ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಈ ಲೋಕ ಎತ್ತ ಸಾಗುತ್ತಿದೆ?

ಈ ಲೋಕ ಎತ್ತ ಸಾಗುತ್ತಿದೆ?

ಈ ಲೋಕ ಎತ್ತ ಸಾಗುತ್ತಿದೆ?

ಇಂದಿನ ನೈತಿಕ ಕುಸಿತದ ಕುರಿತು ಬೈಬಲ್‌ ಬಹಳಷ್ಟು ಹಿಂದೆಯೇ ಮುಂತಿಳಿಸಿತ್ತು ಮತ್ತು ಹೀಗೆ ವಿವರಿಸಿತ್ತು: “ಕಡೇ ದಿವಸಗಳಲ್ಲಿ ಕಠಿನಕಾಲಗಳು ಬರುವವೆಂಬದನ್ನು ತಿಳಿದುಕೋ. ಮನುಷ್ಯರು ಸ್ವಾರ್ಥಚಿಂತಕರೂ ಹಣದಾಸೆಯವರೂ . . . ತಂದೆತಾಯಿಗಳಿಗೆ ಅವಿಧೇಯರೂ ಉಪಕಾರನೆನಸದವರೂ ದೇವಭಯವಿಲ್ಲದವರೂ ಮಮತೆಯಿಲ್ಲದವರೂ . . . ಉಗ್ರತೆಯುಳ್ಳವರೂ ಒಳ್ಳೇದನ್ನು ಪ್ರೀತಿಸದವರೂ ದ್ರೋಹಿಗಳೂ ದುಡುಕಿನವರೂ ಉಬ್ಬಿಕೊಂಡವರೂ ದೇವರನ್ನು ಪ್ರೀತಿಸದೆ ಭೋಗಗಳನ್ನೇ ಪ್ರೀತಿಸುವವರೂ ಭಕ್ತಿಯ ವೇಷವಿದ್ದು ಅದರ ಬಲವನ್ನು ಬೇಡವೆನ್ನುವವರೂ ಆಗಿರುವರು.”​—⁠2 ತಿಮೊಥೆಯ 3:1-5.

ಇಂದಿರುವ ಲೋಕದ ಪರಿಸ್ಥಿತಿಯನ್ನು ಬೈಬಲಿನ ಈ ಪ್ರವಾದನೆಯು ಸರಿಯಾಗಿಯೇ ವಿವರಿಸುತ್ತದೆ ಎಂದು ನೀವು ಒಪ್ಪಬಹುದು. ಹಾಗಿರುವುದಾದರೂ, ಈ ಪ್ರವಾದನೆಯು ಸುಮಾರು 2,000 ವರ್ಷಗಳಷ್ಟು ಹಿಂದೆ ದಾಖಲಿಸಲ್ಪಟ್ಟಿತು! ಈ ಪ್ರವಾದನೆಯು “ಕಡೇ ದಿವಸಗಳಲ್ಲಿ” ಎಂಬ ಮಾತುಗಳಿಂದ ಆರಂಭವಾಗುತ್ತದೆ. ‘ಕಡೇ ದಿವಸಗಳು’ ಎಂಬ ಈ ಅಭಿವ್ಯಕ್ತಿಯ ಅರ್ಥವೇನಾಗಿದೆ?

ಯಾವುದರ ‘ಕಡೇ ದಿವಸಗಳು’?

‘ಕಡೇ ದಿವಸಗಳು’ ಎಂಬ ಅಭಿವ್ಯಕ್ತಿಯು ಬಹಳ ಸಾಮಾನ್ಯವಾಗಿಬಿಟ್ಟಿದೆ. ಕೇವಲ ಆಂಗ್ಲ ಭಾಷೆಯಲ್ಲೇ, ಈ ಅಭಿವ್ಯಕ್ತಿಯು ನೂರಾರು ಪುಸ್ತಕಗಳ ಶಿರೋನಾಮದ ಭಾಗವಾಗಿದೆ. ಉದಾಹರಣೆಗೆ, ಮುಗ್ಧತೆಯ ಕಡೇ ದಿವಸಗಳು​—⁠ಯುದ್ಧದಲ್ಲಿ ತೊಡಗಿರುವ ಅಮೆರಿಕ, 1917-1918 (ಇಂಗ್ಲಿಷ್‌) ಎಂಬ ಇತ್ತೀಚಿನ ಪುಸ್ತಕವನ್ನು ಪರಿಗಣಿಸಿರಿ. ಪುಸ್ತಕದ ಮುನ್ನುಡಿಯು ಸ್ಪಷ್ಟಪಡಿಸುವಂತೆ, ಆ ಪುಸ್ತಕದಲ್ಲಿ “ಕಡೇ ದಿವಸಗಳು” ಎಂಬ ಅಭಿವ್ಯಕ್ತಿಯನ್ನು ನೈತಿಕ ಮೌಲ್ಯಗಳು ಮಹತ್ತರವಾಗಿ ನಶಿಸಿಹೋಗಿರುವಂತಹ ಒಂದು ಸಮಯಾವಧಿಗೆ ಸೂಚಿಸಲು ಉಪಯೋಗಿಸಲಾಗಿದೆ.

“ಇಸವಿ 1914ರಲ್ಲಿ ಯುನೈಟೆಡ್‌ ಸ್ಟೇಟ್ಸ್‌ ಅದರ ಇತಿಹಾಸದಲ್ಲೇ ಹಿಂದೆಂದಿಗಿಂತಲೂ ಹೆಚ್ಚಿನ ವೇಗದಲ್ಲಿ ಬದಲಾಗುತ್ತಿತ್ತು” ಎಂದು ಆ ಮುನ್ನುಡಿಯು ವಿವರಿಸುತ್ತದೆ. ನಿಶ್ಚಯವಾಗಿಯೂ ಲೋಕವು ಈ ಹಿಂದೆ ಎಂದೂ ಅನುಭವಿಸಿರದಂತಹ ಒಂದು ಯುದ್ಧದಲ್ಲಿ ಇಡೀ ಲೋಕವು 1914ರಲ್ಲಿ ಧುಮುಕಿತು. ಆ ಪುಸ್ತಕವು ಹೇಳುವುದು: “ಇದು ಒಂದು ಸಂಪೂರ್ಣ ಯುದ್ಧವಾಗಿತ್ತು.” ಅಂದರೆ ಈ ಯುದ್ಧದಲ್ಲಿ ಭಾಗಿಯಾಗಿದ್ದ ರಾಷ್ಟ್ರಗಳು ತಮ್ಮಲ್ಲಿದ್ದ ಎಲ್ಲಾ ಪ್ರಜೆಗಳನ್ನು, ಮಿಲಿಟರಿಯನ್ನು, ಸಂಪತ್ತುಗಳನ್ನು ಮತ್ತು ಆಯುಧಗಳನ್ನು ಸಂಪೂರ್ಣವಾಗಿ ಉಪಯೋಗಿಸಿದವು. “ಇದು ಕೇವಲ ಎರಡು ಸೈನ್ಯಗಳ ಮಧ್ಯೆ ನಡೆದ ಕದನವಾಗಿರಲಿಲ್ಲ. ಬದಲಿಗೆ ಇದು ರಾಷ್ಟ್ರ-ರಾಷ್ಟ್ರಗಳ ನಡುವಿನ ಯುದ್ಧವಾಗಿತ್ತು.” ಮುಂದೆ ನಾವು ನೋಡಲಿರುವಂತೆ, ಬೈಬಲ್‌ ಯಾವುದನ್ನು ‘ಕಡೇ ದಿವಸಗಳು’ ಎಂದು ಕರೆಯುತ್ತದೋ ಆ ಕಾಲದ ಆರಂಭದಲ್ಲಿ ಈ ಯುದ್ಧವು ನಡೆಯಿತು.

ಈ ಲೋಕವು ಅಂತ್ಯಗೊಳ್ಳುವ ಮುಂಚೆ ‘ಕಡೇ ದಿವಸಗಳು’ ಎಂಬ ನಿರ್ದಿಷ್ಟ ಸಮಯಾವಧಿಯನ್ನು ಎದುರಿಸಲಿದೆ ಎಂಬುದು ಬೈಬಲಿನ ಬೋಧನೆಯಾಗಿದೆ. ವಾಸ್ತವದಲ್ಲಿ, ಈ ಹಿಂದೆ ಅಸ್ತಿತ್ವದಲ್ಲಿದ್ದು ನಂತರ ಅಂತ್ಯವಾದ ಒಂದು ಲೋಕದ ಕುರಿತು ಬೈಬಲ್‌ ತಿಳಿಸುತ್ತದೆ. ಅದು ವಿವರಿಸುವುದು: “ನೀರುಗಳಿಂದಲೇ ಆ ಕಾಲದಲ್ಲಿದ್ದ ಲೋಕವು ಜಲಪ್ರಳಯದಲ್ಲಿ ನಾಶವಾಯಿತು.” ಅದು ಯಾವ ಕಾಲವಾಗಿತ್ತು ಮತ್ತು ಅಂತ್ಯಗೊಂಡ ಆ ಲೋಕವು ಯಾವುದು? ಅದು ನೋಹನೆಂಬ ವ್ಯಕ್ತಿಯ ಕಾಲವಾಗಿತ್ತು, ಮತ್ತು ಅವನ ಕಾಲದಲ್ಲಿದ್ದ ‘ಭಕ್ತಿಹೀನರಾದ ಪುರಾತನರು’ ನಾಶವಾದರು. ತದ್ರೀತಿಯಲ್ಲಿ, ಇಂದಿನ ಲೋಕವು ಸಹ ಅಂತ್ಯಗೊಳ್ಳಲಿದೆ, ಅಂದರೆ ಭಕ್ತಿಹೀನರ ನಾಶನವಾಗಲಿದೆ. ಆದರೆ ದೇವರನ್ನು ಸೇವಿಸುವವರು, ನೋಹ ಮತ್ತು ಅವನ ಕುಟುಂಬದವರಂತೆ ಆ ಅಂತ್ಯವನ್ನು ಪಾರಾಗುವರು.​—⁠2 ಪೇತ್ರ 2:5; 3:6; ಆದಿಕಾಂಡ 7:21-24; 1 ಯೋಹಾನ 2:17.

ಅಂತ್ಯದ ಕುರಿತು ಯೇಸು ಹೇಳಿದ ಮಾತುಗಳು

‘ಪ್ರಳಯದ ನೀರು ಬಂದು ಎಲ್ಲರನ್ನು ಬಡುಕೊಂಡುಹೋದ ತನಕದ’ “ನೋಹನ ದಿವಸಗಳ” ಕುರಿತಾಗಿಯೂ ಯೇಸು ಕ್ರಿಸ್ತನು ಮಾತಾಡಿದನು. ಪ್ರಳಯಕ್ಕೆ ಮುಂಚೆ ಅಂದರೆ ಆ ಲೋಕ ಅಂತ್ಯವಾಗುವ ತುಸು ಮುಂಚೆ ಇದ್ದ ಪರಿಸ್ಥಿತಿಗಳನ್ನು, “ಯುಗದ ಸಮಾಪ್ತಿ” ಎಂದು ಅವನು ಗುರುತಿಸಿದ ಸಮಯದಲ್ಲಿ ಎಲ್ಲೆಡೆ ಇರಲಿದ್ದ ಪರಿಸ್ಥಿತಿಗಳೊಂದಿಗೆ ಯೇಸು ಹೋಲಿಸಿದನು. (ಮತ್ತಾಯ 24:3, 37-39) ಇತರ ಬೈಬಲ್‌ ಭಾಷಾಂತರಗಳು “ಲೋಕಾಂತ್ಯ” ಅಥವಾ “ಲೋಕದ ಸಮಾಪ್ತಿ” ಎಂಬ ಅಭಿವ್ಯಕ್ತಿಯನ್ನು ಉಪಯೋಗಿಸುತ್ತವೆ.​—⁠ಪವಿತ್ರ ಗ್ರಂಥ [NIBV], ಪರಿಶುದ್ಧ ಬೈಬಲ್‌.

ಲೋಕವು ಅಂತ್ಯವಾಗುವ ಸ್ವಲ್ಪ ಮುಂಚೆ ಈ ಭೂಮಿಯ ಮೇಲೆ ಜೀವನವು ಹೇಗಿರುವುದೆಂದು ಯೇಸು ಮುಂತಿಳಿಸಿದನು. ಯುದ್ಧಗಳ ಕುರಿತು ಅವನು ತಿಳಿಸಿದ್ದು: “ಜನಕ್ಕೆ ವಿರೋಧವಾಗಿ ಜನವೂ ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಏಳುವವು.” ಇದು 1914ರಿಂದ ಪ್ರಾರಂಭವಾಯಿತೆಂದು ಇತಿಹಾಸಕಾರರು ಗಮನಿಸಿದ್ದಾರೆ. ಈ ಕಾರಣದಿಂದ, ಈ ಹಿಂದೆ ತಿಳಿಸಲ್ಪಟ್ಟಿದ್ದ ಪುಸ್ತಕದ ಮುನ್ನುಡಿಯು 1914ನ್ನು ಕೇವಲ ‘ಎರಡು ಸೈನ್ಯಗಳ ಮಧ್ಯೆ’ ಅಲ್ಲ ಬದಲಾಗಿ ‘ರಾಷ್ಟ್ರ-ರಾಷ್ಟ್ರಗಳ ನಡುವಿನ ಸಂಪೂರ್ಣ ಯುದ್ಧದ’ ಆರಂಭವೆಂದು ಗುರುತಿಸಿತ್ತು.

ಯೇಸು ತನ್ನ ಪ್ರವಾದನೆಯಲ್ಲಿ ಕೂಡಿಸಿದ್ದು: “ಅಲ್ಲಲ್ಲಿ ಬರಗಳು ಬರುವವು, ಭೂಕಂಪಗಳು ಆಗುವವು; ಇವೆಲ್ಲಾ [ನೂತನ ಕಾಲವು ಹುಟ್ಟುವ] ಪ್ರಸವವೇದನೆಯ ಪ್ರಾರಂಭ.” ಅವನು ಮುಂದುವರಿಸುತ್ತಾ ಬೇರೆ ಸಂಗತಿಗಳೊಂದಿಗೆ “ಅಧರ್ಮವು ಹೆಚ್ಚಾಗು”ವುದೆಂದು ಹೇಳಿದನು. (ಮತ್ತಾಯ 24:7-14) ಇದು ನಮ್ಮ ದಿನದಲ್ಲಿ ಸಂಭವಿಸುತ್ತಿರುವುದನ್ನು ಖಂಡಿತವಾಗಿಯೂ ನಾವು ಕಣ್ಣಾರೆ ನೋಡಿದ್ದೇವೆ. ಇಂದು ನೈತಿಕ ಮೌಲ್ಯಗಳು ಎಷ್ಟು ತೀವ್ರವಾಗಿ ಕುಸಿದುಬಿದ್ದಿವೆ ಎಂದರೆ ಅವು ಬೈಬಲ್‌ ಪ್ರವಾದನೆಗಳನ್ನು ನೆರೆವೇರಿಸುತ್ತಿವೆ!

ಇಂತಹ ನೈತಿಕ ಅವನತಿಯ ಸಮಯಗಳಲ್ಲಿ ನಮ್ಮ ಜೀವನ ಹೇಗಿರತಕ್ಕದ್ದು? ನೈತಿಕ ಮೌಲ್ಯಗಳು ನಶಿಸಿಹೋಗುವ ವಿಷಯದಲ್ಲಿ ಅಪೊಸ್ತಲ ಪೌಲನು ರೋಮ್‌ನಲ್ಲಿದ್ದ ಕ್ರೈಸ್ತರಿಗೆ ಏನು ಬರೆದನೆಂಬುದನ್ನು ಗಮನಿಸಿ. ಜನರ “ತುಚ್ಛವಾದ ಕಾಮಾಭಿಲಾಷೆಗೆ” ಸೂಚಿಸುತ್ತಾ ಅವನು ಹೇಳಿದ್ದು: “ಅವರ ಹೆಂಗಸರು ಸ್ವಾಭಾವಿಕವಾದ ಭೋಗವನ್ನು ಬಿಟ್ಟು ಸ್ವಭಾವಕ್ಕೆ ವಿರುದ್ಧವಾದ ಭೋಗವನ್ನು ಅನುಸರಿಸಿದರು. ಅದರಂತೆ ಗಂಡಸರು ಸಹ ಸ್ವಾಭಾವಿಕವಾದ ಸ್ತ್ರೀಭೋಗವನ್ನು ಬಿಟ್ಟು ಒಬ್ಬರ ಮೇಲೊಬ್ಬರು ತಮ್ಮ ಕಾಮಾತುರದಿಂದ ತಾಪಪಡುತ್ತಾ ಗಂಡಸರ ಸಂಗಡ ಗಂಡಸರು ಕೇವಲ ಅವಲಕ್ಷಣವಾದದ್ದನ್ನು ನಡಿಸಿ”ದರು.​—⁠ರೋಮಾಪುರ 1:26, 27.

ಪ್ರಥಮ ಶತಮಾನದಲ್ಲಿ ಮಾನವ ಸಮಾಜದ ನೈತಿಕ ಮೌಲ್ಯಗಳು ಹಿಂದೆಂದಿಗಿಂತಲೂ ಹೆಚ್ಚಾಗಿ ಅಧೋಗತಿಗೆ ಇಳಿಯುತ್ತಾ ಇದ್ದವು. ಹೀಗಿದ್ದರೂ, “ಆಗಿನ ಕ್ರೈಸ್ತ ಸಮುದಾಯಗಳು ತಮ್ಮ ಧರ್ಮಶ್ರದ್ಧೆ ಮತ್ತು ಶಿಷ್ಟಾಚಾರದ ಮೂಲಕ ಸುಖಾಭಿಲಾಷೆಯನ್ನು ಮತ್ತು ಲೈಂಗಿಕ ಬಯಕೆಗಳನ್ನು ತಣಿಸಲು ಯಾವ ಮಟ್ಟಕ್ಕೂ ಇಳಿಯುತ್ತಿದ್ದ ವಿಧರ್ಮಿಯರ ಲೋಕವನ್ನು ಆತಂಕಕ್ಕೆ ಈಡುಮಾಡಿದವು” ಎಂದು ಇತಿಹಾಸಕಾರರು ಹೇಳುತ್ತಾರೆ. ಈ ವಿಷಯವು, ನಾವು ತುಸು ನಿಂತು ನಮ್ಮನ್ನೇ ಹೀಗೆ ಕೇಳಿಕೊಳ್ಳುವಂತೆ ಪ್ರಚೋದಿಸಬೇಕು: ‘ನನ್ನ ಮತ್ತು ನಾನು ಸಹವಾಸಿಸಲು ಆರಿಸಿಕೊಳ್ಳುವವರ ಕುರಿತೇನು? ಅನೈತಿಕತೆಯನ್ನು ನಡೆಸಿಕೊಂಡು ಹೋಗುತ್ತಿರುವವರಿಗೆ ವ್ಯತಿರಿಕ್ತವಾಗಿ, ನಾನು ಮತ್ತು ನನ್ನ ಸಹವಾಸಿಗಳು ನೈತಿಕವಾಗಿ ನೆಟ್ಟಗಿನ ನಡತೆಯುಳ್ಳವರಾಗಿದ್ದು, ಎದ್ದುಕಾಣುವಂತಹ ರೀತಿಯಲ್ಲಿ ಭಿನ್ನರಾಗಿದ್ದೇವೋ?’​—⁠1 ಪೇತ್ರ 4:3, 4.

ನಮಗಿರುವ ಹೋರಾಟ

ನಮ್ಮ ಸುತ್ತಮುತ್ತಲೂ ಅನೈತಿಕತೆ ಇರುವುದಾದರೂ ನಾವು “ನಿರ್ದೋಷಿಗಳೂ ಯಥಾರ್ಥ ಮನಸ್ಸುಳ್ಳವರೂ ಆಗಿದ್ದು ವಕ್ರಬುದ್ಧಿಯುಳ್ಳ ಮೂರ್ಖ ಜಾತಿಯ ಮಧ್ಯದಲ್ಲಿ ದೇವರ ನಿಷ್ಕಳಂಕರಾದ ಮಕ್ಕಳಾಗಿ”ರಬೇಕೆಂದು ಬೈಬಲ್‌ ನಮಗೆ ಬೋಧಿಸುತ್ತದೆ. ಹಾಗೆ ಮಾಡಬೇಕಾದರೆ ‘ಜೀವದಾಯಕ ವಾಕ್ಯದ’ ಮೇಲೆ ನಮಗೆ ಬಲವಾದ ಹಿಡಿತವಿರಬೇಕು. (ಫಿಲಿಪ್ಪಿ 2:15, 16) ಈ ಬೈಬಲ್‌ ಹೇಳಿಕೆಯು, ಕ್ರೈಸ್ತರು ಹೇಗೆ ನೈತಿಕ ಭ್ರಷ್ಟಾಚಾರದಿಂದ ಕಳಂಕಿತರಾಗದೆ ಇರಬಹುದು ಎಂಬ ವಿಷಯದಲ್ಲಿ ಸಹಾಯಮಾಡುವ ಪ್ರಾಮುಖ್ಯ ಅಂಶವನ್ನು ಒದಗಿಸುತ್ತದೆ. ಅದೇನೆಂದರೆ, ಅವರು ದೇವರ ವಾಕ್ಯದ ಬೋಧನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಮತ್ತು ಅದರಲ್ಲಿರುವ ನೈತಿಕ ಮಟ್ಟಗಳು ಸಾಧ್ಯವಿರುವುದರಲ್ಲೇ ಅತ್ಯುತ್ತಮವಾದ ಜೀವನ ರೀತಿಯನ್ನು ತೋರಿಸಿಕೊಡುತ್ತವೆ ಎಂಬುದನ್ನು ಅಂಗೀಕರಿಸಬೇಕು.

“ಈ ಪ್ರಪಂಚದ ದೇವರು” ಅಂದರೆ ಪಿಶಾಚನಾದ ಸೈತಾನನು ಜನರನ್ನು ತನ್ನ ಕಡೆಗೆ ಒಲಿಸಲು ಪ್ರಯತ್ನಿಸುತ್ತಿದ್ದಾನೆ. (2 ಕೊರಿಂಥ 4:4) ಅವನು “ಪ್ರಕಾಶರೂಪವುಳ್ಳ ದೇವದೂತನ ವೇಷವನ್ನು ಹಾಕಿಕೊಳ್ಳು”ತ್ತಾನೆ ಎಂದು ಬೈಬಲ್‌ ನಮಗೆ ತಿಳಿಸುತ್ತದೆ. ಅವನಂತೆ ವರ್ತಿಸುವ ಮೂಲಕ ಅವನ ಸೇವೆಮಾಡುವ ಸೇವಕರೂ ಅದೇ ರೀತಿಯ ವೇಷವನ್ನು ಹಾಕಿಕೊಳ್ಳುತ್ತಾರೆ. (2 ಕೊರಿಂಥ 11:14, 15) ತಾವು ಹೇಳುವಂತೆ ಮಾಡುವುದಾದರೆ ಸ್ವಾತಂತ್ರ್ಯ ಮತ್ತು ಆನಂದ ಸಿಗುತ್ತದೆ ಎಂದು ಅವರು ವಾಗ್ದಾನ ಮಾಡುತ್ತಾರೆ. ಆದರೆ ಬೈಬಲ್‌ ಹೇಳುವಂತೆ, ಸ್ವತಃ “ತಾವೇ ಕೆಟ್ಟತನದ ದಾಸತ್ವದೊಳಗಿದ್ದಾರೆ.”​—⁠2 ಪೇತ್ರ 2:19.

ಈ ವಿಷಯದಲ್ಲಿ ಮೋಸಹೋಗಬೇಡಿರಿ. ಯಾರು ದೇವರ ನೈತಿಕ ಮಟ್ಟಗಳನ್ನು ನಿರ್ಲಕ್ಷಿಸುತ್ತಾರೋ ಅವರು ಘೋರ ಪರಿಣಾಮಗಳನ್ನು ಅನುಭವಿಸುವರು. ಬೈಬಲಿನ ಕೀರ್ತನೆಗಾರನು ಬರೆದದ್ದು: “ನಿನ್ನ ನಿಬಂಧನೆಗಳನ್ನು ಅಲಕ್ಷ್ಯಮಾಡುವ ದುಷ್ಟರಿಗೆ ರಕ್ಷಣೆಯೇ ಇಲ್ಲ.” (ಕೀರ್ತನೆ 119:155; ಜ್ಞಾನೋಕ್ತಿ 5:22, 23) ಇದರ ಕುರಿತು ನಮಗೆ ಈಗಾಗಲೇ ಮನವರಿಕೆಯಾಗಿದೆಯೇ? ಆಗಿರುವಲ್ಲಿ, ನೈತಿಕವಾಗಿ ಕಟ್ಟುನಿಟ್ಟಿಲ್ಲದ ಅಥವಾ ಸ್ವೇಚ್ಛಾಚಾರದ ಜೀವನ ಶೈಲಿಯನ್ನು ಉತ್ತೇಜಿಸುತ್ತಿರುವ ಪ್ರಚಾರದ ವಿರುದ್ಧ ನಮ್ಮ ಹೃದಮನಗಳನ್ನು ಕಾಪಾಡೋಣ.

ಆದರೆ ಅನೇಕರು ಬುದ್ಧಿಹೀನರಾಗಿ ವಾದಿಸುವುದು, ‘ನಾನೇನು ಮಾಡುತ್ತಿದ್ದೇನೋ ಅದು ಕಾನೂನನ್ನು ಉಲ್ಲಂಘಿಸದಿದ್ದರೆ, ಅದರಲ್ಲಿ ತಪ್ಪೇನಿಲ್ಲ.’ ಆದರೆ ವಿಷಯವು ಹಾಗಿರುವುದಿಲ್ಲ. ನಮ್ಮ ಸ್ವರ್ಗೀಯ ಪಿತನು ಪ್ರೀತಿಯಿಂದ ನೀಡುವ ನೈತಿಕ ಮಾರ್ಗದರ್ಶನೆಯ ಉದ್ದೇಶವು ನಿಮ್ಮ ಜೀವನವನ್ನು ನಿರಾಶದಾಯಕವನ್ನಾಗಿ ಮಾಡುವುದು ಅಥವಾ ಕಟ್ಟುಪಾಡುಗಳಿಂದ ಬಂಧಿಸುವುದಾಗಿರುವುದಿಲ್ಲ. ಬದಲಿಗೆ ಆತನ ಉದ್ದೇಶವು ನಿಮ್ಮನ್ನು ಸಂರಕ್ಷಿಸುವುದಾಗಿದೆ. ಆತನು ನಮಗೆ ‘ವೃದ್ಧಿಮಾರ್ಗವನ್ನು ಬೋಧಿಸುತ್ತಾನೆ.’ ನಾವು ಕೇಡಿನಿಂದ ತಪ್ಪಿಸಿಕೊಂಡು ಸಂತೋಷವಾದ ಜೀವನವನ್ನು ಆನಂದಿಸಬೇಕೆಂಬುದು ಆತನ ಬಯಕೆಯಾಗಿದೆ. ನಿಶ್ಚಯವಾಗಿಯೂ, ಬೈಬಲ್‌ ಬೋಧಿಸುವಂತೆ, ದೇವರ ಸೇವಕರಾದವರಿಗೆ “ಈಗಲೂ ಮುಂದೆಯೂ ಜೀವ ವಾಗ್ದಾನ ಉಂಟು.” ಅದು ದೇವರು ವಾಗ್ದಾನಿಸಿರುವ ಹೊಸ ಲೋಕದಲ್ಲಿನ “ವಾಸ್ತವವಾದ ಜೀವ” ಅಂದರೆ ನಿತ್ಯಜೀವ ಆಗಿದೆ.​—⁠ಯೆಶಾಯ 48:17, 18; 1 ತಿಮೊಥೆಯ 4:​8, NIBV; 1 ತಿಮೊಥೆಯ 6:18, 19.

ಆದಕಾರಣ, ಬೈಬಲಿನ ಬೋಧನೆಗಳಿಗನುಸಾರ ಜೀವಿಸುವುದರಿಂದ ಬರುವ ಪ್ರಯೋಜನಗಳನ್ನು ಮತ್ತು ಅವುಗಳಿಗನುಸಾರ ಜೀವಿಸಲು ಮನಸ್ಸುಮಾಡದವರು ಒಂದಲ್ಲ ಒಂದು ದಿನ ಪಡುವ ಮನೋವ್ಯಥೆಯನ್ನು ಹೋಲಿಸಿ ನೋಡಿರಿ. ದೇವರಿಗೆ ಕಿವಿಗೊಡುವುದರ ಮೂಲಕ ಆತನ ಅನುಗ್ರಹವನ್ನು ಪಡೆದುಕೊಳ್ಳುವ ಜೀವನವು ಸಾಧ್ಯವಿರುವುದರಲ್ಲೇ ಅತ್ಯುತ್ತಮವಾದ ಜೀವನವಾಗಿದೆ! “ನನ್ನ ಮಾತಿಗೆ ಕಿವಿಗೊಡುವವನಾದರೋ ಸ್ವಸ್ಥವಾಗಿರುತ್ತಾ ಯಾವ ಕೇಡಿಗೂ ಭಯಪಡದೆ ಸುರಕ್ಷಿತನಾಗಿರುವನು” ಎಂಬುದು ದೇವರ ಆಶ್ವಾಸನೆಯಾಗಿದೆ.​—⁠ಜ್ಞಾನೋಕ್ತಿ 1:33.

ನೈತಿಕವಾಗಿ ನೆಟ್ಟಗಿರುವ ಒಂದು ಸಮಾಜ

ಬೈಬಲ್‌ ಹೇಳುತ್ತದೇನೆಂದರೆ ಈ ಲೋಕವು ನಶಿಸಿಹೋದ ಮೇಲೆ “ದುಷ್ಟನು ಕಾಣಿಸದೆ ಹೋಗುವನು.” ಅದಕ್ಕೆ ಕೂಡಿಸುತ್ತಾ ಅದು ಹೇಳುವುದು: “ಯಥಾರ್ಥವಂತರು ದೇಶದಲ್ಲಿ ಸ್ವತಂತ್ರರಾಗಿರುವರು, ನಿರ್ದೋಷಿಗಳು ಅದರಲ್ಲಿ ನೆಲೆಯಾಗಿರುವರು.” (ಕೀರ್ತನೆ 37:10, 11; ಜ್ಞಾನೋಕ್ತಿ 2:20-22) ಹಾಗಾದರೆ, ಭೂಮಿಯ ಮೇಲೆ ಅನೈತಿಕತೆಯ ಎಲ್ಲಾ ಅವಶೇಷಗಳನ್ನು ಮತ್ತು ಅದರೊಂದಿಗೆ ನಮ್ಮ ಸೃಷ್ಟಿಕರ್ತನ ಪ್ರಯೋಜನದಾಯಕ ಬೋಧನೆಗಳನ್ನು ಅನುಸರಿಸಲು ನಿರಾಕರಿಸುವವರೆಲ್ಲರನ್ನೂ ಸಂಪೂರ್ಣವಾಗಿ ತೆಗೆದುಹಾಕಲಾಗುವುದು. ದೇವರನ್ನು ಪ್ರೀತಿಸುವವರು, ಆತನು ಪ್ರಥಮ ಮಾನವ ದಂಪತಿಗಳಿಗೆಂದು ಮಾಡಿಕೊಟ್ಟಂತಹ ರೀತಿಯ ಒಂದು ಭೂಪರದೈಸವನ್ನು ಕ್ರಮೇಣವಾಗಿ ಭೂಮ್ಯಾದ್ಯಂತ ಸಿದ್ಧಮಾಡುವರು.​—⁠ಆದಿಕಾಂಡ 2:7-9.

ಪರದೈಸಿನ ಸೌಂದರ್ಯವುಳ್ಳ ಒಂದು ಶುದ್ಧವಾದ ಭೂಮಿಯಲ್ಲಿ ಜೀವಿಸುವ ಆನಂದದ ಬಗ್ಗೆ ಸ್ವಲ್ಪ ಯೋಚಿಸಿರಿ! ಅಂತಹ ಪರಿಸ್ಥಿತಿಯನ್ನು ನೋಡುವ ಸುಯೋಗವು ಸತ್ತವರಿಂದ ಪುನರುತ್ಥಾನಗೊಳಿಸಲ್ಪಡುವ ಕೋಟ್ಯಾಂತರ ಜನರಿಗಿರುವುದು. ದೇವರ ಈ ವಾಗ್ದಾನಗಳಲ್ಲಿ ಆನಂದಿಸಿರಿ: “ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು.” “[ದೇವರು] ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು.”​—⁠ಕೀರ್ತನೆ 37:29; ಪ್ರಕಟನೆ 21:3, 4. (g 4/07)

[ಪುಟ 9ರಲ್ಲಿರುವ ಸಂಕ್ಷಿಪ್ತ ವಿವರಣೆ]

ಹಿಂದೊಮ್ಮೆ ಲೋಕವು ಅಂತ್ಯವಾದಾಗ ದೇವಭಯವುಳ್ಳ ಕೆಲವರು ಪಾರಾದರು

[ಪುಟ 10ರಲ್ಲಿರುವ ಚಿತ್ರ]

ಈ ಲೋಕವು ಅಂತ್ಯವಾದ ನಂತರ, ಭೂಮಿಯು ಪರದೈಸಾಗುವುದು