ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಿಜ್ಞಾನವು ಆದಿಕಾಂಡ ವೃತ್ತಾಂತವನ್ನು ವಿರೋಧಿಸುತ್ತದೊ?

ವಿಜ್ಞಾನವು ಆದಿಕಾಂಡ ವೃತ್ತಾಂತವನ್ನು ವಿರೋಧಿಸುತ್ತದೊ?

ಬೈಬಲಿನ ದೃಷ್ಟಿಕೋನ

ವಿಜ್ಞಾನವು ಆದಿಕಾಂಡ ವೃತ್ತಾಂತವನ್ನು ವಿರೋಧಿಸುತ್ತದೊ?

ಸೃಷ್ಟಿಯ ಕುರಿತ ಬೈಬಲಿನ ವೃತ್ತಾಂತವನ್ನು ವಿಜ್ಞಾನವು ಸುಳ್ಳೆಂದು ಸ್ಥಾಪಿಸುತ್ತದೆಂಬುದು ಅನೇಕರ ವಾದ. ಆದರೆ ನಿಜ ವಿರೋಧೋಕ್ತಿ ಇರುವುದು ವಿಜ್ಞಾನ ಮತ್ತು ಬೈಬಲಿನ ಮಧ್ಯೆಯಲ್ಲ ಬದಲಾಗಿ ವಿಜ್ಞಾನ ಮತ್ತು ಕ್ರೈಸ್ತ ಮೂಲಭೂತವಾದಿಗಳೆಂದು ಹೇಳಿಕೊಳ್ಳುವವರ ಅಭಿಪ್ರಾಯಗಳ ಮಧ್ಯೆಯೇ. ಈ ಗುಂಪುಗಳಲ್ಲಿ ಕೆಲವು, ಬೈಬಲಿಗನುಸಾರ ಸುಮಾರು 10,000 ವರುಷಗಳ ಹಿಂದೆ ಎಲ್ಲ ಭೌತಿಕ ಸೃಷ್ಟಿಯು 24 ತಾಸುಗಳಿರುವ ಆರು ದಿನಗಳಲ್ಲಿ ಉಂಟುಮಾಡಲ್ಪಟ್ಟಿತೆಂದು ತಪ್ಪಾಗಿ ಪ್ರತಿಪಾದಿಸುತ್ತವೆ.

ಆದರೆ ಬೈಬಲ್‌ ಅಂತಹ ತೀರ್ಮಾನವನ್ನು ಬೆಂಬಲಿಸುವುದಿಲ್ಲ. ಒಂದುವೇಳೆ ಅದು ಬೆಂಬಲಿಸುತ್ತಿದ್ದಲ್ಲಿ, ಕಳೆದ ನೂರಾರು ವರುಷಗಳಲ್ಲಿ ಮಾಡಲ್ಪಟ್ಟಿರುವ ವೈಜ್ಞಾನಿಕ ಆವಿಷ್ಕಾರಗಳು ಬೈಬಲಿನ ನಿಷ್ಕೃಷ್ಟತೆಯ ಬಗ್ಗೆ ಸಂದೇಹಬರಿಸುತ್ತಿದ್ದವು ನಿಶ್ಚಯ. ಆದರೆ ಬೈಬಲಿನ ಗ್ರಂಥಪಾಠದ ಜಾಗರೂಕತೆಯ ಅಧ್ಯಯನವು, ಸ್ಥಾಪಿತ ವೈಜ್ಞಾನಿಕ ನಿಜತ್ವಗಳೊಂದಿಗೆ ಅದು ಯಾವುದೇ ರೀತಿಯಲ್ಲಿ ಘರ್ಷಿಸುವುದಿಲ್ಲವೆಂಬುದನ್ನು ತೋರಿಸುತ್ತದೆ. ಈ ಕಾರಣದಿಂದಲೇ, ಯೆಹೋವನ ಸಾಕ್ಷಿಗಳು ಈ “ಕ್ರೈಸ್ತ” ಮೂಲಭೂತವಾದಿಗಳೊಂದಿಗೆ ಮತ್ತು ಅನೇಕ ಸೃಷ್ಟಿವಾದಿಗಳೊಂದಿಗೆ ಒಮ್ಮತದಲ್ಲಿಲ್ಲ. ಬೈಬಲ್‌ ನಿಜವಾಗಿಯೂ ಏನು ಬೋಧಿಸುತ್ತದೆಂಬುದನ್ನು ಈ ಕೆಳಗೆ ಕೊಡಲಾಗಿದೆ.

“ಆದಿಯಲ್ಲಿ” ಎಂದರೆ ಯಾವಾಗ?

ಆದಿಕಾಂಡದ ವೃತ್ತಾಂತವು, “ಆದಿಯಲ್ಲಿ ದೇವರು ಆಕಾಶವನ್ನೂ ಭೂಮಿಯನ್ನೂ ಉಂಟುಮಾಡಿದನು” ಎಂಬ ಸರಳವಾದರೂ ಪ್ರಬಲವಾದ ಹೇಳಿಕೆಯಿಂದ ಆರಂಭಗೊಳ್ಳುತ್ತದೆ. (ಆದಿಕಾಂಡ 1:⁠1) ಬೈಬಲ್‌ ವಿದ್ವಾಂಸರು ಒಪ್ಪಿಕೊಳ್ಳುವುದೇನೆಂದರೆ ಈ 1ನೇ ವಚನವು, ಇದೇ ಅಧ್ಯಾಯದ 3ನೆಯ ವಚನದಿಂದಾರಂಭಿಸುತ್ತಾ ಹೇಳಲಾಗಿರುವ ಸೃಷ್ಟಿಯ ದಿನಗಳಿಗಿಂತ ಪ್ರತ್ಯೇಕವಾದ ಕ್ರಿಯೆಯನ್ನು ವರ್ಣಿಸುತ್ತದೆ. ಇದಕ್ಕೆ ಅಗಾಧವಾದ ಮಹತ್ವಾರ್ಥವಿದೆ. ಅದೇನೆಂದರೆ ಬೈಬಲಿನ ಆರಂಭದ ಆ ಹೇಳಿಕೆಗನುಸಾರ, ನಮ್ಮ ಭೂಗ್ರಹದ ಸಮೇತ ಈ ವಿಶ್ವವು, ಸೃಷ್ಟಿಯ ದಿನಗಳು ಆರಂಭವಾಗುವುದಕ್ಕೆ ಎಷ್ಟೋ ಮುಂಚೆ ಅನಿಶ್ಚಿತ ಸಮಯದಿಂದ ಅಸ್ತಿತ್ವದಲ್ಲಿತ್ತು.

ಈ ಭೂಮಿ ಸುಮಾರು 400 ಕೋಟಿ ವರುಷ ಹಳೆಯದ್ದು ಎಂದು ಭೂವಿಜ್ಞಾನಿಗಳು ಹೇಳುವಾಗ, ಖಗೋಲ ವಿಜ್ಞಾನಿಗಳು ವಿಶ್ವವು 1,500 ಕೋಟಿ ವರುಷಗಳಷ್ಟು ಹಳೆಯದ್ದೆಂದು ಲೆಕ್ಕಹಾಕುತ್ತಾರೆ. ಈ ಆವಿಷ್ಕಾರಗಳು ಇಲ್ಲವೆ ಭಾವೀ ಪರಿಷ್ಕಾರಗಳು ಆದಿಕಾಂಡ 1:1ನ್ನು ವಿರೋಧಿಸುತ್ತವೊ? ಇಲ್ಲ. ಏಕೆಂದರೆ, ‘ಆಕಾಶ ಮತ್ತು ಭೂಮಿ’ ನಿಜವಾಗಿ ಎಷ್ಟು ಹಳೆಯದ್ದೆಂದು ಬೈಬಲ್‌ ನಿರ್ದಿಷ್ಟವಾಗಿ ತಿಳಿಸುವುದಿಲ್ಲ. ಹೀಗೆ, ಬೈಬಲಿನ ಗ್ರಂಥಪಾಠ ತಪ್ಪೆಂದು ವಿಜ್ಞಾನವು ತೋರಿಸುವುದಿಲ್ಲ.

ಸೃಷ್ಟಿ ದಿನಗಳ ಉದ್ದವೆಷ್ಟು?

ಸೃಷ್ಟಿ ದಿನಗಳ ಉದ್ದದ ಕುರಿತು ಏನು ಹೇಳಬಹುದು? ಅವು ಅಕ್ಷರಾರ್ಥದಲ್ಲಿ 24 ತಾಸುಗಳ ದಿನಗಳಾಗಿದ್ದವೊ? ಆದಿಕಾಂಡದ ಲೇಖಕನಾದ ಮೋಶೆಯು ಸಮಯಾನಂತರ, ಈ ಆರು ಸೃಷ್ಟಿ ದಿನಗಳ ನಂತರದ ದಿನವನ್ನು ಸಾಪ್ತಾಹಿಕ ಸಬ್ಬತ್‌ ದಿನಕ್ಕಾಗಿ ಮಾದರಿಯಾಗಿ ಸೂಚಿಸಿರುವ ಕಾರಣದಿಂದ ಪ್ರತಿಯೊಂದು ಸೃಷ್ಟಿ ದಿನವು 24 ತಾಸುಗಳ ಉದ್ದದ್ದಾಗಿರಲೇಬೇಕೆಂದು ಕೆಲವರು ವಾದಿಸುತ್ತಾರೆ. (ವಿಮೋಚನಕಾಂಡ 20:11) ಆದರೆ ಆದಿಕಾಂಡದಲ್ಲಿನ ಪದರಚನೆ ಈ ತೀರ್ಮಾನವನ್ನು ಬೆಂಬಲಿಸುತ್ತದೆಯೆ?

ಇಲ್ಲ. ವಾಸ್ತವಾಂಶವೇನಂದರೆ, “ದಿನ” ಎಂದು ಭಾಷಾಂತರವಾಗಿರುವ ಹೀಬ್ರು ಪದಕ್ಕೆ 24 ತಾಸುಗಳ ಅವಧಿ ಮಾತ್ರವಲ್ಲ, ವಿವಿಧ ಇತರ ಸಮಯಾವಧಿಗಳ ಅರ್ಥವೂ ಇರಬಲ್ಲದು. ಉದಾಹರಣೆಗೆ, ದೇವರ ಸೃಷ್ಟಿಕಾರಕ ಕಾರ್ಯವನ್ನು ಸಾರಾಂಶವಾಗಿ ಹೇಳುವಾಗ, ಮೋಶೆ ಆ ಆರು ಸೃಷ್ಟಿ ದಿನಗಳನ್ನು ಒಟ್ಟಿನಲ್ಲಿ ಒಂದು ದಿನವೆಂದು ಕರೆಯುತ್ತಾನೆ. (ಆದಿಕಾಂಡ 2:⁠4, NW) ಇದಲ್ಲದೆ, ಒಂದನೆಯ ಸೃಷ್ಟಿ ದಿನದಲ್ಲಿ, ದೇವರು ‘ಬೆಳಕಿಗೆ ಹಗಲೆಂದೂ [ಹೀಬ್ರುವಿನಲ್ಲಿ ಅಕ್ಷರಶಃ “ದಿನವೆಂದೂ”] ಮತ್ತು ಕತ್ತಲೆಗೆ ಇರುಳೆಂದು ಹೆಸರಿಟ್ಟನು.’ (ಆದಿಕಾಂಡ 1:⁠5) ಇಲ್ಲಿ, 24 ತಾಸುಗಳ ಒಂದು ಭಾಗವನ್ನು ಮಾತ್ರ “ದಿನ” ಎಂದು ಕರೆಯಲಾಗಿದೆ. ಹೀಗೆ, ಪ್ರತಿಯೊಂದು ಸೃಷ್ಟಿ ದಿನವು 24 ತಾಸುಗಳಷ್ಟು ಉದ್ದವಾಗಿತ್ತೆಂದು ಮನಸ್ಸಿಗೆ ಬಂದಂತೆ ಹೇಳಲು ಯಾವುದೇ ಆಧಾರ ಬೈಬಲಿನಲ್ಲಿಲ್ಲ.

ಹಾಗಾದರೆ, ಆ ಸೃಷ್ಟಿ ದಿನಗಳ ಉದ್ದವೆಷ್ಟು? ಆದಿಕಾಂಡ 1 ಮತ್ತು 2ನೆಯ ಅಧ್ಯಾಯಗಳ ಮಾತುಗಳು, ಆ ದಿನಗಳು ಗಣನೀಯವಾಗಿ ದೀರ್ಘ ಸಮಯಾವಧಿಗಳದ್ದಾಗಿದ್ದವು ಎಂಬುದನ್ನು ಸೂಚಿಸುತ್ತವೆ.

ಸೃಷ್ಟಿಗಳು ಕ್ರಮೇಣವಾಗಿ ತೋರಿಬರುತ್ತವೆ

ಮೋಶೆ ಆದಿಕಾಂಡ ವೃತ್ತಾಂತವನ್ನು ಹೀಬ್ರು ಭಾಷೆಯಲ್ಲಿ ಬರೆದನು ಮತ್ತು ಅವನದನ್ನು ಭೂಮಿಯ ಮೇಲೆ ನಿಂತು ದೃಶ್ಯವನ್ನು ನೋಡುತ್ತಿರುವ ಒಬ್ಬ ವ್ಯಕ್ತಿಯಂತೆ ಬರೆದನು. ಈ ಎರಡು ನಿಜತ್ವಗಳು ಮತ್ತು ವಿಶ್ವವು ಈ ಸೃಷ್ಟಿಕಾರಕ ಅವಧಿಗಳು ಇಲ್ಲವೆ “ದಿನಗಳು” ಆರಂಭವಾಗುವುದಕ್ಕಿಂತ ಮುಂಚೆಯೇ ಅಸ್ತಿತ್ವದಲ್ಲಿತ್ತು ಎಂಬ ತಿಳಿವಳಿಕೆಯು ಈ ಸೃಷ್ಟಿ ವೃತ್ತಾಂತವನ್ನು ಸುತ್ತುವರಿದಿರುವ ಹೆಚ್ಚಿನ ವಿವಾದವನ್ನು ಪರಿಹರಿಸಬೇಕು. ಹೇಗೆ?

ಆದಿಕಾಂಡದ ವೃತ್ತಾಂತದ ಜಾಗರೂಕ ಪರಿಶೀಲನೆಯು, ಒಂದು “ದಿನ”ದಲ್ಲಿ ಆರಂಭವಾದ ಸಂಗತಿಗಳು ಮುಂದಿನ ಒಂದು ಇಲ್ಲವೆ ಹೆಚ್ಚು ದಿನಗಳ ವರೆಗೆ ಮುಂದುವರಿದವೆಂಬುದನ್ನು ತೋರಿಸುತ್ತದೆ. ದೃಷ್ಟಾಂತಕ್ಕೆ, ಮೊದಲನೆಯ ಸೃಷ್ಟಿ “ದಿನ” ಆರಂಭಗೊಳ್ಳುವ ಮೊದಲು, ಆಗಲೇ ಅಸ್ತಿತ್ವದಲ್ಲಿದ್ದ ಸೂರ್ಯಬೆಳಕು ಭೂಮಿಯ ಮೇಲ್ಮೈಯ ಮೇಲೆ ಬೀಳದಂತೆ ಹೇಗೊ, ಪ್ರಾಯಶಃ ದಟ್ಟವಾದ ಮೋಡಗಳ ಕಾರಣ ತಡೆಹಿಡಿಯಲ್ಪಟ್ಟಿತು. (ಯೋಬ 38:⁠9) ಆದರೆ ಒಂದನೆಯ “ದಿನ”ದಲ್ಲಿ, ಆ ತಡೆಯು ತಿಳಿಯಾಗಲು ಪ್ರಾರಂಭಿಸಿ, ಚೆದರಿ ಹರಡಿದ ಬೆಳಕು ವಾತಾವರಣವನ್ನು ತೂರಿ ಬರುವಂತೆ ಸಾಧ್ಯವಾಯಿತು. *

ಎರಡನೆಯ “ದಿನ”ದಲ್ಲಿ, ವಾತಾವರಣವು ತಿಳಿಯಾಗುತ್ತಾ ಹೋದಾಗ ಅದು ಮೇಲಿದ್ದ ದಟ್ಟವಾದ ಮೋಡಗಳು ಮತ್ತು ಕೆಳಗಿದ್ದ ಸಾಗರದ ಮಧ್ಯದಲ್ಲಿ ಗುಮಟವನ್ನು ಅಂದರೆ ಅಂತರವನ್ನು ಸೃಷ್ಟಿಸಿತೆಂದು ವ್ಯಕ್ತವಾಗುತ್ತದೆ. ನಾಲ್ಕನೆಯ “ದಿನ”ದಲ್ಲಿ, ವಾತಾವರಣವು ಕ್ರಮೇಣ ಎಷ್ಟು ತಿಳಿಯಾಯಿತೆಂದರೆ “ಆಕಾಶಮಂಡಲದಲ್ಲಿ” ಸೂರ್ಯ ಚಂದ್ರ ಗೋಚರವಾದವು. (ಆದಿಕಾಂಡ 1:​14-16) ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ಭೂಮಿಯ ಮೇಲಿರುವ ವ್ಯಕ್ತಿಗೆ ಸೂರ್ಯ ಮತ್ತು ಚಂದ್ರ​—⁠ಇವುಗಳನ್ನು ನೋಡಲು ಸಾಧ್ಯವಾಯಿತು. ಈ ಘಟನೆಗಳು ಕ್ರಮೇಣವಾಗಿ ಸಂಭವಿಸಿದವು.

ವಾತಾವರಣ ತಿಳಿಗೊಂಡ ಹಾಗೆ ಪಕ್ಷಿಗಳು​—⁠ಕೀಟಗಳು ಮತ್ತು ಪೊರೆಗಳಂಥ ರೆಕ್ಕೆಗಳಿರುವ ಜೀವಿಗಳ ಸಮೇತ​—⁠ಐದನೆಯ “ದಿನ”ದಲ್ಲಿ ತೋರಿಬರತೊಡಗಿದವೆಂದು ಆದಿಕಾಂಡ ವೃತ್ತಾಂತವು ಹೇಳುತ್ತದೆ. ಆದರೂ, ಆರನೆಯ “ದಿನ”ದಲ್ಲಿ ದೇವರು “ಎಲ್ಲಾ ಭೂಜಂತುಗಳನ್ನೂ ಆಕಾಶದ ಪಕ್ಷಿಗಳನ್ನೂ ಮಣ್ಣಿನಿಂದ” ಇನ್ನೂ ನಿರ್ಮಿಸುತ್ತ ಇದ್ದನೆಂದು ಬೈಬಲ್‌ ಸೂಚಿಸುತ್ತದೆ.​—⁠ಆದಿಕಾಂಡ 2:19.

ಹೀಗೆ, ಪ್ರತಿ “ದಿನ”ದಲ್ಲಿ ಅಥವಾ ಸೃಷ್ಟಿಕಾರಕ ಅವಧಿಯಲ್ಲಿ ಕೆಲವು ದೊಡ್ಡ ಘಟನೆಗಳು ಕ್ಷಣಮಾತ್ರದಲ್ಲಿ ನಡೆಯುವ ಬದಲಿಗೆ ಕ್ರಮೇಣ ಸಂಭವಿಸಿದವೆಂಬುದಕ್ಕೆ, ಪ್ರಾಯಶಃ ಅವುಗಳಲ್ಲಿ ಕೆಲವು ಮುಂದಿನ ಸೃಷ್ಟಿಕಾರಕ “ದಿನಗಳ” ವರೆಗೂ ಮುಂದುವರಿದಿರುವ ಸಾಧ್ಯತೆಯಿದೆ ಎಂಬುದಕ್ಕೆ ಬೈಬಲಿನ ಭಾಷೆ ಅವಕಾಶ ಕೊಡುತ್ತದೆ.

ಅವುಗಳ ಜಾತಿಗನುಸಾರವಾಗಿ

ಹಾಗಾದರೆ, ಸಸ್ಯಗಳ ಮತ್ತು ಪ್ರಾಣಿಗಳ ಪ್ರಗತಿಪರವಾದ ತೋರಿಬರುವಿಕೆಯು, ದೇವರು ಜೀವರಾಶಿಗಳ ಭಾರೀ ವೈವಿಧ್ಯವನ್ನು ಉತ್ಪಾದಿಸಲಿಕ್ಕಾಗಿ ಜೀವವಿಕಾಸವನ್ನು ಬಳಸಿದನೆಂದು ಸೂಚಿಸುತ್ತದೆಯೆ? ಇಲ್ಲ. ದೇವರೇ ಸಸ್ಯ ಮತ್ತು ಪ್ರಾಣಿಗಳ ಎಲ್ಲ ಮೂಲ “ಜಾತಿಗಳನ್ನು” ಸೃಷ್ಟಿಸಿದನೆಂದು ದಾಖಲೆಯು ಸ್ಪಷ್ಟವಾಗಿ ತಿಳಿಸುತ್ತದೆ. (ಆದಿಕಾಂಡ 1:​11, 12, 20-25) ಹಾಗಾದರೆ, ಸಸ್ಯಗಳ ಮತ್ತು ಪ್ರಾಣಿಗಳ ಈ ಮೂಲ “ಜಾತಿಗಳು,” ಬದಲಾಗುತ್ತಿರುವ ಪರಿಸರೀಯ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ ಸಾಮರ್ಥ್ಯವುಳ್ಳವುಗಳಾಗಿ ಮಾಡಲ್ಪಟ್ಟಿದ್ದವೊ? ಒಂದು ‘ಜಾತಿಯ’ ಪರಿಮಿತಿಯನ್ನು ಯಾವುದು ನಿರೂಪಿಸುತ್ತದೆ? ಇದನ್ನೂ ಬೈಬಲ್‌ ತಿಳಿಸುವುದಿಲ್ಲ. ಆದರೂ, ಜೀವಜಂತುಗಳು “ಅವುಗಳ ಜಾತಿಗನುಸಾರವಾಗಿ” ಸೃಷ್ಟಿಸಲ್ಪಟ್ಟವೆಂದು ಅದು ತಿಳಿಸುತ್ತದೆ. (ಆದಿಕಾಂಡ 1:21) ಈ ಹೇಳಿಕೆಯು, ಒಂದು “ಜಾತಿ”ಯೊಳಗೆ ಸಂಭವಿಸುವ ವೈವಿಧ್ಯದ ಮೊತ್ತಕ್ಕೆ ಒಂದು ಮಿತಿಯಿದೆ ಎಂಬುದನ್ನು ಸೂಚಿಸುತ್ತದೆ. ವಿಸ್ತಾರವಾದ ಸಮಯಾವಧಿಗಳಲ್ಲಿ, ಸಸ್ಯಗಳ ಮತ್ತು ಪ್ರಾಣಿಗಳ ಮೂಲವರ್ಗಗಳಲ್ಲಿ ಆಗಿರುವ ಬದಲಾವಣೆ ಕೊಂಚವೇ ಎಂಬುದನ್ನು ಪಳೆಯುಳಿಕೆ ದಾಖಲೆ ಮತ್ತು ಆಧುನಿಕ ಸಂಶೋಧನೆ ಬೆಂಬಲಿಸುತ್ತದೆ.

ಮೂಲಭೂತವಾದಿಗಳಲ್ಲಿ ಕೆಲವರು ಹೇಳುವಂತೆ, ಭೂಮಿ ಮತ್ತು ಸಕಲ ಜೀವಿಗಳ ಸಮೇತ ವಿಶ್ವವು ಸ್ವಲ್ಪಾವಧಿಯಲ್ಲಿ ಹಾಗೂ ಸಾಪೇಕ್ಷವಾಗಿ ಇತ್ತೀಚೆಗೆ ಸೃಷ್ಟಿಸಲ್ಪಟ್ಟಿತ್ತೆಂಬ ಸಂಗತಿಯನ್ನು ಆದಿಕಾಂಡ ಬೋಧಿಸುವುದಿಲ್ಲ. ಬದಲಿಗೆ, ವಿಶ್ವದ ಸೃಷ್ಟಿ ಮತ್ತು ಭೂಮಿಯ ಮೇಲೆ ಜೀವರಾಶಿಗಳ ತೋರಿಬರುವಿಕೆಯ ಬಗ್ಗೆ ಆದಿಕಾಂಡದಲ್ಲಿರುವ ವರ್ಣನೆಯು ಇತ್ತೀಚಿನ ಅನೇಕ ವೈಜ್ಞಾನಿಕ ಆವಿಷ್ಕಾರಗಳಿಗೆ ಹೊಂದಿಕೆಯಲ್ಲಿದೆ.

ಅನೇಕ ಮಂದಿ ವಿಜ್ಞಾನಿಗಳು ತಮ್ಮ ತತ್ತ್ವಜ್ಞಾನಿ ನಂಬಿಕೆಗಳ ಕಾರಣ, ದೇವರು ಸಮಸ್ತವನ್ನು ನಿರ್ಮಿಸಿದನೆಂಬ ಬೈಬಲ್‌ ಹೇಳಿಕೆಯನ್ನು ತಳ್ಳಿಹಾಕುತ್ತಾರೆ. ಆದರೆ ಆಸಕ್ತಿಕರವಾಗಿ, ಪುರಾತನ ಬೈಬಲ್‌ ಪುಸ್ತಕವಾದ ಆದಿಕಾಂಡದಲ್ಲಿ ವಿಶ್ವಕ್ಕೆ ಒಂದು ಆದಿಯಿತ್ತೆಂದು ಮತ್ತು ಜೀವರಾಶಿಯು ಹಂತಹಂತವಾಗಿ, ಪ್ರಗತಿಪರವಾಗಿ, ಸಮಯಾವಧಿಗಳಾದ್ಯಂತ ತೋರಿಬಂತೆಂದು ಮೋಶೆ ಬರೆದನು. ವೈಜ್ಞಾನಿಕವಾಗಿ ನಿಷ್ಕೃಷ್ಟವಾಗಿರುವ ಇಂತಹ ಮಾಹಿತಿಯನ್ನು ಸುಮಾರು 3,500 ವರ್ಷಗಳ ಹಿಂದೆ ಮೋಶೆ ಹೇಗೆ ಪಡೆಯಲು ಶಕ್ತನಾದನು? ಇದಕ್ಕೆ ತರ್ಕಸಮ್ಮತವಾದ ಒಂದು ವಿವರಣೆಯಿದೆ. ಅದೇನೆಂದರೆ, ಭೂಮ್ಯಾಕಾಶಗಳನ್ನು ಸೃಷ್ಟಿಸಲು ಶಕ್ತಿ, ವಿವೇಕಗಳಿದ್ದಾತನು, ಇಂತಹ ನಿಷ್ಕೃಷ್ಟ ಜ್ಞಾನವನ್ನು ಮೋಶೆಗೆ ನಿಶ್ಚಯವಾಗಿಯೂ ಕೊಡಶಕ್ತನಾಗಿದ್ದನು. ಇದು, ಬೈಬಲ್‌ “ದೈವಪ್ರೇರಿತ” ಎಂದು ಅದರಲ್ಲಿರುವ ಹೇಳಿಕೆಗೆ ಹೆಚ್ಚಿನ ಒತ್ತನ್ನು ಕೊಡುತ್ತದೆ.​—⁠2 ತಿಮೊಥೆಯ 3:16. (9/06)

ನೀವು ಇದರ ಬಗ್ಗೆ ಕೌತುಕಪಟ್ಟದ್ದುಂಟೊ?

◼ ದೇವರು ವಿಶ್ವವನ್ನು ಎಷ್ಟು ಸಮಯದ ಹಿಂದೆ ಸೃಷ್ಟಿಸಿದನು?​—⁠ಆದಿಕಾಂಡ 1:⁠1.

◼ ಭೂಮಿ 24 ತಾಸುಗಳ ಆರು ದಿನಗಳಲ್ಲಿ ಸೃಷ್ಟಿಸಲ್ಪಟ್ಟಿತೊ?​—⁠ಆದಿಕಾಂಡ 2:⁠4.

◼ ಭೂಮಿಯ ಆದಿಯ ಬಗ್ಗೆ ಮೋಶೆಯ ಬರಹಗಳು ವೈಜ್ಞಾನಿಕವಾಗಿ ನಿಷ್ಕೃಷ್ಟವಾಗಿರಲು ಹೇಗೆ ಸಾಧ್ಯ? ​—⁠2 ತಿಮೊಥೆಯ 3:16.

[ಪಾದಟಿಪ್ಪಣಿ]

^ ಪ್ಯಾರ. 14 ಮೊದಲನೆಯ “ದಿನ”ದಲ್ಲಿ ನಡೆದ ಸಂಗತಿಗಳ ವರ್ಣನೆಯಲ್ಲಿ, ಬೆಳಕಿಗೆ ಉಪಯೋಗಿಸಲಾಗಿರುವ ಪದವು ‘ಆರ್‌’ ಎಂದಾಗಿದ್ದು, ಅದು ಸಾಮಾನ್ಯವಾದ ಬೆಳಕನ್ನು ಸೂಚಿಸುತ್ತದೆ. ಆದರೆ, ನಾಲ್ಕನೆಯ ‘ದಿನಕ್ಕೆ’ ಮಾಆರ್‌ ಎಂಬ ಪದವನ್ನು ಉಪಯೋಗಿಸಲಾಗಿದ್ದು ಅದು ಬೆಳಕಿನ ಮೂಲಕ್ಕೆ ಸೂಚಿಸುತ್ತದೆ.

[ಪುಟ 19ರಲ್ಲಿರುವ ಸಂಕ್ಷಿಪ್ತ ವಿವರಣೆ]

ವಿಶ್ವವು ಸ್ವಲ್ಪಾವಧಿಯಲ್ಲಿ, ಸಾಪೇಕ್ಷವಾಗಿ ಇತ್ತೀಚೆಗೆ ಸೃಷ್ಟಿಸಲ್ಪಟ್ಟಿತ್ತೆಂಬ ಸಂಗತಿಯನ್ನು ಆದಿಕಾಂಡ ಬೋಧಿಸುವುದಿಲ್ಲ

[ಪುಟ 20ರಲ್ಲಿರುವ ಸಂಕ್ಷಿಪ್ತ ವಿವರಣೆ]

“ಆದಿಯಲ್ಲಿ ದೇವರು ಆಕಾಶವನ್ನೂ ಭೂಮಿಯನ್ನೂ ಉಂಟುಮಾಡಿದನು.”​—⁠ಆದಿಕಾಂಡ 1:⁠1.

[ಪುಟ 18ರಲ್ಲಿರುವ ಚಿತ್ರ ಕೃಪೆ]

ವಿಶ್ವ: IAC/RGO/David Malin Images

[ಪುಟ 20ರಲ್ಲಿರುವ ಚಿತ್ರ ಕೃಪೆ]

NASA photo