ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜಗತ್ತನ್ನು ಗಮನಿಸುವುದು

ಜಗತ್ತನ್ನು ಗಮನಿಸುವುದು

ಜಗತ್ತನ್ನು ಗಮನಿಸುವುದು

ಅಮೆರಿಕದ ಕ್ಯಾಲಿಫೋರ್ನಿಯದಲ್ಲಿನ ಎರಡು ರಾಷ್ಟ್ರೀಯ ಉದ್ಯಾನವನಗಳಲ್ಲಿರುವ ಗುಹೆಗಳಲ್ಲಿ ನಡೆಸಲಾದ ಅಧ್ಯಯನದಿಂದ 27 ಹೊಸ ಪ್ರಾಣಿ ಜಾತಿಗಳನ್ನು ಕಂಡುಹಿಡಿಯಲಾಗಿದೆ. “ನಮ್ಮ ಸುತ್ತಲಿರುವ ಪ್ರಪಂಚದ ಬಗ್ಗೆ ನಮಗೆಷ್ಟು ಅಲ್ಪ ಪರಿಜ್ಞಾನವಿದೆ ಎಂಬುದಕ್ಕೆ ಇದೊಂದು ಸಾಕ್ಷ್ಯ” ಎಂದು ರಾಷ್ಟ್ರೀಯ ಉದ್ಯಾನವನ ಗುಹೆ ತಜ್ಞರಾದ ಜೊಯೆಲ್‌ ಡಸ್‌ಪೇನ್‌ ತಿಳಿಸಿದರು.​—⁠ಸ್ಮಿತ್‌ಸೋನಿಯನ್‌, ಯು.ಎಸ್‌.ಎ.

ಪ್ರಪಂಚದ ಜನಸಂಖ್ಯೆಯಲ್ಲಿ 20% ಜನರಿಗೆ ಕುಡಿಯುವ ನೀರು ಸಿಗುತ್ತಿಲ್ಲ. 40% ಜನರಿಗೆ ಮೂಲಭೂತ ನೈರ್ಮಲ್ಯ ವ್ಯವಸ್ಥೆ ಇಲ್ಲ.​—⁠ಮಿಲ್ನಿಯೋ, ಮೆಕ್ಸಿಕೊ. (g 1/07)

“ದಿನವಿಡೀ ಟೆಲಿವಿಷನ್‌ ಆನ್‌ ಮಾಡಿಡುವುದು, ಕುಟುಂಬಗಳು ಒಟ್ಟುಗೂಡಿ ಊಟಮಾಡದಿರುವುದು, ಮಕ್ಕಳನ್ನು ಕೂರಿಸಿ ತಳ್ಳಿಕೊಂಡು ಹೋಗುವ ಮುಮ್ಮುಖದ ಗಾಲಿ ಕುರ್ಚಿಗಳು (ಸ್ಟ್ರೋಲರ್‌ಗಳು)” ಹೆತ್ತವರ ಮತ್ತು ಮಕ್ಕಳ ನಡುವಿನ ಸಂವಾದವನ್ನು ಮುರಿದಿವೆ. ಇದರಿಂದಾಗಿ ಶಾಲೆಗೆ ಹೋಗಲು ಆರಂಭಿಸುವ ಮಕ್ಕಳು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಲು ಆಗದಿದ್ದಾಗ “ಸಿಡಿಮಿಡಿಗೊಳ್ಳುತ್ತಾರೆ.”​—⁠ದಿ ಇಂಡಿಪೆಂಡೆಂಟ್‌, ಬ್ರಿಟನ್‌. (g 2/07)

ಆಫೀಸಿನಲ್ಲಿ ಬ್ಯಾಕ್ಟೀರಿಯ

ಆರಿಸೋನಾ ವಿಶ್ವವಿದ್ಯಾನಿಲಯದ ಸೂಕ್ಷ್ಮಜೀವ ವಿಜ್ಞಾನಿಗಳು ಅಮೇರಿಕದ ನಗರಗಳಲ್ಲಿನ ಆಫೀಸುಗಳಲ್ಲಿರುವ ಬ್ಯಾಕ್ಟೀರಿಯಗಳ ಪರಿಮಾಣವನ್ನು ಕಂಡುಹಿಡಿದಿದ್ದಾರೆ. “ಹೆಚ್ಚಿನ ಮಟ್ಟಿಗೆ ಕ್ರಿಮಿಗಳಿಂದ ಕಲುಷಿತಗೊಂಡಿರುವ ಸ್ಥಳಗಳೆಂದರೆ ಫೋನ್‌ಗಳು, ಡೆಸ್ಕ್‌ಟಾಪ್‌ಗಳು, ನಲ್ಲಿಯ ತಿರುವುಗಳು, ಮೈಕ್ರೋವೇವ್‌ನ ಹ್ಯಾಂಡಲ್ಸ್‌ ಮತ್ತು ಕೀಬೋರ್ಡ್‌ಗಳಾಗಿವೆ” ಎಂದು ಅವರು ಕಂಡುಕೊಂಡರೆಂದು ಗ್ಲೋಬ್‌ ಅಂಡ್‌ ಮೇಲ್‌ ಎಂಬ ವಾರ್ತಾಪತ್ರಿಕೆಯು ತಿಳಿಸುತ್ತದೆ. ಆ ವರದಿಗನುಸಾರ “ಡೆಸ್ಕ್‌ಟಾಪ್‌ಗಳು ಸಾಮಾನ್ಯವಾಗಿ ಕಿಚನ್‌ ಟೇಬಲ್‌ಗಿಂತಲೂ 100 ಪಟ್ಟು ಹೆಚ್ಚು ಮತ್ತು ಟಾಯಿಲಿಟ್‌ ಸೀಟ್‌ಗಿಂತಲೂ 400 ಪಟ್ಟು ಹೆಚ್ಚಾಗಿ ಬ್ಯಾಕ್ಟೀರಿಯಗಳ ಬೀಡಾಗಿವೆ.” (g 1/07)

ಉಷ್ಣವಲಯದ ರೋಗಗಳ ಬಗ್ಗೆ ಕೊಂಚವೇ ಕಾಳಜಿ

ಹೆಚ್ಚಿನ ಉಷ್ಣವಲಯದ ರೋಗಗಳನ್ನು ವೈದ್ಯಕೀಯ ಸಂಶೋಧನೆಯು ಕಡೆಗಣಿಸಿದೆ. ಏಕೆ? “ವಿಷಾದಕರ ಸಂಗತಿಯೇನೆಂದರೆ . . . ಔಷಧಿ ತಯಾರಿಸುವ ಉದ್ಯಮವು [ಹೊಸ ಹೊಸ ಚಿಕಿತ್ಸೆಗಳನ್ನು] ಹುಡುಕುತ್ತಿಲ್ಲ” ಎಂದು ಸ್ಕಾಟ್‌ಲೆಂಡ್‌ನ ಡಂಡೀ ವಿಶ್ವವಿದ್ಯಾಲಯದ ಅಣು ಜೀವವಿಜ್ಞಾನಿ ಮೈಕಲ್‌ ಫರ್ಗಸನ್‌ ಹೇಳುತ್ತಾರೆ. ಔಷಧಿ ಕಂಪನಿಗಳು ಬಂಡವಾಳ ಹೂಡಿ ಕೈಸುಟ್ಟುಕೊಳ್ಳುತ್ತಿರುವುದರಿಂದ ಹೊಸ ಚಿಕಿತ್ಸೆಗಳನ್ನು ಕಂಡುಹಿಡಿಯಲು ಔಷಧಿ ಕಂಪನಿಗಳಿಗೆ ಯಾವುದೇ ಆರ್ಥಿಕ ನೆರವು ಸಿಗುತ್ತಿಲ್ಲ. ಆದುದರಿಂದಲೇ ಈ ಔಷಧಿ ಕಂಪನಿಗಳು ಆಲ್‌ಸೈಮರ್ಸ್‌ ರೋಗ, ಬೊಜ್ಜು ಮತ್ತು ಸತ್ವಹೀನತೆಯಂಥ ರೋಗಗಳಿಗಾಗಿ ದುಬಾರಿ ಔಷಧಿಗಳನ್ನು ತಯಾರಿಸಲು ಇಚ್ಛಿಸುತ್ತವೆ. ಆದರೆ ಇನ್ನೊಂದು ಬದಿಯಲ್ಲಿ ಒಂದು ಅಂದಾಜಿಗನುಸಾರ “ಲೋಕವ್ಯಾಪಕವಾಗಿ ಪ್ರತಿ ವರ್ಷ ಹತ್ತು ಲಕ್ಷ ಜನರು ಮಲೇರಿಯದಿಂದ ಸಾಯುತ್ತಿದ್ದಾರೆ. ಹಾಗಿದ್ದರೂ ಹಾನಿರಹಿತ ಹಾಗೂ ಪರಿಣಾಮಕಾರಿ ಚಿಕಿತ್ಸೆಗಳು ಇನ್ನೂ ಸಿಗುತ್ತಿಲ್ಲ” ಎಂದು ನ್ಯೂ ಸೈಅಂಟಿಸ್ಟ್‌ ಪತ್ರಿಕೆಯು ತಿಳಿಸುತ್ತದೆ. (g 2/07)

ಮಧುಮೇಹ​—⁠ಲೋಕವ್ಯಾಪಕ ಪಿಡುಗು

ಇಂಟರ್‌ನ್ಯಾಷನಲ್‌ ಡಯಾಬಿಟಿಸ್‌ ಫೆಡರೇಷನ್‌ನ ವರದಿಯು ಸೂಚಿಸುವ ಪ್ರಕಾರ ಕಳೆದ 20 ವರುಷಗಳಲ್ಲಿ ಲೋಕವ್ಯಾಪಕವಾಗಿ ಮಧುಮೇಹವಿದೆಯೆಂದು ಪತ್ತೆಹಚ್ಚಲಾಗಿರುವ ಜನರ ಸಂಖ್ಯೆಯು 3 ಕೋಟಿಯಿಂದ 23 ಕೋಟಿಗೆ ಏರಿದೆ ಎಂದು ದ ನ್ಯೂ ಯಾರ್ಕ್‌ ಟೈಮ್ಸ್‌ ಹೇಳುತ್ತದೆ. ಅಧಿಕ ಸಂಖ್ಯೆಯ ಮಧುಮೇಹಿಗಳನ್ನು ಹೊಂದಿರುವ ಹತ್ತು ದೇಶಗಳ ಪೈಕಿ ಏಳು ದೇಶಗಳು ಪ್ರಗತಿಪರ ದೇಶಗಳಾಗಿವೆ. “ಲೋಕವು ಹಿಂದೆಂದೂ ಕಂಡರಿಯದ ಮಹಾಮಾರಿ ಮಧುಮೇಹವಾಗಿದೆ” ಎಂದು ಫೆಡರೇಷನ್‌ನ ಅಧ್ಯಕ್ಷರಾದ ಡಾಕ್ಟರ್‌ ಮಾರ್ಟಿನ್‌ ಸಿಲಿಂಕ್‌ ತಿಳಿಸಿದರು. “ಜಗತ್ತಿನ ಕೆಲವು ಅತಿ ಬಡ ರಾಷ್ಟ್ರಗಳಲ್ಲಿ ಈ ರೋಗವು ಜನರಿಗೆ ಸ್ವಲ್ಪದರಲ್ಲೇ ಸಾವನ್ನು ತಂದೊಡ್ಡುತ್ತದೆ” ಎಂದು ಸಹ ಆ ವರದಿಯು ತಿಳಿಸುತ್ತದೆ.

ಜಗತ್ತಿನ ಅತಿ ಎತ್ತರದ ರೈಲುಮಾರ್ಗ

ಜಗತ್ತಿನ ಅತಿ ಎತ್ತರದ ರೈಲುಮಾರ್ಗವು 2006ರ ಜುಲೈಯಲ್ಲಿ ಉದ್ಘಾಟಿಸಲ್ಪಟ್ಟಿತು. ಇದು ಬೀಜಿಂಗನ್ನು ಟಿಬೆಟ್‌ನ ರಾಜಧಾನಿಯಾದ ಲಾಸಾದೊಂದಿಗೆ ಜೋಡಿಸುವ ಸುಮಾರು 4,000 ಕಿ.ಮೀ. ಉದ್ದದ ರೈಲುಮಾರ್ಗವಾಗಿದೆ. “ಈ ರೈಲುಮಾರ್ಗ ‘ನಿರ್ಮಾಣ ವಿಜ್ಞಾನದ ಅದ್ಭುತ’ವಾಗಿದೆ. ಸದಾ ಹೆಪ್ಪುಗಟ್ಟಿರುವ ಆದರೆ ಅಸ್ಥಿರವಾಗಿರುವ ಹಿಮದ ಮೇಲೆ ಇದು ಹಾದು ಹೋಗುತ್ತ, ಸಮುದ್ರಮಟ್ಟದಿಂದ 4,800ಮೀ. ಗಿಂತಲೂ ಅಧಿಕ ಎತ್ತರದಲ್ಲಿದೆ” ಎಂದು ನ್ಯೂ ಯಾರ್ಕ್‌ ಟೈಮ್ಸ್‌ ತಿಳಿಸುತ್ತದೆ. ಇಂಜಿನಿಯರ್‌ಗಳು ಜಯಿಸಿದ ಸವಾಲುಗಳಲ್ಲಿ ಒಂದು ಯಾವುದೆಂದರೆ, ರೈಲು ಕಂಬಿಯು ಹಾಸಲ್ಪಟ್ಟಿರುವ ಹಿಮನೆಲವನ್ನು ಸ್ಥಿರವಾಗಿಡಲಿಕ್ಕಾಗಿ ವರ್ಷವಿಡೀ ಹೆಪ್ಪುಗಟ್ಟಿರುವಂತೆ ನೋಡಿಕೊಳ್ಳುವುದು. ಅದು ಅತಿ ಎತ್ತರದಲ್ಲಿ ಇರುವುದರಿಂದ ಬೋಗಿಗಳಿಗೆ ಗಾಳಿಯನ್ನೂ ಸರಬರಾಜು ಮಾಡಬೇಕಾಗಿದೆ. ಮಾತ್ರವಲ್ಲ ಒಬ್ಬೊಬ್ಬ ಪ್ರಯಾಣಿಕನಿಗೆ ಆಮ್ಲಜನಕವನ್ನು ಒದಗಿಸುವ ಸೌಲಭ್ಯವೂ ಆ ಬೋಗಿಗಳಲ್ಲಿವೆ. (g 3/07)