ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸೃಷ್ಟಿಕರ್ತನು ಇದ್ದಾನೆಂದು ನಂಬಲು ನಮಗಿರುವ ಕಾರಣಗಳು

ಸೃಷ್ಟಿಕರ್ತನು ಇದ್ದಾನೆಂದು ನಂಬಲು ನಮಗಿರುವ ಕಾರಣಗಳು

ಸೃಷ್ಟಿಕರ್ತನು ಇದ್ದಾನೆಂದು ನಂಬಲು ನಮಗಿರುವ ಕಾರಣಗಳು

ವಿವಿಧ ವೈಜ್ಞಾನಿಕ ಕ್ಷೇತ್ರಗಳ ಅನೇಕ ಪರಿಣತರು ಪ್ರಕೃತಿಯಲ್ಲಿ, ಬುದ್ಧಿವಂತಿಕೆಯನ್ನು ತೋರಿಸುವ ವಿನ್ಯಾಸಗಳಿರುವುದನ್ನು ಗ್ರಹಿಸುತ್ತಾರೆ. ಅವರ ಅಭಿಪ್ರಾಯದಲ್ಲಿ, ಭೂಮಿಯ ಮೇಲೆ ಅತಿ ಸಂಕೀರ್ಣವಾಗಿರುವ ಜೀವರಾಶಿಯು ಆಕಸ್ಮಿಕವಾಗಿ ಬಂತೆಂದು ನಂಬುವುದು ತರ್ಕಸಮ್ಮತವಲ್ಲ. ಈ ಕಾರಣದಿಂದ, ಅನೇಕ ಮಂದಿ ವಿಜ್ಞಾನಿಗಳು ಮತ್ತು ಸಂಶೋಧಕರು ಒಬ್ಬ ಸೃಷ್ಟಿಕರ್ತನಿದ್ದಾನೆಂದು ನಂಬುತ್ತಾರೆ.

ಇವರಲ್ಲಿ ಕೆಲವರು ಈಗ ಯೆಹೋವನ ಸಾಕ್ಷಿಗಳಾಗಿದ್ದಾರೆ. ಬೈಬಲಿನ ದೇವರು ಈ ಭೌತಿಕ ವಿಶ್ವದ ವಿನ್ಯಾಸಕನೂ ನಿರ್ಮಾಪಕನೂ ಆಗಿದ್ದಾನೆಂದು ಅವರಿಗೆ ಮನವರಿಕೆಯಾಗಿದೆ. ಅವರು ಈ ತೀರ್ಮಾನಕ್ಕೆ ಬಂದಿರುವುದೇಕೆ? ಎಚ್ಚರ! ಈ ಪ್ರಶ್ನೆಯನ್ನು ಅವರಲ್ಲಿ ಕೆಲವರನ್ನು ಕೇಳಿತು. ಅವರ ಹೇಳಿಕೆಗಳು ನಿಮಗೆ ಆಸಕ್ತಿಕರವಾಗಿ ಕಂಡುಬರಬಹುದು. *

“ಜೀವಿಗಳಲ್ಲಿನ ಗ್ರಹಿಸಲು ಕಷ್ಟಕರವಾದ ಅಗಾಧ ಜಟಿಲತೆಗಳು”

ವಾಲ್ಫ್‌ ಎಕಹಾರ್ಟ್‌ ಲೋನಿಗ್‌

ವ್ಯಕ್ತಿಪರಿಚಯ: ಕಳೆದ 28 ವರ್ಷಗಳಿಂದ ನಾನು ಸಸ್ಯಗಳ ತಳಿಶಾಸ್ತ್ರೀಯ ವಿಕೃತಿಗೆ ಸಂಬಂಧಪಟ್ಟ ವೈಜ್ಞಾನಿಕ ಕೆಲಸಮಾಡಿದ್ದೇನೆ. ಅವುಗಳಲ್ಲಿ 21 ವರುಷ, ನಾನು ಜರ್ಮನಿಯ ಕೊಲೋನ್‌ ನಗರದ ತಳಿಬೆಳೆಸುವಿಕೆಯ ಸಂಶೋಧನೆಗಾಗಿರುವ ಮಾಕ್ಸ್‌-ಪ್ಲಾಂಕ್‌ ಇನ್‌ಸ್ಟಿಟ್ಯೂಟ್‌ನಲ್ಲಿ ಕೆಲಸಮಾಡುತ್ತಿದ್ದೇನೆ. ಸುಮಾರು 30 ವರುಷಗಳಿಂದ, ಯೆಹೋವನ ಸಾಕ್ಷಿಗಳ ಕ್ರೈಸ್ತ ಸಭೆಯಲ್ಲಿ ನಾನು ಹಿರಿಯನಾಗಿಯೂ ಸೇವೆಸಲ್ಲಿಸುತ್ತಿದ್ದೇನೆ.

ತಳಿಶಾಸ್ತ್ರದಲ್ಲಿ (ಜಿನೆಟಿಕ್ಸ್‌) ನನ್ನ ಪ್ರಯೋಗ ಹಾಗೂ ವೀಕ್ಷಣಾವಲಂಬಿತ ಸಂಶೋಧನೆ ಮತ್ತು ಶರೀರ ವಿಜ್ಞಾನ (ಫಿಸಿಯಾಲಜಿ) ಹಾಗೂ ಆಕೃತಿ ವಿಜ್ಞಾನ (ಮಾರ್ಫಾಲಜಿ)ದಂಥ ಜೀವಶಾಸ್ತ್ರೀಯ ವಿಷಯಗಳ ನನ್ನ ಅಧ್ಯಯನವು, ಜೀವಿಗಳಲ್ಲಿನ ಭಾರೀ ಹಾಗೂ ಅನೇಕವೇಳೆ ಗ್ರಹಿಸಲು ಕಷ್ಟಕರವಾದ ಅಗಾಧ ಜಟಿಲತೆಗಳನ್ನು ಮುಖಾಮುಖಿಯಾಗಿ ನೋಡಲು ಸಾಧ್ಯಮಾಡುತ್ತದೆ. ಈ ವಿಷಯಗಳ ಕುರಿತಾದ ನನ್ನ ಅಧ್ಯಯನವು ಜೀವರಾಶಿಯು, ಅದರ ಅತಿ ಮೂಲರೂಪಗಳು ಸಹ ಬುದ್ಧಿವಂತಿಕೆಯಿಂದ ಸೃಷ್ಟಿಸಲ್ಪಟ್ಟಿರಲೇಬೇಕೆಂಬ ನನ್ನ ದೃಢನಿಶ್ಚಯವನ್ನು ಬಲಪಡಿಸಿದೆ.

ವೈಜ್ಞಾನಿಕ ಸಮುದಾಯಕ್ಕೆ ಸಹ ಜೀವರಾಶಿಗಳಲ್ಲಿ ಕಂಡುಬರುವ ಜಟಿಲತೆಯ ಉತ್ತಮ ಪರಿಚಯವಿದೆ. ಆದರೆ ನಮ್ಮನ್ನು ಸ್ತಬ್ಧಗೊಳಿಸುವಂಥ ಈ ನಿಜತ್ವಗಳನ್ನು ಸಾಮಾನ್ಯವಾಗಿ, ಜೀವವಿಕಾಸ ಸಿದ್ಧಾಂತವನ್ನು ಬೆಂಬಲಿಸುವ ಪೂರ್ವಾಪರದಲ್ಲಿ ಪ್ರಸ್ತುತಪಡಿಸಲಾಗುತ್ತದೆ. ಆದರೆ ನನ್ನ ಅಭಿಪ್ರಾಯದಲ್ಲಿ, ಬೈಬಲಿನ ಸೃಷ್ಟಿವೃತ್ತಾಂತವನ್ನು ವಿರೋಧಿಸುವಂಥ ವಾದಗಳನ್ನು ವೈಜ್ಞಾನಿಕವಾಗಿ ಪರೀಕ್ಷಿಸುವಲ್ಲಿ ಅವು ಕುಸಿದು ಬೀಳುತ್ತವೆ. ನಾನು ಅಂತಹ ವಾದಗಳನ್ನು ಅನೇಕ ದಶಕಗಳಿಂದ ಪರೀಕ್ಷಿಸಿ ನೋಡಿದ್ದೇನೆ. ಜೀವಿಗಳ ಬಹಳ ಜಾಗರೂಕತೆಯ ಅಧ್ಯಯನ, ಮತ್ತು ಭೂಮಿಯಲ್ಲಿ ಜೀವ ಅಸ್ತಿತ್ವದಲ್ಲಿರುವದಕ್ಕೋಸ್ಕರ ವಿಶ್ವವನ್ನು ನಿಯಂತ್ರಿಸುವಂಥ ನಿಯಮಗಳು ಪರಿಪೂರ್ಣ ಹೊಂದಿಕೆಯಲ್ಲಿರುವ ರೀತಿಯನ್ನು ಪರಿಗಣಿಸಿದ ಬಳಿಕ, ಒಬ್ಬ ಸೃಷ್ಟಿಕರ್ತನಿದ್ದಾನೆಂದು ನಂಬಲು ನಾನು ನಿರ್ಬಂಧಿಸಲ್ಪಟ್ಟಿದ್ದೇನೆ.

“ನಾನು ಅವಲೋಕಿಸುವ ಪ್ರತಿಯೊಂದೂ ಉಂಟುಮಾಡಲ್ಪಟ್ಟಿತು”

ಬೈರನ್‌ ಲೀಆನ್‌ ಮೀಡೋಸ್‌

ವ್ಯಕ್ತಿಪರಿಚಯ: ನಾನು ಅಮೆರಿಕದಲ್ಲಿ ವಾಸಿಸುತ್ತಿದ್ದೇನೆ. ನ್ಯಾಷನಲ್‌ ಆ್ಯರನಾಟಿಕ್ಸ್‌ ಆ್ಯಂಡ್‌ ಸ್ಪೇಸ್‌ ಆ್ಯಡ್‌ಮಿನಿಸ್ಟ್ರೇಷನ್‌ನಲ್ಲಿ ಲೇಸರ್‌ ಭೌತವಿಜ್ಞಾನ ಕ್ಷೇತ್ರದಲ್ಲಿ ಕೆಲಸಮಾಡುತ್ತೇನೆ. ಸದ್ಯಕ್ಕೆ ನಾನು, ಭೌಗೋಳಿಕ ವಾಯುಗುಣ, ಹವಾಮಾನ ಮತ್ತು ಗ್ರಹದ ಅಸಾಧಾರಣ ಪ್ರಕೃತಿ ಘಟನೆಗಳನ್ನು ಮಾನಿಟರ್‌ ಮಾಡುವ ಸಾಮರ್ಥ್ಯವನ್ನು ಇನ್ನಷ್ಟು ಉತ್ತಮಗೊಳಿಸುವ ತಂತ್ರಜ್ಞಾನ ವಿಕಸನ ಕೆಲಸದಲ್ಲಿ ಒಳಗೂಡಿದ್ದೇನೆ. ನಾನು ವರ್ಜೀನಿಯದ ಕಿಲ್ಮಾರ್ನಕ್‌ ಪ್ರದೇಶದ ಯೆಹೋವನ ಸಾಕ್ಷಿಗಳ ಸಭೆಯಲ್ಲಿ ಹಿರಿಯನಾಗಿದ್ದೇನೆ.

ನನ್ನ ಸಂಶೋಧನೆಯಲ್ಲಿ ನಾನು ಹೆಚ್ಚಾಗಿ ಭೌತಶಾಸ್ತ್ರದ ಮೂಲಸೂತ್ರಗಳಿಗೆ ಸಂಬಂಧಪಟ್ಟ ಕೆಲಸಮಾಡುತ್ತೇನೆ. ನಿರ್ದಿಷ್ಟ ವಿಷಯಗಳು ಹೇಗೆ ಮತ್ತು ಏಕೆ ಸಂಭವಿಸುತ್ತವೆಂದು ತಿಳಿಯಲು ಪ್ರಯತ್ನಿಸುವುದು ನನ್ನ ಕೆಲಸ. ನನ್ನ ಅಧ್ಯಯನ ಕ್ಷೇತ್ರದಲ್ಲಿ, ನಾನು ಅವಲೋಕಿಸುವ ಪ್ರತಿಯೊಂದೂ ಉಂಟುಮಾಡಲ್ಪಟ್ಟಿತು ಎಂಬುದಕ್ಕೆ ಸ್ಪಷ್ಟ ರುಜುವಾತು ನನಗೆ ತೋರಿಬರುತ್ತದೆ. ದೇವರು ಪ್ರಕೃತಿಯಲ್ಲಿರುವ ಸಕಲ ವಸ್ತುಗಳಿಗೆ ಮೂಲಕಾರಣನೆಂದು ಅಂಗೀಕರಿಸುವುದು ವೈಜ್ಞಾನಿಕವಾಗಿ ತರ್ಕಸಮ್ಮತವೆಂಬುದು ನನ್ನ ನಂಬಿಕೆ. ಪ್ರಕೃತಿಯ ನಿಯಮಗಳು ಎಷ್ಟು ಸ್ಥಿರವಾಗಿವೆಯೆಂದರೆ, ಒಬ್ಬ ವ್ಯವಸ್ಥಾಪಕನು ಅಥವಾ ಒಬ್ಬ ಸೃಷ್ಟಿಕರ್ತನು ಅವುಗಳನ್ನು ಸ್ಥಾಪಿಸಿದನೆಂದು ನಂಬದಿರಲು ನನಗೆ ಅಸಾಧ್ಯ.

ಒಬ್ಬ ಸೃಷ್ಟಿಕರ್ತನಿದ್ದಾನೆಂಬ ಈ ತೀರ್ಮಾನವು ಅಷ್ಟು ಸ್ಪಷ್ಟವಾಗಿ ತೋರಿಬರುತ್ತಿರುವುದಾದರೆ, ಅನೇಕ ವಿಜ್ಞಾನಿಗಳು ಜೀವವಿಕಾಸವನ್ನು ನಂಬುವುದೇಕೆ? ವಿಕಾಸವಾದಿಗಳು ತಮ್ಮ ಬಳಿಯಿರುವ ರುಜುವಾತನ್ನು ಅವರ ಪೂರ್ವಕಲ್ಪಿತ ಅಭಿಪ್ರಾಯಗಳಿಂದ ನೋಡುತ್ತಿರುವುದರಿಂದಲೊ? ವಿಜ್ಞಾನಿಗಳು ಹೀಗೆ ಮಾಡುವುದು ಹಿಂದೆಂದೂ ಕೇಳಿಲ್ಲದಂಥ ವಿಷಯವಲ್ಲ. ಆದರೆ ಅವಲೋಕನೆ, ಅದೆಷ್ಟೇ ಮನವರಿಕೆಮಾಡುವಂಥದ್ದಾಗಿರಲಿ, ಒಬ್ಬನು ಸರಿಯಾದ ತೀರ್ಮಾನಕ್ಕೆ ಬರುವನೆಂಬುದಕ್ಕೆ ಖಾತರಿಯಾಗಿರುವುದಿಲ್ಲ. ದೃಷ್ಟಾಂತಕ್ಕೆ, ಲೇಸರ್‌ ಭೌತಶಾಸ್ತ್ರದ ಸಂಶೋಧನೆ ಮಾಡುವ ಒಬ್ಬ ವ್ಯಕ್ತಿಯು, ಬೆಳಕು ಧ್ವನಿತರಂಗದಂತೆ ಒಂದು ತರಂಗವಾಗಿದೆಯೆಂದು ಪಟ್ಟುಹಿಡಿದು ಹೇಳಬಹುದು. ಕಾರಣ, ಬೆಳಕು ಅನೇಕವೇಳೆ ತರಂಗದಂತೆ ವರ್ತಿಸುತ್ತದೆ. ಆದರೂ ಅವನ ತೀರ್ಮಾನ ಅಪೂರ್ಣವಾದುದಾಗಿದೆ, ಏಕೆಂದರೆ ಬೆಳಕು, ಫೋಟಾನ್‌ಗಳೆಂದು ಕರೆಯಲ್ಪಡುವ ಕಣಸಮುದಾಯಗಳಾಗಿಯೂ ವರ್ತಿಸುತ್ತವೆಂದು ರುಜುವಾತು ಸೂಚಿಸುತ್ತವೆ. ತದ್ರೀತಿ, ಜೀವವಿಕಾಸವು ವಾಸ್ತವಾಂಶವೆಂದು ವಾದಿಸುವವರು ತಮ್ಮ ತೀರ್ಮಾನಗಳನ್ನು ರುಜುವಾತಿನ ಒಂದು ಭಾಗದ ಮೇಲೆ ಮಾತ್ರ ಆಧರಿಸುತ್ತಾರೆ, ಮತ್ತು ತಮ್ಮ ಪೂರ್ವಕಲ್ಪಿತ ತೀರ್ಮಾನಗಳು ಆ ರುಜುವಾತನ್ನು ದೃಷ್ಟಿಸುವ ವಿಧವನ್ನು ಪ್ರಭಾವಿಸುವಂತೆ ಅವರು ಬಿಡುತ್ತಾರೆ.

ಸ್ವತಃ ವಿಕಾಸವಾದಿ “ಪರಿಣತರು,” ಜೀವವಿಕಾಸವು ಹೇಗೆ ಸಂಭವಿಸಿದ್ದಿರಬಹುದೆಂದು ತಮ್ಮೊಳಗೇ ವಾದಿಸುತ್ತಿದ್ದಾರೆ. ಹೀಗಿರುವಾಗ, ಜೀವವಿಕಾಸವು ವಾಸ್ತವಾಂಶವೆಂದು ಯಾವನಾದರೂ ಒಪ್ಪಿಕೊಳ್ಳುವುದನ್ನು ನೋಡುವಾಗ ನನಗೆ ಆಶ್ಚರ್ಯವೆನಿಸುತ್ತದೆ. ದೃಷ್ಟಾಂತಕ್ಕೆ, ಕೆಲವು ಮಂದಿ ಪರಿಣತರು 2 ಮತ್ತು 2ನ್ನು ಕೂಡಿಸಿದರೆ ಒಟ್ಟು 4 ಆಗುತ್ತದೆ ಎಂದು ಹೇಳುವಾಗ, ಬೇರೆ ಪರಿಣತರು ಅದು ಒಟ್ಟು 3 ಅಥವಾ 6 ಆಗುತ್ತದೆ ಎಂದು ಹೇಳುವಲ್ಲಿ, ಗಣಿತವು ರುಜುವಾಗಿರುವ ನಿಜತ್ವವೆಂದು ನೀವು ಒಪ್ಪುವಿರೊ? ಯಾವುದು ರುಜುವಾಗಿದೆಯೊ, ಪರೀಕ್ಷಿಸಲಾಗಿದೆಯೊ ಮತ್ತು ಪುನಃ ಪ್ರಯೋಗಮಾಡಿ ತೋರಿಸಲಾಗಿದೆಯೊ ಅದನ್ನು ಮಾತ್ರ ಒಪ್ಪಿಕೊಳ್ಳುವುದೇ ವಿಜ್ಞಾನದ ಪಾತ್ರವಾಗಿರುವಲ್ಲಿ, ಎಲ್ಲ ಜೀವರಾಶಿಯು ಒಂದು ಸಾಮಾನ್ಯ ಮೂಲರೂಪದಿಂದ ವಿಕಾಸವಾಗುತ್ತಾ ಬಂದಿದೆ ಎಂಬ ವಾದವು ವೈಜ್ಞಾನಿಕ ವಾಸ್ತವಾಂಶವಾಗಿರುವುದಿಲ್ಲ. (9/06)

“ಶೂನ್ಯದಿಂದ ಏನೂ ಬರಲಾರದು”

ಕೆನತ್‌ ಲಾಯ್ಡ್‌ ಟಾನಾಕಾ

ವ್ಯಕ್ತಿಪರಿಚಯ: ನಾನೊಬ್ಬ ಭೂವಿಜ್ಞಾನಿ. ಸದ್ಯಕ್ಕೆ ಆ್ಯರಿಸೋನದ ಫ್ಲ್ಯಾಗ್‌ಸ್ಟಾಫ್‌ನಲ್ಲಿರುವ ಯು.ಎಸ್‌. ಜೀಯಲಾಜಿಕಲ್‌ ಸರ್ವೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಗ್ರಹಗಳ ವಿಜ್ಞಾನವು ಸೇರಿರುವ ಭೂವಿಜ್ಞಾನದ ವಿವಿಧ ಕ್ಷೇತ್ರಗಳಲ್ಲಿನ ವೈಜ್ಞಾನಿಕ ಸಂಶೋಧನೆಯಲ್ಲಿ ನಾನು ಸುಮಾರು 30 ವರುಷಕಾಲ ಭಾಗವಹಿಸಿರುತ್ತೇನೆ. ಮಂಗಳ ಗ್ರಹದ ಸಂಬಂಧದಲ್ಲಿ ನಾನು ತಯಾರಿಸಿರುವ ಅನೇಕ ಲೇಖನಗಳು ಮತ್ತು ನಕ್ಷೆಗಳು ಅಂಗೀಕೃತ ವೈಜ್ಞಾನಿಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗಿರುವ ನಾನು, ಬೈಬಲ್‌ ಓದುವಂತೆ ಇತರರನ್ನು ಪ್ರೋತ್ಸಾಹಿಸುವುದರಲ್ಲಿ ಪ್ರತಿ ತಿಂಗಳು ಸುಮಾರು 70 ತಾಸುಗಳನ್ನು ಕಳೆಯುತ್ತೇನೆ.

ಜೀವವಿಕಾಸ ಸಿದ್ಧಾಂತದಲ್ಲಿ ನಂಬುವಂತೆ ನನಗೆ ಕಲಿಸಲಾಗಿತ್ತು. ಆದರೆ ವಿಶ್ವರಚನೆಗೆ ಬೇಕಾಗಿದ್ದ ಭಾರೀ ಶಕ್ತಿಯು ಬಲಾಢ್ಯ ಸೃಷ್ಟಿಕರ್ತನಿಲ್ಲದೆ ಬಂತೆಂಬುದನ್ನು ನನಗೆ ನಂಬಲಾಗಲಿಲ್ಲ. ಶೂನ್ಯದಿಂದ ಏನೂ ಬರಲಾರದು. ಅಲ್ಲದೆ, ಸೃಷ್ಟಿಕರ್ತನೊಬ್ಬನು ಇದ್ದಾನೆಂಬುದಕ್ಕೆ ಒಂದು ಶಕ್ತಿಯುತ ವಾದವು ನನಗೆ ಬೈಬಲಿನಲ್ಲಿಯೇ ದೊರೆಯುತ್ತದೆ. ಈ ಗ್ರಂಥವು ನಾನು ಪರಿಣತನಾಗಿರುವ ಕ್ಷೇತ್ರದ ವೈಜ್ಞಾನಿಕ ನಿಜತ್ವಗಳಿಗೆ ಅನೇಕ ದೃಷ್ಟಾಂತಗಳನ್ನು ಕೊಡುತ್ತದೆ. ಉದಾಹರಣೆಗೆ ಭೂಮಿ ಗೋಳಾಕಾರದಲ್ಲಿದೆ ಮತ್ತು “ಯಾವ ಆಧಾರವೂ ಇಲ್ಲದೆ” ತೂಗುಹಾಕಲ್ಪಟ್ಟಿದೆ ಎಂದು ಅದು ಹೇಳುತ್ತದೆ. (ಯೋಬ 26:7; ಯೆಶಾಯ 40:22) ಮಾನವ ತನಿಖೆಗಳು ಇದನ್ನು ರುಜುಪಡಿಸುವುದಕ್ಕೆ ಎಷ್ಟೋ ಪೂರ್ವದಲ್ಲಿ ಈ ನಿಜತ್ವಗಳನ್ನು ಬೈಬಲಿನಲ್ಲಿ ಬರೆಯಲಾಗಿತ್ತು.

ನಮ್ಮ ರಚನೆಯ ಬಗ್ಗೆ ಯೋಚಿಸಿರಿ. ನಮ್ಮಲ್ಲಿ ಇಂದ್ರಿಯ ಗ್ರಹಣಶಕ್ತಿ, ಸ್ವಪ್ರಜ್ಞೆ, ಬುದ್ಧಿವಂತಿಕೆಯಿಂದ ಕೂಡಿದ ಯೋಚನೆ, ಸಂವಾದಿಸುವ ಸಾಮರ್ಥ್ಯಗಳು ಮತ್ತು ಭಾವನೆಗಳಿವೆ. ನಿರ್ದಿಷ್ಟವಾಗಿ ಹೇಳುವುದಾದರೆ, ನಾವು ಪ್ರೀತಿಯನ್ನು ಅನುಭವಿಸಿ, ಮಾನ್ಯಮಾಡಿ, ವ್ಯಕ್ತಪಡಿಸಬಲ್ಲೆವು. ಆದರೆ ಈ ಆಶ್ಚರ್ಯಕರವಾದ ಮಾನವ ಗುಣಗಳು ಹೇಗೆ ಬಂದವೆಂಬುದನ್ನು ವಿಕಾಸವಾದ ವಿವರಿಸಲಾರದು.

ನಿಮ್ಮನ್ನೇ ಪ್ರಶ್ನಿಸಿಕೊಳ್ಳಿ: ‘ಜೀವವಿಕಾಸ ಸಿದ್ಧಾಂತವನ್ನು ಬೆಂಬಲಿಸಲು ಬಳಸಲಾಗುವ ಮಾಹಿತಿಮೂಲಗಳು ಎಷ್ಟು ಭರವಸಾರ್ಹ ಮತ್ತು ವಿಶ್ವಸನೀಯವಾಗಿವೆ?’ ಭೂವಿಜ್ಞಾನದ ದಾಖಲೆ ಅಪೂರ್ಣ, ಜಟಿಲ ಮತ್ತು ಅಸ್ತವ್ಯಸ್ತವಾಗಿದೆ. ವಿಕಾಸವಾದಿಗಳು ವೈಜ್ಞಾನಿಕ ವಿಧಾನಶಾಸ್ತ್ರವನ್ನು ಉಪಯೋಗಿಸಿ ಜೀವವಿಕಾಸದ ಪ್ರಕ್ರಿಯೆಗಳನ್ನು ಪ್ರಯೋಗಶಾಲೆಯಲ್ಲಿ ತೋರಿಸಿಕೊಡಲು ತಪ್ಪಿದ್ದಾರೆ. ಮತ್ತು ಸಾಮಾನ್ಯವಾಗಿ ವಿಜ್ಞಾನಿಗಳು ದತ್ತಾಂಶಗಳನ್ನು ಪಡೆಯಲು ಉತ್ತಮ ಸಂಶೋಧನಾ ವಿಧಾನಗಳನ್ನು ಬಳಸುತ್ತಾರಾದರೂ, ತಾವು ಕಂಡುಹಿಡಿದ ವಿಷಯಗಳನ್ನು ವಿವರಿಸುವಾಗ ಅವರು ಅನೇಕವೇಳೆ ಸ್ವಾರ್ಥೋದ್ದೇಶಗಳಿಂದ ಪ್ರಭಾವಿತರಾಗುತ್ತಾರೆ. ದತ್ತಾಂಶಗಳು ನಿರ್ಣಯವಿಹೀನವಾಗಿರುವಾಗ ಇಲ್ಲವೆ ಪರಸ್ಪರ ವಿರೋಧದಲ್ಲಿರುವಾಗ, ವಿಜ್ಞಾನಿಗಳು ತಮ್ಮ ಸ್ವಂತ ಅಭಿಪ್ರಾಯಗಳನ್ನು ಕೊಡುತ್ತಾರೆಂಬುದು ತಿಳಿದಿರುವ ಸಂಗತಿಯಾಗಿದೆ. ಆಗ ಅವರ ವೃತ್ತಿಗಳು ಮತ್ತು ಆತ್ಮಾಭಿಮಾನದ ಸ್ವಂತ ಅನಿಸಿಕೆಗಳು ಪ್ರಮುಖ ಪಾತ್ರಗಳನ್ನು ವಹಿಸುತ್ತವೆ.

ಒಬ್ಬ ವಿಜ್ಞಾನಿಯೂ ಬೈಬಲ್‌ ವಿದ್ಯಾರ್ಥಿಯೂ ಆಗಿ ನಾನು, ಅತಿ ನಿಷ್ಕೃಷ್ಟ ತಿಳಿವಳಿಕೆಯನ್ನು ಪಡೆಯಲು ಎಲ್ಲ ಜ್ಞಾತ ವಾಸ್ತವಾಂಶಗಳಿಗೆ ಮತ್ತು ವೀಕ್ಷಣೆಗಳಿಗೆ ಹೊಂದಿಕೆಯಲ್ಲಿರುವ ಪೂರ್ಣ ಸತ್ಯಕ್ಕಾಗಿ ಹುಡುಕುತ್ತೇನೆ. ನನಗಂತೂ, ಸೃಷ್ಟಿಕರ್ತನೊಬ್ಬನು ಇದ್ದಾನೆಂದು ನಂಬುವುದೇ ಅತ್ಯಂತ ತರ್ಕಸಮ್ಮತವಾದ ವಿಚಾರವಾಗಿದೆ.

“ಜೀವಕೋಶದಲ್ಲಿ ಸ್ಫುಟವಾಗಿ ತೋರಿಬರುವ ವಿನ್ಯಾಸ”

ಪೌಲಾ ಕಿಂಚಲೋ

ವ್ಯಕ್ತಿಪರಿಚಯ: ನನಗೆ ಜೀವಕೋಶ ಮತ್ತು ಅಣು ಜೀವವಿಜ್ಞಾನ (ಸೆಲ್‌ ಆ್ಯಂಡ್‌ ಮಲೆಕ್ಯುಲರ್‌ ಬಯಾಲಜಿ) ಮತ್ತು ಸೂಕ್ಷ್ಮಜೀವಿವಿಜ್ಞಾನ (ಮೈಕ್ರೋಬಯಾಲಜಿ) ಕ್ಷೇತ್ರಗಳಲ್ಲಿ ಸಂಶೋಧಕಿಯಾಗಿ ಅನೇಕ ವರುಷಗಳ ಅನುಭವವಿದೆ. ನಾನು ಈಗ ಅಮೆರಿಕದ ಜಾರ್ಜಿಯದ ಅಟ್ಲಾಂಟದಲ್ಲಿರುವ ಇಮರೀ ವಿಶ್ವವಿದ್ಯಾಲಯದಲ್ಲಿ ಉದ್ಯೋಗದಲ್ಲಿದ್ದೇನೆ. ನಾನು ರಷ್ಯನ್‌ ಭಾಷೆ ಮಾತಾಡುವ ಸಮುದಾಯದಲ್ಲಿ ಬೈಬಲ್‌ ಶಿಕ್ಷಕಿಯಾಗಿ ಸ್ವಯಂಸೇವೆಮಾಡುತ್ತಿದ್ದೇನೆ.

ಜೀವವಿಜ್ಞಾನದ ನನ್ನ ವಿದ್ಯಾಭ್ಯಾಸದ ಭಾಗವಾಗಿ ನಾನು ನಾಲ್ಕು ವರುಷ, ಜೀವಕೋಶ ಮತ್ತು ಅದರ ಅಂಗಭಾಗಗಳ ಮೇಲೆ ಮಾತ್ರ ಕೇಂದ್ರಿತವಾದ ಅಧ್ಯಯನವನ್ನು ಮಾಡಿದೆ. ಡಿಎನ್‌ಎ, ಆರ್‌ಎನ್‌ಎ, ಪ್ರೋಟೀನ್‌, ಉಪಾಪಚಯ ಪ್ರತಿಕ್ರಿಯಾಸರಣಿಗಳು​—⁠ಇವುಗಳ ವಿಷಯ ನಾನು ಹೆಚ್ಚೆಚ್ಚು ಕಲಿತಷ್ಟಕ್ಕೆ, ಅವುಗಳ ಜಟಿಲತೆ, ಸಂಯೋಜನೆ ಮತ್ತು ನಿಖರತೆಯ ಬಗ್ಗೆ ಹೆಚ್ಚೆಚ್ಚು ವಿಸ್ಮಿತಳಾದೆ. ಜೀವಕೋಶದ ವಿಷಯದಲ್ಲಿ ಮನುಷ್ಯನು ಎಷ್ಟೊಂದನ್ನು ಕಲಿತುಕೊಂಡಿದ್ದಾನೆಂಬುದರ ಬಗ್ಗೆ ನಾನು ಪ್ರಭಾವಿತಳಾದರೂ, ಕಲಿಯಲು ಇನ್ನೂ ಎಷ್ಟಿದೆಯೆಂಬುದರ ಬಗ್ಗೆ ಇನ್ನೂ ಹೆಚ್ಚು ಬೆರಗಾದೆ. ಜೀವಕೋಶದಲ್ಲಿ ಸ್ಫುಟವಾಗಿ ತೋರಿಬರುವ ವಿನ್ಯಾಸವು, ದೇವರಿದ್ದಾನೆಂದು ನಾನು ನಂಬುವುದಕ್ಕೆ ಒಂದು ಕಾರಣವಾಗಿದೆ.

ನನ್ನ ಬೈಬಲ್‌ ಅಧ್ಯಯನವು ನನಗೆ ಆ ಸೃಷ್ಟಿಕರ್ತನು ಯಾರಾಗಿದ್ದಾನೆಂಬುದನ್ನು ತಿಳಿಯಪಡಿಸಿದೆ. ಆತನು ಯೆಹೋವ ದೇವರೇ. ಆತನು ಬುದ್ಧಿಶಕ್ತಿಯುಳ್ಳ ವಿನ್ಯಾಸಕಾರನು ಮಾತ್ರವಲ್ಲ, ನನ್ನನ್ನು ಪರಾಮರಿಸುವ ದಯಾಪರ ಮತ್ತು ಪ್ರೀತಿಪರ ತಂದೆಯೂ ಆಗಿದ್ದಾನೆಂದು ನನಗೆ ಮನವರಿಕೆಯಾಗಿದೆ. ಬೈಬಲು ಜೀವನದ ಉದ್ದೇಶವೇನೆಂಬುದನ್ನು ವಿವರಿಸಿ, ಸುಖೀ ಭವಿಷ್ಯತ್ತಿನ ನಿರೀಕ್ಷೆಯನ್ನೂ ಒದಗಿಸುತ್ತದೆ.

ಶಾಲೆಯಲ್ಲಿ ಜೀವವಿಕಾಸದ ಬಗ್ಗೆ ಕಲಿಸಲಾಗುತ್ತಿರುವ ಎಳೆಯರು ತಾವೇನು ನಂಬಬೇಕೆಂಬ ವಿಷಯ ಅನಿಶ್ಚಿತರಾಗಿರಬಹುದು. ಇದು ಅವರಿಗೆ ಗೊಂದಲದ ಸಮಯವಾಗಿರಬಲ್ಲದು. ಅವರು ದೇವರನ್ನು ನಂಬುತ್ತಿರುವುದಾದರೆ, ಇದೊಂದು ನಂಬಿಕೆಯ ಪರೀಕ್ಷೆ ಆಗಿರುತ್ತದೆ. ಆದರೆ, ನಿಸರ್ಗದಲ್ಲಿ ನಮ್ಮ ಸುತ್ತಲೂ ಇರುವ ಅನೇಕ ಆಶ್ಚರ್ಯಕರ ವಿಷಯಗಳನ್ನು ಪರೀಕ್ಷಿಸುವ ಮೂಲಕ ಮತ್ತು ಸೃಷ್ಟಿಕರ್ತನ ಹಾಗೂ ಆತನ ಗುಣಗಳ ಕುರಿತ ಜ್ಞಾನದಲ್ಲಿ ಬೆಳೆಯುತ್ತ ಹೋಗುವ ಮೂಲಕ ಅವರು ಆ ಪರೀಕ್ಷೆಯಲ್ಲಿ ಉತ್ತೀರ್ಣರಾಗಬಲ್ಲರು. ನಾನು ಸ್ವತಃ ಹೀಗೆ ಮಾಡಿದ್ದೇನೆ ಮತ್ತು ಈ ಮೂಲಕ ಬೈಬಲಿನ ಸೃಷ್ಟಿವೃತ್ತಾಂತವು ನಿಷ್ಕೃಷ್ಟವೆಂದೂ ಅದು ನಿಜ ವಿಜ್ಞಾನಕ್ಕೆ ವಿರೋಧದಲ್ಲಿಲ್ಲವೆಂಬ ತೀರ್ಮಾನಕ್ಕೆ ಬಂದಿದ್ದೇನೆ.

“ನಿಯಮಗಳ ಲಲಿತವಾದ ಸರಳತೆ”

ಎನ್ರೀಕೆ ಅರ್ನಾಂಡೆಸ್‌ ಲೇಮೂಸ್‌

ವ್ಯಕ್ತಿಪರಿಚಯ: ನಾನು ಯೆಹೋವನ ಸಾಕ್ಷಿಗಳ ಪೂರ್ಣ ಸಮಯದ ಶುಶ್ರೂಷಕನಾಗಿದ್ದೇನೆ. ಅಲ್ಲದೆ ನಾನು ಮೆಕ್ಸಿಕೊವಿನ ನ್ಯಾಷನಲ್‌ ಯುನಿವರ್ಸಿಟಿಯಲ್ಲಿ ಕೆಲಸಮಾಡುತ್ತಿರುವ ಒಬ್ಬ ಸೈದ್ಧಾಂತಿಕ ಭೌತವಿಜ್ಞಾನಿಯೂ (ಥಿಯರೆಟಿಕಲ್‌ ಫಿಸಿಸಿಸ್ಟ್‌) ಆಗಿದ್ದೇನೆ. ನಾನು ಈಗ ಮಾಡುತ್ತಿರುವ ಕೆಲಸದಲ್ಲಿ, ನಕ್ಷತ್ರ ಬೆಳವಣಿಗೆಯ ಒಂದು ಪ್ರಕ್ರಿಯೆಯಾದ, ಗುರುತ್ವಕ್ಕೆ ಸಂಬಂಧಿಸಿದ ವಿನಾಶ (ಗ್ರ್ಯಾವೋಥರ್ಮಲ್‌ ಕೆಟಾಸ್ಟ್ರಫಿ) ಎಂದು ಜ್ಞಾತವಾಗಿರುವ ಪ್ರಕೃತಿ ಘಟನೆ ಏಕೆ ನಡೆಯುತ್ತದೆಂಬುದಕ್ಕೆ ಉಷ್ಣಬಲ ವಿಜ್ಞಾನದ ಸೂತ್ರಗಳ ಮೇಲಾಧಾರಿತವಾದ ವಿವರಣೆಯನ್ನು ಕಂಡುಹಿಡಿಯುವುದು ಸೇರಿದೆ. ನಾನು ಡಿಎನ್‌ಎ ಅನುಕ್ರಮಗಳಲ್ಲಿನ ಜಟಿಲತೆಗೆ ಸಂಬಂಧಪಟ್ಟ ಕೆಲಸವನ್ನೂ ಮಾಡಿದ್ದೇನೆ.

ಜೀವರಾಶಿಯು ಎಷ್ಟು ಜಟಿಲವೆಂದರೆ ಅದು ಅಕಸ್ಮಾತ್ತಾಗಿ ಉದ್ಭವಿಸಲು ಸಾಧ್ಯವಿಲ್ಲ. ದೃಷ್ಟಾಂತಕ್ಕೆ, ಡಿಎನ್‌ಎ ಕಣದಲ್ಲಿ ಅಡಗಿರುವ ಬಹು ವಿಸ್ತಾರವಾದ ಮಾಹಿತಿಯ ಬಗ್ಗೆ ಯೋಚಿಸಿರಿ. ಒಂದು ವರ್ಣತಂತು (ಕ್ರೋಮೋಸೋಮ್‌) ಗೊತ್ತುಗುರಿಯಿಲ್ಲದೆ ಉದ್ಭವಿಸುವ ಗಣಿತಶಾಸ್ತ್ರೀಯ ಸಂಭಾವ್ಯತೆಯು 90 ಲಕ್ಷಕೋಟಿಗಳಲ್ಲಿ 1ಕ್ಕೂ ಕಡಮೆಯಾಗಿದೆ. ಇದು ಎಷ್ಟು ಅಸಂಭವನೀಯವೆಂದರೆ, ಅದನ್ನು ಅಸಾಧ್ಯವೆಂದೇ ಎಣಿಸಬಹುದು. ಬುದ್ಧಿವಂತಿಕೆಯಿಲ್ಲದ ಶಕ್ತಿಗಳು ಒಂದು ವರ್ಣತಂತುವನ್ನು ಮಾತ್ರವಲ್ಲ, ಜೀವಿಗಳಲ್ಲಿರುವ ಬೆರಗಾಗಿಸುವ ಎಲ್ಲ ಜಟಿಲತೆಯನ್ನು ಸೃಷ್ಟಿಸಿವೆ ಎಂದು ನಂಬುವುದು ತೀರ ಮೂಢತನವೆಂಬುದೇ ನನ್ನ ಎಣಿಕೆ.

ಇದಲ್ಲದೆ, ನಾನು ಭೌತದ್ರವ್ಯದ (ಮ್ಯಾಟರ್‌) ತುಂಬ ಜಟಿಲವಾದ ವರ್ತನೆಯನ್ನು, ಸೂಕ್ಷ್ಮದರ್ಶಕೀಯ (ಮೈಕ್ರೋಸ್ಕಾಪಿಕ್‌) ಹಂತದಿಂದ ಹಿಡಿದು ಅಂತರಿಕ್ಷದಲ್ಲಿರುವ ಬೃಹದಾಕಾರದ ನಾಕ್ಷತ್ರಿಕ ಮೋಡಗಳ ಚಲನೆಯ ಹಂತದ ವರೆಗೆ ಅಧ್ಯಯನ ಮಾಡುವಾಗ, ಅವುಗಳ ಚಲನೆಯನ್ನು ನಿರ್ದೇಶಿಸುವ ನಿಯಮಗಳ ಲಲಿತವಾದ ಸರಳತೆಯಿಂದ ಪ್ರಭಾವಿತನಾಗುತ್ತೇನೆ. ನನಗಂತೂ, ಈ ನಿಯಮಗಳು ಒಬ್ಬ ಅತಿ ಚತುರ ಗಣಿತಜ್ಞನ ಕೆಲಸಕ್ಕಿಂತಲೂ ಹೆಚ್ಚಿನದನ್ನು ಸೂಚಿಸುತ್ತದೆ. ನನಗೆ ಅವು ಒಬ್ಬ ಮೇರು ಕಲಾವಿದನು ಹಾಕಿರುವ ಸಹಿಯಂತಿವೆ.

ನಾನು ಯೆಹೋವನ ಸಾಕ್ಷಿಗಳಲ್ಲೊಬ್ಬನೆಂದು ಹೇಳುವಾಗ ಅನೇಕವೇಳೆ ಜನರಿಗೆ ಆಶ್ಚರ್ಯವಾಗುತ್ತದೆ. ದೇವರಿದ್ದಾನೆಂದು ನಾನು ಹೇಗೆ ನಂಬಸಾಧ್ಯ ಎಂದು ಕೆಲವು ಸಲ ಅವರು ಕೇಳುತ್ತಾರೆ. ಅವರ ಈ ಪ್ರತಿಕ್ರಿಯೆಯನ್ನು ಅರ್ಥಮಾಡಿಕೊಳ್ಳಬಹುದು, ಏಕೆಂದರೆ ಹೆಚ್ಚಿನ ಧರ್ಮಗಳು ತಮ್ಮ ಅನುಯಾಯಿಗಳಿಗೆ ಕಲಿಸುವಂಥ ವಿಷಯಗಳಿಗಾಗಿ ರುಜುವಾತನ್ನು ಕೇಳುವಂತೆ ಇಲ್ಲವೆ ಅವರ ನಂಬಿಕೆಗಳ ಬಗ್ಗೆ ಸಂಶೋಧನೆಮಾಡುವಂತೆ ಅವರನ್ನು ಪ್ರೋತ್ಸಾಹಿಸುವುದಿಲ್ಲ. ಆದರೆ, ನಮ್ಮ ‘ಯೋಚನಾ ಸಾಮರ್ಥ್ಯವನ್ನು’ ಬಳಸುವಂತೆ ಬೈಬಲ್‌ ನಮ್ಮನ್ನು ಪ್ರೋತ್ಸಾಹಿಸುತ್ತದೆ. (ಜ್ಞಾನೋಕ್ತಿ 3:​21, NW) ಪ್ರಕೃತಿಯಲ್ಲಿ ಬುದ್ಧಿವಂತಿಕೆಯನ್ನು ತೋರಿಸುವ ವಿನ್ಯಾಸಗಳ ಸಕಲ ರುಜುವಾತು ಮತ್ತು ಬೈಬಲಿನಲ್ಲಿರುವ ಸಾಕ್ಷ್ಯವು ದೇವರಿದ್ದಾನೆಂದು ಮಾತ್ರವಲ್ಲ ಆತನು ನಮ್ಮ ಪ್ರಾರ್ಥನೆಗಳ ಕುರಿತೂ ಆಸಕ್ತಿವಹಿಸುತ್ತಾನೆಂಬುದನ್ನು ನನಗೆ ಮನದಟ್ಟುಮಾಡುತ್ತದೆ.

[ಪಾದಟಿಪ್ಪಣಿ]

^ ಪ್ಯಾರ. 3 ಈ ಲೇಖನದಲ್ಲಿನ ಪರಿಣತರು ಕೊಟ್ಟಿರುವ ಅಭಿಪ್ರಾಯಗಳು ಅವರ ಧಣಿಗಳದ್ದಾಗಿರಲಿಕ್ಕಿಲ್ಲ ಇಲ್ಲವೆ ಸಂಸ್ಥೆಗಳದ್ದಾಗಿರಲಿಕ್ಕಿಲ್ಲ.

[ಪುಟ 22ರಲ್ಲಿರುವ ಚಿತ್ರ ಕೃಪೆ]

ಹಿನ್ನಲೆಯಲ್ಲಿ ಮಂಗಳಗ್ರಹ: Courtesy USGS Astrogeology Research Program, http://astrogeology.usgs.gov