ದೀನಭಾವ—ಬಲವೊ ಬಲಹೀನತೆಯೊ?
ಬೈಬಲಿನ ದೃಷ್ಟಿಕೋನ
ದೀನಭಾವ—ಬಲವೊ ಬಲಹೀನತೆಯೊ?
ಹೆಮ್ಮೆ ಹಾಗೂ ದೃಢ ಆತ್ಮವಿಶ್ವಾಸವುಳ್ಳವರೇ ಆದರ್ಶಪ್ರಾಯರೆಂದು ಈ ಲೋಕವು ಅನೇಕವೇಳೆ ಚಿತ್ರಿಸುತ್ತದೆ. ಆದರೆ ದೀನರಾದ ವಿನೀತ ಜನರನ್ನು ದುರ್ಬಲರೂ ಅಂಜುಬುರುಕರೂ ಅಡಿಯಾಳುಗಳೂ ಎಂಬಂತೆ ಅದು ನೋಡುತ್ತದೆ. ಹಾಗಾದರೆ ಸಾಚಾ ದೀನಭಾವವು ಬಲಹೀನತೆಯೊ? ಹೆಮ್ಮೆಯು ನಿಜವಾಗಿಯೂ ಬಲವೊ? ಬೈಬಲ್ ಈ ಕುರಿತು ಏನನ್ನುತ್ತದೆ?
ನಿರ್ದಿಷ್ಟ ರೀತಿಯಲ್ಲಿ ಹೆಮ್ಮೆಪಡುವುದಕ್ಕೆ ಬೈಬಲ್ ಒಪ್ಪಿಗೆ ಕೊಡುತ್ತದೆಂದು ಆರಂಭದಲ್ಲಿ ಸ್ಪಷ್ಟಪಡಿಸಲೇಬೇಕು. ಉದಾಹರಣೆಗೆ, ಯೆಹೋವನು ತಮ್ಮ ದೇವರಾಗಿದ್ದಾನೆಂಬುದಕ್ಕೂ ಆತನು ತಮ್ಮನ್ನು ಅರಿತಿದ್ದಾನೆಂಬುದಕ್ಕೂ ಕ್ರೈಸ್ತರು ಹೆಮ್ಮೆಪಡಬೇಕು. (ಕೀರ್ತನೆ 47:4; ಯೆರೆಮೀಯ 9:24; 2 ಥೆಸಲೊನೀಕ 1:3, 4) ತಮ್ಮ ಮಕ್ಕಳು ಕ್ರೈಸ್ತ ನಡತೆಯಲ್ಲಿ ಉತ್ತಮ ಮಾದರಿಯನ್ನಿಟ್ಟು ಸತ್ಯಾರಾಧನೆಯ ಪರವಾಗಿ ದೃಢನಿಲುವನ್ನು ತೆಗೆದುಕೊಳ್ಳುವಾಗ ಹೆತ್ತವರು ಹೆಮ್ಮೆಪಡಲು ಸಕಾರಣವಿದೆ. (ಜ್ಞಾನೋಕ್ತಿ 27:11) ಆದರೆ, ಹೆಮ್ಮೆಗೆ ಕರಾಳ ಮುಖವೊಂದಿದೆ.
ಹೆಮ್ಮೆ ಮತ್ತು ದೀನತೆಯ ಪರಿಶೀಲನೆ
ಹೆಮ್ಮೆಯ ಬಗ್ಗೆ ಇರುವ ಒಂದು ನಿರೂಪಣೆಯು ಮಿತಿಮೀರಿದ ಸ್ವಾಭಿಮಾನ ಎಂದಾಗಿದೆ. ಇಂಥ ಒಣ ಹೆಮ್ಮೆ ಒಬ್ಬನಿಗೆ ಸ್ವಪ್ರತಿಷ್ಠೆ ಮತ್ತು ತಾನೇ ಶ್ರೇಷ್ಠನೆಂಬ ಮನೋಭಾವವನ್ನು ಕೊಡುತ್ತದೆ. ಇದಕ್ಕೆ ಕಾರಣ ಅವನ ಸೌಂದರ್ಯ, ಕುಲ, ಸಾಮಾಜಿಕ ಸ್ಥಾನಮಾನ, ಸಾಮರ್ಥ್ಯ ಇಲ್ಲವೆ ಐಶ್ವರ್ಯ ಆಗಿರಬಹುದು. (ಯಾಕೋಬ 4:13-16) ಹೆಮ್ಮೆಯಿಂದ “ಉಬ್ಬಿಕೊಂಡಿರುವ” ಜನರ ಕುರಿತು ಬೈಬಲ್ ತಿಳಿಸುತ್ತದೆ. (2 ತಿಮೊಥೆಯ 3:4) ಬೇರೆ ಮಾತುಗಳಲ್ಲಿ ಹೇಳುವುದಾದರೆ, ಅವರಿಗೆ ತಮ್ಮ ಕುರಿತು ವಿನಾಕಾರಣ ಉಬ್ಬಿದ ಅಭಿಪ್ರಾಯವಿರುತ್ತದೆ.
ಆದರೆ ದೀನರಾದರೋ ತಮ್ಮನ್ನು ಪ್ರಾಮಾಣಿಕತೆಯಿಂದಲೂ ದೈನ್ಯದಿಂದಲೂ ವೀಕ್ಷಿಸುತ್ತಾರೆ. ತಮ್ಮ ಅಪೂರ್ಣತೆಗಳನ್ನೂ ದೇವರ ಮುಂದೆ ತಮಗಿರುವ ದೀನ ಸ್ಥಾನವನ್ನೂ ಒಪ್ಪಿಕೊಳ್ಳುತ್ತಾರೆ. (1 ಪೇತ್ರ 5:6) ಅಷ್ಟೇ ಏಕೆ, ಅವರು ಇತರರಲ್ಲಿ ಕಾಣುವ ಶ್ರೇಷ್ಠಗುಣಗಳನ್ನು ಅಂಗೀಕರಿಸುತ್ತಾರೆ ಮತ್ತು ಸಂತೋಷಿಸುತ್ತಾರೆ. (ಫಿಲಿಪ್ಪಿ 2:3) ಆದಕಾರಣ ಅವರು ಅಸೂಯೆಯಿಂದ ಕೆರಳುವುದೂ ಇಲ್ಲ ಮತ್ಸರದಿಂದ ಕುದಿಯುವುದೂ ಇಲ್ಲ. (ಗಲಾತ್ಯ 5:26) ಹೀಗಿರುವುದರಿಂದಲೇ ನಿಜ ದೈನ್ಯವು ಇತರರೊಂದಿಗೆ ಉತ್ತಮ ಸಂಬಂಧವನ್ನು ಬೆಳೆಸುತ್ತದೆ. ಭಾವಾತ್ಮಕ ಭದ್ರತೆಗೂ ಸ್ಥಿರತೆಗೂ ಸಹಾಯಮಾಡುತ್ತದೆ.
ಯೇಸುವಿನ ಮಾದರಿಯನ್ನು ತಕ್ಕೊಳ್ಳಿ. ಭೂಮಿಗೆ ಬರುವ ಮುನ್ನ ಅವನು ಸ್ವರ್ಗದಲ್ಲಿ ಶಕ್ತಿಶಾಲಿಯಾದ ಆತ್ಮಜೀವಿಯಾಗಿದ್ದನು. ಈ ಭೂಮಿಯಲ್ಲಿದ್ದಾಗ ಅವನು ಪರಿಪೂರ್ಣನೂ ಪಾಪರಹಿತನೂ ಆಗಿದ್ದನು. (ಯೋಹಾನ 17:5; 1 ಪೇತ್ರ 2:21, 22) ಅವನಲ್ಲಿ ಎಣೆಯಿಲ್ಲದ ಸಾಮರ್ಥ್ಯ, ಬುದ್ಧಿಶಕ್ತಿ ಮತ್ತು ಜ್ಞಾನಗಳಿದ್ದವು. ಆದರೂ ಯೇಸು ಅವನ್ನು ಹೆಮ್ಮೆಯಿಂದ ಪ್ರದರ್ಶಿಸದೆ ಸದಾ ದೀನನಾಗಿ ಉಳಿದನು. (ಫಿಲಿಪ್ಪಿ 2:6) ಒಂದು ಸಂದರ್ಭದಲ್ಲಿ ಅವನು ತನ್ನ ಶಿಷ್ಯರ ಪಾದಗಳನ್ನೂ ತೊಳೆದನು. ಚಿಕ್ಕ ಮಕ್ಕಳಲ್ಲೂ ನಿಜಾಸಕ್ತಿಯನ್ನು ತೋರಿಸಿದನು. (ಲೂಕ 18:15, 16; ಯೋಹಾನ 13:4, 5) ಒಮ್ಮೆ ಒಂದು ಮಗುವನ್ನು ತನ್ನ ಪಕ್ಕದಲ್ಲಿ ನಿಲ್ಲಿಸಿ ಯೇಸು ಹೇಳಿದ್ದು: “ಯಾವನು ಈ ಚಿಕ್ಕ ಮಗುವಿನಂತೆ ತನ್ನನ್ನು ತಗ್ಗಿಸಿಕೊಳ್ಳುತ್ತಾನೋ, ಅವನೇ ಪರಲೋಕರಾಜ್ಯದಲ್ಲಿ ಹೆಚ್ಚಿನವನು.” (ಮತ್ತಾಯ 18:2-4) ಹೌದು, ಯೇಸುವಿನ ಮತ್ತು ಅವನ ತಂದೆಯ ದೃಷ್ಟಿಯಲ್ಲಿ ನಿಜ ದೊಡ್ಡತನವು ಹೆಮ್ಮೆಯ ಫಲವಲ್ಲ, ದೈನ್ಯದ ಫಲವಾಗಿದೆ.—ಯಾಕೋಬ 4:10.
ದೀನತೆ ಶಕ್ತಿಶಾಲಿ
ಯೇಸು ದೈನ್ಯದ ಆದರ್ಶವಾಗಿದ್ದನು. ಆದರೆ ದಾಸನಂತೆ ತತ್ತರಿಸುವ ಮತ್ತಾಯ 23:1-33; ಯೋಹಾನ 8:13, 44-47; 19:10, 11) ಈ ಕಾರಣದಿಂದ ಅವನು ತನ್ನ ಕೆಲವು ವಿರೋಧಿಗಳ ಗೌರವವನ್ನೂ ಗಳಿಸಿದನು. (ಮಾರ್ಕ 12:13, 17; 15:5) ಆದರೆ ಯೇಸು ಎಂದೂ ದಬ್ಬಾಳಿಕೆ ನಡೆಸಲಿಲ್ಲ. ಬದಲಿಗೆ ದೀನತೆ, ದಯಾಪರತೆ ಹಾಗೂ ಪ್ರೀತಿಯಿಂದ ಜನರನ್ನು ಹಾರ್ದಿಕವಾಗಿ ಆಕರ್ಷಿಸಿದನು. ಹೀಗೆ ಅಹಂಕಾರಿಗಳು ಎಂದಿಗೂ ಮಾಡಲಸಾಧ್ಯವಾದ ರೀತಿಯಲ್ಲಿ ಜನರ ಮನಗೆದ್ದನು. (ಮತ್ತಾಯ 11:28-30; ಯೋಹಾನ 13:1; 2 ಕೊರಿಂಥ 5:14, 15) ಇಂದು ಕೂಡ ಲಕ್ಷಾಂತರ ಮಂದಿ ಅವನ ಮೇಲಣ ನಿಜ ಪ್ರೀತಿ ಮತ್ತು ಆಳವಾದ ಗೌರವದ ಕಾರಣ ಅವನಿಗೆ ನಿಷ್ಠೆಯಿಂದ ಅಧೀನರಾಗುತ್ತಾರೆ.—ಪ್ರಕಟನೆ 7:9, 10.
ಅಥವಾ ಅಂಜುಬುರುಕ ವ್ಯಕ್ತಿಯಾಗಿರಲಿಲ್ಲ. ಅವನು ಧೈರ್ಯದಿಂದ ಸತ್ಯವನ್ನಾಡಿದನು. ಅವನಿಗೆ ಮಾನುಷ ಭಯವೇ ಇರಲಿಲ್ಲ. (ದೇವರ ವಾಕ್ಯವು ದೀನತೆಯನ್ನು ಪ್ರೋತ್ಸಾಹಿಸುತ್ತದೆ. ಏಕೆಂದರೆ ಹೃದಯದಲ್ಲಿ ನಮ್ರರಾಗಿರುವವರು ಸಿದ್ಧಮನಸ್ಸಿನಿಂದ ಸಲಹೆಯನ್ನು ಅಂಗೀಕರಿಸುತ್ತಾರೆ. ಅವರಿಗೆ ಬೋಧಿಸುವುದು ಸಂತೋಷಕರವಾದ ಸಂಗತಿಯಾಗಿದೆ. (ಲೂಕ 10:21; ಕೊಲೊಸ್ಸೆ 3:10, 12) ಅಲ್ಲದೆ, ವಾಕ್ಚಾತುರ್ಯವಿದ್ದ ಆದಿ ಕ್ರೈಸ್ತ ಬೋಧಕನಾದ ಅಪೊಲ್ಲೋಸನಂತೆ, ನಿಷ್ಕೃಷ್ಟವಾದ ಹೊಸ ಮಾಹಿತಿ ದೊರೆತಾಗ ತಮ್ಮ ದೃಷ್ಟಿಕೋನವನ್ನು ಹೊಂದಿಸಿಕೊಳ್ಳಲು ಅವರು ಇಷ್ಟಪಡುತ್ತಾರೆ. (ಅ. ಕೃತ್ಯಗಳು 18:24-26) ಪ್ರಶ್ನೆಗಳನ್ನು ಕೇಳುವುದಕ್ಕೆ ಅವರು ಭಯಪಡುವುದಿಲ್ಲ. ಆದರೆ ಹೆಮ್ಮೆಯ ಜನರು ಹೆಚ್ಚಾಗಿ ತಮ್ಮ ತಿಳಿಗೇಡಿತನ ಬಯಲಾಗುತ್ತದೆ ಎಂಬ ಭಯದಿಂದ ಪ್ರಶ್ನೆಗಳನ್ನೇ ಕೇಳುವುದಿಲ್ಲ.
ಒಂದನೆಯ ಶತಮಾನದ ಇಥಿಯೋಪ್ಯದ ಕಂಚುಕಿಯ ಉದಾಹರಣೆಯನ್ನು ಗಮನಿಸಿರಿ. ಶಾಸ್ತ್ರದ ಒಂದು ಭಾಗವನ್ನು ಅವನು ಓದುತ್ತಿದ್ದಾಗ ತಬ್ಬಿಬ್ಬಾದನು. ಆಗ ಕ್ರೈಸ್ತ ಶಿಷ್ಯನಾದ ಫಿಲಿಪ್ಪನು “ಎಲೈ, ನೀನು ಓದುವದು ನಿನಗೆ ತಿಳಿಯುತ್ತದೋ?” ಎಂದು ಕೇಳಿದನು. ಅದಕ್ಕೆ ಇಥಿಯೋಪ್ಯದವನು, “ಯಾರಾದರೂ ನನಗೆ ಅರ್ಥ ತಿಳಿಸಿಕೊಟ್ಟ ಹೊರತು ಅದು ನನಗೆ ಹೇಗೆ ತಿಳಿದೀತು?” ಎಂದು ಉತ್ತರ ಕೊಟ್ಟನು. ಇದೆಂಥ ದೈನ್ಯಭಾವ! ವಿಶೇಷವಾಗಿ ಅವನು ತನ್ನ ಸ್ವದೇಶದಲ್ಲಿ ಒಬ್ಬ ಗಣ್ಯವ್ಯಕ್ತಿಯಾಗಿದ್ದರೂ ದೈನ್ಯಭಾವವನ್ನು ತೋರಿಸಿದನು. ಅವನ ದೀನತೆಯು ಅವನಿಗೆ ದೇವರ ವಾಕ್ಯದ ಆಳವಾದ ಒಳನೋಟವನ್ನು ಕೊಟ್ಟಿತು.—ಅ. ಕೃತ್ಯಗಳು 8:26-38.
ಈ ಇಥಿಯೋಪ್ಯದವನು ಯೆಹೂದಿ ಶಾಸ್ತ್ರಿಗಳಿಗಿಂತ ಮತ್ತು ಫರಿಸಾಯರಿಗಿಂತ ತೀರ ಭಿನ್ನ ವ್ಯಕ್ತಿಯಾಗಿದ್ದನು. ಅವರ ಕಾಲದ ಧಾರ್ಮಿಕ ಆಚಾರವಿಚಾರಗಳಲ್ಲಿ ತಾವೇ ಶ್ರೇಷ್ಠರು ಎಂಬ ಹೆಗ್ಗಳಿಕೆ ಫರಿಸಾಯರಿಗಿತ್ತು. (ಮತ್ತಾಯ 23:5-7) ಯೇಸು ಮತ್ತು ಅವನ ಅನುಯಾಯಿಗಳಿಗೆ ದೈನ್ಯದಿಂದ ಕಿವಿಗೊಡುವ ಬದಲು ಅವರನ್ನು ತೃಣೀಕರಿಸಿ ತಪ್ಪು ಕಂಡುಹಿಡಿಯಲು ಫರಿಸಾಯರು ಪ್ರಯತ್ನಿಸಿದರು. ಹೀಗೆ ಅವರ ಹೆಮ್ಮೆ ಅವರನ್ನು ಆಧ್ಯಾತ್ಮಿಕ ಅಂಧಕಾರದಲ್ಲಿ ಇಟ್ಟಿತು.—ಯೋಹಾನ 7:32, 47-49; ಅ. ಕೃತ್ಯಗಳು 5:29-33.
ನೀವು ಮೃದು ಜೇಡಿಮಣ್ಣೋ ಗಟ್ಟಿ ಜೇಡಿಮಣ್ಣೋ?
ಬೈಬಲ್ ಯೆಹೋವನನ್ನು ಕುಂಬಾರನಿಗೂ ಮನುಷ್ಯರನ್ನು ಜೇಡಿಮಣ್ಣಿಗೂ ಹೋಲಿಸುತ್ತದೆ. (ಯೆಶಾಯ 64:8) ಒಬ್ಬ ವ್ಯಕ್ತಿಯು ದೇವರ ಕೈಗಳಲ್ಲಿ ಮೃದುವಾದ ಜೇಡಿಮಣ್ಣಿನಂತೆ ಇರಲು ದೀನಭಾವವು ಸಹಾಯಮಾಡುತ್ತದೆ. ಅವನನ್ನು ದೇವರು ತನಗೆ ಪ್ರಿಯವಾದ ಪಾತ್ರೆಯಾಗಿ ರೂಪಿಸುತ್ತಾನೆ. ಆದರೆ ಅಹಂಕಾರಿಗಳು ಒಣಗಿ ಗಟ್ಟಿಯಾದ, ಪುಡಿಮಾಡಲು ಮಾತ್ರ ತಕ್ಕದಾದ ಜೇಡಿಮಣ್ಣಿನಂತಿದ್ದಾರೆ. ಇದರ ಒಂದು ಕುಪ್ರಸಿದ್ಧ ಮಾದರಿಯು ಪುರಾತನ ಈಜಿಪ್ಟ್‌ನ ದುರಹಂಕಾರಿ ಫರೋಹನದ್ದಾಗಿದೆ. ಅವನು ಯೆಹೋವನನ್ನು ಪ್ರತಿಭಟಿಸುತ್ತ ತನ್ನ ಪ್ರಾಣನಷ್ಟ ಹೊಂದಿದನು. (ವಿಮೋಚನಕಾಂಡ 5:2; 9:17; ಕೀರ್ತನೆ 136:15) ಫರೋಹನ ಮರಣವು “ಗರ್ವದಿಂದ ಭಂಗ; ಉಬ್ಬಿನಿಂದ ದೊಬ್ಬು” ಎಂಬ ಜ್ಞಾನೋಕ್ತಿಯನ್ನು ಉತ್ತಮವಾಗಿ ಚಿತ್ರಿಸುತ್ತದೆ.—ಜ್ಞಾನೋಕ್ತಿ 16:18.
ಈ ಮೇಲಿನ ಹೇಳಿಕೆಯು, ದೇವಜನರು ಹೆಮ್ಮೆಯ ಭಾವನೆಗಳನ್ನು ಜಯಿಸಲು ಎಂದಿಗೂ ಹೋರಾಡಬೇಕಾಗಿಲ್ಲ ಎಂಬುದನ್ನು ಅರ್ಥೈಸುವುದಿಲ್ಲ. ದೃಷ್ಟಾಂತಕ್ಕೆ, ಯೇಸುವಿನ ಅಪೊಸ್ತಲರು ಅನೇಕ ಬಾರಿ ತಮ್ಮಲ್ಲಿ ಯಾವನು ಅತಿ ಶ್ರೇಷ್ಠನು ಎಂದು ವಾದಿಸಿದರು. (ಲೂಕ 22:24-27) ಆದರೂ ಅವರನ್ನು ಹೆಮ್ಮೆಯು ವಶಮಾಡಿಕೊಳ್ಳಲಿಲ್ಲ. ಅವರು ಯೇಸುವಿಗೆ ಕಿವಿಗೊಟ್ಟು ಕೊನೆಗೆ ತಮ್ಮ ಮನೋಭಾವವನ್ನು ಬದಲಾಯಿಸಿಕೊಂಡರು.
“ಧನ ಮಾನ ಜೀವಗಳು ದೀನಭಾವಕ್ಕೂ ಯೆಹೋವನ ಭಯಕ್ಕೂ ಫಲ” ಎಂದು ಸೊಲೊಮೋನನು ಬರೆದನು. (ಜ್ಞಾನೋಕ್ತಿ 22:4) ಈ ದೀನಭಾವವನ್ನು ಬೆಳೆಸಿಕೊಳ್ಳಲು ಎಂಥ ಸ್ವಸ್ಥ ಕಾರಣಗಳು ನಮಗಿವೆ! ಅದು ಶಕ್ತಿಯುತವೂ ಪ್ರೀತಿಪಾತ್ರವೂ ಆದ ಗುಣವಾಗಿದೆ. ಮಾತ್ರವಲ್ಲ, ನಾವು ದೇವರ ಅನುಗ್ರಹವನ್ನು ಗಳಿಸಲು ಮತ್ತು ನಿತ್ಯಜೀವದ ಬಹುಮಾನವನ್ನು ಪಡೆಯಲು ಸಹ ದೀನಭಾವವು ಸಹಾಯಮಾಡುತ್ತದೆ.—2 ಸಮುವೇಲ 22:28; ಯಾಕೋಬ 4:10. (g 3/07)
ಇದರ ಬಗ್ಗೆ ನೀವು ಯೋಚಿಸಿದ್ದುಂಟೋ?
◼ ಎಲ್ಲ ರೀತಿಯ ಹೆಮ್ಮೆಯು ಕೆಟ್ಟದ್ದೋ?—2 ಥೆಸಲೊನೀಕ 1:3, 4.
◼ ದೀನಭಾವ ಕಲಿಕೆಯನ್ನು ಹೇಗೆ ಪ್ರವರ್ಧಿಸುತ್ತದೆ?—ಅ. ಕೃತ್ಯಗಳು 8:26-38.
◼ ದೇವರ ಸೇವಕರು ದೀನಭಾವವನ್ನು ಬೆಳೆಸಿಕೊಳ್ಳುವ ಅಗತ್ಯವಿದೆಯೇ?—ಲೂಕ 22:24-27.
◼ ದೀನರಿಗೆ ಯಾವ ಭವಿಷ್ಯ ಕಾದಿದೆ?—ಜ್ಞಾನೋಕ್ತಿ 22:4.
[ಪುಟ 20, 21ರಲ್ಲಿರುವ ಚಿತ್ರ]
ಯೇಸು ದೀನನಾಗಿದ್ದುದರಿಂದ ಮಕ್ಕಳು ಅವನ ಕಡೆಗೆ ಆಕರ್ಷಿಸಲ್ಪಟ್ಟರು