ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕತ್ತೆಗಳು ಇಲ್ಲದಿದ್ದರೆನಮ್ಮಕಥೆವ್ಯಥೆ!

ಕತ್ತೆಗಳು ಇಲ್ಲದಿದ್ದರೆನಮ್ಮಕಥೆವ್ಯಥೆ!

ಕತ್ತೆಗಳು ಇಲ್ಲದಿದ್ದರೆನಮ್ಮಕಥೆವ್ಯಥೆ!

ಇಥಿಯೋಪಿಯಾದ ಎಚ್ಚರ! ಲೇಖಕರಿಂದ

ಇಥಿಯೋಪಿಯವು ವಿಶ್ವದ ಅತಿ ಜನನಿಬಿಡ ರಾಷ್ಟ್ರಗಳ ಪೈಕಿ 16ನೇ ಸ್ಥಾನದಲ್ಲಿದೆ. ಇದರ ರಾಜಧಾನಿ ಅದ್ದಿಸ್‌ ಅಬಾಬ. ಅನೇಕ ವರ್ಷಗಳಿಂದ ಈ ನಗರದ ಬೀದಿಗಳಲ್ಲಿ ಕತ್ತೆಯು ಸಾರಿಗೆ ವ್ಯವಸ್ಥೆಯಲ್ಲಿ ಮೇಲುಗೈ ಪಡೆದಿದೆ. ಹೆಚ್ಚಿನ ವಾಹನಚಾಲಕರು ಅವುಗಳೊಂದಿಗೆ ಹೊಂದಿಕೊಳ್ಳಲು ಕಲಿತುಕೊಂಡಿದ್ದಾರೆ. ಏಕೆಂದರೆ, ಸಾಮಾನ್ಯವಾಗಿ ಕತ್ತೆಗಳಿಗೆ ಎಲ್ಲಿಗೆ ಹೋಗಬೇಕೆಂದು ತಿಳಿದಿರುತ್ತದೆ ಮತ್ತು ಅಲ್ಲಿಗೆ ಹೋಗಲು ಯಾವ ಮುಲಾಜೂ ಮಾಡುವುದಿಲ್ಲ ಎಂಬುದು ವಾಹನಚಾಲಕರಿಗೆ ಗೊತ್ತು. ಸಂಚಾರದ ಭರಾಟೆಗೆ ಅವು ಹೆದರುವುದಿಲ್ಲ, ಅವುಗಳ ಮೇಲಿರುವ ದೊಡ್ಡ ಹೊರೆಯನ್ನು ನಿಭಾಯಿಸುವುದು ಕಷ್ಟವೇ. ಅವು ಹಿಂದೆ ತಿರುಗಿ ನೋಡುವುದೂ ಇಲ್ಲ. ಆದುದರಿಂದ ಇದ್ದಿಲು, ಬೆರಣಿ ಮುಂತಾದ ಹೊರೆಗಳು ನಿಮ್ಮನ್ನು ಒರಸಿಕೊಂಡು ಹೋಗದಿರಬೇಕಾದರೆ ನೀವೇ ಬದಿಗೆ ಸರಿದು ಕತ್ತೆಗೆ ದಾರಿಬಿಡುವುದು ಒಳ್ಳೇದು!

ಇಥಿಯೋಪಿಯಾದಲ್ಲಿ ಸುಮಾರು ಐವತ್ತು ಲಕ್ಷ ಕತ್ತೆಗಳಿವೆಯೆಂದು ಅಂದಾಜುಮಾಡಲಾಗಿದೆ. ಅಂದರೆ ಪ್ರತಿ 12 ಜನರಿಗೆ 1 ಕತ್ತೆ. ಲಕ್ಷಾಂತರ ಇಥಿಯೋಪಿಯನರು ಆಳವಾದ ಕಮರಿಗಳಿಂದ ಪ್ರತ್ಯೇಕಿಸಲ್ಪಟ್ಟಿರುವ ಪರ್ವತಶಿಖರಗಳಲ್ಲಿ ಜೀವಿಸುತ್ತಾರೆ. ದೇಶದ ವಿಶಾಲವಾದ ಮಧ್ಯ ಪ್ರಸ್ಥಭೂಮಿಯ ಭಾಗಗಳು ಅಸಂಖ್ಯಾತ ಸಣ್ಣ ತೊರೆಗಳಿಂದ ವಿಭಾಗಿಸಲ್ಪಟ್ಟಿವೆ. ಇಂಥ ಸ್ಥಳಗಳಿಗೆ ಹೋಗಲು ಸೇತುವೆಗಳನ್ನಾಗಲಿ, ಕಲ್ಲು ಹಾಸಿಲ್ಲದ ಸಾಧಾರಣ ರಸ್ತೆಗಳನ್ನಾಗಲಿ ನಿರ್ಮಿಸುವುದು ಯಾವುದೇ ದೇಶದ ಸಂಪತ್ತನ್ನು ಸೂರೆಮಾಡುವುದು ನಿಶ್ಚಯ. ಆದುದರಿಂದಲೇ, ಸಹನೆಗೆ ಪ್ರಸಿದ್ಧವಾಗಿರುವ ಮತ್ತು ಹಳ್ಳದಿಡ್ಡಿಗಳನ್ನು ಸಲೀಸಾಗಿ ಏರಿಳಿಯಬಲ್ಲ ಕತ್ತೆ ತುಂಬ ಅನುಕೂಲಕರ ಸಾರಿಗೆಯಾಗಿದೆ.

ಇಥಿಯೋಪಿಯಾದ ಕಡಿಮೆ ಮಳೆಬೀಳುವ ತಗ್ಗು ಒಣ ಪ್ರದೇಶಗಳಿಂದ ಹಿಡಿದು ಪರ್ವತಪ್ರದೇಶಗಳ ವರೆಗಿನ ಎಲ್ಲ ರೀತಿಯ ಹವಾಮಾನಕ್ಕೂ ಕತ್ತೆ ಒಗ್ಗಿಕೊಳ್ಳುತ್ತದೆ. ಕಡಿದಾದ ಇಳಿಜಾರು, ಸಪುರ ಕಾಲುದಾರಿ, ಕಲ್ಲಿನ ನದೀತಳ, ಕೆಸರಿನ ಹಾದಿ, ಹಳ್ಳದಿಣ್ಣೆ ಮುಂತಾದವುಗಳನ್ನು ಕತ್ತೆಯು ಸಲೀಸಾಗಿ ದಾಟಬಲ್ಲದು. ಕುದುರೆ ಅಥವಾ ಒಂಟೆಯು ಹೋಗಲಾಗದ ಸ್ಥಳಗಳಿಗೆ ಕೂಡ ಕತ್ತೆ ಸರಾಗವಾಗಿ ಹೋಗಬಲ್ಲದು. ಸರಕು ಸಾಗಾಟಮಾಡಲು ಲಕ್ಷಾಂತರ ಜನರಿಗೆ ಕತ್ತೆಯೇ ಮುಖ್ಯ ಸಾರಿಗೆ. ಅದರಲ್ಲೂ, ಮೋಟಾರು ವಾಹನಗಳಿಂದ ತಲಪಲಾಗದ ಮನೆಗಳಿರುವ ಪಟ್ಟಣಗಳಲ್ಲಂತೂ ಇದು ತೀರಾ ಆವಶ್ಯಕ.

ಕತ್ತೆಗಳು ಯಾವುದೇ ತೊಂದರೆಯಿಲ್ಲದೆ ಅಂಕುಡೊಂಕು ತಿರುವುಗಳನ್ನು ಸುತ್ತುಬಳಸಿ ಹೋಗಬಲ್ಲವು. ಸಾಲುಬೇಲಿಗಳ ನಡುವಿರುವ ಕಿರಿದಾದ ದಾರಿಯಲ್ಲೂ ಸಾಗಬಲ್ಲವು. ಅವುಗಳಿಗೆ ದುಬಾರಿ ಟೈಯರುಗಳು ಅವಶ್ಯವಿಲ್ಲ ಮತ್ತು ಜಾರುವ ನೆಲದಲ್ಲಿ ಸಮಸ್ಯೆಯಿಲ್ಲ. ಹೊರೆಗಳು ಯಾವುದೇ ಆಕಾರ ಹಾಗೂ ಗಾತ್ರದಲ್ಲಿರಲಿ ಅವುಗಳನ್ನು ಎಲ್ಲಿ ಬೇಕೆಂದರಲ್ಲಿ ಕೊಂಡೊಯ್ಯುತ್ತಾ ‘ಹೋಮ್‌ ಡೆಲಿವರಿ’ ನೀಡುತ್ತವೆ. ವಾಹನ ಸಂಚಾರ ಸ್ಥಗಿತಗೊಂಡಿರುವ ಸಮಯದಲ್ಲಿ ಮುಖ ಸಿಂಡರಿಸಿಕೊಂಡ ಡ್ರೈವರ್‌ಗಳು ತಮ್ಮ ಗಾಡಿಗಳಲ್ಲಿ ಕುಳಿತುಕೊಂಡು ಹಾರ್ನ್‌ ಬಾರಿಸುತ್ತಿರುವಾಗ, ಕತ್ತೆಗಳೊ ‘ಟ್ರ್ಯಾಫಿಕ್‌ ಜಾಮ್‌ನ’ ಮಧ್ಯದಿಂದ ನಿರಾತಂಕವಾಗಿ ತಮ್ಮ ದಾರಿಹಿಡಿದು ನಡೆಯುತ್ತವೆ. ರಸ್ತೆಯ ನಿಯಮ ಮುರಿದು ‘ಒನ್‌ ವೇ’ಯಲ್ಲಿ ನುಗ್ಗುವ ಕತ್ತೆಗೆ ಯಾವ ಪೊಲೀಸನೂ ದಂಡ ವಿಧಿಸಲು ಧೈರ್ಯಮಾಡಲಾರ. ಪಾರ್ಕಿಂಗ್‌ಗಂತೂ ಸಮಸ್ಯೆಯೇ ಅಲ್ಲ. ಒಂದು ಕತ್ತೆಯ ಬೆಲೆ ಸುಮಾರು 50 ಡಾಲರ್‌ (ಸುಮಾರು 2,400 ರೂ. ಗಳು) ಇರಬಹುದು. ಆದರೆ ನೀವಿದನ್ನು ಒಂದು ಮೋಟಾರು ವಾಹನದ ಬೆಲೆಗೆ ಹೋಲಿಸುವಲ್ಲಿ ಎಷ್ಟೊಂದು ಅಜಗಜಾಂತರ!

ರಾಜಧಾನಿಯಲ್ಲಿ ಕತ್ತೆಗಳು

ಇಥಿಯೋಪಿಯಾದ ರಾಜಧಾನಿ ಅದ್ದಿಸ್‌ ಅಬಾಬದ ಜನಸಂಖ್ಯೆ 30,00,000ಕ್ಕಿಂತಲೂ ಅಧಿಕ. ಇಲ್ಲಿಗೆ ಮುಂಜಾವಿನಲ್ಲಿಯೇ ಸಾವಿರಾರು ಕತ್ತೆಗಳು ಸುಮಾರು 25 ಕಿಲೋಮೀಟರುಗಳಿಗಿಂತಲೂ ದೂರದಿಂದ ಬರುತ್ತವೆ. ಬುಧವಾರ ಮತ್ತು ಶನಿವಾರ ವಾರದ ಸಂತೆಯಾಗಿರುವುದರಿಂದ ವಿಶೇಷವಾಗಿ ಆ ದಿನಗಳಲ್ಲಿ ಗುಂಪುಗಳು ಜಾಸ್ತಿ. ಈ ಪ್ರಯಾಣವು ಹೆಚ್ಚುಕಡಿಮೆ ಮೂರು ತಾಸುಗಳನ್ನು ತೆಗೆದುಕೊಳ್ಳುವುದರಿಂದ ಸೂರ್ಯ ಮುಳುಗುವುದರೊಳಗೆ ವಾಪಾಸಾಗಬೇಕಾಗುತ್ತದೆ. ಕೆಲವೊಮ್ಮೆ ಕತ್ತೆಗಳ ಯಜಮಾನರು ಅವುಗಳೊಂದಿಗೆ ನಡೆಯುತ್ತಾ ಹೋಗುತ್ತಾರೆ. ಆದರೆ ಹೆಚ್ಚಿನ ಸಮಯಗಳಲ್ಲಿ ಅವುಗಳನ್ನು ಹಿಂಬಾಲಿಸಲಿಕ್ಕಾಗಿ ಓಡುತ್ತಾರೆ.

ಕತ್ತೆಗಳ ಸಾಮಾನ್ಯ ಹೊರೆಗಳು ಯಾವುವೆಂದರೆ ಧಾನ್ಯಗಳ ಮೂಟೆ, ತರಕಾರಿ, ಕಟ್ಟಿಗೆ, ಸಿಮೆಂಟ್‌, ಇದ್ದಿಲು ಮಾತ್ರವಲ್ಲದೆ ಎಣ್ಣೆ ಟಿನ್ನುಗಳು, ಬಿಯರ್‌ ಅಥವಾ ಸೋಡಗಳ ಬಾಕ್ಸ್‌ಗಳು. ಕೆಲವು ಕತ್ತೆಗಳು ಸುಮಾರು 90 ಕೆ. ಜಿ.ಗಿಂತಲೂ ಅಧಿಕ ಭಾರವನ್ನು ಹೊರಬಲ್ಲವು. ಬಿದಿರಿನ ಬೊಂಬುಗಳು ಅಥವಾ ನೀಲಗಿರಿಯ ಉದ್ದನೆಯ ಕೋಲುಗಳನ್ನು ಕತ್ತೆಯ ಇಬ್ಬದಿಯಲ್ಲಿ ಕಟ್ಟುವಾಗ ರಸ್ತೆಯಲ್ಲಿ ಎಳೆದುಕೊಂಡು ಹೋಗಬಲ್ಲದು. ಕತ್ತೆಗಳ ಮೇಲಿರುವ ಹುಲ್ಲಿನ ಎತ್ತರವಾದ ರಾಶಿಯಡಿಯಲ್ಲಿ ಅವು ಹೆಚ್ಚುಕಡಿಮೆ ಮುಚ್ಚಿಹೋದಂತೆ ಕಾಣುವುದಂತೂ ಕಣ್ಸೆಳೆಯುವ ದೃಶ್ಯ.

ಮುಂಜಾವಿನಲ್ಲಿ ಸಂತೆಗೆ ಸಾಮಾನುಗಳನ್ನು ಹೊತ್ತುಕೊಂಡು ಹೋಗುವಾಗ ಕತ್ತೆಗಳ ಕುಕ್ಕುಲೋಟವು ಬಿರುಸಾಗಿರುತ್ತದೆ. ಸಾಮಾನುಗಳು ಮಾರಾಟವಾಗಿ ತಮ್ಮ ಹೊರೆಗಳಿಂದ ಮುಕ್ತಿಪಡೆದಾಗ ಅವು ಸಾವಕಾಶವಾಗಿ ಹೆಜ್ಜೆ ಹಾಕುತ್ತಾ ಮನೆಗೆ ಹಿಂದಿರುಗುತ್ತವೆ. ಕೆಲವೊಮ್ಮೆ ದಾರಿಬದಿಯ ಹುಲ್ಲುಗಳನ್ನು ಮೇಯುವುದಕ್ಕಾಗಿಯೂ ನಿಂತುಕೊಳ್ಳುತ್ತವೆ. ಮಾರುಕಟ್ಟೆಗೆ ಹೋಗದೆ ಬಿಡುವಾಗಿರುವಲ್ಲಿ ಕತ್ತೆಗಳನ್ನು ನೀರು ತರುವ, ಸೌದೆ ಹೊರುವ ಮುಂತಾದ ದಿನನಿತ್ಯ ಕೆಲಸಕ್ಕಾಗಿ ಉಪಯೋಗಿಸಲಾಗುತ್ತದೆ. ಅವುಗಳನ್ನು ಬಾಡಿಗೆಗೂ ಕೊಡಲಾಗುವುದು. ಇನ್ನು ಕೆಲವೊ ಸಾರಿಗೆಸಂಸ್ಥೆಗೆ ಸೇರಿದವುಗಳು. ಕತ್ತೆಗಳನ್ನು ಉಪಯೋಗಿಸಿ ಸರಕು ಸಾಗಿಸುವುದೇ ಆ ಸಂಸ್ಥೆಗಳ ಕಸಬು. ಕೆಲವು ಕಡೆಗಳಲ್ಲಿ ಕತ್ತೆಗಳು ಬಂಡಿಗಳನ್ನು ಎಳೆಯುತ್ತವೆ. ಸ್ವಲ್ಪ ದೊಡ್ಡ ಬಂಡಿಯಾದರೆ ಜೋಡಿ ಕತ್ತೆಗಳು ಸೇರಿ ಎಳೆಯುತ್ತವೆ.

ಮರ್ಯಾದೆಗೂ ಯೋಗ್ಯ

ಕತ್ತೆಗಳನ್ನು ಸಾಕಿಸಲಹುವುದು ಸುಲಭ. ಅವು ಸಿಕ್ಕಿದ್ದನ್ನೆಲ್ಲ ತಿಂದು ತಮ್ಮ ಹೊಟ್ಟೆಪಾಡನ್ನು ತಾವೇ ನೋಡಿಕೊಳ್ಳುತ್ತವೆ. ಅವುಗಳನ್ನು ಚೆನ್ನಾಗಿ ನೋಡಿಕೊಂಡಲ್ಲಿ ತಮ್ಮ ಯಜಮಾನರಿಗೆ ವಿಶ್ವಾಸದಿಂದಿರುತ್ತವೆ. ಬುದ್ಧಿಶಕ್ತಿಯಲ್ಲಿ ಕುದುರೆಗಳಿಗಿಂತ ಚುರಕು. ದಾರಿಗಳನ್ನು ಚೆನ್ನಾಗಿ ನೆನಪಿನಲ್ಲಿಟ್ಟುಕೊಳ್ಳುತ್ತವೆ ಎಂಬ ಹಿರಿಮೆಯು ಅವಕ್ಕಿವೆ. ಅವುಗಳಿಗೆ ಮಾರ್ಗ ತೋರಿಸಲು ಜೊತೆಗೆ ಯಾರು ಇಲ್ಲದಿದ್ದರೂ ಎಂಟು ಕಿಲೋಮೀಟರುಗಳಿಗಿಂತಲೂ ಹೆಚ್ಚು ದೂರದಿಂದ ನೀರನ್ನು ತರಬಲ್ಲವು. ಯಾರಾದರೊಬ್ಬರು ನೀರನ್ನು ಹತ್ತಿಸಿ ಇಳಿಸಿದರೆ ಸಾಕು. ಅವುಗಳು ಕೊರಳಿನ ಸುಂದರವಾದ ಗಂಟೆಯೊಂದಿಗೆ ಕೂಡಾ ಸಜ್ಜಾಗಿರಬಹುದು. ಇದರಿಂದ ಜನರು ದೂರದಿಂದಲೇ ಕೇಳಿಬರುವ ಗಂಟೆಯ ಗಲ್‌ಗಲ್‌ ನಾದದಿಂದ ಕತ್ತೆಯ ಆಗಮನವನ್ನು ತಿಳಿದು ತಮ್ಮ ಸರಕನ್ನು ಇಳಿಸಿಕೊಳ್ಳಬಹುದು.

ಕತ್ತೆಗಳು ಶ್ರಮಜೀವಿಗಳು. ಆದರೂ ತಮ್ಮ ಮೇಲಿರುವ ಹೊರೆಯು ತೀರಾ ಹೆಚ್ಚಾದಾಗ ಮತ್ತು ಬಳಲಿದಾಗ ಮುಲಾಜಿಲ್ಲದೆ ತೋರ್ಪಡಿಸುತ್ತವೆ. ಇಂಥ ಸಂದರ್ಭಗಳಲ್ಲಿ ಅಥವಾ ಅಪ್ಪಿತಪ್ಪಿ ಹೊರೆಯನ್ನು ಸರಿಯಾಗಿಡದೆ ನೋವುಂಟಾದಾಗ ನೆಲದಲ್ಲಿ ಬಿದ್ದು ಮುಷ್ಕರಹೂಡುತ್ತವೆ. ಹೀಗಾಗುವಾಗ ಅಪಾರ್ಥದಿಂದಾಗಿ ಅವು ಬೈಗುಳ, ಹೊಡೆತಕ್ಕೆ ಗುರಿಯಾಗಬಹುದು. ಹೀಗಾದ ಒಂದು ಘಟನೆ ಬೈಬಲಿನಲ್ಲಿರುವುದು ನಿಮ್ಮ ನೆನಪಿಗೆ ಬರುತ್ತದೆಯೇ?​—⁠ಅರಣ್ಯಕಾಂಡ 22:20-31.

ಕತ್ತೆಗಳು ಪರಿಗಣನೆ ಮತ್ತು ಆರೈಕೆಯ ಪುರಸ್ಕಾರಕ್ಕೆ ಯೋಗ್ಯ. ಕತ್ತೆಯ ಬೆನ್ನಿನ ಮೇಲೆ ಭದ್ರವಾಗಿ ಕಟ್ಟಲ್ಪಡದ ಹೊರೆಗಳು ಪಕ್ಕಕ್ಕೆ ವಾಲಿ ಆ ಬಡಪಾಯಿ ಜೀವಿಯನ್ನು ಹಳ್ಳಕ್ಕೆ ತಳ್ಳಿ ಅದರ ಕಾಲುಗಳು ಮುರಿಯುವಲ್ಲಿ ಅದು ನಿಜಕ್ಕೂ ದುಃಖಕರವೇ ಸರಿ. ಗಾಯಗಳು, ಹೇನು-ಹುಣ್ಣಿಯಂಥ ಪರಾವಲಂಬಿ ಜೀವಿಗಳು, ಪಾದದ ಸವೆತ, ನ್ಯುಮೋನಿಯ ಮತ್ತಿತರ ಸಮಸ್ಯೆಗಳು ಈ ಭಾರಹೊರುವ ಶ್ರಮಜೀವಿಗಳನ್ನು ಕ್ಷೀಣಿಸಬಲ್ಲವು. ಈ ದೃಷ್ಟಿಯಿಂದ ಡೀಬ್ರಸೇಟ್‌ ಎಂಬಲ್ಲಿ ಒಂದು ಆಧುನಿಕ ಕತ್ತೆ ಆಸ್ಪತ್ರೆಯನ್ನು ತೆರೆಯಲಾಗಿದೆ. ಇದು ಅದ್ದಿಸ್‌ ಅಬಾಬದ ಸಮೀಪದಲ್ಲಿದೆ. ಕಂಪ್ಯೂಟರ್‌ಗಳು, ಚಿಕಿತ್ಸಾ ಕೊಠಡಿಗಳು, ತುರ್ತುಚಿಕಿತ್ಸಾ ವಾಹನಗಳು ಅಲ್ಲದೆ ಶಸ್ತ್ರಚಿಕಿತ್ಸೆಗಾಗಿ ಆಪರೇಷನ್‌ ಥಿಯೇಟರ್‌ ಈ ಎಲ್ಲ ಆಧುನಿಕ ಸೌಲಭ್ಯಗಳಿಂದ ಇದು ಸುಸಜ್ಜಿತವಾಗಿದೆ. ಇದರಿಂದಾಗಿ ಇಸವಿ 2002ರಲ್ಲಿ ಸುಮಾರು 40,000 ಕತ್ತೆಗಳು ವಿವಿಧ ವೈದ್ಯಕೀಯ ಚಿಕಿತ್ಸೆಗಳಿಂದ ನವಚೈತನ್ಯ ಪಡೆದುಕೊಂಡವು.

ಪೂರ್ವಜನಾದ ಅಬ್ರಹಾಮನು ತನ್ನ ಕತ್ತೆಯ ಸಹಾಯದಿಂದ ಪರ್ವತ ಪ್ರದೇಶಗಳನ್ನು ದಾಟಿ ಮೊರೀಯ ಬೆಟ್ಟಕ್ಕೆ ಹೋದನು. (ಆದಿಕಾಂಡ 22:⁠3) ಇಸ್ರಾಯೇಲ್ಯ ಜನಾಂಗದ ಚರಿತ್ರೆಯುದ್ದಕ್ಕೂ ಕತ್ತೆಗಳು ದಿನನಿತ್ಯ ಜೀವನದ ಅವಿಭಾಜ್ಯ ಅಂಗವಾಗಿದ್ದವು. ಅಷ್ಟೇಕೆ, ಯೇಸು ವಿಜಯೋತ್ಸವದಿಂದ ಯೆರೂಸಲೇಮನ್ನು ಪ್ರವೇಶಿಸಿದ್ದು ಕತ್ತೆಯ ಮೇಲೆಯೇ.​—⁠ಮತ್ತಾಯ 21:1-9.

ಇಥಿಯೋಪಿಯಾದಲ್ಲೂ ಕತ್ತೆಯು ದೀರ್ಘಕಾಲದ ಇತಿಹಾಸವನ್ನು ಹೊಂದಿದೆ. ಆದರೆ ಇಲ್ಲಿನ ಜನಜೀವನದಲ್ಲಿ ಅದು ತನ್ನ ಪ್ರಾಧಾನ್ಯದ ಹೆಗ್ಗಳಿಕೆಗೆ ಇನ್ನು ಪಾತ್ರವಾಗಿದೆ. ವರ್ಷಗಳು ಉರುಳಿದಂತೆ ಲಾರಿಗಳು ಮತ್ತು ಕಾರುಗಳು ತಮ್ಮ ಮಾಡೆಲ್‌ಗಳನ್ನು ಬದಲಾಯಿಸಿಕೊಂಡಿವೆ. ಕತ್ತೆಯಾದರೋ ತನ್ನ ಅದೇ ಮಾಡೆಲನ್ನು ಉಳಿಸಿಕೊಂಡಿದೆ. ನಿಜಕ್ಕೂ ಮರ್ಯಾದೆಯೆಂಬ ಪುರಸ್ಕಾರಕ್ಕೆ ಕತ್ತೆ ಯೋಗ್ಯವೇ! (g 12/06)

[ಪುಟ 26ರಲ್ಲಿರುವ ಚಿತ್ರ ಕೃಪೆ]

‘The Donkey Sanctuary’, Sidmouth, Devon, UK