ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕಲೀಪ್ಸೋ ಟ್ರಿನಿಡ್ಯಾಡ್‌ನ ಅನನ್ಯವಾದ ಜಾನಪದ ಸಂಗೀತ

ಕಲೀಪ್ಸೋ ಟ್ರಿನಿಡ್ಯಾಡ್‌ನ ಅನನ್ಯವಾದ ಜಾನಪದ ಸಂಗೀತ

ಕಲೀಪ್ಸೋ ಟ್ರಿನಿಡ್ಯಾಡ್‌ನ ಅನನ್ಯವಾದ ಜಾನಪದ ಸಂಗೀತ

ಟ್ರಿನಿಡ್ಯಾಡ್‌ನ ಎಚ್ಚರ! ಲೇಖಕರಿಂದ

ಟ್ರಿನಿಡ್ಯಾಡ್‌ ಮತ್ತು ಟಬೇಗೋ ಅವಳಿ ದ್ವೀಪ ಗಣರಾಜ್ಯದ ಸುದ್ದಿಯನ್ನು ಕೇಳುವಲ್ಲಿ ಮನಸ್ಸಿನಲ್ಲಿ ಯಾವುದು ಮೂಡಿ ಬರುತ್ತದೆ? ಅನೇಕರು ಉಕ್ಕಿನ (ಸ್ಟೀಲ್‌) ವಾದ್ಯತಂಡದ ನಾದ ಮತ್ತು ಕಲೀಪ್ಸೋ ಸಂಗೀತದ ಉಲ್ಲಾಸಕರವಾದ ರಾಗ ಮಾಧುರ್ಯದ ಬಗ್ಗೆ ಯೋಚಿಸುವರು. ವಾಸ್ತವದಲ್ಲಿ, ಕಲೀಪ್ಸೋ ಸಂಗೀತದ ಆಕರ್ಷಣೀಯ ತಾಳಗಳು ಮತ್ತು ಸುಸ್ಪಷ್ಟ ಶೈಲಿಯು, ದಕ್ಷಿಣ ಕ್ಯಾರಿಬೀಯನ್‌ ಸಮುದ್ರದಲ್ಲಿ ಅದರ ಜನ್ಮಸ್ಥಳಕ್ಕಿಂತಲೂ ಎಷ್ಟೋ ದೂರದ ತನಕ ಜನಪ್ರಿಯವಾಗಿರುತ್ತದೆ. *

ಕಲೀಪ್ಸೋ ಕಾಲಲೂ ಎಂಬ ಪುಸ್ತಕಕ್ಕನುಸಾರ ಕಲೀಪ್ಸೋ ಎಂಬ ಹೆಸರು “ಸುಮಾರು 1898ರ ಬಳಿಕ, ಮೋಜುಗಾರರು ಬೀದಿಗಳಲ್ಲಿ ಹಾಡುತ್ತಿದ್ದ ಅಥವಾ ಅರೆವೃತ್ತಿಗ ಮತ್ತು ವೃತ್ತಿನಿರತ ಹಾಡುಗಾರರು ರಂಗದ ಮೇಲೆ ಪ್ರದರ್ಶಿಸುತ್ತಿದ್ದ ಯಾವುದೇ ಹಾಡಿಗೆ” ಅನ್ವಯಿಸಬಲ್ಲದು. ಕಲೀಪ್ಸೋ ಸಂಗೀತವು ಆಫ್ರಿಕಾದ ಐತಿಹಾಸಿಕ ಕಥೆಗಾರರ ಸಂಪ್ರದಾಯಗಳಿಂದ ಚಿಗುರಿ ಬೆಳೆದು ಬಂದಿರಬಹುದು. ಅದು ಆಫ್ರಿಕಾದ ಗುಲಾಮರ ಮೂಲಕ ಟ್ರಿನಿಡ್ಯಾಡ್‌ಗೆ ಧಾವಿಸಿರಬಹುದು. ತರುವಾಯ ಆಫ್ರಿಕನ್‌ ಹಾಡು, ಕುಣಿತ, ಡೋಲು ಬಾಜಣೆಗಳು ಫ್ರೆಂಚ್‌, ಸ್ಪ್ಯಾನಿಷ್‌, ಇಂಗ್ಲಿಷ್‌ ಮತ್ತು ಇತರ ಜನಾಂಗೀಯ ಪ್ರಭಾವಗಳೊಂದಿಗೆ ಸಮ್ಮಿಳನಗೊಂಡು ಕ್ರಮೇಣ ಕಲೀಪ್ಸೋ ಉದ್ಭವಿಸಿತು.

ಕಲೀಪ್ಸೋ ಹೆಸರಿನ ಮೂಲವು ಅನಿಶ್ಚಿತ. ಪಶ್ಚಿಮ ಆಫ್ರಿಕಾದ ಕೈಸೋ ಎಂಬ ಪದದಿಂದ ಇದು ಉದ್ಭವಿಸಿದೆಯೆಂದು ಕೆಲವರ ಅಭಿಪ್ರಾಯ. ಸಂಗೀತ ಕಚೇರಿಯ ಭವ್ಯ ಪ್ರದರ್ಶನವನ್ನು ಹೊಗಳುವ ನಿಟ್ಟಿನಲ್ಲಿ ಇದನ್ನು ಉಪಯೋಗಿಸಲಾಗುತ್ತಿತ್ತು. ಟ್ರಿನಿಡ್ಯಾಡ್‌ ಮತ್ತು ಟಬೇಗೋದಲ್ಲಿ 1830ನೆಯ ದಶಕದಲ್ಲಿ ಗುಲಾಮ ಪದ್ಧತಿ ಅಂತ್ಯಗೊಳ್ಳುವುದಕ್ಕೆ ಮೊದಲು ವಾರ್ಷಿಕ ಉತ್ಸವದ (ಕಾರ್ನಿವಲ್‌ನ) ಸಮಯದಲ್ಲಿ ಜನಸ್ತೋಮಗಳು ಕೂಡಿಬರುತ್ತಿತ್ತು. ಆ ಉತ್ಸವದಲ್ಲಿ ಶಾಂಟ್ವೆಲ್‌ (ಗಾಯಕರು) ತಮ್ಮನ್ನೇ ಮೇಲೇರಿಸಿಕೊಂಡು ಹೊಗಳಿಕೊಳ್ಳುವುದನ್ನು ಮತ್ತು ಒಬ್ಬರನ್ನೊಬ್ಬರು ಅಣಕಿಸುವುದನ್ನು ಅವರು ಆಲಿಸುತ್ತಿದ್ದರು. ಆಗ ಪ್ರತಿಯೊಬ್ಬ ಕಲಿಪ್ಸೋನ್ಯನ್‌ (ಕಲೀಪ್ಸೋ ಗಾಯಕರು) ಇತರರ ಮುಂದೆ ಮಿಂಚಿ ತನ್ನತ್ತ ಗಮನ ಸೆಳೆಯಲು ತನ್ನದೇ ಆದ ಸ್ವಂತ ಅಂಕಿತನಾಮ ಅಥವಾ ರಂಗನಾಮವನ್ನು ಇಟ್ಟುಕೊಳ್ಳುತ್ತಿದ್ದನು. ಇನ್ನು ಇದಕ್ಕಾಗಿ ಜನರು ಗುರುತಿಸುವ ಸ್ಟೈಲ್‌ ಕೂಡ ಇತ್ತು.

ಪ್ರಭಾವಶಾಲಿ ಸ್ಟೈಲ್‌ ನೋಡಿ!

ಕಲೀಪ್ಸೋ ಗಾಯಕರನ್ನು ಅವರ ತೀಕ್ಷ್ಣ ಚತುರೋಕ್ತಿಗಳಿಗಾಗಿ ಸದಾ ಗೌರವಿಸಲಾಗಿರುತ್ತದೆ. ಅಲ್ಲದೆ, ಅನೇಕ ಕಲೀಪ್ಸೋ ಗಾಯಕರು ಪೂರ್ವಸಿದ್ಧತೆಯಿಲ್ಲದೆ ಪ್ರಾಸಬದ್ಧಪದ್ಯದ ಅನೇಕ ಚರಣಗಳನ್ನು ಲೋಪವಿಲ್ಲದೆ ರಚಿಸುವ ಗಮನಾರ್ಹ ಸಾಮರ್ಥ್ಯವನ್ನು ಬೆಳೆಸಿಕೊಂಡಿದ್ದಾರೆ. ಅವರು ಅನೇಕವೇಳೆ ಇದನ್ನು ನುಡಿಚಿತ್ರಗಳಿಂದ ಸ್ವಾರಸ್ಯಕರವಾಗಿಸುತ್ತಾರೆ. ಇವು ಪದ್ಯವಿಷಯಕ್ಕೆ ಹೊಂದಿಕೊಳ್ಳುವುದು ಬೆರಗಾಗಿಸುತ್ತವೆ. ಆದಿ ದಿನಗಳಲ್ಲಿ ಕಲೀಪ್ಸೋ ಗಾಯಕರು ಪ್ರಧಾನವಾಗಿ ಆಫ್ರೋ-ಟ್ರಿನಿಡೇನ್ಯನ್‌ ಜನರಾಗಿದ್ದರು. ಅವರು ಸಾಮಾಜಿಕವಾಗಿ ಬಡವರು. ಆದರೆ ಇಂದು ಅವರನ್ನು ಪ್ರತಿಯೊಂದು ಕುಲ, ವರ್ಣ ಮತ್ತು ವರ್ಗಗಳಲ್ಲಿಯೂ ಕಂಡುಕೊಳ್ಳಸಾಧ್ಯವಿದೆ.

ಡಾಕ್ಟರ್‌ ಹಾಲಿಸ್‌ ಲಿವರ್‌ಪೂಲ್‌ ಎಂಬವರು ಟ್ರಿನಿಡ್ಯಾಡ್‌ ಮತ್ತು ಟಬೇಗೋ ದೇಶದ ಸಂಸ್ಕೃತಿ ಖಾತೆಯ ಮಾಜಿ ನಿರ್ದೇಶಕರು. ಇವರು ಇತಿಹಾಸಕಾರರೂ ಕಲೀಪ್ಸೋನ್ಯನರೂ ಹೌದು. ಆದಿ ಕಲೀಪ್ಸೋ ಗಾಯಕರ ಕುರಿತು ಅವರು ಎಚ್ಚರ!ಕ್ಕೆ ತಿಳಿಸಿದ್ದು: “ನಿತ್ಯ ಹಾಸ್ಯಪ್ರವೃತ್ತಿಯೇ ಅವರ ವೈಶಿಷ್ಟ್ಯ. ಏಕೆಂದರೆ ಜನರು ಆ ಡೇರೆಗೆ ಬರುತ್ತಿದ್ದುದು ಪ್ರಧಾನವಾಗಿ ಮನರಂಜನೆಗೆ. ಗಾಳಿಸುದ್ದಿಗಳನ್ನು ಕೇಳಿಸಿಕೊಳ್ಳಲಿಕ್ಕೆ. ತಮ್ಮ ಕಿವಿಗೆ ಬಿದ್ದ ವಿಷಯಗಳನ್ನು ಸಾಬೀತು ಮಾಡಿಕೊಳ್ಳಲಿಕ್ಕಾಗಿಯೇ. ಮೇಲ್ವರ್ಗದ ಜನರು ಕೆಳವರ್ಗದವರು ಏನು ಮಾಡುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಬರುತ್ತಿದ್ದಾಗ, ರಾಜ್ಯಪಾಲರೂ ಸಹಚರರೂ ತಮ್ಮ ರಾಜಕೀಯ ಜನಪ್ರಿಯತೆಯು ಮೇಲ್ಮಟ್ಟದಲ್ಲಿದೆಯೊ ಕೆಳಮಟ್ಟದಲ್ಲಿಯೊ ಎಂಬುದನ್ನು ಕಂಡುಹಿಡಿಯಲು ಬರುತ್ತಿದ್ದರು.”

ಕಲೀಪ್ಸೋನ್ಯನರು ಅಡಿಗಡಿಗೆ ಅಧಿಕಾರಿವರ್ಗವನ್ನೂ ಸಾಮಾಜಿಕವಾಗಿ ಮೇಲ್ವರ್ಗದವರನ್ನೂ ಅಪಹಾಸ್ಯದ ಗುರಿಹಲಗೆಗಳಾಗಿ ಮಾಡುತ್ತಿದ್ದರು. ಇದರ ಪರಿಣಾಮವಾಗಿ, ಕಲಿಪ್ಸೋನ್ಯನರನ್ನು ಜನಸಾಮಾನ್ಯರ ‘ಹೀರೋಗಳು’ ಮತ್ತು ‘ಚಾಂಪಿಯನರು’ ಎಂದು ಪೂಜ್ಯಭಾವದಿಂದ ನೋಡಲಾಗುತ್ತಿತ್ತು. ಆದರೆ ಅಧಿಕಾರಿವರ್ಗವು ಅವರನ್ನು ಪೀಡೆಗಳೆಂದು ಕಾಣುತ್ತಿತ್ತು. ಕೆಲವು ಸಲ ಈ ಕಲೀಪ್ಸೋನ್ಯನರು ಎಷ್ಟೊಂದು ಚುಚ್ಚುವ ವಿಮರ್ಶಾತ್ಮಕ ಪದ್ಯಗಳನ್ನು ರಚಿಸುತ್ತಿದ್ದರೆಂದರೆ, ಕ್ರಮೇಣ ವಸಾಹತಿಗ ಸರಕಾರವು ಅದನ್ನು ನಿಯಂತ್ರಿಸಲು ಶಾಸನಗಳನ್ನು ರಚಿಸುವ ನಿರ್ಬಂಧಕ್ಕೊಳಗಾಯಿತು. ಆಗ ಗಾಯಕರು ತಮ್ಮ ಭಾವಗೀತೆಗಳಲ್ಲಿ ಶ್ಲೇಷೋಕ್ತಿಗಳನ್ನು ಅಥವಾ ದ್ವಂದ್ವಾರ್ಥಗಳನ್ನು ಉಪಯೋಗಿಸುತ್ತ ಪ್ರತಿವರ್ತಿಸಿದರು. ಈ ಶೈಲಿಯಲ್ಲಿ ಪರಿಣತರೂ ಆದರು. ಈ ದಿನಗಳ ವರೆಗೂ ಕಲೀಪ್ಸೋ ಭಾವಗೀತೆಗಳಲ್ಲಿ ಇಂತಹ ದ್ವಂದ್ವಾರ್ಥಕ ವಾಕ್ಯಗಳು ಜಗಮಗಿಸುತ್ತಿವೆ.

ಕಲೀಪ್ಸೋನ್ಯನರು ಭಾಷಾಪ್ರಯೋಗದಲ್ಲಿ ನಿಪುಣರು ಮಾತ್ರವಲ್ಲ, ಭಾಷಾರಚಕರು ಆಗಿದ್ದಾರೆ. ನಿಜತ್ವವೇನೆಂದರೆ, ವೆಸ್ಟ್‌ ಇಂಡಿಯನ್‌ ಆಡುಮಾತಿನ ಶಬ್ದಕೋಶಕ್ಕೆ ಅವರು ನೀಡಿರುವ ಕೊಡುಗೆ ಅಪಾರ. ಹೀಗಿರುವಾಗ, ಅನೇಕರು ಅಷ್ಟೇಕೆ ಕೆಲವು ಮಂದಿ ರಾಜಕಾರಣಿಗಳು ಸಹ ವಿಷಯವೊಂದನ್ನು ಒತ್ತಿಹೇಳಲು ಕಲೀಪ್ಸೋನ್ಯನರನ್ನು ಅನೇಕವೇಳೆ ಉದ್ಧರಿಸುವುದರಲ್ಲಿ ಆಶ್ಚರ್ಯವೇನಿಲ್ಲ.

ನವಕಾಲೀನ ಕಲೀಪ್ಸೋ

ಇತ್ತೀಚಿನ ಕಾಲಗಳಲ್ಲಿ, ವಿವಿಧ ಅಭಿರುಚಿಗಳನ್ನು ತಣಿಸಲಿಕ್ಕಾಗಿ ಕಲೀಪ್ಸೋ ಸಂಗೀತದ ಅನೇಕ ಶೈಲಿಗಳು ಮತ್ತು ಕಲಬೆರಕೆಗಳು ಕವಲೊಡೆದಿವೆ. ಹೆಚ್ಚಿನ ಸಂಗೀತಗಳಲ್ಲಿರುವಂತೆ ಕೆಲವು ಕಲೀಪ್ಸೋ ಗೀತೆಗಳ ಭಾವಗಳು ಉನ್ನತ ನೈತಿಕ ಮೌಲ್ಯಗಳನ್ನು ಪ್ರತಿಬಿಂಬಿಸುವುದಿಲ್ಲ. ಆದುದರಿಂದ, ನಾವು ಯಾವ ರೀತಿಯ ಮಾತುಗಳನ್ನು ಕೇಳುತ್ತೇವೆ ಎಂಬ ವಿಷಯದಲ್ಲಿ ಆಯ್ಕೆ ಮಾಡುವವರಾಗಿರುವುದು ವಿವೇಕಯುತವೆಂಬುದು ವ್ಯಕ್ತ. (ಎಫೆಸ 5:​3, 4) ನಾವು ಹೀಗೆ ಕೇಳಿಕೊಳ್ಳಬಹುದು: “ಒಂದು ದ್ವಂದ್ವಾರ್ಥದ ಗೀತೆಯನ್ನು ನಾನು ನನ್ನ ಮಕ್ಕಳಿಗೆ ಇಲ್ಲವೆ ಈ ಸಂಗೀತದ ಪರಿಚಯವಿಲ್ಲದವರಿಗೆ ವಿವರಿಸಲು ನಾಚಿಕೆಪಟ್ಟೇನೊ?”

ನೀವು ಟ್ರಿನಿಡ್ಯಾಡ್‌ ಮತ್ತು ಟಬೇಗೊ ದೇಶಕ್ಕೆ ಬರುವಲ್ಲಿ ಅಲ್ಲಿಯ ಸುಂದರವಾದ ಸಮುದ್ರ ಕಿನಾರೆಗಳು ಮತ್ತು ನೀರಿನಲ್ಲಿ ಮಿಂದು ನಿಂತಿರುವ ಬಂಡೆಯ ಸಾಲುಗಳಲ್ಲಿ ಖಂಡಿತ ಹಿಗ್ಗಿ ನಲಿಯುವಿರಿ. ನೀವು ಆ ದ್ವೀಪದ ಕುಲಸಂಸ್ಕೃತಿಗಳ ಸಮ್ಮಿಶ್ರಣಕ್ಕೆ ಮಾರುಹೋಗುವುದರಲ್ಲಿ ಸಂಶಯವಿಲ್ಲ. ಲೋಕದ ಸುತ್ತಲಿನ ಆಬಾಲವೃದ್ಧರನ್ನು ಮೋಹಿತರನ್ನಾಗಿ ಮಾಡಿರುವ ಅಲ್ಲಿನ ಸ್ಟೀಲ್‌ ಆರ್ಕೆಸ್ಟ್ರ ಹಾಗೂ ಕಲೀಪ್ಸೋವಿನ ಕಳೆದುಂಬಿದ ಆಕರ್ಷಣೀಯ ನಾದದಲ್ಲಿಯೂ ನೀವು ಹರ್ಷಿಸಬಹುದು. (g 12/06)

[ಪಾದಟಿಪ್ಪಣಿ]

^ ಉಕ್ಕಿನ ವಾದ್ಯತಂಡದವರು ಕಲೀಪ್ಸೋ ಗೀತೆಗಳನ್ನು ಹಾಡುತ್ತಾರೆ. ಆದರೆ ಕಲೀಪ್ಸೋ ಗಾಯಕರು ಗಿಟಾರ್‌, ತುತ್ತೂರಿ, ಸ್ಯಾಕ್ಸಫೋನ್‌, ಡೋಲು ಮತ್ತಿತ್ತರ ವಾದ್ಯಪರಿಕರಗಳನ್ನು ಸಹ ಉಪಯೋಗಿಸುತ್ತಾರೆ.

[ಪುಟ 28, 29ರಲ್ಲಿರುವ ಚಿತ್ರಗಳು]

ಸ್ಟೀಲ್‌ ಡೋಲುಗಳು