ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬನ್ನಿ! ಮಹಾ ಮೆಕಾಂಗ್‌ ನೋಡಿ!

ಬನ್ನಿ! ಮಹಾ ಮೆಕಾಂಗ್‌ ನೋಡಿ!

ಬನ್ನಿ! ಮಹಾ ಮೆಕಾಂಗ್‌ ನೋಡಿ!

ಮೆಕಾಂಗ್‌ ನದಿಯು ಏಷ್ಯಾ ಖಂಡದ ಆರು ದೇಶಗಳನ್ನು ದಾಟುತ್ತಾ, ಮೂಲನಿವಾಸಿಗಳ ಸುಮಾರು 100 ಗುಂಪುಗಳಿಗೆ ಹಾಗೂ ಬುಡಕಟ್ಟು ಗುಂಪುಗಳಿಗೆ ಸೇರಿದ ಸುಮಾರು 10 ಕೋಟಿ ಜನರ ಬದುಕಿಗೆ ಆಸರೆ ನೀಡುತ್ತದೆ. ಪ್ರತಿ ವರ್ಷ ಈ ನದಿಯಿಂದ 13 ಲಕ್ಷ ಟನ್‌ ಮೀನುಹಿಡಿಯಲಾಗುತ್ತದೆ ಮತ್ತು ಇದು ನಾರ್ತ್‌ ಸಮುದ್ರದಲ್ಲಿ ಹಿಡಿಯಲ್ಪಡುವ ಮೀನಿಗಿಂತ ನಾಲ್ಕು ಪಟ್ಟು ಹೆಚ್ಚಾಗಿದೆ! 4,350 ಕಿಲೊಮೀಟರ್‌ ಉದ್ದದ ವ್ಯಾಪ್ತಿಯಲ್ಲಿ ಹರಿಯುವ ಈ ನದಿಯು, ಆಗ್ನೇಯ ಏಷ್ಯಾದ ಅತಿ ಉದ್ದ ಜಲಮಾರ್ಗ ಎಂಬ ಕೀರ್ತಿಗೆ ಪಾತ್ರವಾಗಿದೆ. ಈ ನದಿಯು ಹಲವಾರು ದೇಶಗಳ ಮಾರ್ಗವಾಗಿ ಹರಿಯುವ ಕಾರಣ ಅದಕ್ಕೆ ಹಲವಾರು ಹೆಸರುಗಳಿವೆ. ಇವುಗಳಲ್ಲಿ ಸುಪ್ರಸಿದ್ಧವಾದ ಹೆಸರು ಮೆಕಾಂಗ್‌ ಆಗಿದೆ. ಇದು, ಥಾಯಿ ಭಾಷೆಯಲ್ಲಿ ಅದಕ್ಕಿರುವ ಹೆಸರಾದ ಮೇ ನಾಮ್‌ ಕಾಂಗ್‌ ಎಂಬುದರ ಸಂಕ್ಷಿಪ್ತ ರೂಪವಾಗಿದೆ.

ಹಿಮಾಲಯಗಳಲ್ಲಿ ಹುಟ್ಟಿರುವ ಈ ಮೆಕಾಂಗ್‌ ನದಿಯು ಅತಿವೇಗ ಹಾಗೂ ರಭಸದಿಂದ ಪ್ರವಹಿಸಿ ಪರ್ವತದ ಇಳಿಜಾರುಗಳಲ್ಲಿ ಧುಮುಗುಟ್ಟುತ್ತಾ ಆಳ ಕಂದಕಗಳ ಮಾರ್ಗವಾಗಿ ಮುನ್ನುಗುತ್ತದೆ. ಚೀನಾ ದೇಶವನ್ನು​—⁠ಅಲ್ಲಿ ಈ ನದಿಯನ್ನು ಲಾನ್‌ಸಾಂಕ್‌ ಎಂದು ಕರೆಯಲಾಗುತ್ತದೆ​—⁠ದಾಟುವಷ್ಟರಲ್ಲಿ ಅದರ ನೀರು, ಈ ನದಿ ಎಷ್ಟು ಉದ್ದವಾಗಿದೆಯೊ ಅದರಲ್ಲಿ ಅರ್ಧದಷ್ಟನ್ನು ಪ್ರವಹಿಸಿ 15,000 ಅಡಿ ತಗ್ಗಿಗೆ ಇಳಿದಿರುತ್ತದೆ. ಮೆಕಾಂಗ್‌ ನದಿಯ ಕೊನೆಯ ಅರ್ಧ ಭಾಗದ ಕೇವಲ 1,600 ಅಡಿ ಇಳಿಮುಖವಾಗುವುದರಿಂದ, ನದಿಯ ಈ ಭಾಗದಲ್ಲಿ ನೀರಿನ ವೇಗ ಮತ್ತು ರಭಸವು ಕಡಿಮೆಯಾಗಿರುತ್ತದೆ. ಚೀನಾ ದೇಶದಿಂದ ಹೊರಬೀಳುವಾಗ ಈ ನದಿಯು ಮ್ಯಾನ್‌ಮಾರ್‌ ಮತ್ತು ಲಾಓಸ್‌ ದೇಶಗಳ ನಡುವೆ ಗಡಿಯಂತಿದ್ದು, ಮುಂದೆ ಪ್ರವಹಿಸುತ್ತಾ ಲಾಓಸ್‌ ಮತ್ತು ಥಾಯ್‌ಲೆಂಡ್‌ ದೇಶಗಳ ಹೆಚ್ಚಿನ ಭಾಗಕ್ಕೆ ಗಡಿಯಾಗಿದೆ. ಕ್ಯಾಂಬೋಡಿಯಕ್ಕೆ ಆಗಮಿಸುತ್ತಾ ಅದು ಎರಡು ಭಾಗವಾಗಿ ತದನಂತರ ವಿಯೆಟ್ನಾಮ್‌ಗೆ ಹರಿದು ನಾಲೆಗಳಾಗಿ ಕೊನೆಗೆ ಸೌತ್‌ ಚೈನಾ ಸಮುದ್ರವನ್ನು ಸೇರುತ್ತದೆ.

ಫ್ರೆಂಚರು 1860ರ ದಶಕದ ಕೊನೆ ಭಾಗದಲ್ಲಿ ಮೆಕಾಂಗ್‌ ನದಿಯಾಗಿ ಚೀನಾ ದೇಶಕ್ಕೆ ಹೋಗಲು ನೌಕಸಂಚಾರ ಮಾರ್ಗವನ್ನು ಕಂಡುಹಿಡಿಯಲು ಪ್ರಯತ್ನಿಸಿದರು. ಆದರೆ, ಕ್ಯಾಂಬೋಡಿಯದ ಕ್ರಾಟ್ಯೇ ಎಂಬ ನಗರದ ಬಳಿ ಈ ನದಿಯ ರಭಸದ ಇಳಿತದಿಂದಾಗಿ ಮತ್ತು ದಕ್ಷಿಣ ಲಾಓಸ್‌ನಲ್ಲಿ ಕಾನ್‌ ಜಲಪಾತ ಎಂಬ ಹೆಸರಿನ ದುರ್ಗಮವಾದ ಜಲಪಾತಗಳ ಸರಣಿಯಿಂದಾಗಿ ಅವರ ಆಸೆಗಳೆಲ್ಲ ನೀರುಪಾಲಾದವು. ಭೂಮಿಯಲ್ಲಿರುವ ಬೇರಾವುದೇ ಜಲಪಾತಕ್ಕಿಂತ ಹೆಚ್ಚು ನೀರು ಕಾನ್‌ ಜಲಪಾತದಿಂದ ಧುಮುಕುತ್ತದೆ. ಈ ಪ್ರಮಾಣವು ಕೆನಡ ಮತ್ತು ಯುನೈಟೆಡ್‌ ಸ್ಟೇಟ್ಸ್‌ನ ಗಡಿಯ ಎರಡೂ ಪಕ್ಕಗಳಲ್ಲಿರುವ ನಯಾಗರಾ ಫಾಲ್ಸ್‌ಗಿಂತಲೂ ಎರಡು ಪಟ್ಟು ಹೆಚ್ಚಾಗಿರುತ್ತದೆ!

ಜೀವನದಿ

ಮೆಕಾಂಗ್‌ ನದಿಯು ಆಗ್ನೇಯ ಏಷ್ಯಾದ ಆರ್ಥಿಕ ವ್ಯವಸ್ಥೆಯ ಬೆನ್ನೆಲುಬು ಆಗಿದೆ. ಲಾಓಸ್‌ನ ರಾಜಧಾನಿಯಾದ ವೀಎಂಟ್ಯಾನ್‌ ಮತ್ತು ಕ್ಯಾಂಬೋಡಿಯದ ರಾಜಧಾನಿಯಾಗಿರುವ ಪೊನೊಮ್‌ ಪೆನ್ಹ ಈ ನದಿಯ ರೇವು ಪಟ್ಟಣಗಳಾಗಿವೆ. ನದಿ ಹರಿದು ಸಮುದ್ರವನ್ನು ಇನ್ನೇನು ಸೇರಲಿರುವ ಪ್ರದೇಶದಲ್ಲಿ, ಅಂದರೆ ವಿಯೆಟ್ನಾಮ್‌ ದೇಶದಲ್ಲಿ ಮೆಕಾಂಗ್‌ ನದಿಯು ಅಲ್ಲಿನ ಜನರ ಜೀವನಾಡಿಯಾಗಿದೆ. ಈ ಪ್ರದೇಶದಲ್ಲಿ ಅದು 7 ಶಾಖೆಗಳಾಗಿ ವಿಭಾಗವಾಗಿ 25,000 ಚದರ ಕಿಲೊಮೀಟರ್‌ ವಿಶಾಲವಾದ ನದಿಮುಖಜ ಭೂಮಿಯನ್ನು ನಿರ್ಮಿಸುತ್ತದೆ. ಇದರಲ್ಲಿ ಒಟ್ಟು 3,200 ಚದರ ಕಿಲೊಮೀಟರ್‌ ಉದ್ದದ ಜಲಮಾರ್ಗಗಳಿವೆ ಎಂದು ಅಂದಾಜುಮಾಡಲಾಗಿದೆ. ಹೀಗೆ ಹೇರಳವಾಗಿ ದೊರೆತ ನೀರು ಗದ್ದೆಗಳಿಗೆ ಮತ್ತು ಬತ್ತದ ಪೈರುಗಳಿಗೆ ನೀರಡಿಸುತ್ತದೆ ಹಾಗೂ ಮೆಕ್ಕಲು ಮಣ್ಣನ್ನು ದೊರಕಿಸುವ ಮೂಲಕ ಅವುಗಳನ್ನು ಫಲವತ್ತಾಗಿಸುತ್ತದೆ. ಈ ಕಾರಣದಿಂದಾಗಿ ರೈತರಿಗೆ ಒಂದು ವರ್ಷದಲ್ಲಿ ಮೂರು ಬೆಳೆಗಳನ್ನು ಮಾಡಲು ಸಾಧ್ಯವಾಗುತ್ತದೆ. ಥಾಯ್‌ಲೆಂಡ್‌ ದೇಶವು, ಅಕ್ಕಿಯನ್ನು ಬೆಳೆಸಿ ಅದನ್ನು ರಫ್ತುಮಾಡುವುದರಲ್ಲಿ ಜಗತ್ತಿನಲ್ಲೇ ಮೊದಲನೆಯ ಸ್ಥಾನದಲ್ಲಿದ್ದರೆ ವಿಯೆಟ್ನಾಮ್‌ ಎರಡನೆಯ ಸ್ಥಾನದಲ್ಲಿದೆ.

ಮೆಕಾಂಗ್‌ ನದಿಯಲ್ಲಿ 1,200 ಜಾತಿಯ ಮೀನುಗಳಿರಬಹುದು ಎಂಬ ಅಂದಾಜುಮಾಡಲಾಗಿದೆ ಮತ್ತು ಈ ಮೀನುಗಳಲ್ಲಿ ಕೆಲವೊಂದು ಜಾತಿಗಳನ್ನು ಹಾಗೂ ಸಿಗಡಿಗಳನ್ನು ವ್ಯಾಪಾರಕ್ಕಾಗಿ ಸಾಕಣೆಮಾಡಲಾಗುತ್ತದೆ. ಟ್ರೇ ರೀಯಲ್‌ ಎಂಬುದು ಆ ಸ್ಥಳದಲ್ಲಿ ಜನಪ್ರಿಯವಾಗಿರುವ ಒಂದು ಮೀನಾಗಿದೆ. ರೀಯಲ್‌ ಎಂಬ ಕಾಂಬೋಡಿಯದ ನೋಟಿಗೂ ಇದೇ ಹೆಸರು ಕೊಡಲ್ಪಟ್ಟಿರುವುದರಿಂದ ಈ ಮೀನಿಗೆ ಒಂದು ವಿಶೇಷ ಸುಪ್ರಸಿದ್ಧಿ ದಕ್ಕಿದೆ. 9 ಅಡಿಗಳಷ್ಟು ಉದ್ದ ಬೆಳೆಯಬಲ್ಲ ಮತ್ತು ಅಪಾಯದ ಅಂಚಿನಲ್ಲಿರುವ ಒಂದು ಜಾತಿಯ ಬೆಕ್ಕು ಮೀನಿಗೆ ಈ ನದಿಯು ಬೀಡಾಗಿದೆ. ಇಸವಿ 2005ರಲ್ಲಿ ಬೆಸ್ತರು 290 ಕೆ.ಜಿ. ತೂಕದ ಒಂದು ಬೆಕ್ಕು ಮೀನನ್ನು ಬಲೆಯಲ್ಲಿ ಹಿಡಿದರು. ಪ್ರಾಯಶಃ ಇಷ್ಟು ದೊಡ್ಡ ಗಾತ್ರದ ಸಿಹಿನೀರಿನ ಮೀನು ಲೋಕದ ಯಾವುದೇ ಭಾಗದಲ್ಲೂ ಸಿಕ್ಕಿರಲಿಕ್ಕಿಲ್ಲ! ಈ ನದಿಯಲ್ಲಿ, ಅಪಾಯದಂಚಿನಲ್ಲಿರುವ ಇನ್ನೊಂದು ಜೀವಿಯು ಇರಾವದಿ ಡಾಲ್ಫಿನ್‌ ಆಗಿದೆ. ಈಗ ಮೆಕಾಂಗ್‌ನಲ್ಲಿ 100ಕ್ಕಿಂತಲೂ ಕಡಿಮೆ ಇರಾವದಿ ಡಾಲ್ಫಿನ್‌ಗಳು ಉಳಿದಿವೆ ಎಂದು ಸಂಶೋಧಕರು ಹೇಳುತ್ತಾರೆ.

ಮೆಕಾಂಗ್‌ ನದಿಯು ಲಕ್ಷಾಂತರ ಜನರಿಗೆ ಆಹಾರ ಒದಗಿಸುತ್ತದೆ ಮಾತ್ರವಲ್ಲ ಅದು ಎಲ್ಲ ಗಾತ್ರಗಳ ನೌಕೆಗಳಿಗೆ ಅಂದರೆ, ಜನರನ್ನು ಸಾಗಿಸುವ ಸಣ್ಣ ದೋಣಿಗಳು, ಸಾಮಾನನ್ನು ಒಯ್ಯುವ ದೊಡ್ಡ ಜಹಾಜುಗಳು ಮತ್ತು ಸರಕುನೌಕೆಗಳು ಸಾಗರವನ್ನು ಸೇರಲು ಮತ್ತು ವಾಪಸ್ಸು ಹಿಂತಿರುಗಲು ಒಂದು ಹೆದ್ದಾರಿಯಂತಿದೆ. ಈ ನದಿಯು ಅನೇಕ ಪ್ರವಾಸಿಗಳಿಗೂ ಅಚ್ಚುಮೆಚ್ಚಿನದ್ದಾಗಿದೆ. ಹೆಚ್ಚಿನವರು ಕಾನ್‌ ಜಲಪಾತಗಳಿಂದ ಮುಂದಕ್ಕೆ ಪ್ರಯಾಣಿಸಿ ವೀಎಂಟ್ಯಾನ್‌ ಅನ್ನು ಸಂದರ್ಶಿಸಲು ಇಷ್ಟಪಡುತ್ತಾರೆ. ಈ ನಗರವು, ಅದರ ಕಾಲುವೆಗಳು, ಬೌದ್ಧ ದೇವಸ್ಥಾನಗಳು, ಊರೆಕಂಬಗಳನ್ನಾಧರಿಸಿ ಕಟ್ಟಲ್ಪಟ್ಟಿರುವ ಮನೆಗಳಿಗೆ ಪ್ರಸಿದ್ಧವಾಗಿದ್ದು, 1,000ಕ್ಕಿಂತ ಹೆಚ್ಚು ವರ್ಷಗಳಿಂದ ವಾಣಿಜ್ಯ, ರಾಜಕೀಯ ಮತ್ತು ಧಾರ್ಮಿಕತೆಯ ಕೇಂದ್ರವಾಗಿದೆ. ವೀಎಂಟ್ಯಾನ್‌ನಿಂದ ನದಿ ಮೂಲದ ದಿಕ್ಕಿನಲ್ಲಿ ಸಾಗುವುದಾದರೆ ಲೌಯೇಂಗ್‌ಫ್ರಾಬಾಂಗ್‌ಗೆ ಹೋಗಬಹುದು. ಮೆಕಾಂಗ್‌ ನದಿಯ ಈ ರೇವುಪಟ್ಟಣವು ಒಂದು ಕಾಲದಲ್ಲಿ ಥಾಯಿ-ಲೌ ಎಂಬ ದೊಡ್ಡ ರಾಜ್ಯದ ರಾಜಧಾನಿಯಾಗಿ ರಾರಾಜಿಸಿತ್ತು ಮತ್ತು ಫ್ರೆಂಚ್‌ರ ಆಳ್ವಿಕೆಯ ಸಮಯಾವಧಿಯನ್ನು ಒಳಗೂಡಿಸಿ ಸ್ವಲ್ಪ ಸಮಯದ ವರೆಗೆ ಲಾಓಸ್‌ನ ರಾಜಧಾನಿಯಾಗಿಯೂ ಮೆರೆದಿತ್ತು. ಫ್ರೆಂಚರ ವಸಾಹತುಶಾಹಿ ಪ್ರಭಾವವು ಈಗಲೂ ಈ ಐತಿಹಾಸಿಕ ನಗರದಲ್ಲಿ ಕಂಡುಬರುತ್ತದೆ.

ಇತ್ತೀಚಿನ ದಿನಗಳಲ್ಲಿ ಮೆಕಾಂಗ್‌ ನದಿಯಾದ್ಯಂತ ನಡೆಯುತ್ತಿರುವ ಬದಲಾವಣೆಗಳು ಕಳವಳಹುಟ್ಟಿಸುತ್ತಿವೆ. ಮೀನುಹಿಡಿಯುವ ವಿನಾಶಕಾರಿ ವಿಧಾನಗಳು, ಅರಣ್ಯನಾಶ ಮತ್ತು ಜಲವಿದ್ಯುತ್ತಿನ ಬೃಹತ್‌ ಅಣೆಕಟ್ಟುಗಳ ನಿರ್ಮಾಣವು ಇದರಲ್ಲಿ ಒಳಗೊಂಡಿದೆ. ಇದೆಲ್ಲವನ್ನು ಗಮನಿಸುವ ಅನೇಕರಿಗೆ ಸನ್ನಿವೇಶವು ಹತೋಟಿಮೀರಿ ಹೋಗಿರುವಂತೆ ತೋರುತ್ತದೆ. ಹಾಗಿದ್ದರೂ ಒಂದು ನಿರೀಕ್ಷೆಯಿದೆ.

ನಮ್ಮ ಪ್ರೀತಿಯ ಸೃಷ್ಟಿಕರ್ತನು ಬೇಗನೆ, ತನ್ನ ರಾಜ್ಯದ ಮೂಲಕ ಮಾನವ ವ್ಯವಹಾರಗಳಲ್ಲಿ ಮಧ್ಯ ಪ್ರವೇಶಿಸಲಿದ್ದಾನೆಂದು ಬೈಬಲ್‌ ವಾಗ್ದಾನಿಸುತ್ತದೆ. (ದಾನಿಯೇಲ 2:44; 7:13, 14; ಮತ್ತಾಯ 6:10) ಆ ಪರಿಪೂರ್ಣ ಲೋಕ-ಸರಕಾರದ ಮಾರ್ಗದರ್ಶನದ ಅಡಿ ಇಡೀ ಭೂಮಿಯು ಸುಸ್ಥಿತಿಗೆ ಪುನಃಸ್ಥಾಪಿಸಲ್ಪಡುವುದು ಮತ್ತು ನದಿಗಳು ಅತ್ಯಾನಂದದಿಂದ ಅಕ್ಷರಾರ್ಥದಲ್ಲಿ ‘ಚಪ್ಪಾಳೆಹೊಡೆಯುವವು.’ (ಕೀರ್ತನೆ 98:7-9) ಮಹಾ ಮೆಕಾಂಗ್‌ ನದಿಯು ಹೀಗೆ ಚಪ್ಪಾಳೆತಟ್ಟುವುದರಲ್ಲಿ ಜೊತೆಗೂಡುವಂತಾಗಲಿ! (g 11/06)

[ಪುಟ 24ರಲ್ಲಿರುವ ಭೂಪಟ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಚೀನಾ

ಮ್ಯಾನ್‌ಮಾರ್‌

ಲಾಓಸ್‌

ಥಾಯ್‌ಲೆಂಡ್‌

ಕ್ಯಾಂಬೋಡಿಯ

ವಿಯೆಟ್ನಾಮ್‌

ಮೆಕಾಂಗ್‌ ನದಿ

[ಪುಟ 24ರಲ್ಲಿರುವ ಚಿತ್ರ]

ಬತ್ತದ ಗದ್ದೆಗಳು, ಮೆಕಾಂಗ್‌ ನದಿಮುಖಜ ಭೂಮಿ

[ಪುಟ 24ರಲ್ಲಿರುವ ಚಿತ್ರ]

ಮೆಕಾಂಗ್‌ ನದಿಯಲ್ಲಿ ಸುಮಾರು 1,200 ಜಾತಿಯ ಮೀನುಗಳಿವೆ

[ಪುಟ 25ರಲ್ಲಿರುವ ಚಿತ್ರ]

ತೇಲುವ ಮಾರುಕಟ್ಟೆ, ವಿಯೆಟ್ನಾಮ್‌

[ಪುಟ 24ರಲ್ಲಿರುವ ಚಿತ್ರ ಕೃಪೆ]

ಬತ್ತದ ಗದ್ದೆಗಳು: ©Jordi Camí/age fotostock; ಮೀನುಗಾರಿಕೆ: ©Stuart Pearce/World Pictures/age fotostock; ಹಿನ್ನೆಲೆ: © Chris Sattlberger/Panos Pictures

[ಪುಟ 25ರಲ್ಲಿರುವ ಚಿತ್ರ ಕೃಪೆ]

ಮಾರುಕಟ್ಟೆ: ©Lorne Resnick/age fotostock; ಮಹಿಳೆ: ©Stuart Pearce/World Pictures/age fotostock