ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕಾಯಿಲೆಗಳು ಇನ್ನಿಲ್ಲದಿರುವಾಗ!

ಕಾಯಿಲೆಗಳು ಇನ್ನಿಲ್ಲದಿರುವಾಗ!

ಕಾಯಿಲೆಗಳು ಇನ್ನಿಲ್ಲದಿರುವಾಗ!

ನೋವು ಮತ್ತು ಕಾಯಿಲೆಗಳಿಂದ ಉಪಶಮನವು, ತಾವು ಸತ್ತು ಸ್ವರ್ಗಕ್ಕೆ ಹೋದಾಗಲೇ ಸಿಗುವುದೆಂದು ಅನೇಕರು ನಿರೀಕ್ಷಿಸುತ್ತಾರೆ. ಆದರೆ ಜನಸಾಮಾನ್ಯರ ಈ ಅಭಿಪ್ರಾಯಕ್ಕೆ ವಿರುದ್ಧವಾಗಿ ಬೈಬಲ್‌ ಮಾನವಕುಲದ ಮುಂದಿಡುವಂಥ ನಿಜವಾದ ನಿರೀಕ್ಷೆಯೇನೆಂದರೆ, ಇದೇ ಭೂಮಿಯ ಮೇಲೆ ಒಂದು ಪರದೈಸಿನಲ್ಲಿ ಜೀವನ. (ಕೀರ್ತನೆ 37:11; 115:16) ವಾಗ್ದಾನಿಸಲ್ಪಟ್ಟಿರುವ ಈ ಭವಿಷ್ಯತ್ತಿನಲ್ಲಿ ಪರಿಪೂರ್ಣ ಆರೋಗ್ಯ, ಸಂತೋಷ ಹಾಗೂ ಶಾಶ್ವತ ಜೀವನವೂ ಸೇರಿದೆ.

ಆದರೆ ನಾವು ಕಾಯಿಲೆಬೀಳುವುದೂ ಸಾಯುವುದೂ ಏಕೆ? ಕಾಯಿಲೆಗಳೇ ಇಲ್ಲದಿರುವ ಜಗತ್ತು ಹೇಗೆ ಬರುವುದು? ಬೈಬಲ್‌ ಈ ಪ್ರಶ್ನೆಗಳಿಗೆ ಉತ್ತರಕೊಡುತ್ತದೆ.

ಕಾಯಿಲೆಗಳು ಬರಲು ನಿಜವಾದ ಕಾರಣ ನಮ್ಮ ಪ್ರಪ್ರಥಮ ಹೆತ್ತವರಾದ ಆದಾಮಹವ್ವರನ್ನು ಸೃಷ್ಟಿಸಲಾದಾಗ ಅವರಿಗೆ ಪರಿಪೂರ್ಣ ಆರೋಗ್ಯವುಳ್ಳ ದೇಹಗಳನ್ನು ಕೊಡಲಾಗಿತ್ತು. (ಆದಿಕಾಂಡ 1:31; ಧರ್ಮೋಪದೇಶಕಾಂಡ 32:⁠4) ಇದೇ ಭೂಮಿಯ ಮೇಲೆ ಶಾಶ್ವತವಾಗಿ ಜೀವಿಸುವಂಥ ರೀತಿಯಲ್ಲಿ ಅವರನ್ನು ರಚಿಸಲಾಗಿತ್ತು. ಆದರೆ ಅವರು ಇಚ್ಛಾಪೂರ್ವಕವಾಗಿ ದೇವರ ವಿರುದ್ಧ ದಂಗೆಯೆದ್ದ ನಂತರ ಅವರ ದೇಹಗಳು ರೋಗಗಳಿಗೆ ತುತ್ತಾಗಲಾರಂಭಿಸಿದವು. (ಆದಿಕಾಂಡ 3:​17-19) ದೇವರ ಅಧಿಕಾರವನ್ನು ತಿರಸ್ಕರಿಸುವ ಮೂಲಕ, ತಮ್ಮ ಪರಿಪೂರ್ಣ ಜೀವದ ಉಗಮನಾಗಿದ್ದ ಸೃಷ್ಟಿಕರ್ತನೊಂದಿಗಿನ ನಂಟನ್ನು ಅವರು ಕಡಿದುಹಾಕಿದರು ಮತ್ತು ದೋಷಪೂರಿತರಾದರು. ಇದರ ಪರಿಣಾಮವಾಗಿ, ದೇವರು ಈ ಮುಂಚೆಯೇ ಎಚ್ಚರಿಸಿದಂತೆ ಅವರು ಕಾಯಿಲೆಬಿದ್ದರು ಮತ್ತು ಸತ್ತರು.​—⁠ಆದಿಕಾಂಡ 2:​16, 17; 5:⁠5.

ಅವರ ದಂಗೆಯ ನಂತರ ಆದಾಮಹವ್ವರು, ತಮ್ಮ ಮಕ್ಕಳಿಗೆ ಅಪರಿಪೂರ್ಣತೆಯನ್ನು ಮಾತ್ರ ದಾಟಿಸಲು ಶಕ್ತರಾದರು. (ರೋಮಾಪುರ 5:12) ಹಿಂದಿನ ಲೇಖನಗಳಲ್ಲಿ ತಿಳಿಸಲ್ಪಟ್ಟಿರುವಂತೆ ನಾವು ಅನುವಂಶಿಕವಾಗಿ ಪಡೆದುಕೊಂಡಿರುವ ಅಸಮರ್ಪಕತೆಗಳು, ಕಾಯಿಲೆ ಹಾಗೂ ರೋಗಕ್ಕೆ ನಡೆಸುವ ಅಂಶಗಳಲ್ಲಿ ಕೆಲವೊಂದಾಗಿವೆ ಎಂದು ವಿಜ್ಞಾನಿಗಳು ಇಂದು ಒಪ್ಪಿಕೊಳ್ಳುತ್ತಾರೆ. ವ್ಯಾಪಕವಾದ ಸಂಶೋಧನೆಯ ಬಳಿಕ ವಿಜ್ಞಾನಿಗಳ ಒಂದು ಗುಂಪು ಇತ್ತೀಚೆಗೆ ಈ ತೀರ್ಮಾನಕ್ಕೆ ಬಂತು: “ಜೀವನವೆಂಬ ಇಂಜಿನು ಒಮ್ಮೆ ಶುರುವಾದ ಬಳಿಕ ದೇಹವು ಅದರ ಸ್ವಂತ ನಾಶನದ ಬೀಜಗಳನ್ನು ಅನಿವಾರ್ಯವಾಗಿ ಬಿತ್ತುತ್ತಾ ಮುಂದೆ ಸಾಗುತ್ತದೆಂಬುದು, ತಪ್ಪಿಸಿಕೊಳ್ಳಲಾಗದ ಒಂದು ಜೈವಿಕ ಸತ್ಯವಾಗಿದೆ.”

ಮಾನವ ಪ್ರಯತ್ನದಿಂದಲ್ಲ ಕಾಯಿಲೆಗಳ ವಿರುದ್ಧದ ಸಮರದಲ್ಲಿ ವಿಜ್ಞಾನವು ಬಹಳಷ್ಟು ದೊಡ್ಡ ಸಾಧನೆಗಳನ್ನು ಮಾಡುತ್ತಿದೆ. ಆದರೆ ವಿಜ್ಞಾನಕ್ಕೆ, ರೋಗದ ಕಾರಣವೇನೆಂಬುದು ಬಿಡಿಸಲಾಗದ ಒಂದು ಕಗ್ಗಂಟಾಗಿ ಉಳಿದಿದೆ. ಈ ಸಂಗತಿಯಿಂದ ಬೈಬಲ್‌ ವಿದ್ಯಾರ್ಥಿಗಳಿಗೆ ಅಚ್ಚರಿಯಾಗುವುದಿಲ್ಲ ಏಕೆಂದರೆ, “ಪ್ರಭುಗಳಲ್ಲಿ ಭರವಸವಿಡಬೇಡಿರಿ; ಮಾನವನನ್ನು ನೆಚ್ಚಬೇಡಿರಿ, ಅವನು ಸಹಾಯಮಾಡ ಶಕ್ತನಲ್ಲ” ಎಂಬ ದೇವಪ್ರೇರಿತ ಮಾತುಗಳು ಅವರಿಗೆ ಸುಪರಿಚಿತವಾಗಿವೆ.​—⁠ಕೀರ್ತನೆ 146:⁠3.

ಆದರೆ “ಮನುಷ್ಯರಿಗೆ ಅಸಾಧ್ಯವಾದ ಕಾರ್ಯಗಳು ದೇವರಿಗೆ ಸಾಧ್ಯವಾಗಿವೆ” ಎಂದು ಬೈಬಲ್‌ ಘೋಷಿಸುತ್ತದೆ. (ಲೂಕ 18:27) ಯೆಹೋವ ದೇವರು ಕಾಯಿಲೆಗಳ ಕಾರಣವನ್ನೇ ಇಲ್ಲವಾಗಿಸಬಲ್ಲನು. ಆತನು ನಮ್ಮ ಎಲ್ಲ ರೋಗರುಜಿನಗಳನ್ನು ಗುಣಪಡಿಸುವನು. (ಕೀರ್ತನೆ 103:⁠3) ಆತನ ಪ್ರೇರಿತ ವಾಕ್ಯವು ವಾಗ್ದಾನಿಸುವುದು: “ಇಗೋ, ದೇವರ ನಿವಾಸವು ಮನುಷ್ಯರಲ್ಲಿ ಅದೆ; ಆತನು ಅವರೊಡನೆ ವಾಸಮಾಡುವನು, ಅವರು ಆತನಿಗೆ ಪ್ರಜೆಗಳಾಗಿರುವರು; ದೇವರು ತಾನೇ ಅವರ ಸಂಗಡ ಇರುವನು, ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು.”​—⁠ಪ್ರಕಟನೆ 21:3, 4.

ನೀವೇನು ಮಾಡಬೇಕು? ಭವಿಷ್ಯದಲ್ಲಿ ಕಾಯಿಲೆಗಳಿಲ್ಲದ ಒಂದು ಲೋಕದಲ್ಲಿ ಜೀವನವನ್ನು ಆನಂದಿಸಲಿಕ್ಕಾಗಿ ನಾವೇನು ಮಾಡಬೇಕೆಂಬುದನ್ನು ಯೇಸು ಕ್ರಿಸ್ತನು ನೇರವಾಗಿ ಹೇಳಿದನು. ಅವನಂದದ್ದು: “ಒಬ್ಬನೇ ಸತ್ಯದೇವರಾಗಿರುವ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವದೇ ನಿತ್ಯಜೀವವು.”​—⁠ಯೋಹಾನ 17:⁠3.

ದೇವರ ಜ್ಞಾನ ಮತ್ತು ಆತನ ಪುತ್ರನಾದ ಯೇಸುವಿನ ಬೋಧನೆಗಳು ಬೈಬಲಿನಲ್ಲಿವೆ. ಅಂಥ ಜ್ಞಾನದಲ್ಲಿ, ನಿಮ್ಮ ಬದುಕನ್ನು ಈಗಲೇ ಉತ್ತಮಗೊಳಿಸುವಂಥ ಪ್ರಾಯೋಗಿಕ ಸಲಹೆಸೂಚನೆಯಿದೆ. ಆದರೆ ಇಂಥ ಬದುಕಿಗಿಂತಲೂ ಹೆಚ್ಚಾಗಿ, ಯಾವುದೇ ನೋವಿಲ್ಲದ ಒಂದು ಲೋಕವನ್ನು ದೇವರು ತನ್ನ ವಿಧೇಯ ಆರಾಧಕರಿಗಾಗಿ ವಾಗ್ದಾನಿಸುತ್ತಾನೆ. ಹೌದು, ‘ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳದಿರುವ’ ಒಂದು ಭವಿಷ್ಯತ್ತನ್ನು ದೇವರು ನಿಮ್ಮ ಮುಂದೆ ಇಡುತ್ತಾನೆ!​—⁠ಯೆಶಾಯ 33:⁠24. (g 1/07)

[ಪುಟ 11ರಲ್ಲಿರುವ ಚೌಕ/ಚಿತ್ರಗಳು]

ಆರೋಗ್ಯದ ಕುರಿತಾದ ಸಂತುಲಿತ ನೋಟ

ಜೀವವನ್ನು ಗೌರವಿಸುವಂತೆ ಬೈಬಲ್‌ ಉತ್ತೇಜಿಸುತ್ತದೆ. ಯೆಹೋವನ ಸಾಕ್ಷಿಗಳು ತಮ್ಮ ಆರೋಗ್ಯದ ಕಾಳಜಿವಹಿಸಲು ಪ್ರಯತ್ನಿಸುವ ಮೂಲಕ ಇಂಥ ಗೌರವವನ್ನು ತೋರಿಸುತ್ತಾರೆ. ಅಮಲೌಷಧ ದುರುಪಯೋಗ ಮತ್ತು ತಂಬಾಕು ಬಳಕೆಯಂಥ ಹಾನಿಕಾರಕ ಚಟಗಳಿಂದ ಅವರು ದೂರವಿರುತ್ತಾರೆ. ತನ್ನ ಆರಾಧಕರು ಉಣ್ಣುವ ಹಾಗೂ ಕುಡಿಯುವ ರೂಢಿಗಳಲ್ಲಿ ಮಿತಭಾವದವರಾಗಿರುವಂತೆ ದೇವರು ಅಪೇಕ್ಷಿಸುತ್ತಾನೆ. (ಜ್ಞಾನೋಕ್ತಿ 23:20; ತೀತ 2:​2, 3) ಇಂಥ ಪ್ರಾಯೋಗಿಕ ಹೆಜ್ಜೆಗಳೊಂದಿಗೆ ಸಾಕಷ್ಟು ವಿಶ್ರಾಂತಿ ಹಾಗೂ ವ್ಯಾಯಾಮವು, ಶಾರೀರಿಕ ಅಸ್ವಸ್ಥತೆಗಳು ಬರುವುದನ್ನು ಮುಂದೂಡುತ್ತದೆ ಅಥವಾ ತಡೆಯುತ್ತದೆ. ಕಾಯಿಲೆಯಿಂದ ನರಳುತ್ತಿರುವವರಿಗೆ, ಭರವಸಾರ್ಹ ಆರೋಗ್ಯತಜ್ಞರ ಸಹಾಯದ ಅಗತ್ಯವಿದೆ.

“ನ್ಯಾಯಸಮ್ಮತತೆ” ಮತ್ತು “ಸ್ವಸ್ಥ ಮನಸ್ಸನ್ನು” ಹೊಂದುವಂತೆ ಬೈಬಲು ಉತ್ತೇಜಿಸುತ್ತದೆ. (ತೀತ 2:12; ಫಿಲಿಪ್ಪಿ 4:​5, NW) ಇಂದು ಅನೇಕರಲ್ಲಿ ಸಂತುಲನದ ಕೊರತೆಯಿದ್ದು, ರೋಗದ ವಾಸಿಗಾಗಿ ಹುಡುಕಾಟವೇ ಅವರ ಮನಸ್ಸನ್ನು ಆವರಿಸಿಬಿಟ್ಟಿರುತ್ತದೆ. ಕೆಲವರು ಇದಕ್ಕಾಗಿ ತಮ್ಮ ಆಧ್ಯಾತ್ಮಿಕತೆಯನ್ನೂ ಬಲಿಕೊಡುತ್ತಾರೆ. ಇನ್ನು ಕೆಲವರು, ಹಾನಿಯನ್ನು ಉಂಟುಮಾಡಬಲ್ಲ ಅನುಮಾನಸ್ಪದ ಚಿಕಿತ್ಸೆಗಳ ಮರೆಹೋಗುತ್ತಾರೆ. ಇನ್ನಿತರರು ಹಣ ಹಾಗೂ ಸಮಯವನ್ನು ನೀರಿನಂತೆ ಖರ್ಚುಮಾಡುತ್ತಾರೆ, ಆದರೆ ಕೊನೆಗೆ ಆ ಚಿಕಿತ್ಸೆಗಳು ಮತ್ತು ಔಷಧಗಳಿಂದ ಏನೂ ಪರಿಣಾಮವಾಗುವುದಿಲ್ಲ. ಕೆಲವೊಮ್ಮೆ ಅವು ಹಾನಿಯನ್ನೂ ಮಾಡುತ್ತವೆ.

ವಸ್ತುಸ್ಥಿತಿಯೇನೆಂದರೆ, ಪರಿಪೂರ್ಣ ಆರೋಗ್ಯವು ಇಂದು ಎಲ್ಲಿಯೂ ದೊರಕದು. ಭವಿಷ್ಯದಲ್ಲಿ ಕಾಯಿಲೆಗಳಿಲ್ಲದ ಒಂದು ಸಮಯಕ್ಕಾಗಿ ನೀವು ಕಾಯುತ್ತಿರುವಾಗ, ಒಳ್ಳೇ ಆರೋಗ್ಯಕ್ಕಾಗಿ ನೀವು ಮಾಡುವ ಹುಡುಕಾಟದಲ್ಲಿ ಸಂತುಲಿತರಾಗಿರುವಂತೆ ಬೈಬಲಿನಲ್ಲಿರುವ ವಿವೇಕ ಹಾಗೂ ನ್ಯಾಯಸಮ್ಮತತೆಯು ನಿಮಗೆ ಸಹಾಯಮಾಡಬಲ್ಲದು.