ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸುಗಂಧಕಾರರ ನೆಚ್ಚಿನ ಹಣ್ಣು

ಸುಗಂಧಕಾರರ ನೆಚ್ಚಿನ ಹಣ್ಣು

ಸುಗಂಧಕಾರರ ನೆಚ್ಚಿನ ಹಣ್ಣು

ಇಟಲಿಯ ಎಚ್ಚರ! ಲೇಖಕರಿಂದ

ಸುಗಂಧದ್ರವ್ಯಗಳಿಗೆ ಅತ್ಯಂತ ಹಳೆಯ ಇತಿಹಾಸವಿದೆ. ಬೈಬಲ್‌ ಕಾಲಗಳಲ್ಲಿ ಅವನ್ನು ಕೊಂಡುಕೊಳ್ಳ ಸಾಧ್ಯವಿದ್ದವರ ಮನೆ, ಹಾಸಿಗೆ, ಮೈ ಮತ್ತು ಬಟ್ಟೆಬರೆಗಳು ಸುಗಂಧದ್ರವ್ಯಗಳ ಸುವಾಸನೆಯನ್ನು ಸೂಸುತ್ತಿದ್ದವು. ಸುಗಂಧದ್ರವ್ಯದ ತಯಾರಿಕೆಯಲ್ಲಿ ಅಗುರು, ಬಾಲ್ಸಮ್‌ ಎಣ್ಣೆ, ಲವಂಗ-ಚಕ್ಕೆ ಮತ್ತು ಇತರ ಸಂಬಾರ ದ್ರವ್ಯಗಳನ್ನು ಉಪಯೋಗಿಸಲಾಗುತ್ತಿತ್ತು.​—⁠ಜ್ಞಾನೋಕ್ತಿ 7:17; ಪರಮಗೀತ 4:10, 14.

ಕಾಯಿಪಲ್ಯಗಳಿಂದ ಸಾರೀಕರಿಸಿದ ಸತ್ವಗಳೇ ಈಗಲೂ ಸುಗಂಧದ್ರವ್ಯಗಳ ತಯಾರಿಕೆಯ ಮೂಲ ಪದಾರ್ಥಗಳಾಗಿವೆ. ಇಂಥ ಒಂದು ಪದಾರ್ಥದ ತಯಾರಿಕೆಯನ್ನು ನೋಡಲು ನಾವು ಇಟಲಿಯ ದ್ವೀಪಕಲ್ಪದ ದಕ್ಷಿಣ ತುದಿಯಲ್ಲಿರುವ ಕಲೇಬ್ರಿಯಾ ಎಂಬ ಪ್ರಾಂತಕ್ಕೆ ಬಂದಿದ್ದೇವೆ. ಬರ್ಗಮಾಟ್‌ ಹಣ್ಣಿನ ಪರಿಚಯ ನಿಮಗಿರಲಿಕ್ಕಿಲ್ಲ. ಆದರೂ ಮಾರುಕಟ್ಟೆಯಲ್ಲಿ ಸ್ತ್ರೀಯರಿಗೆ ಲಭ್ಯವಿರುವ ಸುಗಂಧದ್ರವ್ಯಗಳಲ್ಲಿ ಸರಿಸುಮಾರು ಮೂರರಲ್ಲಿ ಒಂದು ಭಾಗದಷ್ಟು ಮತ್ತು ಪುರುಷರ ಕಲೋನ್‌ಗಳಲ್ಲಿ ಅರ್ಧದಷ್ಟು ಈ ಹಣ್ಣಿನ ಪರಿಮಳವನ್ನು ಹೊಂದಿರುತ್ತವೆ. ನಾವೀಗ ಈ ಬರ್ಗಮಾಟ್‌ ಅನ್ನು ನಿಮಗೆ ಪರಿಚಯಿಸುತ್ತೇವೆ.

ಬರ್ಗಮಾಟ್‌ ನಿತ್ಯಹಸುರಿನ ಮರವಾಗಿದ್ದು ನಿಂಬೆ ಕುಟುಂಬಕ್ಕೆ ಸೇರಿದೆ. ಅದು ವಸಂತಕಾಲದಲ್ಲಿ ಹೂಬಿಡುತ್ತದೆ. ಅದರ ಕಾಯಿಗಳ ಗಾತ್ರ ಕಿತ್ತಳೆ ಹಣ್ಣಿನಷ್ಟು, ಬಣ್ಣ ಹಳದಿ ಮತ್ತು ಸಿಪ್ಪೆಯು ನುಣುಪಾಗಿದೆ. ಈ ಕಾಯಿಗಳು ಶರತ್ಕಾಲದ ಕೊನೆಭಾಗದಲ್ಲೊ ಚಳಿಗಾಲದ ಪ್ರಾರಂಭದಲ್ಲೊ ಹಣ್ಣಾಗುತ್ತವೆ. ಅನೇಕ ತಜ್ಞರ ಪ್ರಕಾರ ಬರ್ಗಮಾಟ್‌ ಒಂದು ಮಿಶ್ರತಳಿ. ಹಾಗಾಗಿ ಅದರ ಮೂಲವು ಸ್ವಲ್ಪಮಟ್ಟಿಗೆ ಅಜ್ಞಾತ. ಬರ್ಗಮಾಟ್‌ ಮರಗಳು ಸಿಕ್ಕಾಬಟ್ಟೆ ಬೆಳೆಯುವುದೂ ಇಲ್ಲ ಅವುಗಳನ್ನು ಬೀಜದಿಂದ ಬೆಳೆಸಲೂ ಆಗುವುದಿಲ್ಲ. ಬರ್ಗಮಾಟ್‌ಗಳ ತಳಿಗಾಗಿ ಕೃಷಿಕರು ಇರುವ ಮರಗಳನ್ನೇ ಸಜಾತೀಯ ಗಿಡಗಳೊಂದಿಗೆ ಅಂದರೆ ಕಹಿಕಂಚಿ ಇಲ್ಲವೆ ನಿಂಬೆಯೊಂದಿಗೆ ಕಸಿಕಟ್ಟುತ್ತಾರೆ.

ಸುಗಂಧಕಾರರಿಗಂತೂ ಬರ್ಗಮಾಟ್‌ ಹಣ್ಣಿನ ಗುಣಗಳೆಂದರೆ ಅಸದೃಶ. ಅದರ ವೈಶಿಷ್ಟ್ಯದ ಕುರಿತು ಒಂದು ಪುಸ್ತಕವು ವಿವರಿಸುವುದೇನೆಂದರೆ, ಅವುಗಳಿಂದ ಸಾರೀಕರಿಸಿದ ಸತ್ವವು “ಬೇರೆಬೇರೆ ಸುಗಂಧಗಳನ್ನು ಸಂಯೋಜಿಸಿ ಒತ್ತಾಗಿಡುತ್ತಾ ಒಂದು ಪ್ರತ್ಯೇಕವಾದ ವಿಶಿಷ್ಟ ಸುವಾಸನೆಯನ್ನು ಕೊಡುತ್ತದೆ. ಮಾತ್ರವಲ್ಲ ಅದರಲ್ಲಿರುವ ಪ್ರತಿಯೊಂದು ಮಿಶ್ರಣಕ್ಕೆ ವಿಶೇಷ ತಾಜಾತನವನ್ನು ಕೊಡುವ” * ಅಪೂರ್ವ ಸಾಮರ್ಥ್ಯವೂ ಅದಕ್ಕಿದೆ.

ಕಲೇಬ್ರಿಯಾದಲ್ಲಿ ಕೃಷಿ

ಹದಿನೆಂಟನೆಯ ಶತಮಾನದ ಆರಂಭದಲ್ಲೇ ಬರ್ಗಮಾಟ್‌ ಮರಗಳು ಕಲೇಬ್ರಿಯದಲ್ಲಿ ಬೆಳೆಸಲ್ಪಟ್ಟವೆಂದೂ ಸ್ಥಳೀಯರು ಕೆಲವೊಮ್ಮೆ ಅದರ ಸತ್ವವನ್ನು ಹಾದುಹೋಗುತ್ತಿದ್ದ ಪ್ರಯಾಣಿಕರಿಗೆ ಮಾರುತ್ತಿದ್ದರೆಂದೂ ಐತಿಹಾಸಿಕ ಮೂಲಗಳು ಸೂಚಿಸುತ್ತವೆ. ಹಾಗಿದ್ದರೂ ವ್ಯಾಪಾರಕ್ಕೆ ಸಂಬಂಧಿಸಿದ ಬೆಳೆಗಳು ಕಲೋನ್‌ನ ವೃದ್ಧಿ, ತಯಾರಿಕೆ, ಮತ್ತು ಮಾರಾಟದ ಮೇಲೆ ಅವಲಂಬಿಸಿದ್ದವು. ಇಸವಿ 1704ರಲ್ಲಿ ಇಟಲಿಯಿಂದ ಜರ್ಮನಿಗೆ ವಲಸೆಹೋದ ಜಾನ್‌ ಪಾಓಲೋ ಫೆಮೀನೀಸ್‌ ಅವರು, ಸ್ನಾನದ ನಂತರ ಬಳಸುವ ಸುವಾಸನಾ ದ್ರವ್ಯವನ್ನು ತಯಾರಿಸಿದರು. ಅದಕ್ಕೆ ಅವರು ಆಕ್ವಾ ಆಡ್ಮೀರಾಬಿಲಿಸ್‌ ಅಥವಾ “ಆ್ಯಡ್‌ಮರಬಲ್‌ ವಾಟರ್‌” ಎಂದು ಕರೆದರು. ಬರ್ಗಮಾಟ್‌ ಸತ್ವವೇ ಅದರ ಮುಖ್ಯ ಪದಾರ್ಥವಾಗಿತ್ತು. ಆ ಸುಗಂಧದ್ರವ್ಯವನ್ನು ಓಡಕಲೋನ್‌, “ಕಲೋನ್‌ ಜಲ” ಅಥವಾ ಅದು ತಯಾರಿಸಲ್ಪಟ್ಟ ಪಟ್ಟಣವಾದ ಕಲೋನ್‌ ಎಂಬ ಹೆಸರಿನಿಂದ ಕರೆಯಲಾಯಿತು.

ಇಸವಿ 1750ರ ಸುಮಾರಿಗೆ, ಬರ್ಗಮಾಟ್‌ನ ಮೊದಲ ತೋಪನ್ನು ರೆಜೀಯೊ ಎಂಬಲ್ಲಿ ನೆಡಲಾಯಿತು. ಬರ್ಗಮಾಟ್‌ ಸತ್ವದ ಮಾರಾಟದಿಂದ ಬಂದ ಒಳ್ಳೇ ಲಾಭವು ಅದರ ಹೆಚ್ಚಿನ ಬೆಳವಣಿಗೆಗೆ ಇಂಬುಕೊಟ್ಟಿತು. ಈ ಮರಗಳಿಗೆ ಸುಖೋಷ್ಣ ಹವಾಮಾನ ಮತ್ತು ಉತ್ತರದ ಶೀತಲ ಗಾಳಿಯಿಂದ ಮರೆಯಾದ ದಕ್ಷಿಣಾಭಿಮುಖ ಒಡ್ಡುವಿಕೆ ಅಗತ್ಯ. ಆದರೆ, ಜೋರಾದ ಗಾಳಿ, ಹವಾಮಾನದ ಥಟ್ಟನೆಯ ಏರುಪೇರು ಮತ್ತು ದೀರ್ಘಕಾಲದ ತೇವಾಂಶದಲ್ಲಿ ಅವು ಉತ್ತಮವಾಗಿ ಬೆಳೆಯುವುದಿಲ್ಲ. ಇಟಲಿಯ ಮುಖ್ಯ ಭೂಭಾಗದ ದಕ್ಷಿಣತೀರದ ತುದಿಗೆ ಸಮೀಪವಿರುವ ಕೇವಲ 5 ಕಿ.ಮೀ. ಅಗಲದ ಮತ್ತು 100 ಕಿ.ಮೀ. ಉದ್ದದ ಕಿರಿದಾದ ಭೂಪ್ರದೇಶವು ಉತ್ತಮ ವಾಯುಗುಣವನ್ನು ನೀಡುತ್ತದೆ. ಬರ್ಗಮಾಟ್‌ ಮರಗಳನ್ನು ಬೇರೆಕಡೆಗಳಲ್ಲಿ ಬೆಳೆಸಲು ಪ್ರಯತ್ನಿಸಲಾಗುತ್ತದಾದರೂ ಲೋಕವ್ಯಾಪಕ ಉತ್ಪಾದನೆಯ ಬಹುಪಾಲು ರೆಜೀಯೊ ಪ್ರಾಂತದಿಂದಲ್ಲೇ ಬರುತ್ತದೆ. ಪ್ರಮುಖ ಉತ್ಪಾದನೆಯನ್ನು ಮಾಡುವ ಇನ್ನೊಂದು ದೇಶವು ಆಫ್ರಿಕದ ಕೋಟ್‌ ಡಿವಾರ್‌ ಮಾತ್ರ ಆಗಿದೆ.

ಬರ್ಗಮಾಟ್‌ ಹಣ್ಣಿನ ಸಿಪ್ಪೆಯಿಂದ ಬಾಷ್ಪಶೀಲ ತೈಲವನ್ನು ತೆಗೆಯಲಾಗುತ್ತದೆ. ಈ ತೈಲದ ಬಣ್ಣ ಹಸಿರು ಮಿಶ್ರಿತ ಹಳದಿ. ಇದನ್ನು ಸಾರೀಕರಿಸಿ ತೆಗೆಯುತ್ತಿದ್ದ ಸಾಂಪ್ರದಾಯಿಕ ರೀತಿ ಹೇಗೆಂದರೆ, ಮೊದಲು ಹಣ್ಣನ್ನು ಎರಡು ಹೋಳು ಮಾಡಿ ಅನಂತರ ಅದರ ತಿರುಳನ್ನು ತೆಗೆದು ಸಿಪ್ಪೆಯಲ್ಲಿರುವ ಸತ್ವವನ್ನು ಸ್ಪಂಜುಗಳಿಗೆ ಹಿಂಡುವುದಾಗಿತ್ತು. ಕೇವಲ ಒಂದು ಪೌಂಡ್‌ ಸತ್ವವನ್ನು ಸಾರೀಕರಿಸಲು ಸುಮಾರು 200 ಪೌಂಡ್‌ಗಳಷ್ಟು ಬರ್ಗಮಾಟ್‌ ಹಣ್ಣುಗಳನ್ನು ಸಂಸ್ಕರಿಸಬೇಕಾಗಿತ್ತು. ಆದರೆ ಇಂದು ಹೆಚ್ಚಿನಾಂಶ ಎಲ್ಲ ಸತ್ವವನ್ನು ಯಂತ್ರಗಳ ಮೂಲಕವೇ ಸಾರೀಕರಿಸಲಾಗುತ್ತದೆ. ಯಂತ್ರಗಳಲ್ಲಿರುವ ಅಪಘರ್ಷಕ ಡಿಸ್ಕ್‌ ಅಥವಾ ರೋಲರ್‌ಗಳ ಸಹಾಯದಿಂದ ಹಣ್ಣಿನ ಇಡೀ ಸಿಪ್ಪೆಯನ್ನು ತುರಿದು ತೆಗೆಯಲಾಗುತ್ತದೆ.

ಅಜ್ಞಾತ ಆದರೆ ಬಳಕೆ ವ್ಯಾಪಕ

ಈ ಹಣ್ಣು ಕಲೇಬ್ರಿಯದಿಂದಾಚೆ ಅಜ್ಞಾತವಾದರೂ ಒಂದು ಲೇಖವು ಹೇಳುವ ಪ್ರಕಾರ “ಸೂಕ್ಷ್ಮ ವಿಮರ್ಶಕರಿಗಂತೂ ಬರ್ಗಮಾಟ್‌ ಬಹುಮೂಲ್ಯವಾಗಿದೆ.” ಈ ಹಣ್ಣಿನ ಸುವಾಸನೆಯನ್ನು ಸುಗಂಧದ್ರವ್ಯಗಳಲ್ಲಿ ಮಾತ್ರವಲ್ಲ ಸಾಬೂನು, ಡೀಓಡರಂಟ್‌, ಟೂತ್‌ಪೇಸ್ಟ್‌ ಮತ್ತು ಕ್ರೀಮ್‌ಗಳಂಥ ಉತ್ಪನ್ನಗಳಲ್ಲಿಯೂ ಆಘ್ರಾಣಿಸಬಹುದು. ಬರ್ಗಮಾಟ್‌ ಸತ್ವವನ್ನು ಐಸ್‌ಕ್ರೀಮ್‌, ಚಹ, ಮಿಠಾಯಿ ಮತ್ತು ಪಾನೀಯಗಳಲ್ಲಿ ರುಚಿಕಾರಕದಂತೆ ಬಳಸಲಾಗುತ್ತದೆ. ಬರ್ಗಮಾಟ್‌ಗೆ ಚರ್ಮವನ್ನು ಕಂದಿಸುವ ಸಾಮರ್ಥ್ಯ ಸಹ ಇದೆ. ಆದುದರಿಂದ ಇದನ್ನು ಸನ್‌-ಕೇರ್‌ ಉತ್ಪನ್ನಗಳ ತಯಾರಿಕೆಯಲ್ಲಿ ಉಪಯೋಗಿಸಲಾಗುತ್ತದೆ. ಅಷ್ಟೇ ಅಲ್ಲ, ಅದಕ್ಕೆ ನಂಜು-ನಾಶಕ ಹಾಗೂ ಬ್ಯಾಕ್ಟಿರಿಯಾ-ನಾಶಕ ಲಕ್ಷಣಗಳೂ ಇವೆ. ಈ ಕಾರಣದಿಂದಲೇ ಔಷಧಿಯ ಉದ್ಯಮದಲ್ಲಿ ಇದನ್ನು ಶಸ್ತ್ರಚಿಕಿತ್ಸಾ ಸೋಂಕುನಿವಾರಕವಾಗಿ ಉಪಯೋಗಿಸಲಾಗುತ್ತದೆ. ನೇತ್ರಶಾಸ್ತ್ರದಲ್ಲಿ ಮತ್ತು ಚರ್ಮಶಾಸ್ತ್ರದಲ್ಲಿಯೂ ಇದನ್ನು ಅತಿ ಉಪಯುಕ್ತ ಪದಾರ್ಥವಾಗಿ ಬಳಸಲಾಗುತ್ತದೆ. ಬರ್ಗಮಾಟ್‌ನಲ್ಲಿರುವ ಪೆಕ್ಟಿನ್‌ಗೆ ಜಲಟೀನೀಕರಿಸುವ ಪ್ರಭಾವಶಾಲಿ ಶಕ್ತಿಯಿದೆ. ಹೀಗಿರುವದರಿಂದಲೇ ಇದು ರಕ್ತಸ್ರಾವ-ರೋಧಕ ಮತ್ತು ಭೇದಿರೋಧಕಗಳ ತಯಾರಿಕೆಗಳಲ್ಲಿ ಉಪಯೋಗಿಸಲಾಗುತ್ತದೆ.

ವಿಶ್ಲೇಷಕರು ಬರ್ಗಮಾಟ್‌ ಸತ್ವದಿಂದ ಸುಮಾರು 350 ಘಟಕಗಳನ್ನು ಪ್ರತ್ಯೇಕಿಸಿದ್ದಾರೆ. ಅದರ ಪ್ರತ್ಯೇಕವಾದ ವಿಶಿಷ್ಟ ಸುವಾಸನೆಗೆ ಮತ್ತು ಇನ್ನಿತರ ಶ್ರೇಷ್ಠ ಗುಣಗಳಿಗೆ ಈ ಘಟಕಗಳೇ ಕಾರಣವಾಗಿವೆ. ಇವೆಲ್ಲ ಕೇವಲ ಒಂದೇ ಹಣ್ಣಿನಲ್ಲಿ!

ಬೈಬಲ್‌ ಬರಹಗಾರರಿಗೆ ಬರ್ಗಮಾಟ್‌ನ ಪರಿಚಯವಿದ್ದಿರುವುದು ಅಸಂಭಾವ್ಯ. ಹಾಗಿದ್ದರೂ ಈ ನಿಂಬೇ ಕುಲದ ಗುಣಗಳನ್ನು ಮತ್ತು ಅದನ್ನು ಸೃಷ್ಟಿಸಿದಾತನ ವಿವೇಕವನ್ನು ಪರಿಗಣಿಸಲು ಯಾರು ಆಸಕ್ತಿ ತೋರಿಸುತ್ತಾರೊ ಅಂಥವರಿಗೆ ಕೀರ್ತನೆಗಾರನ ಮಾತುಗಳನ್ನು ಪ್ರತಿಧ್ವನಿಸಲು ಸಕಾರಣಗಳಿವೆ. ಅವನು ಹೇಳಿದ್ದು: ‘ಹಣ್ಣಿನ ಮರಗಳೇ . . . ಯಾಹುವಿಗೆ ಸ್ತೋತ್ರಮಾಡಿ!’​—⁠ಕೀರ್ತನೆ 148:1, 9. (g 6/07)

[ಪಾದಟಿಪ್ಪಣಿ]

^ ಪ್ಯಾರ. 6 ಕೆಲವರಿಗೆ ಹುಲ್ಲಿನ ಪರಾಗ ಇಲ್ಲವೆ ಹೂಗಳಂತೆ ಸುಗಂಧದ್ರವ್ಯಗಳು ಸಹ ಅಲರ್ಜಿಯನ್ನು ಉಂಟುಮಾಡುತ್ತವೆ. ಎಚ್ಚರ! ಪತ್ರಿಕೆಯು ಯಾವುದೇ ನಿರ್ದಿಷ್ಟ ಉತ್ಪನ್ನಗಳ ಬಳಕೆಯನ್ನು ಉತ್ತೇಜಿಸುವುದಿಲ್ಲ.

[ಪುಟ 25ರಲ್ಲಿರುವ ಚಿತ್ರ]

ಇಡೀ ಹಣ್ಣಿನ ಸಿಪ್ಪೆಯನ್ನು ತುರಿದು ತೆಗೆಯುವ ಮೂಲಕ ಬರ್ಗಮಾಟ್‌ ಸತ್ವವನ್ನು ಸಾರೀಕರಿಸಲಾಗತ್ತದೆ.

[ಕೃಪೆ]

© Danilo Donadoni/Marka/age fotostock