ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಹುಕಪ್‌”ಗೆ ಕರೆದರೆ ನಾನೇನು ಮಾಡಲಿ?

“ಹುಕಪ್‌”ಗೆ ಕರೆದರೆ ನಾನೇನು ಮಾಡಲಿ?

ಯುವಜನರು ಪ್ರಶ್ನಿಸುವುದು . . .

“ಹುಕಪ್‌”ಗೆ ಕರೆದರೆ ನಾನೇನು ಮಾಡಲಿ?

“ಹುಡುಗಹುಡುಗಿಯರು ಹುಕಪ್‌ನಲ್ಲಿ ಸೇರಿಕೊಳ್ಳುವುದು ಸೆಕ್ಸ್‌ನಲ್ಲಿ ಎಷ್ಟು ಮುಂದೆ ಹೋಗಬಹುದು, ಎಷ್ಟು ಮಂದಿಯೊಂದಿಗೆ ಸಂಭೋಗ ಮಾಡಬಹುದು ಎಂದು ನೋಡಲಿಕ್ಕಾಗಿ.”​—⁠ಪೆನಿ. *

“ಹುಡುಗರು ಇದರ ಬಗ್ಗೆ ಸಂಕೋಚವಿಲ್ಲದೆ ಮಾತಾಡುತ್ತಾರೆ. ತಮಗೆ ಗರ್ಲ್‌ಫ್ರೆಂಡ್‌ ಇದ್ದರೂ ಬೇರೆ ಅನೇಕ ಹುಡುಗಿಯರನ್ನು ಸಂಭೋಗಿಸುತ್ತೇವೆಂದು ಅವರು ಜಂಬಕೊಚ್ಚುತ್ತಾರೆ.”​—⁠ಎಡ್ವರ್ಡ್‌.

“ನನ್ನನ್ನು ಹುಕಪ್‌ಗೆ ಕರೆದವರು ಅದರ ಕುರಿತು ನಾಚಿಕೊಳ್ಳದೆ ಮಾತಾಡಿದರು. ನಾನು ‘ಇಲ್ಲ’ ಎಂದರೂ ಅವರು ಕರೆಯುತ್ತಲೇ ಇದ್ದರು!”​—⁠ಈಡಾ.

ಇದನ್ನು ‘ಒಂದು ಸಲ ಬರ್ತಿಯಾ’ ಎಂದು ಕರೆಯಲಾಗುತ್ತದೆ. ಕೆಲವು ದೇಶಗಳಲ್ಲಿ ಅದನ್ನು ‘ಹುಕಪ್‌’ ಎಂದು ಕರೆಯುತ್ತಾರೆ. ಉದಾಹರಣೆಗೆ, ಜಪಾನಿನಲ್ಲಿ ಅದನ್ನು ‘ಟೇಕ್‌-ಔಟ್ಸ್‌’ ಎನ್ನುತ್ತಾರೆ ಅಂದಳು ಅಕೀಕೋ. “ಅದಕ್ಕೆ ಸೆಫ್ರೆ ಅಂದರೆ ‘ಸೆಕ್ಸ್‌ ಫ್ರೆಂಡ್‌’ ಎಂಬ ಹೆಸರೂ ಇದೆ. ಈ ಸ್ನೇಹದ ಒಂದೇ ಕಾರಣ ಸೆಕ್ಸ್‌ ಆಗಿದೆ ಅಷ್ಟೇ” ಎಂದಳು ಆಕೆ.

ಹೆಸರು ಏನೇ ಆಗಿರಲಿ ಅರ್ಥ ಒಂದೇ. ಅದು ಭಾವರಹಿತವಾದ, ಯಾವ ಬದ್ಧತೆಯೂ ಇಲ್ಲದ ಲೈಂಗಿಕ ಸಂಬಂಧ. * ಈ ಸಂಬಂಧದಿಂದ ತಮಗೆ “ಉಪಯುಕ್ತ ಸ್ನೇಹಿತರು” ದೊರೆತರೆಂದು ಹಲವು ಯುವಜನರು ಕೊಚ್ಚಿಕೊಳ್ಳುತ್ತಾರೆ. ಅಂದರೆ ಸೆಕ್ಸ್‌ ಇದ್ದರೂ ದೀರ್ಘಕಾಲದ ಪ್ರೇಮಪ್ರಸಂಗವೆಂಬ “ತೊಡಕು” ಇಲ್ಲ. ಯುವತಿಯೊಬ್ಬಳು ಹೇಳುವುದು: “ಹುಕಪ್‌ ಅಂದರೆ ಕ್ಷಣಮಾತ್ರದ ಕಾಮತೃಪ್ತಿ ಎಂದರ್ಥ. ಬಯಸಿದ್ದು ದೊರೆತೊಡನೆ ಕೆಲಸ ಮುಗಿಯಿತು.”

ಕ್ರೈಸ್ತರಾಗಿರುವ ನೀವು “ಜಾರತ್ವಕ್ಕೆ ದೂರವಾಗಿ ಓಡಿ” ಹೋಗಬೇಕು. * (1 ಕೊರಿಂಥ 6:18) ಇದನ್ನು ತಿಳಿದಿರುವ ನೀವು ದೇವನಿಯಮಗಳಿಗೆ ಅವಿಧೇಯರಾಗುವಂತೆ ಮಾಡುವ ಇಂಥ ಸನ್ನಿವೇಶಗಳಿಂದ ದೂರವಿರಲು ಪ್ರಯಾಸಪಡುತ್ತೀರಿ ನಿಜ. ಆದರೂ ಕೆಲವೊಮ್ಮೆ ಇಂಥ ಪರೀಕ್ಷೆಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ. “ಶಾಲೆಯಲ್ಲಿ ಅನೇಕ ಮಂದಿ ಹುಡುಗರು ಹುಕಪ್‌ ಸಂಬಂಧವನ್ನು ಇಟ್ಟುಕೊಳ್ಳುವಂತೆ ನನ್ನನ್ನು ಕೇಳಿದರು” ಎನ್ನುತ್ತಾಳೆ ಸಿಂಡೀ. ಇದು ಕೆಲಸದ ಸ್ಥಳದಲ್ಲಿಯೂ ಸಂಭವಿಸಸಾಧ್ಯವಿದೆ. ಮಾರ್ಗರೆಟ್‌ ಹೇಳುವುದು: “ನನ್ನ ಮ್ಯಾನೆಜರ್‌ ನನ್ನನ್ನು ಹುಕಪ್‌ಗೆ ಕರೆದನು. ಅವನು ಎಷ್ಟು ಪೀಡಿಸಿದನೆಂದರೆ ನಾನು ಆ ಕೆಲಸವನ್ನೇ ಬಿಟ್ಟುಬಿಡಬೇಕಾಯಿತು!”

ಒಂದುವೇಳೆ ನೀವೇ ಆ ಪ್ರಲೋಭನೆಗೆ ಸಿಕ್ಕಿಬೀಳುವಲ್ಲಿ ಆಶ್ಚರ್ಯಪಡಬೇಡಿರಿ. ಏಕೆಂದರೆ “ಹೃದಯವು ಎಲ್ಲಕ್ಕಿಂತಲೂ ವಂಚಕ; ಗುಣವಾಗದ ರೋಗಕ್ಕೆ ಒಳಗಾಗಿದೆ” ಎನ್ನುತ್ತದೆ ಬೈಬಲ್‌. (ಯೆರೆಮೀಯ 17:⁠9) ಲುರ್ಡೆಸ್‌ ಎಂಬ ಹುಡುಗಿಯು ಅದು ಸತ್ಯವೆಂದು ಕಂಡುಕೊಂಡಳು. ಆಕೆ ಒಪ್ಪಿಕೊಂಡದ್ದು: “ನನ್ನನ್ನು ಸೆಕ್ಸ್‌ಗೆ ಕರೆದ ಆ ಹುಡುಗನನ್ನು ನಾನು ಇಷ್ಟಪಟ್ಟೆ.” ಜೇನ್‌ ಎಂಬವಳಿಗೂ ತದ್ರೀತಿಯ ಅನುಭವವಾಯಿತು. ಅವಳು ಹೇಳುವುದು: “ನನ್ನ ಭಾವಾವೇಶ ಬಲವಾಗಿತ್ತು. ‘ಇಲ್ಲ’ ಎಂದು ಹೇಳಲು ನನಗೆ ತುಂಬ ಕಷ್ಟವಾಯಿತು.” ಈ ಹಿಂದೆ ಹೇಳಲಾಗಿರುವ ಎಡ್ವರ್ಡ್‌ ಸಹ ಶೀಲವಂತನಾಗಿ ಉಳಿಯುವುದು ಕಠಿನವೆಂದು ಒಪ್ಪಿಕೊಳ್ಳುತ್ತಾನೆ. ಅವನು ಹೇಳುವುದು: “ಅನೇಕ ಹುಡುಗಿಯರು ನನ್ನೊಂದಿಗೆ ಸೆಕ್ಸ್‌ಗೆ ಸಿದ್ಧರೆಂದು ಹೇಳಿದರು. ಕ್ರೈಸ್ತನಾದ ನನಗೆ ಇದನ್ನು ನಿರಾಕರಿಸುವುದು ಅತಿ ಕಷ್ಟಕರ ಹೋರಾಟವಾಗಿತ್ತು. ‘ಇಲ್ಲ’ ಎಂದು ಹೇಳುವುದು ಸುಲಭವಾಗಿರಲಿಲ್ಲ!”

ಲುರ್ಡೆಸ್‌, ಜೇನ್‌ ಮತ್ತು ಎಡ್ವರ್ಡ್‌​—⁠ಇವರಿಗನಿಸಿದಂತೆ ನಿಮಗನಿಸಿದಾಗಲೂ ಯೆಹೋವನ ದೃಷ್ಟಿಯಲ್ಲಿ ನೀವು ಸರಿಯಾದುದನ್ನು ಮಾಡಿರುವಲ್ಲಿ ಪ್ರಶಂಸಾರ್ಹರು. ಅಪೊಸ್ತಲ ಪೌಲನಿಗೆ ಸಹ ದುಷ್ಪ್ರವೃತ್ತಿಯ ವಿರುದ್ಧ ಸದಾ ಹೋರಾಡಲಿಕ್ಕಿತ್ತೆಂದು ತಿಳಿಯುವುದು ನಿಮಗೆ ಸಾಂತ್ವನ ಕೊಡಬಹುದು.​—⁠ರೋಮಾಪುರ 7:​21-24.

ಹಾಗಾದರೆ ಹುಕಪ್‌ ಸಂಬಂಧಕ್ಕೆ ನಿಮ್ಮನ್ನು ಕರೆಯುವಲ್ಲಿ ನೀವು ಯಾವ ಬೈಬಲ್‌ ಮೂಲತತ್ತ್ವಗಳನ್ನು ಮನಸ್ಸಿನಲ್ಲಿಡಬೇಕು?

ಭಾವರಹಿತ ಸೆಕ್ಸ್‌ ಏಕೆ ತಪ್ಪು?

ವಿವಾಹದ ಹೊರಗಣ ಲೈಂಗಿಕ ಸಂಬಂಧವನ್ನು ಬೈಬಲ್‌ ಖಂಡಿಸುತ್ತದೆ. ಹೌದು, ಜಾರತ್ವವು ಎಷ್ಟು ಗಂಭೀರ ಪಾಪವೆಂದರೆ ಅದನ್ನು ಮಾಡುವವರು “ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲ.” (1 ಕೊರಿಂಥ 6:​9, 10) ಭಾವರಹಿತ ಸೆಕ್ಸ್‌ನಲ್ಲಿ ತೊಡಗುವ ಪ್ರಲೋಭನೆಯನ್ನು ಎದುರಿಸಬೇಕಾದರೆ, ಅದನ್ನು ಯೆಹೋವನು ವೀಕ್ಷಿಸುವಂತೆಯೇ ನೀವು ವೀಕ್ಷಿಸತಕ್ಕದ್ದು. ನೈತಿಕವಾಗಿ ಶುದ್ಧರಾಗಿ ಉಳಿಯುವುದೇ ನಿಮ್ಮ ಆಯ್ಕೆಯಾಗಿರಬೇಕು.

“ಯೆಹೋವನ ಮಾರ್ಗವೇ ಜೀವಿಸುವುದಕ್ಕೆ ಅತ್ಯುತ್ತಮ ಮಾರ್ಗವೆಂದು ನಾನು ದೃಢವಾಗಿ ನಂಬುತ್ತೇನೆ.”​—⁠ಕ್ಯಾರನ್‌, ಕೆನಡ.

“ಯೆಹೋವನ ನೈತಿಕ ನಿಯಮಗಳನ್ನು ಕ್ಷಣಮಾತ್ರದ ಸುಖಕ್ಕಾಗಿ ಒಬ್ಬನು ಅಸಡ್ಡೆ ಮಾಡುವಲ್ಲಿ ಆಗುವ ನಷ್ಟ ಅಪಾರ.”​—⁠ವಿವೀಯನ್‌, ಮೆಕ್ಸಿಕೊ.

“ನಿಮಗೆ ಹೆತ್ತವರು, ಮಿತ್ರರು ಇದ್ದಾರೆಂದೂ ನೀವು ಸಭೆಯ ಭಾಗವಾಗಿದ್ದೀರೆಂದೂ ಜ್ಞಾಪಿಸಿಕೊಳ್ಳಿರಿ. ಏಕೆಂದರೆ ನೀವು ಪ್ರಲೋಭನೆಗೆ ಬಲಿಬೀಳುವಲ್ಲಿ ಇವರೆಲ್ಲರನ್ನೂ ನಿರಾಶೆಗೊಳಿಸುತ್ತೀರಿ!”​—⁠ಪೀಟರ್‌, ಬ್ರಿಟನ್‌.

ಅಪೊಸ್ತಲ ಪೌಲನು ಬರೆದುದು: “ಕರ್ತನಿಗೆ ಮೆಚ್ಚಿಗೆಯಾದದ್ದು ಏನೆಂಬದನ್ನು [ಸದಾ] ಪರಿಶೋಧಿಸಿ ತಿಳುಕೊಳ್ಳಿರಿ.” (ಎಫೆಸ 5:10) ಜಾರತ್ವವು ಅಪರಿಪೂರ್ಣ ಶರೀರವನ್ನು ಆಕರ್ಷಿಸಬಹುದು. ಆದರೆ ನೀವು ಜಾರತ್ವದ ವಿಷಯದಲ್ಲಿ ಯೆಹೋವನ ವೀಕ್ಷಣವೇನೆಂದು ತಿಳಿದುಕೊಂಡಲ್ಲಿ ಆ ‘ಕೆಟ್ಟತನವನ್ನು ಹಗೆಮಾಡುವಿರಿ.’​—⁠ಕೀರ್ತನೆ 97:10.

ಓದಿ: ಆದಿಕಾಂಡ 39:​7-9. ಲೈಂಗಿಕ ಪ್ರಲೋಭನೆಯ ವಿರುದ್ಧ ಯೋಸೇಫನು ತೆಗೆದುಕೊಂಡ ಧೀರ ನಿಲುವನ್ನು ಹಾಗೂ ಅದನ್ನು ಪ್ರತಿಭಟಿಸಲು ಅವನು ಹೇಗೆ ಶಕ್ತನಾದನೆಂಬುದನ್ನು ಗಮನಿಸಿರಿ.

ನಿಮ್ಮ ನಂಬಿಕೆಗಳ ಬಗ್ಗೆ ಅಭಿಮಾನವಿರಲಿ

ಯುವಜನರು ತಾವು ನಂಬುವುದನ್ನು ಅಭಿಮಾನದಿಂದ ಎತ್ತಿಹಿಡಿದು ಸಮರ್ಥಿಸುವುದು ಅಸಾಮಾನ್ಯವೇನಲ್ಲ. ಕ್ರೈಸ್ತರಾದ ನಿಮಗಿರುವ ವಿಶೇಷ ಅವಕಾಶವು ನಿಮ್ಮ ಆದರ್ಶ ನಡತೆಯ ಮೂಲಕ ದೇವರ ನಾಮವನ್ನು ಸಮರ್ಥಿಸುವುದೇ ಆಗಿದೆ. ವಿವಾಹಪೂರ್ವ ಸಂಭೋಗದ ವಿಷಯದಲ್ಲಿ ನಿಮಗಿರುವ ಬದಲಾಗದ ದೃಷ್ಟಿಕೋನದ ಬಗ್ಗೆ ಲಜ್ಜಿತರಾಗಬೇಡಿರಿ.

“ನಿಮ್ಮ ನೈತಿಕ ಮೂಲತತ್ತ್ವಗಳನ್ನು ಆರಂಭದಿಂದಲೇ ತಿಳಿಯಪಡಿಸಿರಿ.”​—⁠ಆ್ಯಲನ್‌, ಜರ್ಮನಿ.

“ನಿಮ್ಮ ನಂಬಿಕೆಗಳ ವಿಷಯದಲ್ಲಿ ನಾಚಿಕೊಳ್ಳಬೇಡಿರಿ.”​—⁠ಎಸ್ತರ್‌, ನೈಜೀರಿಯ.

“ಹುಕಪ್‌ಗೆ ಯಾರಾದರೂ ಕರೆದಾಗ ‘ನನ್ನ ಹೆತ್ತವರು ಡೇಟಿಂಗ್‌ ಮಾಡಲು ಬಿಡುವುದಿಲ್ಲ’ ಎಂದು ಹೇಳುವಲ್ಲಿ ನಿಮ್ಮ ಸಮಾನಸ್ಥರು ಒಪ್ಪಲಾರರು. ಡೇಟಿಂಗ್‌ ಮಾಡಲು ನಿಮಗೇ ಇಷ್ಟವಿಲ್ಲ ಎಂದು ನೀವು ಹೇಳಿಬಿಡಬೇಕು.”​—⁠ಜ್ಯಾನೆಟ್‌, ದಕ್ಷಿಣ ಆಫ್ರಿಕ.

“ಹೈಸ್ಕೂಲ್‌ನಲ್ಲಿ ನನ್ನ ಜೊತೆಯಲ್ಲಿ ಓದುತ್ತಿದ್ದ ಹುಡುಗರಿಗೆ ನಾನು ಯಾರೆಂಬುದು ಗೊತ್ತಿತ್ತು. ಅವರು ಮಾಡುವುದು ವ್ಯರ್ಥಪ್ರಯತ್ನ ಎಂಬುದು ಅವರಿಗೆ ತಿಳಿದಿತ್ತು.”​—⁠ವಿಕೀ, ಅಮೆರಿಕ.

ನೀವು ನಂಬುವ ವಿಷಯಗಳನ್ನು ದೃಢತೆಯಿಂದ ಸಮರ್ಥಿಸುವುದು ನೀವು ಪ್ರೌಢ ಕ್ರೈಸ್ತರಾಗುತ್ತಿದ್ದೀರಿ ಎಂಬುದರ ಚಿಹ್ನೆಯಾಗಿದೆ.​—⁠1 ಕೊರಿಂಥ 14:20.

ಓದಿ: ಜ್ಞಾನೋಕ್ತಿ 27:11. ವಿಶ್ವದ ಅತಿ ದೊಡ್ಡ ವಿವಾದಾಂಶ ಅಂದರೆ ಯೆಹೋವನ ನಾಮದ ಪವಿತ್ರೀಕರಣವನ್ನು ನಿಮ್ಮ ವರ್ತನೆಗಳು ಹೇಗೆ ಸಮರ್ಥಿಸುತ್ತವೆಂದು ನೋಡಿರಿ!

ದೃಢರಾಗಿರ್ರಿ!

‘ಇಲ್ಲ’ ಎನ್ನುವುದು ಪ್ರಾಮುಖ್ಯ. ಆದರೆ ಕೆಲವರು ನಿಮ್ಮ ನಿರಾಕರಣೆಯನ್ನು “ಸುಮ್ಮನೆ ಆಸಕ್ತಿಯಿಲ್ಲವೆಂಬ ಸೋಗು” ಎಂದು ತಪ್ಪಾಗಿ ಭಾವಿಸಬಹುದು.

“ಇಲ್ಲ ಎನ್ನುವಾಗ ಹುಕಪ್‌ಗೆ ಕರೆಯುವವನು ಅದನ್ನು ಛಾಲೆಂಜ್‌ ಆಗಿ, ಜಯಿಸಬೇಕಾದ ತಡೆಯಾಗಿ, ಬಿಡದೆ ಬೆನ್ನಟ್ಟಿ ನೋಡುವ ವಿಷಯವಾಗಿ ಕಾಣಬಹುದು.”​—⁠ಲಾರೆನ್‌, ಕೆನಡ.

“ನಿಮ್ಮ ಉಡುಪು, ಮಾತು, ಯಾರೊಂದಿಗೆ ಮಾತಾಡುತ್ತೀರಿ ಎಂಬುದು ಮತ್ತು ಇತರರೊಂದಿಗಿನ ನಿಮ್ಮ ವರ್ತನೆ ಎಲ್ಲವೂ ನಿಮ್ಮ ನಿರಾಕರಣೆಯನ್ನು ವ್ಯಕ್ತಪಡಿಸಬೇಕು.”​—⁠ಜಾಯ್‌, ನೈಜೀರಿಯ.

“ನಿಮ್ಮ ‘ಇಲ್ಲ’ ಎಂಬುದು ಇಲ್ಲವೆಂದೇ ಖಡಾಖಂಡಿತವಾಗಿರಬೇಕು.”​—⁠ಡ್ಯಾನ್ಯೆಲ್‌, ಆಸ್ಟ್ರೇಲಿಯ.

“ಧೈರ್ಯವಾಗಿರಿ! ಒಬ್ಬ ಹುಡುಗನು ಅಶ್ಲೀಲಭಾವದಿಂದ ನನ್ನ ಬೆನ್ನ ಮೇಲೆ ಕೈಯಿಟ್ಟಾಗ ನಾನು ದುರುಗುಟ್ಟಿ ನೋಡಿ ‘ನಿನ್ನ ಕೈ ತೆಗೆಯುತ್ತೀಯೋ ಇಲ್ಲವೋ’ ಎಂದು ಹೇಳಿ ಬಿರುಸಿನಿಂದ ಅಲ್ಲಿಂದ ಹೋಗಿಬಿಟ್ಟೆ.”​—⁠ಎಲನ್‌, ಬ್ರಿಟನ್‌.

“ನಿಮಗೆ ಹುಕಪ್‌ನಲ್ಲಿ ಆಸಕ್ತಿ ಇಲ್ಲ, ಇನ್ನು ಮುಂದೆಯೂ ಇರದು ಎಂದು ನಿರ್ದಾಕ್ಷಿಣ್ಯವಾಗಿ ಹೇಳಬೇಕು. ಇದು ಸುಮ್ಮನಿರುವ ಸಮಯವಲ್ಲ!”​—⁠ಜೀನ್‌, ಸ್ಕಾಟ್ಲೆಂಡ್‌.

“ಒಬ್ಬ ಹುಡುಗನು ನನ್ನನ್ನು ಪದೇ ಪದೇ ಚುಡಾಯಿಸುತ್ತಿದ್ದನು. ಆಗ ನಾನು ಕಟ್ಟುನಿಟ್ಟಾಗಿ ಮಾತಾಡಿದೆ. ಅನಂತರವೇ ಆ ಕಿರುಕುಳ ನಿಂತಿತು.”​—⁠ಕ್ಯಾನೀಟ, ಮೆಕ್ಸಿಕೊ.

“ನೀವು ಅಂಥ ಸೆಕ್ಸ್‌ಗೆ ಎಂದಿಗೂ ಎಡೆಗೊಡುವುದೇ ಇಲ್ಲ ಎಂದು ಖಚಿತವಾಗಿ ಹೇಳಬೇಕಾಗಿದೆ. ನಿಮ್ಮನ್ನು ಪುಸಲಾಯಿಸಿ ಸಂಭೋಗಕ್ಕೆ ಪ್ರಯತ್ನಿಸುವಂತಹ ಹುಡುಗರಿಂದ ಯಾವುದೇ ಗಿಫ್ಟನ್ನು ಎಂದಿಗೂ ತೆಗೆದುಕೊಳ್ಳಬೇಡಿ. ಏಕೆಂದರೆ ಆಗ ಅವರು ಅದರ ನೆವನದಿಂದ ನೀವು ಸಂಭೋಗಕ್ಕೆ ಬದ್ಧರು ಎಂಬಂತೆ ವರ್ತಿಸಬಹುದು.”​—⁠ಲಾರ, ಬ್ರಿಟನ್‌.

ನೀವು ನಿಶ್ಚಲರೆಂದು ತೋರಿಸಿಕೊಡುವಲ್ಲಿ ಯೆಹೋವನು ನಿಮಗೆ ಸಹಾಯಮಾಡುವನು. ದಾವೀದನು ತನ್ನ ವೈಯಕ್ತಿಕ ಅನುಭವದಿಂದ ಯೆಹೋವನ ಕುರಿತು ಹೀಗೆ ಹೇಳಿದನು: “ನಿಷ್ಠನಾಗಿರುವವನೊಂದಿಗೆ ನೀನು ನಿಷ್ಠೆಯಿಂದ ವರ್ತಿಸುವಿ.”​—⁠ಕೀರ್ತನೆ 18:​25, NW.

ಓದಿ: 2 ಪೂರ್ವಕಾಲವೃತ್ತಾಂತ 16:⁠9. ಯೆಹೋವನನ್ನು ಪೂರ್ಣ ಹೃದಯದಿಂದ ಸೇವಿಸುವವರಿಗೆ ಆತನು ಸಹಾಯ ನೀಡಲು ಎಷ್ಟು ಆತುರವುಳ್ಳವನು ಎಂಬುದನ್ನು ಗಮನಿಸಿರಿ.

ಮುಂಜಾಗ್ರತೆ ವಹಿಸಿರಿ

“ಜಾಣನು ಕೇಡನ್ನು ಕಂಡು ಅಡಗಿಕೊಳ್ಳುವನು” ಎಂದು ಬೈಬಲ್‌ ಹೇಳುತ್ತದೆ. (ಜ್ಞಾನೋಕ್ತಿ 22:⁠3) ನೀವು ಈ ಸಲಹೆಯನ್ನು ಹೇಗೆ ಪಾಲಿಸುವಿರಿ? ಮುಂಜಾಗ್ರತೆ ವಹಿಸುವ ಮೂಲಕವೇ!

“ಅಂತಹ ವಿಷಯಗಳನ್ನು ಮಾತಾಡುವವರಿಂದ ಆದಷ್ಟು ಮಟ್ಟಿಗೆ ನಿಮ್ಮನ್ನು ಪ್ರತ್ಯೇಕಿಸಿಕೊಳ್ಳಿರಿ.”​—⁠ನವೋಮಿ, ಜಪಾನ್‌.

“ಅಪಾಯಕರವಾದ ಸಹವಾಸಗಳು ಮತ್ತು ಸನ್ನಿವೇಶಗಳಿಂದ ದೂರವಿರಿ. ಉದಾಹರಣೆಗೆ, ಮದ್ಯಪಾನಮಾಡಿ ಪ್ರಲೋಭನೆಗೆ ಬಲಿಬಿದ್ದ ಕೆಲವರ ಪರಿಚಯ ನನಗಿದೆ.”​—⁠ಈಶಾ, ಬ್ರಸಿಲ್‌.

“ನಿಮ್ಮ ಅಡ್ರೆಸ್‌ ಮತ್ತು ಫೋನ್‌ ನಂಬರ್‌ನಂತಹ ಯಾವುದೇ ಸ್ವಂತ ಮಾಹಿತಿಯನ್ನು ಕೊಡಬೇಡಿ.”​—⁠ಡೈಅನ, ಬ್ರಿಟನ್‌.

“ನಿಮ್ಮ ಸಹಪಾಠಿಗಳನ್ನು ಮುಕ್ತವಾಗಿ ತಬ್ಬಿಕೊಳ್ಳುತ್ತಿರಬೇಡಿ.”​—⁠ಎಸ್ತರ್‌, ನೈಜೀರಿಯ.

“ನಿಮ್ಮ ಉಡುಪಿನ ಬಗ್ಗೆ ಎಚ್ಚರಿಕೆ ವಹಿಸಿರಿ. ನಿಮ್ಮ ಉಡುಪು ಕಾಮ ಪ್ರಚೋದಕವಾಗಿರಬಾರದು.”​—⁠ಹೈಡೀ, ಜರ್ಮನಿ.

“ನಿಮ್ಮ ಹೆತ್ತವರೊಂದಿಗಿನ ಸುಸಂಬಂಧ ಮತ್ತು ಈ ವಿಷಯದಲ್ಲಿ ಅವರೊಂದಿಗೆ ನಡೆಸುವ ಮಾತುಕತೆ ಒಂದು ಬಲವಾದ ರಕ್ಷೆಯಾಗಿದೆ.”​—⁠ಆಕೀಕೋ, ಜಪಾನ್‌.

ನಿಮ್ಮ ಮಾತು, ನಡತೆ, ಸಹವಾಸಗಳು ಮತ್ತು ನೀವು ಪದೇಪದೇ ಹೋಗುತ್ತಿರುವ ಸ್ಥಳಗಳನ್ನು ವಿಶ್ಲೇಷಿಸಿರಿ. ಬಳಿಕ ಹೀಗೆ ಕೇಳಿಕೊಳ್ಳಿ: ‘ನಾನಾಗಿಯೇ ಹುಕಪ್‌ ಸನ್ನಿವೇಶಗಳನ್ನು ನಿರ್ಮಿಸಿಕೊಳ್ಳುತ್ತಿದ್ದೇನೋ ಇಲ್ಲವೆ ನನಗರಿವಿಲ್ಲದೇ ಸೆಕ್ಸ್‌ಗೆ ನಡೆಸುವ ಸೂಚನೆಗಳನ್ನು ಕೊಡುತ್ತಿದ್ದೇನೋ?’

ಓದಿ: ಆದಿಕಾಂಡ 34:​1, 2. ಸರಿಯಲ್ಲದ ಸ್ಥಳದಲ್ಲಿ ಇದ್ದುದರಿಂದ ದೀನಳೆಂಬ ಹುಡುಗಿಗೆ ಆದ ದುರಂತಕರ ಪರಿಣಾಮಗಳನ್ನು ನೋಡಿ.

“ಭಾವರಹಿತ” ಸೆಕ್ಸ್‌ ಯೆಹೋವನ ದೃಷ್ಟಿಯಲ್ಲಿ ಹೇಯವಾಗಿದೆ. ನೀವೂ ಅದನ್ನು ಹೇಸಬೇಕು. ಏಕೆಂದರೆ ಬೈಬಲ್‌ ಹೇಳುವುದು: “ಜಾರರು ದುರಾಚಾರಿಗಳು . . . ಇವರಲ್ಲಿ ಒಬ್ಬರಿಗಾದರೂ ಕ್ರಿಸ್ತನ ಮತ್ತು ದೇವರ ರಾಜ್ಯದಲ್ಲಿ ಬಾಧ್ಯತೆ ಇಲ್ಲವೇ ಇಲ್ಲ.” (ಎಫೆಸ 5:⁠5) ಯಾವುದು ಯೋಗ್ಯವೊ ಅದರ ಪಕ್ಷದಲ್ಲಿ ನಿಲ್ಲುವುದರಿಂದ ನೀವು ಶುದ್ಧ ಮನಸ್ಸಾಕ್ಷಿಯನ್ನೂ ಆತ್ಮಗೌರವವನ್ನೂ ಕಾಪಾಡಿಕೊಳ್ಳಬಲ್ಲಿರಿ. ಕಾರ್ಲೀ ಎಂಬ ಹುಡುಗಿ ಹೇಳುವಂತೆ, “ಇನ್ನೊಬ್ಬನ ಕ್ಷಣಿಕ ಕಾಮತೃಪ್ತಿಯನ್ನು ತಣಿಸಲಿಕ್ಕಾಗಿ ನೀವೇಕೆ ಬಲಿಯಾಗಬೇಕು? ನೀವು ಈ ವರೆಗೆ ಬಹಳ ಪ್ರಯಾಸದಿಂದ ಕಾಪಾಡಿಕೊಂಡು ಬಂದಿರುವ ಶುದ್ಧ ನಿಲುವನ್ನು ಕಳೆದುಕೊಳ್ಳದಂತೆ ಮುಂಜಾಗ್ರತೆ ವಹಿಸಿರಿ!” (g 3/07)

“ಯುವ ಜನರು ಪ್ರಶ್ನಿಸುವುದು . . . ” ಲೇಖನಮಾಲೆಯ ಹೆಚ್ಚಿನ ಲೇಖನಗಳನ್ನು www.watchtower.org/ype ವೆಬ್‌ಸೈಟ್‌ನಲ್ಲಿ ಕಂಡುಕೊಳ್ಳಬಹುದು

ಇದರ ಕುರಿತು ಯೋಚಿಸಿ

◼ ನಿಷಿದ್ಧ ಸಂಭೋಗ ಅಪರಿಪೂರ್ಣ ಶರೀರವನ್ನು ಆಕರ್ಷಿಸಬಹುದಾದರೂ ಅದು ತಪ್ಪೇಕೆ?

◼ ಯಾರಾದರೂ ‘ಹುಕಪ್‌’ಗೆ ಕರೆದರೆ ನೀವೇನು ಮಾಡುವಿರಿ?

[ಪಾದಟಿಪ್ಪಣಿಗಳು]

^ ಈ ಲೇಖನದಲ್ಲಿ ಹೆಸರುಗಳನ್ನು ಬದಲಾಯಿಸಲಾಗಿದೆ.

^ ಈ ಪದಗಳು ಮುದ್ದಾಡಿ ನೇವರಿಸುವುದು ಮತ್ತು ಕಾಮೋದ್ರೇಕದ ಚುಂಬನದಂಥ ಲೈಂಗಿಕ ನಡತೆಗಳಿಗೂ ಅನ್ವಯಿಸುತ್ತವೆ.

^ ಜಾರತ್ವದಲ್ಲಿ ಲೈಂಗಿಕ ಸಂಭೋಗ, ಮೌಖಿಕ ಸೆಕ್ಸ್‌, ಗುದಮೈಥುನ, ಸಲಿಂಗೀಕಾಮ, ಇನ್ನೊಬ್ಬನಿಗೆ ಹಸ್ತಮೈಥುನ ಮಾಡುವುದು ಮತ್ತು ಪರಸ್ಪರ ವಿವಾಹಿತರಾಗಿರದ ಇಬ್ಬರ ಮಧ್ಯೆ ಜನನೇಂದ್ರಿಯಗಳ ಅಪಪ್ರಯೋಗ ಇತ್ಯಾದಿ ಸೇರಿರುತ್ತವೆ.

[ಪುಟ 27ರಲ್ಲಿರುವ ಚೌಕ]

◼ “ಜಾರತ್ವಮಾಡುವವನು ತನ್ನ ದೇಹಕ್ಕೆ ಹಾನಿಕರವಾದ ಪಾಪವನ್ನು ಮಾಡುತ್ತಾನೆ” ಎಂದು ಬೈಬಲ್‌ ಹೇಳುತ್ತದೆ. (1 ಕೊರಿಂಥ 6:18) ಅದು ಹೇಗೆ ಸತ್ಯ? ನಿಮಗೆ ಗೊತ್ತಿರುವ ಕೆಲವು ಉತ್ತರಗಳನ್ನು ಕೆಳಗೆ ಪಟ್ಟಿಮಾಡಿ.

․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․

․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․

․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․

․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․

ಸುಳಿವು: ಮೇಲಿರುವ ಪ್ರಶ್ನೆಗೆ ಉತ್ತರ ಕಂಡುಹಿಡಿಯಲು 2006, ಜುಲೈ 1ರ ಕಾವಲಿನಬುರುಜು ಪುಟ 20, ಪ್ಯಾರ 14 ಮತ್ತು 2002, ಜೂನ್‌ 15ರ ಕಾವಲಿನಬುರುಜು ಪುಟ 21, ಪ್ಯಾರ 17ನ್ನು ನೋಡಿ. ಇದು ಯೆಹೋವನ ಸಾಕ್ಷಿಗಳ ಪ್ರಕಾಶನ.

[ಪುಟ 29ರಲ್ಲಿರುವ ಚೌಕ]

ಹೆತ್ತವರೇ ಗಮನಿಸಿ

“ಶಾಲೆಯಲ್ಲಿ ಒಮ್ಮೆ ಸಹಪಾಠಿಯೊಬ್ಬನು ನನ್ನನ್ನು ‘ಹುಕಪ್‌’ಗೆ ಕರೆದ. ಅವನು ಯಾತಕ್ಕೆ ಕರೆಯುತ್ತಿದ್ದನೆಂದು ನನಗೆ ಕೂಡಲೆ ಅರ್ಥವಾಗಲಿಲ್ಲ. ನಾನಾಗ 11 ವರ್ಷದವಳಷ್ಟೆ.”​—⁠ಲೇಯಾ.

ಸೆಕ್ಸ್‌ ಬಗ್ಗೆ ತೀರಾ ಚಿಕ್ಕಂದಿನಿಂದಲೇ ಮಕ್ಕಳಿಗೆ ಪರಿಚಯ ಮಾಡಲಾಗುತ್ತದೆ. ಬೈಬಲ್‌ ಬಹಳ ಹಿಂದೆಯೇ ‘ಕಡೇ ದಿವಸಗಳಲ್ಲಿ ಕಠಿನಕಾಲಗಳು ಬರುವವು’ ಎಂದು ಮುಂತಿಳಿಸಿದೆ. ಈ ಕಡೇ ದಿನಗಳಲ್ಲಿ ಜನರು “ದಮೆಯಿಲ್ಲದವರೂ . . . ದೇವರನ್ನು ಪ್ರೀತಿಸದೆ ಭೋಗಗಳನ್ನೇ ಪ್ರೀತಿಸುವವರೂ” ಆಗಿರುವರು ಎಂದು ಅದು ಹೇಳಿದೆ. (2 ತಿಮೊಥೆಯ 3:1, 3, 4) ಈ ಲೇಖನದಲ್ಲಿ ಯುವಜನರಿಗೆ ಉದ್ದೇಶಿಸಿ ನುಡಿದ ‘ಹುಕಪ್‌’ ಚಾಳಿಯು ಈ ಬೈಬಲ್‌ ಪ್ರವಾದನೆ ಸತ್ಯವೆಂದು ರುಜುಪಡಿಸಿರುವ ಅನೇಕ ಚಿಹ್ನೆಗಳಲ್ಲಿ ಒಂದು.

ಹೆತ್ತವರೇ, ನೀವು ಬೆಳೆದುಬಂದ ಪರಿಸರಕ್ಕಿಂತ ಇಂದಿನ ಲೋಕವು ತುಂಬ ಭಿನ್ನವಾಗಿದೆ. ಆದರೆ ಸಮಸ್ಯೆಗಳಾದರೋ ತುಸುಮಟ್ಟಿಗೆ ಒಂದೇ ತೆರನಾಗಿವೆ. ಆದುದರಿಂದ ನಿಮ್ಮ ಮಕ್ಕಳನ್ನು ಸುತ್ತುವರಿದಿರುವ ಕೆಟ್ಟ ಪ್ರಭಾವಗಳಿಂದಾಗಿ ಎದೆಗುಂದಬೇಡಿರಿ. ನಿಮ್ಮ ಮಕ್ಕಳಿಗೆ ಸಹಾಯಮಾಡಲು ದೃಢನಿಶ್ಚಯದಿಂದಿರಿ. ಅಪೊಸ್ತಲ ಪೌಲನು 2,000 ವರ್ಷಗಳ ಹಿಂದೆ ಕ್ರೈಸ್ತರಿಗೆ ಉತ್ತೇಜಿಸಿದ್ದನ್ನೇ ನೀವೂ ಮಾಡಿರಿ. ಅವನು ಹೇಳಿದ್ದು: “ಸೈತಾನನ ತಂತ್ರೋಪಾಯಗಳನ್ನು ನೀವು ಎದುರಿಸಿ ನಿಲ್ಲುವದಕ್ಕೆ ಶಕ್ತರಾಗುವಂತೆ ದೇವರು ದಯಪಾಲಿಸುವ ಸರ್ವಾಯುಧಗಳನ್ನು ಧರಿಸಿಕೊಳ್ಳಿರಿ.” (ಎಫೆಸ 6:11) ನಿಜತ್ವವೇನೆಂದರೆ ಅನೇಕ ಕ್ರೈಸ್ತ ಯುವಜನರು ತಮ್ಮನ್ನು ಸುತ್ತುವರಿದಿರುವ ಕೆಟ್ಟ ಪ್ರಭಾವಗಳ ಮಧ್ಯೆಯೂ ಯೋಗ್ಯವಾದದ್ದನ್ನೇ ಮಾಡಲು ಹೋರಾಡುತ್ತಿದ್ದಾರೆ. ಇದು ಪ್ರಶಂಸಾರ್ಹವೇ ಸರಿ. ನಿಮ್ಮ ಮಕ್ಕಳು ಸಹ ಯೋಗ್ಯವಾದದ್ದನ್ನೇ ಮಾಡುವಂತೆ ನೀವು ಹೇಗೆ ಅವರಿಗೆ ಸಹಾಯಮಾಡಬಲ್ಲಿರಿ?

ಒಂದು ವಿಧಾನವು, ನಿಮ್ಮ ಮಗ ಅಥವಾ ಮಗಳೊಂದಿಗೆ ಈ ಲೇಖನದ ಮಾಹಿತಿಯನ್ನು ಉಪಯೋಗಿಸಿ ಚರ್ಚೆಯನ್ನು ಆರಂಭಿಸುವುದೇ. “ಓದಿ” ಎಂದು ಸೂಚಿಸಲ್ಪಟ್ಟ ಬೈಬಲ್‌ ವಚನಗಳು ವಿಚಾರಪ್ರೇರಕವಾಗಿವೆ. ಅವುಗಳಲ್ಲಿ ಕೆಲವು, ಯೋಗ್ಯವಾದದ್ದನ್ನೇ ಮಾಡಿ ಆಶೀರ್ವಾದಗಳನ್ನು ಪಡೆದವರ ಮತ್ತು ದೇವರ ನಿಯಮಗಳನ್ನು ಉಲ್ಲಂಘಿಸಿ ದುಷ್ಪರಿಣಾಮಗಳನ್ನು ಅನುಭವಿಸಿದವರ ನಿಜಜೀವನ ಮಾದರಿಗಳನ್ನು ತಿಳಿಸುತ್ತವೆ. “ಓದಿ” ವಿಭಾಗದಲ್ಲಿರುವ ಇತರ ಶಾಸ್ತ್ರವಚನಗಳಲ್ಲಿನ ಮೂಲತತ್ತ್ವಗಳು ನಿಮಗೂ ನಿಮ್ಮ ಮಕ್ಕಳಿಗೂ ದೇವರ ನಿಯಮಕ್ಕನುಸಾರ ಜೀವಿಸುವುದರಿಂದ ದೊರೆಯುವ ಮಹಾ ಆಶೀರ್ವಾದಗಳನ್ನು ಪಡೆಯುವಂತೆ ಸಹಾಯಮಾಡಬಲ್ಲವು. ಈ ಲೇಖನವನ್ನು ನಿಮ್ಮ ಮಕ್ಕಳೊಂದಿಗೆ ಚರ್ಚಿಸಲು ಈಹೊತ್ತೇ ಸಮಯ ತಕ್ಕೊಳ್ಳಿರಿ.

ದೇವರ ನಿಯಮಗಳಿಗೆ ಅನುಸಾರವಾಗಿ ನಡೆಯುವುದು ನಮಗೆ ಸದಾ ಪ್ರಯೋಜನಕರ. (ಯೆಶಾಯ 48:17, 18) ಅವನ್ನು ಮೀರುವಲ್ಲಿ ಹೃದ್ವೇದನೆ ಖಂಡಿತ ತಪ್ಪಿದ್ದಲ್ಲ. ನಿಮ್ಮ ಮಕ್ಕಳ ಹೃದಯಗಳಲ್ಲಿ ದೇವರ ನಿಯಮಗಳನ್ನೂ ಮೂಲತತ್ತ್ವಗಳನ್ನೂ ಬೇರೂರಿಸಲು ಪ್ರಯತ್ನಿಸುವಾಗ ಯೆಹೋವನ ಆಶೀರ್ವಾದವು ನಿಮ್ಮ ಮೇಲಿರಲಿ ಎಂದು ಎಚ್ಚರ! ಪ್ರಕಾಶಕರಾದ ನಮ್ಮ ಹಾರೈಕೆ.​—⁠ಧರ್ಮೋಪದೇಶಕಾಂಡ 6:6, 7.

[ಪುಟ 28ರಲ್ಲಿರುವ ಚಿತ್ರ]

ಅದನ್ನು ಎಂದಿಗೂ ಒಪ್ಪುವುದಿಲ್ಲ ಎಂದು ನೀವು ಖಚಿತವಾಗಿ ಹೇಳುವುದು ಅಗತ್ಯ