ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನನಗೆ ಇಷ್ಟೊಂದು ರೂಲ್ಸ್‌ ಯಾಕೆ?

ನನಗೆ ಇಷ್ಟೊಂದು ರೂಲ್ಸ್‌ ಯಾಕೆ?

ಯುವ ಜನರು ಪ್ರಶ್ನಿಸುವುದು . . .

ನನಗೆ ಇಷ್ಟೊಂದು ರೂಲ್ಸ್‌ ಯಾಕೆ?

“ರಾತ್ರಿ ನಾನು ಇಂತಿಷ್ಟು ಸಮಯದೊಳಗೆ ಮನೆಗೆ ಸೇರಬೇಕೆಂಬ ಕಟ್ಟುಪಾಡಿನಿಂದ ನನಗೆ ಕಿರಿಕಿರಿಯಾಗುತ್ತಿತ್ತು! ಬೇರೆಯವರು ನನಗಿಂತ ತಡವಾಗಿ ಮನೆಗೆ ಹೋದರೂ ಅವರ ಹೆತ್ತವರು ಏನೂ ಹೇಳುತ್ತಿರಲಿಲ್ಲ. ಇದರಿಂದಾಗಿ ನನಗೆ ಸಿಟ್ಟುಬರುತ್ತಿತ್ತು.”​​—⁠ ಆ್ಯಲೆನ್‌.

“ನನ್ನ ಮೊಬೈಲ್‌ಗೆ ಬರುವ ಪ್ರತಿಯೊಂದು ಕರೆಯನ್ನು ಚೆಕ್‌ ಮಾಡ್ತಾ ಇರುತ್ತಾರೆ. ನನಗೆ ಚಿಟ್ಟುಹಿಡಿದಂತಾಗುತ್ತದೆ! ನನ್ನನ್ನು ಈಗಲೂ ಒಂದು ಚಿಕ್ಕ ಮಗುವಿನಂತೆ ಉಪಚರಿಸುತ್ತಾರೆಂದು ನನಗನಿಸುತ್ತದೆ!”​​—⁠ ಎಲಿಸಬೇತ್‌.

ಮನೆಯಲ್ಲಿ ನಿಮ್ಮ ಮೇಲೆ ನಿರ್ಬಂಧಗಳ ಒಂದು ದೊಡ್ಡ ಹೊರೆಯನ್ನೇ ಹಾಕಲಾಗಿದೆಯೆಂದು ನಿಮಗನಿಸುತ್ತದೊ? ಯಾರಿಗೂ ಹೇಳದೆಕೇಳದೆ ಮನೆಯಿಂದ ಹೊರಹೋಗಲು ಇಲ್ಲವೆ ನೀವೇನು ಮಾಡಿದ್ದೀರೊ ಅದರ ಬಗ್ಗೆ ಅಪ್ಪಅಮ್ಮನಿಗೆ ಸುಳ್ಳುಹೇಳಲು ನಿಮಗೆಂದಾದರೂ ಮನಸ್ಸಾಗಿದೆಯೊ? ಹಾಗಿರುವಲ್ಲಿ, ನಿಮಗೂ ಈ ಒಬ್ಬ ಹದಿವಯಸ್ಕಳಿಗಿರುವಂಥ ಅನಿಸಿಕೆಗಳಿರಬಹುದು. ತನ್ನ ಹೆತ್ತವರು ಇಡೀ ದಿನ ತನ್ನ ಬೆನ್ನ ಹಿಂದೆಬಿದ್ದಿರುತ್ತಾರೆಂದು ಅವಳು ಹೇಳುತ್ತಾಳೆ. ‘ಅವರು ನನಗೆ ಒಂದಿಷ್ಟು ಸ್ವತಂತ್ರವನ್ನಾದರೂ ಕೊಡಬೇಕು!’ ಅನ್ನುತ್ತಾಳೆ ಆಕೆ.

ನೀವೇನು ಮಾಡಬೇಕು, ಏನು ಮಾಡಬಾರದೆಂಬುದರ ಬಗ್ಗೆ ನಿಮ್ಮ ಹೆತ್ತವರು ಯಾ ಪೋಷಕರು ರೂಲ್ಸ್‌ ಇಲ್ಲವೆ ಕಟ್ಟುಪಾಡನ್ನು ಇಡುತ್ತಾರೆ. ಇದರಲ್ಲಿ, ಹೋಮ್‌ವರ್ಕ್‌ ಬಗ್ಗೆ, ಮನೆಯಲ್ಲಿ ಮಾಡಬೇಕಾದ ಕೆಲಸಗಳ ಬಗ್ಗೆ, ಮತ್ತು ಎಷ್ಟು ಹೊತ್ತಿನೊಳಗೆ ಮನೆಸೇರಬೇಕೆಂಬುದರ ಬಗ್ಗೆ ಮಾತ್ರವಲ್ಲದೆ, ಫೋನ್‌, ಟಿ.ವಿ. ಇಲ್ಲವೆ ಕಂಪ್ಯೂಟರ್‌ ಬಳಕೆಯ ಕುರಿತಾದ ನಿರ್ಬಂಧಗಳು ಸೇರಿರಬಹುದು. ಮನೆಯಾಚೆಗೂ ಅಂದರೆ, ಶಾಲೆಯಲ್ಲಿ ನಿಮ್ಮ ನಡವಳಿಕೆ ಹೇಗಿರಬೇಕು ಮತ್ತು ಯಾವ ರೀತಿಯ ಫ್ರೆಂಡ್ಸ್‌ಗಳನ್ನು ಆರಿಸಬೇಕು ಎಂಬುದರ ಬಗ್ಗೆಯೂ ಅವರು ರೂಲ್ಸ್‌ ಮಾಡಿರಬಹುದು.

ಆದರೆ ಅನೇಕ ಯುವಜನರು ಎಷ್ಟೇ ಮಾಡಿದರೂ, ಹೆತ್ತವರು ಹಾಕಿರುವ ರೂಲ್ಸ್‌ ಅನ್ನು ಕೊನೆಗೆ ಮುರಿದುಬಿಡುತ್ತಾರೆ. ಒಂದು ಸಮೀಕ್ಷೆಯಲ್ಲಿ ಇಂಟರ್‌ವ್ಯೂ ಮಾಡಲ್ಪಟ್ಟ ಮೂರರಲ್ಲಿ ಎರಡಾಂಶ ತರುಣತರುಣಿಯರು, ಮನೆಯಲ್ಲಿನ ರೂಲ್ಸ್‌ ಅನ್ನು ಮುರಿದದ್ದಕ್ಕಾಗಿಯೇ ತಮಗೆ ಹೆಚ್ಚಾಗಿ ಶಿಕ್ಷೆ ಸಿಕ್ಕಿದೆಯೆಂದು ಹೇಳಿದರು.

ಹೀಗಿದ್ದರೂ, ರೂಲ್ಸೇ ಇಲ್ಲದಿದ್ದರೆ ಎಲ್ಲವೂ ಯದ್ವಾತದ್ವಾ ನಡೆಯುತ್ತಿತ್ತೆಂದು ಹೆಚ್ಚಿನ ಯುವಜನರು ಒಪ್ಪಿಕೊಳ್ಳುತ್ತಾರೆ. ಆದರೆ ರೂಲ್ಸ್‌ ಅಷ್ಟೊಂದು ಅವಶ್ಯವಾಗಿರುವಲ್ಲಿ, ಅವುಗಳಲ್ಲಿ ಕೆಲವೊಂದು ತುಂಬ ಚಿಟ್ಟುಹಿಡಿಸುವುದೇಕೆ? ಮತ್ತು ಹೆತ್ತವರ ರೂಲ್ಸ್‌ ನಿಮ್ಮ ಉಸಿರುಗಟ್ಟಿಸುತ್ತಿವೆಯೆಂದು ಅನಿಸುತ್ತಿರುವಲ್ಲಿ, ನಿಮಗೆ ಸ್ವಲ್ಪ ಉಪಶಮನ ಹೇಗೆ ಸಿಗಬಲ್ಲದು?

“ನಾನು ಇನ್ನೂ ಚಿಕ್ಕ ಮಗುವಲ್ಲ”!

“ನಾನು ಇನ್ನೂ ಚಿಕ್ಕ ಮಗುವಲ್ಲ, ನನಗೀಗ ಸ್ವಲ್ಪ ಸ್ವತಂತ್ರ ಕೊಡಬೇಕೆಂದು ಅಪ್ಪಅಮ್ಮನಿಗೆ ಅರ್ಥಮಾಡಿಸುವುದು ಹೇಗೆ?” ಎಂದು ಎಮಿಲಿ ಎಂಬ ಹೆಸರಿನ ಹದಿವಯಸ್ಕಳು ಕೇಳುತ್ತಾಳೆ. ನಿಮಗೆಂದಾದರೂ ಹಾಗೆಯೇ ಅನಿಸಿದೆಯೊ? ಹೆತ್ತವರು ನಿಮ್ಮನ್ನು, ಏನೂ ಮಾಡಲಾಗದ ಒಂದು ಕೂಸಿನಂತೆ ಉಪಚರಿಸುವುದರಿಂದ, ಎಮಿಲಿಯಂತೆ ನಿಮಗೂ ಹೆತ್ತವರ ರೂಲ್ಸ್‌ ಬಗ್ಗೆ ಕಿರಿಕಿರಿಯಾಗುತ್ತಿರಬಹುದು. ಆದರೆ, ನಿಮ್ಮ ಹೆತ್ತವರು ಬೇರೆ ರೀತಿಯಲ್ಲಿ ಯೋಚಿಸುತ್ತಿದ್ದಾರೆ. ನಿಮ್ಮ ಸಂರಕ್ಷಣೆಗಾಗಿ ಮತ್ತು ಪ್ರೌಢಾವಸ್ಥೆಯ ಜವಾಬ್ದಾರಿಗಳಿಗಾಗಿ ನಿಮ್ಮನ್ನು ಸಜ್ಜುಗೊಳಿಸಲು ಅವರ ರೂಲ್ಸ್‌ ಅತ್ಯಾವಶ್ಯಕವೆಂಬುದು ಅವರ ಎಣಿಕೆ.

ನಿಮಗೆ ಸ್ವಲ್ಪಮಟ್ಟಿಗಿನ ಸ್ವತಂತ್ರವಿರುವುದಾದರೂ, ನೀವು ದೊಡ್ಡವರಾಗುತ್ತಾ ಹೋದಂತೆ ಮನೆಯಲ್ಲಿನ ರೂಲ್ಸ್‌ ಅನ್ನು ನಿಮ್ಮ ಪ್ರಾಯಕ್ಕೆ ತಕ್ಕಂತೆ ಹೊಂದಿಸಲಾಗಿಲ್ಲ ಎಂದು ನಿಮಗನಿಸುತ್ತಿರಬಹುದು. ಅಲ್ಲದೆ, ನಿಮ್ಮ ಒಡಹುಟ್ಟಿದವರಿಗೆ ನಿಮಗಿಂತ ಹೆಚ್ಚು ಸ್ವಾತಂತ್ರ್ಯ ಕೊಡಲಾಗಿದೆ ಎಂದು ತೋರುವಾಗ ನಿಮ್ಮ ಹೊಟ್ಟೆ ಉರಿಯಬಹುದು. ಮಾರ್ಸಿ ಎಂಬ ಯುವತಿ ಹೇಳುವುದು: “ನನಗೀಗ 17 ವರ್ಷ ಪ್ರಾಯ. ಪ್ರತಿದಿನ ಬೇಗ ಮನೆ ಸೇರಬೇಕೆಂಬುವುದು ನನ್ನ ಹೆತ್ತವರ ಕಟ್ಟುಪಾಡು. ನಾನು ಏನೇ ತಪ್ಪು ಮಾಡಿದರೂ, ಮನೆಯಿಂದ ಹೊರಗೆ ಕಾಲಿಡಬಾರದೆಂಬ ಶಿಕ್ಷೆ ನನಗೆ ಸಿಗುತ್ತದೆ. ಆದರೆ ನನ್ನ ಅಣ್ಣ ನನ್ನ ಪ್ರಾಯದವನಾಗಿದ್ದಾಗ, ಅವನು ಯಾವಾಗ ಬೇಕಾದರೂ ಮನೆಸೇರಬಹುದಾಗಿತ್ತು. ಮತ್ತು ಮನೆಯಿಂದ ಹೊರಗೆ ಕಾಲಿಡಬಾರದೆಂಬ ಶಿಕ್ಷೆ ಅವನಿಗೆಂದೂ ಸಿಗಲೇ ಇಲ್ಲ.” ಮಾಥ್ಯೂ ಎಂಬವನು ತನ್ನ ಹದಿವಯಸ್ಸಿನ ಕಾಲವನ್ನು ಜ್ಞಾಪಿಸಿಕೊಳ್ಳುತ್ತಾ, ತನ್ನ ತಂಗಿ ಹಾಗೂ ಅತ್ತೆಮಕ್ಕಳ ಕುರಿತಾಗಿ ಹೇಳುವುದು: “ಈ ಹುಡುಗಿಯರು ಏನೇ ಮಾಡಿದರೂ ಅವರಿಗೆ ಶಿಕ್ಷೆಯೇ ಸಿಗುತ್ತಿರಲಿಲ್ಲ.”

ರೂಲ್ಸ್‌ ಇಲ್ಲದಿದ್ದರೆ ಒಳ್ಳೇದಾಗುತ್ತಿತ್ತೊ?

ಹೆತ್ತವರ ಅಧಿಕಾರದಿಂದ ಸ್ವತಂತ್ರವಾದ ಜೀವನಕ್ಕಾಗಿ ನೀವು ಹಾತೊರೆಯುತ್ತಿರುವುದು, ಅರ್ಥಮಾಡಿಕೊಳ್ಳಬಹುದಾದ ಸಂಗತಿಯಾಗಿದೆ. ಆದರೆ ಅವರ ಕಟ್ಟುಪಾಡುಗಳಿಲ್ಲದೆ ನಿಮಗೆ ಒಳ್ಳೇದಾಗುತ್ತಿತ್ತೊ? ನಿಮ್ಮ ವಯಸ್ಸಿನವರು, ರಾತ್ರಿ ತಮಗೆ ಇಷ್ಟಬಂದ ಸಮಯಕ್ಕೆ ಮನೆಗೆ ಹೋಗುವುದು, ತಮಗೆ ಬೇಕಾದ ಉಡುಪನ್ನು ಧರಿಸುವುದು, ಮತ್ತು ತಮ್ಮ ಮಿತ್ರರೊಂದಿಗೆ ಬೇಕಾದಲ್ಲಿಗೆ ಮನಬಂದಂತೆ ಎಷ್ಟೇ ಹೊತ್ತಿನಲ್ಲಿ ಹೋಗುತ್ತಿರುವುದರ ಬಗ್ಗೆ ಬಹುಶಃ ನಿಮಗೆ ಗೊತ್ತಿರಬಹುದು. ಅವರು ಹೀಗಿರಲು ಒಂದು ಕಾರಣ, ಅವರ ಹೆತ್ತವರು ತಮ್ಮ ಮಕ್ಕಳೇನು ಮಾಡುತ್ತಿದ್ದಾರೆಂಬುದನ್ನು ನೋಡಲಾಗದಷ್ಟು ಕಾರ್ಯಮಗ್ನರಾಗಿರುವುದೇ ಆಗಿರಬಹುದು. ಏನೇ ಆಗಿರಲಿ, ಮಕ್ಕಳನ್ನು ಈ ವಿಧದಲ್ಲಿ ಬೆಳೆಸುವುದು ಒಳಿತನ್ನು ತಂದಿಲ್ಲ. (ಜ್ಞಾನೋಕ್ತಿ 29:15) ಲೋಕದಲ್ಲಿ ನೀವು ನೋಡುತ್ತಿರುವ ಪ್ರೀತಿಯ ಕೊರತೆಗೆ ಒಂದು ಮುಖ್ಯ ಕಾರಣವೇನೆಂದರೆ, ಲೋಕದಲ್ಲಿ ಸ್ವಾರ್ಥ ಜನರೇ ತುಂಬಿಕೊಂಡಿದ್ದಾರೆ ಮತ್ತು ಇವರಲ್ಲಿ ಹೆಚ್ಚಿನವರು ಯಾವುದೇ ಕಟ್ಟುಪಾಡಿಲ್ಲದಿದ್ದ ಮನೆತನಗಳಲ್ಲಿ ಬೆಳೆದವರಾಗಿದ್ದಾರೆ.​—⁠2 ತಿಮೊಥೆಯ 3:​1-5.

ರೂಲ್ಸ್‌ ಇಲ್ಲದಿದ್ದ ಮನೆಯ ಬಗ್ಗೆ ಮುಂದೊಂದು ದಿನ ನಿಮ್ಮ ಅಭಿಪ್ರಾಯ ಬದಲಾಗಬಹುದು. ಉದಾಹರಣೆಗೆ, ತೀರ ಕಡಿಮೆ ರೂಲ್ಸ್‌ ಇದ್ದ ಮತ್ತು ತಂದೆತಾಯಿಗಳ ನಿಗಾ ಇಲ್ಲದಿದ್ದ ಮನೆಗಳಲ್ಲಿ ಬೆಳೆದ ಯುವತಿಯರ ಒಂದು ಸಮೀಕ್ಷೆಯನ್ನು ಪರಿಗಣಿಸಿರಿ. ತಮ್ಮ ಜೀವನದ ಮೇಲೆ ಅವರು ಹಿನ್ನೋಟ ಬೀರುವಾಗ, ತಮಗೆ ಶಿಕ್ಷೆ ಕೊಡಲಾಗಲಿಲ್ಲ ಎಂಬ ವಿಷಯದ ಕುರಿತು ಅವರಲ್ಲಿ ಯಾರಿಗೂ ಸಕಾರಾತ್ಮಕ ಅಭಿಪ್ರಾಯವಿರಲಿಲ್ಲ. ಅದರ ಬದಲು, ಹೆತ್ತವರಿಗೆ ತಮ್ಮ ಬಗ್ಗೆ ಚಿಂತೆ ಇರಲಿಲ್ಲ ಇಲ್ಲವೆ ಅವರಿಗೆ ಮಕ್ಕಳನ್ನು ನೋಡಿಕೊಳ್ಳುವ ಸಾಮರ್ಥ್ಯವಿರಲಿಲ್ಲ ಎಂಬುದಕ್ಕೆ ಅದು ರುಜುವಾತಾಗಿತ್ತೆಂದು ಅವರು ಪರಿಗಣಿಸಿದರು.

ಮನಸ್ಸಿಗೆ ಬಂದಂತೆ ಮಾಡಲು ಬಿಟ್ಟುಬಿಡಲ್ಪಟ್ಟ ಯುವಜನರ ಬಗ್ಗೆ ಅಸೂಯೆಪಡುವುದರ ಬದಲು, ನಿಮ್ಮ ಹೆತ್ತವರು ಮಾಡುವ ರೂಲ್ಸ್‌ ನಿಮ್ಮ ಮೇಲೆ ಅವರಿಗಿರುವ ಪ್ರೀತಿ ಹಾಗೂ ಕಳಕಳಿಯ ಪುರಾವೆಯಾಗಿದೆ ಎಂದು ವೀಕ್ಷಿಸಲು ಪ್ರಯತ್ನಿಸಿರಿ. ನ್ಯಾಯಸಮ್ಮತ ಮಿತಿಗಳನ್ನಿಡುವುದರ ಮೂಲಕ ಅವರು ಯೆಹೋವ ದೇವರನ್ನು ಅನುಕರಿಸುತ್ತಿದ್ದಾರೆ. ಯೆಹೋವನು ತನ್ನ ಜನರಿಗೆ ಹೇಳುವುದು: “ನಿನ್ನನ್ನು ಉಪದೇಶಿಸಿ ನಡೆಯಬೇಕಾದ ಮಾರ್ಗವನ್ನು ತಿಳಿಸುವೆನು; ನಿನ್ನನ್ನು ಕಟಾಕ್ಷಿಸಿ ಆಲೋಚನೆಹೇಳುವೆನು.”​—⁠ಕೀರ್ತನೆ 32:⁠8.

ಆದರೆ ಸದ್ಯಕ್ಕೆ ಈ ರೂಲ್ಸ್‌ ನಿಮಗೆ ಹೊರಲಾಗದಷ್ಟು ಭಾರವಾಗಿವೆ ಎಂದು ತೋರಬಹುದು. ಹಾಗಿದ್ದರೆ, ನಿಮ್ಮ ಮನೆಯಲ್ಲಿನ ಜೀವನವನ್ನು ಇನ್ನಷ್ಟು ಹಿತಕರವಾಗಿ ಮಾಡಲು ನೀವು ತೆಗೆದುಕೊಳ್ಳಬಹುದಾದ ಕೆಲವೊಂದು ಪ್ರಾಯೋಗಿಕ ಹೆಜ್ಜೆಗಳನ್ನು ಪರಿಗಣಿಸಿರಿ.

ಉತ್ತಮ ಫಲಿತಾಂಶಗಳನ್ನು ತರುವ ಸಂವಾದ

ನಿಮಗೆ ಹೆಚ್ಚು ಸ್ವಾತಂತ್ರ್ಯ ಬೇಕಾಗಿರಲಿ ಇಲ್ಲವೆ ನಿಮಗೆ ಈಗಾಗಲೇ ಇರುವ ಸ್ವಾತಂತ್ರ್ಯದಲ್ಲಿ ಸಂತೋಷದಿಂದಿರಲು ನೀವು ಬಯಸುತ್ತಿರಲಿ, ಪರಿಣಾಮಕಾರಿ ಸಂವಾದವೇ ಇದರ ಕೀಲಿಕೈ ಆಗಿದೆ. ‘ಆದರೆ ನನ್ನ ಹೆತ್ತವರೊಂದಿಗೆ ಮಾತಾಡಲು ಪ್ರಯತ್ನಿಸಿದ್ದೇನೆ; ಅದರಿಂದ ಯಾವುದೇ ಪ್ರಯೋಜನವಿಲ್ಲ!’ ಎಂದು ಕೆಲವರು ಹೇಳಬಹುದು. ನಿಮಗೂ ಹಾಗೇ ಅನಿಸುತ್ತಿರುವಲ್ಲಿ, ಹೀಗೆ ಕೇಳಿಕೊಳ್ಳಿ: ‘ನನ್ನ ಸಂವಾದದ ಕೌಶಲಗಳನ್ನು ಉತ್ತಮಗೊಳಿಸಲು ನಾನು ಏನನ್ನಾದರೂ ಮಾಡಬಹುದೊ?’ ಸಂವಾದವು, (1) ನಿಮಗೆ ಬೇಕಾದದ್ದನ್ನು ಪಡೆಯಲು ಇಲ್ಲವೆ (2) ನಿಮ್ಮ ಬೇಡಿಕೆಗಳನ್ನು ಏಕೆ ನಿರಾಕರಿಸಲಾಗುತ್ತಿದೆ ಎಂಬುದನ್ನು ಹೆಚ್ಚು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಸಹಾಯಮಾಡುವ ಒಂದು ಪ್ರಮುಖ ಸಾಧನವಾಗಿದೆ. ವಯಸ್ಕರಿಗಿರುವ ಸ್ವಾತಂತ್ರ್ಯ ನಿಮಗೂ ಸಿಗಬೇಕಾದರೆ, ನೀವು ಪ್ರೌಢ ರೀತಿಯಲ್ಲಿ ಸಂವಾದಮಾಡುವ ಕೌಶಲಗಳನ್ನು ವಿಕಸಿಸಿಕೊಳ್ಳಬೇಕೆಂಬುದು ಸಮಂಜಸ.

ಭಾವನೆಗಳನ್ನು ಹಿಡಿತದಲ್ಲಿಟ್ಟುಕೊಳ್ಳಲು ಕಲಿಯಿರಿ. ಬೈಬಲ್‌ ಹೇಳುವುದು: “ಮೂಢನು ತನ್ನ ಕೋಪವನ್ನೆಲ್ಲಾ ತೋರಿಸುವನು; ಜ್ಞಾನಿಯು ತನ್ನ ಕೋಪವನ್ನು ತಡೆದು ಶಮನಪಡಿಸಿಕೊಳ್ಳುವನು.” (ಜ್ಞಾನೋಕ್ತಿ 29:11) ಒಳ್ಳೇ ಸಂವಾದ ಅಂದರೆ, ಕೇವಲ ದೂರುಗಳನ್ನು ಹೇಳುತ್ತಾ ಇರುವುದಲ್ಲ. ಹೀಗೆ ಮಾಡಿದರೆ, ನಿಮಗೆ ಪುನಃ ಇನ್ನೊಂದು ಭಾಷಣ ಬಿಗಿಯಲಾಗುವುದು ಅಷ್ಟೇ! ಆದುದರಿಂದ ಗೋಳುಗರೆಯುವುದು, ಮುಖ ಗಂಟುಮಾಡಿಕೊಳ್ಳುವುದು ಮತ್ತು ಚಿಕ್ಕ ಮಕ್ಕಳಂತೆ ಕೂಗಾಟ-ರಂಪಾಟ ಮಾಡುವುದರಿಂದ ದೂರವಿರಿ. ನಿಮ್ಮ ಹೆತ್ತವರು ಯಾವುದಾದರೂ ನಿರ್ಬಂಧವನ್ನು ಹೇರುವಾಗ, ಸಿಟ್ಟಿನಿಂದ ಬಾಗಿಲನ್ನು ದಢಾರ್‌ ಎಂದು ಮುಚ್ಚಿಬಿಡುವುದು ಅಥವಾ ಕೈಗೆ ಸಿಕ್ಕಿದ್ದನ್ನು ಸಿಟ್ಟಿನಿಂದ ಅತ್ತಿತ್ತ ಬಿಸಾಡಲು ನಿಮಗೆ ತುಂಬ ಮನಸ್ಸಾದರೂ, ಒಂದು ವಿಷಯವನ್ನು ನೆನಪಿಡಿ: ನೀವು ಹಾಗೆ ನಡೆದುಕೊಂಡರೆ ಅದರಿಂದ ನಿಮ್ಮ ಮೇಲೆ ಇನ್ನೂ ಹೆಚ್ಚು ರೂಲ್ಸ್‌ಗಳನ್ನು ಹೇರಲಾಗುವುದು, ಅಷ್ಟೇ. ಹೆಚ್ಚು ಸ್ವಾತಂತ್ರ್ಯ ಸಿಗುವುದಂತೂ ದೂರದ ಮಾತಾಗಿಯೇ ಉಳಿಯುವುದು.

ಹೆತ್ತವರ ದೃಷ್ಟಿಕೋನದಿಂದ ನೋಡಲು ಪ್ರಯತ್ನಿಸಿರಿ. ಹೀಗೆ ಮಾಡುವುದು ಸಹಾಯಕಾರಿಯಾಗಿದೆ ಎಂಬುದನ್ನು, ಏಕ-ಹೆತ್ತವರಿರುವ ಕುಟುಂಬದಲ್ಲಿ ಬೆಳೆದ ಟ್ರೇಸಿ ಎಂಬ ಕ್ರೈಸ್ತ ಯುವತಿಯು ಕಂಡುಕೊಂಡಿದ್ದಾಳೆ. ಅವಳನ್ನುವುದು: “ನಾನು ನನ್ನನ್ನೇ ಹೀಗೆ ಕೇಳಿಕೊಳ್ಳುತ್ತೇನೆ: ನನಗಾಗಿ ರೂಲ್ಸ್‌ ಮಾಡುವುದರಿಂದ ನನ್ನ ತಾಯಿಗೇನು ಲಾಭ? ಇದನ್ನು ಅವರು ನನಗೋಸ್ಕರ, ನಾನು ಹೆಚ್ಚು ಉತ್ತಮ ವ್ಯಕ್ತಿಯಾಗಬೇಕೆಂದು ಮಾಡುತ್ತಿದ್ದಾರೆ ತಾನೇ?” (ಜ್ಞಾನೋಕ್ತಿ 3:​1, 2) ಹೀಗೆ, ನಿಮ್ಮ ಹೆತ್ತವರಿಗಿರುವ ಚಿಂತೆಗಳನ್ನು ನೀವು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರೆ, ನಿಮ್ಮ ದೃಷ್ಟಿಕೋನವನ್ನು ಹೆತ್ತವರಿಗೆ ಹೇಳಲು ನಿಮಗೆ ಸುಲಭವಾಗುವುದು. ಉದಾಹರಣೆಗೆ, ನೀವೊಂದು ವಿನೋದಕೂಟಕ್ಕೆ ಹೋಗುವಂತೆ ಅನುಮತಿಕೊಡಲು ಅವರು ಹಿಂದೆಮುಂದೆ ನೋಡುತ್ತಿದ್ದಾರೆಂದು ಇಟ್ಟುಕೊಳ್ಳಿ. ವಾದಿಸುವ ಬದಲು ನೀವು ಹೀಗೆ ಕೇಳಬಹುದು: “ಒಬ್ಬ ಪ್ರೌಢ, ಭರವಸಾರ್ಹ ಫ್ರೆಂಡ್‌ ಅನ್ನು ನನ್ನೊಟ್ಟಿಗೆ ಕರಕೊಂಡು ಹೋದರೆ ಹೇಗೆ?” ನಿಮ್ಮ ಹೆತ್ತವರು ನೀವು ಕೇಳಿದ್ದೆಲ್ಲದ್ದಕ್ಕೂ ಒಪ್ಪಿಗೆಕೊಡದೆ ಇರಬಹುದು. ಆದರೆ ನೀವು ಅವರ ಚಿಂತೆಗಳನ್ನು ಅರ್ಥಮಾಡಿಕೊಂಡರೆ, ಅವರು ಒಪ್ಪುವಂಥ ರೀತಿಯ ಆಯ್ಕೆಗಳನ್ನು ಅವರ ಮುಂದಿಡಲು ನಿಮಗೆ ಹೆಚ್ಚಿನ ಅವಕಾಶಗಳು ಸಿಗುವವು.

ಹೆತ್ತವರಿಗೆ ನಿಮ್ಮ ಮೇಲಿರುವ ಭರವಸೆಯನ್ನು ಹೆಚ್ಚಿಸಿರಿ. ನಿಮ್ಮ ಹೆತ್ತವರ ಭರವಸೆಯನ್ನು ಸಂಪಾದಿಸುವುದು, ಬ್ಯಾಂಕ್‌ ಅಕೌಂಟ್‌ನಲ್ಲಿ ಹಣ ಜಮಾಯಿಸುವ ಹಾಗಿದೆ. ಅಕೌಂಟ್‌ನಿಂದ ಹಣ ತೆಗೆಯಬೇಕಾದರೆ, ನೀವು ಮೊದಲು ಅದರಲ್ಲಿ ಹಣವನ್ನು ಜಮಾಯಿಸಿದ್ದಿರಬೇಕು. ಅಕೌಂಟ್‌ನಲ್ಲಿರುವುದಕ್ಕಿಂತಲೂ ಹೆಚ್ಚು ಹಣವನ್ನು ನೀವು ತೆಗೆದರೆ ದಂಡ ತೆರಬೇಕಾಗುತ್ತದೆ, ಮತ್ತು ಹೀಗೆ ಹಲವಾರು ಬಾರಿ ಮಾಡಿದರೆ ಕೆಲವೊಂದು ಕಡೆಗಳಲ್ಲಿ ಅಕೌಂಟನ್ನೇ ಮುಚ್ಚಿಬಿಡಲಾಗುತ್ತದೆ. ಅದೇ ರೀತಿಯಲ್ಲಿ, ಹೆಚ್ಚಿನ ಸ್ವಾತಂತ್ರ್ಯವನ್ನು ಪಡೆಯುವುದು ಅಕೌಂಟ್‌ನಿಂದ ಹಣ ತೆಗೆಯುವಂತಿದೆ. ಈ ಹಿಂದೆ ಜವಾಬ್ದಾರಿಯುತವಾಗಿ ನಡೆದುಕೊಂಡಿರುವ ದಾಖಲೆ ನಿಮಗಿರುವಲ್ಲಿ ಮಾತ್ರ ನಿಮಗೆ ಬೇಕಾದ ಸ್ವಾತಂತ್ರ್ಯ ಸಿಗುವುದು.

ನೀವೇನು ನಿರೀಕ್ಷಿಸುತ್ತೀರೊ ಅದು ವಾಸ್ತವಿಕವಾಗಿರಲಿ. ನೀವೇನು ಮಾಡುತ್ತೀರೊ ಅದರ ಮೇಲೆ ನ್ಯಾಯಸಮ್ಮತವಾದ ನಿಯಂತ್ರಣವನ್ನು ಇಡುವ ಜವಾಬ್ದಾರಿಯು ಹೆತ್ತವರಿಗಿದೆ. ಈ ಕಾರಣದಿಂದ ಬೈಬಲು, “ತಂದೆಯ ಆಜ್ಞೆ” ಮತ್ತು ‘ತಾಯಿಯ ಉಪದೇಶದ’ ಕುರಿತಾಗಿ ಮಾತಾಡುತ್ತದೆ. (ಜ್ಞಾನೋಕ್ತಿ 6:20) ಹಾಗಿದ್ದರೂ, ಹೆತ್ತವರ ರೂಲ್ಸ್‌ನಿಂದಾಗಿ ನಿಮ್ಮ ಜೀವನವೇ ಹಾಳಾಗಿಹೋಗುವುದೆಂದು ನೆನಸಬೇಡಿರಿ. ಅದರ ಬದಲು ನಿಮ್ಮ ಹೆತ್ತವರ ಅಧಿಕಾರಕ್ಕೆ ನೀವು ಅಧೀನರಾಗುವಲ್ಲಿ, ದೀರ್ಘಕಾಲದ ವರೆಗೆ ‘ನಿನಗೆ ಮೇಲಾಗುವುದು’ ಎಂದು ಯೆಹೋವನು ಮಾತುಕೊಡುತ್ತಾನೆ.​—⁠ಎಫೆಸ 6:​1-3. (g 12/06)

“ಯುವ ಜನರು ಪ್ರಶ್ನಿಸುವುದು . . . ” ಲೇಖನಮಾಲೆಯ ಹೆಚ್ಚಿನ ಲೇಖನಗಳನ್ನು www.watchtower.org/ype ವೆಬ್‌ಸೈಟ್‌ನಲ್ಲಿ ಕಂಡುಕೊಳ್ಳಬಹುದು

ಇದರ ಕುರಿತು ಯೋಚಿಸಿ

◼ ಯಾವ ರೂಲ್ಸ್‌ ಅನ್ನು ಪಾಲಿಸುವುದು ನಿಮಗೆ ತುಂಬ ಕಷ್ಟವೆಂದು ತೋರುತ್ತದೆ?

◼ ಹೆತ್ತವರ ರೂಲ್ಸ್‌ ಬಗ್ಗೆ ಸರಿಯಾದ ದೃಷ್ಟಿಕೋನವನ್ನಿಡಲು ಈ ಲೇಖನದಲ್ಲಿನ ಯಾವ ಅಂಶಗಳು ನಿಮಗೆ ಸಹಾಯಮಾಡುವವು?

◼ ಹೆತ್ತವರಿಗೆ ನಿಮ್ಮ ಮೇಲಿರುವ ಭರವಸೆಯನ್ನು ನೀವು ಹೇಗೆ ಹೆಚ್ಚಿಸಸಾಧ್ಯವಿದೆ?

[ಪುಟ 11ರಲ್ಲಿರುವ ಚೌಕ/ಚಿತ್ರಗಳು]

ಒಂದು ರೂಲ್‌ ಮುರಿಯಲ್ಪಟ್ಟಾಗ

ಈ ಸನ್ನಿವೇಶ ನಿಮಗೆ ತೀರ ಪರಿಚಿತವಾಗಿರಬಹುದು: ಹೇಳಿದ ಸಮಯಕ್ಕೆ ನೀವು ಮನೆಗೆ ಬರಲಿಲ್ಲ, ಅಥವಾ ನಿಮಗೆ ಮನೆಯಲ್ಲಿ ಕೊಟ್ಟ ಕೆಲಸಗಳನ್ನು ಮಾಡಲಿಲ್ಲ, ಇಲ್ಲವೆ ಪೋನ್‌ನಲ್ಲಿ ನಿಮಗೆ ಕೊಟ್ಟ ಸಮಯಕ್ಕಿಂತಲೂ ಜಾಸ್ತಿ ಮಾತಾಡಿದ್ದೀರಿ. ಈಗ ನೀವು, ಹಾಗೇಕೆ ಮಾಡಿದ್ದೀರೆಂದು ತಂದೆತಾಯಿಗೆ ವಿವರಣೆಕೊಡಬೇಕಾಗಿದೆ! ಸನ್ನಿವೇಶವು ಇನ್ನೂ ಹೆಚ್ಚು ಬಿಗಡಾಯಿಸದಂತೆ ನೀವೇನು ಮಾಡಬಲ್ಲಿರಿ?

ಸತ್ಯವನ್ನೇ ಹೇಳಿರಿ. ಇದು ನಾಟಕವಾಡುವ ಸಮಯವಲ್ಲ. ಚಿಕ್ಕಪುಟ್ಟ ವಿವರಗಳನ್ನು ಸಹ ಸ್ಪಷ್ಟವಾಗಿ ಮತ್ತು ಸತ್ಯವಾಗಿ ಹೇಳಿರಿ. (ಜ್ಞಾನೋಕ್ತಿ 28:13) ಆದರೆ ಉದ್ದುದ್ದ ಕಥೆಕಟ್ಟುತ್ತಾ ಹೋದರೆ, ನಿಮ್ಮ ಹೆತ್ತವರಿಗೆ ನಿಮ್ಮ ಬಗ್ಗೆ ಉಳಿದಿದ್ದ ಒಂದಿಷ್ಟು ಭರವಸೆಯೂ ಅಳಿದುಹೋಗುವುದು. ಏನು ನಡೆದಿದೆಯೊ ಅದು ಸರಿಯೆಂದು ಸಮರ್ಥಿಸಲು ಇಲ್ಲವೆ, ಅದೇನೂ ದೊಡ್ಡ ಸಂಗತಿಯಲ್ಲವೆಂದು ನಿಕೃಷ್ಟಮಾಡುವುದರಿಂದ ದೂರವಿರಿ. “ಮೃದುವಾದ ಪ್ರತ್ಯುತ್ತರವು ಸಿಟ್ಟನ್ನಾರಿಸುವದು” ಎಂಬುದನ್ನು ಯಾವಾಗಲೂ ನೆನಪಿನಲ್ಲಿಡಿ.​ಜ್ಞಾನೋಕ್ತಿ 15:⁠1.

ಕ್ಷಮೆಕೇಳಿರಿ. ನಿಮ್ಮಿಂದಾಗಿ ಅವರಿಗೆ ಉಂಟಾಗಿರುವ ಚಿಂತೆ, ನಿರಾಶೆ ಇಲ್ಲವೆ ಕಷ್ಟಕ್ಕಾಗಿ ವಿಷಾದವನ್ನು ವ್ಯಕ್ತಪಡಿಸುವುದು ಸೂಕ್ತ ಮತ್ತು ಹೀಗೆ ಮಾಡುವುದರಿಂದ ನಿಮಗೆ ಸಿಗಲಿರುವ ಶಿಕ್ಷೆಯ ತೀಕ್ಷ್ಣತೆ ಸಹ ಕಡಿಮೆಯಾಗಬಹುದು. (1 ಸಮುವೇಲ 25:24) ಆದರೆ ನಿಮ್ಮ ದುಃಖವು ಕೇವಲ ಒಂದು ಮುಖವಾಡವಾಗಿರದೆ ಯಥಾರ್ಥವಾಗಿರಬೇಕು.

ಪರಿಣಾಮಗಳನ್ನು ಸ್ವೀಕರಿಸಿರಿ. ನಿಮಗೆ ಶಿಕ್ಷೆ ಸಿಕ್ಕಿದಾಗ, ವಿಶೇಷವಾಗಿ ಅದು ಅನ್ಯಾಯವೆಂದು ನಿಮಗನಿಸುವಾಗ, ನಿಮ್ಮ ಮೊದಲ ಪ್ರತಿಕ್ರಿಯೆಯು ವಾಗ್ವಾದಕ್ಕಿಳಿಯುವುದು ಆಗಿರಬಹುದು. (ಜ್ಞಾನೋಕ್ತಿ 20:⁠3) ಆದರೆ ಹೀಗೆ ಮಾಡದೆ, ನಿಮ್ಮ ಕೃತ್ಯಗಳಿಗೆ ನೀವೇ ಹೊಣೆಗಾರರೆಂದು ಒಪ್ಪಿಕೊಳ್ಳುವುದು ಪ್ರೌಢತೆಯನ್ನು ತೋರಿಸುತ್ತದೆ. (ಗಲಾತ್ಯ 6:⁠7) ನಿಮಗೆ ಈಗ ಉಳಿದಿರುವ ಆಯ್ಕೆಗಳಲ್ಲಿ ಅತ್ಯುತ್ತಮವಾದದ್ದು ಯಾವುದೆಂದರೆ, ನಿಮ್ಮ ಹೆತ್ತವರ ಭರವಸೆಯನ್ನು ಪುನಃ ಸಂಪಾದಿಸಿಕೊಳ್ಳಲು ಪ್ರಯಾಸಪಡುವುದೇ ಆಗಿದೆ.

[ಪುಟ 12ರಲ್ಲಿರುವ ಚಿತ್ರ]

ನಿಮ್ಮ ಹೆತ್ತವರ ಚಿಂತೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿರಿ