ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಟವರ್‌ ಬ್ರಿಜ್‌ ಲಂಡನ್‌ನ ಪ್ರವೇಶದ್ವಾರ

ಟವರ್‌ ಬ್ರಿಜ್‌ ಲಂಡನ್‌ನ ಪ್ರವೇಶದ್ವಾರ

ಟವರ್‌ ಬ್ರಿಜ್‌ ಲಂಡನ್‌ನ ಪ್ರವೇಶದ್ವಾರ

ಬ್ರಿಟನಿನ ಎಚ್ಚರ! ಲೇಖಕರಿಂದ

ಇಂಗ್ಲೆಂಡಿಗೆ ಒಮ್ಮೆಯೂ ಪ್ರಯಾಣಿಸಿರದ ವ್ಯಕ್ತಿಗೂ ಅದರ ಬಗ್ಗೆ ಗೊತ್ತಿದೆ. ವರ್ಷಂಪೂರ್ತಿ ಸಾವಿರಾರು ಪ್ರವಾಸಿಗರು ಅದಕ್ಕೆ ಭೇಟಿನೀಡುತ್ತಾರೆ. ಪ್ರತಿನಿತ್ಯವೂ ಲಂಡನಿನ ನಾಗರಿಕರು ಅದನ್ನು ದಾಟುತ್ತಾರೆ. ಆದರೆ ಅವರಲ್ಲಿ ಹಲವರಿಗೆ ಅದನ್ನು ಕಣ್ಣೆತ್ತಿ ನೋಡುವುದಕ್ಕಾಗಲಿ ಇಲ್ಲವೆ ಅದರ ನಿರ್ಮಾಣದ ಬಗ್ಗೆ ಯೋಚಿಸುವುದಕ್ಕಾಗಲಿ ಸಮಯವಿರುವುದಿಲ್ಲ. ಅದುವೇ ಲಂಡನಿನ ಅತಿ ಪ್ರಸಿದ್ಧ ಹೆಗ್ಗುರುತಾಗಿರುವ ಟವರ್‌ ಬ್ರಿಜ್‌!

ಟವರ್‌ ಬ್ರಿಜ್‌ ಎಂದು ಹೇಳುವಾಗ ಅದು ಲಂಡನ್‌ ಬ್ರಿಜ್‌ ಎಂದು ನೆನಸಬೇಡಿ. ಟವರ್‌ ಬ್ರಿಜ್‌ ಲಂಡನ್‌ ಟವರ್‌ನೊಂದಿಗೆ ಸಂಬಂಧಿಸಿದೆ. 1872ರಲ್ಲಿ ಇಂಗ್ಲೆಂಡಿನ ಪಾರ್ಲಿಮೆಂಟ್‌, ಥೇಮ್ಸ್‌ ನದಿಗೆ ಸೇತುವೆಯೊಂದನ್ನು ನಿರ್ಮಿಸುವ ಮಸೂದೆಯನ್ನು ಹೊರಡಿಸಿತು. ಇದಕ್ಕೆ ಲಂಡನ್‌ ಟವರ್‌ನ ಗವರ್ನರ್‌ರಿಂದ ವಿರೋಧವಿತ್ತು. ಆದುದರಿಂದ, ಆ ಲಂಡನ್‌ ಟವರ್‌ನ ವಿನ್ಯಾಸದಂತೆಯೇ ಇರುವ ಇನ್ನೊಂದು ಸೇತುವೆಯನ್ನು ನಿರ್ಮಿಸಲು ಪಾರ್ಲಿಮೆಂಟ್‌ ನಿರ್ಧರಿಸಿತು. ಈ ಅಧಿಕೃತ ಯೋಜನೆಯೇ ಇವತ್ತಿನ ಟವರ್‌ ಬ್ರಿಜ್‌ನ ನಿರ್ಮಾಣಕ್ಕೆ ನಾಂದಿಯಾಯಿತು.

18 ಮತ್ತು 19ನೇ ಶತಮಾನದಲ್ಲಿ ಥೇಮ್ಸ್‌ ನದಿಯ ಎರಡು ದಡಗಳಿಗೆ ಸಂಪರ್ಕ ಕಲ್ಪಿಸುವ ಅನೇಕ ಸೇತುವೆಗಳನ್ನು ಕಟ್ಟಲಾಯಿತು. ಅವುಗಳಲ್ಲಿ ಓಲ್ಡ್‌ ಲಂಡನ್‌ ಬ್ರಿಜ್‌ ತುಂಬಾ ಪ್ರಸಿದ್ಧ. ಇಸವಿ 1750ರಷ್ಟಕ್ಕೆ ನದಿಯ ಅಡ್ಡಕ್ಕಿದ್ದ ಈ ಸೇತುವೆಯ ಅಸ್ತಿವಾರವು ದುರ್ಬಲ ಸ್ಥಿತಿಯಲ್ಲಿತ್ತು. ಅದು ತುಂಬ ಕಿರಿದಾಗಿದ್ದರಿಂದ ಸಂಚಾರಕ್ಕೂ ಅಡ್ಡಿಯಾಗುತ್ತಿತ್ತು. ತಳದಲ್ಲಿ, ಕಿಕ್ಕಿರಿದಿದ್ದ ಬಂದರಿನಲ್ಲಿ ವಿದೇಶಗಳಿಂದ ಆಗಮಿಸಿದ ಹಡಗುಗಳನ್ನು ನಿಲ್ಲಿಸಲಿಕ್ಕಾಗಿ ಪೈಪೋಟಿ ನಡೆಯುತ್ತಿತ್ತು. ಆ ಸಮಯದಲ್ಲಿ ಬಂದರಿನಲ್ಲಿ ಹಡಗುಗಳು ಎಷ್ಟು ಒತ್ತಾಗಿ ನಿಲ್ಲಿಸಲ್ಪಟ್ಟಿದ್ದವೆಂದರೆ, ಒಬ್ಬನು ಒಂದು ತುದಿಯಿಂದ ಆರಂಭಿಸಿ ಹಡಗಿನ ಮೇಲೆಯೇ ಹಲವಾರು ಕಿಲೋಮೀಟರುಗಳವರೆಗೆ ನಡೆಯಬಹುದಿತ್ತು ಎಂದು ಹೇಳಲಾಗುತ್ತದೆ.

ಕಾರ್ಪೊರೇಶನ್‌ ಅಫ್‌ ಲಂಡನ್‌ನ ವಿನಂತಿಯ ಮೇರೆಗೆ ಪಟ್ಟಣದ ವಾಸ್ತುಶಿಲ್ಪಿ ಹಾರೆಸ್‌ ಜೋನ್ಸ್‌ ಸೇತುವೆ ನಿರ್ಮಾಣಕ್ಕೆ ಮುಂದೆಬಂದರು. ಅವರು ಲಂಡನ್‌ ಬ್ರಿಜ್‌ನ ಹತ್ತಿರವೇ ಗಾಥಿಕ್‌ ಶೈಲಿಯಲ್ಲಿ ಎತ್ತುಸೇತುವೆಯನ್ನು ನಿರ್ಮಿಸುವ ಯೋಜನೆಯೊಂದನ್ನು ಮುಂದಿಟ್ಟರು. ಇದು ಥೇಮ್ಸ್‌ ನದಿಯ ಪಶ್ಚಿಮ ಬಂದರಿಗೆ ಸಾಗುತ್ತಿದ್ದ ಹಡಗುಗಳ ಸಂಚಾರವನ್ನೂ ಸುಲಭಗೊಳಿಸಲಿತ್ತು. ಅನೇಕರಿಗೆ ಅಚ್ಚರಿ ಮೂಡಿಸುವಂಥ ವಿನೂತನ ವಿಷಯಗಳೂ ಈ ವಿನ್ಯಾಸದಲ್ಲಿ ಸೇರಿದ್ದವು.

ವಿಶಿಷ್ಟವಾದೊಂದು ವಿನ್ಯಾಸ

ಜೋನ್ಸ್‌ ಅನೇಕ ಸ್ಥಳಗಳ ಉದ್ದಗಲವನ್ನು ಸಂಚರಿಸಿದ್ದರು. ಹೀಗೆ ನೆದರ್‌ರ್ಲೆಂಡಿನ ಕಾಲುವೆಗಳಿಗೆ ಕಟ್ಟಲ್ಪಟ್ಟಿದ ಅನೇಕ ಸಣ್ಣ ಎತ್ತುಸೇತುವೆಗಳನ್ನು ನೋಡಿದರು. ಇದು, ಸೇತುವೆಯ ಮಧ್ಯಭಾಗವು ಬೇರ್ಪಟ್ಟು ಆ ಎರಡು ಭಾಗಗಳು ಮೇಲಕ್ಕೆತ್ತಿ, ಹಡಗುಗಳು ಸಾಗುವಂತೆ ಅನುವು ಮಾಡಿಕೊಡುವಂಥ (ಬ್ಯಾಸಿಕ್ಯೂಲ್‌) ಸೇತುವೆಯೊಂದರ ನಿರ್ಮಾಣಕಾರ್ಯಕ್ಕೆ ಸ್ಫೂರ್ತಿ ನೀಡಿತು. ಉಕ್ಕಿನ ಫ್ರೇಮ್‌ಗಳಿಗೆ ಕಲ್ಲುಕಟ್ಟಡಗಳ ಮೇಲ್ಮೈ ಹೊದಿಸುವ ನವೀನ ನಿರ್ಮಾಣ ಕೌಶಲ್ಯಗಳಿಂದ ವಿನ್ಯಾಸಿಸಲಾದ ಸುಪ್ರಸಿದ್ಧವಾಗಿರುವ ಟವರ್‌ ಬ್ರಿಜ್‌ ಜೋನ್ಸ್‌ ತಂಡದವರ ನಕ್ಷೆಬಿಡಿಸುವ ಹಲಗೆಯಲ್ಲಿ ಹೀಗೆ ರೂಪುಪಡೆಯಿತು.

ಟವರ್‌ ಬ್ರಿಜ್‌ ಎರಡು ಮುಖ್ಯ ಗೋಪುರಗಳನ್ನು ಹೊಂದಿದೆ. ಎತ್ತರದಲ್ಲಿರುವ ಎರಡು ಕಾಲುದಾರಿಗಳಿಂದ ಈ ಗೋಪುರಗಳು ಜೋಡಿಸಲ್ಪಟ್ಟಿದೆ. ಈ ಕಾಲುದಾರಿಗಳು ನದಿಯ ನೀರಿನ ಸರಾಸರಿ ಗರಿಷ್ಠಮಟ್ಟದಿಂದ ಸುಮಾರು 139 ಅಡಿ ಎತ್ತರದಲ್ಲಿಯೂ ಸೇತುವೆಯ ರಸ್ತೆಮಟ್ಟದಿಂದ ಸುಮಾರು 110 ಅಡಿ ಎತ್ತರದಲ್ಲಿಯೂ ಇವೆ. ಸೇತುವೆಯ ಮಧ್ಯಭಾಗವು ಬೇರ್ಪಟ್ಟು ಆ ಎರಡು ಭಾಗಗಳನ್ನು ಮೇಲೆಕ್ಕೆತ್ತಬಹುದು. ಸೇತುವೆಯ ಈ ಒಂದೊಂದು ದೈತ್ಯಾಕಾರದ ಭಾಗವು ಸುಮಾರು 1,200 ಟನ್‌ಗಳಷ್ಟು ಭಾರವಾಗಿದೆ ಮತ್ತು ಒಂದರಿಂದೊಂದು ಬೇರ್ಪಟ್ಟು 86 ಡಿಗ್ರಿ ಕೋನದಲ್ಲಿ ಮೇಲಕ್ಕೆ ಎತ್ತಿಕೊಳ್ಳುತ್ತವೆ. ಇದರ ಕೆಳಗೆ 10,000 ಟನ್‌ ತೂಕವುಳ್ಳ ಭಾರಿ ಹಡಗುಗಳು ಸುರಕ್ಷಿತವಾಗಿ ಸಾಗಬಲ್ಲವು.

ಸೇತುವೆಯ ಕಾರ್ಯನಿರ್ವಹಣೆಗೆ ಶಕ್ತಿ

ಸೇತುವೆಯ ಎರಡು ಭಾಗಗಳನ್ನು ಮೇಲಕ್ಕೆತ್ತುವಂತೆ ಮಾಡುತ್ತಿದ್ದದ್ದು ಜಲಶಕ್ತಿ (ಹೈಡ್ರಾಲಿಕ್‌). ಜನರನ್ನು ರಸ್ತೆಯ ಮಟ್ಟದಿಂದ ಕಾಲುದಾರಿಗೆ ಕೊಂಡೊಯ್ಯುವ ಲಿಫ್ಟನ್ನೂ ಚಲಿಸುವಂತೆ ಮಾಡುತ್ತಿದ್ದದ್ದು ಈ ಶಕ್ತಿಯೇ. ಅಷ್ಟುಮಾತ್ರವಲ್ಲ ಸಂಚಾರ ನಿಯಂತ್ರಣದ ಸಿಗ್ನಲ್‌ಗಳು ಇದರಿಂದಲೇ ಕಾರ್ಯವೆಸಗುತ್ತಿದ್ದವು. ಹೌದು, ಈ ಸೇತುವೆಯ ಕಾರ್ಯನಿರ್ವಹಣೆಗೆ ನೀರನ್ನು ಉಪಯೋಗಿಸಲಾಗುತ್ತಿತ್ತು! ಇದು ಆವಶ್ಯವಿದ್ದದಕ್ಕಿಂತಲೂ ಎರಡು ಪಟ್ಟು ಅತ್ಯಧಿಕ ಶಕ್ತಿಯನ್ನು ಒದಗಿಸಿತು.

ಸೇತುವೆಯ ಕೆಳಗೆ ದಕ್ಷಿಣ ದಿಕ್ಕಿನ ಕೊನೆಯಲ್ಲಿ ಕಲ್ಲಿದ್ದಲನ್ನು ಬಳಸಿ ನೀರನ್ನು ಕುದಿಸುವ ನಾಲ್ಕು ಬಾಯ್ಲರ್‌ಗಳನ್ನು ಅಳವಡಿಸಲಾಗಿತ್ತು. ಆ ಬಾಯ್ಲರ್‌ಗಳು ಚದರ ಸೆಂಟಿಮೀಟರ್‌ಗೆ ಐದರಿಂದ ಆರು ಕಿಲೋಗ್ರಾಮ್‌ಗಳಷ್ಟು ಭಾರೀ ಒತ್ತಡವುಳ್ಳ ನೀರಾವಿ ಹಬೆಯನ್ನು ಉತ್ಪಾದಿಸಿ ಎರಡು ಭಾರಿಗಾತ್ರದ ಪಂಪ್‌ಗಳು ಕಾರ್ಯವೆಸಗುವಂತೆ ಶಕ್ತಿಯನ್ನು ಒದಗಿಸುತ್ತಿದ್ದವು. ಈ ಪಂಪ್‌ಗಳು ಒಂದು ಚದರ ಸೆಂಟಿಮೀಟರ್‌ಗೆ 60 ಕಿಲೋಗ್ರಾಮ್‌ ಒತ್ತಡದಿಂದ ನೀರನ್ನು ಸರಬರಾಜು ಮಾಡಿದವು. ಈ ಅಧಿಕ ಒತ್ತಡದ ನೀರನ್ನು ಆರು ಶೇಖರಣ ಕೋಶಗಳಲ್ಲಿ ಶೇಖರಿಸಲಾಗುತ್ತಿತ್ತು. ಇದು ಸೇತುವೆಯ ಎರಡು ಭಾಗಗಳನ್ನು ಎತ್ತುವುದಕ್ಕಾಗಿ ಬೇಕಾದ ಶಕ್ತಿಯನ್ನು ನಿರಂತರವಾಗಿ ಉಳಿಸಿಕೊಳ್ಳಲು ಸಹಾಯಮಾಡಿತು. ಈ ಶೇಖರಣ ಕೋಶಗಳು ಸೇತುವೆಯನ್ನು ಎತ್ತುವ ಎಂಟು ಇಂಜಿನ್‌ಗಳು ಕೆಲಸಮಾಡುವಂತೆ ಶಕ್ತಿಯನ್ನು ಒದಗಿಸಿದವು. ಒಮ್ಮೆ ಶಕ್ತಿಯನ್ನು ಚಾಲನೆ ಮಾಡಿದ್ದಲ್ಲಿ ಸೇತುವೆಯ ಪ್ರತಿಭಾರವಿರುವ ಭಾಗಗಳು 21 ಇಂಚು ಸುತ್ತಳತೆಯ ಶಾಫ್ಟ್‌ನಲ್ಲಿ ತಿರುಗುತ್ತಾ ಮೇಲಕ್ಕೆತ್ತಲ್ಪಡುತ್ತಿದ್ದವು. ಇವು ಸಂಪೂರ್ಣವಾಗಿ ಮೇಲಕ್ಕೆತ್ತಲ್ಪಡಲು ಬರೀ ಒಂದು ನಿಮಿಷವಷ್ಟೇ ಸಾಕಾಗಿತ್ತು.

ನವೀನ ಟವರ್‌ ಬ್ರಿಜ್‌ಗೆ ಒಂದು ಭೇಟಿ

ಆಧುನಿಕ ದಿನಗಳಲ್ಲಿ ವಿದ್ಯುಚ್ಛಕ್ತಿಯು ಹಬೆಶಕ್ತಿಯ ಸ್ಥಾನವನ್ನು ಆಕ್ರಮಿಸಿದೆ. ಆದರೆ ಹಿಂದಿನ ದಿನಗಳಂತೆ ಈಗಲೂ ಟವರ್‌ ಬ್ರಿಜ್‌ ತೆರೆಯುವಾಗ ರಸ್ತೆ ಸಂಚಾರ ಸ್ತಗಿತಗೊಳ್ಳುತ್ತದೆ. ದಾರಿಹೋಕರು, ಪ್ರವಾಸಿಗರು ಮತ್ತಿತರ ಸಂದರ್ಶಕರು ಸೇತುವೆಯ ಕಾರ್ಯವೈಖರಿಯನ್ನು ನೋಡಿ ಬೆರಗಾಗುತ್ತಾರೆ.

ಎಚ್ಚರಿಕೆಯ ಗಂಟೆ ಮೊಳಗುತ್ತದೆ. ವಾಹನಸಂಚಾರವನ್ನು ಸ್ತಗಿತಗೊಳಿಸುವ ರಸ್ತೆತಡೆಗಳು ಕೆಳಗಿಳಿಯುತ್ತವೆ. ಕೊನೆಯ ವಾಹನವು ದಾಟುತ್ತದೆ. ಸೇತುವೆ ನಿಯಂತ್ರಕರು ಸೇತುವೆಯಲ್ಲಿ ಯಾವುದೇ ವಾಹನಗಳಿಲ್ಲವೆಂದು ಸೂಚನೆ ಕೊಡುತ್ತಾರೆ. ಸೇತುವೆಯ ಎರಡು ಭಾಗಗಳನ್ನು ಜೋಡಿಸಿರುವ ನಾಲ್ಕು ಬೋಲ್ಟ್‌ಗಳು ನಿಶ್ಯಬ್ಧವಾಗಿ ಕಳಚಿಕೊಳ್ಳುತ್ತವೆ. ಆ ಎರಡು ಭಾಗಗಳು ಬಾನಿನೆಡೆಗೆ ಎತ್ತಿಕೊಳ್ಳುತ್ತವೆ. ಈಗ ಎಲ್ಲರ ಗಮನವು ನದಿಯ ಕಡೆಗೆ ಹರಿಯುತ್ತದೆ. ಜಗ್ಗುದೋಣಿಯಾಗಲಿ ವಿಹಾರ ನೌಕೆಗಳಾಗಲಿ ಇಲ್ಲವೆ ಹಡಗೇ ಆಗಲಿ ಹಾದುಹೋಗುವ ರಮಣೀಯ ದೃಶ್ಯದಿಂದ ಯಾರು ದೃಷ್ಟಿ ತೆಗೆಯರು. ನಿಮಿಷಗಳ ನಂತರ ಸಿಗ್ನಲ್‌ಗಳು ಬದಲಾಗುತ್ತವೆ. ಮೇಲಕ್ಕೆತ್ತಿರುವ ಸೇತುವೆಯ ಭಾಗಗಳು ಕೆಳಗಿಳಿಯುತ್ತವೆ. ರಸ್ತೆತಡೆಗಳು ಮೇಲೇಳುತ್ತವೆ. ನಿಂತಿರುವ ಎಲ್ಲ ವಾಹನಗಳಿಗಿಂತಲೂ ಮುಂದಾಗಿ ಸೈಕಲ್‌ ಸವಾರರು ಮೊದಲು ದಾಟುತ್ತಾರೆ. ಕ್ಷಣಗಳ ನಂತರ, ತನ್ನ ಮುಂದಿನ ಸರದಿ ಬರುವ ವರೆಗೆ ಟವರ್‌ ಬ್ರಿಜ್‌ ಹಾಗೆಯೇ ಸ್ತಬ್ಧವಾಗಿಬಿಡುತ್ತದೆ.

ಕುತೂಹಲವುಳ್ಳ ಸಂದರ್ಶಕನೊಬ್ಬನು ಮತ್ತೆ ಮತ್ತೆ ಪುನರಾವರ್ತಿಸುವ ಈ ಸಂಭವಗಳನ್ನು ವೀಕ್ಷಿಸಿ ಅಷ್ಟಕ್ಕೆ ತೃಪ್ತಿಪಟ್ಟುಕೊಳ್ಳುವುದಿಲ್ಲ. ಇತರರೊಂದಿಗೆ ಅವನು ಲಿಫ್ಟನ್ನೇರಿ ಉತ್ತರ ಗೋಪುರದ ಮೇಲಂತಸ್ತಿಗೆ ಹೋಗುತ್ತಾನೆ. ಅಲ್ಲಿ “ಟವರ್‌ ಬ್ರಿಜ್‌ನ ಅನುಭವ” ಎಂಬ ವಸ್ತುಪ್ರದರ್ಶನದಲ್ಲಿ ಸೇತುವೆಯ ಇತಿಹಾಸದ ವಿವರಗಳು ಹಾಗೂ ಸೇತುವೆಯ ಸಣ್ಣ ಮಾದರಿಯೊಂದು ಚಲಿಸುವುದನ್ನು ನೋಡಿ ಮೂಕವಿಸ್ಮಿತನಾಗುತ್ತಾನೆ. ನಿರ್ಮಾಣ ವಿಜ್ಞಾನದ ಚಮತ್ಕಾರಗಳು ಮತ್ತು ಪ್ರಾರಂಭೋತ್ಸವ ಸಮಾರಂಭದ ವಿಜೃಂಭನೆಯನ್ನು ಕಲಾಕಾರರ ವರ್ಣಚಿತ್ರಗಳಲ್ಲಿ ಪ್ರದರ್ಶಿಸಲಾಗಿದೆ. ಚುಕ್ಕೆಗಳುಳ್ಳ ಗಾಢಕಂದುಬಣ್ಣದ ಚಿತ್ರಗಳು ಮತ್ತು ದೃಶ್ಯ ಫಲಕಗಳು ಟವರ್‌ ಬ್ರಿಜ್‌ನ ಬೆರಗುಗೊಳಿಸುವ ವಿಷಯಗಳ ಮೇಲೆ ಬೆಳಕನ್ನು ಚೆಲ್ಲುತ್ತವೆ.

ಸೇತುವೆಯ ಅತಿ ಎತ್ತರಕ್ಕಿರುವ ಕಾಲುದಾರಿಗಳು, ಲಂಡನಿನ ಉನ್ನತ ಸೌಧಗಳ ರಮಣೀಯ ದೃಶ್ಯಗಳನ್ನು ಆನಂದಿಸಲು ಸಂದರ್ಶಕರಿಗೆ ಅನುವುಮಾಡಿಕೊಡುತ್ತವೆ. ಪಶ್ಚಿಮ ದಿಕ್ಕಿನ ಕಡೆಗೆ ದೃಷ್ಟಿ ಹಾಯಿಸುವಲ್ಲಿ ಸೆಂಟ್‌ ಪೌಲ್ಸ್‌ ಕತೀಡ್ರಲ್‌ ಮತ್ತು ಜಿಲ್ಲಾ ಹಣಕಾಸು ಕಛೇರಿಗಳ ಕಟ್ಟಡಗಳು ಕಾಣುತ್ತವೆ. ಸ್ವಲ್ಪ ದೂರದಲ್ಲಿ ಅಂಚೆ ಕಛೇರಿಯ ಗೋಪುರವು ನಿಂತಿದೆ. ಪೂರ್ವದಿಕ್ಕಿನಲ್ಲಿ ಸರಕು ಹಡಗುಗಳು ಕಾಣಿಸುವುದೆಂದು ಒಬ್ಬನು ಎದುರುನೋಡಬಹುದು. ಆದರೆ ಅದನ್ನು ಮುಖ್ಯ ಪಟ್ಟಣದಿಂದ ಬಹುದೂರಕ್ಕೆ ಸ್ಥಳಾಂತರಿಸಲಾಗಿದೆ. ಇದಕ್ಕೆ ಬದಲಾಗಿ ಅಲ್ಲಿ ಡಾಕ್‌ಲ್ಯಾಂಡ್‌ ಎಂಬ ಪುನರ್‌ನಿರ್ಮಾಣ ನಗರದ ಮನರಂಜಿತ ವಿನ್ಯಾಸವುಳ್ಳ ನವೀನ ಕಟ್ಟಡಗಳು ಎದ್ದುನಿಂತಿವೆ. ಹೌದು, ಲಂಡನಿನ ಹೆಗ್ಗುರುತಾಗಿರುವ ಈ ಸುಪ್ರಸಿದ್ಧ ಟವರ್‌ನಿಂದ ಕಾಣಬರುವ ವಿಹಂಗಮ ದೃಶ್ಯವನ್ನು ಕಣ್ಣಿಗೆ ರಾಚುವಂಥದ್ದು, ಮನಸೂರೆಗೊಳ್ಳುವಂಥದ್ದು, ಕುತೂಹಲ ಕೆರಳಿಸುವಂಥದ್ದು ಎಂದೆಲ್ಲ ಬಣ್ಣಿಸಿರುವುದು ಸೂಕ್ತವೇ ಸರಿ.

ನೀವು ಲಂಡನಿಗೆ ಭೇಟಿನೀಡುವಾಗ ಈ ಐತಿಹಾಸಿಕ ನಿರ್ಮಾಣಕೆಲಸವನ್ನು ಕೂಲಂಕಷವಾಗಿ ನೋಡಬಾರದೇಕೆ? ನಿಮ್ಮ ಈ ಭೇಟಿಯು ತಂತ್ರಜ್ಞಾನದ ಅಸಾಮಾನ್ಯ ಸಾಧನೆಯನ್ನು ಸದಾ ನಿಮ್ಮ ಮನಸ್ಸಿನಲ್ಲಿ ಅಚ್ಚೊತ್ತುವುದಂತೂ ನಿಶ್ಚಯ. (g 10/06)

[ಪುಟ 16ರಲ್ಲಿರುವ ಚಿತ್ರ]

ಹಿಂದೊಮ್ಮೆ ಇಂಜಿನ್‌ನ ಕಾರ್ಯನಿರ್ವಹಣೆಗೆ ನೆರವಾಗಿದ್ದ ಎರಡು ಹಬೆಚಾಲಿತ ಪಂಪುಗಳಲ್ಲಿ ಒಂದು

[ಕೃಪೆ]

Copyright Tower Bridge Exhibition

[ಪುಟ 16, 17ರಲ್ಲಿರುವ ಚಿತ್ರ]

ಒಂದು ನಿಮಿಷದೊಳಗೆ ಸಂಪೂರ್ಣವಾಗಿ ಮೇಲೆತ್ತಲ್ಪಟ್ಟಿರುವ ಸೇತುವೆಯ ಎರಡು ಭಾಗಗಳು

[ಕೃಪೆ]

©Alan Copson/Agency Jon Arnold Images/age fotostock

[ಪುಟ 15ರಲ್ಲಿರುವ ಚಿತ್ರ ಕೃಪೆ]

© Brian Lawrence/SuperStock