ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜೀವಿಗಳ ಸೃಷ್ಟಿಗಾಗಿ ದೇವರು ವಿಕಾಸವನ್ನು ಬಳಸಿದನೊ?

ಜೀವಿಗಳ ಸೃಷ್ಟಿಗಾಗಿ ದೇವರು ವಿಕಾಸವನ್ನು ಬಳಸಿದನೊ?

ಜೀವಿಗಳ ಸೃಷ್ಟಿಗಾಗಿ ದೇವರು ವಿಕಾಸವನ್ನು ಬಳಸಿದನೊ?

“[ಯೆಹೋವನೇ] ನಮ್ಮ ದೇವರೇ, ನೀನು ಪ್ರಭಾವ ಮಾನ ಬಲಗಳನ್ನು ಹೊಂದುವದಕ್ಕೆ ಯೋಗ್ಯನಾಗಿದ್ದೀ; ಸಮಸ್ತವನ್ನು ಸೃಷ್ಟಿಸಿದಾತನು ನೀನೇ; ಎಲ್ಲವು ನಿನ್ನ ಚಿತ್ತದಿಂದಲೇ ಇದ್ದವು, ನಿನ್ನ ಚಿತ್ತದಿಂದಲೇ ನಿರ್ಮಿತವಾದವು.”​—⁠ಪ್ರಕಟನೆ 4:⁠11.

ಚಾರ್ಲ್ಸ್‌ ಡಾರ್ವಿನ್‌ ಜೀವವಿಕಾಸದ ಸಿದ್ಧಾಂತವನ್ನು ಜನಪ್ರಿಯಗೊಳಿಸಿದ ಸ್ವಲ್ಪ ಸಮಯಾನಂತರ, ಕ್ರೈಸ್ತರೆಂದು ಹೇಳಿಕೊಳ್ಳುತ್ತಿದ್ದ ಅನೇಕ ಪಂಗಡಗಳು ದೇವರಿದ್ದಾನೆಂಬ ತಮ್ಮ ನಂಬಿಕೆಯನ್ನು ಜೀವವಿಕಾಸದ ಸಿದ್ಧಾಂತದೊಂದಿಗೆ ಬೆಸೆಯಲು ಮಾರ್ಗಗಳಿಗಾಗಿ ಹುಡುಕಲಾರಂಭಿಸಿದರು.

ಇಂದು ಹೆಚ್ಚಿನ ಪ್ರಮುಖ “ಕ್ರೈಸ್ತ” ಧಾರ್ಮಿಕ ಗುಂಪುಗಳು, ಜೀವಿಗಳ ಸೃಷ್ಟಿಗಾಗಿ ದೇವರು ಯಾವುದೋ ರೀತಿಯಲ್ಲಿ ಜೀವವಿಕಾಸದ ಪ್ರಕ್ರಿಯೆಯನ್ನು ಬಳಸಿರಬೇಕೆಂಬುದನ್ನು ಒಪ್ಪಿಕೊಳ್ಳಲು ಸಿದ್ಧವಿರುವಂತೆ ತೋರುತ್ತದೆ. ಇನ್ನು ಕೆಲವರು ‘ಆಸ್ತಿಕವಾದಿ ಜೀವವಿಕಾಸ ಸಿದ್ಧಾಂತ’ ಎಂಬ ಬೋಧನೆಯನ್ನು ನಂಬುತ್ತಾರೆ. ಈ ಬೋಧನೆಗನುಸಾರ, ಜೀವರಾಶಿಗಳು ನಿರ್ಜೀವ ರಾಸಾಯನಿಕಗಳಿಂದ ವಿಕಾಸವಾಗುತ್ತಾ ಕಟ್ಟಕಡೆಗೆ ಮಾನವಜಾತಿಯನ್ನು ಉತ್ಪಾದಿಸುವಂಥ ವಿಧದಲ್ಲಿ ದೇವರು ಈ ವಿಶ್ವವನ್ನು ಮುಂಚೆಯೇ ಪ್ರೋಗ್ರ್ಯಾಮ್‌ ಮಾಡಿಟ್ಟಿದ್ದನು. ಈ ಪ್ರಕ್ರಿಯೆಯು ಆರಂಭವಾದ ಬಳಿಕ ದೇವರು ಮಧ್ಯೆ ಕೈಹಾಕಲಿಲ್ಲವೆಂಬುದು ಆ ಬೋಧನೆಯನ್ನು ನಂಬುವವರ ಎಣಿಕೆ. ಮತ್ತಿತ್ತರರು, ಸಸ್ಯಪ್ರಾಣಿಗಳ ಹೆಚ್ಚಿನ ವರ್ಗಗಳನ್ನು ಉತ್ಪಾದಿಸಲು ದೇವರು ಜೀವವಿಕಾಸವನ್ನು ಬಳಸಿದನಾದರೂ, ಈ ಪ್ರಕ್ರಿಯೆಯು ಮುಂದುವರಿಯುವಂತೆ ಮಾಡಲು ಆತನು ಮಧ್ಯಮಧ್ಯದಲ್ಲಿ ಕೈಹಾಕಿದನೆಂದು ಸಾಮಾನ್ಯವಾಗಿ ನೆನಸುತ್ತಾರೆ.

ಬೋಧನೆಗಳ ಸಮ್ಮಿಳನ​—⁠ಸರಿಬೀಳುತ್ತದೊ?

ಜೀವವಿಕಾಸದ ಸಿದ್ಧಾಂತವು ಬೈಬಲಿನ ಬೋಧನೆಗಳೊಂದಿಗೆ ನಿಜವಾಗಿಯೂ ಹೊಂದಿಕೊಳ್ಳುತ್ತದೊ? ಒಂದುವೇಳೆ ಜೀವಿಗಳು ವಿಕಾಸವಾದದ್ದು ಸತ್ಯವಾಗಿರುವಲ್ಲಿ, ಪ್ರಥಮ ಮನುಷ್ಯನಾದ ಆದಾಮನ ಸೃಷ್ಟಿಯ ಕುರಿತಾದ ಬೈಬಲ್‌ ವೃತ್ತಾಂತವು, ಅಕ್ಷರಾರ್ಥಕವಾಗಿ ತೆಗೆದುಕೊಳ್ಳಬಾರದಾದ ಒಂದು ನೀತಿಕಥೆಯಾಗಿದೆ ಹೊರತು ಬೇರೇನಲ್ಲ. (ಆದಿಕಾಂಡ 1:​26, 27; 2:​18-24) ಈ ಬೈಬಲ್‌ ವೃತ್ತಾಂತದ ಬಗ್ಗೆ ಯೇಸುವಿಗೆ ಇದೇ ನೋಟವಿತ್ತೊ? ಅವನು ಹೇಳಿದ್ದು: “ಮನುಷ್ಯರನ್ನು ನಿರ್ಮಾಣಮಾಡಿದವನು ಆದಿಯಿಂದಲೇ ಅವರನ್ನು ಗಂಡುಹೆಣ್ಣಾಗಿ ನಿರ್ಮಿಸಿ ಅವರ ವಿಷಯದಲ್ಲಿ​—⁠ಈ ಕಾರಣದಿಂದ ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು; ಅವರಿಬ್ಬರು ಒಂದೇ ಶರೀರವಾಗಿರುವರು ಎಂದು ಹೇಳಿದನೆಂಬದಾಗಿ ನೀವು ಓದಲಿಲ್ಲವೋ? ಹೀಗಿರುವಲ್ಲಿ ಅವರು ಇನ್ನು ಇಬ್ಬರಲ್ಲ, ಒಂದೇ ಶರೀರವಾಗಿದ್ದಾರೆ. ಆದದರಿಂದ ದೇವರು ಕೂಡಿಸಿದ್ದನ್ನು ಮನುಷ್ಯರು ಅಗಲಿಸಬಾರದು.”​—⁠ಮತ್ತಾಯ 19:4-6.

ಇಲ್ಲಿ ಯೇಸು, ಆದಿಕಾಂಡದ ಎರಡನೆಯ ಅಧ್ಯಾಯದಲ್ಲಿ ದಾಖಲಾಗಿರುವ ಸೃಷ್ಟಿಯ ವೃತ್ತಾಂತದಲ್ಲಿನ ಮಾತುಗಳನ್ನು ಉಲ್ಲೇಖಿಸುತ್ತಿದ್ದನು. ಆ ಪ್ರಥಮ ಮದುವೆಯ ಕುರಿತಾದ ವೃತ್ತಾಂತವು ಒಂದು ಕಟ್ಟುಕಥೆಯಾಗಿದೆ ಎಂದು ಯೇಸು ನಂಬುತ್ತಿದ್ದಲ್ಲಿ, ವಿವಾಹಬಂಧವು ಪವಿತ್ರವಾದುದೆಂಬ ಅವನ ಬೋಧನೆಯನ್ನು ಬೆಂಬಲಿಸಲಿಕ್ಕಾಗಿ ಅವನು ಅದಕ್ಕೆ ಸೂಚಿಸುತ್ತಿದ್ದನೊ? ಖಂಡಿತವಾಗಿ ಇಲ್ಲ. ಆದಿಕಾಂಡದ ಆ ವೃತ್ತಾಂತವು ಒಂದು ಕಟ್ಟುಕಥೆಯಲ್ಲ ಬದಲಾಗಿ ಒಂದು ನಿಜ ಘಟನೆಯಾಗಿದೆಯೆಂದು ಯೇಸುವಿಗೆ ತಿಳಿದಿದ್ದರಿಂದಲೇ ಅವನು ಅದಕ್ಕೆ ಸೂಚಿಸಿ ಮಾತಾಡಿದನು.​—⁠ಯೋಹಾನ 17:⁠17.

ಅದೇ ರೀತಿಯಲ್ಲಿ ಯೇಸುವಿನ ಶಿಷ್ಯರಿಗೆ ಸಹ ಸೃಷ್ಟಿಯ ಕುರಿತಾದ ಆದಿಕಾಂಡದ ವೃತ್ತಾಂತದಲ್ಲಿ ನಂಬಿಕೆಯಿತ್ತು. ಉದಾಹರಣೆಗಾಗಿ, ಲೂಕನ ಸುವಾರ್ತಾ ವೃತ್ತಾಂತವು ಯೇಸುವಿನ ವಂಶಾವಳಿಯನ್ನು ಪಟ್ಟಿಮಾಡುತ್ತಾ ಆದಾಮನ ವರೆಗೆ ಹಿಂದಕ್ಕೆ ಹೋಗುತ್ತದೆ. (ಲೂಕ 3:​23-38) ಆದಾಮನು ಒಬ್ಬ ಕಾಲ್ಪನಿಕ ವ್ಯಕ್ತಿಯಾಗಿದ್ದಲ್ಲಿ, ಆ ವಂಶಾವಳಿಯ ಪಟ್ಟಿಯು ಯಾವ ಹಂತದಲ್ಲಿ ನೈಜತೆಯಿಂದ ಮಿಥ್ಯೆಗೆ ಬದಲಾಯಿತು? ಈ ಕುಟುಂಬ ವೃಕ್ಷದ ಮೂಲಪುರುಷನೇ ಕಾಲ್ಪನಿಕವಾಗಿದ್ದಲ್ಲಿ, ದಾವೀದನ ವಂಶದಲ್ಲಿ ಹುಟ್ಟಿರುವ ಮೆಸ್ಸೀಯನು ತಾನೇ ಎಂಬ ಯೇಸುವಿನ ಪ್ರತಿಪಾದನೆಯು ಎಷ್ಟು ನಂಬಲರ್ಹವಾಗಿರಸಾಧ್ಯವಿತ್ತು? (ಮತ್ತಾಯ 1:⁠1) ಆ ಸುವಾರ್ತಾ ಪುಸ್ತಕದ ಲೇಖಕನಾದ ಲೂಕನು, ತಾನು ‘ಬುಡದಿಂದ ಎಲ್ಲವನ್ನೂ ಚೆನ್ನಾಗಿ ವಿಚಾರಿಸಿದ್ದೇನೆ’ ಎಂದು ಹೇಳಿದನು. ಅವನು ಸಹ ಆದಿಕಾಂಡದಲ್ಲಿನ ಸೃಷ್ಟಿಯ ವೃತ್ತಾಂತವನ್ನು ನಂಬಿದ್ದನೆಂಬುದು ಸ್ಪಷ್ಟ.​—⁠ಲೂಕ 1:⁠3.

ಅಪೊಸ್ತಲ ಪೌಲನಿಗೆ ಯೇಸುವಿನಲ್ಲಿದ್ದ ನಂಬಿಕೆಯು, ಆದಿಕಾಂಡದ ವೃತ್ತಾಂತದಲ್ಲಿ ಅವನಿಗಿದ್ದ ಭರವಸೆಯೊಂದಿಗೆ ಹೆಣೆಯಲ್ಪಟ್ಟಿತ್ತು. ಅವನು ಬರೆದುದು: “ಮನುಷ್ಯನ ಮೂಲಕ ಮರಣವು ಉಂಟಾದ ಕಾರಣ ಮನುಷ್ಯನ ಮೂಲಕ ಸತ್ತವರಿಗೆ ಪುನರುತ್ಥಾನವುಂಟಾಗುವದು. ಯಾವ ಪ್ರಕಾರ ಆದಾಮನ ಸಂಬಂಧದಿಂದ ಎಲ್ಲರೂ ಸಾಯುವವರಾದರೋ ಅದೇ ಪ್ರಕಾರ ಕ್ರಿಸ್ತನ ಸಂಬಂಧದಿಂದ ಎಲ್ಲರೂ ಜೀವಿತರಾಗುವರು.” (1 ಕೊರಿಂಥ 15:21, 22) ಒಂದುವೇಳೆ, ಯಾರ ಮೂಲಕ ‘ಪಾಪವೂ ಪಾಪದಿಂದ ಮರಣವೂ ಲೋಕದೊಳಗೆ ಸೇರಿದವೊ’ ಆ ಆದಾಮನು ಎಲ್ಲಾ ಮಾನವಕುಲದ ಮೂಲಪಿತನಾಗಿರದಿದ್ದಲ್ಲಿ, ಬಾಧ್ಯತೆಯಾಗಿ ಬಂದಿರುವ ಪಾಪದ ಪರಿಣಾಮಗಳನ್ನು ರದ್ದುಮಾಡಲು ಯೇಸು ಏಕೆ ಸಾಯಬೇಕಾಗಿತ್ತು?​—⁠ರೋಮಾಪುರ 5:12; 6:⁠23.

ಹೀಗೆ, ಆದಿಕಾಂಡದ ಸೃಷ್ಟಿ ವೃತ್ತಾಂತದಲ್ಲಿನ ನಂಬಿಕೆಯನ್ನು ಶಿಥಿಲಗೊಳಿಸುವುದು, ಕ್ರೈಸ್ತ ನಂಬಿಕೆಯ ಅಸ್ತಿವಾರಗಳನ್ನೇ ಶಿಥಿಲಗೊಳಿಸುವುದೆಂದರ್ಥ. ಜೀವವಿಕಾಸದ ಸಿದ್ಧಾಂತ ಮತ್ತು ಕ್ರಿಸ್ತನ ಬೋಧನೆಗಳು ಒಂದಕ್ಕೊಂದು ಹೊಂದಿಕೊಳ್ಳುವುದೇ ಇಲ್ಲ. ಇವುಗಳ ಸಮ್ಮಿಳನ ಮಾಡುವ ಯಾವುದೇ ಪ್ರಯತ್ನವು ಒಂದು ದುರ್ಬಲವಾದ ನಂಬಿಕೆಗೆ ಜನ್ಮನೀಡುವುದು, ಅಷ್ಟೇ. ಇಂಥ ನಂಬಿಕೆಯು ಒಬ್ಬನನ್ನು “ನಾನಾ ಉಪದೇಶಗಳಿಂದ ಕಂಗೆಟ್ಟು ಗಾಳಿಯಿಂದ ಅತ್ತಿತ್ತ ನೂಕಿಸಿಕೊಂಡು” ಹೋಗುವಂತೆ ಮಾಡುತ್ತದೆ.​—⁠ಎಫೆಸ 4:⁠14.

ಸ್ಥಿರವಾದ ಅಸ್ತಿವಾರವುಳ್ಳ ನಂಬಿಕೆ

ಅನೇಕ ಶತಮಾನಗಳಿಂದ ಬೈಬಲು ಟೀಕೆ ಹಾಗೂ ದಾಳಿಗೆ ಗುರಿಯಾಗಿದೆ. ಆದರೆ ಬೈಬಲಿನಲ್ಲಿರುವ ವಿಷಯವು ಸತ್ಯವೆಂದು ಪದೇಪದೇ ರುಜುವಾಗಿದೆ. ಇತಿಹಾಸ, ಆರೋಗ್ಯ, ವಿಜ್ಞಾನ, ಹೀಗೆ ಯಾವುದೇ ವಿಷಯದ ಬಗ್ಗೆ ಬೈಬಲು ಮಾತಾಡಲಿ, ಅದು ತಿಳಿಸುವಂಥ ವಿಷಯಗಳು ಭರವಸಾರ್ಹವೆಂದು ಮೇಲಿಂದ ಮೇಲೆ ರುಜುವಾಗುತ್ತಾ ಇದೆ. ಮಾನವ ಸಂಬಂಧಗಳ ಬಗ್ಗೆ ಅದು ಕೊಡುವ ಸಲಹೆಸೂಚನೆಗಳು ಭರವಸಾರ್ಹವಾಗಿವೆ ಮತ್ತು ಯಾವುದೇ ಯುಗಕ್ಕೆ ಅನ್ವಯವಾಗುವಂಥದ್ದಾಗಿವೆ. ಮಾನವ ತತ್ತ್ವಜ್ಞಾನಗಳೂ ಸಿದ್ಧಾಂತಗಳೂ ಹಸಿರುಹುಲ್ಲಿನಂತೆ ಚಿಗುರಿ ಸಮಯಾನಂತರ ಬಾಡಿಹೋಗುತ್ತವೆ. ದೇವರ ವಾಕ್ಯವಾದರೊ ‘ಸದಾಕಾಲ ಇರುತ್ತದೆ.’​—⁠ಯೆಶಾಯ 40:⁠8.

ಜೀವವಿಕಾಸದ ಬೋಧನೆಯು ಕೇವಲ ಒಂದು ವೈಜ್ಞಾನಿಕ ಸಿದ್ಧಾಂತ ಮಾತ್ರವಲ್ಲ. ಇದು ದಶಕಗಳಿಂದ ಚಿಗುರಿ ಹುಲುಸಾಗಿ ಬೆಳೆದಂಥ ಒಂದು ಮಾನವ ತತ್ತ್ವಜ್ಞಾನವೂ ಆಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ, ಬುದ್ಧಿವಂತಿಕೆಯಿಂದ ಮಾಡಲ್ಪಟ್ಟ ವಿನ್ಯಾಸದ ಬಗ್ಗೆ ಪ್ರಾಕೃತಿಕ ಜಗತ್ತಿನಲ್ಲಿ ಸಿಗುತ್ತಿರುವ ಹೆಚ್ಚೆಚ್ಚು ಪುರಾವೆಗೆ ಯಾವುದೋ ವಿವರಣೆಕೊಟ್ಟು ತೇಲಿಸಿಬಿಡಲು ಪ್ರಯತ್ನಿಸುತ್ತಾ, ಡಾರ್ವಿನನ ಜೀವವಿಕಾಸದ ಬೋಧನೆಯೇ ವಿಕಾಸಗೊಂಡಿದೆ ಇಲ್ಲವೆ ವಿಕೃತಿಗೊಂಡಿದೆ. ಈ ವಿಷಯವನ್ನು ನೀವು ಇನ್ನೂ ಹೆಚ್ಚಾಗಿ ಪರೀಕ್ಷಿಸುವಂತೆ ನಿಮ್ಮನ್ನು ಆಮಂತ್ರಿಸುತ್ತೇವೆ. ಇದೇ ಸಂಚಿಕೆಯಲ್ಲಿರುವ ಇತರ ಲೇಖನಗಳನ್ನು ಪರಿಶೀಲಿಸುವ ಮೂಲಕ ನೀವಿದನ್ನು ಮಾಡಸಾಧ್ಯವಿದೆ. ಅಷ್ಟುಮಾತ್ರವಲ್ಲದೆ, ನಿಮಗಿಷ್ಟವಿರುವಲ್ಲಿ ಈ ಪುಟ ಮತ್ತು 32ನೇ ಪುಟದಲ್ಲಿ ತೋರಿಸಲಾಗಿರುವ ಪ್ರಕಾಶನಗಳನ್ನು ಸಹ ನೀವು ಓದಬಹುದು.

ಈ ವಿಷಯದ ಬಗ್ಗೆ ಸಂಶೋಧನೆಮಾಡಿದ ಬಳಿಕ, ಗತಕಾಲದ ಬಗ್ಗೆ ಬೈಬಲ್‌ ಏನು ಹೇಳುತ್ತದೊ ಅದರಲ್ಲಿನ ನಿಮ್ಮ ಭರವಸೆಯು ಹೆಚ್ಚಾಗುವುದನ್ನು ನೀವು ನೋಡಬಹುದು. ಇದಕ್ಕಿಂತಲೂ ಮಿಗಿಲಾಗಿ, ಭವಿಷ್ಯದ ಕುರಿತಾದ ಬೈಬಲಿನ ವಾಗ್ದಾನಗಳಲ್ಲಿ ನಿಮ್ಮ ನಂಬಿಕೆಯು ಬಲಗೊಳಿಸಲ್ಪಡುವುದು. (ಇಬ್ರಿಯ 11:⁠1) ‘ಭೂಮಿ, ಆಕಾಶಗಳನ್ನು ನಿರ್ಮಿಸಿದವನಾದ’ ಯೆಹೋವನನ್ನು ಸ್ತುತಿಸಲೂ ನೀವು ಪ್ರಚೋದಿಸಲ್ಪಡಬಹುದು.​—⁠ಕೀರ್ತನೆ 146:⁠6. (9/06)

ಹೆಚ್ಚಿನ ವಾಚನಕ್ಕಾಗಿ

ಸಕಲ ಜನರಿಗಾಗಿರುವ ಒಂದು ಗ್ರಂಥ - ಬೈಬಲಿನ ವಿಶ್ವಾಸಾರ್ಹತೆಯ ಕುರಿತಾದ ನಿರ್ದಿಷ್ಟ ಉದಾಹರಣೆಗಳನ್ನು ಈ ಬ್ರೋಷರ್‌ನಲ್ಲಿ ಚರ್ಚಿಸಲಾಗಿದೆ

Is There a Creator Who Cares About You? ಹೆಚ್ಚಿನ ವೈಜ್ಞಾನಿಕ ಪುರಾವೆಯನ್ನು ಪರೀಕ್ಷಿಸಿ, ಕಾಳಜಿಯುಳ್ಳ ಒಬ್ಬ ದೇವರು ಇಷ್ಟೊಂದು ಕಷ್ಟಸಂಕಟಕ್ಕೆ ಏಕೆ ಅನುಮತಿಕೊಟ್ಟಿರ ಬಹುದೆಂಬುದನ್ನು ತಿಳಿದುಕೊಳ್ಳಿರಿ

ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? “ಭೂಮಿಗಾಗಿ ದೇವರ ಉದ್ದೇಶವೇನು?” ಎಂಬ ಪ್ರಶ್ನೆಯನ್ನು ಈ ಪುಸ್ತಕದ 3ನೇ ಅಧ್ಯಾಯದಲ್ಲಿ ಉತ್ತರಿಸಲಾಗಿದೆ

[ಪುಟ 10ರಲ್ಲಿರುವ ಸಂಕ್ಷಿಪ್ತ ವಿವರಣೆ]

ಸೃಷ್ಟಿಯ ಕುರಿತಾದ ಆದಿಕಾಂಡ ವೃತ್ತಾಂತವನ್ನು ಯೇಸು ನಂಬಿದನು. ಅವನ ನಂಬಿಕೆ ತಪ್ಪಾಗಿತ್ತೊ?

[ಪುಟ 9ರಲ್ಲಿರುವ ಚೌಕ]

ಜೀವವಿಕಾಸ ಅಂದರೇನು?

“ಜೀವವಿಕಾಸ” ಎಂಬ ಪದಕ್ಕಿರುವ ಒಂದು ಅರ್ಥನಿರೂಪಣೆಯು, “ಒಂದು ನಿರ್ದಿಷ್ಟ ದಿಕ್ಕಿನಲ್ಲಿ ಬದಲಾವಣೆಗಳ ಪ್ರಕ್ರಿಯೆ” ಎಂದಾಗಿದೆ. ಆದರೆ ಆ ಪದವನ್ನು ಹಲವಾರು ವಿಧಗಳಲ್ಲಿ ಬಳಸಲಾಗಿದೆ. ಉದಾಹರಣೆಗೆ, ವಿಶ್ವದ ಬೆಳವಣಿಗೆಯಂಥ ನಿರ್ಜೀವ ವಸ್ತುಗಳಲ್ಲಿನ ಬೃಹತ್‌ ಬದಲಾವಣೆಗಳನ್ನು ವರ್ಣಿಸಲಿಕ್ಕಾಗಿ ಅದನ್ನು ಬಳಸಲಾಗಿದೆ. ಅಷ್ಟುಮಾತ್ರವಲ್ಲದೆ ಈ ಪದವನ್ನು, ಸಸ್ಯ ಹಾಗೂ ಪ್ರಾಣಿಗಳು ತಮ್ಮ ಪರಿಸರಕ್ಕೆ ಹೊಂದಿಕೊಳ್ಳುವ ವಿಧಾನದಂಥ, ಜೀವರಾಶಿಯಲ್ಲಾಗುವ ಚಿಕ್ಕ ಬದಲಾವಣೆಗಳನ್ನು ವರ್ಣಿಸಲಿಕ್ಕಾಗಿಯೂ ಬಳಸಲಾಗಿದೆ. ಆದರೆ ಅತಿ ಸಾಮಾನ್ಯವಾಗಿ ಈ ಪದವನ್ನು, ಜೀವವು ನಿರ್ಜೀವ ರಾಸಾಯನಿಕಗಳಿಂದ ಉದ್ಭವಿಸಿ, ಕೋಶಗಳು ಉತ್ಪತ್ತಿಯಾಗಿ, ನಿಧಾನವಾಗಿ ವಿಕಾಸಹೊಂದುತ್ತಾ ಹೆಚ್ಚೆಚ್ಚು ಸಂಕೀರ್ಣವಾದ ಜೀವಿಗಳಾದವು ಮತ್ತು ಈ ಪ್ರಕ್ರಿಯೆಯಿಂದುಂಟಾದ ಉತ್ಪತ್ತಿಗಳಲ್ಲಿ ಮನುಷ್ಯನೇ ಅತಿ ಬುದ್ಧಿವಂತನು ಎಂಬ ಸಿದ್ಧಾಂತವನ್ನು ವರ್ಣಿಸಲಿಕ್ಕಾಗಿ ಬಳಸಲಾಗುತ್ತದೆ. ಈ ಮೂರನೆಯ ವಿಚಾರವೇ, ಈ ಲೇಖನದಲ್ಲಿ ಬಳಸಲಾದ “ಜೀವವಿಕಾಸ” ಎಂಬ ಪದದ ಅರ್ಥವಾಗಿದೆ.

[ಪುಟ 10ರಲ್ಲಿರುವ ಚಿತ್ರ ಕೃಪೆ]

ಅಂತರಿಕ್ಷದ ಫೋಟೋ: J. Hester and P. Scowen (AZ State Univ.), NASA