ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರಥಮ ಶತಮಾನದ ಸಾಮೂಹಿಕ ಮನೋರಂಜನೆ

ಪ್ರಥಮ ಶತಮಾನದ ಸಾಮೂಹಿಕ ಮನೋರಂಜನೆ

ಪ್ರಥಮ ಶತಮಾನದ ಸಾಮೂಹಿಕ ಮನೋರಂಜನೆ

ದಕ್ಷಿಣ ಇಟಲಿಯ ಎರಡು ಅಕ್ಕಪಕ್ಕದ ಪಟ್ಟಣಗಳ ಪ್ರತಿಸ್ಪರ್ಧಿ ಕ್ರೀಡಾ ತಂಡಗಳ ಅಭಿಮಾನಿಗಳ ನಡುವೆ ನಡೆದ ಗಲಭೆಯಲ್ಲಿ ಅಸಂಖ್ಯಾತರು ಗಾಯಗೊಂಡರು ಮತ್ತು ಮಕ್ಕಳನ್ನು ಸೇರಿ ಅನೇಕರ ಪ್ರಾಣನಷ್ಟವಾಯಿತು. ಈ ದುರಂತದ ನಿಮಿತ್ತ ಆ್ಯಂಫಿಥಿಯೇಟರನ್ನು 10 ವರ್ಷಗಳಿಗೆ ಮುಚ್ಚಿಬಿಡುವಂತೆ ಅಧಿಕಾರಿಗಳು ಆದೇಶ ನೀಡಿದರು.

ಈ ರೀತಿಯ ಗಲಭೆಯ ವರದಿಗಳು ಇಂದಿನ ವಾರ್ತಾ ಪತ್ರಿಕೆಗಳಲ್ಲಿ ವಿಚಿತ್ರವಾಗೇನೂ ತೋರುವುದಿಲ್ಲ. ಆದರೆ ಈ ನಿರ್ದಿಷ್ಟ ಘಟನೆಯು ಸುಮಾರು 2,000 ವರ್ಷಗಳ ಹಿಂದೆ, ಚಕ್ರಾಧಿಪತಿ ನೀರೊನ ಆಳ್ವಿಕೆಯ ಸಮಯಾವಧಿಯಲ್ಲಿ ನಡೆಯಿತು. ಪಾಂಪೆಯ ಆ್ಯಂಫಿಥಿಯೇಟರ್‌, ಅಂದರೆ ವರ್ತುಲ ಕ್ರೀಡಾರಂಗದಲ್ಲಿ ಕತ್ತಿಮಲ್ಲರ ಸ್ಪರ್ಧೆ ನಡೆಯುತ್ತಿರುವಾಗ, ಪಾಂಪೆಯ ಕ್ರೀಡಾ ಅಭಿಮಾನಿಗಳ ಮತ್ತು ಪಕ್ಕದ ನೂಕೆರೀ ಪಟ್ಟಣದ ಕ್ರೀಡಾ ಅಭಿಮಾನಿಗಳ ಮಧ್ಯೆ ನಡೆದ ಈ ಗಲಭೆಯನ್ನು ರೋಮನ್‌ ಇತಿಹಾಸಗಾರನಾದ ಟೆಸಿಟಸ್‌ ಎಂಬವನು ವಿವರಿಸುತ್ತಾನೆ.

ಪ್ರಥಮ ಶತಮಾನದಲ್ಲಿ ಜನಸಮೂಹಗಳು ಮನೋರಂಜನೆಗೆ ಮಾರುಹೋಗಿದ್ದವು. ರೋಮನ್‌ ಸಾಮ್ರಾಜ್ಯದ ಪ್ರಮುಖ ಪಟ್ಟಣಗಳಲ್ಲಿ ಥಿಯೇಟರ್‌ಗಳು, ಆ್ಯಂಫಿಥಿಯೇಟರ್‌ಗಳು ಹಾಗೂ ಸರ್ಕಸ್‌ಗಳು ಇದ್ದವು, ಮತ್ತು ಕೆಲವೊಂದು ಪಟ್ಟಣಗಳಲ್ಲಿ ಈ ಮೂರು ಇರುತ್ತಿದ್ದವು. ಅವುಗಳಲ್ಲಿ ನಡೆಯುತ್ತಿದ್ದ “ಆಟಗಳಲ್ಲಿ ಉದ್ರೇಕಯುತ ಅಪಾಯ ಮತ್ತು ರೋಮಾಂಚನವನ್ನು ಸೇರಿಸಿ . . . ಯಾವಾಗಲೂ ರಕ್ತಪಾತವೂ ಒಳಗೂಡಿರುತ್ತಿತ್ತು” ಎಂದು ರೋಮನ್‌ ಜಗತ್ತಿನ ಭೂಪಟ (ಇಂಗ್ಲಿಷ್‌) ಎಂಬ ಪುಸ್ತಕವು ತಿಳಿಸುತ್ತದೆ. ಸಾರಥಿಗಳು ನಿರ್ದಿಷ್ಟ ಬಣ್ಣಗಳ ಬಟ್ಟೆ ತೊಡುತ್ತಿದ್ದರು ಮತ್ತು ಪ್ರತಿ ತಂಡವು ಸಮಾಜದ ನಿರ್ದಿಷ್ಟ ರಾಜಕೀಯ ಅಥವಾ ಸಾಮಾಜಿಕ ಗುಂಪನ್ನು ಪ್ರತಿನಿಧಿಸುತ್ತಿತ್ತು. ತಮ್ಮ ನೆಚ್ಚಿನ ತಂಡವು ಮುಂದೆ ಬಂದಾಗ ಬೆಂಬಲಿಗರು ಹುಚ್ಚಾಗುತ್ತಿದ್ದರು. ಸಾರಥಿಗಳು ಎಷ್ಟು ಜನಪ್ರಿಯರಾದರೆಂದರೆ, ಜನರು ತಮ್ಮ ಮನೆಗಳನ್ನು ಅವರ ಭಾವಚಿತ್ರಗಳಿಂದ ಅಲಂಕರಿಸುತ್ತಿದ್ದರು ಮತ್ತು ಅವರಿಗೆ ಭಾರಿ ಮೊತ್ತದ ಹಣವನ್ನು ಸಹ ಕೊಡಲಾಗುತ್ತಿತ್ತು.

ಪಟ್ಟಣಗಳಲ್ಲಿ ಕತ್ತಿಮಲ್ಲರ ನಡುವಿನ ಮತ್ತು ಮನುಷ್ಯ-ಮೃಗಗಳ ನಡುವಿನ ರಕ್ತಸಿಕ್ತ ಕಾದಾಟಗಳನ್ನೂ ಏರ್ಪಡಿಸಲಾಗುತ್ತಿತ್ತು. ಈ ಕಾದಾಟಗಳಲ್ಲಿ ಪ್ರಾಣಿಯೊಂದಿಗೆ ಕಾದಾಡುವ ವ್ಯಕ್ತಿಗಳ ಬಳಿ ಕೆಲವೊಮ್ಮೆ ಯಾವುದೇ ಆಯುಧಗಳು ಇರುತ್ತಿರಲಿಲ್ಲ. ವಿಲ್‌ ಡ್ಯುರೆಂಟ್‌ ಎಂಬ ಇತಿಹಾಸಗಾರನ ಪ್ರಕಾರ, “ಖಂಡಿಸಲ್ಪಟ್ಟ ದುಷ್ಕರ್ಮಿಗಳು ಪ್ರಾಣಿಗಳಂತೆ ತೋರಲಿಕ್ಕಾಗಿ ಅವರಿಗೆ ಕೆಲವೊಮ್ಮೆ ಪ್ರಾಣಿ ಚರ್ಮವನ್ನು ತೊಡಿಸಿ ಮೃಗಗಳ ಮುಂದೆ ಎಸೆಯಲಾಗುತ್ತಿತ್ತು. ಇದಕ್ಕೋಸ್ಕರವೇ ಈ ಮೃಗಗಳಿಗೆ ಅನೇಕ ದಿನಗಳವರೆಗೆ ಏನೂ ಕೊಡದೆ ಹಸಿವೆಯಿಂದಿಡಲಾಗುತ್ತಿತ್ತು. ಈ ರೀತಿಯ ಸಾವು ಅತಿ ಯಾತನಾಮಯವಾಗಿರುತ್ತಿತ್ತು.”

ಈ ರೀತಿಯ ಹಿಂಸಾತ್ಮಕ ಮನೋರಂಜನೆಯನ್ನು ನೋಡಿ ಆನಂದಿಸುತ್ತಿದ್ದವರ ‘ಮನಸ್ಸು ಮೊಬ್ಬಾಗಿ ಹೋಗಿತ್ತು’ ಮತ್ತು ಅವರು ‘ಸಕಲ ನೈತಿಕ ಪ್ರಜ್ಞೆಯನ್ನು ಕಳೆದುಕೊಂಡಿದ್ದರು.’ (ಎಫೆಸ 4:17-19, NW) ಎರಡನೆಯ ಶತಮಾನದಲ್ಲಿ ಟೆರ್ಟುಲಿಯನ್‌ ಬರೆದದ್ದು: “ಸರ್ಕಸ್ಸಿನ ಹುಚ್ಚುತನ, ನಾಟಕರಂಗದ ಲಜ್ಜೆಗೇಡಿತನ, ಮಲ್ಲರಂಗದ ಕ್ರೌರ್ಯದ ಬಗ್ಗೆ [ಕ್ರೈಸ್ತರು] ಏನೂ ಮಾತಾಡುತ್ತಿರಲಿಲ್ಲ, ಆಲಿಸುತ್ತಿರಲಿಲ್ಲ ಯಾ ಅದನ್ನು ನೋಡುತ್ತಿರಲಿಲ್ಲ.” ಇಂದು ಕೂಡ ನಿಜ ಕ್ರೈಸ್ತರು ಹಿಂಸಾತ್ಮಕ ಮನೋರಂಜನೆಯಿಂದ ದೂರವಿರಲು ಜಾಗ್ರತೆವಹಿಸುತ್ತಾರೆ. “ಹಿಂಸಾಚಾರವನ್ನು ಪ್ರೀತಿಸುವವನನ್ನು” ಯೆಹೋವನು ದ್ವೇಷಿಸುತ್ತಾನೆಂದು ನೆನಪಿನಲ್ಲಿಡುತ್ತಾ ಅವರು ಯಾವುದೇ ಮಾಧ್ಯಮ ಅಂದರೆ, ಸಾಹಿತ್ಯದ ಮೂಲಕವಾಗಲಿ ಟಿ.ವಿ. ಮೂಲಕವಾಗಲಿ ಯಾ ಕಂಪ್ಯೂಟರ್‌ ಆಟಗಳ ಮೂಲಕವಾಗಲಿ ಹಿಂಸಾತ್ಮಕ ಮನೋರಂಜನೆಯಿಂದ ದೂರವಿರುತ್ತಾರೆ.​—⁠ಕೀರ್ತನೆ 11:​5, NW. (g 11/06)

[ಪುಟ 14ರಲ್ಲಿರುವ ಚಿತ್ರ]

ಗೆದ್ದ ಸಾರಥಿಯ ಒಂದು ಮೊಸೇಯಿಕ್‌

[ಪುಟ 14ರಲ್ಲಿರುವ ಚಿತ್ರ]

ಹೆಣ್ಣುಸಿಂಹದೊಂದಿಗೆ ಹೋರಾಡುತ್ತಿರುವ ಪುರುಷನ ಮಂಡೋದಕ ಚಿತ್ರ

[ಪುಟ 30ರಲ್ಲಿರುವ ಚಿತ್ರ]

ಪ್ರಥಮ ಶತಮಾನದ ರೋಮನ್‌ ಥಿಯೇಟರ್‌

[ಕೃಪೆ]

Ciudad de Mérida

[ಪುಟ 14ರಲ್ಲಿರುವ ಚಿತ್ರ ಕೃಪೆ]

ಮೇಲೆ ಮತ್ತು ಕೆಳಗೆ ಎಡಬದಿ: Museo Nacional de Arte Romano, Mérida