ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ರಷ್ಯದ ಪೆಸಿಫಿಕ್‌ ಅದ್ಭುತ ಲೋಕ ಕಾಮ್‌ಚಟ್ಕಾ

ರಷ್ಯದ ಪೆಸಿಫಿಕ್‌ ಅದ್ಭುತ ಲೋಕ ಕಾಮ್‌ಚಟ್ಕಾ

ರಷ್ಯದ ಪೆಸಿಫಿಕ್‌ ಅದ್ಭುತ ಲೋಕ ಕಾಮ್‌ಚಟ್ಕಾ

ರಷ್ಯದ ಎಚ್ಚರ! ಲೇಖಕರಿಂದ

ಮುನ್ನೂರು ವರುಷಗಳಿಗಿಂತಲೂ ಹಿಂದೆ, ರಷ್ಯಾದ ಪರಿಶೋಧಕರು ಏಷ್ಯಾವನ್ನು ಹಾದುಹೋಗುತ್ತಾ ಪೂರ್ವ ದಿಕ್ಕಿನಲ್ಲಿ ಮುಂದುವರಿಯುತ್ತಿದ್ದಾಗ ಪರ್ವತಮಯವಾದ ಒಂದು ಪರ್ಯಾಯ ದ್ವೀಪಕ್ಕೆ ಬಂದರು. ಇದು ದಕ್ಷಿಣದಲ್ಲಿ ಪೆಸಿಫಿಕ್‌ ಸಾಗರದವರೆಗೆ ಮುನ್‌ಚಾಚಿಕೊಳ್ಳುತ್ತಾ ಅಕಾಟ್‌ಸ್ಕ್‌ ಸಮುದ್ರವನ್ನು ಬೇರಿಂಗ್‌ ಸಮುದ್ರದಿಂದ ಬೇರ್ಪಡಿಸುತ್ತದೆ. ಇಟೆಲಿ ದೇಶಕ್ಕಿಂತ ಸ್ವಲ್ಪ ದೊಡ್ಡದಾಗಿರುವ ಈ ರಮಣೀಯವಾದ ಭೂಭಾಗವು ಹೊರಗಿನ ಜನರಿಗೆ ಈಗಲೂ ಅಜ್ಞಾತವಾಗಿದೆ.

ಕಾಮ್‌ಚಟ್ಕಾದ ಕರಾವಳಿ ಪ್ರದೇಶದಲ್ಲಿ ಚಳಿಗಾಲವು ಒಳನಾಡಿಗಿಂತ ಕಡಿಮೆ ತೀಕ್ಷ್ಣವಾಗಿರುತ್ತವೆ. ಆದರೆ ಕೆಲವೊಂದು ಒಳನಾಡಿನ ಪ್ರದೇಶಗಳಲ್ಲಿ 20 ಅಡಿಗಳಷ್ಟು, ಇನ್ನೂ ಕೆಲವೊಮ್ಮೆ 40 ಅಡಿಗಳಷ್ಟು ಹಿಮ ಬೀಳಬಹುದು! ಬೇಸಿಗೆಕಾಲದಲ್ಲಿ, ಬಲವಾಗಿ ಬೀಸುವ ಗಾಳಿಗಳು ತರುವ ಕಡಲ ಮಂಜು ಈ ಪರ್ಯಾಯ ದ್ವೀಪದಾದ್ಯಂತ ಮುಸುಕಿರುತ್ತದೆ. ಕಾಮ್‌ಚಟ್ಕಾದಲ್ಲಿರುವ ಜ್ವಾಲಾಮುಖಿಗಳ ಮಣ್ಣಿನ ಮೇಲೆ ಬೀಳುವ ಸಮೃದ್ಧ ಮಳೆಯಿಂದಾಗಿ ಸಸ್ಯಗಳು ಸೊಂಪಾಗಿ ಬೆಳೆಯುತ್ತವೆ. ಅದರಲ್ಲಿ ಬೆರಿ ಹಣ್ಣಿನ ಪೊದೆಗಳು, ಮನುಷ್ಯನಷ್ಟು ಎತ್ತರಕ್ಕೆ ಬೆಳೆಯುವ ಹುಲ್ಲು ಮತ್ತು ಶೋಭಾಯಮಾನ ಕಾಡುಹೂವುಗಳು ಸೇರಿವೆ. ಈ ಹೂವುಗಳಲ್ಲಿ ಹುಲ್ಲುಗಾವಲಿನ ರಾಣಿಯೆಂದೇ ಹೆಸರುವಾಸಿಯಾಗಿರುವ ಒಂದು ಗುಲಾಬಿಯೂ ಇದೆ.

ಸ್ಟೋನ್‌ ಅಥವಾ ಎರ್‌ಮಾನ್‌ ಎಂಬ ಹೆಸರಿನ ಬರ್ಚ್‌ ಮರಗಳು ಈ ಪರ್ಯಾಯ ದ್ವೀಪದ ಬಹುಮಟ್ಟಿಗೆ ಮೂರನೆಯೊಂದು ಭಾಗವನ್ನು ಆವರಿಸಿವೆ. ಅಲ್ಲಿ ಬೀಸುವ ಬಿರುಸಾದ ಗಾಳಿಗಳ ಮತ್ತು ದಟ್ಟವಾಗಿ ಬೀಳುವ ಹಿಮದಿಂದಾಗಿ ಆ ಮರಗಳ ಕಾಂಡಗಳು, ರೆಂಬೆಕೊಂಬೆಗಳು ಬಾಗಿಸಲ್ಪಟ್ಟಿವೆ ಹಾಗೂ ತಿರುಚಲ್ಪಟ್ಟಿವೆ. ಯಾವುದೇ ಸ್ಥಿತಿಯನ್ನು ತಡೆದುಕೊಳ್ಳಬಲ್ಲ ಹಾಗೂ ನಿಧಾನಗತಿಯಲ್ಲಿ ಬೆಳೆಯುವ ಈ ಬರ್ಚ್‌ ಮರಗಳು ಅಸಾಮಾನ್ಯವಾದ ರೀತಿಯಲ್ಲಿ ಗಟ್ಟಿಮುಟ್ಟಾಗಿರುತ್ತವೆ. ಅವುಗಳ ಬೇರುಗಳು ಸಹ ನೆಲವನ್ನು ಭದ್ರವಾಗಿ ಹಿಡಿದುಕೊಂಡಿರುತ್ತವೆ. ಇದರಿಂದಾಗಿ, ಈ ಮರಗಳು ಯಾವುದೇ ಸ್ಥಳದಲ್ಲಿ, ಅಂದರೆ ಕಡಿದಾದ ಬಂಡೆಗಳಿಂದಲೂ ಅಡ್ಡವಾಗಿ ಬೆಳೆಯಲೂ ಸಾಧ್ಯವಾಗುತ್ತದೆ! ಹಿಮ ಇನ್ನೂ ಬೀಳುತ್ತಿರುವಾಗಲೇ ಅಂದರೆ ಜೂನ್‌ ತಿಂಗಳಲ್ಲಿ ಅವುಗಳ ಎಲೆಗಳು ಚಿಗುರುತ್ತವೆ ಮತ್ತು ಅವು ಚಳಿಗಾಲದ ಆಗಮನವನ್ನು ಸಾರುತ್ತಾ ಆಗಸ್ಟ್‌ ತಿಂಗಳಿನಲ್ಲಿ ಹಳದಿ ಬಣ್ಣಕ್ಕೆ ತಿರುಗುತ್ತವೆ.

ಜ್ವಾಲಾಮುಖಿಗಳು, ಬಿಸಿನೀರಿನ ಬುಗ್ಗೆಗಳು ಮತ್ತು ಕೊಳಗಳು

ಪೆಸಿಫಿಕ್‌ ಸಾಗರದ ಒಂದು ಅಂಚಿನಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಭೂಕಂಪಗಳಾಗುವ ಒಂದು ವಲಯವಿದೆ. ಇದನ್ನು ರಿಂಗ್‌ ಅಫ್‌ ಫೈಅರ್‌ (ಅಗ್ನಿ ವರ್ತುಲ) ಎಂದು ಕರೆಯಲಾಗುತ್ತದೆ. ಈ ವಲಯದಲ್ಲೇ ಕಾಮ್‌ಚಟ್ಕಾವು ಇದೆ. ಕಾಮ್‌ಚಟ್ಕಾದಲ್ಲಿ ಸುಮಾರು 30 ಜಾಗೃತ ಜ್ವಾಲಾಮುಖಿಗಳಿವೆ. “ಪರಿಪೂರ್ಣವಾದ ಮತ್ತು ಬೆರಗುಗೊಳಿಸುವಷ್ಟು ಸುಂದರವಾದ ಶಂಕುವಿನಾಕಾರ”ವುಳ್ಳದೆಂದು ವರ್ಣಿಸಲಾಗಿರುವ ಕ್ಲೀವುಚೆಫ್‌ಸ್ಕಯ ಜ್ವಾಲಾಮುಖಿಯ ಶಿಖರವು ಸಮುದ್ರ ಮಟ್ಟಕ್ಕಿಂತ 15,584 ಅಡಿಗಳಷ್ಟು ಎತ್ತರಕ್ಕೆ ಎದ್ದುನಿಂತಿದೆ. ಇದು ಯುರೋಪ್‌ ಮತ್ತು ಏಷ್ಯದಲ್ಲೇ ಅತಿ ದೊಡ್ಡ ಜಾಗೃತ ಜ್ವಾಲಾಮುಖಿಯಾಗಿದೆ. 1697ರಲ್ಲಿ ಮೊತ್ತಮೊದಲ ಬಾರಿ ರಷ್ಯಾದ ಪರಿಶೋಧಕರು ಕಾಮ್‌ಚಟ್ಕಾಕ್ಕೆ ಕಾಲಿಟ್ಟಂದಿನಿಂದ ಈಚೆಗೆ ಸುಮಾರು 600 ಬಾರಿ ಆ ಪರ್ಯಾಯ ದ್ವೀಪದಲ್ಲಿ ಜ್ವಾಲಾಮುಖಿಗಳ ಚಿಮ್ಮುವಿಕೆಗಳು ಸಂಭವಿಸಿರುವುದಾಗಿ ದಾಖಲಾಗಿದೆ.

ಇಸವಿ 1975/76ರಲ್ಲಿ ಟೋಲ್ಬಾಚಿಕ್‌ ಪ್ರದೇಶದಲ್ಲಿನ ಬಿರುಕುಗಳಿಂದಾದ ಶಿಲಾರಸದ ಚಿಮ್ಮುವಿಕೆಗಳು 8,000 ಅಡಿಗಳಷ್ಟು ಎತ್ತರದ ಧಗಧಗಿಸುವ ‘ಪಂಜನ್ನು’ ಉಂಟುಮಾಡಿದವು! ಬೂದಿ ಮೋಡಗಳ ಮಧ್ಯೆ ಸಿಡಿಲು ಮಿಂಚಿತು. ಬಹುಮಟ್ಟಿಗೆ ಒಂದೂವರೆ ವರುಷದ ವರೆಗೆ ನಿರಂತರವಾಗಿ ಆದ ಚಿಮ್ಮುವಿಕೆಗಳಿಂದಾಗಿ ನಾಲ್ಕು ಹೊಸ ಜ್ವಾಲಾಮುಖಿ ಶಂಕುಗಳ ರಚನೆಯಾಯಿತು. ಸರೋವರಗಳು ಹಾಗೂ ನದಿಗಳು ಬತ್ತಿಹೋದವು ಮತ್ತು ಬಿಸಿ ಬೂದಿಯು ಇಡೀ ಕಾಡುಗಳನ್ನೇ ಸಂಪೂರ್ಣವಾಗಿ ಒಣಗಿಸಿಬಿಟ್ಟಿತು. ಗ್ರಾಮಾಂತರ ಪ್ರದೇಶಗಳು ಬಹು ದೂರದವರೆಗೆ ಮರಳುಗಾಡುಗಳಾಗಿ ಪರಿವರ್ತಿಸಲ್ಪಟ್ಟವು.

ಸಂತೋಷಕರವಾಗಿಯೇ ಹೆಚ್ಚಿನ ಜ್ವಾಲಾಮುಖಿ ಚಿಮ್ಮುವಿಕೆಗಳು ಜನನಿವಾಸಿತ ಪ್ರದೇಶಗಳಿಂದ ದೂರದಲ್ಲಿ ಸಂಭವಿಸಿದವು ಮತ್ತು ಕೆಲವೇ ಮಂದಿ ಕೊಲ್ಲಲ್ಪಟ್ಟರು. ಆದರೆ ಅಲ್ಲಿಗೆ ಹೋಗುವ ಸಂದರ್ಶಕರು ಕೆಲವೊಂದು ಬೇರೆ ಕಾರಣಗಳಿಗಾಗಿ ಎಚ್ಚರವಾಗಿರುವ ಅಗತ್ಯವಿರುತ್ತದೆ. ವಿಶೇಷವಾಗಿ ಕೀಕ್‌ಪೀನಕ್‌ ಜ್ವಾಲಾಮುಖಿಯ ತಪ್ಪಲಲ್ಲಿರುವ ‘ಸಾವಿನ ಕಣಿವೆ’ಯನ್ನು ಸಂದರ್ಶಿಸುವಾಗ ಇದು ಅಗತ್ಯ. ಗಾಳಿ ಬೀಸದಿರುವಾಗ ಅದರಲ್ಲೂ ವಿಶೇಷವಾಗಿ ಹಿಮ ಕರಗುವ ವಸಂತಕಾಲದಲ್ಲಿ, ಜ್ವಾಲಾಮುಖಿಗಳಿಂದ ಹೊರಸೂಸಲ್ಪಟ್ಟ ವಿಷಪೂರಿತ ಅನಿಲಗಳು ಆ ಕಣಿವೆಯಲ್ಲಿ ಶೇಖರಗೊಳ್ಳುತ್ತವೆ. ಇದರಿಂದಾಗಿ ಆ ಪ್ರದೇಶವು ವನ್ಯಜೀವಿಗಳಿಗೆ ಮೃತ್ಯುಪಾಶವಾಗುತ್ತದೆ. ಒಮ್ಮೆ, ಆ ಕಣಿವೆಯಲ್ಲೆಲ್ಲಾ ಹತ್ತು ಕರಡಿಗಳ ಮತ್ತು ಇನ್ನೂ ಅನೇಕ ಸಣ್ಣ ಪ್ರಾಣಿಗಳ ಶವಗಳು ಬಿದಿದ್ದವು.

ಉಜೊನ್‌ ಕಾಲ್‌ಡೇರ ಎಂದು ಕರೆಯಲ್ಪಡುವ ವಿಶಾಲವಾದ ಜ್ವಾಲಾಮುಖಿ ಕುಂಡದಲ್ಲಿ ಗುಳುಗಳಿಸುತ್ತಿರುವ ಕೆಸರಿನ ಹೊಂಡಗಳಿವೆ ಮತ್ತು ಬಣ್ಣಬಣ್ಣದ ಶೈವಲ (ಆಲ್ಗೆ)ಗಳಿಂದ ತುಂಬಿರುವ ಹಬೆಯಾಡುತ್ತಿರುವ ಸರೋವರಗಳಿವೆ. ಅದೇ ಪ್ರದೇಶದಲ್ಲಿ 1941ರಲ್ಲಿ ಕಂಡುಹಿಡಿಯಲಾದ ‘ಬಿಸಿನೀರಿನ ಬುಗ್ಗೆಗಳ ಕಣಿವೆ’ ಇದೆ. ಬಿಸಿ ನೀರಿನ ಕೆಲವು ಬುಗ್ಗೆಗಳು ಎರಡು ಅಥವಾ ಮೂರು ನಿಮಿಷಕ್ಕೊಂದಾವರ್ತಿ ಚಿಮ್ಮುತ್ತವೆ ಮತ್ತು ಇತರ ಬುಗ್ಗೆಗಳು ಕೆಲವು ದಿನಗಳಿಗೊಮ್ಮೆ ಚಿಮ್ಮುತ್ತವೆ. ಪಿಟ್ರಪಾವ್ಲಫ್‌ಸ್ಕ್‌-ಕಾಮ್‌ಚಾಟ್ಸ್‌ಕೀ ಎಂಬ ನಗರದಿಂದ ಸುಮಾರು 180 ಕಿಲೋಮೀಟರ್‌ ಉತ್ತರ ದಿಕ್ಕಿನಲ್ಲಿರುವ ಈ ವಿಸ್ಮಯಕಾರಿ ಸ್ಥಳಗಳಿಗೆ ಸಂದರ್ಶಕರನ್ನು ಹೆಲಿಕಾಪ್ಟರ್‌ಗಳಲ್ಲಿ ಕರೆದೊಯ್ಯುಲಾಗುತ್ತದೆ. ಆದರೆ ಇಲ್ಲಿನ ನಾಜೂಕಾದ ಪರಿಸರೀಯ ಸಮತೋಲನದಲ್ಲಿ ಏರುಪೇರಾಗದಂತೆ ಕಾಪಾಡಲಿಕ್ಕಾಗಿ ಸಂದರ್ಶಕರ ಸಂಖ್ಯೆಯನ್ನು ಕಟ್ಟುನಿಟ್ಟಾಗಿ ಅಂಕೆಯಲ್ಲಿಡಲಾಗಿದೆ. ಆ ಉದ್ದೇಶದಿಂದಲೇ ಕಾಮ್‌ಚಟ್ಕಾದಲ್ಲಿರುವ ಆರು ಪ್ರದೇಶಗಳನ್ನು ವಿಶ್ವ ಪರಂಪರೆಯ ತಾಣಗಳೆಂದು ಸಂರಕ್ಷಿಸಲಾಗಿದೆ.

ಕಾಮ್‌ಚಟ್ಕಾದಲ್ಲಿ ಬಿಸಿನೀರಿನ ಅನೇಕ ಕೊಳಗಳಿವೆ. ಅವುಗಳಲ್ಲಿ ಹೆಚ್ಚಿನವುಗಳ ತಾಪಮಾನವು 30-40° ಸೆಲ್ಸಿಯಸ್‌ ಆಗಿರುತ್ತದೆ. ಅವುಗಳು ಸಂದರ್ಶಕರಿಗೆ ಅತ್ಯಾನಂದವನ್ನು ತರುತ್ತವೆ ಮತ್ತು ಅಲ್ಲಿನ ದೀರ್ಘವಾದ ಹಾಗೂ ಕೊರೆಯುವ ಚಳಿಗಾಲದ ತಿಂಗಳುಗಳಲ್ಲಿ ಸ್ವಲ್ಪ ಪರಿಹಾರವನ್ನು ಕೊಡುತ್ತವೆ. ಭೂಶಾಖವನ್ನು ಉಪಯೋಗಿಸಿ ವಿದ್ಯುಚ್ಛಕ್ತಿಯನ್ನು ಸಹ ಉತ್ಪಾದಿಸಲಾಗುತ್ತದೆ. ರಷ್ಯದಲ್ಲಿ, ಭೂಶಾಖದಿಂದ ವಿದ್ಯುಚ್ಛಕ್ತಿಯನ್ನು ಉತ್ಪಾದಿಸುವ ಮೊತ್ತಮೊದಲನೆಯ ಸ್ಥಾವರವನ್ನು ಈ ಪರ್ಯಾಯ ದ್ವೀಪದಲ್ಲೇ ಸ್ಥಾಪಿಸಲಾಯಿತು.

ಕರಡಿಗಳು, ಸ್ಯಾಮನ್‌ ಮೀನು ಮತ್ತು ಸಮುದ್ರ ಹದ್ದುಗಳು

ಕಂದು ಬಣ್ಣದ ಸುಮಾರು 10,000 ಕರಡಿಗಳು ಈಗಲೂ ಕಾಮ್‌ಚಟ್ಕಾದಲ್ಲಿವೆ. ಅವುಗಳ ತೂಕವು ಸರಾಸರಿ 150ರಿಂದ 200 ಕಿಲೋ ಆಗಿರುತ್ತದೆ. ಆದರೆ ಅವನ್ನು ಕೊಲ್ಲದೆ ಅವುಗಳಷ್ಟಕ್ಕೆ ಬಿಟ್ಟರೆ ಅವುಗಳ ತೂಕವು ಅದಕ್ಕಿಂತ ಮೂರು ಪಟ್ಟು ಹೆಚ್ಚಾಗಬಲ್ಲದು. ಅಲ್ಲಿನ ಮೂಲನಿವಾಸಿಗಳಾದ ಈಟಲ್‌ಮನ್‌ ಜನರ ಜನಪದ ಕಥೆಗಳಿಗನುಸಾರ ಅವರು ಆ ಕರಡಿಗಳನ್ನು ತಮ್ಮ “ಸಹೋದರ”ರಾಗಿ ಪರಿಗಣಿಸುತ್ತಿದ್ದರು ಮತ್ತು ಈ ಪ್ರಾಣಿಗಳನ್ನು ಗೌರವದಿಂದ ಕಾಣುತ್ತಿದ್ದರು. ಆದರೆ ಬಂದೂಕಿನ ಆಗಮನದಿಂದ ಅವರ ಈ ಸಹೋದರತ್ವವು ಕಡಿದು ಹೋಯಿತು. ಈಗ ಪಶು ಸಂಗೋಪಕರು ಈ ಪ್ರಾಣಿಗಳ ಭವಿಷ್ಯತ್ತಿನ ಕುರಿತು ಚಿಂತಿತರಾಗಿದ್ದಾರೆ.

ಈ ಕರಡಿಗಳು ನಾಚಿಕೆ ಸ್ವಭಾವದವುಗಳಾಗಿದ್ದು ಅಪರೂಪಕ್ಕೆ ಕಾಣಿಸಿಕೊಳ್ಳುತ್ತವೆ. ಆದರೆ ಜೂನ್‌ ತಿಂಗಳಿನಲ್ಲಿ ಸ್ಯಾಮನ್‌ ಮೀನುಗಳು ನದಿಗಳಲ್ಲಿ ಮೊಟ್ಟೆಯಿಡಲು ಪ್ರಾರಂಭಿಸುವಾಗ, ಹೊಟ್ಟೆ ತುಂಬ ತಿನ್ನಲು ಈ ಕರಡಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತವೆ. ಒಂದು ಕರಡಿಯು ಒಮ್ಮೆಗೆ ಸುಮಾರು 24 ಸ್ಯಾಮನ್‌ ಮೀನುಗಳನ್ನು ತಿನ್ನಬಲ್ಲದು! ಕರಡಿಗಳು ಹೀಗೆ ಆಹಾರವನ್ನೇ ನೋಡಿರದಂತಹ ರೀತಿಯಲ್ಲಿ ಮೀನುಗಳನ್ನು ಕಬಳಿಸುವುದೇಕೆ? ಏಕೆಂದರೆ ಚಳಿಗಾಲದ ತಿಂಗಳುಗಳಲ್ಲಿ ಆಹಾರವು ವಿರಳವಾಗಿ ಸಿಗುವಾಗ, ತಮ್ಮಲ್ಲಿರುವ ಶಕ್ತಿಯನ್ನು ಉಳಿಸಲು ಅವುಗಳು ಗುಹೆಗಳಲ್ಲಿ ಮಲಗುತ್ತಾ ಆ ತಿಂಗಳುಗಳನ್ನು ಕಳೆಯುತ್ತವೆ. ಆ ಸಮಯಗಳಲ್ಲಿ ತಮ್ಮನ್ನು ಪೋಷಿಸಿಕೊಳ್ಳಲು ಬೇಸಿಗೆ ಕಾಲದಲ್ಲೇ ಅವುಗಳು ಸಾಕಷ್ಟು ಕೊಬ್ಬಿನಾಂಶವನ್ನು ದೇಹದಲ್ಲಿ ಶೇಖರಿಸಿಕೊಳ್ಳಬೇಕು.

ಸ್ಯಾಮನ್‌ ಮೀನನ್ನು ಬಹಳಷ್ಟು ಪ್ರಮಾಣದಲ್ಲಿ ತಿನ್ನುವ ಇನ್ನೊಂದು ಜೀವಿಯು ಸ್ಟೆಲ್ಲರ್‌ ಸಮುದ್ರ ಹದ್ದು ಆಗಿದೆ. ಈ ಸೊಗಸಾದ ಪಕ್ಷಿಯ ರೆಕ್ಕೆಗಳು ಒಂದು ತುದಿಯಿಂದ ಇನ್ನೊಂದು ತುದಿಗೆ ಎಂಟು ಅಡಿಗಳಷ್ಟು ಅಗಲವಾಗಿವೆ. ಈ ಪಕ್ಷಿಗಳು ಹೆಚ್ಚಾಗಿ ಕಪ್ಪು ಬಣ್ಣದವುಗಳಾಗಿದ್ದು, ಅವುಗಳ ರೆಕ್ಕೆಗಳು ಮೈಗೆ ಕೂಡುವ ಭಾಗದಲ್ಲಿ ಒಂದು ಬಿಳಿ ಮಚ್ಚೆಯಿದೆ ಮತ್ತು ಬೆಣೆಯಾಕಾರದ ಬಿಳಿ ಬಾಲವನ್ನು ಹೊಂದಿದೆ. ಈಗ ಈ ಪಕ್ಷಿಗಳು ಸುಮಾರು 5,000ದಷ್ಟಿದ್ದು, ಅವುಗಳ ಸಂಖ್ಯೆಯು ಕಡಿಮೆಯಾಗುತ್ತಾ ಇದೆ. ಇವುಗಳು ಲೋಕದ ಈ ಭಾಗದಲ್ಲಿ ಮಾತ್ರ, ಮತ್ತು ಅಪರೂಪಕ್ಕೆ ಅಲಾಸ್ಕದ ಅಲೂಷನ್‌ ಮತ್ತು ಪ್ರೈಬಲಾಫ್‌ ದ್ವೀಪಗಳಲ್ಲಿ ಕಾಣಸಿಗುತ್ತವೆ. ಈ ಪಕ್ಷಿಗಳು ವರುಷದಿಂದ ವರುಷಕ್ಕೆ ಅದೇ ಗೂಡುಗಳನ್ನು ಉಪಯೋಗಿಸುತ್ತಾ ಅವುಗಳನ್ನು ಸುಸ್ಥಿತಿಯಲ್ಲಿಟ್ಟು ಅವುಗಳಿಗೆ ಹೆಚ್ಚಿನ ಜೋಡಣೆಗಳನ್ನು ಮಾಡುತ್ತಾ ಹೋಗುತ್ತವೆ. ಈ ರೀತಿಯಲ್ಲಿ ಒಂದು ಗೂಡು ವ್ಯಾಸದಲ್ಲಿ 10 ಅಡಿಗಳಷ್ಟು ಅಗಲವಾಗಿ ಎಷ್ಟು ಭಾರವಾಯಿತೆಂದರೆ, ಅದಕ್ಕೆ ಆಧಾರವಾಗಿದ್ದ ಬರ್ಚ್‌ ಮರದ ಕೊಂಬೆಯೇ ಸೀಳಿಹೋಯಿತು!

ಕಾಮ್‌ಚಟ್ಕಾದ ಮಾನವ ನಿವಾಸಿಗಳು

ಕಾಮ್‌ಚಟ್ಕಾದ ಆಧುನಿಕ ನಿವಾಸಿಗಳು ಹೆಚ್ಚಾಗಿ ರಷ್ಯನರಾಗಿದ್ದಾರೆ. ಆದರೂ ಸಾವಿರಾರು ಬುಡಕಟ್ಟು ಜನರು ಉಳಿದಿದ್ದಾರೆ. ಇವರಲ್ಲಿ ಅತಿ ದೊಡ್ಡ ಗುಂಪು ಉತ್ತರದ ಪ್ರದೇಶದಲ್ಲಿ ಜೀವಿಸುತ್ತಿರುವ ಕರ್ಯಾಕ್‌ ಜನರಾಗಿದ್ದಾರೆ. ಚುಕ್ಚೀ ಮತ್ತು ಈಟಲ್‌ಮನ್‌ ಎಂಬುವುಗಳು ಇತರ ಗುಂಪುಗಳಾಗಿದ್ದು ಅವುಗಳಿಗೆ ತಮ್ಮದೇ ಆದ ಭಾಷೆಯಿದೆ. ಕಾಮ್‌ಚಟ್ಕಾದ ಹೆಚ್ಚಿನ ನಿವಾಸಿಗಳು ಆಡಳಿತದ ಕೇಂದ್ರವಾದ ಪಿಟ್ರಪಾವ್ಲಫ್‌ಸ್ಕ್‌-ಕಾಮ್‌ಚಾಟ್ಸ್‌ಕೀ ಎಂಬ ಸ್ಥಳದಲ್ಲಿ ಜೀವಿಸುತ್ತಾರೆ. ಪಯಾರ್ಯ ದ್ವೀಪದ ಉಳಿದ ಭಾಗದಲ್ಲಿ ಜನಸಂಖ್ಯೆ ಕಡಿಮೆಯಿದೆ ಮತ್ತು ಕರಾವಳಿ ಹಾಗೂ ನದಿ ತೀರದ ಹೆಚ್ಚಿನ ಹಳ್ಳಿಗಳನ್ನು ಕೇವಲ ದೋಣಿ ಅಥವಾ ವಾಯುನೌಕೆಯಿಂದ ಮಾತ್ರ ತಲಪಲು ಸಾಧ್ಯ.

ಮೀನು ಮತ್ತು ಏಡಿ ಹಿಡಿಯುವ ಉದ್ಯಮವು ಅಲ್ಲಿನ ಆರ್ಥಿಕತೆಯ ಮುಖ್ಯ ಬೆನ್ನೆಲುಬು ಆಗಿದೆ. ಕಾಮ್‌ಚಟ್ಕಾದ ದೈತ್ಯಾಕಾರದ ಕೆಂಪು ಏಡಿಗಳು ವಿಶೇಷವಾಗಿ ಜನಪ್ರಿಯವಾಗಿವೆ. ಅವುಗಳ ಪಂಜಗಳನ್ನು ಬಿಡಿಸಿ ಇಡುವಾಗ ಅವು ಐದರಿಂದ ಆರು ಆಡಿಗಳಷ್ಟು ಅಗಲವಾಗಿರುತ್ತವೆ ಮತ್ತು ಅವು ಮಾರುಕಟ್ಟೆಯಲ್ಲಿ ಮಾರಾಟಕ್ಕಾಗಿ ಇಡಲ್ಪಟ್ಟಾಗ ಅಲ್ಲಿನ ಮೇಜುಗಳ ಸ್ವಾರಸ್ಯ ಮತ್ತು ರಂಗನ್ನು ಹೆಚ್ಚಿಸುತ್ತವೆ.

ಇಸವಿ 1989ರಿಂದ ಈಚೆಗೆ ಯೆಹೋವನ ಸಾಕ್ಷಿಗಳು ಕಾಮ್‌ಚಟ್ಕಾವನ್ನು ಬೇರೊಂದು ರೀತಿಯ ಮೀನು ಹಿಡಿಯುವಿಕೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಭೇಟಿನೀಡಿದ್ದಾರೆ. “ಮನುಷ್ಯರನ್ನು ಹಿಡಿಯುವ ಬೆಸ್ತ”ರಾಗಿ ಅವರು ಕಾಮ್‌ಚಟ್ಕಾದ ದೂರದ ಪ್ರದೇಶದಲ್ಲಿ ವಾಸಿಸುತ್ತಿರುವ ಜನರಿಗೆ ದೇವರ ರಾಜ್ಯದ ಸುವಾರ್ತೆಯನ್ನು ತಿಳಿಸುತ್ತಾ ಬಂದಿದ್ದಾರೆ. (ಮತ್ತಾಯ 4:19; 24:14) ಕೆಲವರು ಈ ಸುವಾರ್ತೆಗೆ ಉತ್ತಮ ಪ್ರತಿಕ್ರಿಯೆ ತೋರಿಸಿದ್ದಾರೆ ಮತ್ತು ಈಗ ಇವರು ಇತರರಿಗೆ, ಸೃಷ್ಟಿಕರ್ತನಾದ ಯೆಹೋವ ದೇವರನ್ನು ತಿಳಿದುಕೊಂಡು ಸೃಷ್ಟಿಯ ಬದಲಿಗೆ ಆತನನ್ನೇ ಆರಾಧಿಸುವಂತೆ ಸಹಾಯಮಾಡುತ್ತಿದ್ದಾರೆ. ಇದರ ಪರಿಣಾಮವಾಗಿ ಅನೇಕ ಸ್ಥಳೀಯ ಜನರು ಅಲ್ಲಿ ಸಾಮಾನ್ಯವಾಗಿರುವ ದುಷ್ಟಾತ್ಮಗಳ ಭಯದಿಂದ ವಿಮುಕ್ತಗೊಳಿಸಲ್ಪಡುತ್ತಿದ್ದಾರೆ. (ಯಾಕೋಬ 4:7) ಅವರು ಇನ್ನೊಂದು ವಿಷಯವನ್ನೂ ಕಲಿಯುತ್ತಿದ್ದಾರೆ. ಅದೇನೆಂದರೆ, ಭವಿಷ್ಯತ್ತಿನಲ್ಲಿ ಇಡೀ ಭೂಮಿಯಿಂದ ಎಲ್ಲಾ ದುಷ್ಟತನ ಮತ್ತು ದುಷ್ಟ ಜನರು ತೆಗೆದುಹಾಕಲ್ಪಟ್ಟು, “ಸಮುದ್ರದಲ್ಲಿ ನೀರು ಹೇಗೋ ಹಾಗೆಯೇ ಭೂಮಿಯಲ್ಲಿ ಯೆಹೋವನ ಜ್ಞಾನವು ತುಂಬಿಕೊಂಡಿರುವದು.”​—⁠ಯೆಶಾಯ 11:⁠9. (g 3/07)

[ಪುಟ 18ರಲ್ಲಿರುವ ಚೌಕ/ಚಿತ್ರಗಳು]

ಮನೋಹರವಾದ ಜ್ವಾಲಾಮುಖಿ ಕುಂಡ

ಉಜೋನ್‌ ಕಾಲ್‌ಡೇರಾ ಎಂಬುದು ಒಂದು ಪುರಾತನ ಜ್ವಾಲಾಮುಖಿಯ ಕುಂಡವಾಗಿದೆ. ಅದು ಸುಮಾರು 10 ಕಿಲೋಮೀಟರ್‌ಗಳಷ್ಟು ಅಗಲವಾಗಿದೆ. ಅದರ ಕಡಿದಾದ ಗೋಡೆಗಳ ಒಳಗೆ “ಕಾಮ್‌ಚಟ್ಕಾವು ಯಾವುದಕ್ಕೆ ಹೆಸರುವಾಸಿಯಾಗಿದೆಯೋ ಅವೆಲ್ಲದರ ಸಂಗ್ರಹ” ಇದೆ ಎಂದು ಒಂದು ಪರಾಮರ್ಶೆ ಕೃತಿಯು ತಿಳಿಸುತ್ತದೆ. ಈ ಕುಂಡದಲ್ಲಿ ಬಿಸಿ ಹಾಗೂ ತಣ್ಣೀರಿನ ಕೊಳಗಳು, ಗುಳುಗಳಿಸುತ್ತಿರುವ ಕೆಸರಿನ ಹೊಂಡಗಳು, ಬುರುದೆಯನ್ನು ಕಾರುವ ಬುಗ್ಗೆಗಳು, ಮೀನುಗಳು ಮತ್ತು ಹಂಸಗಳಿರುವ ನಿರ್ಮಲ ಸರೋವರಗಳು ಮತ್ತು ಸಮೃದ್ಧವಾದ ಸಸ್ಯಸಂಕುಲ ಇದೆ.

ಕಾಮ್‌ಚಟ್ಕಾ ಪ್ರದೇಶದ ವಿಸ್ಮಯಗಳು (ಇಂಗ್ಲಿಷ್‌) ಎಂಬ ಪುಸ್ತಕವು ಹೇಳುವುದು: ಶರತ್ಕಾಲವು ಅಷ್ಟೊಂದು ಸುಂದರವಾಗಿರುವ ಆದರೆ ಸ್ವಲ್ಪ ಕಾಲ ಮಾತ್ರ ಉಳಿಯುವ “ಬೇರೊಂದು ಪ್ರದೇಶವು ಭೂಮಿಯ ಮೇಲೆ ಇಲ್ಲವೇ ಇಲ್ಲ.” ತಂಡ್ರ ಪ್ರದೇಶವು ಕಡುಗೆಂಪು ಬಣ್ಣ ಮತ್ತು ಬರ್ಚ್‌ ಮರಗಳ ಹಳದಿ ಹಾಗೂ ಸುವರ್ಣ ಬಣ್ಣದಿಂದ ಕಂಗೊಳಿಸುತ್ತದೆ. ಅಲ್ಲಲ್ಲಿ ಗುಳುಗುಳಿಸುತ್ತಿರುವ ಕೆಸರು ನೀಲಾಕಾಶದ ಹಿನ್ನಲೆಯಲ್ಲಿ ಬಿಳಿ ಆವಿಯ ಕಂಬಗಳನ್ನು ಉಂಟುಮಾಡುತ್ತದೆ. ಘನೀಕರಿಸಿದ ನೀರಾವಿಯಿಂದ ಆವೃತವಾದ ಅಸಂಖ್ಯಾತ ಎಲೆಗಳು ಮುಂಜಾವದಲ್ಲಿ ಮಂದವಾದ ಶಬ್ದದೊಂದಿಗೆ ನೆಲಕ್ಕೆ ಬೀಳುವಾಗ, ಬೇಗನೇ ಚಳಿಗಾಲವು ಬರುತ್ತದೆ ಎಂಬುದನ್ನು ಸೌಮ್ಯವಾಗಿ ಸಾರುತ್ತಾ ಕಾಡು “ಹಾಡುತ್ತದೆ.”

[ಪುಟ 19ರಲ್ಲಿರುವ ಚೌಕ]

ಒಂದು ಮಾರಕ ಸರೋವರ!

ಇಸವಿ 1996ರಲ್ಲಿ, ನಂದಿಹೋಗಿದೆ ಎಂದು ನೆನಸಲಾಗಿದ್ದ ಜ್ವಾಲಾಮುಖಿಯೊಂದು ಕಾರಿಮ್‌ಸ್ಕೀ ಸರೋವರದಡಿಯಲ್ಲಿ ಸ್ಫೋಟಗೊಂಡಿತು. ಇದರಿಂದಾಗಿ 30 ಅಡಿಗಳಷ್ಟು ಎತ್ತರವಾದ ಅಲೆಗಳು ಎದ್ದವು. ಆ ಅಲೆಗಳು ಸುತ್ತಮುತ್ತಲಿನ ಕಾಡು ಪ್ರದೇಶವನ್ನು ನೆಲಸಮ ಮಾಡಿಬಿಟ್ಟವು. ಕೆಲವೇ ನಿಮಿಷಗಳಲ್ಲಿ ಆ ಸರೋವರವು ಎಷ್ಟು ಆಮ್ಲೀಯವಾಯಿತೆಂದರೆ ಅದರಲ್ಲಿ ಯಾವುದೇ ಜೀವಿಗಳು ಬದುಕುಳಿಯಲು ಸಾಧ್ಯವಿರಲಿಲ್ಲ. ಆ ಸ್ಫೋಟದಿಂದಾಗಿ ಲಾವ ಮತ್ತು ಅನಿಲಗಳು ಹೊರಚಿಮ್ಮಿ, ಅಲೆಗಳು ಸರೋವರದ ದಡವನ್ನು ಅಪ್ಪಳಿಸಿದರೂ ಆ ಸರೋವರದ ಬಳಿ ಯಾವುದೇ ಪ್ರಾಣಿಗಳು ಸತ್ತು ಬಿದ್ದಿರುವುದು ಕಂಡುಬರಲಿಲ್ಲ ಎಂದು ಸಂಶೋಧಕರಾದ ಆ್ಯಂಡ್ರೂ ಲೋಗನ್‌ ಹೇಳುತ್ತಾರೆ. ಅವರು ಹೇಳುವುದು: “ಸ್ಫೋಟಕ್ಕೆ ಮುಂಚೆ ಕಾರಿಮ್‌ಸ್ಕೀ ಸರೋವರದಲ್ಲಿ ಲಕ್ಷಾಂತರ ಮೀನುಗಳು (ಪ್ರಾಮುಖ್ಯವಾಗಿ ಸ್ಯಾಮನ್‌ ಮತ್ತು ಟ್ರೌಟ್‌ ಮೀನುಗಳು) ಇವೆಯೆಂದು ತಿಳಿಯಲಾಗಿತ್ತು. ಸ್ಫೋಟದ ನಂತರ ಆ ಸರೋವರದಲ್ಲಿ ಯಾವುದೇ ಜೀವಿ ಇರಲಿಲ್ಲ.” ಆದರೆ ಹಲವಾರು ಮೀನುಗಳು ಪಾರಾಗಿದ್ದಿರಬಹುದು. ಆ ಮೀನುಗಳಿಗೆ ಯಾವುದೋ ರೀತಿಯ​—⁠ಪ್ರಾಯಶಃ ನೀರಿನ ರಾಸಾಯನಿಕತೆಯಲ್ಲಿ ಬದಲಾವಣೆಯಂಥ​—⁠ಒಂದು ಎಚ್ಚರಿಕೆಯ ಸಂಕೇತ ದೊರೆತು, ಅವು ಹತ್ತಿರವಿದ್ದ ಕಾರಿಮ್‌ಸ್ಕೀ ನದಿಗೆ ಪಲಾಯನಗೈದಿರಬೇಕೆಂದು ವಿಜ್ಞಾನಿಗಳು ನೆನಸುತ್ತಾರೆ.

[ಪುಟ 16ರಲ್ಲಿರುವ ಭೂಪಟ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ರಷ್ಯ

ಕಾಮ್‌ಚಟ್ಕಾ