ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮುಂಬೈಯ ಭಯೋತ್ಪಾದನೆಯನ್ನು ಪಾರಾದರವರು

ಮುಂಬೈಯ ಭಯೋತ್ಪಾದನೆಯನ್ನು ಪಾರಾದರವರು

ಮುಂಬೈಯ ಭಯೋತ್ಪಾದನೆಯನ್ನು ಪಾರಾದರವರು

ಭಾರತದ ಎಚ್ಚರ! ಲೇಖಕರಿಂದ

ತ್ವರಿತಗತಿಯಲ್ಲಿ ಬೆಳೆಯತ್ತಿರುವ 180 ಲಕ್ಷಕ್ಕೂ ಮಿಕ್ಕಿದ ಜನಸಂಖ್ಯೆಯಿಂದ ತುಂಬಿತುಳುಕುತ್ತಿದೆ ಮುಂಬೈ ಶಹರ. ದಿನನಿತ್ಯವೂ ಈ ನಿವಾಸಿಗಳಲ್ಲಿ ಸುಮಾರು 60-70 ಲಕ್ಷ ಜನರು, ಸತತವಾಗಿ ಮತ್ತು ಶೀಘ್ರವೇಗದಿಂದ ಓಡುತ್ತಿರುವ ನಗರ-ಉಪನಗರ ರೈಲುಗಾಡಿಗಳಲ್ಲಿ ತಮ್ಮ ಆಫೀಸುಗಳಿಗೆ, ಶಾಲಾ-ಕಾಲೇಜುಗಳಿಗೆ, ಶಾಪಿಂಗ್‌ ಸೆಂಟರ್‌ಗಳಿಗೆ ಅಥವಾ ಸ್ಥಳಿಕ ಪ್ರೇಕ್ಷಣೀಯ ಸ್ಥಳಗಳಿಗೆ ಪ್ರಯಾಣ ಮಾಡುತ್ತಿರುತ್ತಾರೆ. ಒಂಬತ್ತು ಬಂಡಿಗಳಿರುವ ಪ್ರತಿಯೊಂದು ರೈಲಿನ ಸಾಮಾನ್ಯ ತುಂಬುಶಕ್ತಿ ಸುಮಾರು 1710 ಜನರು. ಆದರೆ ಸಂಚಾರದ ಭರಾಟೆ ಹೊತ್ತಿನಲ್ಲಾದರೋ ಪ್ರತಿ ರೈಲು ಸುಮಾರು 5000 ಪ್ರಯಾಣಿಕರ ಕಿಕ್ಕಿರಿದ ಜನಸಂದಣಿಯನ್ನು ತುಂಬಿಸಿಕೊಂಡು ನಾಗಾಲೋಟದಿಂದ ಓಡುತ್ತದೆ! ಇಂಥ ಒಂದು ಭರಾಟೆ ಹೊತ್ತಾದ ಜುಲೈ 11, 2006ರಲ್ಲಿ ಈ ಮುಂಬೈ ರೈಲುಗಳು ಭಯೋತ್ಪಾದಕರ ಗುರಿಹಲಗೆಗಳಾದವು. ಕೇವಲ 15 ನಿಮಿಷಕ್ಕೂ ಕಡಿಮೆ ಸಮಯದಲ್ಲಿ ಪಶ್ಚಿಮ ರೈಲ್ವೆಯುದ್ದಕ್ಕೂ ಚಲಿಸುತ್ತಿದ್ದ ವಿವಿಧ ರೈಲುಗಳಲ್ಲಿ ಏಳು ಬಾಂಬುಗಳು ಸ್ಫೋಟಗೊಂಡವು. ಪರಿಣಾಮವಾಗಿ 200 ಜನರು ಸತ್ತುಬಿದ್ದರು ಮತ್ತು 800 ಮಂದಿ ಗಾಯಗೊಂಡರು.

ಮುಂಬೈ ಮತ್ತು ಅದರ ಉಪನಗರದಲ್ಲಿನ ಯೆಹೋವನ ಸಾಕ್ಷಿಗಳ 22 ಸಭೆಗಳಲ್ಲಿರುವ ಅನೇಕರು ಕ್ರಮದ ರೈಲ್‌ ಪ್ರವಾಸಿಗಳಾಗಿದ್ದಾರೆ. ಬಾಂಬ್‌ ಸ್ಫೋಟಕ್ಕೆ ಗುರಿಯಾದ ಆ ರೈಲುಗಳಲ್ಲಿ ಅವರೂ ಇದ್ದರು. ಯಾರಿಗೂ ಪ್ರಾಣಾಪಾಯವಾಗಲಿಲ್ಲವಾದರೂ ಅನೇಕ ಮಂದಿ ಗಾಯಗೊಂಡರು. ಅನಿತ ಎಂಬವಳು ತನ್ನ ಕೆಲಸದಿಂದ ಮನೆಗೆ ಮರಳುತ್ತಿದ್ದಳು. ರೈಲುಗಾಡಿ ಪ್ರಯಾಣಿಕರಿಂದ ಕಿಕ್ಕಿರಿದಿತ್ತು. ಆದುದರಿಂದ ರೈಲು ನಿಲ್ಲುವಾಗ ಹೆಚ್ಚು ಸುಲಭವಾಗಿ ಕೆಳಗಿಳಿಯಲಿಕ್ಕಾಗಿ ಅವಳು ಫಸ್ಟ್‌ ಕ್ಲಾಸ್‌ ಡಬ್ಬಿಯ ಬಾಗಲ ಬಳಿಯಲ್ಲೇ ನಿಂತಿದ್ದಳು. ರೈಲು ವೇಗವಾಗಿ ಚಲಿಸತೊಡಗಿತು. ಇದ್ದಕ್ಕಿದ್ದಂತೆ ಒಂದು ಪ್ರಚಂಡ ಸ್ಫೋಟನವುಂಟಾಗಿ ಇಡೀ ಡಬ್ಬಿಯು ಕರಿಕಪ್ಪು ಹೊಗೆಯಿಂದ ತುಂಬಿಹೋಯಿತು. ಏನಾಯಿತೆಂದು ನೋಡಲು ಬಾಗಲ ಬಲಗಡೆಯಿಂದ ಅನಿತ ಇಣಿಕಿದಾಗ, ಮುಂದಿನ ಡಬ್ಬಿಯ ಲೋಹದ ಇಡೀ ಪಾರ್ಶ್ವವೇ ಪೂರಾರೀತಿಯಲ್ಲಿ ಸ್ಫೋಟಗೊಂಡು ರೈಲಿನಿಂದ 45 ಡಿಗ್ರಿ ಕೋನದಲ್ಲಿ ಕೆಳಗೆ ನೇತಾಡುತ್ತಿತ್ತು. ಮೃತದೇಹಗಳು ಮತ್ತು ದೇಹಭಾಗಗಳ ಚೂರುಗಳು ಸ್ಫೋಟಗೊಂಡ ಆ ತೆರಪಿನಿಂದ ಎಸೆಯಲ್ಪಟ್ಟು ರೈಲು ಹಳಿಯ ಮೇಲೆ ರಾಶಿಬೀಳುವುದನ್ನು ಕಂಡು ಅವಳ ಎದೆಹಾರಿತು. ಕೆಲವೇ ಸೆಕೆಂಡುಗಳಲ್ಲಿ ರೈಲು ನಿಂತಿತಾದರೂ ಆ ನಡುವೆ ಯುಗಗಳೇ ದಾಟಿಹೋದಂತೆ ಅವಳಿಗೆ ಭಾಸವಾಯಿತು. ಗಾಡಿ ನಿಂತಾಕ್ಷಣ ಅವಳೂ ಪ್ರಯಾಣಿಕರೂ ಕೆಳಗೆ ಹಾರಿ ಕಂಬಿಮಾರ್ಗವಾಗಿ ರೈಲಿನಿಂದ ದೂರ ಓಡತೊಡಗಿದರು. ತಡವರಿಸುತ್ತಾ ಅನಿತ ಸೆಲ್‌ ಫೋನ್‌ನಿಂದ ಗಂಡ ಜಾನ್‌ಗೆ ಕರೆಕೊಟ್ಟಾಗ ಸಂತೋಷಕರವಾಗಿ ಕನೆಕ್ಷನ್‌ ಸಿಕ್ಕಿತು. ಯಾಕಂದರೆ ಅನಂತರ ಕೆಲವೇ ನಿಮಿಷಗಳಲ್ಲಿ ಇಡೀ ನಗರದ ಫೋನುಗಳು ಗಾಬರಿಗೊಂಡ ಜನರ ಚಿಂತಾಕ್ರಾಂತ ಕರೆಗಳಿಂದ ಜ್ಯಾಮ್‌ ಆದವು. ಗಂಡನೊಂದಿಗೆ ಮಾತನಾಡುವ ತನಕ ಸಾಧಾರಣ ಮಟ್ಟಿಗೆ ಶಾಂತಳಾಗಿದ್ದ ಅನಿತಳಿಗೆ ಈಗ ದುಃಖವು ಉಕ್ಕಿಬಂತು. ಕಣ್ಣೀರಕೋಡಿ ಹರಿಯಿತು. ನಡೆದದ್ದೆಲ್ಲವನ್ನು ತಿಳಿಸಿದ ಅನಂತರ ಬೇಗಬಂದು ತನ್ನನ್ನು ಕರೆದೊಯ್ಯುವಂತೆ ಅವಳು ಜಾನನ್ನು ಅವಸರಪಡಿಸಿದಳು. ಅವನಿಗಾಗಿ ಕಾಯುತ್ತಾ ನಿಂತಾಗ ಇನ್ನೊಂದು ಕಾಟವೊ ಎಂಬಂತೆ ಮಳೆ ಧಾರಾಕಾರವಾಗಿ ಸುರಿಯ ತೊಡಗಿತು. ಹೀಗೆ ಆ ಪಾತಕವನ್ನು ಪತ್ತೆಹಚ್ಚುವ ಪೋಲೀಸರಿಗೆ ನೆರವಾಗಬಹುದಾಗಿದ್ದ ಹೆಚ್ಚಿನ ಪುರಾವೆಗಳೂ ನೀರುಪಾಲಾದವು.

ಕ್ಲಾಡಿಯಸ್‌ ಎಂಬ ಇನ್ನೊಬ್ಬ ಯೆಹೋವನ ಸಾಕ್ಷಿಯು ಎಂದಿಗಿಂತ ತುಸು ಬೇಗನೆ ತನ್ನ ಆಫೀಸ್‌ ಕೆಲಸವನ್ನು ಮುಗಿಸಿ ಮನೆಗೆ ಹೊರಟನು. ಅವನು ಸಂಜೆ 5:18ಕ್ಕೆ ಪಶ್ಚಿಮ ರೈಲ್ವೆ ನಿಲ್ದಾಣವಾದ ಚರ್ಚ್‌ಗೇಟ್‌ ಸ್ಟೇಷನ್‌ನಲ್ಲಿ ಟ್ರೈನ್‌ ಹತ್ತಿ ಒಂದು ಫಸ್ಟ್‌ ಕ್ಲಾಸ್‌ ಡಬ್ಬಿಯನ್ನು ಹೊಕ್ಕಿದನು. ಬಯಂದರ್‌ ಸ್ಟೇಷನಿಗೆ ತಲಪಲು ಅವನಿಗೆ ಒಂದು ತಾಸಿನ ಪ್ರಯಾಣಮಾಡಲಿಕ್ಕಿತ್ತು. ಸೀಟಿಗಾಗಿ ಹುಡುಕುತ್ತಿದ್ದಾಗ ಸಮೀಪದ ಯೆಹೋವನ ಸಾಕ್ಷಿಗಳ ಸಭೆಯ ಜೋಸೆಫ್‌ ಅವನ ಕಣ್ಣಿಗೆ ಬಿದ್ದನು. ಇಬ್ಬರೂ ಮಾತುಕತೆಯಲ್ಲಿ ತೊಡಗಿದಾಗ ಸಮಯವು ದಾಟಿದ್ದು ತಿಳಿಯಲಿಲ್ಲ. ದಿನದ ಕೆಲಸದಿಂದಾಗಿ ದಣಿದಿದ್ದ ಜೋಸೆಫ್‌ಗೆ ಜೊಂಪುಹತ್ತಿತು. ರೈಲು ಕಿಕ್ಕಿರಿದ್ದರಿಂದ ಕ್ಲಾಡಿಯಸ್‌ ತಾನು ಇಳಿಯತಕ್ಕ ಸ್ಟೇಷನ್‌ ಬರುವ ಮೊದಲೆ ತನ್ನ ಸೀಟಿನಿಂದ ಎದ್ದು ಬಾಗಿಲಕಡೆಗೆ ಹೋಗಿ ನಿಂತನು. ಆಗ ಎಚ್ಚತ್ತ ಜೋಸೆಫ್‌ ಕ್ಲಾಡಿಯಸ್‌ಗೆ ಗುಡ್‌-ಬೈ ಹೇಳಲು ತನ್ನ ಸೀಟಿನ ಹಿಂದಕ್ಕೆ ತಿರುಗಿದಾಗ ಕ್ಲಾಡಿಯಸ್‌ ಸೀಟಿನ ಹಿಡಿಕಂಬಿಯನ್ನು ಹಿಡಿದು ಅವನೊಂದಿಗೆ ಮಾತಾಡಲು ಬಾಗಿದನು. ಪ್ರಾಯಶಃ ಅವನ ಜೀವವನ್ನು ಉಳಿಸಿದ್ದು ಅದೇ! ಯಾಕಂದರೆ ಥಟ್ಟನೆ ಧಡಮ್ಮೆಂದು ಸಿಡಿದ ಸ್ಫೋಟಕ ಸದ್ದು ಅವನ ಕಿವಿಯನ್ನು ಜೋರಾಗಿ ಅಪ್ಪಳಿಸಿತು. ಡಬ್ಬಿಯು ದಟ್ಟಹೊಗೆಯಿಂದ ತುಂಬಿಹೋಗಿ ಗಡಗಡನೇ ಕಂಪಿಸಿತು. ಎಲ್ಲೆಲ್ಲೂ ಗಾಢಕತ್ತಲೆ. ಸೀಟಿನ ಸಾಲುಗಳ ನಡುವೆ ರಭಸದಿಂದ ಎಸೆಯಲ್ಪಟ್ಟು ಬೋರ್ಲಬಿದ್ದಿದ್ದನು ಕ್ಲಾಡಿಯಸ್‌. ಕಿವಿಗಳಲ್ಲಿ ಏನೋ ಗಣಗಣಿಸುತ್ತಿತ್ತೇ ಹೊರತು ಅವು ಪೂರ್ತಿ ಕೆಪ್ಪಾಗಿ ಹೋಗಿದ್ದಂತೆ ಭಾಸವಾದವು. ಅವನು ಹಿಂದೆ ನಿಂತಿದ್ದ ಜಾಗ ಈಗ ಅಗಲವಾಗಿ ಬಾಯಿಬಿಟ್ಟ ಒಂದು ದೊಡ್ಡ ಗುಂಡಿ! ಅವನ ಪಕ್ಕದಲ್ಲಿ ನಿಂತಿದ್ದ ಪ್ರವಾಸಿಗಳು ಹೊರಗೆ ಕಂಬಿಗಳ ಮೇಲೆ ಎಸೆಯಲ್ಪಟ್ಟಿದ್ದರು ಇಲ್ಲವೆ ನೆಲದಲ್ಲಿ ಸತ್ತುಬಿದ್ದಿದ್ದರು. ಆ ಮಾರಕ ಮಂಗಳವಾರದಂದು ರೈಲ್ವೆ ವ್ಯವಸ್ಥೆಯನ್ನು ಪೂರ್ತಿಯಾಗಿ ಅಲುಗಾಡಿಸಿದ ಏಳು ಬಾಂಬ್‌ ಸ್ಫೋಟಗಳಲ್ಲಿ ಕ್ಲಾಡಿಯಸ್‌ ಪಾರಾದದ್ದು ಐದನೆಯದನ್ನು.

ವಸ್ತ್ರವೆಲ್ಲಾ ರಕ್ತದಿಂದ ತೊಯ್ದು ಹೋಗಿದ್ದ ಕ್ಲಾಡಿಯಸ್‌ ಆಸ್ಪತ್ರೆಗೆ ಒಯ್ಯಲ್ಪಟ್ಟನು. ಆದರೆ ಅವನ ಬಟ್ಟೆ ಮುಖ್ಯವಾಗಿ ತೊಯ್ದದ್ದು ಬೇರೆ ಬಡಪಾಯಿ ಪ್ರಯಾಣಿಕರ ಗಾಯಗಳಿಂದಾಗಿಯೇ. ಅವನಿಗಾದದ್ದು ಕೇವಲ ಚಿಕ್ಕಪುಟ್ಟ ಗಾಯಗಳು ಮಾತ್ರ. ಅವನ ಕಿವಿಯ ಪೊರೆಯು ಬಿರಿದುಹೋಗಿತ್ತು, ಕೈಯಲ್ಲಿ ಸುಟ್ಟಗಾಯಗಳಿದ್ದವು ಮತ್ತು ತಲೆಗೂದಲು ಕಮರಿಹೋಗಿತ್ತು. ಆಸ್ಪತ್ರೆಯಲ್ಲಿ ಅವನಿಗೆ ಜೋಸೆಫ್‌ ಮತ್ತು ಅವನ ಪತ್ನಿ ಆ್ಯಂಜೆಲಾ ಸಿಕ್ಕಿದರು. ಸ್ತ್ರೀಯರಿಗಾಗಿ ಪ್ರತ್ಯೇಕಿಸಲ್ಪಟ್ಟ ಪಕ್ಕದ ಡಬ್ಬಿಯಲ್ಲಿದ್ದರೂ ಆ್ಯಂಜೆಲಾ ಗಾಯಗೊಂಡಿರಲಿಲ್ಲ. ಜೋಸೆಫ್‌ನ ಬಲಗಣ್ಣಿಗೆ ಪೆಟ್ಟಾಗಿತ್ತು ಮತ್ತು ಶ್ರವಣಶಕ್ತಿಯನ್ನು ಅವನು ಕಳೆದುಕೊಂಡಿದ್ದನು. ಈ ಮೂವರು ಸಾಕ್ಷಿಗಳು ತಾವು ಬದುಕಿ ಉಳಿದುದಕ್ಕಾಗಿ ಯೆಹೋವನಿಗೆ ಉಪಕಾರ ಹೇಳಿದರು. ಪ್ರಜ್ಞೆ ಮರಳಿದಾಗ ಕ್ಲಾಡಿಯಸ್‌ ತಾನು ನೆನಪಿಸಿಕೊಂಡ ಮೊದಲನೆ ವಿಷಯದ ಕುರಿತು ತಿಳಿಸುತ್ತಾ ಹೇಳಿದ್ದು: “ಒಂದೇ ಒಂದು ಕ್ಷಣದಲ್ಲಿ ನಮ್ಮ ಜೀವವು ಹಾರಿಹೋಗಿ ನಾವಿಲ್ಲದೆ ಹೋಗಲು ಸಾಧ್ಯವಿರುವಾಗ, ಈ ವ್ಯವಸ್ಥೆಯಲ್ಲಿ ಹಣವನ್ನೂ ಲೌಕಿಕ ಸಂಪತ್ತನ್ನೂ ಬೆನ್ನಟ್ಟುತ್ತಾ ಇರುವುದು ಅದೆಷ್ಟು ವ್ಯರ್ಥ!” ಅವನು ತನ್ನ ಜೀವನದಲ್ಲಿ ದೇವರಾದ ಯೆಹೋವನೊಂದಿಗಿನ ಸುಸಂಬಂಧವನ್ನು ಅತ್ಯಂತ ಪ್ರಮುಖವಾಗಿ ಇಟ್ಟದ್ದಕ್ಕಾಗಿ ಸಂತೋಷಿತನಾಗಿದ್ದನು!

ಹೀಗೆ ಮುಂಬೈ ಶಹರವು ಕೊಂಚ ಅವಧಿಯೊಳಗೆ ತೀಕ್ಷ್ಣನೆರೆಹಾವಳಿ, ದಂಗೆಗಳು ಮತ್ತು ಬಾಂಬ್‌ ಸ್ಫೋಟಗಳೇ ಮುಂತಾದ ಬಾಧೆಗಳನ್ನು ಅನುಭವಿಸಿತ್ತು. ಆದರೂ ಅಲ್ಲಿರುವ 1700ಕ್ಕೂ ಮಿಕ್ಕಿದ ಯೆಹೋವನ ಸಾಕ್ಷಿಗಳಲ್ಲಿ ಒಂದು ಉತ್ತಮವಾದ ಹುರುಪಿನ ಮನೋಭಾವವಿದೆ. ಅದಲ್ಲದೆ ಎಲ್ಲಾತರದ ಹಿಂಸಾಚಾರವು ಹೇಳಹೆಸರಿಲ್ಲದೆ ಹೋಗುವ ಒಂದು ಹೊಸ ಲೋಕದ ಆಶ್ಚರ್ಯಕರವಾದ ನಿರೀಕ್ಷೆಯನ್ನು ಅವರು ಕ್ರಮವಾಗಿ ತಮ್ಮ ನೆರೆಯವರಿಗೆ ಹಂಚುತ್ತಾ ಇದ್ದಾರೆ.​—⁠ಪ್ರಕಟನೆ 21:​1-4. (g 6/07)

[ಪುಟ 23ರಲ್ಲಿರುವ ಸಂಕ್ಷಿಪ್ತ ವಿವರಣೆ]

ಅವನು ಹಿಂದೆ ನಿಂತಿದ್ದ ಜಾಗ ಈಗ ಅಗಲವಾಗಿ ಬಾಯಿಬಿಟ್ಟ ಒಂದು ದೊಡ್ಡ ಗುಂಡಿ

[ಪುಟ 23ರಲ್ಲಿರುವ ಚಿತ್ರ]

ಅನಿತ

[ಪುಟ 23ರಲ್ಲಿರುವ ಚಿತ್ರ]

ಕ್ಲಾಡಿಯಸ್‌

[ಪುಟ 23ರಲ್ಲಿರುವ ಚಿತ್ರ]

ಜೋಸೆಫ್‌ ಮತ್ತು ಆ್ಯಂಜೆಲಾ

[ಪುಟ 22ರಲ್ಲಿರುವ ಚಿತ್ರ ಕೃಪೆ]

Sebastian D’Souza/AFP/Getty Images