ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಒಂದು ಭವ್ಯ ಅಖಂಡಶಿಲೆ

ಒಂದು ಭವ್ಯ ಅಖಂಡಶಿಲೆ

ಒಂದು ಭವ್ಯ ಅಖಂಡಶಿಲೆ

ಕೆನಡಾದ ಎಚ್ಚರ! ಲೇಖಕರಿಂದ

ಶತಮಾನಗಳಾದ್ಯಂತ ಮೀನುಗಾರರು ಮತ್ತು ನಾವಿಕರು, ತಾವೆಲ್ಲಿದ್ದೇವೆಂಬುದನ್ನು ಕಂಡುಹಿಡಿಯಲು ಅದನ್ನು ಒಂದು ಭರವಸಾರ್ಹ ಗುರುತಾಗಿ ಉಪಯೋಗಿಸಿದ್ದಾರೆ. ಕವಿಗಳು, ಲೇಖಕರು ಮತ್ತು ಕಲಾಕಾರರು ಅವರ ಕೃತಿಗಳಲ್ಲಿ ಇದನ್ನು ಚಿರಸ್ಮರಣೀಯವನ್ನಾಗಿ ಮಾಡಿದ್ದಾರೆ. ಒಂದು ವಿಶ್ವಕೋಶವು ಈ ಅಖಂಡಶಿಲೆಯನ್ನು “ನಿಗೂಢ ಮತ್ತು ಮನಮೋಹಕವಾದದ್ದು” ಎಂಬುದಾಗಿ ವರ್ಣಿಸುತ್ತದೆ. ಪರ್ಸಾ ಎಂಬ ಹೆಸರಿನ ಈ ಬಂಡೆಯು ಸೆಂಟ್‌ ಲಾರೆನ್ಸ್‌ ಕೊಲ್ಲಿಯ ಗಾಸ್ಪಾ ಪರ್ಯಾಯ ದ್ವೀಪದ ಪೂರ್ವ ತುದಿಯಲ್ಲಿರುವ ಅಟ್ಲಾಂಟಿಕ್‌ ಸಮುದ್ರದ ಮಿನುಗುತ್ತಿರುವ ನೀಲ ನೀರಿನಲ್ಲಿ ಭವ್ಯವಾಗಿ ನಿಂತಿದೆ. ಇದು ಸುಮಾರು 1,420 ಅಡಿ ಉದ್ದ, 300 ಅಡಿ ಅಗಲ, ಮತ್ತು 290 ಅಡಿಗಿಂತಲೂ ಹೆಚ್ಚು ಎತ್ತರವಾಗಿದೆ.

ಹಿಂದೊಮ್ಮೆ ಅಲ್ಲಿನ ಸ್ಥಳಿಕ ಸಾಹಸಿಗರು ಬಂಡೆಯ ಕಡಿದಾದ ಭಾಗವನ್ನು ಹತ್ತಿ ಅಲ್ಲಿರುವ ಹಕ್ಕಿಗಳ ಗೂಡುಗಳಿಂದ ಮೊಟ್ಟೆಗಳನ್ನು ಸಂಗ್ರಹಿಸುತ್ತಿದ್ದರು. ಇದನ್ನರಿತ ಕ್ಯೂಬೆಕ್‌ ಸರ್ಕಾರವು ಆ ಬಂಡೆ ಮತ್ತು ಅದನ್ನು ಆಶ್ರಯಿಸುವ ಹಕ್ಕಿಗಳನ್ನು ಸಂರಕ್ಷಿಸಲು 1985ರಲ್ಲಿ ಪರ್ಸಾ ಬಂಡೆ ಹಾಗೂ ಹತ್ತಿರದ ಬೊನವೆಂಚರ್‌ ದ್ವೀಪವನ್ನು ಪಕ್ಷಿಧಾಮಗಳೆಂದು ಘೋಷಿಸಿತು. ಬೊನವೆಂಚರ್‌ ದ್ವೀಪವು ಉತ್ತರದ ಗ್ಯಾನಿಟ್‌ ಕಡಲಹಕ್ಕಿಗಳ ಸಂತಾನಾಭಿವೃದ್ಧಿಗಾಗಿರುವ ಪ್ರಪಂಚದ ಎರಡನೇ ಅತಿದೊಡ್ಡ ವಲಸೆನಾಡಾಗಿದೆ.

ಕೆಲವರಿಗನುಸಾರ ಬಹಳ ಹಿಂದೆ ಪರ್ಸಾ ಬಂಡೆಯು ಮುಖ್ಯ ಭೂಭಾಗದೊಂದಿಗೆ ಕೂಡಿಕೊಂಡು ಸುಮಾರು ನಾಲ್ಕು ಕಮಾನುಗಳನ್ನು ಹೊಂದಿದ್ದಿರಬಹುದು. ಆದರೆ ಇಂದು 90 ಅಡಿಗಿಂತಲೂ ಹೆಚ್ಚು ಅಗಲವಾಗಿರುವ ಒಂದೇ ಒಂದು ಕಮಾನು ಉಳಿದಿದೆ. ಸಮುದ್ರವಿಳಿತದ ಸಮಯದಲ್ಲಿ ಮುಖ್ಯ ಭೂಭಾಗದಿಂದ ಬಂಡೆಯ ವರೆಗೆ ಒಂದು ಮರಳುದಿಣ್ಣೆ ಇರುವುದನ್ನು ನೋಡಬಹುದು. ಸುಮಾರು ನಾಲ್ಕು ಗಂಟೆಗಳ ಈ ಅವಧಿಯಲ್ಲಿ ಸಾಹಸಿ ಸಂದರ್ಶಕರು ಆ ಮರಳುದಿಣ್ಣೆಯ ಮೇಲೆ ನಡೆದುಕೊಂಡು ಬಂಡೆಯ ಬುಡವನ್ನು ತಲಪಬಹುದು. ನಂತರ ನೀರಿನಲ್ಲಿ ಹೆಜ್ಜೆಹಾಕುತ್ತಾ ಅಲ್ಲಿಂದ 15 ನಿಮಿಷಗಳಲ್ಲಿ ಕಮಾನನ್ನು ತಲಪಬಹುದು.

ಕೆಚ್ಚೆದೆಯುಳ್ಳವರಿಗೆ ಎಚ್ಚರಿಕೆಯ ಮಾತೊಂದಿದೆ. ಬಂಡೆಯ ಬಿದ್ದುಹೋಗಿರುವ ತುಂಡುಗಳ ಮೇಲೆ ಪ್ರಯಾಸದಿಂದ ಹತ್ತಿ ಕಮಾನಿನ ಬಳಿ ತಲಪಿದ ಒಬ್ಬ ಪ್ರವಾಸಿಗನು ಹೇಳಿದ್ದು: “ನೀರೊಳಗೆ ಬಂಡೆಗಳು ಪ್ರವೇಶಿಸುವಾಗ ಪುಟ್ಟ ಬಾಂಬ್‌ ಸಿಡಿದಂತೆ ದಿಗಿಲುಗೊಳಿಸುವ ‘ವುಷ್‌’ ಎಂಬ ಶಬ್ದ ಯಾವಾಗಲೂ ಕೇಳಿಬರುತ್ತದೆ. ಕೆಲವೊಂದು ಬಂಡೆಗಳು ಒಂದರ ಮೇಲೊಂದು ಬೀಳುವ ಸದ್ದು ಬಂದೂಕಿನಿಂದ ಗುಂಡು ಹಾರಿಸಿದಂತೆ ಇರುತ್ತದೆ.”

ಬಹಳಷ್ಟು ಮಂದಿ ಸಂದರ್ಶಕರು ಗಮನಿಸಿರುವಂತೆ ಪರ್ಸಾ ಬಂಡೆಯು ಬೆರಗುಗೊಳಿಸುವ ಸೌಂದರ್ಯವನ್ನು ಹೊಂದಿದೆ. ಆದಾಗ್ಯೂ ನಮ್ಮ ರಮ್ಯವಾದ ಭೂಮಿಯು ಒದಗಿಸುವ ಸೊಗಸಾದ ದೃಶ್ಯಗಳಲ್ಲಿ ಇದು ಕೇವಲ ಒಂದಾಗಿದೆ. ಆ ದೃಶ್ಯಗಳು ಎಷ್ಟು ವೈವಿಧ್ಯಮಯವೂ, ಅಸಂಖ್ಯವೂ ಆಗಿವೆ! ಅವುಗಳನ್ನು ನೋಡುವಾಗ ಬಹುಶಃ ನೀವು ಕೂಡ “ಸುಮ್ಮನೆ ನಿಂತು ದೇವರ ಅದ್ಭುತಕಾರ್ಯಗಳನ್ನು ಧ್ಯಾನಿ”ಸಲು ಪ್ರಚೋದಿಸಲ್ಪಟ್ಟಿದ್ದೀರಿ.​—⁠ಯೋಬ 37:⁠14. (g 4/07)

[ಪುಟ 15ರಲ್ಲಿರುವ ಚಿತ್ರ ಕೃಪೆ]

© Mike Grandmaison Photography