ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅವಳು ಕಲಿತದ್ದನ್ನು ನೆಚ್ಚಿಕೊಂಡಳು

ಅವಳು ಕಲಿತದ್ದನ್ನು ನೆಚ್ಚಿಕೊಂಡಳು

ಅವಳು ಕಲಿತದ್ದನ್ನು ನೆಚ್ಚಿಕೊಂಡಳು

ಒಬ್ಬ ಮಹಿಳೆಯು ಕ್ಯಾನ್ಸರ್‌ ರೋಗಕ್ಕೆ ಬಲಿಯಾಗಿ, ಮೇ 2004ರಲ್ಲಿ ತೀರಿಕೊಂಡಳು. ಸಾವನಪ್ಪುವ ಸ್ಪಲ್ಪ ಸಮಯದ ಮುಂಚೆ ಅವಳು ಬರೆದಿಟ್ಟಿದ್ದ ಆದರೆ ಯಾರಿಗೂ ಪೋಸ್ಟ್‌ ಮಾಡಿರದಿದ್ದ ಒಂದು ಪತ್ರವು ಇತ್ತೀಚಿಗೆ ಸಿಕ್ಕಿತು. ಆ ಪತ್ರವನ್ನು ಅವಳು ಬರೆದು ಮುಗಿಸಿರಲಿಲ್ಲ ಏಕೆಂದರೆ ಅವಳ ಆರೋಗ್ಯವು ಒಮ್ಮಿಂದೊಮ್ಮೆಗೆ ತೀರ ಹದಗೆಟ್ಟಿತು. ಹಾಗಿದ್ದರೂ ಆ ಪತ್ರ ಸಿಕ್ಕಿದಾಗ ಅದನ್ನು ಓದಿದವರೆಲ್ಲರಿಗೆ ಕಣ್ಣೀರು ತಡೆಯಲಾಗಲಿಲ್ಲ. ಆದರೆ ಅದೇ ಸಮಯದಲ್ಲಿ ದೇವರ ಮೇಲಿದ್ದ ಅವರ ನಂಬಿಕೆಯೂ ಹೆಚ್ಚು ಬಲಗೊಂಡಿತು.

ಆ ಪತ್ರವನ್ನು ಸೂಸನ್‌ ಎಂಬಾಕೆಯು ಬರೆದಿದ್ದಳು. ಅದರಲ್ಲಿ ಅವಳು ತನ್ನ ಬಗ್ಗೆ ತಿಳಿಸುತ್ತಾ, ತಾನು ಯು.ಎಸ್‌.ಎ.ಯ ಕನೆಕ್ಟಿಕಟ್‌ನಲ್ಲಿರುವ ಯೆಹೋವನ ಸಾಕ್ಷಿಗಳ ಒಬ್ಬ ಕ್ರೈಸ್ತ ಹಿರಿಯನನ್ನು ಫೋನ್‌ ಮೂಲಕ ಮೊತ್ತಮೊದಲ ಬಾರಿ ಸಂಪರ್ಕಿಸಿದಾಗ ಹದಿಹರೆಯದವಳಾಗಿದ್ದೆ ಎಂದು ಹೇಳಿದಳು. ಆ ಪತ್ರದಲ್ಲಿ ಅವಳು, ತಾನು ಹದಿಹರೆಯದ ವರ್ಷಗಳಲ್ಲಿ ಎದುರಿಸಿದ ಸನ್ನಿವೇಶವನ್ನು ಸಹ ವಿವರಿಸಿದಳು. ಕಳೆದ ವರ್ಷದ ನವೆಂಬರ್‌ ತಿಂಗಳಲ್ಲಿ ಆ ಮನಮುಟ್ಟುವ ಪತ್ರವು ಅವಳ ತಾಯಿಯ ಕೈಸೇರಿತು ಮತ್ತು ಅವರು ಅದರ ಒಂದು ಪ್ರತಿಯನ್ನು ನ್ಯೂ ಯಾರ್ಕ್‌ನಲ್ಲಿರುವ ಯೆಹೋವನ ಸಾಕ್ಷಿಗಳ ಮುಖ್ಯ ಕಾರ್ಯಾಲಯಕ್ಕೆ ಕಳುಹಿಸಿದರು.

ಕನೆಕ್ಟಿಕಟ್‌ನಲ್ಲಿರುವ ಆ ಹಿರಿಯನ ಫೋನ್‌ ನಂಬರ್‌ ತನಗೆ ಇಸವಿ 1973ರಲ್ಲಿ ಟೆಲಿಫೋನ್‌ ಡೈರೆಕ್ಟರಿಯಲ್ಲಿ ಸಿಕ್ಕಿತ್ತೆಂದು ಸೂಸನ್‌ ಆ ಪತ್ರದಲ್ಲಿ ಬರೆದಿದ್ದಳು. ಅವಳು ವಿವರಿಸಿದ್ದು: “ನಾನು 14 ವರ್ಷದವಳಾಗಿದ್ದ ಆ ಇಸವಿಯಲ್ಲೇ, ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನು ಓದುವ ಮೂಲಕ ನಾನೇನನ್ನು ಕಲಿತ್ತಿದ್ದೇನೊ ಅದೇ ಸತ್ಯವಾಗಿರಬೇಕು ಎಂಬ ನಿರ್ಧಾರಕ್ಕೆ ಬಂದೆ. ಇಷ್ಟರವರೆಗೆ ನಾನು ಯೆಹೋವನ ಸಾಕ್ಷಿಗಳಲ್ಲಿ ಯಾರನ್ನೂ ಭೇಟಿಯಾಗಿರದಿದ್ದ ಕಾರಣ ಡೈರೆಕ್ಟರಿಯಲ್ಲಿ ನನ್ನ ಫೋನ್‌ ನಂಬರಿನ ಮೊದಲ 3 ಸಂಖ್ಯೆಗಳಿಗೆ ಹೋಲುವ ಸಂಖ್ಯೆಯಿರುವ ಫೋನ್‌ ನಂಬರ್‌ಗೆ ಕರೆಮಾಡಿದೆ. ಸಹೋದರ ಜೆನ್‌ರಿಕ್‌ ಫೋನಲ್ಲಿ ಮಾತಾಡಿದರು ಮತ್ತು ನಾನು ಇಷ್ಟರವರೆಗೆ ಸಾಕ್ಷಿಗಳನ್ನೇ ಭೇಟಿಯಾಗಿರಲಿಲ್ಲ ಎಂದು ಕೇಳಿ ಅವರಿಗೆ ಆಶ್ಚರ್ಯವಾಯಿತು.” *

ಒಂದು ಅಸಾಮಾನ್ಯ ಸಮಸ್ಯೆ

ಸೂಸನ್‌ ತನ್ನ ಪತ್ರದಲ್ಲಿ ವಿವರಿಸಿದ್ದೇನೆಂದರೆ, ತಾನು ಹತ್ತು ವರ್ಷದವಳಾಗಿದ್ದಾಗ ಕನೆಕ್ಟಿಕಟ್‌ನಲ್ಲಿರುವ ತನ್ನ ಚಿಕ್ಕಮ್ಮನ ಮನೆಯಲ್ಲಿ ತಾತ್ಕಾಲಿಕವಾಗಿ ಉಳಿಯಲು ಕಳುಹಿಸಿಕೊಡಲಾಯಿತು. ಆದರೆ ತಾನು ಅಲ್ಲೇ ಇರಲು ಬಯಸುತ್ತೇನೆಂದು ಸ್ವಲ್ಪ ಸಮಯದ ನಂತರ ಅವಳು ಫ್ಲಾರಿಡಾದಲ್ಲಿ ಒಂಟಿಯಾಗಿ ಜೀವಿಸುತ್ತಿದ್ದ ತನ್ನ ತಾಯಿಗೆ ಹೇಳಿದಳು. ಚಿಕ್ಕಮ್ಮನ ಮನೆಯಲ್ಲಿ ಅವಳನ್ನು ಕಠೋರವಾಗಿ ದುರುಪಚರಿಸಲಾಗುತ್ತಿತ್ತು; ಆದರೂ ಅವಳು ಅಲ್ಲೇ ಉಳಿಯಲು ಬಯಸಿದಳು. ಏಕೆಂದರೆ, ಸೂಸನ್‌ ಆ ಪತ್ರದಲ್ಲಿ ಬರೆದಂತೆ, ಅವಳ ಸನ್ನಿವೇಶವು “ಸ್ಟಾಕ್‌ಹೋಮ್‌ ಸಿಂಡ್ರೋಮ್‌ ಎಂದು ಕರೆಯಲಾಗುವ ಒಂದು ಮನೋರೋಗಕ್ಕೆ ಹೋಲುತ್ತಿತ್ತು. ಈ ರೋಗವಿರುವವರು ತಮ್ಮನ್ನು ಪೀಡಿಸುವವರೊಂದಿಗೆ ಒಂದು ರೀತಿಯ ನಂಟನ್ನು ಬೆಳೆಸಿಕೊಳ್ಳುತ್ತಾರೆ.” *

ಸೂಸನ್‌ ಬರೆದದ್ದು: “ನನ್ನ ಚಿಕ್ಕಮ್ಮ ಹಾಗೂ ಅವರೊಂದಿಗೆ ಜೀವಿಸುತ್ತಿದ್ದ ಗಂಡಸು ನನ್ನನ್ನು ವಿಪರೀತವಾಗಿ ಪೀಡಿಸುತ್ತಿದ್ದರು. ಹೊರಗಿನವರು ಮನೆಗೆ ಬರುವುದು ತುಂಬ ವಿರಳವಾಗಿತ್ತು. ಅವರು ನನಗೆ ಶಾಲೆಗೆ ಹೋಗಲು ಬಿಟ್ಟಾಗ, ನನ್ನ ತಾಯಿ ನನಗೋಸ್ಕರ ತುಂಬ ಹಣ ಕಳುಹಿಸುತ್ತಿದ್ದರಾದರೂ ನನ್ನ ಚಿಕ್ಕಮ್ಮ ನನಗೆ ಮಧ್ಯಾಹ್ನದ ಊಟವನ್ನಾಗಲಿ ಒಳ್ಳೇ ಬಟ್ಟೆಯನ್ನಾಗಲಿ ಕೊಡುತ್ತಿರಲಿಲ್ಲ. ನನಗೆ ಒಂದೇ ಒಂದು ಜೋಡಿ ಒಳಉಡುಪು ಇತ್ತು. ಆದರೆ ನನಗಿಂತ ಚಿಕ್ಕವರಾಗಿದ್ದ ಅವರ ಇಬ್ಬರು ಹೆಣ್ಮಕ್ಕಳಿಗೆ ಎಲ್ಲವೂ ಸಿಗುತ್ತಿತ್ತು.” ಬೈಬಲ್‌ ಬಗ್ಗೆ ಹೆಚ್ಚನ್ನು ತಿಳಿಯಲು ತನಗಿರುವ ಆಸಕ್ತಿಯ ಬಗ್ಗೆ ಚಿಕ್ಕಮ್ಮನಿಗೆ ತಿಳಿದು ಬರುವಾಗ ತುಂಬ ಉಪದ್ರವಕೊಡುವರೆಂದು ತನಗೆ ತಿಳಿದಿತ್ತೆಂಬುದನ್ನು ಸ್ಪಷ್ಟಪಡಿಸಲು ಸೂಸನ್‌ ಈ ಎಲ್ಲ ಕಿರುಕುಳಗಳ ಬಗ್ಗೆ ಪತ್ರದಲ್ಲಿ ಬರೆದಿದ್ದಳು.

ಸೂಸನ್‌ ಬೈಬಲ್‌ ಜ್ಞಾನದಲ್ಲಿ ಬೆಳೆದ ಪರಿ

ಸೂಸನ್‌ ಬರೆದದ್ದು: “ಸಹೋದರ ಜೆನ್‌ರಿಕ್‌ ನನಗೆ ಒಬ್ಬ ಪ್ರೌಢ ಕ್ರೈಸ್ತ ಸಹೋದರಿಯಾದ ಲೊರ ಎಂಬವರನ್ನು ಪರಿಚಯಿಸಿದರು. ಸಹೋದರಿ ಲೊರ ನನ್ನನ್ನು ಹೆಚ್ಚಾಗಿ, ಲಾಂಡ್ರೋಮೆಟ್‌ನಲ್ಲಿ [ಹಣಕೊಟ್ಟು ಬಳಸಬೇಕಾದ ವಾಶಿಂಗ್‌ ಮಿಷನ್‌ ಇರುವ ಒಂದು ಸಾರ್ವಜನಿಕ ಸ್ಥಳದಲ್ಲಿ] ಸಂಧಿಸುತ್ತಿದ್ದರು ಮತ್ತು ಬೈಬಲ್‌ ಬಗ್ಗೆ ನನಗಿದ್ದ ಅನೇಕ ಪ್ರಶ್ನೆಗಳನ್ನು ಉತ್ತರಿಸುತ್ತಾ ನನ್ನೊಂದಿಗೆ ಅಲ್ಲಿ ತುಂಬ ಸಮಯ ಕಳೆಯುತ್ತಿದ್ದರು.” ತಾನು ಈ ವರೆಗೆ ಯಾವುದೇ ವಿಷಯದ ಬಗ್ಗೆ ಸ್ವಂತ ನಿರ್ಣಯಗಳನ್ನು ಮಾಡಿರಲಿಲ್ಲ, ಆದರೆ ಆ ಬೈಬಲ್‌ ಚರ್ಚೆಗಳು ಮತ್ತು ನಿತ್ಯಜೀವಕ್ಕೆ ನಡೆಸುವ ಸತ್ಯವು ಎಂಬ ಪುಸ್ತಕದಂಥ ಬೈಬಲಾಧರಿತ ಪ್ರಕಾಶನಗಳನ್ನು ಓದಿದ ನಂತರ ತಾನೊಂದು ಸ್ವಂತ ನಿರ್ಣಯವನ್ನು ಮಾಡಿದೆ ಎಂದು ಸೂಸನ್‌ ವಿವರಿಸಿದಳು.

ಸೂಸನ್‌ ಮುಂದುವರಿಸಿದ್ದು: “ನಾನು ಸಾಕ್ಷಿಗಳೊಂದಿಗೆ ಸಂಪರ್ಕವನಿಟ್ಟುಕೊಂಡಿದ್ದೇನೆಂದು ನನ್ನ ಚಿಕ್ಕಮ್ಮನಿಗೆ ಒಂದು ಶುಕ್ರವಾರ ರಾತ್ರಿ ಹೇಳಿದೆ. ಅವರು ನನಗೆ ಆ ಇಡೀ ರಾತ್ರಿ ನಿದ್ದೆಮಾಡಲು ಬಿಡದೆ, ಅಡುಗೆಮನೆಯ ಮಧ್ಯದಲ್ಲಿ ನಿಂತುಕೊಂಡೇ ಇರುವಂತೆ ಮಾಡಿದರು. ಆದರೆ ಇದಾದ ಬಳಿಕ ಒಬ್ಬ ಸಾಕ್ಷಿಯಾಗುವ ನನ್ನ ನಿರ್ಧಾರವು ಹೆಚ್ಚು ದೃಢವಾಯಿತು.”

ಆ ಸಮಯದಂದಿನಿಂದ ಸಹೋದರ ಜೆನ್‌ರಿಕ್‌ ಸೂಸನ್‌ಗೆ ಬೈಬಲನ್ನು ಅರ್ಥಮಾಡಿಕೊಳ್ಳಲು ಸಹಾಯವಾಗುವಂತೆ ಸಾಹಿತ್ಯಗಳನ್ನು ತಲುಪಿಸುತ್ತಿದ್ದರು. ಸೂಸನ್‌ ಬರೆದದ್ದು: “1974ರ ಯೆಹೋವನ ಸಾಕ್ಷಿಗಳ ವರ್ಷಪುಸ್ತಕವು ಈಗಲೂ ನನ್ನ ನೆನಪಿನಲ್ಲಿದೆ. ಏಕೆಂದರೆ, ಅದರಲ್ಲಿ ನಾಜೀ ಜರ್ಮನಿಯಲ್ಲಿರುವ ಸಾಕ್ಷಿಗಳು IIನೇ ಲೋಕ ಯುದ್ಧದ ಸಮಯದಲ್ಲಿ ಮತ್ತು ಅದಕ್ಕೆ ಮುಂಚೆ ಹಿಂಸೆಯನ್ನು ಹೇಗೆ ತಾಳಿಕೊಂಡರೆಂಬ ವಿಷಯವಿತ್ತು . . . ಆ ವರ್ಷದಲ್ಲೇ, ರಾಜ್ಯ ಗೀತೆಗಳನ್ನು ನಾನು ಕಲಿತುಕೊಳ್ಳುವ ಸಲುವಾಗಿ ಅವುಗಳನ್ನು ರೆಕಾರ್ಡ್‌ ಮಾಡಿಕೊಡುವಂತೆ ಆ ಹಿರಿಯನಿಗೆ ಕೇಳಿಕೊಂಡೆ. ‘ಸಿಂಗಿಂಗ್‌ ಆ್ಯಂಡ್‌ ಅಕಂಪನಿಯಿಂಗ್‌ ಯುವರ್‌ಸೆಲ್ಫ್ಸ್‌ ವಿತ್‌ ಮ್ಯೂಸಿಕ್‌ ಇನ್‌ ಯುವರ್‌ ಹಾರ್ಟ್ಸ್‌’ ಎಂಬ 1966ರ ಸಂಗೀತ ಪುಸ್ತಕದಲ್ಲಿರುವ ಒಟ್ಟು 119 ಗೀತೆಗಳನ್ನು ಒಂದು ವರ್ಷದೊಳಗೆ ನಾನು ಸರಿಯಾದ ಕ್ರಮದಲ್ಲಿ ಬಾಯಿಪಾಠವಾಗಿ ಹಾಡಲು ಶಕ್ತಳಾದೆ.”

“ಅದೇ ವೇಳೆ ಸಹೋದರ ಜೆನ್‌ರಿಕ್‌ ಬೈಬಲ್‌ ಭಾಷಣಗಳ, ಡ್ರಾಮಗಳ ಮತ್ತು ಸಮ್ಮೇಳನ ಕಾರ್ಯಕ್ರಮಗಳನ್ನು ರೆಕಾರ್ಡ್‌ ಮಾಡಿದ ಟೇಪ್‌ಗಳನ್ನು ಸಹ ನನಗೆ ತಲುಪಿಸುತ್ತಿದ್ದರು. 10ನೇ ಮುಖ್ಯರಸ್ತೆಯಲ್ಲಿರುವ ಒಂದು ನಿರ್ದಿಷ್ಟ ಟೆಲಿಫೋನ್‌ ಕಂಬದ ಹತ್ತಿರ ಅವರು ಈ ಟೇಪ್‌ಗಳನ್ನು ಬಿಟ್ಟುಹೋಗುತ್ತಿದ್ದರು ಮತ್ತು ನಾನು ಅವನ್ನು ಅಲ್ಲಿಂದ ತೆಗೆದುಕೊಳ್ಳುತ್ತಿದ್ದೆ. . . . ಒಂದು ಕೂಟಕ್ಕೂ ಹಾಜರಾಗದೆ ನಾನು ಈಗಾಗಲೇ ನನ್ನಿಂದ ಸಾಧ್ಯವಿರುವಷ್ಟು ಆಧ್ಯಾತ್ಮಿಕ ಅಭಿವೃದ್ಧಿಯನ್ನು ಮಾಡಿದ್ದರಿಂದ ನನ್ನ ಈ ಸನ್ನಿವೇಶವು ನನ್ನನ್ನು ಹೆಚ್ಚೆಚ್ಚು ಹತಾಶೆಗೊಳಿಸತೊಡಗಿತು. ಇದರಿಂದಾಗಿ ನನ್ನ ಹೋರಾಟವನ್ನು ಮುಂದುವರಿಸಲು ಬೇಕಾಗಿದ್ದ ಎಲ್ಲ ಶಕ್ತಿ ಬತ್ತಿಹೋಯಿತೆಂದು ನನಗನಿಸುತ್ತದೆ.”

ಮುಂದಿನ ಕೆಲವು ವರ್ಷಗಳು ತುಂಬ ಕಷ್ಟಕರವಾಗಿದ್ದವೆಂದು ಸೂಸನ್‌ ತನ್ನ ಪತ್ರದಲ್ಲಿ ತಿಳಿಸಿದ್ದಳು. ತನಗೆ ಪರಿಚಯವಿದ್ದ ಆ ಇಬ್ಬರು ಸಾಕ್ಷಿಗಳೊಂದಿಗೆ ಅವಳು ಸಂಪರ್ಕವನ್ನು ಕಡಿದುಹಾಕಿದಳು. ಆದರೆ, ತಾನು “ಎಲ್ಲ ರಾಜ್ಯ ಗೀತೆಗಳನ್ನು ಕಲಿತದ್ದು ತನಗೆ ಒಂದು ‘ಶಾಪ’ವಾಯಿತು” ಎಂದು ಅವಳು ಬರೆದಳು. ಅವಳಿಗೆ ಏಕೆ ಹಾಗನಿಸಿತು? “ಯಾಕೆಂದರೆ ಗೀತೆಗಳಿಂದ, ‘ಯೆಹೋವನ ಸೈನಿಕರು ಸುಖ ಜೀವನ ಬೆನ್ನಟ್ಟರು’ ಎಂಬಂಥ ಪದಗಳು ಪುನಃ ಪುನಃ ನನ್ನ ಮನಸ್ಸಿಗೆ ಬರುತ್ತಿದ್ದವು. ಈ ಗೀತೆಯ ಪದಗಳನ್ನು ಜರ್ಮನಿಯ ಸೆರೆ ಶಿಬಿರದಲ್ಲಿದ್ದಾಗ ಒಬ್ಬ ಸಾಕ್ಷಿಯು ಬರೆದಿದ್ದನೆಂದು ನನಗೆ ತಿಳಿದಿತ್ತು ಮತ್ತು ಇದು ನನ್ನ ಸಂಕಟವನ್ನು ಇನ್ನಷ್ಟು ಹೆಚ್ಚಿಸಿತು. ನಾನು ಒಬ್ಬ ಅಂಜುಬುರುಕಿ ಆಗಿದ್ದೇನೆ ಮತ್ತು ಯೆಹೋವನು ನನ್ನ ಕೈಬಿಟ್ಟಿದ್ದಾನೆಂಬ ಅನಿಸಿಕೆ ನನ್ನಲ್ಲಿ ಮೂಡಿತು.” *

ಕೊನೆಗೂ ಸ್ವಾತಂತ್ರ್ಯ!

“ನನ್ನ 18ನೇ ಜನ್ಮದಿನದಂದು ನನ್ನ ಜೀವನದಲ್ಲಿ ಒಂದು ಹೊಸ ಅಧ್ಯಾಯ ಆರಂಭವಾಯಿತು. ನಮ್ಮ ಮನೆಯು, ‘ಯಾರೂ ಭೇಟಿಮಾಡಬಾರದು’ ಎಂಬ ಪಟ್ಟಿಯಲ್ಲಿ ಸೇರಿಸಲ್ಪಟ್ಟಿದ್ದ ಕಾರಣ ಸಾಕ್ಷಿಗಳಾರೂ ನಮ್ಮ ಮನೆಗೆ ಬರುತ್ತಿರಲಿಲ್ಲ. ಆದರೆ ಆ ದಿನ, ಇನ್ನೊಂದು ಸಭೆಯವರೊಬ್ಬರು ಮನೆಗೆ ಭೇಟಿಮಾಡಿದರು ಮತ್ತು ಮನೆಯಲ್ಲಿ ಬೇರಾರೂ ಇಲ್ಲದಿದ್ದ ಕಾರಣ ನನಗೆ ಅವರೊಂದಿಗೆ ಮಾತಾಡಲು ಸಾಧ್ಯವಾಯಿತು. ನನಗೆ ನೆನಪಿರುವಂತೆ, ನಾನು ಮನೆಯಲ್ಲಿ ಶನಿವಾರದ ದಿನದಂದು ಒಬ್ಬಳೇ ಇದದ್ದು ಅದೇ ಮೊದಲ ಬಾರಿಯಾಗಿತ್ತು. ಈ ಸಂಗತಿಯು, ಯೆಹೋವನು ಇನ್ನೂ ನನ್ನ ಕೈಬಿಟ್ಟಿಲ್ಲ ಎಂಬುದಕ್ಕೆ ಒಂದು ರುಜುವಾತಾಗಿದೆ ಎಂದು ನಾನು ಪರಿಗಣಿಸಿದೆ. ಹಾಗಾಗಿ ನಾನು ಮೊತ್ತಮೊದಲ ಬಾರಿ ಫೋನ್‌ ಮಾಡಿದ ಸಹೋದರ ಜೆನ್‌ರಿಕ್‌ ಅವರನ್ನು ಮತ್ತೆ ಕರೆಮಾಡಿ, ನಾನು ಮನೆಬಿಡಲು ಸಿದ್ಧಳಾಗಿದ್ದೇನೆಂದು ಹೇಳಿ ಈ ವಿಷಯದ ಬಗ್ಗೆ ಅವರ ಸಲಹೆ ಕೇಳಿದೆ. ಕಟ್ಟಕಡೆಗೆ ಆ ಮನೆಯಿಂದ ಹೊರಬರಲು ನನಗೆ ಸಹಾಯಸಿಕ್ಕಿತು.”

ಇಸವಿ 1977ರ ಏಪ್ರಿಲ್‌ ತಿಂಗಳಲ್ಲಿ ಸೂಸನ್‌ ಇನ್ನೊಂದು ಕಡೆಗೆ ಸ್ಥಳಾಂತರಿಸಿದ್ದಳು. ಅವಳ ಪತ್ರವು ಮುಂದುವರಿದದ್ದು: “ಕೊನೆಗೂ ಮುಂದಿನ ವರ್ಷ ನಾನು ಎಲ್ಲ ಕೂಟಗಳಿಗೆ ಹಾಗೂ ಸಮ್ಮೇಳನಗಳಿಗೆ ಹಾಜರಾಗಲು ಸಾಧ್ಯವಾಯಿತು ಮತ್ತು ಶುಶ್ರೂಷೆಯಲ್ಲಿ ಪಾಲ್ಗೊಳ್ಳಲು ಆರಂಭಿಸಿದೆ. ಪುನಃ ಒಮ್ಮೆ ನನ್ನ ತಾಯಿಯನ್ನು ನಾನು ಸಂಪರ್ಕಿಸಿದೆ. ನನ್ನನ್ನು ಇಷ್ಟೊಂದು ವರ್ಷಕಾಲ ಎಷ್ಟು ಕಠೋರವಾಗಿ ದುರುಪಚರಿಸಲಾಗಿತ್ತೆಂದು ಅರಿತಾಗ ಅವರ ಮನಸ್ಸಿಗೆ ತುಂಬ ಆಘಾತವಾಯಿತು. ಅವರು ಕೂಡಲೇ ಕಾರ್ಯಪ್ರವೃತ್ತರಾಗಿ ನನಗೆ ಬೇಕಾದದ್ದೆಲ್ಲ ಸಿಗುವಂತೆ ನೋಡಿಕೊಂಡರು. ಕೆಲವು ವರ್ಷಗಳ ಹಿಂದೆ ತಾಯಿ ಅಲಾಸ್ಕಕ್ಕೆ ಸ್ಥಳಾಂತರಿಸಿದ್ದರು. ಅವರು ಬೈಬಲ್‌ ಸತ್ಯದ ಬಗ್ಗೆ ತುಂಬ ಆಸಕ್ತಿಯನ್ನು ವ್ಯಕ್ತಪಡಿಸಿದ್ದರಿಂದ, 1978ರಲ್ಲಿ ನಾನು ಅವರೊಂದಿಗಿರಲು ಅಲಾಸ್ಕಕ್ಕೆ ಸ್ಥಳಾಂತರಿಸಿದೆ. ಕ್ರಮೇಣ ಅವರೊಬ್ಬ ಸಾಕ್ಷಿಯಾದರು ಮತ್ತು ಇಂದಿನವರೆಗೆ ನಂಬಿಗಸ್ತರಾಗಿದ್ದಾರೆ.

“ನಾನು ಕೂಟಗಳಿಗೆ ಹಾಜರಾಗಲು ಪ್ರಾರಂಭಿಸಿದ ನಂತರ, ಸಹೋದರ ಜೆನ್‌ರಿಕ್‌ ನ್ಯೂ ಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಯೆಹೋವನ ಸಾಕ್ಷಿಗಳ ಮುಖ್ಯ ಕಾರ್ಯಾಲಯಕ್ಕೆ ಒಂದು ಗುಂಪು ಪ್ರವಾಸವನ್ನು ಯೋಜಿಸಿದರು. ನನಗೆ ಸಿಕ್ಕಿರುವ ಉಡುಗೊರೆಗಳಲ್ಲಿ ಇದು ಅತಿ ಹೆಚ್ಚು ಬಾಳಿಕೆಬಂದಿರುವ ಉಡುಗೊರೆಯಾಗಿದೆ ಯಾಕೆಂದರೆ ಈ ಪ್ರವಾಸವು ನನ್ನಲ್ಲಿ ಯೆಹೋವನ ಸಂಘಟನೆಗಾಗಿ ಜೀವನಪರ್ಯಂತದ ಗಣ್ಯತಾಭಾವವನ್ನು ಮೂಡಿಸಿತು. ಸರಿ, ಹೇಳಬೇಕಾದದ್ದೆಲ್ಲವನ್ನು ಹೇಳಿದ್ದೇನೆ. ಈ ಪತ್ರವನ್ನು ಸಮಯಕ್ಕೆ ಸರಿಯಾಗಿ ಮುಗಿಸಿಬಿಡಬೇಕೆಂದು ಇದನ್ನು ಸಂಕ್ಷಿಪ್ತವಾಗಿಟ್ಟಿದ್ದೇನೆ.”

ಈ ಮೇಲಿನ ಹೇಳಿಕೆಗಳು, 6 1/2 ಪುಟಗಳಷ್ಟು ಉದ್ದ ಪತ್ರದ ತುಣುಕುಗಳು ಮಾತ್ರ. ಸೂಸನ್‌ ತನ್ನ ಪತ್ರದ ಕೊನೆಯಲ್ಲಿ ಬರೆದದ್ದು: “ಕಳೆದ ತಿಂಗಳು ಆಸ್ಪತ್ರೆಯಲ್ಲಿದ್ದಾಗ ನನ್ನ ಕಾಯಿಲೆಯು ಉಲ್ಬಣಿಸಿತು ಮತ್ತು ನಾನು ಖಂಡಿತವಾಗಿ ಸಾಯಲಿದ್ದೇನೆಂದು ನೆನಸಿದೆ. . . . ಇನ್ನೆರಡು ವಾರಗಳ ಸಮಯ ನನ್ನ ಆರೋಗ್ಯ ಚೆನ್ನಾಗಿರುವುದಾದರೆ, ಕೆಲವೊಂದು ಕೆಲಸಗಳನ್ನು ಮಾಡಿಮುಗಿಸುವೆನೆಂದು ಯೆಹೋವನಿಗೆ ಬೇಡಿದೆ. . . . ಇನ್ನೇನು ಹೆಚ್ಚು ದಿನ ನಾನು ಬದುಕಲಿಕ್ಕಿಲ್ಲ. ಆದರೆ, ಸತ್ಯದಲ್ಲಿದ್ದುಕೊಂಡು ಕಳೆದ ಈ ವರ್ಷಗಳು ತುಂಬ ಉತ್ತಮವಾಗಿದ್ದವು ಮತ್ತು ಒಬ್ಬನು ಬಯಸಬಹುದಾದ ಅತ್ಯಂತ ಉತ್ತಮ ಜೀವನ ಅದಾಗಿತ್ತು ಎಂದು ನನಗೆ ಹೇಳಲೇಬೇಕೆಂದು ಅನಿಸುತ್ತದೆ.”

ಆ ಪತ್ರದ ಅಂತ್ಯದಲ್ಲಿ ಅಭಿವಂದನೆ ಇರಲಿಲ್ಲ, ಯಾವ ಸಹಿಯೂ ಇರಲಿಲ್ಲ ಮತ್ತು ಅದು ಯಾರಿಗೂ ಪೋಸ್ಟ್‌ ಮಾಡಲ್ಪಟ್ಟಿರಲೂ ಇಲ್ಲ. ಪತ್ರವನ್ನು ಕಂಡುಕೊಂಡವರಿಗೆ ಅದನ್ನು ಯಾರಿಗೆ ಕೊಡಬೇಕೆಂದು ತೋಚಲಿಲ್ಲ. ಆದರೆ ಈ ಹಿಂದೆ ತಿಳಿಸಿದ್ದಂತೆ ಆ ಪತ್ರವನ್ನು ಕಡೆಗೆ ಸೂಸನ್‌ಳ ತಾಯಿಗೆ ಕಳುಹಿಸಲಾಯಿತು.

ಸೂಸನ್‌ ಬಗ್ಗೆ ಹೆಚ್ಚಿನ ಮಾಹಿತಿ

ಇಸವಿ 1979, ಏಪ್ರಿಲ್‌ 14ರಂದು ಸೂಸನ್‌ ದೀಕ್ಷಾಸ್ನಾನ ಪಡೆದ ಬಳಿಕ, ಅವಳ ತಾಯಿ ಫ್ಲಾರಿಡಾಗೆ ಹಿಂತಿರುಗಿದರು. ಸೂಸನ್‌ಗೆ ನಾರ್ತ್‌ ಪೋಲ್‌ ಸಭೆಯೊಂದಿಗೆ ಒಂದು ಆಪ್ತ ನಂಟಿದ್ದ ಕಾರಣ ಅವಳು ಅಲಾಸ್ಕದಲ್ಲೇ ಉಳಿದಳು. ಸ್ಪಲ್ಪದರಲ್ಲಿಯೇ ಅವಳು ಒಬ್ಬ ಪಯನೀಯರಳಾಗಿ ಪೂರ್ಣ ಸಮಯದ ಶುಶ್ರೂಷೆಯನ್ನು ಪ್ರಾರಂಭಿಸಿದಳು. ಕೊನೆಗೆ ಅವಳು ಫ್ಲಾರಿಡಾಗೆ ಹೋಗಿ 1991ರಲ್ಲಿ ಒಬ್ಬ ಹಿರಿಯನಾಗಿದ್ದ ಜೊತೆ ಪಯನೀಯರನನ್ನು ಮದುವೆಯಾದಳು. ಅವಳ ಮರಣದ ಸ್ಪಲ್ಪದರಲ್ಲೇ ಅವಳ ಪತಿ ಸಹ ತೀರಿಕೊಂಡರು.

ಸೂಸನ್‌ ಹಾಗೂ ಅವಳ ಪತಿಯನ್ನು ಎಲ್ಲರೂ ತುಂಬ ಪ್ರೀತಿಸುತ್ತಿದ್ದರು. ಅವರಿಬ್ಬರು ಒಟ್ಟಿಗೆ ಪೂರ್ಣ ಸಮಯದ ಸೇವೆಯನ್ನು ಮಾಡಿದರಾದರೂ ಅವಳ ಕಾಯಿಲೆಯಿಂದಾಗಿ ಅವರಿಗೆ ಅದನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ. ಹೀಗಿದ್ದರೂ, ಒಟ್ಟಿನಲ್ಲಿ ಅವಳು 20ಕ್ಕಿಂತಲೂ ಹೆಚ್ಚಿನ ವರ್ಷಗಳನ್ನು ಪೂರ್ಣಸಮಯದ ಸೇವೆಯಲ್ಲಿ ಕಳೆದಳು. ಫ್ಲಾರಿಡಾದಲ್ಲಿ ನಡೆದ ಅವಳ ಶವಸಂಸ್ಕಾರದ ಕಾರ್ಯಕ್ರಮವನ್ನು ಟೆಲಿಫೋನ್‌ ಮೂಲಕ ನಾರ್ತ್‌ ಪೋಲ್‌ ಸಭೆಗೆ ರವಾನಿಸಲಾಯಿತು.

ಸೂಸನ್‌ಳ ಪತ್ರವು, ಯೆಹೋವನ ಸೇವಕರಾಗಿ ನಾವು ಆನಂದಿಸುವ ಆಧ್ಯಾತ್ಮಿಕ ಆಶೀರ್ವಾದಗಳನ್ನು ಮತ್ತು ಪುನರುತ್ಥಾನದ ಅದ್ಭುತ ನಿರೀಕ್ಷೆಯನ್ನು ಇನ್ನೂ ಹೆಚ್ಚು ಗಣ್ಯಮಾಡಲು ನಮಗೆ ಸಹಾಯಮಾಡಬಲ್ಲದು. (ಅ. ಕೃತ್ಯಗಳು 24:15) ಈ ಜೀವನ ಅನುಭವವು, ಯಾರು ದೇವರ ಸಮೀಪಕ್ಕೆ ಬರುತ್ತಾರೊ ಅವರೆಲ್ಲರಿಗೆ ಆತನು ಹತ್ತಿರದಲ್ಲಿದ್ದಾನೆಂಬುದನ್ನು ಸಹ ಸ್ಪಷ್ಟಪಡಿಸುತ್ತದೆ!​—⁠ಯಾಕೋಬ 4:7, 8. (g 12/06)

[ಪಾದಟಿಪ್ಪಣಿಗಳು]

^ ಇಸವಿ 1993ರಲ್ಲಿ ಸಹೋದರ ಜೆನ್‌ರಿಕ್‌ ಹಾಗೂ ಅವರ ಪತ್ನಿ ಒಂದು ಭೀಕರ ಅಪಘಾತದಲ್ಲಿ ಪ್ರಾಣಕಳಕೊಂಡರು.

^ ಇಸವಿ 1999, ಡಿಸೆಂಬರ್‌ 22ರ ಎಚ್ಚರ! (ಇಂಗ್ಲಿಷ್‌) ಪತ್ರಿಕೆಯ 7ನೇ ಪುಟವನ್ನು ನೋಡಿ.

^ ಯೆಹೋವನಿಗೆ ಸ್ತುತಿಗಳನ್ನು ಹಾಡಿರಿ ಗೀತೆ 29, “ಸಾಕ್ಷಿಗಳೇ, ಮುಂದೆ ಹೋಗಿರಿ!”

[ಪುಟ 23ರಲ್ಲಿರುವ ಸಂಕ್ಷಿಪ್ತ ವಿವರಣೆ]

“ಸತ್ಯದಲ್ಲಿದ್ದುಕೊಂಡು ಕಳೆದ ಈ ವರ್ಷಗಳು ತುಂಬ ಉತ್ತಮವಾಗಿದ್ದವು ಮತ್ತು ಒಬ್ಬನು ಬಯಸಬಹುದಾದ ಅತ್ಯಂತ ಉತ್ತಮ ಜೀವನ ಅದಾಗಿತ್ತು”

[ಪುಟ 21ರಲ್ಲಿರುವ ಚಿತ್ರ]

ಸೂಸನ್‌ 10 ವರ್ಷದವಳಾಗಿದ್ದಾಗ

[ಪುಟ 23ರಲ್ಲಿರುವ ಚಿತ್ರ]

ಸೂಸನ್‌ ತನ್ನ ಪತಿ ಜೇಮ್ಸ್‌ ಸೇಮೊರ್‌ ಅವರೊಂದಿಗೆ