ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೀವು ಯಾರನ್ನು ನಂಬಬೇಕು?

ನೀವು ಯಾರನ್ನು ನಂಬಬೇಕು?

ನೀವು ಯಾರನ್ನು ನಂಬಬೇಕು?

“ಪ್ರತಿ ಮನೆಯನ್ನು ಯಾರೋ ಒಬ್ಬನು ಕಟ್ಟಿರುವನು; ಸಮಸ್ತವನ್ನು ಕಟ್ಟಿದಾತನು ದೇವರೇ.” ​—⁠ಇಬ್ರಿಯ 3:⁠4.

ಈ ಮಾತುಗಳನ್ನು ಬರೆದ ಬೈಬಲ್‌ ಲೇಖಕನ ತರ್ಕವನ್ನು ನೀವು ಒಪ್ಪುತ್ತೀರೊ? ಇದನ್ನು ಬರೆದನಂತರದ ಸುಮಾರು 2,000 ವರ್ಷಗಳಲ್ಲಿ ಮಾನವಕುಲವು ವೈಜ್ಞಾನಿಕ ಕ್ಷೇತ್ರದಲ್ಲಿ ಬಹಳಷ್ಟು ಅಭಿವೃದ್ಧಿಯನ್ನು ಮಾಡಿದೆ. ಹೀಗಿರುವಾಗ, ಪ್ರಕೃತಿಯಲ್ಲಿ ಕಂಡುಬರುವ ವಿನ್ಯಾಸವು ಒಬ್ಬ ವಿನ್ಯಾಸಕನ, ಒಬ್ಬ ಸೃಷ್ಟಿಕರ್ತನ ಅಂದರೆ ಒಬ್ಬ ದೇವರ ಅಸ್ತಿತ್ವಕ್ಕೆ ಕೈತೋರಿಸುತ್ತದೆಂಬ ಅಭಿಪ್ರಾಯವುಳ್ಳವರು ಈಗಲೂ ಇದ್ದಾರೊ?

ಹೌದೆಂದು ಮುಂದುವರಿದ ದೇಶಗಳಲ್ಲೂ ಇರುವ ಅನೇಕ ಜನರು ಹೇಳುತ್ತಾರೆ. ಉದಾಹರಣೆಗಾಗಿ, 2005ರಲ್ಲಿ ಯುನೈಟೆಡ್‌ ಸ್ಟೇಟ್ಸ್‌ನಲ್ಲಿ ನ್ಯೂಸ್‌ವೀಕ್‌ ವಾರ್ತಾಪತ್ರಿಕೆಯು ನಡೆಸಿದಂಥ ಸಮೀಕ್ಷೆಯಲ್ಲಿ, 80 ಪ್ರತಿಶತ ಜನರು “ದೇವರೇ ವಿಶ್ವವನ್ನು ಸೃಷ್ಟಿಸಿದ್ದಾನೆ” ಎಂಬುದನ್ನು ನಂಬುತ್ತಾರೆಂದು ತಿಳಿದುಬಂತು. ಹೀಗೆ ನಂಬುವವರು ಅವಿದ್ಯಾವಂತರೊ? ದೇವರಿದ್ದಾನೆಂದು ವಿಜ್ಞಾನಿಗಳಲ್ಲಿ ಯಾರಾದರೂ ನಂಬುತ್ತಾರೊ? 1997ರಲ್ಲಿ ಪ್ರಕೃತಿ (ಇಂಗ್ಲಿಷ್‌) ಎಂಬ ಹೆಸರಿನ ವೈಜ್ಞಾನಿಕ ಪತ್ರಿಕೆಯು, ಒಂದು ಸಮೀಕ್ಷೆಯಲ್ಲಿ ಪಾಲ್ಗೊಂಡ ಜೀವವಿಜ್ಞಾನಿಗಳು, ಭೌತವಿಜ್ಞಾನಿಗಳು ಮತ್ತು ಗಣಿತಜ್ಞರಲ್ಲಿ 40 ಪ್ರತಿಶತ ಮಂದಿ ದೇವರಿದ್ದಾನೆಂದು ಮಾತ್ರವಲ್ಲ ಆತನು ಪ್ರಾರ್ಥನೆಗಳನ್ನು ಆಲಿಸಿ ಉತ್ತರಕೊಡುತ್ತಾನೆ ಎಂಬುದನ್ನೂ ನಂಬುತ್ತಾರೆಂದು ವರದಿಸಿತು.

ಆದರೆ ಇನ್ನಿತರ ವಿಜ್ಞಾನಿಗಳು ಈ ವಿಷಯವನ್ನು ಬಲವಾಗಿ ವಿರೋಧಿಸುತ್ತಾರೆ. ಪ್ರಕೃತ್ಯತೀತ ಶಕ್ತಿಯಲ್ಲಿ ನಂಬಿಕೆ, ವಿಶೇಷವಾಗಿ ದೇವರಲ್ಲಿ ನಂಬಿಕೆಯು ನಿಜ ವಿಜ್ಞಾನದೊಂದಿಗೆ ಹೊಂದಿಕೊಳ್ಳಲಾರದು ಎಂದು ನೋಬೆಲ್‌ ಪ್ರಶಸ್ತಿವಿಜೇತರಾದ ಡಾಕ್ಟರ್‌ ಹರ್ಬಟ್‌ ಎ. ಹಾಫ್ಟ್‌ಮ್ಯಾನ್‌ ಇತ್ತೀಚೆಗೆ ವೈಜ್ಞಾನಿಕ ಸಮ್ಮೇಳನವೊಂದರಲ್ಲಿ ತಿಳಿಸಿದರು. “ಈ ರೀತಿಯ ನಂಬಿಕೆಯು ಮಾನವಕುಲದ ಹಿತಕ್ಷೇಮಕ್ಕೆ ಹಾನಿಕರ” ಎಂದು ಅವರು ಹೇಳಿದರು. ಅಲ್ಲದೆ, ದೇವರಿದ್ದಾನೆಂದು ನಂಬುವ ವಿಜ್ಞಾನಿಗಳು ಸಹ, ಸಸ್ಯಗಳಲ್ಲಿ ಹಾಗೂ ಪ್ರಾಣಿಗಳಲ್ಲಿ ಕಂಡುಬರುವ ವಿನ್ಯಾಸದಿಂದ ಒಬ್ಬ ವಿನ್ಯಾಸಕನಿದ್ದಾನೆಂಬುದು ತೋರಿಬರುತ್ತದೆಂದು ಕಲಿಸಲು ಹಿಂದೇಟುಹಾಕುತ್ತಾರೆ. ಏಕೆ? ಇದಕ್ಕೆ ಒಂದು ಕಾರಣವನ್ನು ಗುರುತಿಸುತ್ತಾ, ಸ್ಮಿತ್‌ಸೋನಿಯನ್‌ ಸಂಸ್ಥೆಯಲ್ಲಿರುವ ಪ್ರಾಗ್ಜೀವಿಶಾಸ್ತ್ರಜ್ಞರಾದ ಡಗ್ಲಸ್‌ ಎಚ್‌. ಅರ್ವಿನ್‌ ಹೇಳುವುದು: “ವಿಜ್ಞಾನವು ಪವಾಡಗಳನ್ನು ಅನುಮೋದಿಸುವುದಿಲ್ಲ; ಇದು ವಿಜ್ಞಾನದ ನಿಯಮ.”

ನೀವೇನು ಯೋಚಿಸಬೇಕು ಮತ್ತು ಏನು ನಂಬಬೇಕೆಂದು ಒಂದೇ ಇತರರು ನಿಮಗೆ ಹೇಳಿಕೊಡುವಂತೆ ಬಿಡಬಹುದು ಅಥವಾ ನೀವು ಸ್ವತಃ ಪುರಾವೆಯನ್ನು ಪರೀಕ್ಷಿಸಿ ನಿಮ್ಮ ಸ್ವಂತ ತೀರ್ಮಾನಕ್ಕೆ ಬರಲು ಇಚ್ಛಿಸಬಹುದು. ಮುಂದಿನ ಪುಟಗಳಲ್ಲಿ ನೀವು ವಿಜ್ಞಾನದ ಇತ್ತೀಚಿನ ಆವಿಷ್ಕಾರಗಳ ಬಗ್ಗೆ ಓದುವಾಗ, ‘ಒಬ್ಬ ಸೃಷ್ಟಿಕರ್ತನು ಇದ್ದಾನೆಂಬ ತೀರ್ಮಾನಕ್ಕೆ ಬರುವುದು ತರ್ಕಸಮ್ಮತವೊ?’ ಎಂದು ನಿಮ್ಮನ್ನೇ ಕೇಳಿಕೊಳ್ಳಿ. (9/06)

[ಪುಟ 3ರಲ್ಲಿರುವ ಸಂಕ್ಷಿಪ್ತ ವಿವರಣೆ]

ನೀವೇ ಪುರಾವೆಯನ್ನು ಪರೀಕ್ಷಿಸಿನೋಡಿರಿ

[ಪುಟ 3ರಲ್ಲಿರುವ ಚೌಕ]

ಯೆಹೋವನ ಸಾಕ್ಷಿಗಳು ಸೃಷ್ಟಿವಾದಿಗಳೊ?

ಬೈಬಲಿನ ಆದಿಕಾಂಡ ಪುಸ್ತಕದಲ್ಲಿ ದಾಖಲಿಸಲ್ಪಟ್ಟಿರುವ ಸೃಷ್ಟಿಯ ವೃತ್ತಾಂತವನ್ನು ಯೆಹೋವನ ಸಾಕ್ಷಿಗಳು ನಂಬುತ್ತಾರೆ. ಆದರೆ ಅವರು ನೀವೆಣಿಸುವಂಥ ರೀತಿಯಲ್ಲಿ ಸೃಷ್ಟಿವಾದಿಗಳಲ್ಲ. ಯಾಕೆ? ಮೊದಲನೆಯದಾಗಿ, ವಿಶ್ವ, ಈ ಭೂಮಿ ಮತ್ತು ಅದರಲ್ಲಿರುವ ಎಲ್ಲ ಜೀವರಾಶಿಯು ಸುಮಾರು 10,000 ವರ್ಷಗಳ ಹಿಂದೆ 24 ತಾಸುಗಳುಳ್ಳ 6 ದಿನಗಳೊಳಗೇ ಸೃಷ್ಟಿಸಲ್ಪಟ್ಟಿತ್ತೆಂಬುದು ಅನೇಕ ಸೃಷ್ಟಿವಾದಿಗಳ ನಂಬಿಕೆ. ಆದರೆ ಬೈಬಲ್‌ ಇದನ್ನು ಕಲಿಸುವುದಿಲ್ಲ. * ಅಲ್ಲದೆ, ಸೃಷ್ಟಿವಾದಿಗಳು ಅಂಗೀಕರಿಸಿರುವಂಥ ಅನೇಕ ಬೋಧನೆಗಳಿಗೆ ಬೈಬಲಿನಲ್ಲಿ ಯಾವುದೇ ಆಧಾರವಿಲ್ಲ. ಯೆಹೋವನ ಸಾಕ್ಷಿಗಳಾದರೊ ತಮ್ಮೆಲ್ಲ ಧಾರ್ಮಿಕ ನಂಬಿಕೆಗಳನ್ನು ದೇವರ ವಾಕ್ಯದ ಮೇಲೆ ಮಾತ್ರ ಆಧರಿಸುತ್ತಾರೆ.

ಅಷ್ಟುಮಾತ್ರವಲ್ಲದೆ, ಕೆಲವು ದೇಶಗಳಲ್ಲಿ ಸೃಷ್ಟಿವಾದಿಗಳು ಎಂಬ ಪದವನ್ನು ರಾಜಕೀಯದಲ್ಲಿ ಸಕ್ರಿಯವಾಗಿ ಒಳಗೂಡಿರುವ ಮೂಲಭೂತವಾದಿಗಳ ಗುಂಪುಗಳಿಗೂ ಉಪಯೋಗಿಸಲಾಗುತ್ತದೆ. ಈ ಗುಂಪುಗಳು ತಮ್ಮ ಧಾರ್ಮಿಕ ನಂಬಿಕೆಗಳಿಗೆ ಹೊಂದಿಕೊಳ್ಳುವ ಕಾನೂನುಗಳು ಮತ್ತು ಬೋಧನೆಗಳನ್ನು ರಾಜಕಾರಣಿಗಳು, ನ್ಯಾಯಾಧೀಶರು ಮತ್ತು ಶಿಕ್ಷಕರು ಅನುಮೋದಿಸುವಂತೆ ಅವರ ಮೇಲೆ ಒತ್ತಡಹೇರುತ್ತಾರೆ.

ಆದರೆ ಯೆಹೋವನ ಸಾಕ್ಷಿಗಳು ರಾಜಕೀಯ ವಿಷಯಗಳಲ್ಲಿ ತಟಸ್ಥರು. ಕಾನೂನುಗಳನ್ನು ರಚಿಸಿ, ಜಾರಿಗೆ ತರುವ ಹಕ್ಕು ಸರಕಾರಗಳಿಗಿದೆ ಎಂಬುದನ್ನು ಅವರು ಮಾನ್ಯಮಾಡುತ್ತಾರೆ. (ರೋಮಾಪುರ 13:​1-7) ಆದರೆ, ಅದೇ ಸಮಯದಲ್ಲಿ ತಾವು ‘ಲೋಕದ ಭಾಗವಾಗಿಲ್ಲ’ ಎಂಬ ಯೇಸುವಿನ ಹೇಳಿಕೆಯನ್ನು ಅವರು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ. (ಯೋಹಾನ 17:​14-16, NW) ಅವರು ತಮ್ಮ ಸಾರ್ವಜನಿಕ ಶುಶ್ರೂಷೆಯಲ್ಲಿ, ದೇವರ ಮಟ್ಟಗಳಿಗನುಸಾರ ಜೀವಿಸುವುದರ ಪ್ರಯೋಜನಗಳ ಕುರಿತು ಕಲಿಯುವ ಸದವಕಾಶವನ್ನು ಜನರ ಮುಂದಿಡುತ್ತಾರೆ. ಅಲ್ಲದೆ, ಯೆಹೋವನ ಸಾಕ್ಷಿಗಳು ಮೂಲಭೂತವಾದಿಗಳ ಗುಂಪುಗಳನ್ನು ಬೆಂಬಲಿಸುವುದೂ ಇಲ್ಲ. ಏಕೆಂದರೆ ಈ ಗುಂಪುಗಳು, ಬೈಬಲ್‌ ಮಟ್ಟಗಳನ್ನು ಸ್ವೀಕರಿಸುವಂತೆ ಇತರರನ್ನು ಬಲಾತ್ಕರಿಸುವ ಪೌರ ನಿಯಮಗಳನ್ನು ಸ್ಥಾಪಿಸಲು ಪ್ರಯತ್ನಿಸುತ್ತವೆ, ಮತ್ತು ಅವುಗಳಿಗೆ ಬೆಂಬಲಕೊಡುವಲ್ಲಿ ಸಾಕ್ಷಿಗಳು ತಮ್ಮ ಕ್ರೈಸ್ತ ತಾಟಸ್ಥ್ಯವನ್ನು ರಾಜಿಮಾಡಿದಂತಾಗುತ್ತದೆ.​—⁠ಯೋಹಾನ 18:⁠36.

[ಪಾದಟಿಪ್ಪಣಿ]

^ ಪ್ಯಾರ. 11 ಈ ಸಂಚಿಕೆಯ ಪುಟ 18ರಲ್ಲಿರುವ “ಬೈಬಲಿನ ದೃಷ್ಟಿಕೋನ: ವಿಜ್ಞಾನವು ಆದಿಕಾಂಡ ವೃತ್ತಾಂತವನ್ನು ವಿರೋಧಿಸುತ್ತದೊ?” ಎಂಬ ಲೇಖನವನ್ನು ನೋಡಿ.