ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜಗತ್ತನ್ನು ಗಮನಿಸುವುದು

ಜಗತ್ತನ್ನು ಗಮನಿಸುವುದು

ಜಗತ್ತನ್ನು ಗಮನಿಸುವುದು

“ಕಳೆದ 500 ವರ್ಷಗಳಲ್ಲಿ ಮಾನವ ಚಟುವಟಿಕೆಗಳಿಂದಾಗಿ 844 ಬಗೆಯ ಜೀವಿ ಪ್ರಭೇದಗಳು ಅಳಿದುಹೋಗಿವೆ (ಇಲ್ಲವೆ ಅದರ ಸಹಜ ನೆಲೆಯಲ್ಲಿ ಅಳಿದುಹೋಗಿವೆ).”​—⁠ಐ.ಯು.ಸಿ.ಎನ್‌., ದ ವರ್ಲ್ಡ್‌ ಕಾನ್ಸರ್ವೇಷನ್‌ ಯೂನ್ಯನ್‌, ಸ್ವಿಟ್ಸರ್ಲೆಂಡ್‌.

ಸರಕಾರದ ಅಂಕಿಅಂಶಗಳ ಪ್ರಕಾರ, ಬ್ರಿಟನ್‌ ದೇಶೀಯರಲ್ಲಿ 6 ಪ್ರತಿಶತದಷ್ಟು ಸ್ತ್ರೀಪುರುಷರು ಸಲಿಂಗಕಾಮಿಗಳಾಗಿದ್ದಾರೆ. 2005ರಲ್ಲಿ ಹೊರಡಿಸಲಾದ ನಿಯಮವು, “ಸಮಲಿಂಗದ ಒಂದು ಜೋಡಿ ಪರಸ್ಪರ ‘ಮದುವೆಯಾಗುವುದನ್ನು’ ಕಾನೂನುಬದ್ಧವಾಗಿಸುತ್ತದೆ ಮತ್ತು ಹೀಗೆ ಮದುವೆಯಾದವರಿಗೆ” ಭಿನ್ನಲಿಂಗದ ವಿವಾಹಿತ ದಂಪತಿಗಳಿಗಿರುವ “ಹಕ್ಕುಗಳನ್ನೇ ಕೊಡುತ್ತದೆ.”​—⁠ದ ಡೇಲಿ ಟಿಲಿಗ್ರಾಫ್‌, ಇಂಗ್ಲೆಂಡ್‌. (g 11/06)

“ದಂಪತಿಗಳಲ್ಲಿ 50 ಪ್ರತಿಶತದಷ್ಟು ಮಂದಿ ‘ಆರ್ಥಿಕ ದ್ರೋಹ ಬಗೆದಿದ್ದಾರೆ’ ಎಂದು ಒಪ್ಪಿಕೊಳ್ಳುತ್ತಾರೆ. ಅಂದರೆ ಅವರು ಹಣಖರ್ಚು ಮಾಡಿರುವುದರ ಬಗ್ಗೆ ತಮ್ಮ ಸಂಗಾತಿಗೆ ಸುಳ್ಳುಹೇಳಿದ್ದಾರೆ.”​—⁠ದ ವಾಲ್‌ ಸ್ಟ್ರೀಟ್‌ ಜರ್ನಲ್‌, ಯು.ಎಸ್‌.ಎ.

ಓಷೀಆನಿಯಾದ ವಾನ್ವಾಟೂವಿನ ಟೈಗ್ವಾ ದ್ವೀಪದ ಲಾಟೇವೂ ಎಂಬ ಚಿಕ್ಕ ಹಳ್ಳಿಯು ಬದಲಾಗುತ್ತಿರುವ ಹವಾಮಾನದ ಕಾರಣ ತೊರೆಯಲ್ಪಟ್ಟಿರುವ ಹಳ್ಳಿಗಳಲ್ಲಿ ಮೊದಲನೆಯದು ಆಗಿರಬಹುದು. ಅಂದರೆ, ಅಲ್ಲಿರುವ ಜನರನ್ನು ಇನ್ನೊಂದು ಸ್ಥಳದಲ್ಲಿ ನೆಲೆಸುವ ಏರ್ಪಾಡುಗಳನ್ನು ಮಾಡಬೇಕಾಗುವುದು. ಕಾರಣ, ಅಲ್ಲಿನ ಮನೆಗಳು ಪದೇ ಪದೇ “ಬಿರುಗಾಳಿಯ ಸಮಯದಲ್ಲಿ ಉಕ್ಕೇರುವ ಸಮುದ್ರದ ನೀರಿನಿಂದಾಗಿ ಮತ್ತು ರಾಕ್ಷಸ ಅಲೆಗಳಿಂದಾಗಿ ಧ್ವಂಸಗೊಳ್ಳುತ್ತವೆ.”​—⁠ವಾನುವಾಟು ನ್ಯೂಸ್‌, ವಾನುವಾಟು. (g 12/06)

ಹನ್ನೆರಡು ವರ್ಷ ಸೆರೆ​—⁠ಏಕೆ?

ಪೂರ್ವ ಆಫ್ರಿಕಾದಲ್ಲಿರುವ ಎರಿಟ್ರೀಯಾದ ಸಾವಾದಲ್ಲಿ ಮೂವರು ಯೆಹೋವನ ಸಾಕ್ಷಿಗಳು ಕಳೆದ 12 ವರ್ಷಗಳಿಂದ ಸೆರೆಮನೆಯಲ್ಲಿದ್ದಾರೆ. ಅವರ ವಿರುದ್ಧ ಯಾವುದೇ ಮೊಕದ್ದಮೆಗಳು ದಾಖಲಾಗಿಲ್ಲ ಮತ್ತು ಅವರನ್ನು ಒಮ್ಮೆಯೂ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸಲಾಗಿಲ್ಲ. ತಮ್ಮ ಸ್ವಂತ ಮನೆಯವರನ್ನು ಸೇರಿಸಿ ಯಾರೂ ಅವರನ್ನು ಭೇಟಿಯಾಗುವಂತಿಲ್ಲ. ಇದೆಲ್ಲದಕ್ಕೆ ಕಾರಣವೇನು? ಅವರು ಮಿಲಿಟರಿ ಸೇವೆಮಾಡಲು ನಿರಾಕರಿಸಿದ್ದೇ ಆಗಿದೆ. ಮನಸ್ಸಾಕ್ಷಿಯ ಕಾರಣದಿಂದ ಒಂದು ಕೆಲಸವನ್ನು ಮಾಡಲು ನಿರಾಕರಿಸುವವರಿಗೆ ಎರಿಟ್ರೀಯ ದೇಶದ ಕಾನೂನು ವಿನಾಯತಿಕೊಡುವುದಿಲ್ಲ. ಯೌವನಸ್ಥರನ್ನು ದಸ್ತಗಿರಿಮಾಡಲಾದಾಗ, ಅವರನ್ನು ಒಂದು ಮಿಲಿಟರಿ ಶಿಬಿರದಲ್ಲಿ ಬಂಧಿಸಿಡಲಾಗುತ್ತದೆ ಮತ್ತು ಅಲ್ಲಿ ಅವರನ್ನು ಅನೇಕವೇಳೆ ವಿಪರೀತವಾಗಿ ಹೊಡೆದು, ನಾನಾ ವಿಧಗಳ ಚಿತ್ರಹಿಂಸೆಗೊಳಪಡಿಸಲಾಗುತ್ತದೆ. (g 10/06)

ಕೆಲಸದ ಸ್ಥಳದಲ್ಲಿ ಒರಟುತನ

“ಕೆಲಸದ ಸ್ಥಳದಲ್ಲಿನ ಒರಟುತನದಿಂದಾಗಿ ಒಂದು ಸಂಘಟನೆಯ ಸಮಯ, ಶ್ರಮೆ ಮತ್ತು ಪ್ರತಿಭೆಯ ನಷ್ಟವಾಗಸಾಧ್ಯವಿದೆ” ಎಂದು ದ ವಾಲ್‌ ಸ್ಟ್ರೀಟ್‌ ಜರ್ನಲ್‌ ಪತ್ರಿಕೆಯು ತಿಳಿಸುತ್ತದೆ. 3,000 ಜನರಲ್ಲಿ ನಡೆಸಿದ ಒಂದು ಸಮೀಕ್ಷೆಯಲ್ಲಿ, 90 ಪ್ರತಿಶತಕ್ಕಿಂತಲೂ ಹೆಚ್ಚಿನವರು “ಕೆಲಸದ ಸ್ಥಳದಲ್ಲಿ ಬೇರೆಯವರ ಒರಟುತನಕ್ಕೆ ಗುರಿಯಾಗಿದ್ದಾರೆ” ಎಂದು ಕಂಡುಬಂದಿದೆ. ಇವರಲ್ಲಿ 50 ಪ್ರತಿಶತದಷ್ಟು ಜನರು ತಾವು ಒರಟುತನಕ್ಕೆ ಗುರಿಯಾದ “ಸನ್ನಿವೇಶದ ಬಗ್ಗೆ ಚಿಂತಿಸುತ್ತಾ ಕೆಲಸದ ಸಮಯವನ್ನು ಹಾಳುಮಾಡಿದ್ದಾರೆಂದು” ಹೇಳಿದ್ದಾರೆ; “25 ಪ್ರತಿಶತದಷ್ಟು ಜನರು ತಮ್ಮ ಉದ್ಯೋಗದಲ್ಲಿ ವ್ಯಯಿಸುವ ಶ್ರಮೆಯನ್ನು ಕಡಿಮೆಗೊಳಿಸಿದ್ದಾರೆ” ಮತ್ತು 8 ಮಂದಿಯಲ್ಲಿ ಒಬ್ಬರು, ಕೆಲಸವನ್ನೇ ಬಿಟ್ಟುಬಿಟ್ಟಿದ್ದಾರೆ. ದಕ್ಷಿಣ ಕ್ಯಾಲಿಫೋರ್ನಿಯದಲ್ಲಿರುವ ವಿಶ್ವವಿದ್ಯಾನಿಲಯದಲ್ಲಿ ಮ್ಯಾನೆಜ್‌ಮೆಂಟ್‌ ಫ್ರೊಫೆಸರರಾಗಿರುವ ಕ್ರಿಸ್ಟೀನ್‌ ಪೊರತ್‌ಗನುಸಾರ “ಕೆಲಸದ ಸ್ಥಳದಲ್ಲಿ ಕಡಿಮೆ ಶ್ರಮಪಡುವುದು, ಕೆಲಸಕ್ಕೆ ಗೈರುಹಾಜರಾಗಿರುವುದು ಮತ್ತು ಕದಿಯುವುದು ಸಹ ಒಂದು ಸಂಘಟನೆಯಲ್ಲಿ ಒರಟುತನ ಇದೆಯೆಂಬುದರ ಲಕ್ಷಣಗಳಾಗಿರಬಹುದು” ಎಂದು ಆ ಜರ್ನಲ್‌ ಹೇಳುತ್ತದೆ. (g 11/06)

ಪರಿಸರಸ್ನೇಹಿ ಕೇಂದ್ರತಾಪನ

“ಈಗ ಆಲಿವ್‌ ಓಟೆಗಳ ಇಂಧನವನ್ನು ಉಪಯೋಗಿಸಿ ಕೇಂದ್ರತಾಪನವನ್ನು (ಸೆಂಟ್ರಲ್‌ ಹೀಟಿಂಗ್‌) ಮಾಡಲಾಗುತ್ತದೆ” ಎಂದು ಎಲ್‌ ಪಾಯಿಸ್‌ ಎಂಬ ಸ್ಪ್ಯಾನಿಷ್‌ ವಾರ್ತಾ ಪತ್ರಿಕೆಯು ವರದಿಸುತ್ತದೆ. ಶಕ್ತಿಯ ಈ ಮೂಲವು ಮಾಡ್ರಿಡ್‌ನಲ್ಲಿ ಕನಿಷ್ಠಪಕ್ಷ 300 ಮನೆಗಳಿಗೆ ಶಾಖ ಮತ್ತು ಬಿಸಿನೀರನ್ನು ಒದಗಿಸುತ್ತದೆ. ಇಂಧನವಾಗಿ ಬಳಸುವಾಗ ಆಲಿವ್‌ ಓಟೆಗಳು ಹೆಚ್ಚು ದುಬಾರಿಯಾಗಿರುವುದಿಲ್ಲ, ಅವು ತೈಲಕ್ಕಿಂತ 60% ಮತ್ತು ಕಲ್ಲಿದ್ದಲಿಗಿಂತ 20% ಕಡಿಮೆ ಬೆಲೆಗೆ ಲಭ್ಯ ಇವೆ. ಅದನ್ನು ಸುಡುವಾಗ ಅದರಿಂದ ಹೊರಡುವ ಇಂಗಾಲಾಮ್ಲ ಮತ್ತು ಅದು ಸ್ವಾಭಾವಿಕವಾಗಿ ಕೊಳೆಯುವ ಸಮಯದಲ್ಲಿ ಬಿಡುಗಡೆಯಾಗುವ ಇಂಗಾಲಾಮ್ಲದ ಪ್ರಮಾಣವು ಒಂದೇ ಆಗಿರುವುದರಿಂದ ವಾತಾವರಣವನ್ನು ಇವು ಕಲುಷಿತಗೊಳಿಸುವುದಿಲ್ಲ. ಇನ್ನೊಂದು ಪ್ರಯೋಜನವೇನೆಂದರೆ ಇವು ಸುಲಭವಾಗಿ ಲಭ್ಯವಾಗಿವೆ. ಏಕೆಂದರೆ, ಆಲಿವ್‌ಗಳಿಂದ ಎಣ್ಣೆಯನ್ನು ತೆಗೆಯಲಾದ ನಂತರ ಆಲಿವ್‌ ಓಟೆಗಳು ಉಳಿದಿರುತ್ತವೆ ಮತ್ತು ಸ್ಪೇನ್‌ ದೇಶವು ಆಲಿವ್‌ ಎಣ್ಣೆಯ ಉತ್ಪಾದನೆಯಲ್ಲಿ ಜಗತ್ತಿನಲ್ಲೇ ಮೊದಲನೆಯ ಸ್ಥಾನದಲ್ಲಿರುವುದರಿಂದ ಇವು ಹೇರಳವಾಗಿ ಲಭ್ಯವಿವೆ. (g 10/06)

ಶತಾಯುಷಿಗಳು ಹೆಚ್ಚಾಗುತ್ತಿದ್ದಾರೆ

ಇಂದಿನ ದಿನಗಳಲ್ಲಿ 100 ವರ್ಷ ಪ್ರಾಯದವರೆಗೆ ಜೀವಿಸುವುದು ಒಂದು ಅಸಾಮಾನ್ಯ ವಿಷಯವೇನಲ್ಲ ಎಂದು ನ್ಯೂ ಸಾಯಂಟಿಸ್ಟ್‌ ಪತ್ರಿಕೆ ತಿಳಿಸುತ್ತದೆ. ಈಗ ಜಗದ್ವ್ಯಾಪಕವಾಗಿ ಸುಮಾರು 2,00,000 ಶತಾಯುಷಿಗಳಿದ್ದಾರೆ. ಅದಲ್ಲದೆ ಆ ಪತ್ರಿಕೆಗನುಸಾರ, ಅವರಲ್ಲಿ 66 ಮಂದಿ ತಮ್ಮ 110ನೇ ಹುಟ್ಟುಹಬ್ಬವನ್ನು ತಲಪುವ ಮೂಲಕ ಸೂಪರ್‌-ಶತಾಯುಷಿಗಳಾಗಿ ಎನಿಸಿಕೊಂಡಿದ್ದಾರೆ. ಕೆಲವೊಮ್ಮೆ, ದೀರ್ಘಾಯುಷಿಗಳೆಂದು ಹೇಳಿಕೊಳ್ಳುವವರ ವಯಸ್ಸನ್ನು ದೃಢೀಕರಿಸುವುದು ಕಷ್ಟಕರವಾಗಿರುತ್ತದೆ ಎಂದು ನ್ಯೂ ಸಾಯಂಟಿಸ್ಟ್‌ ಪತ್ರಿಕೆ ಅಂಗೀಕರಿಸುತ್ತದೆ. ಆದರೆ “ಭರವಸಾರ್ಹ ದಾಖಲೆಗಳು ಇಲ್ಲದಿರುವುದು ತಾನೇ, ಇನ್ನೂ ಬದುಕಿರುವ ಸೂಪರ್‌-ಶತಾಯುಷಿಗಳ ನಿಜವಾದ ಸಂಖ್ಯೆ 450ರಷ್ಟು ಇರಬಹುದೆಂಬುದನ್ನು ಸೂಚಿಸುತ್ತದೆ.” (g 12/06)