ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಿಜ್ಞಾನವು ಎಲ್ಲ ಕಾಯಿಲೆಗಳನ್ನು ವಾಸಿಮಾಡುವುದೊ?

ವಿಜ್ಞಾನವು ಎಲ್ಲ ಕಾಯಿಲೆಗಳನ್ನು ವಾಸಿಮಾಡುವುದೊ?

ವಿಜ್ಞಾನವು ಎಲ್ಲ ಕಾಯಿಲೆಗಳನ್ನು ವಾಸಿಮಾಡುವುದೊ?

ಆಧುನಿಕ ವಿಜ್ಞಾನವು ಎಲ್ಲ ಕಾಯಿಲೆಗಳನ್ನು ವಾಸಿಮಾಡುವುದೊ? ಯೆಶಾಯ ಹಾಗೂ ಪ್ರಕಟನೆ ಎಂಬ ಬೈಬಲ್‌ ಪುಸ್ತಕಗಳಲ್ಲಿರುವ ಭವಿಷ್ಯವಾಣಿಗಳು, ಕಾಯಿಲೆಗಳಿಲ್ಲದ ಒಂದು ಜಗತ್ತನ್ನು ಸ್ವತಃ ಮಾನವನೇ ತರುವ ಸಮಯಕ್ಕೆ ಸೂಚಿಸುತ್ತವೊ? ಆರೋಗ್ಯಾರೈಕೆಯ ವಿಷಯದಲ್ಲಿ ಈಗಾಗಲೇ ಮಾಡಲಾಗಿರುವ ಅನೇಕ ಸಾಧನೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು, ಅಂಥ ಸಮಯವನ್ನು ಮನುಷ್ಯನೇ ತರುವುದು ಅಸಾಧ್ಯವೇನಲ್ಲವೆಂದು ಕೆಲವರಿಗೆ ಅನಿಸುತ್ತದೆ.

ರೋಗದ ವಿರುದ್ಧ ಒಂದು ಅಭೂತಪೂರ್ವ ಕಾರ್ಯಾಚರಣೆ ಇಂದು ನಡೆಯುತ್ತಿದೆ. ಸರಕಾರಗಳು ಮತ್ತು ಮಾನವಹಿತಕ್ಕಾಗಿ ದಾನಮಾಡುವ ವ್ಯಕ್ತಿಗಳು ಇಲ್ಲವೆ ಪ್ರತಿಷ್ಠಾನಗಳು ವಿಶ್ವಸಂಸ್ಥೆಯೊಂದಿಗೆ ಜೊತೆಗೂಡಿ ಈ ಕಾರ್ಯಾಚರಣೆಯಲ್ಲಿ ಕೆಲಸಮಾಡುತ್ತಿವೆ. ಒಂದು ಸಂಘಟಿತ ಚಟುವಟಿಕೆಯು, ಅಭಿವೃದ್ಧಿಶೀಲ ದೇಶಗಳಲ್ಲಿರುವ ಮಕ್ಕಳಿಗೆ ರೋಗನಿರೋಧಕ ಮದ್ದನ್ನು ಕೊಡುವುದರ ಮೇಲೆ ಗಮನಕೇಂದ್ರೀಕರಿಸುತ್ತಿದೆ. ವಿಶ್ವಸಂಸ್ಥೆ ಮಕ್ಕಳ ನಿಧಿಯು ಹೇಳುವಂತೆ, ಈ ದೇಶಗಳು ತಮ್ಮ ಗುರಿಗಳನ್ನು “ಇಸವಿ 2015ರೊಳಗೆ ತಲಪಿದರೆ, ಲೋಕದಲ್ಲೇ ಅತಿ ಬಡ ದೇಶಗಳಲ್ಲಿರುವ 7 ಕೋಟಿಗಿಂತ ಹೆಚ್ಚು ಮಕ್ಕಳು ಕ್ಷಯರೋಗ, ಗಂಟಲ ಮಾರಿ, ಧನುರ್ವಾಯು, ನಾಯಿಕೆಮ್ಮು, ದಡಾರ, ಜರ್ಮನ್‌ ದಡಾರ, ಪೀತಜ್ವರ, ಹೀಮೊಫಿಲಸ್‌ ಇನ್‌ಫ್ಲುಎನ್ಸಾ ಟೈಪ್‌ ಬಿ, ಹೆಪಟೈಟಿಸ್‌ ಬಿ, ಪೋಲಿಯೊ, ರೊಟಾವೈರಸ್‌, ನ್ಯುಮಕೊಕಸ್‌, ಮೆನಿಂಗೊಕೊಕಸ್‌ ಮತ್ತು ಜಪಾನೀಸ್‌ ಎನ್‌ಸೆಫಲೈಟಿಸ್‌ನಂಥ ರೋಗಗಳ ವಿರುದ್ಧ ಪ್ರಾಣಉಳಿಸುವ ಲಸಿಕೆಗಳನ್ನು ಪ್ರತಿ ವರ್ಷ ಪಡೆದಿರುವರು.” ಸಾಕಷ್ಟು ಶುದ್ಧ ನೀರು, ಉತ್ತಮ ಪೌಷ್ಟಿಕತೆ ಮತ್ತು ನೈರ್ಮಲ್ಯದ ಕುರಿತಾದ ಶಿಕ್ಷಣದಂಥ ಮೂಲಭೂತ ಆರೋಗ್ಯದ ಆವಶ್ಯಕತೆಗಳನ್ನು ಪೂರೈಸುವ ನಿಟ್ಟಿನಲ್ಲೂ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಆದರೆ ಈ ಆರೋಗ್ಯಾರೈಕೆಯ ಮೂಲಭೂತ ಕ್ರಮಗಳಿಗಿಂತಲೂ ಹೆಚ್ಚನ್ನು ಕೊಡಲಿಕ್ಕಾಗಿ ವಿಜ್ಞಾನಿಗಳು ಹಾರೈಸುತ್ತಾರೆ. ಅತ್ಯಾಧುನಿಕ ತಂತ್ರಜ್ಞಾನವು ವೈದ್ಯಕೀಯ ಕ್ಷೇತ್ರದಲ್ಲಿ ಕ್ರಾಂತಿಯನ್ನು ಎಬ್ಬಿಸುತ್ತಿದೆ. ಸುಮಾರು ಎಂಟು ವರ್ಷಗಳಿಗೊಮ್ಮೆ ವಿಜ್ಞಾನಿಗಳ ವೈದ್ಯಕೀಯ ಜ್ಞಾನವು ಇಮ್ಮಡಿಯಾಗುತ್ತದೆಂದು ಹೇಳಲಾಗುತ್ತದೆ. ರೋಗದ ವಿರುದ್ಧದ ಸಮರದಲ್ಲಿ ತಂತ್ರಜ್ಞಾನದ ವಿನೂತನ ಸಾಧನೆಗಳು ಮತ್ತು ಗುರಿಗಳ ಕೆಲವು ಉದಾಹರಣೆಗಳನ್ನು ಮಾತ್ರ ಇಲ್ಲಿ ಕೊಡಲಾಗಿದೆ:

ಕ್ಷ-ಕಿರಣ ಚಿತ್ರಣ 30ಕ್ಕಿಂತಲೂ ಹೆಚ್ಚು ವರ್ಷಗಳಿಂದ ವೈದ್ಯರು ಮತ್ತು ಆಸ್ಪತ್ರೆಗಳು ಸಿ.ಟಿ. ಸ್ಕ್ಯಾನ್‌ ಬಳಸುತ್ತಾ ಬಂದಿದ್ದಾರೆ. ಸಿ.ಟಿ. ಎಂಬುದರ ಪೂರ್ಣ ರೂಪ, ಕಂಪ್ಯುಟೆಡ್‌ ಟೊಮೊಗ್ರಾಫಿ (ಕಂಪ್ಯೂಟರ್‌ ಮಾಡಿದ ಅಕ್ಷಪದರು ಚಿತ್ರಣ) ಆಗಿದೆ. ಸಿ.ಟಿ. ಸ್ಕ್ಯಾನರ್‌ಗಳು ನಮ್ಮ ದೇಹದೊಳಗಿನ ಭಾಗಗಳ 3-ಡಿ ಕ್ಷ-ಕಿರಣ ಚಿತ್ರಣಗಳನ್ನು ತಯಾರಿಸುತ್ತವೆ. ಈ ಚಿತ್ರಣಗಳು ರೋಗನಿರ್ಣಯ ಮಾಡುವುದರಲ್ಲಿ ಮತ್ತು ದೇಹದೊಳಗಿನ ಯಾವುದೇ ಅಪಸಾಮಾನ್ಯತೆಗಳನ್ನು ಪರೀಕ್ಷಿಸುವುದರಲ್ಲಿ ಸಹಾಯಕಾರಿಯಾಗಿವೆ.

ಈ ರೀತಿಯ ವಿಕಿರಣಕ್ಕೆ ಒಡ್ಡಲ್ಪಡುವುದರಿಂದಾಗಿ ಉಂಟಾಗುವ ಅಪಾಯಗಳ ಬಗ್ಗೆ ಸ್ವಲ್ಪ ವಾದವಿವಾದ ಇದೆ. ಆದರೂ, ಏಳಿಗೆಹೊಂದುತ್ತಿರುವ ಈ ತಂತ್ರಜ್ಞಾನದ ಬಗ್ಗೆ ವೈದ್ಯಕೀಯ ಪರಿಣತರು ಆಶಾವಾದಿಗಳಾಗಿದ್ದಾರೆ. ಶಿಕಾಗೊ ಆಸ್ಪತ್ರೆಯ ವಿಶ್ವವಿದ್ಯಾಲಯದಲ್ಲಿ ರೇಡಿಯಾಲಜಿ ಪ್ರೊಫೆಸರರಾಗಿರುವ ಮೈಕಲ್‌ ವಾನೀರ್‌ ಎಂಬುವರು ಹೇಳುವುದು: “ಹಿಂದಿನ ಕೆಲವೊಂದು ವರ್ಷಗಳಲ್ಲಿ ನಡೆದಿರುವ ಪ್ರಗತಿಯನ್ನು ನೋಡಿದರೆ ನೀವು ತಲೆತಿರುಗಿ ಬೀಳುವಿರಿ.”

ಈಗೀಗ ಸಿ.ಟಿ. ಸ್ಕ್ಯಾನರ್‌ಗಳು ಹೆಚ್ಚು ವೇಗವಾಗಿ ಕೆಲಸಮಾಡುತ್ತವೆ, ಹೆಚ್ಚು ಕರಾರುವಕ್ಕಾದ ಚಿತ್ರಣಗಳನ್ನು ಕೊಡುತ್ತವೆ ಮತ್ತು ಅವುಗಳ ವೆಚ್ಚ ಸಹ ಕಡಿಮೆಯಾಗಿದೆ. ತೀರ ಇತ್ತೀಚಿನ ನವೀನ ಸ್ಕ್ಯಾನಿಂಗ್‌ ವಿಧಾನಗಳು ಬಹಳ ವೇಗವಾಗಿ ಕೆಲಸಮಾಡುವುದು ಒಂದು ದೊಡ್ಡ ಪ್ರಯೋಜನವಾಗಿದೆ. ಇದು, ಹೃದಯವನ್ನು ಸ್ಕ್ಯಾನ್‌ ಮಾಡುವಾಗ ವಿಶೇಷವಾಗಿ ತುಂಬ ಉಪಯುಕ್ತವಾಗಿದೆ. ಹೃದಯವು ಸತತವಾಗಿ ಬಡಿದುಕೊಳ್ಳುತ್ತಾ ಇರುವುದರಿಂದ ಕ್ಷ-ಕಿರಣದ ಅನೇಕ ಚಿತ್ರಣಗಳು ಮಸುಕುಮಸುಕಾಗಿ ಬರುತ್ತಿದ್ದವು ಮತ್ತು ಅವುಗಳನ್ನು ಸರಿಯಾಗಿ ಪರಿಶೀಲಿಸಲು ಕಷ್ಟವಾಗುತ್ತಿತ್ತು. ನ್ಯೂ ಸೈಯಂಟಿಸ್ಟ್‌ ಪತ್ರಿಕೆಯು ವಿವರಿಸುವಂತೆ, ಈಗಿನ ಸ್ಕ್ಯಾನರ್‌ಗಳು “0.33 ಸೆಕೆಂಡಿನಲ್ಲೇ, ಅಂದರೆ ಹೃದಯದ ಒಂದು ಮಿಡಿತಕ್ಕಿಂತಲೂ ವೇಗವಾಗಿ ಇಡೀ ದೇಹದ ಸುತ್ತ ಹೋಗುತ್ತವೆ” ಮತ್ತು ಇದರಿಂದಾಗಿ ಹೆಚ್ಚು ಸ್ಪಷ್ಟವಾದ ಚಿತ್ರಣಗಳು ಸಿಗುತ್ತವೆ.

ಅತ್ಯಾಧುನಿಕ ಸ್ಕ್ಯಾನರ್‌ಗಳ ಸಹಾಯದಿಂದ ವೈದ್ಯರು ದೇಹದೊಳಗಿನ ಅಂಗಾಂಗಗಳ ರಚನೆಯ ಸೂಕ್ಷ್ಮವಿವರಗಳ ಚಿತ್ರಣವನ್ನು ಪಡೆಯಬಲ್ಲರು ಮಾತ್ರವಲ್ಲದೆ, ನಿರ್ದಿಷ್ಟ ಭಾಗದ ಜೀವರಾಸಾಯನಿಕ ಚಟುವಟಿಕೆಯನ್ನು ಸಹ ಪರೀಕ್ಷಿಸಬಲ್ಲರು. ಅದರ ಈ ಉಪಯೋಗವು, ಕ್ಯಾನ್ಸರ್‌ ರೋಗವನ್ನು ಆರಂಭದ ಹಂತಗಳಲ್ಲೇ ಪತ್ತೆಹಚ್ಚಲು ಸಾಧ್ಯಗೊಳಿಸುವುದು.

ರೊಬೊಟ್‌ಗಳಿಂದ ಶಸ್ತ್ರಚಿಕಿತ್ಸೆ ಅತ್ಯಾಧುನಿಕ ಮತ್ತು ಸಂಕೀರ್ಣವಾದ ರೊಬೊಟ್‌ಗಳು ಈಗ ಕೇವಲ ವೈಜ್ಞಾನಿಕ​—⁠ಕಡಿಮೆಪಕ್ಷ ವೈದ್ಯಕೀಯ​—⁠ಕಾಲ್ಪನಿಕ ಕಥೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಈಗಾಗಲೇ, ರೊಬೊಟ್‌ಗಳ ಸಹಾಯದಿಂದ ಸಾವಿರಾರು ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗುತ್ತಿದೆ. ಕೆಲವೊಂದು ಸಂದರ್ಭಗಳಲ್ಲಿ, ಶಸ್ತ್ರಚಿಕಿತ್ಸಕರು ಒಂದು ರಿಮೋಟ್‌-ಕಂಟ್ರೋಲ್‌ ಉಪಕರಣವನ್ನು ಬಳಸುತ್ತಾ, ರೊಬೊಟ್‌ಗಿರುವ ಹಲವಾರು ‘ಕೈ’ಗಳನ್ನು ನಿಯಂತ್ರಿಸುತ್ತಾರೆ. ಈ ಕೈಗಳು, ಶಸ್ತ್ರಚಿಕಿತ್ಸೆಗಾಗಿ ಬೇಕಾಗಿರುವ ಕಿರುಚೂರಿಗಳು, ಕತ್ತರಿಗಳು, ಕ್ಯಾಮೆರಾಗಳು, ಸುಡುಕಗಳು ಮತ್ತು ಇತರ ಉಪಕರಣಗಳಿಂದ ಸಜ್ಜುಗೊಂಡಿರುತ್ತವೆ. ಶಸ್ತ್ರಚಿಕಿತ್ಸಕರು ಈ ತಂತ್ರಜ್ಞಾನವನ್ನು ಬಳಸಿ ತುಂಬ ಜಟಿಲವಾಗಿರುವ ಶಸ್ತ್ರಚಿಕಿತ್ಸೆಗಳನ್ನು ಸಹ ಸೂಕ್ಷ್ಮವಾದ ನಿಷ್ಕೃಷ್ಟತೆಯೊಂದಿಗೆ ನಡೆಸಲು ಸಾಧ್ಯವಾಗುತ್ತದೆ. ನ್ಯೂಸ್‌ವೀಕ್‌ ಪತ್ರಿಕೆಯು ವರದಿಸುವುದು: “ಈ ವ್ಯವಸ್ಥೆಯನ್ನು ಬಳಸುವ ಮೂಲಕ ರೋಗಿಗಳಲ್ಲಿ ರಕ್ತನಷ್ಟ, ನೋವು, ತೊಡಕುಗಳುಂಟಾಗುವ ಅಪಾಯ, ಆಸ್ಪತ್ರೆಯಲ್ಲಿ ಉಳಿಯಬೇಕಾದ ಸಮಯ ಇವೆಲ್ಲವೂ ಕಡಿಮೆಯಾಗಿರುತ್ತದೆ ಮತ್ತು ಸಾಮಾನ್ಯವಾದ ಶಸ್ತ್ರಕ್ರಿಯೆಯನ್ನು ಮಾಡಿಸಿಕೊಂಡವರಿಗಿಂತ ಈ ರೀತಿಯ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಂಡವರು ಹೆಚ್ಚು ಬೇಗನೆ ಗುಣಮುಖರಾಗುತ್ತಾರೆಂದು ಶಸ್ತ್ರಚಿಕಿತ್ಸಕರು ಕಂಡುಹಿಡಿದಿದ್ದಾರೆ.”

ನ್ಯಾನೊ-ಔಷಧೋಪಚಾರ ನ್ಯಾನೊ-ಔಷಧೋಪಚಾರ ಅಂದರೆ, ವೈದ್ಯಶಾಸ್ತ್ರದಲ್ಲಿ ನ್ಯಾನೊ-ತಂತ್ರಜ್ಞಾನದ ಬಳಕೆ. ಮತ್ತು ನ್ಯಾನೊ-ತಂತ್ರಜ್ಞಾನ ಅಂದರೆ ಸೂಕ್ಷ್ಮದರ್ಶಕದ ಸಹಾಯದಿಂದ ಮಾತ್ರ ನೋಡಬಲ್ಲ ಅತಿ ಚಿಕ್ಕ ವಸ್ತುಗಳನ್ನು ರಚಿಸುವ ಮತ್ತು ಕುಶಲತೆಯಿಂದ ಬಳಸುವ ವಿಜ್ಞಾನ ಆಗಿದೆ. ಈ ತಂತ್ರಜ್ಞಾನದಲ್ಲಿ ಬಳಸಲಾಗುವ ಅಳತೆಯ ಮಾನವನ್ನು ‘ನ್ಯಾನೊಮೀಟರ್‌’ ಎಂದು ಕರೆಯಲಾಗುತ್ತದೆ. ಇದರರ್ಥ ಒಂದು ಮೀಟರಿನ ನೂರು ಕೋಟಿಯಲ್ಲಿ ಒಂದು ಭಾಗ. *

ಈ ಅಳತೆಯು ಎಷ್ಟು ಚಿಕ್ಕದ್ದಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಲಿಕ್ಕಾಗಿ ನೀವು ಓದುತ್ತಿರುವ ಈ ಪುಟವನ್ನೇ ತೆಗೆದುಕೊಳ್ಳಿ. ಇದು 1,00,000 ನ್ಯಾನೊಮೀಟರ್‌ ದಪ್ಪವಿದೆ. ಮನುಷ್ಯನ ಒಂದು ಕೂದಲು ಸುಮಾರು 80,000 ನ್ಯಾನೊಮೀಟರ್‌ ದಪ್ಪವಾಗಿದೆ. ಒಂದು ಕೆಂಪು ರಕ್ತಕಣದ ವ್ಯಾಸವು ಸುಮಾರು 2,500 ನ್ಯಾನೊಮೀಟರ್‌ ಆಗಿದೆ. ಒಂದು ಬ್ಯಾಕ್ಟೀರಿಯವು ಸುಮಾರು 1,000 ನ್ಯಾನೊಮೀಟರ್‌ ಮತ್ತು ಒಂದು ವೈರಾಣು 100 ನ್ಯಾನೊಮೀಟರ್‌ ಉದ್ದವಾಗಿದೆ. ನಿಮ್ಮ ಡಿ.ಎನ್‌.ಎ.ಯ ವ್ಯಾಸ ಸುಮಾರು 2.5 ನ್ಯಾನೊಮೀಟರ್‌ ಆಗಿದೆ.

ವಿಜ್ಞಾನಿಗಳು ನಿಕಟ ಭವಿಷ್ಯದಲ್ಲಿ, ಮಾನವ ದೇಹದೊಳಗೆ ವೈದ್ಯಕೀಯ ಚಿಕಿತ್ಸಾಕ್ರಮಗಳನ್ನು ನಡೆಸಲಿಕ್ಕಾಗಿ ಪುಟ್ಟ ಯಂತ್ರಗಳನ್ನು ರಚಿಸಲು ಶಕ್ತರಾಗಿರುವರೆಂದು ಈ ತಂತ್ರಜ್ಞಾನವನ್ನು ಪ್ರತಿಪಾದಿಸುವವರು ನಂಬುತ್ತಾರೆ. ಹೆಚ್ಚಾಗಿ ನ್ಯಾನೊ-ಯಂತ್ರಗಳೆಂದು ಕರೆಯಲಾಗುವ ಈ ಪುಟ್ಟ ರೊಬೊಟ್‌ಗಳೊಳಗೆ, ಅತಿ ಸ್ಪಷ್ಟವಾದ ನಿರ್ದೇಶನಗಳನ್ನು ಪ್ರೋಗ್ರಾಮ್‌ ಮಾಡಲಾಗಿರುವ ಅತಿ ಸೂಕ್ಷ್ಮವಾದ ಕಂಪ್ಯೂಟರ್‌ಗಳಿರುವವು. ವಿಸ್ಮಯದ ಸಂಗತಿಯೇನೆಂದರೆ, ಬಹುಮಟ್ಟಿಗೆ ಸಂಕೀರ್ಣವಾದ ಈ ಯಂತ್ರಗಳನ್ನು ರಚಿಸಲು ಉಪಯೋಗಿಸಲಾಗುವ ಭಾಗಗಳು ಕೇವಲ 100 ನ್ಯಾನೊಮೀಟರ್‌ಗಳಷ್ಟು ಚಿಕ್ಕದ್ದಾಗಿರುವವು. ಇದು, ಒಂದು ಕೆಂಪು ರಕ್ತಕಣದ ವ್ಯಾಸಕ್ಕಿಂತ 25 ಪಟ್ಟು ಚಿಕ್ಕದ್ದಾಗಿದೆ!

ನ್ಯಾನೊ-ಸಲಕರಣೆಗಳು ಇಷ್ಟು ಚಿಕ್ಕದ್ದಾಗಿರುವುದರಿಂದ, ಮುಂದೊಂದು ದಿನ ಅವು ಚಿಕ್ಕ ರಕ್ತನಾಳಗಳೊಳಗಿಂದ ಹಾದು ಈ ಮುಂದಿನದ್ದೆಲ್ಲವನ್ನೂ ಮಾಡುವುದೆಂದು ನಿರೀಕ್ಷಿಸಲಾಗುತ್ತದೆ: ರಕ್ತಹೀನ ಅಂಗಾಂಶಗಳಿಗೆ ಆಮ್ಲಜನಕವನ್ನು ರವಾನಿಸುವವು, ರಕ್ತನಾಳಗಳಲ್ಲಿರುವ ತಡೆಗಳನ್ನು ಮತ್ತು ಮಿದುಳಿನ ಜೀವಕೋಶಗಳಲ್ಲಿ ಕಾಣಿಸಿಕೊಳ್ಳುವ ಚೆಕ್ಕೆಗಳನ್ನು (ಪ್ಲಾಕ್‌) ತೆಗೆದುಹಾಕುವವು ಮತ್ತು ವೈರಾಣುಗಳು, ಬ್ಯಾಕ್ಟೀರಿಯಾಗಳು ಹಾಗೂ ಇತರ ಸೋಂಕುಕಾರಕಗಳನ್ನು ಪತ್ತೆಹಚ್ಚಿ ನಾಶಗೊಳಿಸುವವು. ನ್ಯಾನೊ-ಯಂತ್ರಗಳನ್ನು ಬಳಸಿ ನಿರ್ದಿಷ್ಟವಾದ ಜೀವಕೋಶಗಳಿಗೆ ಮಾತ್ರ ಔಷಧಗಳನ್ನು ನೇರವಾಗಿ ತಲಪಿಸಲೂ ಸಾಧ್ಯವಾಗಬಹುದು.

ನ್ಯಾನೊ-ಔಷಧೋಪಚಾರದ ಸಹಾಯದಿಂದ, ಕ್ಯಾನ್ಸರ್‌ ರೋಗವನ್ನು ಪತ್ತೆಹಚ್ಚುವ ಕೆಲಸವು ಮಹತ್ತರವಾಗಿ ಉತ್ತಮವಾಗಲಿದೆಯೆಂದು ವಿಜ್ಞಾನಿಗಳು ಮುಂತಿಳಿಸುತ್ತಾರೆ. ಔಷಧಶಾಸ್ತ್ರ, ಭೌತಶಾಸ್ತ್ರ ಮತ್ತು ಜೀವ ವೈದ್ಯಕೀಯ ಇಂಜಿನೀಯರಿಂಗ್‌ ಪ್ರೊಫೆಸರರಾದ ಡಾಕ್ಟರ್‌ ಸಾಮ್ವೆಲ್‌ ವಿಕ್ಲಿನ್‌ ಹೇಳಿದ್ದು: “ಅತಿ ಚಿಕ್ಕದಾದ ಕ್ಯಾನ್ಸರ್‌ ಗೆಡ್ಡೆಗಳನ್ನು ಅವು ರೂಪುಗೊಳ್ಳುವಾಗಲೇ ಬೇಗನೆ ಪತ್ತೆಹಚ್ಚಿ, ಆ ಗೆಡ್ಡೆ ಇರುವ ಸ್ಥಳಕ್ಕೆ ಮಾತ್ರ ತೀಕ್ಷ್ಣವಾದ ಔಷಧಗಳಿಂದ ಚಿಕಿತ್ಸೆ ನೀಡುವ ಸಾಧ್ಯತೆಗಳು ಹಿಂದೆಂದಿಗಿಂತಲೂ ಈಗ ಬಹಳಷ್ಟು ಇವೆ. ಅಲ್ಲದೆ ಹಾನಿಕರವಾದ ಪಾರ್ಶ್ವ ಪರಿಣಾಮಗಳೂ ಕಡಿಮೆಯಾಗುವವು.”

ಇದು ಭವಿಷ್ಯದ ಬಗ್ಗೆ ಶುದ್ಧ ಭ್ರಮೆಯೆಂಬಂತೆ ತೋರುವುದಾದರೂ, ನ್ಯಾನೊ-ಔಷಧೋಪಚಾರದಿಂದ ಇದು ಖಂಡಿತ ಸಾಧ್ಯವೆಂಬುದು ಕೆಲವು ವಿಜ್ಞಾನಿಗಳ ನಂಬಿಕೆ. ಮುಂದಿನ ದಶಕದೊಳಗೆ, ಜೀವಂತ ಜೀವಕೋಶಗಳ ಆಣ್ವಿಕ ರಚನೆಯ ರಿಪೇರಿ ಹಾಗೂ ಪುನರ್‌ಏರ್ಪಡಿಸುವಿಕೆಯಲ್ಲಿ ನ್ಯಾನೊ-ತಂತ್ರಜ್ಞಾನವನ್ನು ಬಳಸಲಾಗುವುದೆಂದು ಈ ಕ್ಷೇತ್ರದಲ್ಲಿನ ಪ್ರಮುಖ ಸಂಶೋಧಕರು ನಿರೀಕ್ಷಿಸುತ್ತಾರೆ. ಒಬ್ಬ ಪ್ರತಿಪಾದಕನು ಹೇಳುವುದು: “ನ್ಯಾನೊ-ಔಷಧೋಪಚಾರವು 20ನೇ ಶತಮಾನದಲ್ಲಿ ಸರ್ವಸಾಮಾನ್ಯವಾಗಿದ್ದ ಬಹುಮಟ್ಟಿಗೆ ಎಲ್ಲ ರೋಗಗಳನ್ನು, ಎಲ್ಲ ವೈದ್ಯಕೀಯ ನೋವು ಹಾಗೂ ನರಳಾಟವನ್ನು ಅಳಿಸಿಹಾಕುವುದು ಮತ್ತು ಮಾನವ ಸಾಮರ್ಥ್ಯಗಳ ವಿಸ್ತಾರ ಉಪಯೋಗಕ್ಕಾಗಿ ಅವಕಾಶಮಾಡಿಕೊಡುವುದು.” ಈಗಾಗಲೇ, ಪ್ರಯೋಗಶಾಲೆಗಳಲ್ಲಿ ಪ್ರಾಣಿಗಳ ಮೇಲೆ ನ್ಯಾನೊ-ಔಷಧೋಪಚಾರವನ್ನು ಬಳಸಿ, ಬಹಳಷ್ಟು ಯಶಸ್ಸು ಪಡೆಯಲಾಗಿದೆ ಎಂದು ಕೆಲವು ವಿಜ್ಞಾನಿಗಳು ವರದಿಸುತ್ತಿದ್ದಾರೆ.

ಜೀನೊಮಿಕ್ಸ್‌ ಜೀನ್‌ ರಚನೆಯ ಕುರಿತಾದ ಅಧ್ಯಯನವನ್ನು ಜೀನೊಮಿಕ್ಸ್‌ ಎಂದು ಕರೆಯಲಾಗುತ್ತದೆ. ಮಾನವ ದೇಹದಲ್ಲಿರುವ ಪ್ರತಿಯೊಂದು ಜೀವಕೋಶದಲ್ಲಿ ಜೀವಕ್ಕಾಗಿ ಅತ್ಯಗತ್ಯವಾದ ಹಲವಾರು ಘಟಕಾಂಶಗಳು ತುಂಬಿವೆ. ಇವುಗಳಲ್ಲೊಂದು ಜೀನ್‌ ಆಗಿದೆ. ನಮ್ಮ ವ್ಯಕ್ತಿಗತ ಶಾರೀರಿಕ ರೂಪದಲ್ಲಿ ಕೂದಲಿನ ಬಣ್ಣ ಹಾಗೂ ರಚನೆ, ಚರ್ಮ ಹಾಗೂ ಕಣ್ಣಿನ ಬಣ್ಣ, ದೇಹದ ಎತ್ತರ ಹಾಗೂ ಇತರ ಲಕ್ಷಣಗಳನ್ನು ನಿರ್ಧರಿಸುವಂಥ ಸುಮಾರು 35,000 ಜೀನ್‌ಗಳು ನಮ್ಮಲ್ಲಿ ಪ್ರತಿಯೊಬ್ಬರಲ್ಲೂ ಇದೆ. ನಮ್ಮ ದೇಹದೊಳಗಿನ ಅಂಗಗಳ ಗುಣಮಟ್ಟವನ್ನು ನಿರ್ಧರಿಸುವುದರಲ್ಲೂ ಈ ಜೀನ್‌ಗಳಿಗಿರುವ ಪಾತ್ರವು ಮಹತ್ವದ್ದಾಗಿದೆ.

ಜೀನ್‌ಗಳಿಗೆ ಹಾನಿಯಾಗುವಾಗ, ಅದು ನಮ್ಮ ಆರೋಗ್ಯದ ಮೇಲೆ ಪರಿಣಾಮಬೀರುತ್ತದೆ. ನಮ್ಮಲ್ಲಿ ಹುಟ್ಟಿಕೊಳ್ಳುವ ಎಲ್ಲಾ ರೋಗಗಳಿಗೆ ಜೀನ್‌ಗಳು ಅಸಮರ್ಪಕವಾಗಿ ಕೆಲಸಮಾಡುವುದೇ ಕಾರಣವೆಂಬುದು ಕೆಲವು ಸಂಶೋಧಕರ ಅಂಬೋಣ. ಕೆಲವು ದೋಷಯುಕ್ತ ಜೀನ್‌ಗಳನ್ನು ನಾವು ನಮ್ಮ ಹೆತ್ತವರಿಂದ ಪಡೆದುಕೊಳ್ಳುತ್ತೇವೆ. ಇನ್ನಿತರ ಜೀನ್‌ಗಳು, ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿರುವ ಅಪಾಯಕಾರಿ ಘಟಕಗಳಿಗೆ ಒಡ್ಡಲ್ಪಡುವುದರಿಂದ ಹಾನಿಯಾಗುತ್ತವೆ.

ಮನುಷ್ಯರು ರೋಗಕ್ಕೆ ತುತ್ತಾಗುವಂತೆ ಮಾಡುವ ನಿರ್ದಿಷ್ಟ ಜೀನ್‌ಗಳನ್ನು ವಿಜ್ಞಾನಿಗಳು ಅತಿ ಬೇಗನೆ ಗುರುತುಹಿಡಿಯುವ ನಿರೀಕ್ಷೆಯನ್ನಿಟ್ಟುಕೊಂಡಿದ್ದಾರೆ. ಇದರಿಂದಾಗಿ, ನಿರ್ದಿಷ್ಟ ವ್ಯಕ್ತಿಗಳು ಕ್ಯಾನ್ಸರ್‌ಗಳಿಗೆ ತುತ್ತಾಗುವ ಸಂಭಾವ್ಯತೆ ಏಕೆ ಹೆಚ್ಚಾಗಿರುತ್ತದೆ ಇಲ್ಲವೆ ಒಂದು ನಿರ್ದಿಷ್ಟ ರೀತಿಯ ಕ್ಯಾನ್ಸರ್‌ ಕೆಲವು ಜನರಲ್ಲಿ ಮಾತ್ರ ಏಕೆ ತುಂಬ ವೇಗದಿಂದ ಹರಡಿಕೊಳ್ಳುತ್ತದೆ ಎಂಬುದನ್ನು ಡಾಕ್ಟರರು ಅರ್ಥಮಾಡಿಕೊಳ್ಳುವಂತೆ ಸಹಾಯಸಿಗುವುದು. ಮಾತ್ರವಲ್ಲದೆ, ಒಂದು ನಿರ್ದಿಷ್ಟ ಮದ್ದು ಕೆಲವು ರೋಗಿಗಳಲ್ಲಿ ಕೆಲಸಮಾಡುವಾಗ ಇನ್ನಿತರರಲ್ಲಿ ಯಾಕೆ ಕೆಲಸಮಾಡುವುದಿಲ್ಲ ಎಂಬುದು ಸಹ ಜೀನೊಮಿಕ್ಸ್‌ನಿಂದಾಗಿ ತಿಳಿದುಬರಬಹುದು.

ಈ ರೀತಿ ಜೀನ್‌ಗಳ ಕುರಿತಾದ ನಿರ್ದಿಷ್ಟ ಮಾಹಿತಿಯಿಂದಾಗಿ, ಯಾವುದನ್ನು “ವ್ಯಕ್ತಿಪರ ಔಷಧೋಪಚಾರ” ಎಂದು ಕರೆಯಲಾಗುತ್ತದೊ ಅದನ್ನು ನೀಡಲು ಸಾಧ್ಯವಾಗಬಹುದು. ಈ ತಂತ್ರಜ್ಞಾನದಿಂದ ನಿಮಗೆ ಹೇಗೆ ಪ್ರಯೋಜನವಾಗಬಹುದು? ವ್ಯಕ್ತಿಪರ ಔಷಧೋಪಚಾರದಿಂದಾಗಿ, ಅಪೂರ್ವವಾದ ನಿಮ್ಮ ಜೀನ್‌ ಗುಣಲಕ್ಷಣಗಳಿಗೆ ತಕ್ಕಂತೆ ವೈದ್ಯಕೀಯ ಆರೈಕೆಯನ್ನು ಹೊಂದಿಸಿಕೊಳ್ಳಸಾಧ್ಯವಿದೆ. ಉದಾಹರಣೆಗೆ, ನಿಮ್ಮ ಜೀನ್‌ಗಳನ್ನು ಅಧ್ಯಯನ ಮಾಡಿದಾಗ ಮುಂದೆ ನಿಮಗೊಂದು ನಿರ್ದಿಷ್ಟ ರೋಗವು ಬರುವ ಸಂಭಾವ್ಯತೆಯಿದೆ ಎಂಬುದು ತಿಳಿದುಬರುವಲ್ಲಿ, ಅದರ ಲಕ್ಷಣಗಳು ತೋರಿಬರುವ ಬಹಳಷ್ಟು ಮುಂಚೆಯೇ ಡಾಕ್ಟರರು ಅದನ್ನು ಪತ್ತೆಹಚ್ಚಲು ಶಕ್ತರಾಗಿರುವರು. ಈ ಚಿಕಿತ್ಸೆಯ ಪ್ರತಿಪಾದಕರು ಹೇಳುವುದೇನೆಂದರೆ, ಯಾರಲ್ಲಿ ರೋಗವು ಇನ್ನೂ ಹುಟ್ಟಿಕೊಂಡಿಲ್ಲವೊ ಅಂಥ ವ್ಯಕ್ತಿಗಳಲ್ಲಿ ಸರಿಯಾದ ಚಿಕಿತ್ಸೆ, ಪಥ್ಯ ಮತ್ತು ನಡವಳಿಕೆಯಲ್ಲಿ ಬದಲಾವಣೆಗಳನ್ನು ಮಾಡುವ ಮೂಲಕ ಆ ರೋಗವೇ ಬರದಂತೆ ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯವಾಗಬಹುದು.

ನಿಮ್ಮ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರಬಹುದಾದ ಔಷಧಗಳ ಬಗ್ಗೆಯೂ ನಿಮ್ಮ ಜೀನ್‌ಗಳು ಡಾಕ್ಟರರನ್ನು ಜಾಗರೂಕಗೊಳಿಸಬಹುದು. ಈ ಮಾಹಿತಿಯಿಂದಾಗಿ, ನಿರ್ದಿಷ್ಟವಾಗಿ ನಿಮಗೆ ಯಾವ ರೀತಿಯ ಔಷಧ ಮತ್ತು ಅದರ ಎಷ್ಟು ಪ್ರಮಾಣವು ತಕ್ಕದ್ದಾಗಿರುವುದು ಎಂಬುದನ್ನು ಕರಾರುವಾಕ್ಕಾಗಿ ತಿಳಿಸಲು ಡಾಕ್ಟರರು ಸಮರ್ಥರಾಗಿರುವರು. ದ ಬಾಸ್ಟನ್‌ ಗ್ಲೋಬ್‌ ವರದಿಸುವುದು: “2020ನೇ ಇಸವಿಯೊಳಗೆ, [ವ್ಯಕ್ತಿಪರ ಔಷಧೋಪಚಾರದ] ಪರಿಣಾಮವು ನಾವಿಂದು ಊಹಿಸಲೂ ಸಾಧ್ಯವಿಲ್ಲದಷ್ಟು ಪ್ರಮಾಣದ್ದಾಗಿರುವುದು. ನಮ್ಮ ಸಮಾಜದಲ್ಲಿ ಇಂದು ಅನೇಕರಿಗೆ ಹಾನಿಮಾಡುವ ಮಧುಮೇಹ, ಹೃದ್ರೋಗ, ಆಲ್ಜೈಮರ್ಸ್‌ ರೋಗ, ಸ್ಕಿಟ್ಜೊಫ್ರೀನಿಯಾ ಮತ್ತು ಇನ್ನಿತರ ರೋಗಗಳುಳ್ಳ ಜನರಿಗೆ, ಅವರಲ್ಲಿ ಒಬ್ಬೊಬ್ಬರಿಗೆಂದೇ ವಿಶೇಷವಾಗಿ ತಯಾರಿಸಲಾಗಿರುವ ಜೀನ್‌-ಆಧಾರಿತ ಹೊಸ ಮದ್ದುಗಳನ್ನು ವಿಕಸಿಸಲಾಗುವುದು.”

ಈ ಮೇಲೆ ತಿಳಿಸಲ್ಪಟ್ಟಿರುವ ತಂತ್ರಜ್ಞಾನಗಳು, ವಿಜ್ಞಾನವು ಭವಿಷ್ಯತ್ತಿಗಾಗಿ ಭರವಸೆಕೊಡುವಂಥ ವಿಷಯಗಳ ಒಂದು ನಮೂನೆಯಾಗಿವೆ ಅಷ್ಟೇ. ವೈದ್ಯಕೀಯ ಜ್ಞಾನವು ಹಿಂದೆಂದಿಗಿಂತಲೂ ಹೆಚ್ಚಿನ ವೇಗದಲ್ಲಿ ವೃದ್ಧಿಯಾಗುತ್ತಾ ಇದೆ. ಆದರೆ ವಿಜ್ಞಾನಿಗಳು, ಈ ಕೂಡಲೇ ಕಾಯಿಲೆಗಳನ್ನು ನಿರ್ಮೂಲಮಾಡಲು ನಿರೀಕ್ಷಿಸುವುದಿಲ್ಲ. ಏಕೆಂದರೆ ದುಸ್ತರವಾಗಿ ತೋರುವಂಥ ಅನೇಕ ತಡೆಗಳು ಈಗಲೂ ಇವೆ.

ದುಸ್ತರವೆಂದು ತೋರುವ ತಡೆಗಳು

ಮಾನವನ ನಡವಳಿಕೆಯು, ರೋಗ ನಿರ್ಮೂಲನ ಕೆಲಸದ ಪ್ರಗತಿಯನ್ನು ನಿಧಾನಿಸಬಹುದು. ಉದಾಹರಣೆಗೆ, ಕೆಲವೊಂದು ಪರಿಸರವ್ಯವಸ್ಥೆಗಳಿಗೆ ಮನುಷ್ಯನು ಮಾಡಿರುವ ಹಾನಿಯಿಂದಾಗಿ, ಹೊಸ ಹಾಗೂ ಅಪಾಯಕಾರಿ ರೋಗಗಳು ಹುಟ್ಟಿಕೊಂಡಿವೆಯೆಂದು ವಿಜ್ಞಾನಿಗಳು ಅಭಿಪ್ರಯಿಸುತ್ತಾರೆ. ನ್ಯೂಸ್‌ವೀಕ್‌ ಪತ್ರಿಕೆಯ ಸಂದರ್ಶನವೊಂದರಲ್ಲಿ, ‘ಅರಣ್ಯಜೀವಿ ಟ್ರಸ್ಟ್‌ನ’ ಅಧ್ಯಕ್ಷೆ ಮೇರಿ ಪರ್ಲ್‌ ಎಂಬವರು ವಿವರಿಸಿದ್ದು: “1970ನೇ ದಶಕದ ಮಧ್ಯಭಾಗದಂದಿನಿಂದ, 30ಕ್ಕೂ ಹೆಚ್ಚು ರೋಗಗಳು ತಲೆದೋರಿವೆ. ಇವುಗಳಲ್ಲಿ ಏಡ್ಸ್‌, ಈಬೋಲ, ಲೈಮ್‌ ರೋಗ ಮತ್ತು ಸಾರ್ಸ್‌ ಕಾಯಿಲೆಯು ಸೇರಿವೆ. ಇವುಗಳಲ್ಲಿ ಹೆಚ್ಚಿನವುಗಳು, ಅರಣ್ಯಜೀವಿಗಳಿಂದ ಮಾನವರಿಗೆ ಬಂದವುಗಳೆಂದು ಹೇಳಲಾಗುತ್ತದೆ.”

ಅಷ್ಟುಮಾತ್ರವಲ್ಲದೆ, ಈಗೀಗ ಜನರು ತಾಜಾ ಹಣ್ಣುಹಂಪಲುಗಳಿಗಿಂತ ಸಕ್ಕರೆ, ಉಪ್ಪು ಹಾಗೂ ಕೊಬ್ಬಿನ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುತ್ತಾರೆ. ಇದರ ಜೊತೆಗೆ ದೈಹಿಕ ಚಟುವಟಿಕೆಯು ಕಡಿಮೆಯಾಗಿದ್ದು, ಆರೋಗ್ಯಕರವಲ್ಲದ ಇನ್ನಿತರ ಹವ್ಯಾಸಗಳಿಂದಾಗಿ ಹೃದಯಕ್ಕೆ ಸಂಬಂಧಪಟ್ಟ ರೋಗಗಳು ಹೆಚ್ಚಾಗಿವೆ. ಧೂಮಪಾನವು ಹೆಚ್ಚೆಚ್ಚಾಗುತ್ತಾ ಇದ್ದು, ಅದರಿಂದಾಗಿ ಭೂಗೋಲದಾದ್ಯಂತ ಲಕ್ಷಾಂತರ ಜನರು ಗಂಭೀರವಾದ ಆರೋಗ್ಯ ಸಮಸ್ಯೆಗಳಿಗೆ ಹಾಗೂ ಸಾವಿಗೀಡಾಗುತ್ತಾರೆ. ಪ್ರತಿ ವರ್ಷ ಸುಮಾರು 2 ಕೋಟಿ ಜನರು ವಾಹನ ಅಪಘಾತಗಳಿಂದಾಗಿ ಗಂಭೀರವಾಗಿ ಗಾಯಗೊಳ್ಳುತ್ತಾರೆ ಇಲ್ಲವೆ ಸಾಯುತ್ತಾರೆ. ಯುದ್ಧ ಮತ್ತು ಇತರ ರೀತಿಯ ಹಿಂಸಾಚಾರಗಳಿಂದಾಗಿ ಅಸಂಖ್ಯಾತರು ಅಂಗಹೀನರಾಗುತ್ತಾರೆ ಅಥವಾ ಕೊಲ್ಲಲ್ಪಡುತ್ತಾರೆ. ಲಕ್ಷಾಂತರ ಜನರು, ಮದ್ಯಸಾರ ಇಲ್ಲವೆ ಅಮಲೌಷಧದ ದುರುಪಯೋಗಮಾಡಿ ಅನಾರೋಗ್ಯದಿಂದ ಬಳಲುತ್ತಾರೆ.

ರೋಗಕ್ಕೆ ಕಾರಣವು ಏನೇ ಆಗಿರಲಿ ಮತ್ತು ವೈದ್ಯಕೀಯ ತಂತ್ರಜ್ಞಾನದಲ್ಲಿ ಎಷ್ಟೇ ಅಭಿವೃದ್ಧಿಯಾಗಿರಲಿ, ಕೆಲವು ರೋಗಗಳಿಂದಾಗಿ ಬಹಳಷ್ಟು ಹಾನಿಯಾಗುತ್ತಲೇ ಇದೆ. ಲೋಕಾರೋಗ್ಯ ಸಂಸ್ಥೆ (ಡಬ್ಲ್ಯು.ಎಚ್‌.ಓ.)ಗನುಸಾರ ‘15 ಕೋಟಿಗಿಂತಲೂ ಹೆಚ್ಚು ಜನರು ಒಂದಲ್ಲ ಒಂದು ಹಂತದಲ್ಲಿ ಖಿನ್ನತೆಯಿಂದ ಬಾಧಿತರಾಗುತ್ತಾರೆ, ಸುಮಾರು 2.5 ಕೋಟಿ ಜನರು ಸ್ಕಿಟ್ಜೊಫ್ರೀನಿಯಾದಿಂದ ನರಳುತ್ತಾರೆ, ಮತ್ತು 3.8 ಕೋಟಿ ಮಂದಿ ಮೂರ್ಛೆ ರೋಗಕ್ಕೀಡಾಗುತ್ತಾರೆ.’ ಏಚ್‌ಐವಿ/ಏಡ್ಸ್‌, ಅತಿಸಾರ, ಮಲೇರಿಯಾ, ದಡಾರ, ನ್ಯುಮೋನಿಯಾ ಮತ್ತು ಕ್ಷಯರೋಗದಿಂದ ಲಕ್ಷಾಂತರ ಜನರು ಸೋಂಕಿತರಾಗಿ, ಅಸಂಖ್ಯಾತ ಮಕ್ಕಳು ಹಾಗೂ ಯುವಪ್ರಾಯದವರು ಕೊಲ್ಲಲ್ಪಡುತ್ತಾರೆ.

ರೋಗ ನಿರ್ಮೂಲನದ ಹಾದಿಯಲ್ಲಿ, ದುಸ್ತರವೆಂದು ತೋರುವ ಇನ್ನಿತರ ತಡೆಗಳಿವೆ. ಬಡತನ ಮತ್ತು ಭ್ರಷ್ಟ ಸರಕಾರಗಳು ಎರಡು ದೊಡ್ಡ ತಡೆಗಳಾಗಿವೆ. ಇತ್ತೀಚಿನ ಒಂದು ವರದಿಗನುಸಾರ ಲೋಕಾರೋಗ್ಯ ಸಂಸ್ಥೆ ತಿಳಿಸಿದ್ದೇನೆಂದರೆ, ಸರಕಾರಗಳು ಸರಿಯಾದ ಕ್ರಮಕೈಗೊಳ್ಳುತ್ತಿದ್ದಲ್ಲಿ ಮತ್ತು ಸಾಕಷ್ಟು ಹಣಸಹಾಯ ಇರುತ್ತಿದ್ದಲ್ಲಿ ಸಾಂಕ್ರಾಮಿಕ ರೋಗಗಳಿಂದ ಸಾಯುತ್ತಿರುವ ಲಕ್ಷಾಂತರ ಮಂದಿಯ ಪ್ರಾಣಗಳನ್ನು ಉಳಿಸಬಹುದಿತ್ತು.

ವೈಜ್ಞಾನಿಕ ಜ್ಞಾನ ಮತ್ತು ವೈದ್ಯಕೀಯ ತಂತ್ರಜ್ಞಾನದಲ್ಲಿನ ಎದ್ದುಕಾಣುವ ಅಭಿವೃದ್ಧಿಯು, ಈ ಎಲ್ಲ ತಡೆಗಳನ್ನು ದಾಟಲು ಸಹಾಯಮಾಡುವುದೊ? ಕಾಯಿಲೆಗಳಿಲ್ಲದಿರುವ ಜಗತ್ತನ್ನು ನಾವು ಶೀಘ್ರದಲ್ಲೇ ನೋಡುವೆವೊ? ಈ ಮೇಲೆ ವರ್ಣಿಸಲಾಗಿರುವ ಅಂಶಗಳು ಸ್ಪಷ್ಟವಾದ ಉತ್ತರವನ್ನು ಕೊಡುವುದಿಲ್ಲ ನಿಜ. ಆದರೆ ಬೈಬಲ್‌ ಈ ಪ್ರಶ್ನೆಗೆ ಉತ್ತರವನ್ನು ಕೊಡುತ್ತದೆ. ಕಾಯಿಲೆಗಳು ಇನ್ನಿಲ್ಲದಿರುವ ಒಂದು ಭವಿಷ್ಯದ ಪ್ರತೀಕ್ಷೆಯ ಕುರಿತಾಗಿ ಬೈಬಲ್‌ ಏನು ಹೇಳುತ್ತದೆಂಬುದನ್ನು ಮುಂದಿನ ಲೇಖನವು ಚರ್ಚಿಸುವುದು. (g 1/07)

[ಪಾದಟಿಪ್ಪಣಿ]

^ “ನ್ಯಾನೊ” ಎಂಬ ಪೂರ್ವಪ್ರತ್ಯಯವು, ‘ಕುಬ್ಜ’ ಎಂಬುದರ ಗ್ರೀಕ್‌ ಪದದಿಂದ ಬಂದಿದೆ. ಇದರರ್ಥ “ನೂರು ಕೋಟಿಯಲ್ಲಿ ಒಂದು ಭಾಗ.”

[ಪುಟ 7ರಲ್ಲಿರುವ ಚೌಕ/ಚಿತ್ರಗಳು]

ಕ್ಷ-ಕಿರಣ ಚಿತ್ರಣ

ಮಾನವ ದೇಹದ ಹೆಚ್ಚು ಸ್ಪಷ್ಟವಾದ, ಕರಾರುವಾಕ್ಕಾದ ಚಿತ್ರಣಗಳಿಂದಾಗಿ ರೋಗವನ್ನು ಆರಂಭದ ಹಂತಗಳಲ್ಲೇ ಪತ್ತೆಹಚ್ಚಲು ಸಹಾಯವಾಗಬಹುದು

[ಕೃಪೆ]

© Philips

Siemens AG

ರೊಬೊಟ್‌ಗಳಿಂದ ಶಸ್ತ್ರಚಿಕಿತ್ಸೆ

ಶಸ್ತ್ರಚಿಕಿತ್ಸೆಗೆ ಬೇಕಾದ ಉಪಕರಣಗಳಿಂದ ಸಜ್ಜಿತವಾದ ರೊಬೊಟ್‌ಗಳ ಸಹಾಯದಿಂದ ಡಾಕ್ಟರರು ತುಂಬ ಜಟಿಲವಾಗಿರುವ ಶಸ್ತ್ರಚಿಕಿತ್ಸೆಗಳನ್ನು ಸೂಕ್ಷ್ಮವಾದ ನಿಷ್ಕೃಷ್ಟತೆಯೊಂದಿಗೆ ನಡೆಸಲು ಸಾಧ್ಯವಾಗುತ್ತದೆ

[ಕೃಪೆ]

© 2006 Intuitive Surgical, Inc.

ನ್ಯಾನೊ-ಔಷಧೋಪಚಾರ

ಮಾನವನಿರ್ಮಿತ ಅತಿ ಸೂಕ್ಷ್ಮಾಕಾರದ ಯಂತ್ರಗಳ ಸಹಾಯದಿಂದ ಡಾಕ್ಟರರು ಒಂದು ಕಾಯಿಲೆಗೆ ಜೀವಕೋಶದಲ್ಲೇ ಚಿಕಿತ್ಸೆನೀಡಲು ಶಕ್ತರಾಗುವರು. ಈ ಫೋಟೋ, ಒಂದು ನ್ಯಾನೊ-ಯಂತ್ರವು ಕೆಂಪು ರಕ್ತಕಣಗಳಂತೆಯೇ ಕೆಲಸಮಾಡುತ್ತಿರುವುದರ ಕುರಿತಾಗಿ ಕಲಾಕಾರನ ಕಲ್ಪನಾಚಿತ್ರವಾಗಿದೆ

[ಕೃಪೆ]

ಕಲಾಕಾರ: Vik Olliver (vik@diamondage.co.nz)/ ವಿನ್ಯಾಸಕ: Robert Freitas

ಜೀನೊಮಿಕ್ಸ್‌

ವಿಜ್ಞಾನಿಗಳು ಒಬ್ಬ ವ್ಯಕ್ತಿಯ ಜೀನ್‌ಗಳ ರಚನೆಯನ್ನು ಅಧ್ಯಯನಮಾಡುವ ಮೂಲಕ ಅವನಲ್ಲಿ ರೋಗಲಕ್ಷಣಗಳು ತೋರಿಬರುವ ಮುಂಚೆಯೇ ಕಾಯಿಲೆಯನ್ನು ಪತ್ತೆಹಚ್ಚಿ, ಚಿಕಿತ್ಸೆ ನೀಡುವ ನಿರೀಕ್ಷೆಯಿಂದಿದ್ದಾರೆ

[ಕೃಪೆ]

ವರ್ಣತಂತುಗಳು: © Phanie/ Photo Researchers, Inc.

[ಪುಟ 8, 9ರಲ್ಲಿರುವ ಚೌಕ]

ಈ ವರೆಗೂ ಸೋಲಿಸಲಾಗದ ಆರು ಶತ್ರುಗಳು

ವೈದ್ಯಕೀಯ ಜ್ಞಾನ ಮತ್ತು ಅದಕ್ಕೆ ಸಂಬಂಧಪಟ್ಟ ತಂತ್ರಜ್ಞಾನಗಳು, ಹಿಂದೆಂದಿಗಿಂತಲೂ ಹೆಚ್ಚಿನ ಶರವೇಗದಲ್ಲಿ ಮುಂದೆ ಸಾಗುತ್ತಿವೆ. ಹೀಗಿದ್ದರೂ, ಸಾಂಕ್ರಾಮಿಕ ರೋಗಗಳು ಲೋಕದ ಮೇಲೆ ಈಗಲೂ ಹಾವಳಿ ನಡೆಸುತ್ತಾ ಇವೆ. ಇಲ್ಲಿ ಪಟ್ಟಿಮಾಡಲಾಗಿರುವ ಹಂತಕ ರೋಗಗಳನ್ನು ಈ ವರೆಗೂ ಸೋಲಿಸಲಾಗಿಲ್ಲ.

ಏಚ್‌.ಐ.ವಿ./ಏಡ್ಸ್‌

ಆರು ಕೋಟಿ ಜನರು ಏಚ್‌ಐವಿ ಸೋಂಕಿತರಾಗಿದ್ದಾರೆ ಮತ್ತು 2 ಕೋಟಿ ಜನರು ಏಡ್ಸ್‌ನಿಂದ ಆಸುನೀಗಿದ್ದಾರೆ. 2005ರಲ್ಲಿ ಇನ್ನೂ 50 ಲಕ್ಷ ಮಂದಿ ಹೊಸದಾಗಿ ಎಚ್‌ಐವಿ ಸೋಂಕಿತರಾದರು ಮತ್ತು 30 ಲಕ್ಷಕ್ಕಿಂತಲೂ ಹೆಚ್ಚು ಮಂದಿ ಏಡ್ಸ್‌ನಿಂದ ಮರಣಪಟ್ಟರು. ಇವುಗಳಲ್ಲಿ 5,00,000ಕ್ಕಿಂತಲೂ ಹೆಚ್ಚು ಮಂದಿ ಮಕ್ಕಳಾಗಿದ್ದರು. ಎಚ್‌ಐವಿಯಿಂದ ಸೋಂಕಿತರಾದವರಲ್ಲಿ ಅಧಿಕಾಂಶ ಜನರಿಗೆ ಸೂಕ್ತವಾದ ಚಿಕಿತ್ಸೆಯು ಸುಲಭದಲ್ಲಿ ದೊರಕುತ್ತಿಲ್ಲ.

ಅತಿಸಾರ

ಇದನ್ನು ಬಡಜನರ ಒಂದು ದೊಡ್ಡ ಹಂತಕನೆಂದು ವರ್ಣಿಸಲಾಗುತ್ತದೆ. ಪ್ರತಿ ವರ್ಷ 400 ಕೋಟಿ ಜನರು ಇದಕ್ಕೆ ಬಲಿಯಾಗುತ್ತಾರೆ. ಕಲುಷಿತ ನೀರು ಇಲ್ಲವೆ ಆಹಾರದಿಂದಾಗಿ ಅಥವಾ ದೇಹ ನೈರ್ಮಲ್ಯವನ್ನು ಕಾಪಾಡಿಕೊಳ್ಳದೇ ಇರುವುದರಿಂದಾಗಿ ಹರಡಿಕೊಳ್ಳುವ ವಿಭಿನ್ನ ಸಾಂಕ್ರಾಮಿಕ ರೋಗಗಳೇ ಇದಕ್ಕೆ ಕಾರಣ. ಈ ಸೋಂಕುಗಳಿಂದಾಗಿ, ಪ್ರತಿ ವರ್ಷ 20 ಲಕ್ಷಕ್ಕಿಂತಲೂ ಹೆಚ್ಚು ಜನರು ಸಾಯುತ್ತಾರೆ.

ಮಲೇರಿಯಾ

ಪ್ರತಿ ವರ್ಷ, 30 ಕೋಟಿ ಜನರು ಮಲೇರಿಯಾದಿಂದ ಅಸ್ವಸ್ಥರಾಗುತ್ತಾರೆ. ಇದರಿಂದಾಗಿ ಪ್ರತಿ ವರ್ಷ ಹತ್ತು ಲಕ್ಷ ಜನರು ಸಾವಿಗೀಡಾಗುತ್ತಾರೆ ಮತ್ತು ಇವರಲ್ಲಿ ಹೆಚ್ಚಿನವರು ಮಕ್ಕಳು. ಆಫ್ರಿಕದಲ್ಲಿ ಪ್ರತಿ 30 ಸೆಕೆಂಡಿಗೆ ಒಂದು ಮಗು ಮಲೇರಿಯಾದಿಂದ ಸಾಯುತ್ತದೆ. ಲೋಕಾರೋಗ್ಯ ಸಂಸ್ಥೆಗನುಸಾರ, “ವಿಜ್ಞಾನದ ಬಳಿ ಮಲೇರಿಯಾ ಜ್ವರಕ್ಕಾಗಿ ಈ ವರೆಗೂ ‘ಚಮತ್ಕಾರದ ಗುಳಿಗೆ’ ಇಲ್ಲ. ಇದಕ್ಕೊಂದು ನಿರ್ದಿಷ್ಟ ಪರಿಹಾರವಿರುವುದು ಎಂಬುದನ್ನೇ ಅನೇಕರು ಅನುಮಾನಿಸುತ್ತಾರೆ.”

ದಡಾರ

ಇಸವಿ 2003ರಲ್ಲಿ, ದಡಾರವು 5,00,000ಕ್ಕಿಂತಲೂ ಹೆಚ್ಚಿನ ಜನರ ಜೀವತೆಗೆದುಕೊಂಡಿತು. ಮಕ್ಕಳ ನಡುವೆ ಸಾವಿಗೆ ಒಂದು ಪ್ರಮುಖ ಕಾರಣವಾಗಿರುವ ದಡಾರವು ತುಂಬ ಬೇಗನೆ ಹರಡಿಕೊಳ್ಳುವ ಅಂಟುರೋಗವಾಗಿದೆ. ಪ್ರತಿ ವರ್ಷ 3 ಕೋಟಿ ಜನರು ದಡಾರದಿಂದ ಸೋಂಕಿತರಾಗುತ್ತಾರೆ. ವ್ಯಂಗ್ಯದ ಸಂಗತಿಯೇನೆಂದರೆ, ದಡಾರಕ್ಕೆ ಪ್ರತಿರೋಧಕವಾಗಿರುವ ಒಂದು ಪರಿಣಾಮಕಾರಿ ಹಾಗೂ ಅಗ್ಗವಾದ ಲಸಿಕೆಯು ಕಳೆದ 40 ವರ್ಷಗಳಿಂದ ಲಭ್ಯವಿದೆ.

ನ್ಯುಮೋನಿಯ

ಬೇರಾವುದೇ ಸಾಂಕ್ರಾಮಿಕ ರೋಗಕ್ಕಿಂತ ಹೆಚ್ಚಾಗಿ ಮಕ್ಕಳು ನ್ಯುಮೋನಿಯಾದಿಂದ ಸಾಯುತ್ತಾರೆಂದು ಲೋಕಾರೋಗ್ಯ ಸಂಸ್ಥೆ ಹೇಳುತ್ತದೆ. ಪ್ರತಿ ವರ್ಷ ನ್ಯುಮೋನಿಯಾದಿಂದಾಗಿ, ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ 20 ಲಕ್ಷ ಮಕ್ಕಳು ಸಾಯುತ್ತಾರೆ. ಇವರಲ್ಲಿ ಹೆಚ್ಚಿನವರು, ಆಫ್ರಿಕ ಹಾಗೂ ಅಗ್ನೇಯ ಏಷಿಯದಲ್ಲಿರುವವರಾಗಿದ್ದಾರೆ. ಲೋಕದ ಅನೇಕ ಭಾಗಗಳಲ್ಲಿ, ರೋಗಿಗಳಿಗೆ ಆರೋಗ್ಯದ ಸೌಕರ್ಯಗಳನ್ನು ಉಪಯೋಗಿಸಲಿಕ್ಕೆ ಸಾಧ್ಯವಾಗದ ಕಾರಣ, ಅವರಿಗೆ ಜೀವರಕ್ಷಕ ವೈದ್ಯಕೀಯ ಚಿಕಿತ್ಸೆಯನ್ನು ಪಡೆದುಕೊಳ್ಳಲು ಇದೊಂದು ತಡೆಯಾಗುತ್ತದೆ.

ಕ್ಷಯ

ಇಸವಿ 2003ರಲ್ಲಿ ಕ್ಷಯರೋಗವು (ಟಿಬಿ) 17,00,000ಕ್ಕಿಂತಲೂ ಹೆಚ್ಚು ಜನರ ಸಾವಿಗೆ ಕಾರಣವಾಯಿತು. ಆದರೆ ಈಗ, ಔಷಧವನ್ನು ಪ್ರತಿರೋಧಿಸುವ ಟಿಬಿ ಬ್ಯಾಕ್ಟೀರಿಯಾ ತಳಿಗಳು ಹುಟ್ಟಿಕೊಂಡಿರುವುದು, ಆರೋಗ್ಯ ಅಧಿಕಾರಿಗಳನ್ನು ಬಹಳಷ್ಟು ಚಿಂತೆಗೀಡುಮಾಡಿದೆ. ಇವುಗಳಲ್ಲಿ ಕೆಲವೊಂದು ತಳಿಗಳು, ಎಲ್ಲ ಪ್ರಧಾನ ಟಿಬಿ-ನಿರೋಧಕ ಔಷಧಗಳ ವಿರುದ್ಧ ಪ್ರತಿರೋಧಕ ಶಕ್ತಿಯನ್ನು ಬೆಳೆಸಿಕೊಂಡಿವೆ. ಔಷಧವನ್ನು ಪ್ರತಿರೋಧಿಸುವ ಈ ಟಿಬಿ ತಳಿಗಳು, ಯಾರಿಗೆ ಸರಿಯಾದ ವೈದ್ಯಕೀಯ ಉಪಚಾರ ಸಿಗುವುದಿಲ್ಲವೊ ಇಲ್ಲವೆ ಯಾರು ಚಿಕಿತ್ಸೆಯನ್ನು ಅರ್ಧಕ್ಕೆ ನಿಲ್ಲಿಸಿಬಿಡುತ್ತಾರೊ ಅವರಲ್ಲಿ ಬೆಳೆಯುತ್ತವೆ.

[ಪುಟ 9ರಲ್ಲಿರುವ ಚೌಕ/ಚಿತ್ರ]

ಔಷಧೋಪಚಾರದ ಬದಲಿ ವಿಧಾನಗಳ ವೃದ್ಧಿ

ಆಧುನಿಕ ವೈದ್ಯವಿಜ್ಞಾನದ ಚಿಕಿತ್ಸಕರು ಸಾಮಾನ್ಯವಾಗಿ ಮನ್ನಣೆ ಕೊಡದಂಥ ಬಹು ವೈವಿಧ್ಯಮಯವಾದ ವಾಸಿಮಾಡುವ ವಿಧಾನಗಳಿವೆ. ಈ ವಿಧಾನಗಳು ಸಾಮಾನ್ಯವಾಗಿ ದೇಶೀಯ ಔಷಧ ಪದ್ಧತಿ ಮತ್ತು ಬದಲಿ ಔಷಧಶಾಸ್ತ್ರವೆಂದು ಪ್ರಸಿದ್ಧವಾಗಿವೆ. ಅಭಿವೃದ್ಧಿಯಾಗುತ್ತಿರುವ ದೇಶಗಳಲ್ಲಿ, ಹೆಚ್ಚಿನ ಜನರು ತಮ್ಮ ಆರೋಗ್ಯದ ಅಗತ್ಯಗಳಿಗಾಗಿ ದೇಶೀಯ ಔಷಧ ಪದ್ಧತಿಯನ್ನು ಅವಲಂಬಿಸಿರುತ್ತಾರೆ. ಅಲ್ಲದೆ, ಬಡ ಪ್ರದೇಶಗಳಲ್ಲಿ ಅನೇಕರಿಗೆ ಆಧುನಿಕ ವೈದ್ಯಕೀಯ ಚಿಕಿತ್ಸೆಗಳಿಗೆ ಹಣಕೊಡುವಷ್ಟು ಅನುಕೂಲವಿಲ್ಲ. ಇತರರು ದೇಶೀಯ ಔಷಧೋಪಚಾರದ ವಿಧಾನಗಳನ್ನು ಇಷ್ಟಪಡುವ ಒಂದೇ ಕಾರಣಕ್ಕಾಗಿ ಅದನ್ನು ಬಳಸುತ್ತಾರೆ.

ಔಷಧೋಪಚಾರದ ಬದಲಿ ವಿಧಾನಗಳು ಶ್ರೀಮಂತ ದೇಶಗಳಲ್ಲೂ ಜನಪ್ರಿಯವಾಗುತ್ತಾ ಇವೆ. ಬದಲಿ ಚಿಕಿತ್ಸೆಯ ಅತಿ ಜನಪ್ರಿಯ ವಿಧಾನಗಳಲ್ಲಿ ಇವು ಕೆಲವು: ಸೂಜಿ ಚಿಕಿತ್ಸೆ (ಅಕ್ಯುಪಂಕ್ಚರ್‌), ಕಶೇರುಕಮರ್ದನ, ಹೋಮಿಯೋಪತಿ, ಪ್ರಕೃತಿಚಿಕಿತ್ಸೆ ಹಾಗೂ ಗಿಡಮೂಲಿಕೆ ಮದ್ದು. ಇವುಗಳಲ್ಲಿ ಕೆಲವೊಂದನ್ನು ವೈಜ್ಞಾನಿಕವಾಗಿ ಅಧ್ಯಯನಮಾಡಲಾಗಿದೆ ಮತ್ತು ಅವು ನಿರ್ದಿಷ್ಟ ರೋಗಸ್ಥಿತಿಗಳಿಗೆ ಉಪಯುಕ್ತಕರವೆಂದು ರುಜುವಾಗಿವೆ. ಆದರೆ ಕೆಲವೊಂದು ವಿಧಾನಗಳು ಎಷ್ಟು ಪರಿಣಾಮಕಾರಿಯಾಗಿವೆ ಎಂಬುದು ಸಾಕಷ್ಟು ಪ್ರಮಾಣದಲ್ಲಿ ಇನ್ನೂ ಸ್ಥಾಪಿತವಾಗಿಲ್ಲ. ಔಷಧೋಪಚಾರಗಳ ಬದಲಿ ವಿಧಾನಗಳು ಹೆಚ್ಚೆಚ್ಚು ಜನಪ್ರಿಯವಾಗುತ್ತಿರುವುದರಿಂದ, ಅವು ಎಷ್ಟು ಸುರಕ್ಷಿತವಾಗಿವೆ ಎಂಬ ವಿವಾದವು ತಲೆಯೆತ್ತಿದೆ. ಅನೇಕ ದೇಶಗಳಲ್ಲಿ ಇಂಥ ಗುಣಪಡಿಸುವ ಚಿಕಿತ್ಸೆಗಳು ಯಾವುದೇ ನಿಯಮಗಳಿಂದ ನಿಯಂತ್ರಿಸಲ್ಪಟ್ಟಿಲ್ಲ. ಇದರಿಂದಾಗಿ ಸ್ವ-ಚಿಕಿತ್ಸೆ, ನಕಲಿ ಉತ್ಪನ್ನಗಳು ಮತ್ತು ಢೋಂಗಿ ವೈದ್ಯರು ಏಳಿಗೆ ಹೊಂದಬಲ್ಲ ಒಂದು ಅನುಕೂಲ ವಾತಾವರಣವು ರಚಿಸಲ್ಪಟ್ಟಿದೆ. ಒಳ್ಳೇ ಉದ್ದೇಶದಿಂದ ಸ್ನೇಹಿತರು ಮತ್ತು ಸಂಬಂಧಿಕರು ಸಹ, ತಮಗೆ ಸಾಕಷ್ಟು ತರಬೇತಿಯಿಲ್ಲದಿದ್ದರೂ ವೈದ್ಯಕೀಯ ಔಷಧೋಪಚಾರದ ಬಗ್ಗೆ ಸಲಹೆಕೊಡಲಾರಂಭಿಸುತ್ತಾರೆ. ಇದೆಲ್ಲದ್ದರ ನಿಮಿತ್ತ ಪ್ರತಿಕೂಲವಾದ ದೈಹಿಕ ಪ್ರತಿಕ್ರಿಯೆಗಳು ಮತ್ತು ಇತರ ಆರೋಗ್ಯದ ಅಪಾಯಗಳು ಪರಿಣಮಿಸಿವೆ.

ಬದಲಿ ಔಷಧೋಪಚಾರವು ನಿಯಮಗಳಿಂದ ನಿಯಂತ್ರಿಸಲ್ಪಟ್ಟಿರುವ ಹಲವಾರು ದೇಶಗಳಲ್ಲಿ, ಈ ವಿಧಾನಗಳನ್ನು ಆಧುನಿಕ ವೈದ್ಯಕೀಯ ಚಿಕಿತ್ಸೆಯ ಸಮುದಾಯವು ಈಗ ಸ್ವೀಕರಿಸುತ್ತಾ ಇದೆ ಮತ್ತು ಆಧುನಿಕಕಾಲದ ವೈದ್ಯಕೀಯ ಡಾಕ್ಟರರು ಅದನ್ನು ನೀಡುತ್ತಿದ್ದಾರೆ. ಹಾಗಿದ್ದರೂ ಈ ವಿಧಾನಗಳು ಸಹ, ಕಾಯಿಲೆಗಳು ಇನ್ನಿಲ್ಲದಿರುವ ಜಗತ್ತನ್ನು ತರುವುದಾಗಿ ಸಪ್ರಮಾಣವುಳ್ಳ ಭರವಸೆಕೊಡುವುದಿಲ್ಲ.