ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಾನೇಕೆ ಮೂರ್ಛೆ ಹೋಗುತ್ತೇನೆ?

ನಾನೇಕೆ ಮೂರ್ಛೆ ಹೋಗುತ್ತೇನೆ?

ನಾನೇಕೆ ಮೂರ್ಛೆ ಹೋಗುತ್ತೇನೆ?

ಡಾಕ್ಟರರು ನನ್ನ ಕಣ್ಣಿನ ಒತ್ತಡ ಪರೀಕ್ಷಿಸಲಿದ್ದರು. ಈ ಚಿಕಿತ್ಸಾಕ್ರಮದಲ್ಲಿ ಅವರು ನನ್ನ ಕಣ್ಣುಗುಡ್ಡೆಗೆ ಒಂದು ಉಪಕರಣವನ್ನು ತಗಲಿಸಬೇಕಿತ್ತು. ಈಗ ನಾನು ಮೂರ್ಛೆಹೋಗುತ್ತೇನೆಂದು ನನಗೆ ಗೊತ್ತಿತ್ತು, ಏಕೆಂದರೆ ಯಾವಾಗಲೂ ಹಾಗೆಯೇ ಆಗುತ್ತದೆ. ರಕ್ತ ತೆಗೆಯಲಿಕ್ಕಾಗಿ ನರ್ಸ್‌ ಸೂಜಿಯನ್ನು ಬಳಸುವಾಗಲೂ ಹಾಗಾಗುತ್ತದೆ. ಕೆಲವೊಮ್ಮೆಯಂತೂ ಗಾಯಗಳ ಕುರಿತಾಗಿ ಕೇವಲ ಮಾತಾಡಿದರೆ ಸಹ ಮೂರ್ಛೆಹೋಗುತ್ತೇನೆ.

ಕೆನಡದ ಒಂದು ವರದಿಗನುಸಾರ ನಮ್ಮಲ್ಲಿ ಸುಮಾರು 3 ಪ್ರತಿಶತದಷ್ಟು ಜನರು, ಈ ಮೇಲೆ ತಿಳಿಸಲ್ಪಟ್ಟಿರುವ ನಿರ್ದಿಷ್ಟ ಸನ್ನಿವೇಶಗಳಲ್ಲೊಂದರಲ್ಲಿ ಅನೇಕವೇಳೆ ಮೂರ್ಛೆಹೋಗುತ್ತಾರೆ. ನನ್ನಂತೆಯೇ ನೀವೂ ಮೂರ್ಛೆಹೋಗುತ್ತಿರುವಲ್ಲಿ, ಅದನ್ನು ತಡೆಗಟ್ಟಲು ನೀವು ಬಹಳ ಪ್ರಯತ್ನಮಾಡಿರಬಹುದಾದರೂ ಅದರಲ್ಲಿ ಸಫಲರಾಗಿರಲಿಕ್ಕಿಲ್ಲ. ಎಲ್ಲರ ಮುಂದೆ ಮೂರ್ಛೆಹೋಗುವುದನ್ನು ತಪ್ಪಿಸಲು ನೀವು ಶೌಚಾಲಯಕ್ಕೆ ಹೋಗಲು ಪ್ರಯತ್ನಿಸಿರಬಹುದು. ಆದರೆ ಇದು ಒಳ್ಳೇದಲ್ಲ, ಏಕೆಂದರೆ ನೀವು ದಾರಿಯಲ್ಲೇ ಥಟ್ಟನೇ ಕುಸಿದುಬಿದ್ದು, ಗಾಯಮಾಡಿಕೊಂಡೀರಿ. ನಾನು ಅನೇಕಸಲ ಮೂರ್ಛೆಹೋಗಿರುವುದರಿಂದ ಹೀಗಾಗಲು ಕಾರಣವೇನೆಂಬುದನ್ನು ತಿಳಿಯಲು ನಿರ್ಣಯಿಸಿದೆ.

ನನಗೆ ಸಹಾಯಮಾಡಿದ ಒಬ್ಬ ಡಾಕ್ಟರರೊಂದಿಗೆ ಮಾತಾಡಿ, ಕೆಲವೊಂದು ಪುಸ್ತಕಗಳನ್ನು ಓದುವುದರಿಂದ ನಾನು ತಿಳಿದುಕೊಂಡ ಸಂಗತಿಯೇನೆಂದರೆ, ಇಂಥ ಪ್ರಸಂಗವನ್ನು ‘ವ್ಯಾಸೋವೇಗಲ್‌ ರಿಯಾಕ್ಷನ್‌’ ಎಂದು ಕರೆಯುತ್ತಾರೆ. * ನೀವು ಸ್ಥಾನದಲ್ಲಿ ಬದಲಾವಣೆ ಮಾಡುವಾಗ, ಉದಾಹರಣೆಗೆ ಕುಳಿತಲ್ಲಿಂದ ಎದ್ದುನಿಲ್ಲುವಾಗ ರಕ್ತ ಪರಿಚಲನೆಯನ್ನು ನಿಯಂತ್ರಿಸಬೇಕಾದ ಒಂದು ವ್ಯವಸ್ಥೆ ದೇಹದಲ್ಲಿದೆ. ಆದರೆ ಈ ವ್ಯವಸ್ಥೆಯು ಸರಿಯಾಗಿ ಕೆಲಸಮಾಡದಿರುವಾಗ, ಈ ರೀತಿಯ ರಿಯಾಕ್ಷನ್‌ ಆಗುತ್ತದೆಂದು ಅಭಿಪ್ರಯಿಸಲಾಗುತ್ತದೆ.

ನೀವು ರಕ್ತವನ್ನು ನೋಡಬೇಕಾದ ಸಂದರ್ಭ ಬಂದಾಗ ಇಲ್ಲವೇ ನಿಮ್ಮ ಕಣ್ಣುಗಳನ್ನು ಪರೀಕ್ಷಿಸಬೇಕಾಗುವಂಥ ನಿರ್ದಿಷ್ಟ ಪರಿಸ್ಥಿತಿಗಳಲ್ಲಿ ನೀವು ವಾಸ್ತವದಲ್ಲಿ ಕುಳಿತುಕೊಂಡಿರಬಹುದು ಅಥವಾ ನಿಂತಿರಬಹುದು. ಆದರೆ ನಿಮ್ಮ ಅನೈಚ್ಛಿಕ ನರಮಂಡಲ ವ್ಯವಸ್ಥೆಯು ನೀವು ಮಲಗಿರುವ ಸ್ಥಿತಿಯಲ್ಲಿದ್ದೀರೋ ಎಂಬಂತೆ ಕಾರ್ಯವೆಸಗುತ್ತದೆ. ಮೊದಲು, ಕಳವಳದಿಂದಾಗಿ ನಿಮ್ಮ ಹೃದಯಬಡಿತವು ಹೆಚ್ಚಾಗುತ್ತದೆ. ನಂತರ ನಿಮ್ಮ ನಾಡಿಮಿಡಿತದ ವೇಗವು ತಟ್ಟನೆ ನಿಧಾನಗೊಳ್ಳುತ್ತದೆ. ನಿಮ್ಮ ಕಾಲುಗಳಲ್ಲಿನ ರಕ್ತನಾಳಗಳು ಹಿಗ್ಗುತ್ತವೆ. ಇದರಿಂದಾಗಿ, ನಿಮ್ಮ ಕಾಲುಗಳಿಗೆ ಹೆಚ್ಚಿನ ರಕ್ತ ಸರಬರಾಜಾಗುತ್ತದೆ ಮತ್ತು ಮಿದುಳಿಗೆ ಹೋಗುವ ರಕ್ತದ ಪ್ರಮಾಣ ಕಡಿಮೆಯಾಗುತ್ತದೆ. ಈ ಕಾರಣದಿಂದ ನಿಮ್ಮ ಮಿದುಳಿಗೆ ಆಮ್ಲಜನಕದ ಕೊರತೆಯುಂಟಾಗಿ ನೀವು ಮೂರ್ಛೆಹೋಗುತ್ತೀರಿ. ಇದು ಸಂಭವಿಸುವುದನ್ನು ನೀವು ಹೇಗೆ ತಡೆಯಬಲ್ಲಿರಿ?

ನಿಮ್ಮ ರಕ್ತವನ್ನು ಸೂಜಿ ಮೂಲಕ ತೆಗೆಯುವಾಗ ಬೇರೆ ಕಡೆ ನೋಡಿ ಅಥವಾ ಬೇರಾವುದೇ ಚಿಕಿತ್ಸಾಕ್ರಮದ ಸಮಯದಲ್ಲಿ ನೀವು ಮಲಗಿಕೊಳ್ಳಸಾಧ್ಯವಿದೆ. ಈಗಾಗಲೇ ತಿಳಿಸಿರುವಂತೆ ‘ವ್ಯಾಸೋವೇಗಲ್‌ ರಿಯಾಕ್ಷನ್‌’ ಆರಂಭವಾಗಲಿಕ್ಕಿರುವಾಗ ತೋರಿಬರುವ ಎಚ್ಚರಿಕೆಯ ಸೂಚನೆಗಳನ್ನು ನೀವು ಗುರುತಿಸಬಲ್ಲಿರಿ. ಆದುದರಿಂದ ಮೂರ್ಛೆಹೋಗುವ ಮುಂಚೆ ಕ್ರಮಗೈಯಲು ಸಾಮಾನ್ಯವಾಗಿ ಸಮಯವಿರುತ್ತದೆ. ಅಂಥ ಸಂದರ್ಭಗಳಲ್ಲಿ ನೀವು ಮಲಗಿಕೊಂಡು, ನಿಮ್ಮ ಕಾಲುಗಳನ್ನು ಒಂದು ಕುರ್ಚಿ ಅಥವಾ ಗೋಡೆಗೆ ಒರಗಿಸುವಂತೆ ಅನೇಕ ಡಾಕ್ಟರರು ಶಿಫಾರಸುಮಾಡುತ್ತಾರೆ. ಇದು, ಎಲ್ಲ ರಕ್ತವು ನಿಮ್ಮ ಕಾಲುಗಳಿಗೆ ಹೋಗುವುದನ್ನು ತಡೆಯುತ್ತದೆ. ಹೀಗೆ ನೀವು ಪೂರ್ತಿಯಾಗಿ ಮೂರ್ಛೆಹೋಗುವುದನ್ನು ತಪ್ಪಿಸಬಲ್ಲಿರಿ. ಕೆಲವೇ ಕ್ಷಣಗಳಲ್ಲಿ ನಿಮಗೆ ಹಿತವೆನಿಸಬಹುದು.

ಈ ಮಾಹಿತಿಯು ನನಗೆ ಸಹಾಯಮಾಡಿದಂತೆ ನಿಮಗೂ ಸಹಾಯಮಾಡುವಲ್ಲಿ, ‘ವ್ಯಾಸೋವೇಗಲ್‌ ರಿಯಾಕ್ಷನ್‌’ ಆಗುವ ಮುಂಚೆ ಅದರ ಸೂಚನೆಗಳನ್ನು ಗ್ರಹಿಸಲು ಶಕ್ತರಾಗಿರುವಿರಿ. ಆಗ ತಡಮಾಡದೆ ಕ್ರಮಕೈಗೊಂಡು, ಅದು ಸಂಭವಿಸುವುದನ್ನು ತಡೆಯಬಹುದು.​—⁠ದತ್ತಲೇಖನ. (g 4/07)

[ಪಾದಟಿಪ್ಪಣಿ]

^ ಪ್ಯಾರ. 4 “ವ್ಯಾಸೋವೇಗಲ್‌” ಎಂಬುದು, ವೇಗಸ್‌ ಎಂಬ ಉದ್ದವಾದ ನರದಲ್ಲಿನ ರಕ್ತನಾಳಗಳ ಮೇಲಾಗುವ ಕ್ರಿಯೆಗೆ ಸೂಚಿಸುತ್ತದೆ. ವೇಗಸ್‌ ಎಂಬ ಲ್ಯಾಟಿನ್‌ ಪದದ ಅರ್ಥ “ಅಲೆದಾಡು” ಎಂದಾಗಿದೆ.

[ಪುಟ 14ರಲ್ಲಿರುವ ಸಂಕ್ಷಿಪ್ತ ವಿವರಣೆ]

ಒಂದು ಚಿಕಿತ್ಸಾಕ್ರಮದ ಸಮಯದಲ್ಲಿ ಮಲಗುವುದು ಸಹಾಯಕಾರಿ ಆಗಿರಬಹುದು