ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ಅವಿನಾಶಿಯಾದ’ ನೀರು-ಕರಡಿ

‘ಅವಿನಾಶಿಯಾದ’ ನೀರು-ಕರಡಿ

‘ಅವಿನಾಶಿಯಾದ’ ನೀರು-ಕರಡಿ

ಜಪಾನಿನ ಎಚ್ಚರ! ಲೇಖಕರಿಂದ

◼ ಲೋಕದ ಸುತ್ತಲೂ ನೀರಿನ ಯಾವುದೇ ನೆಲೆಯಲ್ಲಿ ಅಂದರೆ ಮಂಜುಗಡ್ಡೆ, ಪಾಚಿ, ತೊರೆಗಳ ತಳಗಳು, ಬಿಸಿನೀರಿನ ಬುಗ್ಗೆಗಳು, ಸರೋವರಗಳು, ಸಾಗರಗಳು, ಅಷ್ಟೇಕೆ ನಿಮ್ಮ ಮನೆಯ ಹಿತ್ತಲಿನಲ್ಲಿಯೂ ಸಹ ನೀವು ಹುಡುಕುವಲ್ಲಿ ನೀರು-ಕರಡಿಯನ್ನು ಕಂಡುಕೊಳ್ಳಬಹುದು. ಇದು, ಸೃಷ್ಟಿಯಲ್ಲಿರುವ ಗಟ್ಟಿಮುಟ್ಟಾದ ಚಿಕ್ಕ ಜೀವಿಗಳಲ್ಲಿ ಒಂದಾಗಿದೆ. ಈ ಜೀವಿಯು ನಾವು ಬರಿಗಣ್ಣಿನಿಂದ ನೋಡಲಾಗದಷ್ಟು ಪುಟ್ಟದಾಗಿದೆ. ಅದಕ್ಕೆ ನಾಲ್ಕು ಭಾಗಗಳಿರುವ ಗಿಡ್ಡ ದೇಹವಿದೆ. ಆ ದೇಹಕ್ಕೆ ರಕ್ಷಣಾತ್ಮಕವಾದ ಚರ್ಮವಿದೆ ಮತ್ತು ಎಂಟು ಕಾಲುಗಳಿವೆ. ಈ ಕಾಲುಗಳ ತುದಿಯಲ್ಲಿ ಪಂಜುಗಳಿವೆ. ಒಟ್ಟಿನಲ್ಲಿ ಅದರ ರೂಪ ಮತ್ತು ಭಂಗಿಯು ಅಡ್ಡಾದಿಡ್ಡಿಯಾಗಿ ತಡವರಿಸುತ್ತಾ ನಡೆಯುವ ಒಂದು ಕರಡಿಯಂತಿದೆ ಮತ್ತು ಆ ಕಾರಣದಿಂದಲೇ ಇದಕ್ಕೆ ಈ ಹೆಸರು ಬಂದಿದೆ.

ನೀರು-ಕರಡಿಗಳು ನಿಧಾನ ಚಲನೆ ಅಥವಾ ನಡಿಗೆಯ ಸೂಕ್ಷ್ಮಜೀವಿಗಳಾಗಿವೆ. ಇವುಗಳಲ್ಲಿ ನೂರಾರು ಪ್ರಭೇದಗಳಿವೆ. ಹೆಣ್ಣು ನೀರು-ಕರಡಿಗಳು ಒಮ್ಮೆಗೆ 1ರಿಂದ 30 ಮೊಟ್ಟೆಗಳನ್ನು ಇಡುತ್ತವೆ. ಒಂದು ಹಿಡಿ ಹಸಿ ಮಣ್ಣಿನಲ್ಲಿ ಅಥವಾ ಮರಳಿನಲ್ಲಿ ಇಂತಹ ಸಾವಿರಾರು ಪುಟ್ಟ ಜೀವಿಗಳನ್ನು ಕಂಡುಕೊಳ್ಳಬಹುದು. ಚಾವಣಿಗಳ ಮೇಲೆ ಬೆಳೆದಿರುವ ಪಾಚಿಯು ಅವುಗಳನ್ನು ಕಂಡುಕೊಳ್ಳಲು ಒಂದು ಉತ್ತಮ ಸ್ಥಳವಾಗಿದೆ.

ತೀಕ್ಷ್ಣ ವಾತಾವರಣಗಳಲ್ಲೂ ನೀರು-ಕರಡಿಗಳು ಬದುಕಿ ಉಳಿಯಬಲ್ಲವು. “ಈ ಜೀವಿಗಳಲ್ಲಿ ಕೆಲವೊಂದನ್ನು ಎಂಟು ದಿನಗಳ ಸಮಯ ನಿರ್ವಾತದಲ್ಲಿ ಇಡಲಾಯಿತು, ಅಲ್ಲಿಂದ ಅವುಗಳನ್ನು ಸ್ಥಳಾಂತರಿಸಿ ಮೂರು ದಿನಗಳ ವರೆಗೆ ಸಾಮಾನ್ಯ ತಾಪಮಾನದ ಹೀಲಿಯಂ ಅನಿಲದಲ್ಲಿ ಇರಿಸಲಾಯಿತು. ತದನಂತರ ಅವುಗಳನ್ನು -272° ಸೆಲ್ಸಿಯಸ್‌ ಉಷ್ಣಾಂಶಕ್ಕೆ ಒಡ್ಡಲಾದರೂ, ಸಾಮಾನ್ಯ ತಾಪಮಾನಕ್ಕೆ ಅವುಗಳನ್ನು ತಂದಾಗ ಅವು ಪುನಃ ಜೀವಕ್ಕೆ ಬಂದವು” ಎಂದು ಎನ್‌ಸೈಕ್ಲಪೀಡೀಯ ಬ್ರಿಟ್ಯಾನಿಕ ವರದಿಸುತ್ತದೆ. ಮನುಷ್ಯನನ್ನು ಕೊಲ್ಲಸಾಧ್ಯವಿರುವ ಪ್ರಮಾಣದ ಕ್ಷ-ಕಿರಣಗಳನ್ನು ನೂರಾರು ಪಟ್ಟು ಹೆಚ್ಚಿಸುವುದಾದರೂ ಈ ಜೀವಿಗಳು ಆ ವಿಕಿರಣವನ್ನು ತಡೆದುಕೊಳ್ಳಬಲ್ಲವು. ವಿಜ್ಞಾನಿಗಳಿಗನುಸಾರ ಅವುಗಳು ಭೂಮಿಯ ಹೊರಗೆ ಬಾಹ್ಯಾಕಾಶದಲ್ಲೂ ಸ್ವಲ್ಪ ಸಮಯ ಬದುಕುಳಿಯಬಲ್ಲವು!

ಇಂತಹ ಪರಿಸ್ಥಿತಿಗಳಲ್ಲೂ ಬದುಕುಳಿಯಲು ಸಾಧ್ಯವಾಗುವ ಅವುಗಳ ಗುಟ್ಟೇನೆಂದರೆ, ಮೃತಾವಸ್ಥೆಯಂಥ ಸ್ಥಿತಿಗೆ ಹೋಗಲು ಅವುಗಳಿಗಿರುವ ಸಾಮರ್ಥ್ಯವೇ. ಈ ಸ್ಥಿತಿಯಲ್ಲಿ ಅವುಗಳ ಜೀವಪ್ರಕ್ರಿಯೆಗಳು ಸಾಮಾನ್ಯ ಮಟ್ಟಕ್ಕಿಂತ 0.01 ಪ್ರತಿಶತಕ್ಕೆ ಇಳಿಯುತ್ತವೆ ಅಥವಾ ಬೇರೆ ಮಾತಿನಲ್ಲಿ ಹೇಳುವುದಾದರೆ ಆ ಕ್ರಿಯೆಗಳು ನಡೆಯುತ್ತಿವೆಯೆಂದು ಗೊತ್ತಾಗದಷ್ಟು ಕಡಿಮೆಮಟ್ಟಕ್ಕೆ ಇಳಿಯುತ್ತವೆ! ಈ ಸ್ಥಿತಿಯನ್ನು ತಲಪಲು, ಅವುಗಳು ತಮ್ಮ ಕಾಲುಗಳನ್ನು ದೇಹದೊಳಕ್ಕೆ ಎಳೆದುಕೊಳ್ಳುತ್ತವೆ, ದೇಹದಿಂದ ನಷ್ಟವಾದ ನೀರನ್ನು ಒಂದು ವಿಶೇಷ ರೀತಿಯ ಸಕ್ಕರೆಯ ಅಂಶದಿಂದ ಸ್ಥಾನಭರ್ತಿ ಮಾಡುತ್ತವೆ ಮತ್ತು ಟನ್‌ ಎಂದು ಕರೆಯಲ್ಪಡುವ ಪುಟ್ಟದಾದ, ಮೇಣದಿಂದ ಆವೃತವಾದ ಉಂಡೆಯಂತಾಗುತ್ತವೆ. ಸಾಮಾನ್ಯವಾದ, ತೇವ ಪರಿಸ್ಥಿತಿಗಳು ಅಥವಾ ವಾತಾವರಣವು ಹಿಂದಿರುಗಿದಾಗ ಅವು ಕೆಲವೇ ನಿಮಿಷ ಅಥವಾ ತಾಸುಗಳಲ್ಲಿ ಪುನಃ ಕ್ರಿಯಾಶೀಲವಾಗುತ್ತವೆ. ಒಮ್ಮೆ, 100 ವರುಷಗಳಷ್ಟು ಸಮಯ ಪ್ರಾಣಾಧಾರವಾದ ಪ್ರಕ್ರಿಯೆಗಳು ನಿಂತುಹೋಗಿದ್ದ ಸ್ಥಿತಿಯಲ್ಲಿದ್ದ ನೀರು-ಕರಡಿಗಳನ್ನು ಯಶಸ್ವಿಕರವಾಗಿ ಪುನರುಜ್ಜೀವಿಸಲಾಯಿತು!

ಹೌದು, ಈ ಪುಟ್ಟ ‘ಕ್ರಿಮಿಗಳೂ’ ಅಥವಾ ಜೀವಿಗಳು ತಮ್ಮದೇ ಆದ ರೀತಿಯಲ್ಲಿ ಅಂದರೆ ಮೌನವಾದ ಆದರೂ ಅದ್ಭುತಕರವಾದ ರೀತಿಯಲ್ಲಿ ಯೆಹೋವನನ್ನು ಕೊಂಡಾಡುತ್ತಿವೆ.​—⁠ಕೀರ್ತನೆ 148:10, 13. (g 3/07)

[ಪುಟ 30ರಲ್ಲಿರುವ ಚಿತ್ರ ಕೃಪೆ]

© Diane Nelson/Visuals Unlimited