ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಈ ವ್ಯಕ್ತಿ ನನಗೆ ಸರಿಯಾದ ಜೋಡಿಯೋ?

ಈ ವ್ಯಕ್ತಿ ನನಗೆ ಸರಿಯಾದ ಜೋಡಿಯೋ?

ಯುವ ಜನರು ಪ್ರಶ್ನಿಸುವುದು . . .

ಈ ವ್ಯಕ್ತಿ ನನಗೆ ಸರಿಯಾದ ಜೋಡಿಯೋ?

ಈ ಮುಂದಿನ ಕ್ವಿಜ್‌ಗಾಗಿ ಸ್ವಲ್ಪ ಸಮಯ ಕೊಡಿ:

ಮುಂದೆ ನಿಮ್ಮ ಬಾಳ ಸಂಗಾತಿ ಆಗುವ ವ್ಯಕ್ತಿಯಲ್ಲಿ ಯಾವ ಗುಣಗಳಿರಬೇಕೆಂದು ನಿಮಗೆ ಸದ್ಯಕ್ಕೆ ಅನಿಸುತ್ತದೆ? ಕೆಳಗಿರುವ ಪಟ್ಟಿಯಲ್ಲಿ, ತುಂಬ ಪ್ರಾಮುಖ್ಯವೆಂದು ನಿಮಗನಿಸುವ ನಾಲ್ಕು ಗುಣಗಳ ಪಕ್ಕದಲ್ಲಿ ✔ ಗುರುತನ್ನು ಹಾಕಿ.

․․․․․․․․ ಸೌಂದರ್ಯ ․․․․․․․․ ಆಧ್ಯಾತ್ಮಿಕ-ಮನಸ್ಸು

․․․․․․․․ ಸ್ನೇಹಭಾವ ․․․․․․․․ ಭರವಸಯೋಗ್ಯ

․․․․․․․․ ಎಲ್ಲರಿಗೂ ಅಚ್ಚುಮೆಚ್ಚು ․․․․․․․․ ನೈತಿಕವಾಗಿ ನೆಟ್ಟಗಿನ ನಡತೆ

․․․․․․․․ ತಮಾಷೆ ಸ್ವಭಾವ ․․․․․․․․ ಗುರಿಗಳುಳ್ಳ ವ್ಯಕ್ತಿ

ನೀವು ಎಳೆಯರಾಗಿದ್ದಾಗ, ನಿಮಗೆ ಯಾರ ಮೇಲಾದರೂ ಪ್ರಣಯಾತ್ಮಕ ವ್ಯಾಮೋಹ ಹುಟ್ಟಿಕೊಂಡಿತ್ತೋ? ಆ ಸಮಯದಲ್ಲಿ ನಿಮಗೆ ಆ ವ್ಯಕ್ತಿಯಲ್ಲಿ ತುಂಬ ಆಕರ್ಷಕವಾಗಿ ತೋರಿದ್ದ, ಮೇಲಿನ ಪಟ್ಟಿಯಲ್ಲಿನ ಒಂದು ಗುಣಲಕ್ಷಣದ ಪಕ್ಕದಲ್ಲಿ ✘ ಗುರುತನ್ನು ಹಾಕಿರಿ.

ಈ ಮೇಲೆ ಕೊಡಲಾಗಿರುವ ಯಾವುದೇ ಗುಣಗಳಲ್ಲಿ ಏನೂ ತಪ್ಪಿಲ್ಲ. ಪ್ರತಿಯೊಂದಕ್ಕೂ ಅದರದ್ದೇ ಆದ ಆಕರ್ಷಣೆಯಿದೆ. ಆದರೆ ಯೌವನದ ಗುಂಗಿನಲ್ಲಿ ನಿಮಗೊಬ್ಬ ವ್ಯಕ್ತಿಯ ಮೇಲೆ ವ್ಯಾಮೋಹ ಹುಟ್ಟುವಾಗ ನೀವು ಯಾವುದಕ್ಕೆ ಹೆಚ್ಚು ಗಮನಕೊಡುತ್ತೀರಿ? ಎಡಬದಿಯ ಕಾಲಮ್‌ನಲ್ಲಿರುವಂಥ ಬಾಹ್ಯತೋರಿಕೆಯ ಗುಣಗಳಿಗೆ, ಅಲ್ಲವೇ?

ಆದರೆ ನೀವು ಪ್ರೌಢರಾಗುತ್ತಾ ಹೋದಂತೆ, ನಿಮ್ಮ ಗ್ರಹಣಶಕ್ತಿಗಳನ್ನು ಉಪಯೋಗಿಸಲಾರಂಭಿಸುತ್ತಾ ಬಲಬದಿಯ ಕಾಲಮ್‌ನಲ್ಲಿರುವಂಥ ಹೆಚ್ಚು ಪ್ರಾಮುಖ್ಯ ಗುಣಗಳಿಗಾಗಿ ಹುಡುಕುತ್ತೀರಿ. ದೃಷ್ಟಾಂತಕ್ಕಾಗಿ ನಿಮ್ಮ ನೆರೆಹೊರೆಯಲ್ಲಿರುವ ಆ ಚೆಲುವೆಯು ಭರವಸೆಗೆ ಯೋಗ್ಯಳಲ್ಲ ಎಂದು ನೀವು ಗ್ರಹಿಸಬಹುದು. ಇಲ್ಲವೇ ಕ್ಲಾಸಿನಲ್ಲಿ ಎಲ್ಲರಿಗೂ ಅಚ್ಚುಮೆಚ್ಚಿನವನಾಗಿರುವ ಆ ಹುಡುಗನ ನೈತಿಕ ನಡತೆ ನೆಟ್ಟಗಿಲ್ಲವೆಂದು ನಿಮಗೆ ತಿಳಿದುಬರಬಹುದು. ‘ಈ ವ್ಯಕ್ತಿ ನನಗೆ ಸರಿಯಾದ ಜೋಡಿಯೋ?’ ಎಂಬ ಪ್ರಶ್ನೆಗೆ ಉತ್ತರವನ್ನು ಪಡೆಯಲು ಕೇವಲ ಆ ವ್ಯಕ್ತಿಯ ಮೇಲುಮೇಲಿನ ಗುಣಲಕ್ಷಣಗಳಿಗಿಂತಲೂ ಹೆಚ್ಚಿನದ್ದನ್ನು ನೋಡಲಿಕ್ಕಾಗಿ ನೀವು, ಲೈಂಗಿಕ ಬಯಕೆಗಳು ಯಾವಾಗ ಮೊತ್ತಮೊದಲ ಬಾರಿ ತುಂಬ ಪ್ರಬಲವಾಗುತ್ತವೊ, ಜೀವನದ ಆ “ಪ್ರಾಯ ಕಳೆ”ದವರಾಗಿರಬೇಕು.​—⁠1 ಕೊರಿಂಥ 7:⁠36.

ಯಾರಾದರೂ ಆಗುತ್ತದೋ?

ಕಾಲದಾಟಿದಂತೆ ವಿರುದ್ಧಲಿಂಗದ ಅನೇಕರು ನಿಮ್ಮ ಕಣ್‌ಸೆಳೆಯಬಹುದು. ಆದರೆ ಯಾರಾದರೂ ಆಗುತ್ತದೆ ಅಥವಾ ಅವರು ಹೇಗಿದ್ದರೂ ನಡೆಯುತ್ತದೆ ಎಂಬ ಭಾವನೆಯು ಸಲ್ಲದು. ಏಕೆಂದರೆ ನಿಮಗೆ ಬೇಕಾಗಿರುವುದು ನಿಮ್ಮ ಬಾಳಿನುದ್ದಕ್ಕೂ ಸಂಗಾತಿಯಾಗಿರುವ ಒಬ್ಬ ವ್ಯಕ್ತಿ. ನಿಮ್ಮಲ್ಲಿರುವ ಒಳ್ಳೇ ಗುಣಗಳಿಗೆ ಮೆರಗುನೀಡುವ ಮತ್ತು ನೀವೂ ಅವರಿಗೆ ಹಾಗೆಯೇ ಮಾಡಬಲ್ಲ ಒಬ್ಬ ವ್ಯಕ್ತಿ ಅವರಾಗಿರಬೇಕು. (ಮತ್ತಾಯ 19:​4-6) ಆ ವ್ಯಕ್ತಿ ಯಾರಾಗಿರಬಹುದು? ಈ ಪ್ರಶ್ನೆಯನ್ನು ಉತ್ತರಿಸುವ ಮೊದಲು ನೀವು ‘ಕನ್ನಡಿಯಲ್ಲಿ ನೋಡಿ’ ನಿಮ್ಮನ್ನೇ ಪ್ರಾಮಾಣಿಕವಾಗಿ ವಿಮರ್ಶಿಸಿಕೊಳ್ಳಬೇಕು.​—⁠ಯಾಕೋಬ 1:​23-25.

ನಿಮ್ಮ ಕುರಿತಾಗಿ ಸ್ವತಃ ನೀವೇ ಹೆಚ್ಚನ್ನು ತಿಳಿದುಕೊಳ್ಳಲಿಕ್ಕಾಗಿ ಈ ಮುಂದಿನ ಪ್ರಶ್ನೆಗಳನ್ನು ಉತ್ತರಿಸಿರಿ:

ನನ್ನ ಬಲವಾದ ಗುಣಗಳು ಮತ್ತು ಸಾಮರ್ಥ್ಯಗಳೇನು?

․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․

․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․

ನನ್ನ ಬಲಹೀನತೆಗಳೇನು?

․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․

․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․

ನನ್ನ ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಅಗತ್ಯಗಳೇನು?

․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․

․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․

ನಿಮ್ಮ ಸ್ವ-ವಿಮರ್ಶೆಮಾಡಿಕೊಳ್ಳುವುದು ಸುಲಭವಲ್ಲ. ಆದರೆ ಈ ರೀತಿಯ ಪ್ರಶ್ನೆಗಳು ನೀವದನ್ನು ಮಾಡಲು, ಕಡಿಮೆಪಕ್ಷ ಆ ನಿಟ್ಟಿನಲ್ಲಿ ಮೊದಲ ಹೆಜ್ಜೆಯನ್ನು ತೆಗೆದುಕೊಳ್ಳುವಂತೆ ಸಹಾಯಮಾಡುವುದು. * ನೀವು ಮೊದಲು ನಿಮ್ಮನ್ನೇ ಹೆಚ್ಚು ಉತ್ತಮವಾಗಿ ಅರ್ಥಮಾಡಿಕೊಂಡಾಗ, ನಿಮ್ಮ ಬಲಹೀನತೆಗಳನ್ನಲ್ಲ ಬದಲಾಗಿ ನಿಮ್ಮ ಬಲವಾದ ಗುಣಗಳು ಮತ್ತು ಸಾಮರ್ಥ್ಯಗಳಿಗೆ ಮೆರುಗುನೀಡುವ ಒಬ್ಬ ವ್ಯಕ್ತಿಯನ್ನು ಹುಡುಕಲು ನೀವು ಹೆಚ್ಚು ಉತ್ತಮವಾಗಿ ಸಜ್ಜಾಗುತ್ತೀರಿ. ಆದರೆ ನಿಮಗೆ ಸರಿಯಾದ ಜೋಡಿಯಾಗಬಲ್ಲ ಒಬ್ಬ ವ್ಯಕ್ತಿ ಈಗಾಗಲೇ ಸಿಕ್ಕಿದ್ದಾರೆಂದು ನಿಮಗನಿಸುವಲ್ಲಿ ಆಗೇನು?

ಈ ಸಂಬಂಧವು ಯಶಸ್ವಿ ಆಗುವುದೋ?

ಈ ಪ್ರಶ್ನೆಯನ್ನು ಉತ್ತರಿಸಲಿಕ್ಕೆ, ನೀವು ಯಾರ ಕಡೆಗೆ ಆಕರ್ಷಿತರಾಗಿದ್ದೀರೋ ಆ ವ್ಯಕ್ತಿಯನ್ನು, ಅವರು ನಿಜವಾಗಿ ಏನಾಗಿದ್ದಾರೋ ಹಾಗೆಯೇ ನೋಡಿರಿ. ಆದರೆ ಜಾಗ್ರತೆ! ಏಕೆಂದರೆ, ನೀವೇನನ್ನು ನೋಡಲು ಬಯಸುತ್ತೀರೋ ಅದು ಮಾತ್ರ ನಿಮಗೆ ಕಾಣುವ ಸಾಧ್ಯತೆ ಇದೆ. ಆದುದರಿಂದ ಅವಸರಮಾಡಬೇಡಿ. ಆ ವ್ಯಕ್ತಿಯ ನಿಜ ಸ್ವಭಾವವೇನೆಂಬುದನ್ನು ಅರಿಯಲು ಪ್ರಯತ್ನಿಸಿರಿ.

ಅನೇಕರು ಡೇಟಿಂಗ್‌ ಮಾಡುವಾಗ ಪರಸ್ಪರರ ಮೇಲುಮೇಲಿನ ಸಂಗತಿಗಳನ್ನು ಮಾತ್ರ ನೋಡುತ್ತಾರೆ ಮತ್ತು ಪ್ರಾಮುಖ್ಯವಾದ ವಿಷಯಗಳನ್ನು ಪರಿಗಣಿಸುವುದಿಲ್ಲ. ಅದರ ಬದಲಿಗೆ, ತಮ್ಮಿಬ್ಬರಲ್ಲಿ ಸಾಮಾನ್ಯವಾಗಿರುವ ಸಂಗತಿಗಳನ್ನು ಹುಡುಕಲು ಅವರು ದುಡುಕುತ್ತಾರೆ. ಉದಾಹರಣೆಗೆ, ‘ನಮಗಿಬ್ಬರಿಗೂ ಒಂದೇ ರೀತಿಯ ಸಂಗೀತ ಇಷ್ಟ,’ ‘ನಮಗಿಬ್ಬರಿಗೂ ಒಂದೇ ರೀತಿಯ ಚಟುವಟಿಕೆಗಳು ಖುಷಿಕೊಡುತ್ತವೆ,’ ‘ನಮಗೆ ಪ್ರತಿಯೊಂದೂ ವಿಷಯದ ಮೇಲೆ ಒಂದೇ ರೀತಿಯ ಅಭಿಪ್ರಾಯವಿರುತ್ತದೆ’ ಎಂದವರು ಹೇಳುತ್ತಾರೆ. ಆದರೆ ಈ ಹಿಂದೆ ತಿಳಿಸಲಾದಂತೆ ನಿಮಗೆ ಯೌವನದ ಪ್ರಾಯ ನಿಜವಾಗಿಯೂ ಕಳೆದಿರುವಲ್ಲಿ, ನೀವು ಕೇವಲ ಬಾಹ್ಯ ಲಕ್ಷಣಕ್ಕಿಂತಲೂ ಹೆಚ್ಚಿನದ್ದನ್ನು ನೋಡುವಿರಿ. ನೀವು ಆ ವ್ಯಕ್ತಿಯ “ಒಳಗಣ ಭೂಷಣ”ವನ್ನು ಗ್ರಹಿಸಬೇಕು.​—⁠1 ಪೇತ್ರ 3:4; ಎಫೆಸ 3:⁠16.

ಉದಾಹರಣೆಗೆ, ನೀವು ಎಷ್ಟರ ಮಟ್ಟಿಗೆ ಒಂದೇ ಅಭಿಪ್ರಾಯವುಳ್ಳವರಾಗಿರುತ್ತೀರಿ ಎಂಬುದಕ್ಕೆ ಮಾತ್ರ ಗಮನಕೊಡುವ ಬದಲು, ನಿಮ್ಮ ಅಭಿಪ್ರಾಯಗಳು ಭಿನ್ನವಾಗಿರುವಾಗ ಏನಾಗುತ್ತದೆಂಬುದಕ್ಕೆ ಗಮನಕೊಟ್ಟರೆ ಆ ವ್ಯಕ್ತಿಯ ಬಗ್ಗೆ ಹೆಚ್ಚನ್ನು ತಿಳಿದುಕೊಳ್ಳುವಿರಿ. ಬೇರೆ ಮಾತಿನಲ್ಲಿ ಹೇಳುವುದಾದರೆ, ನಿಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯವಿರುವಾಗ ಈ ವ್ಯಕ್ತಿ ಹೇಗೆ ನಡೆದುಕೊಳ್ಳುತ್ತಾನೆ/ಳೆ? ತಾನು ಹೇಳಿದ್ದೇ ಸರಿಯೆಂದು ಹಠಹಿಡಿಯುತ್ತಾನೋ/ಳೋ? ಅಥವಾ “ಸಿಟ್ಟು”ಗೊಳ್ಳುತ್ತಾನೋ/ಳೋ ಇಲ್ಲವೇ “ದುರ್ಭಾಷೆಯನ್ನು” ಬಳಸುತ್ತಾನೋ/ಳೋ? (ಗಲಾತ್ಯ 5:​19, 20; ಕೊಲೊಸ್ಸೆ 3:⁠8) ಅಥವಾ ಈ ವ್ಯಕ್ತಿ “ನ್ಯಾಯಸಮ್ಮತ”ವಾಗಿ ನಡೆದುಕೊಳ್ಳುತ್ತಾನೋ/ಳೋ? ಅಂದರೆ, ಯಾವುದು ತಪ್ಪು ಯಾವುದು ಸರಿ ಎಂಬ ವಿವಾದಾಂಶವಿಲ್ಲದಿರುವಾಗ, ಸಮಾಧಾನವನ್ನು ಕಾಪಾಡುವ ಸಲುವಾಗಿ ಮಣಿಯಲಿಕ್ಕೆ ಸಿದ್ಧನೋ/ಳೋ?​—⁠ಯಾಕೋಬ 3:​17, NW.

ಪರಿಗಣಿಸಬೇಕಾದ ಇನ್ನೊಂದು ಅಂಶವಿದೆ: ಈ ವ್ಯಕ್ತಿ ಎಲ್ಲ ವಿಷಯಗಳನ್ನು ನಿಯಂತ್ರಿಸಲು ಬಯಸುತ್ತಾನೋ/ಳೋ ಇಲ್ಲವೇ ಹೊಟ್ಟೆಕಿಚ್ಚುಪಡುತ್ತಾನೋ/ಳೋ? ನೀವೇನು ಮಾಡುತ್ತೀರಿ, ಎಲ್ಲಿ ಹೋಗುತ್ತೀರಿ, ಹೀಗೆ ಪ್ರತಿಯೊಂದೂ ವಿಷಯವನ್ನು ತನಗೆ ತಿಳಿಸಬೇಕೆಂದು ಆ ವ್ಯಕ್ತಿ ಹಠಹಿಡಿಯುತ್ತಾನೋ/ಳೋ? ನಿಕೋಲ್‌ ಎಂಬ ಯುವತಿ ಹೇಳುವುದು: “ಒಡೆತನದ ಸ್ವಭಾವ ಅಥವಾ ತನ್ನ ಗೆಳೆಯ/ಗೆಳತಿ ಕೇವಲ ತನ್ನವನು/ತನ್ನವಳು ಎಂಬ ಭಾವನೆ ಮತ್ತು ಹೊಟ್ಟೆಕಿಚ್ಚು ಅಪಾಯದ ಸೂಚನೆಗಳಾಗಿವೆ. ಪರಸ್ಪರರ ಪರಿಚಯಮಾಡಿಕೊಳ್ಳುತ್ತಿರುವ ಜೋಡಿಗಳಲ್ಲಿ, ಒಬ್ಬನು/ಒಬ್ಬಳು ತನ್ನ ಜೊತೆಗಾರ್ತಿ ಇಲ್ಲವೇ ಜೊತೆಗಾರನು ತಾನೆಲ್ಲಿದ್ದೇನೆ ಎಂದು ‘ವರದಿಯೊಪ್ಪಿಸದೇ’ ಇದದ್ದನ್ನು ಸಹಿಸಲು ಸಾಧ್ಯವಾಗದಿದ್ದ ಕಾರಣ ಜಗಳವಾಡಿರುವುದನ್ನು ಕೇಳಿದ್ದೇನೆ. ಅದು ಸಮಸ್ಯೆಯ ಸೂಚನೆಯಾಗಿದೆಯೆಂದು ನಾನು ನೆನಸುತ್ತೇನೆ.”

ನಿಮಗೆ ಸರಿಯನಿಸುವ ವ್ಯಕ್ತಿಯ ಬಗ್ಗೆ ಬೇರೆಯವರ ಅಭಿಪ್ರಾಯವೇನು? ಬಹಳಷ್ಟು ಸಮಯದಿಂದ ಅವರ ಪರಿಚಯವುಳ್ಳವರೊಂದಿಗೆ, ಉದಾಹರಣೆಗೆ ಅವನ ಅಥವಾ ಅವಳ ಸಭೆಯಲ್ಲಿರುವ ಪ್ರೌಢ ವ್ಯಕ್ತಿಗಳೊಂದಿಗೆ ಮಾತಾಡುವುದು ಒಳ್ಳೇದಾಗಿರಬಲ್ಲದು. ಈ ವ್ಯಕ್ತಿ ಬಗ್ಗೆ ಒಳ್ಳೇ ವರದಿಯಿದೆಯೋ ಎಂಬುದನ್ನು ಅವರು ನಿಮಗೆ ತಿಳಿಸುವರು.​—⁠ಅ. ಕೃತ್ಯಗಳು 16:​1, 2. *

ಸಂಬಂಧವನ್ನು ಕೊನೆಗಾಣಿಸಬೇಕೋ?

ನೀವು ಡೇಟಿಂಗ್‌ ಮಾಡುತ್ತಿರುವ ವ್ಯಕ್ತಿ ನಿಮಗೆ ಸರಿಯಾದ ವಿವಾಹ ಸಂಗಾತಿ ಆಗಿರಲಾರರೆಂದು ನಿಮಗೆ ಮನದಟ್ಟಾಗುವಲ್ಲಿ ಆಗೇನು? ಹಾಗಿರುವಲ್ಲಿ, ಆ ಸಂಬಂಧವನ್ನು ಕೊನೆಗಾಣಿಸುವುದು ವಿವೇಕದ ಸಂಗತಿ. ಬೈಬಲ್‌ ಹೇಳುವುದು: “ಜಾಣನು ಕೇಡನ್ನು ಕಂಡು ಅಡಗಿಕೊಳ್ಳುವನು; ಬುದ್ಧಿಹೀನನು ಮುಂದೆ ಹೋಗಿ ನಷ್ಟಪಡುವನು.”​—⁠ಜ್ಞಾನೋಕ್ತಿ 22:⁠3. *

ಅನುಭವದಿಂದ ಪಡೆದಿರುವ ಹೆಚ್ಚು ಸಮತೂಕದ ದೃಷ್ಟಿಕೋನದೊಂದಿಗೆ ಸಕಾಲದಲ್ಲಿ ನೀವು ಒಂದು ಹೊಸ ಸಂಬಂಧವನ್ನು ರಚಿಸಬಹುದು. ಆಗ “ಈ ವ್ಯಕ್ತಿ ನನಗೆ ಸರಿಯಾದ ಜೋಡಿಯೋ?” ಎಂಬ ಪ್ರಶ್ನೆಗೆ ಪ್ರಾಯಶಃ ನಿಮ್ಮ ಉತ್ತರ “ಹೌದು” ಎಂದಾಗಿರುವುದು! (g 5/07)

“ಯುವ ಜನರು ಪ್ರಶ್ನಿಸುವುದು . . . ” ಲೇಖನಮಾಲೆಯ ಹೆಚ್ಚಿನ ಲೇಖನಗಳನ್ನು www.watchtower.org/ype ವೆಬ್‌ಸೈಟ್‌ನಲ್ಲಿ ಕಂಡುಕೊಳ್ಳಬಹುದು.

ಯೋಚಿಸಬೇಕಾದ ವಿಷಯಗಳು

◼ ನಿಮ್ಮಲ್ಲಿರುವ ಯಾವ ಗುಣಗಳಿಂದಾಗಿ ನೀವೊಬ್ಬ ಒಳ್ಳೇ ವಿವಾಹ ಸಂಗಾತಿ ಆಗಿರುವಿರಿ?

◼ ನೀವು ಮದುವೆಯಾಗಲು ಇಚ್ಛಿಸುವ ವ್ಯಕ್ತಿಯಲ್ಲಿ ಯಾವ ಕೆಲವೊಂದು ಗುಣಗಳಿರಬೇಕೆಂದು ಬಯಸುತ್ತೀರಿ?

◼ ನೀವು ಡೇಟಿಂಗ್‌ ಮಾಡುತ್ತಿರುವ ವ್ಯಕ್ತಿಯ ಸ್ವಭಾವ, ನಡತೆ ಮತ್ತು ಅವನ/ಅವಳ ಕುರಿತಾಗಿ ಬೇರೆಯವರ ಅಭಿಪ್ರಾಯ ಹೇಗಿದೆ ಎಂಬುದರ ಕುರಿತು ಹೆಚ್ಚನ್ನು ತಿಳಿದುಕೊಳ್ಳಬಹುದಾದ ಮಾರ್ಗಗಳು ಯಾವುವು?

[ಪಾದಟಿಪ್ಪಣಿಗಳು]

^ ಪ್ಯಾರ. 24 ನಿಮ್ಮನ್ನೇ ಕೇಳಿಕೊಳ್ಳಬಹುದಾದ ಹೆಚ್ಚಿನ ಪ್ರಶ್ನೆಗಳಿಗಾಗಿ, ಎಚ್ಚರ! (ಇಂಗ್ಲಿಷ್‌) ಪತ್ರಿಕೆಯ 2007ರ ಜನವರಿ ಸಂಚಿಕೆಯ 30ನೇ ಪುಟವನ್ನು ನೋಡಿ.

^ ಪ್ಯಾರ. 30 ಪುಟ 19-20ರಲ್ಲಿರುವ ಚೌಕದಲ್ಲಿನ ಪ್ರಶ್ನೆಗಳನ್ನೂ ನೋಡಿ.

^ ಪ್ಯಾರ. 32 ಸಂಬಂಧವನ್ನು ಕೊನೆಗಾಣಿಸುವ ವಿಷಯದಲ್ಲಿ ಹೆಚ್ಚಿನ ಮಾಹಿತಿಗಾಗಿ, 2001 ಮಾರ್ಚ್‌ 22ರ ಎಚ್ಚರ! (ಇಂಗ್ಲಿಷ್‌) ಪತ್ರಿಕೆಯ 12-14ನೇ ಪುಟಗಳನ್ನು ನೋಡಿ.

[ಪುಟ 17ರಲ್ಲಿರುವ ಚೌಕ]

ಅವನೊಬ್ಬ ಒಳ್ಳೇ ಗಂಡನಾಗಿರುವನೋ?

ಮೂಲಭೂತ ಅಂಶಗಳು

❑ ಅವನಿಗಿರಬಹುದಾದ ಯಾವುದೇ ಅಧಿಕಾರವನ್ನು ಅವನು ಹೇಗೆ ನಿರ್ವಹಿಸುತ್ತಾನೆ?​​ಮತ್ತಾಯ 20:​25, 26.

ಅವನ ಗುರಿಗಳೇನು?​​1 ತಿಮೊಥೆಯ 4:⁠15.

❑ ಆ ಗುರಿಗಳನ್ನು ತಲಪಲು ಅವನು ಈಗಲೇ ಪ್ರಯತ್ನಮಾಡುತ್ತಿದ್ದಾನೋ?​​1 ಕೊರಿಂಥ 9:⁠26.

❑ ಅವನ ಸ್ನೇಹಿತರು ಯಾರು?​​ಜ್ಞಾನೋಕ್ತಿ 13:⁠20.

❑ ಹಣದ ಕುರಿತಾಗಿ ಅವನ ಮನೋಭಾವವೇನು?​ ​ಇಬ್ರಿಯ 13:​5, 6.

❑ ಅವನು ಯಾವ ರೀತಿಯ ಮನೋರಂಜನೆಯನ್ನು ಆನಂದಿಸುತ್ತಾನೆ?​​ಕೀರ್ತನೆ 97:⁠10.

❑ ಅವನ ಉಡುಪಿನ ಶೈಲಿ ಏನನ್ನು ಸೂಚಿಸುತ್ತದೆ?​​2 ಕೊರಿಂಥ 6:⁠3.

❑ ಯೆಹೋವನ ಮೇಲೆ ಅವನಿಗಿರುವ ಪ್ರೀತಿಯನ್ನು ಹೇಗೆ ತೋರಿಸುತ್ತಾನೆ?​​1 ಯೋಹಾನ 5:⁠3.

ಸೊತ್ತುಗಳು

ಅವನೊಬ್ಬ ಶ್ರಮಜೀವಿಯೋ?​​ಜ್ಞಾನೋಕ್ತಿ 6:​9-11.

❑ ಅವನು ಹಣಕಾಸಿನ ವಿಷಯದಲ್ಲಿ ಜವಾಬ್ದಾರಿಯಿಂದ ವರ್ತಿಸುತ್ತಾನೋ?​ಲೂಕ 14:⁠28.

❑ ಅವನಿಗೊಂದು ಒಳ್ಳೇ ಹೆಸರಿದೆಯೋ? ​​ಅ. ಕೃತ್ಯಗಳು 16:​1, 2.

❑ ತನ್ನ ತಂದೆತಾಯಿಗೆ ಮಾನಕೊಡುತ್ತಾನೋ? ​ವಿಮೋಚನಕಾಂಡ 20:⁠12.

❑ ಇತರರಿಗೆ ಪರಿಗಣನೆ ತೋರಿಸುತ್ತಾನೋ?​ಫಿಲಿಪ್ಪಿ 2:⁠4.

ಅಪಾಯದ ಸೂಚನೆಗಳು

❑ ಕೂಡಲೇ ಸಿಟ್ಟುಗೊಳ್ಳುತ್ತಾನೋ?​ಜ್ಞಾನೋಕ್ತಿ 22:⁠24.

❑ ಲೈಂಗಿಕ ದುರ್ನಡತೆಯಲ್ಲಿ ನಿಮ್ಮನ್ನೂ ಒಳಗೂಡಿಸಲು ಪ್ರಯತ್ನಿಸುತ್ತಾನೋ?​​ಗಲಾತ್ಯ 5:⁠19.

❑ ಇತರರ ಮೇಲೆ ಶಾರೀರಿಕ ಅಥವಾ ಮೌಖಿಕ ದೌರ್ಜನ್ಯ ನಡೆಸುತ್ತಾನೋ?​ಎಫೆಸ 4:⁠31.

❑ ಮೋಜುಮಾಡಲಿಕ್ಕಾಗಿ ಅವನಿಗೆ ಮದ್ಯಸಾರ ಬೇಕೇ ಬೇಕೋ?​​ಜ್ಞಾನೋಕ್ತಿ 20:⁠1.

❑ ಅವನು ಹೊಟ್ಟೆಕಿಚ್ಚುಪಡುತ್ತಾನೋ ಮತ್ತು ಸ್ವಾರ್ಥಪರನೋ?​1 ಕೊರಿಂಥ 13:​4, 5.

[ಪುಟ 18ರಲ್ಲಿರುವ ಚೌಕ]

ಅವಳೊಬ್ಬ ಒಳ್ಳೇ ಹೆಂಡತಿ ಆಗಿರುವಳೋ?

ಮೂಲಭೂತ ಅಂಶಗಳು

❑ ಅವಳು ಕುಟುಂಬದಲ್ಲಿ ಹಾಗೂ ಸಭೆಯಲ್ಲಿ ಹೇಗೆ ಅಧೀನತೆ ತೋರಿಸುತ್ತಾಳೆ?​​ಎಫೆಸ 5:​21, 22.

❑ ಅವಳ ಉಡುಪಿನ ಶೈಲಿ ಏನನ್ನು ಸೂಚಿಸುತ್ತದೆ? ​​1 ಪೇತ್ರ 3:​3, 4.

❑ ಅವಳ ಸ್ನೇಹಿತರು ಯಾರು?​ಜ್ಞಾನೋಕ್ತಿ 13:⁠20.

❑ ಹಣದ ಬಗ್ಗೆ ಅವಳ ಮನೋಭಾವವೇನು?​​1 ಯೋಹಾನ 2:​15-17.

❑ ಅವಳ ಗುರಿಗಳೇನು?​1 ತಿಮೊಥೆಯ 4:⁠15.

❑ ಆ ಗುರಿಗಳನ್ನು ತಲಪಲು ಅವಳು ಈಗಲೇ ಪ್ರಯತ್ನಮಾಡುತ್ತಿದ್ದಾಳೋ?​​1 ಕೊರಿಂಥ 9:⁠26, 27.

❑ ಅವಳು ಯಾವ ರೀತಿಯ ಮನೋರಂಜನೆಯನ್ನು ಆನಂದಿಸುತ್ತಾಳೆ?​ಕೀರ್ತನೆ 97:⁠10.

❑ ಯೆಹೋವನ ಮೇಲೆ ಆಕೆಗಿರುವ ಪ್ರೀತಿಯನ್ನು ಹೇಗೆ ತೋರಿಸುತ್ತಾಳೆ?​​1 ಯೋಹಾನ 5:⁠3.

ಸೊತ್ತುಗಳು

❑ ಅವಳು ಶ್ರಮಜೀವಿಯೋ? ​ಜ್ಞಾನೋಕ್ತಿ 31:​17, 19, 21, 22, 27.

❑ ಅವಳು ಹಣಕಾಸಿನ ವಿಷಯದಲ್ಲಿ ಜವಾಬ್ದಾರಿಯಿಂದ ವರ್ತಿಸುತ್ತಾಳೋ?​ಜ್ಞಾನೋಕ್ತಿ 31:​16, 18.

❑ ಅವಳಿಗೊಂದು ಒಳ್ಳೇ ಹೆಸರಿದೆಯೋ?​​ರೂತ 4:11.

❑ ತನ್ನ ತಂದೆತಾಯಿಗೆ ಮಾನಕೊಡುತ್ತಾಳೋ? ​ವಿಮೋಚನಕಾಂಡ 20:⁠12.

❑ ಇತರರಿಗೆ ಪರಿಗಣನೆ ತೋರಿಸುತ್ತಾಳೋ?​ ​ಜ್ಞಾನೋಕ್ತಿ 31:20.

ಅಪಾಯದ ಸೂಚನೆಗಳು

❑ ಅವಳು ಜಗಳಗಂಟಿಯೋ?​​ಜ್ಞಾನೋಕ್ತಿ 21:⁠19.

❑ ಲೈಂಗಿಕ ದುರ್ನಡತೆಯಲ್ಲಿ ನಿಮ್ಮನ್ನೂ ಒಳಗೂಡಿಸಲು ಪ್ರಯತ್ನಿಸುತ್ತಾಳೋ?​​ಗಲಾತ್ಯ 5:⁠19.

❑ ಅವಳು ಮೌಖಿಕವಾಗಿ ಅಥವಾ ಶಾರೀರಿಕವಾಗಿ ದೌರ್ಜನ್ಯ ನಡೆಸುತ್ತಾಳೋ?​​ಎಫೆಸ 4:⁠31.

❑ ಮೋಜುಮಾಡಲಿಕ್ಕಾಗಿ ಅವಳಿಗೆ ಮದ್ಯಸಾರ ಬೇಕೇ ಬೇಕೋ?​​ಜ್ಞಾನೋಕ್ತಿ 20:⁠1.

❑ ಅವಳು ಹೊಟ್ಟೆಕಿಚ್ಚುಪಡುತ್ತಾಳೋ ಮತ್ತು ಸ್ವಾರ್ಥಪರಳೋ?​1 ಕೊರಿಂಥ 13:​4, 5.