ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜೀವವಿಕಾಸವು ವಾಸ್ತವಾಂಶವೇ?

ಜೀವವಿಕಾಸವು ವಾಸ್ತವಾಂಶವೇ?

ಜೀವವಿಕಾಸವು  ವಾಸ್ತವಾಂಶವೇ?

ಪ್ರಸಿದ್ಧ ಜೀವವಿಕಾಸ ವಿಜ್ಞಾನಿ ಪ್ರೊಫೆಸರ್‌ ರಿಚರ್ಡ್‌ ಡಾಕನ್ಸ್‌, “ಜೀವವಿಕಾಸವು ಸೂರ್ಯಶಾಖದಷ್ಟೇ ಸತ್ಯವಾದ ವಾಸ್ತವಾಂಶ” ಎಂದು ಹೇಳುತ್ತಾರೆ. ಸೂರ್ಯ ಬಿಸಿ ಆಗಿದೆಯೆಂಬುದನ್ನು ಪ್ರಯೋಗಗಳು ಹಾಗೂ ನೇರ ವೀಕ್ಷಣೆಗಳು ರುಜುಪಡಿಸಿವೆ ನಿಶ್ಚಯ. ಆದರೆ ಅಷ್ಟೇ ನಿರ್ವಿವಾದದ ಬೆಂಬಲವನ್ನು ಪ್ರಯೋಗಗಳು ಮತ್ತು ನೇರ ವೀಕ್ಷಣೆಗಳು ಜೀವವಿಕಾಸದ ಬೋಧನೆಗೆ ಕೊಡುತ್ತವೊ?

ಆ ಪ್ರಶ್ನೆಯನ್ನು ಉತ್ತರಿಸುವ ಮುಂಚೆ ಒಂದು ವಿಷಯವನ್ನು ಸ್ಪಷ್ಟಪಡಿಸುವ ಅಗತ್ಯವಿದೆ. ಜೀವಿಗಳ ಮುಂದಿನ ಪೀಳಿಗೆಗಳಲ್ಲಿ ಕಾಲಾನುಕಾಲಕ್ಕೆ ಸ್ವಲ್ಪ ಬದಲಾವಣೆಗಳಾಗಬಹುದೆಂದು ಅನೇಕ ವಿಜ್ಞಾನಿಗಳು ಗಮನಿಸಿದ್ದಾರೆ ಮತ್ತು ಈ ಪ್ರಕ್ರಿಯೆಯನ್ನು ಚಾರ್ಲ್ಸ್‌ ಡಾರ್ವಿನ್‌, “ಮುಂದೆ ಪರಿವರ್ತನೆ ಹೊಂದುವ ವಂಶಕ್ರಮ” ಎಂದು ಕರೆದನು. ಇಂಥ ಬದಲಾವಣೆಗಳನ್ನು ನೇರವಾಗಿ ಗಮನಿಸಲಾಗಿದೆ, ಪ್ರಯೋಗಗಳಲ್ಲಿ ದಾಖಲಿಸಲಾಗಿದೆ ಮತ್ತು ಸಸ್ಯ ಹಾಗೂ ಪ್ರಾಣಿ ತಳಿಗಾರರು (ಬ್ರೀಡರ್ಸ್‌) ಇದನ್ನು ಚಾತುರ್ಯದಿಂದ ಬಳಸಿದ್ದಾರೆ. * ಆದುದರಿಂದ ಈ ಬದಲಾವಣೆಗಳನ್ನು ವಾಸ್ತವಾಂಶಗಳೆಂದು ಪರಿಗಣಿಸಸಾಧ್ಯವಿದೆ. ಆದರೆ ವಿಜ್ಞಾನಿಗಳು ಇಂತಹ ಚಿಕ್ಕ ಬದಲಾವಣೆಗಳನ್ನು ಸೂಕ್ಷ್ಮವಿಕಾಸ (ಮೈಕ್ರೋಎವಲ್ಯೂಷನ್‌) ಎಂದು ಕರೆಯುತ್ತಾರೆ. ಈ ಹೆಸರೇ, ಅನೇಕ ವಿಜ್ಞಾನಿಗಳು ವಾದಿಸುವ ಸಂಗತಿಗೆ, ಅಂದರೆ ಜೀವಿಗಳಲ್ಲಾಗುವ ಸೂಕ್ಷ್ಮ ಬದಲಾವಣೆಗಳು ಬೃಹದ್ವಿಕಾಸಕ್ಕೆ (ಮ್ಯಾಕ್ರೋಎವಲ್ಯೂಷನ್‌) ಪುರಾವೆಯಾಗಿದೆ ಎಂಬುದನ್ನು ಸೂಚಿಸುತ್ತದೆ. ಆದರೆ ಬೃಹದ್ವಿಕಾಸವು ಸಂಪೂರ್ಣವಾಗಿ ಭಿನ್ನವಾದ ಮತ್ತು ಯಾರೂ ನೋಡಿರದಂಥ ಪ್ರಕ್ರಿಯೆಯಾಗಿದೆ.

ಡಾರ್ವಿನನು, ನೇರವಾಗಿ ನೋಡಸಾಧ್ಯವಿರುವಂಥ ಅಂತಹ ಬದಲಾವಣೆಗಳಿಗಿಂತ ಮುಂದಕ್ಕೆ ಹೋದನು. ಜೀವಿ ಪ್ರಭೇದಗಳ ಉಗಮ (ಇಂಗ್ಲಿಷ್‌) ಎಂಬ ತನ್ನ ಪ್ರಸಿದ್ಧ ಪುಸ್ತಕದಲ್ಲಿ ಅವನು ಬರೆದುದು: “ನನ್ನ ಅಭಿಪ್ರಾಯದಲ್ಲಿ, ಎಲ್ಲ ಜೀವಿಗಳು ವಿಶೇಷ ರೀತಿಯ ಸೃಷ್ಟಿಗಳಲ್ಲ ಬದಲಾಗಿ ಕೆಲವೇ ಜೀವಿಗಳ ವಂಶಸ್ಥ ಜೀವಿಗಳಾಗಿವೆ.” ಆದಿಯಲ್ಲಿದ್ದ ಈ “ಕೆಲವೇ ಜೀವಿಗಳು” ಅಥವಾ ಸರಳವಾದ ಜೀವರೂಪಗಳು ಬಹು ವಿಸ್ತಾರವಾದ ಸಮಯಾವಧಿಗಳಾದ್ಯಂತ “ತೀರ ಚಿಕ್ಕ ಪರಿವರ್ತನೆಗಳ” ಮೂಲಕ ನಿಧಾನವಾಗಿ, ಭೂಮಿಯ ಮೇಲಿರುವ ಕೋಟ್ಯಂತರ ಜೀವರೂಪಗಳಾಗಿ ವಿಕಾಸಗೊಂಡವು ಎಂದು ಡಾರ್ವಿನ್‌ ಹೇಳಿದನು. ಈ ಚಿಕ್ಕ ಬದಲಾವಣೆಗಳು ಸಂಗ್ರಹವಾಗುತ್ತಾ, ಮೀನುಗಳನ್ನು ಉಭಯಚರಿಗಳಾಗಿ (ಆ್ಯಂಫೀಬಿಯನ್‌) ಮತ್ತು ಕಪಿಗಳನ್ನು ಮನುಷ್ಯರಾಗಿ ಮಾಡಿದ ದೊಡ್ಡ ಬದಲಾವಣೆಗಳನ್ನು ಉಂಟುಮಾಡಿದವೆಂದು ವಿಕಾಸವಾದಿಗಳು ಬೋಧಿಸುತ್ತಾರೆ. ಇಂತಹ ಭಾವಿತ ದೊಡ್ಡ ಬದಲಾವಣೆಗಳನ್ನು ಬೃಹದ್ವಿಕಾಸ (ಮ್ಯಾಕ್ರೋಎವಲ್ಯೂಷನ್‌) ಎಂದು ಸೂಚಿಸಲಾಗುತ್ತದೆ. ಅನೇಕರಿಗೆ, ಈ ಎರಡನೆಯ ವಾದವು ತರ್ಕಬದ್ಧವೆಂದು ತೋರುತ್ತದೆ. ‘ಒಂದೇ ಪ್ರಭೇದದೊಳಗೆ ಚಿಕ್ಕ ಬದಲಾವಣೆಗಳು ಸಾಧ್ಯವಿರುವಲ್ಲಿ, ದೀರ್ಘಾವಧಿಗಳಾದ್ಯಂತ ಜೀವವಿಕಾಸದಿಂದ ದೊಡ್ಡ ಬದಲಾವಣೆಗಳು ಏಕಾಗಬಾರದು?’ ಎಂದು ಅವರು ಯೋಚಿಸುತ್ತಾರೆ. *

ಬೃಹದ್ವಿಕಾಸ ಬೋಧನೆಯು ಮೂರು ಮುಖ್ಯ ಊಹೆಗಳ ಮೇಲೆ ಹೊಂದಿಕೊಂಡಿದೆ:

1. ವಿಕೃತಿಗಳು (ಮ್ಯುಟೇಷನ್ಸ್‌) ಹೊಸ ಪ್ರಭೇದಗಳನ್ನು ಉಂಟುಮಾಡಲು ಬೇಕಾದ ಮೂಲಸಾಮಗ್ರಿಗಳನ್ನು ಒದಗಿಸುತ್ತವೆ. *

2. ನೈಸರ್ಗಿಕ ಆಯ್ಕೆ (ನ್ಯಾಚುರಲ್‌ ಸಿಲೆಕ್ಷನ್‌) ಹೊಸ ಪ್ರಭೇದಗಳ ಉತ್ಪಾದನೆಗೆ ನಡೆಸುತ್ತದೆ.

3. ಸಸ್ಯ ಮತ್ತು ಪ್ರಾಣಿಗಳಲ್ಲಿ ಆಗುವ ಬೃಹದ್ವಿಕಾಸಾತ್ಮಕ ಬದಲಾವಣೆಗಳನ್ನು ಪಳೆಯುಳಿಕೆಯ (ಫಾಸಿಲ್‌) ದಾಖಲೆಯು ಸ್ಥಾಪಿಸುತ್ತದೆ.

ಬೃಹದ್ವಿಕಾಸಕ್ಕಿರುವ ಪುರಾವೆಯು ಅದು ವಾಸ್ತವಾಂಶವೆಂದು ತೋರಿಸುವಷ್ಟು ಬಲವಾಗಿದೆಯೆ?

ವಿಕೃತಿಗಳು ಹೊಸ ಪ್ರಭೇದಗಳನ್ನು ಉತ್ಪಾದಿಸಬಲ್ಲವೊ?

ಒಂದು ಸಸ್ಯ ಅಥವಾ ಪ್ರಾಣಿಯ ಗುಣಲಕ್ಷಣಗಳನ್ನು ನಿರ್ಧರಿಸುವುದು ಅದರ ಆನುವಂಶಿಕ ಸಂಕೇತ ಭಾಷೆಯ (ಜಿನೆಟಿಕ್‌ ಕೋಡ್‌) ಸೂಚನೆಗಳೇ, ಅಂದರೆ ಪ್ರತಿ ಜೀವಕೋಶದ ನಾಭಿಯಲ್ಲಿ ಒಳಗೂಡಿರುವ ನೀಲಿಪ್ರತಿಗಳೇ. * ಜಿನೆಟಿಕ್‌ ಕೋಡ್‌ನ ವಿಕೃತಿಗಳು ಅಥವಾ ಹಠಾತ್ತಾದ ಬದಲಾವಣೆಗಳು, ಸಸ್ಯ ಮತ್ತು ಪ್ರಾಣಿಗಳ ವಂಶಗಳಲ್ಲಿ ಮಾರ್ಪಾಟುಗಳನ್ನು ಉಂಟುಮಾಡಬಲ್ಲವೆಂದು ಸಂಶೋಧಕರು ಕಂಡುಹಿಡಿದಿದ್ದಾರೆ. 1946ರಲ್ಲಿ, ನೋಬೆಲ್‌ ಪ್ರಶಸ್ತಿವಿಜೇತ ಮತ್ತು ವಿಕೃತಿ ತಳಿಶಾಸ್ತ್ರ ಅಧ್ಯಯನದ ಸ್ಥಾಪಕರಾದ ಹರ್ಮನ್‌ ಜೆ. ಮಲರ್‌ ಹೀಗೆಂದರು: “ಈ ಅನೇಕ, ವಿರಳವಾದ, ಮುಖ್ಯವಾಗಿ ಚಿಕ್ಕ ಬದಲಾವಣೆಗಳ ಸಂಗ್ರಹಣೆಯು ಕೃತಕ ರೀತಿಯಲ್ಲಿ ಪ್ರಾಣಿ ಮತ್ತು ಸಸ್ಯಗಳ ಅಭಿವೃದ್ಧಿಗಾಗಿರುವ ಮುಖ್ಯ ಮಾಧ್ಯಮವಾಗಿದೆ ಮಾತ್ರವಲ್ಲ, ಅದು ಹೆಚ್ಚು ವಿಶೇಷವಾಗಿ, ನೈಸರ್ಗಿಕ ಆಯ್ಕೆಯ ಮಾರ್ಗದರ್ಶನದಲ್ಲಿ ಪ್ರಾಕೃತಿಕ ವಿಕಾಸವು ನಡೆದುಬಂದಿರುವ ರೀತಿಯಾಗಿದೆ.”

ಬೃಹದ್ವಿಕಾಸದ ಬೋಧನೆಯು, ವಿಕೃತಿಗಳು ಹೊಸ ಜೀವಿ ಪ್ರಭೇದಗಳನ್ನು ಮಾತ್ರವಲ್ಲ, ಸಸ್ಯ ಮತ್ತು ಪ್ರಾಣಿಗಳಲ್ಲಿ ಪೂರ್ತಿ ಹೊಸದಾಗಿರುವ ಕುಟುಂಬಗಳನ್ನೂ ಉತ್ಪಾದಿಸಬಲ್ಲವೆಂಬ ವಾದದ ಮೇಲೆ ಕಟ್ಟಲ್ಪಟ್ಟಿದೆ ನಿಶ್ಚಯ. ಘಂಟಾಘೋಷವಾಗಿ ಮಾಡಲಾಗಿರುವ ಈ ವಾದವನ್ನು ಪರೀಕ್ಷಿಸಲು ಯಾವ ಮಾರ್ಗವಾದರೂ ಇದೆಯೆ? ಸುಮಾರು 100 ವರ್ಷಗಳಲ್ಲಿ ತಳಿಶಾಸ್ತ್ರ ಸಂಶೋಧನೆಯ ಕ್ಷೇತ್ರದಲ್ಲಿ ಮಾಡಲ್ಪಟ್ಟಿರುವ ಅಧ್ಯಯನವು ಹೊರಗೆಡಹಿರುವ ಕೆಲವೊಂದು ವಿಷಯಗಳನ್ನು ಪರಿಗಣಿಸಿರಿ.

ನೈಸರ್ಗಿಕ ಆಯ್ಕೆಯು ಗೊತ್ತುಗುರಿಯಿಲ್ಲದ ವಿಕೃತಿಗಳ ಮೂಲಕ ಹೊಸ ಸಸ್ಯ ಪ್ರಭೇದಗಳನ್ನು ಉತ್ಪಾದಿಸಸಾಧ್ಯವಿರುವಲ್ಲಿ, ಮಾನವನಿರ್ದೇಶನದ ಕೆಳಗೆ ಇಲ್ಲವೆ ಕೃತಕ ರೀತಿಯಲ್ಲಿ ವಿಕೃತಿಗಳ ಆಯ್ಕೆಯು ಹೆಚ್ಚು ಕಾರ್ಯಸಾಧಕವಾಗಿ ಹೊಸ ಪ್ರಭೇದಗಳನ್ನು ಉತ್ಪನ್ನಮಾಡಶಕ್ತವಾಗಿರಬೇಕು ಎಂಬ ವಿಚಾರವನ್ನು ವಿಜ್ಞಾನಿಗಳು 1930ನೇ ದಶಕದ ಉತ್ತರಾರ್ಧದಲ್ಲಿ ಉತ್ಸಾಹಪೂರ್ವಕವಾಗಿ ಅಂಗೀಕರಿಸಿದರು. “ಈ ಸುಖಭ್ರಾಂತಿಯು ಹೆಚ್ಚಿನ ಜೀವವಿಜ್ಞಾನಿಗಳು ಮತ್ತು ವಿಶೇಷವಾಗಿ ತಳಿಶಾಸ್ತ್ರಜ್ಞರು ಹಾಗೂ ತಳಿಗಾರರ ಮಧ್ಯೆ ಹರಡಿತು” ಎಂದು ಜರ್ಮನಿಯ ಸಸ್ಯ ತಳಿಬೆಳೆಸುವಿಕೆ ಸಂಶೋಧನೆಗಾಗಿರುವ ಮ್ಯಾಕ್ಸ್‌-ಪ್ಲಾಂಕ್‌ ಸಂಸ್ಥೆಯ ವಿಜ್ಞಾನಿ ವಾಲ್ಫ್‌-ಎಕಹಾರ್ಟ್‌ ಲೋನಿಗ್‌ ಎಚ್ಚರ!ದೊಂದಿಗಿನ ಒಂದು ಸಂದರ್ಶನದಲ್ಲಿ ಹೇಳಿದರು. ವಿಜ್ಞಾನಿಗಳಿಗೆ ಆ ಸುಖಭ್ರಾಂತಿ ಇದದ್ದೇಕೆ? ಸುಮಾರು 28 ವರ್ಷಕಾಲ, ಸಸ್ಯಗಳಲ್ಲಿ ವಿಕೃತಿ ತಳಿಶಾಸ್ತ್ರವನ್ನು ಅಧ್ಯಯನ ಮಾಡಿದ್ದ ವಿಜ್ಞಾನಿ ಲೋನಿಗ್‌ ಹೇಳಿದ್ದು: “ಸಸ್ಯ ಮತ್ತು ಪ್ರಾಣಿಗಳ ತಳಿಬೆಳೆಸುವಿಕೆಯ ಸಾಂಪ್ರದಾಯಿಕ ವಿಧಾನದಲ್ಲಿ ಕ್ರಾಂತಿಕಾರಕ ಬದಲಾವಣೆ ಮಾಡುವ ಕಾಲ ಬಂದಿದೆಯೆಂದು ಈ ಸಂಶೋಧಕರು ನೆನಸಿದರು. ಅನುಕೂಲಕರವಾದ ವಿಕೃತಿಗಳನ್ನು ಉತ್ತೇಜಿಸಿ, ಆಯ್ದುಕೊಳ್ಳುವಲ್ಲಿ, ತಾವು ಹೊಸ ಮತ್ತು ಹೆಚ್ಚು ಉತ್ತಮವಾದ ಸಸ್ಯ ಮತ್ತು ಪ್ರಾಣಿಗಳನ್ನು ಬೆಳೆಸಲು ಶಕ್ತರಾಗುವೆವೆಂದು ಅವರು ಅಭಿಪ್ರಯಿಸಿದರು.” *

ಯುನೈಟೆಡ್‌ ಸ್ಟೇಟ್ಸ್‌, ಏಷಿಯ ಮತ್ತು ಯೂರೋಪಿನ ವಿಜ್ಞಾನಿಗಳು, ಸಸ್ಯ ಹಾಗೂ ಪ್ರಾಣಿಗಳಲ್ಲಿ ವಿಕಾಸವನ್ನು ಬಿರುಸುಗೊಳಿಸುವುದೆಂದು ಭರವಸೆಯಿಟ್ಟ ವಿಧಾನಗಳನ್ನು ಬಳಸುತ್ತಾ, ದೊಡ್ಡಮೊತ್ತದ ಧನಸಹಾಯವಿದ್ದ ಸಂಶೋಧನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡರು. 40ಕ್ಕೂ ಹೆಚ್ಚು ವರ್ಷಗಳ ತೀವ್ರ ಸಂಶೋಧನೆಯ ಫಲಿತಾಂಶಗಳೇನಾಗಿದ್ದವು? ಸಂಶೋಧಕರಾದ ಪೇಟರ್‌ ಫಾನ್‌ ಸೆಂಗ್‌ಬುಷ್‌ ಹೇಳುವುದು: “ಭಾರೀ ಮೊತ್ತದ ಹಣವು ವೆಚ್ಚವಾಯಿತಾದರೂ, ವಿಕಿರಣದ ಮೂಲಕ ಹೆಚ್ಚು ಉತ್ಪಾದಕವಾದ ಸಸ್ಯಗಳನ್ನು ಬೆಳೆಸುವ ಪ್ರಯತ್ನಗಳು ವ್ಯಾಪಕವಾಗಿ ನೆಲಕಚ್ಚಿದವು.” ಲೋನಿಗ್‌ ಹೇಳಿದ್ದು: “1980ರ ದಶಕದೊಳಗೆ, ವಿಜ್ಞಾನಿಗಳ ಹಾರೈಕೆಗಳು ಮತ್ತು ಸುಖಭ್ರಾಂತಿಯು ಲೋಕವ್ಯಾಪಕವಾಗಿ ವೈಫಲ್ಯದಲ್ಲಿ ಅಂತ್ಯಗೊಂಡಿತ್ತು. ಪಾಶ್ಚಾತ್ಯ ದೇಶಗಳಲ್ಲಿ, ವಿಕೃತಿ ತಳಿಬೆಳೆಸುವಿಕೆಯನ್ನು ಸಂಶೋಧನೆಯ ಒಂದು ಪ್ರತ್ಯೇಕ ಶಾಖೆಯಾಗಿ ಮಾಡುವುದನ್ನು ತ್ಯಜಿಸಲಾಯಿತು. ಹೆಚ್ಚುಕಡಮೆ ಎಲ್ಲ ಪರಿವರ್ತಿತ ರೂಪಗಳು ‘ನಕಾರಾತ್ಮಕ ಆಯ್ಕೆಯ ಮೌಲ್ಯಗಳನ್ನು’ ಪ್ರದರ್ಶಿಸಿದವು. ಅಂದರೆ, ಅವು ಒಂದೋ ಸತ್ತವು ಇಲ್ಲವೆ ನೈಸರ್ಗಿಕ ಸಸ್ಯಗಳಿಗಿಂತ ಬಲಹೀನವಾಗಿದ್ದವು.” *

ಹಾಗಿದ್ದರೂ, ಸಾಮಾನ್ಯವಾಗಿ ಈಗ, ಸುಮಾರು ಒಂದು ನೂರು ವರುಷಗಳಿಂದ ನಡೆದಿರುವ ವಿಕೃತಿ ಸಂಶೋಧನೆಯಿಂದ, ಮತ್ತು ವಿಶೇಷವಾಗಿ 70 ವರುಷಗಳ ವಿಕೃತಿ ತಳಿಬೆಳೆಸುವಿಕೆಯಿಂದ ಸಂಗ್ರಹಿಸಿದ ಅಂಕಿಸಂಖ್ಯೆಗಳು, ಹೊಸ ಪ್ರಭೇದಗಳನ್ನು ಉತ್ಪಾದಿಸಲು ವಿಕೃತಿಗಳಿಗಿರುವ ಸಾಮರ್ಥ್ಯದ ಕುರಿತು ತೀರ್ಮಾನಮಾಡಲು ವಿಜ್ಞಾನಿಗಳನ್ನು ಶಕ್ತರನ್ನಾಗಿ ಮಾಡುತ್ತವೆ. ರುಜುವಾತನ್ನು ಪರೀಕ್ಷಿಸಿದ ಬಳಿಕ ಲೋನಿಗ್‌ ಈ ತೀರ್ಮಾನಕ್ಕೆ ಬಂದರು: “ವಿಕೃತಿಗಳು [ಸಸ್ಯ ಅಥವಾ ಪ್ರಾಣಿಯ] ಮೂಲ ಪ್ರಭೇದವನ್ನು ಪೂರ್ತಿಯಾಗಿ ಹೊಸದಾದ ಪ್ರಭೇದವಾಗಿ ಪರಿವರ್ತಿಸುವುದು ಅಸಾಧ್ಯ. ಈ ನಿರ್ಣಯವು, 20ನೆಯ ಶತಮಾನದಲ್ಲಿ ಒಟ್ಟಿನಲ್ಲಿ ಮಾಡಲಾಗಿರುವ ವಿಕೃತಿ ಸಂಶೋಧನೆಯ ಪ್ರಯೋಗಗಳು ಮತ್ತು ಫಲಿತಾಂಶಗಳು ಹಾಗೂ ಸಂಭಾವ್ಯತೆಯ ನಿಯಮಗಳೊಂದಿಗೆ ಸಹಮತದಲ್ಲಿದೆ. ಹೀಗೆ, ತಳಿಶಾಸ್ತ್ರಾನುಸಾರವಾಗಿ ಸರಿಯಾಗಿ ನಿರೂಪಿಸಲ್ಪಟ್ಟಿರುವ ಜಾತಿಗಳಿಗೆ ಆಕಸ್ಮಿಕ ವಿಕೃತಿಗಳು ರದ್ದುಗೊಳಿಸಸಾಧ್ಯವಿಲ್ಲದ ಅಥವಾ ಅತಿಕ್ರಮಿಸಸಾಧ್ಯವಿಲ್ಲದ ನಿಜವಾದ ಮಿತಿಗಳಿವೆಯೆಂಬುದನ್ನು ಪುನರಾವರ್ತಕ ವ್ಯತ್ಯಯನ ನಿಯಮವು ಸೂಚಿಸುತ್ತದೆ.”

ಈ ಮೇಲಿನ ನಿಜತ್ವಗಳ ಮಹತ್ತ್ವದ ಕುರಿತು ಚಿಂತಿಸಿರಿ. ಶ್ರೇಷ್ಠರೀತಿಯ ತರಬೇತಿಹೊಂದಿರುವ ವಿಜ್ಞಾನಿಗಳೇ ಅನುಕೂಲ ವಿಕೃತಿಗಳನ್ನು ಕೃತಕವಾಗಿ ಚೋದಿಸುವ ಮೂಲಕ ಮತ್ತು ಆಯ್ಕೆಮಾಡುವ ಮೂಲಕ ಹೊಸ ಪ್ರಭೇದಗಳನ್ನು ಉಂಟುಮಾಡಲು ಅಶಕ್ತರಾದರೆ, ಬುದ್ಧಿಶಕ್ತಿಯಿಲ್ಲದ ಪ್ರಕ್ರಿಯೆಯೊಂದು ಹೆಚ್ಚು ಉತ್ತಮವಾಗಿರುವ ಕಾರ್ಯವನ್ನು ಮಾಡುವುದು ಸಂಭವನೀಯವೇ? ವಿಕೃತಿಗಳು ಒಂದು ಮೂಲ ಪ್ರಭೇದವನ್ನು ಪೂರ್ತಿ ಹೊಸತಾದ ಪ್ರಭೇದವಾಗಿ ಪರಿವರ್ತನೆ ಮಾಡಲು ಸಾಧ್ಯವಿಲ್ಲವೆಂದು ಸಂಶೋಧನೆ ತೋರಿಸುವಲ್ಲಿ, ಬೃಹದ್ವಿಕಾಸವು ಸಂಭವಿಸಿರುವುದಾದರೂ ಹೇಗೆ?

ನೈಸರ್ಗಿಕ ಆಯ್ಕೆಯಿಂದ ಹೊಸ ಪ್ರಭೇದಗಳ ಸೃಷ್ಟಿ ಸಾಧ್ಯವೇ?

ಯಾವುದನ್ನು ಡಾರ್ವಿನ್‌ ನೈಸರ್ಗಿಕ ಆಯ್ಕೆಯೆಂದು ಕರೆದನೊ ಅದರಿಂದಾಗಿ, ಪರಿಸರಕ್ಕೆ ಅತಿ ಯೋಗ್ಯತಮವಾದ ಜೀವರೂಪಗಳ ಪೋಷಣೆಯಾಗುವುದೆಂದು ಮತ್ತು ಯೋಗ್ಯತಮವಲ್ಲದ ಜೀವರೂಪಗಳು ಕ್ರಮೇಣ ನಿರ್ಮೂಲವಾಗುವವೆಂದು ಡಾರ್ವಿನ್‌ ನಂಬಿದನು. ಆಧುನಿಕ ವಿಕಾಸವಾದಿಗಳು ಕಲಿಸುವುದೇನಂದರೆ ಜೀವಿ ಪ್ರಭೇದಗಳು ಹರಡಿ, ಬೇರ್ಪಡುತ್ತಾ ಹೋದಂತೆ, ಅವುಗಳಲ್ಲಿ ಯಾವುದರ ತಳಿವಿಕೃತಿಗಳು ಹೊಸ ಪರಿಸರಕ್ಕೆ ಅವನ್ನು ಅತ್ಯುತ್ತಮವಾಗಿ ಹೊಂದಿಕೊಳ್ಳುವಂತೆ ಮಾಡಿದವೊ ಆ ಜೀವಿ ಪ್ರಭೇದಗಳನ್ನು ಪ್ರಕೃತಿ ಆಯ್ಕೆಮಾಡಿತು. ಇದರ ಪರಿಣಾಮವಾಗಿ, ಈ ಬೇರ್ಪಟ್ಟ ಗುಂಪುಗಳು ಕ್ರಮೇಣ ಪೂರ್ತಿ ಹೊಸ ಪ್ರಭೇದಗಳಾಗಿ ವಿಕಾಸಗೊಂಡವೆಂಬುದು ವಿಕಾಸವಾದಿಗಳ ವಾದ.

ಈ ಹಿಂದೆ ಗಮನಿಸಿರುವಂತೆ, ವಿಕೃತಿಗಳು ಸಂಪೂರ್ಣವಾಗಿ ಹೊಸ ಜಾತಿಯ ಸಸ್ಯಗಳನ್ನಾಗಲಿ ಪ್ರಾಣಿಗಳನ್ನಾಗಲಿ ಉಂಟುಮಾಡುವುದು ಅಸಾಧ್ಯವೆಂಬುದನ್ನು ಸಂಶೋಧನೆಯ ರುಜುವಾತು ಪ್ರಬಲವಾಗಿ ಸೂಚಿಸುತ್ತದೆ. ಹೀಗಿದ್ದರೂ, ನೈಸರ್ಗಿಕ ಆಯ್ಕೆಯು ಹೊಸ ಪ್ರಭೇದಗಳನ್ನು ಉತ್ಪಾದಿಸಲು ಪ್ರಯೋಜನಕರವಾದ ವಿಕೃತಿಗಳನ್ನು ಆರಿಸಿಕೊಳ್ಳುತ್ತದೆಂಬ ವಾದವನ್ನು ಬೆಂಬಲಿಸಲು ವಿಕಾಸವಾದಿಗಳು ಯಾವ ಪುರಾವೆಯನ್ನು ಒದಗಿಸುತ್ತಾರೆ? ಅಮೆರಿಕದ ರಾಷ್ಟ್ರೀಯ ವಿಜ್ಞಾನಗಳ ಅಕಾಡೆಮಿ (NAS) 1999ರಲ್ಲಿ ಪ್ರಕಾಶಿಸಿದ ಒಂದು ಬ್ರೋಷರ್‌ ಹೇಳುವುದು: “ಜಾತ್ಯುದ್ಭವ [ಸ್ಪೀಷಿಏಷನ್‌, ಅಂದರೆ ಹೊಸ ಪ್ರಭೇದಗಳ ವಿಕಾಸ]ಕ್ಕಿರುವ ವಿಶೇಷವಾಗಿ ನಿರ್ಬಂಧಪಡಿಸುವ ಒಂದು ಉದಾಹರಣೆಯು, ಗಲಾಪಗಸ್‌ ದ್ವೀಪಗಳಲ್ಲಿ ಡಾರ್ವಿನ್‌ ಅಧ್ಯಯನ ಮಾಡಿದ 13 ಪ್ರಭೇದಗಳ ಫಿಂಚ್‌ ಪಕ್ಷಿಗಳಾಗಿವೆ. ಈ ಪಕ್ಷಿಗಳು ಈಗ ಡಾರ್ವಿನನ ಫಿಂಚ್‌ ಪಕ್ಷಿಗಳೆಂದು ಪ್ರಸಿದ್ಧವಾಗಿವೆ.”

ಸಾವಿರದ ಒಂಬೈನೂರ ಎಪ್ಪತ್ತುಗಳಲ್ಲಿ, ಪೀಟರ್‌ ಮತ್ತು ರೋಸ್ಮರೀ ಗ್ರಾಂಟ್‌ರ ನೇತೃತ್ವದಲ್ಲಿ ಒಂದು ಸಂಶೋಧನೆಯ ತಂಡವು ಈ ಫಿಂಚ್‌ ಪಕ್ಷಿಗಳ ಅಧ್ಯಯನವನ್ನು ಆರಂಭಿಸಿತು. ಒಂದು ವರ್ಷದ ಅನಾವೃಷ್ಟಿಯ ಬಳಿಕ, ತುಸು ದೊಡ್ಡ ಕೊಕ್ಕುಗಳಿದ್ದ ಫಿಂಚ್‌ ಪಕ್ಷಿಗಳು ಚಿಕ್ಕ ಕೊಕ್ಕುಗಳಿದ್ದ ಫಿಂಚ್‌ ಪಕ್ಷಿಗಳಿಗಿಂತ ಹೆಚ್ಚು ಸುಲಭವಾಗಿ ಬದುಕಿ ಉಳಿದವೆಂದು ಆ ತಂಡವು ಕಂಡುಹಿಡಿಯಿತು. ಈ 13 ಫಿಂಚ್‌ ಪಕ್ಷಿ ಪ್ರಭೇದಗಳನ್ನು ಗುರುತಿಸುವ ಪ್ರಧಾನ ವಿಧಗಳಲ್ಲಿ ಒಂದು ಅವುಗಳ ಕೊಕ್ಕುಗಳ ಗಾತ್ರ ಮತ್ತು ಆಕಾರವಾಗಿರುವುದರಿಂದ ಈ ಶೋಧನೆಯು ಮಹತ್ವದ್ದೆಂದು ಅಭಿಪ್ರಯಿಸಲಾಯಿತು. ಆ ಬ್ರೋಷರ್‌ ಮುಂದುವರಿಸುತ್ತ ಹೇಳುವುದು: “ಗ್ರಾಂಟ್‌ ದಂಪತಿಯ ಅಂದಾಜಿಗನುಸಾರ, ಈ ದ್ವೀಪಗಳಲ್ಲಿ ಸುಮಾರು 10 ವರ್ಷಗಳಿಗೊಮ್ಮೆ ಅನಾವೃಷ್ಟಿ ಸಂಭವಿಸುವಲ್ಲಿ, ಸುಮಾರು 200 ವರ್ಷಗಳಲ್ಲಿಯೇ ಒಂದು ಹೊಸ ಫಿಂಚ್‌ ಪ್ರಭೇದ ಎದ್ದು ಬರಬಹುದು.”

ಆದರೂ, ಈ ಎನ್‌ಎಎಸ್‌ ಬ್ರೋಷರ್‌, ವಿಶಿಷ್ಟವಾದರೂ ಪೇಚಾಟಕ್ಕೆ ಸಿಕ್ಕಿಸುವ ಕೆಲವು ನಿಜತ್ವಗಳನ್ನು ತಿಳಿಸುವುದಿಲ್ಲ. ಆ ಅನಾವೃಷ್ಟಿಯ ಅನಂತರದ ವರುಷಗಳಲ್ಲಿ, ಚಿಕ್ಕ ಕೊಕ್ಕುಗಳ ಫಿಂಚ್‌ಗಳೇ ಪುನಃ ಹೆಚ್ಚು ಸಂಖ್ಯೆಯಲ್ಲಿ ತೋರಿಬಂದವು. ಹೀಗಿರುವುದರಿಂದ ಪೀಟರ್‌ ಗ್ರಾಂಟ್‌ ಮತ್ತು ವಿದ್ಯಾರ್ಥಿ ಲೈಲ್‌ ಗಿಬ್ಸ್‌ ತಾವು “ಆಯ್ಕೆಯ ದಿಕ್ಕು ಬದಲಾದುದನ್ನು” ನೋಡಿದೆವು ಎಂದು 1987ರಲ್ಲಿ ಪ್ರಕೃತಿ (ಇಂಗ್ಲಿಷ್‌) ಎಂಬ ವಿಜ್ಞಾನ ಪತ್ರಿಕೆಯಲ್ಲಿ ಬರೆದರು. ಪ್ರತಿ ಬಾರಿ ಹವಾಮಾನದಲ್ಲಿ ಬದಲಾವಣೆ ಉಂಟಾದಾಗ ಪಕ್ಷಿಗಳ “ಸಂಖ್ಯೆಯು ನೈಸರ್ಗಿಕ ಆಯ್ಕೆಯಿಂದಾಗಿ ಹಿಂದೆ ಮುಂದೆ ಓಲಾಡುತ್ತಿದೆ” ಎಂದು ವಿಜ್ಞಾನಿ ಗ್ರಾಂಟ್‌ 1991ರಲ್ಲಿ ಬರೆದರು. ಮತ್ತು ವಿವಿಧ “ಪ್ರಭೇದಗಳ” ಫಿಂಚ್‌ ಪಕ್ಷಿಗಳಲ್ಲಿ ಕೆಲವು ತಳಿಮಿಶ್ರವಾಗುತ್ತ, ಹೆತ್ತವರಿಗಿಂತ ಹೆಚ್ಚುಕಾಲ ಉಳಿಯುವ ಮರಿಗಳನ್ನು ಹುಟ್ಟಿಸುತ್ತವೆಂದು ಸಹ ಆ ಸಂಶೋಧಕರು ಗಮನಿಸಿದರು. ಈ ತಳಿಮಿಶ್ರವಾಗುವಿಕೆ ಮುಂದುವರಿಯುವಲ್ಲಿ, 200 ವರುಷಗಳೊಳಗೆ ಈ ಎರಡು “ಪ್ರಭೇದಗಳು” ಒಂದುಗೂಡಿ ಒಂದೇ ಪ್ರಭೇದವಾಗಬಲ್ಲದೆಂದು ಪೀಟರ್‌ ಮತ್ತು ರೋಸ್ಮರೀ ಗ್ರಾಂಟ್‌ರವರು ತೀರ್ಮಾನಿಸಿದರು.

ಹಿಂದೆ ಇಸವಿ 1966ರಲ್ಲಿ, ವಿಕಾಸವಾದ ಜೀವವಿಜ್ಞಾನಿ ಜಾರ್ಜ್‌ ಕ್ರಿಸ್ಟಫರ್‌ ವಿಲ್ಯಮ್ಸ್‌ ಎಂಬವರು ಬರೆದುದು: “ನೈಸರ್ಗಿಕ ಆಯ್ಕೆಯ ವಾದವು ಪ್ರಥಮವಾಗಿ ವಿಕಾಸಾತ್ಮಕ ಬದಲಾವಣೆಗೆ ಒಂದು ವಿವರಣೆಯಾಗಿ ಬಳಸಲ್ಪಟ್ಟಿರುವುದು ವಿಷಾದಕರವೆಂದು ನನ್ನ ಅಭಿಪ್ರಾಯ. ಅದು, ಹೊಂದಾಣಿಕೆಗಳಾಗುವುದಕ್ಕೆ ಕಾರಣ ಕೊಡುವ ಒಂದು ವಿವರಣೆಯಾಗಿರುವುದು ಎಷ್ಟೋ ಹೆಚ್ಚು ಮಹತ್ವಪೂರ್ಣ.” ವಿಕಾಸವಾದದ ಸಿದ್ಧಾಂತಕಾರ ಜೆಫ್ರಿ ಶ್ವಾರ್ಟ್ಸ್‌, 1999ರಲ್ಲಿ ಬರೆದುದೇನಂದರೆ ವಿಲ್ಯಮ್ಸ್‌ರವರ ತೀರ್ಮಾನಗಳು ಸರಿಯಾಗಿರುವಲ್ಲಿ, ನೈಸರ್ಗಿಕ ಆಯ್ಕೆಯು, ಜೀವಿ ಪ್ರಭೇದಗಳು ಅಸ್ತಿತ್ವದಲ್ಲಿರಲಿಕ್ಕಾಗಿ ಬದಲಾಗುತ್ತಿರುವ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವಂತೆ ಸಹಾಯಮಾಡುತ್ತಿರಬಹುದೇ ಹೊರತು “ಹೊಸತಾದದ್ದೇನನ್ನೂ ಉಂಟುಮಾಡುತ್ತಿಲ್ಲ.”

ಹೌದು, ಡಾರ್ವಿನನ ಫಿಂಚ್‌ ಪಕ್ಷಿಗಳು ‘ಹೊಸತಾದದ್ದಾಗಿ’ ಪರಿಣಮಿಸುತ್ತಿಲ್ಲ. ಅವು ಈಗಲೂ ಫಿಂಚ್‌ ಪಕ್ಷಿಗಳೇ. ಮತ್ತು ಅವುಗಳಲ್ಲಾಗುವ ತಳಿಮಿಶ್ರವಾಗುವಿಕೆಯು, ಕೆಲವು ವಿಕಾಸವಾದಿಗಳು ಒಂದು ಪ್ರಭೇದವನ್ನು ನಿರ್ಧರಿಸಲು ಯಾವ ವಿಧಾನಗಳನ್ನು ಉಪಯೋಗಿಸುತ್ತಾರೆ ಎಂಬುದನ್ನು ಅನುಮಾನಿಸುವಂತೆ ಮಾಡುತ್ತದೆ. ಅಲ್ಲದೆ, ಪ್ರತಿಷ್ಠಿತ ವೈಜ್ಞಾನಿಕ ಅಕಾಡಮಿಗಳು ಸಹ, ದೊರೆಯುವ ರುಜುವಾತನ್ನು ಪೂರ್ವಕಲ್ಪಿತ ಅಭಿಪ್ರಾಯದ ಮೇರೆಗೆ ವರದಿಮಾಡುತ್ತವೆ ಎಂಬ ನಿಜತ್ವವನ್ನು ಅದು ಬಯಲಿಗೆಳೆಯುತ್ತದೆ.

ಪಳೆಯುಳಿಕೆಯ ದಾಖಲೆಯು ಬೃಹದ್ವಿಕಾಸಾತ್ಮಕ ಬದಲಾವಣೆಗಳನ್ನು ಸಮರ್ಥಿಸುತ್ತದೊ?

ಈ ಹಿಂದೆ ತಿಳಿಸಲ್ಪಟ್ಟಿರುವ ಎನ್‌ಎಎಸ್‌ ಬ್ರೋಷರ್‌, ವಿಜ್ಞಾನಿಗಳು ಕಂಡುಕೊಂಡಿರುವ ಪಳೆಯುಳಿಕೆಗಳು ಬೃಹದ್ವಿಕಾಸದ ಬಗ್ಗೆ ಬೇಕಾಗುವುದಕ್ಕಿಂತಲೂ ಹೆಚ್ಚು ರುಜುವಾತನ್ನು ಕೊಡುತ್ತವೆಂಬ ಅಭಿಪ್ರಾಯವನ್ನು ವಾಚಕನಲ್ಲಿ ಮೂಡಿಸುತ್ತದೆ. ಅದು ಘೋಷಿಸುವುದು: “ಮೀನು ಮತ್ತು ಉಭಯಚರಿ ಜೀವಿಗಳ ಮಧ್ಯೆ, ಉಭಯಚರಿಗಳು ಮತ್ತು ಸರೀಸೃಪಗಳ ಮಧ್ಯೆ, ಸರೀಸೃಪಗಳು ಮತ್ತು ಸಸ್ತನಿಗಳ ಮಧ್ಯೆ, ಮತ್ತು ಪ್ರೈಮೇಟ್‌ ಗಣದ ವಂಶಕ್ರಮದಲ್ಲಿ ಎಷ್ಟೊಂದು ಮಧ್ಯವರ್ತಿ ಜೀವರೂಪಗಳು ಕಂಡುಹಿಡಿಯಲ್ಪಟ್ಟಿವೆಯೆಂದರೆ, ಒಂದು ನಿರ್ದಿಷ್ಟ ಪ್ರಭೇದದಿಂದ ಇನ್ನೊಂದಕ್ಕೆ ಪರಿವರ್ತನೆ ಯಾವಾಗ ಸಂಭವಿಸುತ್ತದೆಂದು ಸ್ಪಷ್ಟವಾಗಿ ಗುರುತಿಸಲು ಅನೇಕ ವೇಳೆ ಕಷ್ಟಕರವಾಗಿರುತ್ತದೆ.”

ತುಂಬ ಭರವಸೆಯಿಂದ ಮಾಡಲ್ಪಟ್ಟಿರುವ ಈ ಹೇಳಿಕೆಯು ಆಶ್ಚರ್ಯಹುಟ್ಟಿಸುತ್ತದೆ. ಏಕೆ? ನ್ಯಾಷನಲ್‌ ಜಿಯಗ್ರಾಫಿಕ್‌ ಪತ್ರಿಕೆಯು 2004ರಲ್ಲಿ, ಪಳೆಯುಳಿಕೆಯ ದಾಖಲೆಯು, “ಜೀವವಿಕಾಸವೆಂಬ ಚಲನಚಿತ್ರದಲ್ಲಿ ಪ್ರತಿ 1,000 ಬಿಡಿಚಿತ್ರಗಳಲ್ಲಿ 999 ಬಿಡಿಚಿತ್ರಗಳು ಕತ್ತರಿಸಲ್ಪಟ್ಟಿರುವಂತೆ” ಇದೆಯೆಂದು ವರ್ಣಿಸಿತು. ಹಾಗಾದರೆ, ಪ್ರತಿ 1,000 “ಬಿಡಿಚಿತ್ರಗಳಲ್ಲಿ” ಉಳಿದಿರುವ ಒಂದೇ ಚಿತ್ರವು ಬೃಹದ್ವಿಕಾಸದ ಕಾರ್ಯಗತಿಯನ್ನು ನಿಜವಾಗಿಯೂ ರುಜುಪಡಿಸುತ್ತದೆಯೆ? ಪಳೆಯುಳಿಕೆಯ ದಾಖಲೆಯು ವಾಸ್ತವವಾಗಿ ಏನನ್ನು ತೋರಿಸುತ್ತದೆ? ಅತ್ಯುತ್ಸಾಹಿ ವಿಕಾಸವಾದಿಯಾದ ನೈಲ್ಸ್‌ ಎಲ್ಡ್ರೆಜ್‌ ಒಪ್ಪಿಕೊಳ್ಳುವುದೇನಂದರೆ, ಆ ದಾಖಲೆಯು ದೀರ್ಘ ಸಮಯಾವಧಿಗಳಾದ್ಯಂತ “ಹೆಚ್ಚಿನ ಜೀವಿ ಪ್ರಭೇದಗಳಲ್ಲಿ ಹೆಚ್ಚುಕಡಮೆ ಯಾವುದೇ ವಿಕಾಸಾತ್ಮಕ ಬದಲಾವಣೆ ನಡೆದಿಲ್ಲವೆಂಬುದನ್ನು” ತೋರಿಸುತ್ತದೆ.

ವಿಜ್ಞಾನಿಗಳು ಇಂದಿನ ವರೆಗೆ ಲೋಕವ್ಯಾಪಕವಾಗಿ ಸುಮಾರು 20 ಕೋಟಿ ದೊಡ್ಡ ಪಳೆಯುಳಿಕೆಗಳನ್ನೂ ನೂರಾರು ಕೋಟಿ ಸೂಕ್ಷ್ಮ ಪಳೆಯುಳಿಕೆಗಳನ್ನೂ ಭೂಮಿಯಿಂದ ಅಗೆದುತೆಗೆದಿದ್ದಾರೆ. ಈ ದೊಡ್ಡ ಮೊತ್ತದ ವಿವರವಾದ ದಾಖಲೆಯು, ಪ್ರಾಣಿಗಳ ಪ್ರಧಾನ ಗುಂಪುಗಳೆಲ್ಲ ಹಠಾತ್ತಾಗಿ ತೋರಿಬಂದು, ಕಾರ್ಯತಃ ಬದಲಾವಣೆಯೇ ಇಲ್ಲದೆ ಉಳಿದವೆಂದೂ, ಅನೇಕ ಪ್ರಭೇದಗಳು ಅವುಗಳು ತೋರಿಬಂದಷ್ಟೇ ಹಠಾತ್ತಾಗಿ ಕಣ್ಮರೆಯಾಗಿ ಹೋದವೆಂದೂ ತೋರಿಸುತ್ತವೆಂಬ ಸಂಗತಿಯನ್ನು ಅನೇಕ ಸಂಶೋಧಕರು ಒಪ್ಪಿಕೊಳ್ಳುತ್ತಾರೆ. ಪಳೆಯುಳಿಕೆಯ ದಾಖಲೆಯ ರುಜುವಾತನ್ನು ವಿಮರ್ಶಿಸಿದ ಬಳಿಕ, ಜಾನತನ್‌ ವೆಲ್ಸ್‌ ಎಂಬ ಜೀವವಿಜ್ಞಾನಿಯು ಬರೆಯುವುದು: “ಸಾಮ್ರಾಜ್ಯ (ಕಿಂಗ್ಡಮ್‌), ವಿಭಾಗ (ಫೈಲ) ಮತ್ತು ವರ್ಗ (ಕ್ಲಾಸ್‌)ಗಳ ಅಂತಸ್ತಿನಲ್ಲಿ, ಒಂದೇ ಪಿತೃಗಳಿಂದ ಇಳಿದುಬಂದು ಮುಂದೆ ಪರಿವರ್ತನೆ ಹೊಂದುವ ವಂಶಕ್ರಮವು ವೈಜ್ಞಾನಿಕವಾಗಿ ಅವಲೋಕಿಸಲ್ಪಟ್ಟಿರುವ ಒಂದು ನಿಜತ್ವ ಅಲ್ಲ ಎಂಬುದು ವ್ಯಕ್ತ. ಪಳೆಯುಳಿಕೆ ಮತ್ತು ಆಣ್ವಿಕ ಪುರಾವೆಗನುಸಾರ ತೀರ್ಮಾನಿಸುವಾಗ ಅದು ಸಾಧಾರವುಳ್ಳ ಸಿದ್ಧಾಂತವೂ ಅಲ್ಲ.”

ಜೀವವಿಕಾಸ​—⁠ವಾಸ್ತವವೊ ಮಿಥ್ಯೆಯೊ?

ಹಾಗಾದರೆ ಅನೇಕ ಗಣ್ಯ ವಿಕಾಸವಾದಿಗಳು ಬೃಹದ್ವಿಕಾಸ ನಿಜತ್ವವೆಂದು ಪಟ್ಟುಹಿಡಿಯುವುದೇಕೆ? ರಿಚರ್ಡ್‌ ಡಾಕನ್ಸ್‌ರ ತರ್ಕವಾದಗಳಲ್ಲಿ ಕೆಲವೊಂದನ್ನು ಟೀಕಿಸಿದ ಬಳಿಕ ಪ್ರಭಾವಶಾಲಿ ವಿಕಾಸವಾದಿ ರಿಚರ್ಡ್‌ ಲವಾಂಟಿನ್‌ ಬರೆದದ್ದೇನೆಂದರೆ, ಅನೇಕ ವಿಜ್ಞಾನಿಗಳು ಸಾಮಾನ್ಯ ಪರಿಜ್ಞಾನಕ್ಕೆ ಹೊಂದಿಕೆಯಾಗಿಲ್ಲದ ವೈಜ್ಞಾನಿಕ ವಾದಗಳನ್ನು ಒಪ್ಪಿಕೊಳ್ಳಲು ಸಿದ್ಧರಾಗಿರುತ್ತಾರೆ “ಏಕೆಂದರೆ ನಮ್ಮ ಆದ್ಯ ಬದ್ಧತೆ ಭೌತಿಕವಾದಕ್ಕಿದೆ.” * ಅನೇಕ ವಿಜ್ಞಾನಿಗಳು, ಒಬ್ಬ ಬುದ್ಧಿಶಾಲಿ ವಿನ್ಯಾಸಕನಿದ್ದಾನೆಂಬ ಸಾಧ್ಯತೆಯ ಕುರಿತು ಯೋಚಿಸಲೂ ನಿರಾಕರಿಸುತ್ತಾರೆ, ಯಾಕೆಂದರೆ “ದೇವರು ಒಳಗೆ ಕಾಲಿಡಲು ಬಿಡಲಾರೆವು” ಎಂದು ಲವಾಂಟಿನ್‌ ಬರೆಯುತ್ತಾರೆ.

ಈ ಸಂಬಂಧದಲ್ಲಿ, ಸಮಾಜಶಾಸ್ತ್ರಜ್ಞ ರಾಡ್ನಿ ಸ್ಟಾರ್ಕ್‌, ಹೀಗೆ ಹೇಳಿದರೆಂದು ಸೈಅಂಟಿಫಿಕ್‌ ಅಮೆರಿಕನ್‌ ಪತ್ರಿಕೆ ತಿಳಿಸುತ್ತದೆ: “ನೀವು ವೈಜ್ಞಾನಿಕ ವ್ಯಕ್ತಿ ಅನಿಸಿಕೊಳ್ಳಬೇಕಾದರೆ, ಧರ್ಮದ ಬೇಡಿಗಳಿಂದ ನಿಮ್ಮ ಮನಸ್ಸನ್ನು ಸ್ವತಂತ್ರವಾಗಿಟ್ಟುಕೊಳ್ಳಬೇಕೆಂಬುದು 200 ವರುಷಗಳಿಂದ ಉತ್ತೇಜಿಸಲ್ಪಟ್ಟಿರುವ ವಿಚಾರವಾಗಿದೆ.” ಅವರು ಮತ್ತೂ ಹೇಳುವುದು, ಸಂಶೋಧನಾ ವಿಶ್ವವಿದ್ಯಾಲಯಗಳಲ್ಲಿ “ಧಾರ್ಮಿಕ ಜನ ಬಾಯಿಮುಚ್ಚಿಕೊಂಡಿರುತ್ತಾರೆ ಮತ್ತು ಅಧಾರ್ಮಿಕರು ಧಾರ್ಮಿಕರ ವಿರುದ್ಧ ಭೇದಭಾವ ತೋರಿಸುತ್ತಾರೆ.” ಸ್ಟಾರ್ಕ್‌ ಅವರಿಗನುಸಾರ, “[ವೈಜ್ಞಾನಿಕ ಸಮುದಾಯದ] ಉನ್ನತ ಶ್ರೇಣಿಯಲ್ಲಿನ ಜನರ ಮಧ್ಯೆ ಅಧಾರ್ಮಿಕ ವ್ಯಕ್ತಿಗೆ ಮಾನವಿದೆ.”

ಒಂದುವೇಳೆ ನೀವು ಬೃಹದ್ವಿಕಾಸವು ಸತ್ಯವೆಂದು ಅಂಗೀಕರಿಸುತ್ತೀರಾದರೆ, ಅಜ್ಞೇಯತಾವಾದಿ ಅಥವಾ ನಾಸ್ತಿಕ ವಿಜ್ಞಾನಿಗಳು ತಮ್ಮ ವೈಯಕ್ತಿಕ ನಂಬಿಕೆಗಳು ವೈಜ್ಞಾನಿಕ ಆವಿಷ್ಕಾರಗಳ ಕುರಿತಾದ ತಮ್ಮ ವಿವರಣೆಯನ್ನು ಪ್ರಭಾವಿಸಲು ಬಿಡುವುದಿಲ್ಲವೆಂಬ ಮಾತು ನಿಜವೆಂದು ನಂಬಬೇಕಾಗುವುದು. ಸರಿಯಾಗಿ ನಿರೂಪಿಸಲ್ಪಟ್ಟ ಒಂದೇ ಒಂದು ಜೀವಿ ಪ್ರಭೇದವನ್ನು ಸಹ ವಿಕೃತಿಗಳು ಪೂರ್ತಿಯಾಗಿ ಹೊಸತಾದ ಇನ್ನೊಂದು ಪ್ರಭೇದವಾಗಿ ಮಾರ್ಪಡಿಸಿಲ್ಲ ಎಂಬುದನ್ನು ನೂರಾರು ಕೋಟಿ ವಿಕೃತಿಗಳ ಅಧ್ಯಯನದಲ್ಲಿ ಕಳೆಯಲಾದ ನೂರು ವರುಷಗಳ ಸಂಶೋಧನೆಯು ತೋರಿಸಿರುವುದಾದರೂ, ವಿಕೃತಿಗಳು ಮತ್ತು ನೈಸರ್ಗಿಕ ಆಯ್ಕೆಯೇ ಸಕಲ ಜಟಿಲವಾದ ಜೀವರೂಪಗಳನ್ನು ಉತ್ಪಾದಿಸಿದವೆಂಬುದನ್ನು ನೀವು ನಂಬಬೇಕಾಗುವುದು. ಸಸ್ಯ ಹಾಗೂ ಪ್ರಾಣಿಗಳ ಪ್ರಧಾನ ಜಾತಿಗಳು ಹಠಾತ್ತಾಗಿ ಕಾಣಿಸಿಕೊಂಡು ಅಪರಿಮಿತ ಸಮಯಾವಧಿ ದಾಟಿದರೂ ವಿಕಾಸಗೊಂಡು ಹೊಸ ಜಾತಿಗಳಾಗಲಿಲ್ಲ ಎಂಬುದನ್ನು ಪಳೆಯುಳಿಕೆಯ ದಾಖಲೆ ತೋರಿಸಿದರೂ, ಎಲ್ಲ ಜೀವಿಗಳು ಒಂದು ಸಾಮಾನ್ಯ ಪೂರ್ವಿಕ ಜೀವಿಯಿಂದ ಕ್ರಮೇಣ ವಿಕಾಸಗೊಂಡವು ಎಂಬುದನ್ನು ನೀವು ನಂಬಬೇಕಾಗುವುದು. ಆದರೆ, ಈ ರೀತಿಯ ನಂಬಿಕೆ ವಾಸ್ತವಾಂಶದ ಮೇಲೆ ಆಧರಿಸಿದೆಯೆಂದು ತೋರುತ್ತದೊ ಇಲ್ಲವೆ ಮಿಥ್ಯೆಯ ಮೇಲಾಧರಿತವಾಗಿದೆಯೊ? (9/06)

[ಪಾದಟಿಪ್ಪಣಿಗಳು]

^ ಪ್ಯಾರ. 3 ತಳಿಗಾರರು ನಾಯಿಗಳನ್ನು ಆಯ್ಕೆಮಾಡುತ್ತ ಸಂಗ ಮಾಡಿಸುವಾಗ ಕ್ರಮೇಣ, ಮರಿಗಳಿಗೆ ಅವುಗಳ ಪೂರ್ವಿಕರಿಗಿಂತ ಗಿಡ್ಡ ಕಾಲುಗಳು ಅಥವಾ ಉದ್ದ ಕೂದಲುಗಳಿರುತ್ತವೆ. ಆದರೂ, ನಾಯಿಗಳ ತಳಿಗಾರರು ಉಂಟುಮಾಡಬಲ್ಲ ಬದಲಾವಣೆಗಳು ಅನೇಕವೇಳೆ ವಂಶವಾಹಿಯಲ್ಲಿನ ಕಾರ್ಯನಷ್ಟದಿಂದ ಉಂಟಾಗುತ್ತವೆ. ದೃಷ್ಟಾಂತಕ್ಕೆ, ಡಾಕ್ಸ್‌ಹುಂಟ್‌ ನಾಯಿಯ ಚಿಕ್ಕ ಗಾತ್ರಕ್ಕೆ ಕಾರಣವು ಮೃದ್ವಸ್ಥಿಯ (ಕಾರ್ಟಿಲಿಜ್‌) ಸಾಧಾರಣ ಬೆಳವಣಿಗೆ ನಡೆಯದೆ ಹೋಗುವುದೇ. ಇದು ಕುಬ್ಜತೆಯನ್ನು (ಡ್ವಾರ್ಫಿಸ್ಮ್‌) ಉಂಟುಮಾಡುತ್ತದೆ.

^ ಪ್ಯಾರ. 4 “ಪ್ರಭೇದ” ಎಂಬ ಪದವನ್ನು ಈ ಲೇಖನದಲ್ಲಿ ಪದೇಪದೇ ಉಪಯೋಗಿಸಲಾಗಿರುವುದಾದರೂ, ಇದು ಬೈಬಲಿನ ಆದಿಕಾಂಡ ಪುಸ್ತಕದಲ್ಲಿ ಕಂಡುಬರುವುದಿಲ್ಲ ಎಂಬುದನ್ನು ಗಮನಿಸತಕ್ಕದ್ದು. ಆದಿಕಾಂಡ ಪುಸ್ತಕದಲ್ಲಿ, ಹೆಚ್ಚಿನದ್ದನ್ನು ಒಳಗೂಡಿಸುವ “ಜಾತಿ” ಎಂಬ ಪದವನ್ನು ಬಳಸಲಾಗಿದೆ. ಹೆಚ್ಚಾಗಿ ವಿಜ್ಞಾನಿಗಳು ಹೊಸ ಪ್ರಭೇದದ ವಿಕಾಸವೆಂದು ಕರೆಯಲು ಇಷ್ಟಪಡುವ ಸಂಗತಿಯು ಆದಿಕಾಂಡದ ವೃತ್ತಾಂತದಲ್ಲಿ ಉಪಯೋಗಿಸಲ್ಪಟ್ಟಿರುವಂಥ ಒಂದು “ಜಾತಿ”ಯೊಳಗಿನ ವಿಭಿನ್ನತೆಯಾಗಿದೆಯಷ್ಟೇ.

^ ಪ್ಯಾರ. 6 “ಜೀವಿಗಳನ್ನು ಹೇಗೆ ವರ್ಗೀಕರಿಸಲಾಗಿದೆ?” ಎಂಬ ಚೌಕವನ್ನು ನೋಡಿ.

^ ಪ್ಯಾರ. 11 ಜೀವಕೋಶದ ಕೋಶದ್ರವ್ಯವು (ಸೈಟೋಪ್ಲಾಸ್ಮ್‌), ಅದರ ಪೊರೆಗಳು (ಮೆಂಬ್ರೇನ್‌) ಮತ್ತು ಇತರ ರಚನೆಗಳು ಸಹ ಒಂದು ಜೀವಿಯನ್ನು ರೂಪಿಸುವುದರಲ್ಲಿ ಪಾತ್ರ ವಹಿಸುತ್ತವೆಂದು ಸಂಶೋಧನೆಯು ತೋರಿಸುತ್ತದೆ.

^ ಪ್ಯಾರ. 13 ಈ ಲೇಖನದಲ್ಲಿರುವ ಲೋನಿಗ್‌ರ ಹೇಳಿಕೆಗಳು ಅವರ ಸ್ವಂತದ್ದೇ ಹೊರತು, ಸಸ್ಯ ತಳಿಬೆಳೆಸುವಿಕೆ ಸಂಶೋಧನೆಗಾಗಿರುವ ಮ್ಯಾಕ್ಸ್‌-ಪ್ಲಾಂಕ್‌ ಸಂಸ್ಥೆಯ ಅಭಿಪ್ರಾಯವಲ್ಲ.

^ ಪ್ಯಾರ. 14 ವಿಕೃತಿ ಪ್ರಯೋಗಗಳನ್ನು ಮಾಡಿದಾಗ, ಪರಿವರ್ತಿತ ರೂಪಗಳ ಸಂಖ್ಯೆಯು ಒಂದೇ ಸಮನೆ ಇಳಿಮುಖವಾದವು, ಆದರೆ ಮೂಲ ರೂಪಗಳು ಹೆಚ್ಚಾಗುತ್ತ ಇದ್ದವೆಂಬುದು ಪದೇ ಪದೇ ತೋರಿಬಂತು. ಈ ಅಸಾಧಾರಣ ಘಟನೆಯಿಂದ ವಿಜ್ಞಾನಿ ಲೋನಿಗ್‌, “ಪುನರಾವರ್ತಕ ವ್ಯತ್ಯಯನ ನಿಯಮ”ವನ್ನು ಗುರುತಿಸಿದನು. ಇದಕ್ಕೆ ಕೂಡಿಸಿ, ಇನ್ನೂ ಹೆಚ್ಚಿನ ಸಂಶೋಧನೆಗಾಗಿ 1ಕ್ಕಿಂತಲೂ ಕಡಿಮೆ ಪ್ರತಿಶತ ಸಸ್ಯ ವಿಕೃತಿಗಳನ್ನು ಆರಿಸಲಾಯಿತು ಮತ್ತು ಅದರಲ್ಲಿ 1ಕ್ಕಿಂತಲೂ ಕಡಮೆ ಪ್ರತಿಶತ ಸಸ್ಯಗಳು ಮಾತ್ರ ವ್ಯಾಪಾರೋಪಯೋಗಕ್ಕೆ ಯೋಗ್ಯವೆಂದು ಕಂಡುಬಂತು. ಪ್ರಾಣಿಗಳಲ್ಲಂತೂ ವಿಕೃತಿ ತಳಿಬೆಳೆಸುವಿಕೆಯ ಫಲಿತಾಂಶಗಳು ಸಸ್ಯಗಳಿಗಿಂತಲೂ ಹೀನವಾದದ್ದಾಗಿತ್ತು. ಆದುದರಿಂದ ಈ ವಿಧಾನವನ್ನು ಸಂಪೂರ್ಣವಾಗಿ ಬಿಟ್ಟುಬಿಡಲಾಯಿತು.

^ ಪ್ಯಾರ. 29 ಇಲ್ಲಿ ಭೌತಿಕವಾದಕ್ಕಿರುವ ಅರ್ಥ, ಭೌತದ್ರವ್ಯವು ಏಕಮಾತ್ರ ಅಥವಾ ಮೂಲಭೂತ ವಾಸ್ತವಿಕತೆಯಾಗಿದೆ, ಅಂದರೆ ವಿಶ್ವದಲ್ಲಿರುವ ಸಕಲವೂ​—⁠ಜೀವರಾಶಿ ಸೇರಿಸಿ​—⁠ಪ್ರಕೃತ್ಯಾತೀತ ಹಸ್ತಕ್ಷೇಪವಿಲ್ಲದೇ ಅಸ್ತಿತ್ವಕ್ಕೆ ಬಂದಿದೆ ಎಂಬ ವಾದಕ್ಕೆ ಸೂಚಿಸುತ್ತದೆ.

[ಪುಟ 15ರಲ್ಲಿರುವ ಸಂಕ್ಷಿಪ್ತ ವಿವರಣೆ]

“ವಿಕೃತಿಗಳು [ಸಸ್ಯ ಅಥವಾ ಪ್ರಾಣಿಯ] ಮೂಲ ಪ್ರಭೇದವನ್ನು ಪೂರ್ತಿಯಾಗಿ ಹೊಸದಾದ ಪ್ರಭೇದವಾಗಿ ಪರಿವರ್ತಿಸುವುದು ಅಸಾಧ್ಯ”

[ಪುಟ 16ರಲ್ಲಿರುವ ಸಂಕ್ಷಿಪ್ತ ವಿವರಣೆ]

ಡಾರ್ವಿನನ ಫಿಂಚ್‌ ಪಕ್ಷಿಗಳ ವಿಷಯದಿಂದ ನಾವು ಮಾಡಬಹುದಾದ ಬಲವಾದ ತೀರ್ಮಾನವೇನೆಂದರೆ, ಒಂದು ಜೀವಿ ಪ್ರಭೇದವು ಬದಲಾಗುತ್ತಿರುವ ಹವಾಮಾನಕ್ಕೆ ಹೊಂದಿಕೊಳ್ಳಬಲ್ಲದು

[ಪುಟ 17ರಲ್ಲಿರುವ ಸಂಕ್ಷಿಪ್ತ ವಿವರಣೆ]

ಪಳೆಯುಳಿಕೆ ದಾಖಲೆಗನುಸಾರ, ಪ್ರಾಣಿಗಳ ಪ್ರಧಾನ ಗುಂಪುಗಳೆಲ್ಲ ಹಠಾತ್ತಾಗಿ ತೋರಿಬಂದು, ಕಾರ್ಯತಃ ಬದಲಾವಣೆಯೇ ಇಲ್ಲದೆ ಉಳಿದವು

[ಪುಟ 14ರಲ್ಲಿರುವ ಚಾರ್ಟು]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಜೀವಿಗಳನ್ನು ಹೇಗೆ ವರ್ಗೀಕರಿಸಲಾಗಿದೆ?

ಜೀವಿಗಳನ್ನು ಹೆಚ್ಚೆಚ್ಚು ವಿಶಾಲವಾದ ಗುಂಪುಗಳಾಗಿ, ನಿರ್ದಿಷ್ಟವಾದ ಪ್ರಭೇದಗಳಿಂದ ಹಿಡಿದು ಸಾಮ್ರಾಜ್ಯಗಳ ವರೆಗೆ ವರ್ಗೀಕರಿಸಲಾಗುತ್ತದೆ. * ಕೆಳಗೆ ಕೊಡಲ್ಪಟ್ಟ ಮಾನವರ ಮತ್ತು ಹಣ್ಣುನೊಣಗಳ ವರ್ಗೀಕರಣಗಳನ್ನು ಹೋಲಿಸಿ.

ಮಾನವರು ಹಣ್ಣುನೊಣಗಳು

ಪ್ರಭೇದ ಸ್ಯಾಪಿಎನ್ಸ್‌ ಮೆಲನೋಗಾಸ್ಟರ್‌

ಜಾತಿ ಹೋಮೋ ಡ್ರೋಸಾಫಿಲ

ಕುಟುಂಬ ಹೋಮಿನಿಡೇ ಡ್ರೋಸಾಫಿಲಿಡ್ಸ್‌

ಗಣ ಪ್ರೈಮೇಟಾ ಡಿಪ್ಟರ ಹಾರುಹುಳುಗಳು

ವರ್ಗ ಮ್ಯಾಮಲ್‌ಸ್ತನಿಗಳು ಕೀಟಗಳು

ವಿಭಾಗ ಕಾರ್ಡೇಟಾ ಆ್ಯನ್‌ತ್ರಪಾಡ್ಸ್‌

ಸಾಮ್ರಾಜ್ಯ ಪ್ರಾಣಿಗಳು ಪ್ರಾಣಿಗಳು

[ಪಾದಟಿಪ್ಪಣಿ]

^ ಪ್ಯಾರ. 49 ಗಮನಿಸಿ: ಆದಿಕಾಂಡ 1ನೆಯ ಅಧ್ಯಾಯವು, ಸಸ್ಯಗಳೂ ಪ್ರಾಣಿಗಳೂ “ತಮ್ಮತಮ್ಮ ಜಾತಿಯ ಪ್ರಕಾರ” ಪುನರುತ್ಪಾದಿಸುವುವು ಎಂದು ಹೇಳುತ್ತದೆ. (ಆದಿಕಾಂಡ 1:​12, 21, 24, 25) ಆದರೂ, “ಜಾತಿ” ಎಂದು ಬೈಬಲ್‌ ಯಾವುದನ್ನು ಹೇಳುತ್ತದೊ ಅದೊಂದು ವೈಜ್ಞಾನಿಕ ಪದವಲ್ಲ, ಆದಕಾರಣ ಅದನ್ನು ವೈಜ್ಞಾನಿಕ ಪದವಾದ “ಪ್ರಭೇದ”ವೆಂದು ತಪ್ಪಾಗಿ ಗ್ರಹಿಸಬಾರದು.

[ಕೃಪೆ]

ಜಾನತನ್‌ ವೆಲ್ಸ್‌ರ ವಿಕಾಸವಾದದ ಬಿಂಬಗಳು​—⁠ವಿಜ್ಞಾನವೇ ಮಿಥ್ಯೆಯೇ? ವಿಕಾಸವಾದದ ಕುರಿತು ನಾವು ಕಲಿಸುವುದರಲ್ಲಿ ಹೆಚ್ಚಿನದ್ದು ತಪ್ಪಾಗಿರುವುದೇಕೆ? (ಇಂಗ್ಲಿಷ್‌) ಎಂಬ ಪುಸ್ತಕದ ಮೇಲೆ ಆಧರಿತವಾದ ತಖ್ತೆ.

[ಪುಟ 15ರಲ್ಲಿರುವ ಚಿತ್ರಗಳು]

ವಿಕೃತ ಹಣ್ಣುನೊಣ [ಡ್ರೋಸಾಫಿಲ] (ತುದಿಯಲ್ಲಿ) ವಿರೂಪವಾಗಿರುವುದಾದರೂ, ಅದು ಆಗಲೂ ಹಣ್ಣುನೊಣವೇ

[ಕೃಪೆ]

© Dr. Jeremy Burgess/Photo Researchers, Inc.

[ಪುಟ 15ರಲ್ಲಿರುವ ಚಿತ್ರಗಳು]

ವಿಕೃತಿ ಪ್ರಯೋಗಗಳನ್ನು ಮಾಡಿದಾಗ, ಪರಿವರ್ತಿತ ರೂಪಗಳ ಸಂಖ್ಯೆಯು ಒಂದೇ ಸಮನೆ ಇಳಿಮುಖವಾದವು, ಆದರೆ ಮೂಲ ರೂಪಗಳು ಹೆಚ್ಚಾಗುತ್ತ ಇದ್ದವೆಂಬುದು ಪದೇ ಪದೇ ತೋರಿಬಂತು (ತೋರಿಸಲಾಗಿರುವ ವಿಕೃತಿಗೆ ಹೆಚ್ಚು ದೊಡ್ಡ ಹೂವುಗಳಿವೆ)

[ಪುಟ 13ರಲ್ಲಿರುವ ಚಿತ್ರ ಕೃಪೆ]

From a Photograph by Mrs. J. M. Cameron/ U.S. National Archives photo

[ಪುಟ 16ರಲ್ಲಿರುವ ಚಿತ್ರ ಕೃಪೆ]

ಫಿಂಚ್‌ ತಲೆಗಳು: © Dr. Jeremy Burgess/ Photo Researchers, Inc.

[ಪುಟ 17ರಲ್ಲಿರುವ ಚಿತ್ರ ಕೃಪೆ]

ಡೈನೊಸಾರ್‌: © Pat Canova/Index Stock Imagery; ಪಳೆಯುಳಿಕೆ: GOH CHAI HIN/AFP/Getty Images