ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕತ್ತಲಲ್ಲಿ ಮಿಂಚುವ “ಪುಟ್ಟ ರೈಲುಗಳು”

ಕತ್ತಲಲ್ಲಿ ಮಿಂಚುವ “ಪುಟ್ಟ ರೈಲುಗಳು”

ಕತ್ತಲಲ್ಲಿ ಮಿಂಚುವ “ಪುಟ್ಟ ರೈಲುಗಳು”

◼ ಬ್ರಸಿಲ್‌ನ ಗ್ರಾಮಾಂತರ ಪ್ರದೇಶದಲ್ಲಿ ನಿಶ್ಶಬ್ದವಾದ ಸಾಯಂಕಾಲದ ಸಮಯ. ಕಾಡಿನಲ್ಲಿ ಬಿದ್ದಿರುವ ಎಲೆಗಳು ಮತ್ತು ಕಸಕಡ್ಡಿಗಳ ಅಡಿಯಿಂದ ಒಂದು ಪುಟ್ಟ “ರೈಲು” ಹೊರಬರುತ್ತದೆ. ಅದಕ್ಕಿರುವ ಎರಡು ಕೆಂಪು “ಹೆಡ್‌ಲೈಟ್‌ಗಳು” ಅದರ ದಾರಿಯನ್ನು ಬೆಳಗಿಸುತ್ತವೆ ಮತ್ತು ಅದರ ಎರಡೂ ಪಕ್ಕಗಳಲ್ಲಿ ಹಳದಿ-ಪಚ್ಚೆ ಬಣ್ಣದ 11 ಜೋಡಿ ದೀಪಗಳು ಪ್ರಕಾಶಿಸುತ್ತವೆ. ನಿಜ ಹೇಳಬೇಕಾದರೆ, ಇದು ಒಂದು ಸಾಮಾನ್ಯ ರೈಲು ಅಲ್ಲ. ಉತ್ತರ ಹಾಗೂ ದಕ್ಷಿಣ ಅಮೆರಿಕದಲ್ಲಿ ತೋರಿಬರುವ, ಫೆನ್ನ್‌ಗೊಡಿಡೆ ಎಂಬ ಜೀರುಂಡೆಗಳ ಕುಟುಂಬಕ್ಕೆ ಸೇರಿರುವ 2.5 ಇಂಚು ಉದ್ದದ ಮರಿಹುಳುವೇ ಇದಾಗಿದೆ. ಬೆಳೆದ ಹೆಣ್ಣು ಜೀರುಂಡೆಗಳು ಅವು ಮರಿಗಳಿದ್ದಾಗ ಹೊಂದಿದ್ದ ರೂಪವನ್ನೇ ಉಳಿಸಿಕೊಳ್ಳುತ್ತವೆ. ಇವು, ಒಳಗೆ ಬೆಳಕಿರುವ ರೈಲು ಬಂಡಿಗಳಂತೆ ತೋರುವುದರಿಂದ ಇವುಗಳನ್ನು ಹೆಚ್ಚಾಗಿ ರೈಲು ಹುಳುಗಳೆಂದು ಕರೆಯಲಾಗುತ್ತದೆ. ಬ್ರಸಿಲ್‌ನ ಗ್ರಾಮಸ್ಥರು ಅವುಗಳನ್ನು ಪುಟ್ಟ ರೈಲುಗಳೆಂದು ಕರೆಯುತ್ತಾರೆ.

ಮಸುಕಾದ ಕಂದುಬಣ್ಣದ ಮರಿಜೀರುಂಡೆಗಳು ಹಗಲೊತ್ತಿಗೆ ಕಣ್ಣಿಗೆ ಬೀಳುವುದಿಲ್ಲ. ಆದರೆ ರಾತ್ರಿಹೊತ್ತಿನಲ್ಲಿ, ಅದರ ವಿಸ್ಮಯಕಾರಿ ಸಾಲುದೀಪಗಳಿಂದ ಅದು ತನ್ನ ಇರುವಿಕೆಯನ್ನು ಜಗ್ಗಜಾಹೀರುಪಡಿಸುತ್ತದೆ. ಈ ಜೀರುಂಡೆಗಳು ತಮ್ಮ ಶಕ್ತಿಯನ್ನು ಲುಸಿಫೆರಿನ್‌ ಎಂಬ ಜೈವಿಕ ಸತ್ತ್ವದಿಂದ ಪಡೆಯುತ್ತವೆ. ಈ ಸತ್ತ್ವವು ಲುಸಿಫರೇಸ್‌ ಎಂಬ ಕಿಣ್ವದಿಂದ ಉತ್ಕರ್ಷಿಸಲ್ಪಟ್ಟು ಶೀತಲ ಬೆಳಕನ್ನು ಉತ್ಪಾದಿಸುತ್ತದೆ. ಈ ಬೆಳಕು ಕೆಂಪು, ಕಿತ್ತಳೆ, ಹಳದಿ ಮತ್ತು ಹಸಿರು ಬಣ್ಣದ್ದಾಗಿರುತ್ತದೆ.

ಕೆಂಪು ಹೆಡ್‌ಲೈಟ್‌ಗಳು ಸತತವಾಗಿ ಮಿಂಚುತ್ತವೆ ಆದರೆ, ಎರಡೂ ಪಕ್ಕಕ್ಕಿರುವ ಹಳದಿ-ಪಚ್ಚೆ ದೀಪಗಳು ನಿರಂತರವಾಗಿ ಮಿಂಚುವುದಿಲ್ಲ. ಈ ಮರಿಹುಳುಗಳ ಹೆಡ್‌ಲೈಟ್‌ಗಳು ಅವುಗಳ ಅಚ್ಚುಮೆಚ್ಚಿನ ಆಹಾರವಾಗಿರುವ ಸಾವಿರಕಾಲು ಹುಳುಗಳನ್ನು ಹುಡುಕಲು ಸಹಾಯಮಾಡುತ್ತವೆ ಮತ್ತು ಅವುಗಳ ಎರಡೂ ಪಕ್ಕಗಳಲ್ಲಿರುವ ಹಳದಿ-ಪಚ್ಚೆ ದೀಪಗಳು ಇರುವೆಗಳನ್ನು, ಕಪ್ಪೆಗಳನ್ನು, ಜೇಡರಹುಳುಗಳನ್ನು ಮೊದಲಾದ ಪರಭಕ್ಷಕರನ್ನು ದೂರವಿರಿಸುತ್ತವೆಂದು ಸಂಶೋಧನೆಯು ಸೂಚಿಸುತ್ತದೆ. ಈ ದೀಪಗಳ ಬೆಳಕು, “ನನ್ನ ರುಚಿ ನಿಮಗೆ ಹಿಡಿಸದು. ನನ್ನಿಂದ ದೂರಹೋಗಿ” ಎನ್ನುವಂತಿರುತ್ತದೆ. ಇದಕ್ಕೆ ತಕ್ಕಂತೆ, ಪರಭಕ್ಷಕರ ಸುಳಿವು ಸಿಕ್ಕಿದ ಕೂಡಲೇ ಈ ಹುಳುಗಳ ಎರಡೂ ಪಕ್ಕಗಳಲ್ಲಿರುವ ದೀಪಗಳು ಮಿಂಚಲಾರಂಭಿಸುತ್ತವೆ. ಸಾವಿರಕಾಲು ಹುಳುಗಳನ್ನು ಆಕ್ರಮಿಸುವಾಗ ಹಾಗೂ ಹೆಣ್ಣು ಜೀರುಂಡೆ ತನ್ನ ಮೊಟ್ಟೆಗಳನ್ನು ಸುತ್ತಿಕೊಂಡಿರುವಾಗ ಈ ದೀಪಗಳು ಪ್ರಕಾಶಿಸುತ್ತವೆ. ಸಾಮಾನ್ಯವಾಗಿ ಬೇರೆ ಸಮಯಗಳಲ್ಲಿ ಎರಡೂ ಪಕ್ಕಗಳಲ್ಲಿರುವ ದೀಪಗಳು ಬೆಳಗುತ್ತಾ ಉತ್ತುಂಗಕ್ಕೇರಿ ನಂತರ ಆರಿಹೋಗುತ್ತವೆ. ಇದು ಕೆಲವೇ ಕ್ಷಣದೊಳಗೆ ನಡೆಯುತ್ತದೆ. ಮತ್ತು ಈ ಚಕ್ರವು ಜೀರುಂಡೆಗಳಿಗೆ ಅಗತ್ಯವಿರುವಷ್ಟು ಸಲ ಪುನರಾವರ್ತನೆಗೊಳ್ಳುತ್ತಾ ಇರುತ್ತದೆ.

ಹೌದು, ಕಾಡಿನಲ್ಲಿ ಬಿದ್ದಿರುವ ಎಲೆಗಳು ಮತ್ತು ಕಸಕಡ್ಡಿಗಳಲ್ಲಿಯೂ ದಂಗುಬಡಿಸುವ ಸೌಂದರ್ಯವನ್ನು ನಾವು ಕಾಣಸಾಧ್ಯವಿದೆ. ಇದು, ಕೀರ್ತನೆಗಾರನು ಸೃಷ್ಟಿಕರ್ತನನ್ನು ಸ್ತುತಿಸಲು ಬಳಸಿದ ಪದಗಳನ್ನು ನಮ್ಮ ಮನಸ್ಸಿಗೆ ತರುತ್ತದೆ: “ಭೂಲೋಕವು ನಿನ್ನ ಆಸ್ತಿಯಿಂದ ತುಂಬಿರುತ್ತದೆ.”​—⁠ಕೀರ್ತನೆ 104:24. (g 11/06)

[ಪುಟ 20ರಲ್ಲಿರುವ ಚಿತ್ರ ಕೃಪೆ]

Robert F. Sisson / National Geographic Image Collection