದ್ದಿರಬಹುದೆಂಬ ವಿಚಾರದೊಂದಿಗೆ ಹೊಂದಿಕೆಯಲ್ಲಿದೆ.​—⁠ಆದಿಕಾಂಡ 1:​1, 2.

ಭೂಮಿಯ ಸೃಷ್ಟಿ ಬರೀ ಆರು ದಿನಗಳಲ್ಲಿ ಆಗಲು ಸಾಧ್ಯವೇ ಇಲ್ಲವೆಂದು ನನ್ನ ಟೀಚರ್‌ ಹೇಳುತ್ತಾರೆ. ಆ ಆರು ಸೃಷ್ಟಿ ‘ದಿನಗಳು’ ಅಕ್ಷರಶಃ 24 ತಾಸುಗಳ ಅವಧಿಯದ್ದಾಗಿತ್ತೆಂದು ಬೈಬಲ್‌ ಹೇಳುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ, ಈ ಪತ್ರಿಕೆಯ 18-20ನೇ ಪುಟಗಳನ್ನು ನೋಡಿರಿ.

ಸಮಯ ದಾಟಿದಂತೆ ಪ್ರಾಣಿಗಳ ಮತ್ತು ಮಾನವರ ರೂಪವು ಹೇಗೆ ಬದಲಾಗುತ್ತಾ ಹೋಯಿತು ಎಂಬದಕ್ಕೆ ಮನದಟ್ಟುಮಾಡುವಂಥ ಹಲವಾರು ಉದಾಹರಣೆಗಳನ್ನು ನಮ್ಮ ತರಗತಿಯಲ್ಲಿ ಚರ್ಚಿಸಲಾಯಿತು. ದೇವರು ಜೀವರಾಶಿಯನ್ನು “ಅವುಗಳ ಜಾತಿಗನುಸಾರವಾಗಿ” ಸೃಷ್ಟಿಸಿದನೆಂದು ಬೈಬಲ್‌ ಹೇಳುತ್ತದೆ. (ಆದಿಕಾಂಡ 1:​20, 21) ಜೀವವು ನಿರ್ಜೀವ ಪದಾರ್ಥದಿಂದ ಬಂತು ಇಲ್ಲವೆ ಏಕಾಣುವಿನಿಂದ ವಿಕಾಸದ ಪ್ರಕ್ರಿಯೆಯನ್ನು ಆರಂಭಿಸಿದವನು ದೇವರೇ ಎಂಬ ವಿಚಾರವನ್ನು ಬೈಬಲ್‌ ಬೆಂಬಲಿಸುವುದಿಲ್ಲ. ಹಾಗಿದ್ದರೂ, ಪ್ರತಿಯೊಂದು ‘ಜಾತಿಗೆ’ ಬಹಳಷ್ಟು ವೈವಿಧ್ಯವಿರುವ ಸಾಮರ್ಥ್ಯವಿದೆ. ಆದುದರಿಂದ ಪ್ರತಿಯೊಂದು ‘ಜಾತಿ’ಯೊಳಗೆ ಬದಲಾವಣೆಗಳಾಗುತ್ತವೆ ಎಂಬ ವಿಚಾರಕ್ಕೆ ಬೈಬಲ್‌ ಎಡೆಕೊಡುತ್ತದೆ.

ನಿಮ್ಮ ನಂಬಿಕೆಗಳ ಬಗ್ಗೆ ದೃಢಭರವಸೆಯಿಂದಿರಿ!

ಎಲ್ಲವೂ ಸೃಷ್ಟಿಸಲ್ಪಟ್ಟಿತ್ತೆಂದು ನೀವು ನಂಬುತ್ತಿರುವುದಕ್ಕಾಗಿ ಮುಜುಗರಪಡಬೇಕಾಗಿಲ್ಲ ಇಲ್ಲವೆ ನಾಚಿಕೆಪಡಬೇಕಾಗಿಲ್ಲ. ಪುರಾವೆಯನ್ನು ಪರಿಗಣಿಸುವಾಗ, ಎಲ್ಲವನ್ನೂ ಬುದ್ಧಿವಂತಿಕೆಯಿಂದ ವಿನ್ಯಾಸಿಸಲಾಯಿತೆಂದು ನಂಬುವುದು ಪೂರ್ತಿಯಾಗಿ ತರ್ಕಸಮ್ಮತ ಮಾತ್ರವಲ್ಲ ವೈಜ್ಞಾನಿಕವೂ ಆಗಿದೆಯೆಂದು ತಿಳಿದುಬರುತ್ತದೆ. ಕೊನೆಯಲ್ಲಿ ಹೇಳುವುದಾದರೆ, ಯಾವುದೇ ತರ್ಕಸಂಗತ ಸಾಕ್ಷ್ಯವಿಲ್ಲದೆ ಕಣ್ಮುಚ್ಚಿ ನಂಬಿಬಿಡುವಂತೆ ಹಾಗೂ ಚಮತ್ಕಾರ ನಡೆಸುವವನಿಲ್ಲದೆ ಚಮತ್ಕಾರಗಳಾಗಬಲ್ಲವೆಂದು ನಂಬುವಂತೆ ಅವಶ್ಯಪಡಿಸುವಂಥದ್ದು ಜೀವವಿಕಾಸದ ಸಿದ್ಧಾಂತವೇ ವಿನಾಃ ಸೃಷ್ಟಿಯಲ್ಲ. ವಾಸ್ತವದಲ್ಲಿ ಪುರಾವೆಯು ಎಲ್ಲವನ್ನೂ ಸೃಷ್ಟಿಸಲಾಯಿತೆಂಬ ಪಕ್ಷದಲ್ಲಿದೆಯೆಂದು ಎಚ್ಚರ! ಪತ್ರಿಕೆಯ ಈ ಸಂಚಿಕೆಯಲ್ಲಿನ ಇತರ ಲೇಖನಗಳನ್ನು ಪರಿಗಣಿಸಿದ ನಂತರ ನಿಮಗೆ ಮನವರಿಕೆಯಾಗುವುದು ನಿಸ್ಸಂದೇಹ. ನಿಮ್ಮ ತರ್ಕಶಕ್ತಿಯನ್ನು ಬಳಸಿ ನೀವು ಈ ವಿಷಯದ ಬಗ್ಗೆ ಜಾಗ್ರತೆಯಿಂದ ಪರ್ಯಾಲೋಚಿಸಿದ ಬಳಿಕ, ನಿಮ್ಮ ತರಗತಿಯಲ್ಲಿ ಎಲ್ಲರ ಮುಂದೆ ನಿಮ್ಮ ನಂಬಿಕೆಯನ್ನು ಸಮರ್ಥಿಸಲು ನಿಮಗೆ ದೃಢಭರವಸೆಯಿರುವುದು.

ಆರಂಭದಲ್ಲಿ ಉಲ್ಲೇಖಿಸಲ್ಪಟ್ಟಿರುವ ರಾಕೆಲ್‌ ಇದು ಸತ್ಯವೆಂದು ಕಂಡುಕೊಂಡಳು. ಅವಳು ಹೇಳುವುದು: “ನನ್ನ ನಂಬಿಕೆಗಳ ಬಗ್ಗೆ ನಾನು ಮೌನವಾಗಿರಬಾರದೆಂದು ಕೆಲವೇ ದಿನಗಳಲ್ಲಿ ಗ್ರಹಿಸಿದೆ. ಆದುದರಿಂದ, ನನ್ನ ಟೀಚರ್‌ಗೆ ಜೀವ​—⁠ಇಲ್ಲಿಗೆ ಹೇಗೆ ಬಂತು? ವಿಕಾಸದಿಂದಲೊ ಸೃಷ್ಟಿಯಿಂದಲೊ? (ಇಂಗ್ಲಿಷ್‌) ಎಂಬ ಪುಸ್ತಕವನ್ನು ಕೊಟ್ಟೆ. ಅದರಲ್ಲಿ, ನಾನು ಅವರ ಗಮನಕ್ಕೆ ತರಬೇಕೆಂದಿದ್ದ ಭಾಗಗಳನ್ನು ಹೈಲೈಟ್‌ ಮಾಡಿಟ್ಟಿದ್ದೆ. ಆ ಪುಸ್ತಕ ಓದಿದ ಬಳಿಕ, ಅದು ಅವರಿಗೆ ಜೀವವಿಕಾಸದ ಸಿದ್ಧಾಂತವನ್ನು ಒಂದು ಹೊಸ ದೃಷ್ಟಿಕೋನದಿಂದ ನೋಡುವಂತೆ ಮಾಡಿತು ಮತ್ತು ಮುಂದೆ ಅವರು ಈ ವಿಷಯವನ್ನು ಚರ್ಚಿಸುವಾಗಲೆಲ್ಲ ಆ ಮಾಹಿತಿಯನ್ನು ಗಣನೆಗೆ ತೆಗೆದುಕೊಳ್ಳುವರೆಂದು ಹೇಳಿದರು.” (9/06)

“ಯುವ ಜನರು ಪ್ರಶ್ನಿಸುವುದು . . . ” ಲೇಖನಮಾಲೆಯ ಹೆಚ್ಚಿನ ಲೇಖನಗಳನ್ನು www.watchtower.org/ype ವೆಬ್‌ಸೈಟ್‌ನಲ್ಲಿ ಕಂಡುಕೊಳ್ಳಬಹುದು

ಇದರ ಕುರಿತು ಯೋಚಿಸಿ

◼ ಎಲ್ಲವನ್ನು ಸೃಷ್ಟಿಸಲಾಯಿತೆಂಬ ನಿಮ್ಮ ನಂಬಿಕೆಯನ್ನು ಶಾಲೆಯಲ್ಲಿ ಸುಲಭವಾಗಿ ವ್ಯಕ್ತಪಡಿಸಬಹುದಾದ ಕೆಲವು ವಿಧಗಳಾವವು?

◼ ಎಲ್ಲವನ್ನೂ ಸೃಷ್ಟಿಮಾಡಿದಾತನಿಗೆ ನಿಮ್ಮ ಕೃತಜ್ಞತೆಯನ್ನು ಹೇಗೆ ತೋರಿಸಬಲ್ಲಿರಿ?​—⁠ಅ. ಕೃತ್ಯಗಳು 17:​26, 27.

[ಪಾದಟಿಪ್ಪಣಿ]

^ ಪ್ಯಾರ. 14 ಜೀವ​—⁠ಇಲ್ಲಿಗೆ ಹೇಗೆ ಬಂತು? ವಿಕಾಸದಿಂದಲೊ ಸೃಷ್ಟಿಯಿಂದಲೊ? ಮತ್ತು ನಿಮ್ಮ ಕುರಿತು ಕಾಳಜಿವಹಿಸುವ ಒಬ್ಬ ಸೃಷ್ಟಿಕರ್ತನು ಇದ್ದಾನೊ? (ಇಂಗ್ಲಿಷ್‌) ಎಂಬಂಥ ಪ್ರಕಾಶನಗಳಲ್ಲಿರುವ ಮಾಹಿತಿಯನ್ನು ವಿಮರ್ಶಿಸುವುದರಿಂದ ಅನೇಕ ಯುವಜನರು ಪ್ರಯೋಜನಪಡೆದಿದ್ದಾರೆ. ಇವೆರಡು ಪುಸ್ತಕಗಳು ಯೆಹೋವನ ಸಾಕ್ಷಿಗಳಿಂದ ಪ್ರಕಟಿಸಲ್ಪಟ್ಟಿವೆ.

[ಪುಟ 27ರಲ್ಲಿರುವ ಚೌಕ]

“ಹೇರಳವಾದ ಪುರಾವೆಯಿದೆ”

“ಸೃಷ್ಟಿಕರ್ತನೊಬ್ಬನು ಇದ್ದಾನೆಂದು ನಂಬುವಂತೆ ಹೆತ್ತವರಿಂದ ಕಲಿಸಲ್ಪಟ್ಟಿದ್ದರೂ ಶಾಲೆಯಲ್ಲಿ ಜೀವವಿಕಾಸ ಸಿದ್ಧಾಂತವನ್ನು ಕಲಿಸಲಾಗುವ ಒಬ್ಬ ಯುವ ವ್ಯಕ್ತಿಗೆ ನೀವೇನು ಸಲಹೆಕೊಡುವಿರಿ?” ಎಂದು ಯೆಹೋವನ ಸಾಕ್ಷಿಯಾಗಿರುವ ಸೂಕ್ಷ್ಮಜೀವಿವಿಜ್ಞಾನಿಯೊಬ್ಬಳಿಗೆ ಕೇಳಲಾಯಿತು. ಅವಳ ಉತ್ತರವೇನಾಗಿತ್ತು? “ನೀವು ಈ ಸನ್ನಿವೇಶವನ್ನು, ದೇವರೊಬ್ಬನಿದ್ದಾನೆಂದು ಸ್ವತಃ ನಿಮಗೆ ರುಜುಪಡಿಸಿಕೊಳ್ಳುವ ಒಂದು ಅವಕಾಶವಾಗಿ ದೃಷ್ಟಿಸಬೇಕು. ದೇವರಿದ್ದಾನೆಂದು ನಿಮ್ಮ ಹೆತ್ತವರು ಕಲಿಸಿರುವ ಕಾರಣಕ್ಕಾಗಿ ಮಾತ್ರ ನೀವು ಅದನ್ನು ನಂಬಬಾರದು, ಬದಲಾಗಿ ನೀವೇ ಪುರಾವೆಯನ್ನು ಪರೀಕ್ಷಿಸಿ ಆ ತೀರ್ಮಾನಕ್ಕೆ ಬರಬೇಕು. ಕೆಲವೊಮ್ಮೆ, ಶಿಕ್ಷಕರಿಗೆ ಜೀವವಿಕಾಸ ಸಿದ್ಧಾಂತವನ್ನು ‘ರುಜುಪಡಿಸುವಂತೆ’ ಕೇಳಲಾಗುವಾಗ, ಅವರಿಗದನ್ನು ಮಾಡಲು ಸಾಧ್ಯವಾಗುವುದಿಲ್ಲ. ಈ ಸಿದ್ಧಾಂತವು ತಮಗೆ ಕಲಿಸಲ್ಪಟ್ಟ ಕಾರಣಕ್ಕಾಗಿ ಮಾತ್ರ ತಾವದನ್ನು ಸ್ವೀಕರಿಸಿದ್ದೇವೆಂದು ಆಗ ಅವರು ಗ್ರಹಿಸುತ್ತಾರೆ. ನೀವು ಸಹ, ಸೃಷ್ಟಿಕರ್ತನಿದ್ದಾನೆಂಬ ನಿಮ್ಮ ನಂಬಿಕೆಯ ವಿಷಯದಲ್ಲಿ ಅದೇ ಬಲೆಗೆ ಬೀಳುವ ಸಾಧ್ಯತೆಯಿದೆ. ಆದುದರಿಂದ, ದೇವರು ನಿಜವಾಗಿ ಅಸ್ತಿತ್ವದಲ್ಲಿದ್ದಾನೆಂಬುದನ್ನು ಸ್ವತಃ ನಿಮಗೆ ರುಜುಪಡಿಸಿಕೊಳ್ಳುವುದು ಸಾರ್ಥಕ. ಹೇರಳವಾದ ಪುರಾವೆಯಿದೆ. ಅದನ್ನು ಹುಡುಕುವುದು ಕಷ್ಟಕರವಲ್ಲ.”

[ಪುಟ 28ರಲ್ಲಿರುವ ಚೌಕ/ಚಿತ್ರ]

ನಿಮಗೆ ಯಾವುದು ಮನದಟ್ಟು ಮಾಡುತ್ತದೆ?

ಒಬ್ಬ ಸೃಷ್ಟಿಕರ್ತನಿದ್ದಾನೆಂದು ನಿಮಗೆ ಮನದಟ್ಟುಮಾಡುವ ಮೂರು ವಿಷಯಗಳನ್ನು ಪಟ್ಟಿಮಾಡಿರಿ:

1. ․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․

2. ․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․

3. ․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․