ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಹಣದ ಕುರಿತು ಬುದ್ಧಿವಂತಿಕೆಯ ನೋಟ ಯಾವುದು?

ಹಣದ ಕುರಿತು ಬುದ್ಧಿವಂತಿಕೆಯ ನೋಟ ಯಾವುದು?

ಬೈಬಲಿನ ದೃಷ್ಟಿಕೋನ

ಹಣದ ಕುರಿತು ಬುದ್ಧಿವಂತಿಕೆಯ ನೋಟ ಯಾವುದು?

‘ಧನವು ಆಶ್ರಯ,’ ಎಂದು ಬೈಬಲ್‌ ಹೇಳುತ್ತದೆ. (ಪ್ರಸಂಗಿ 7:12) ಧನ ಅಥವಾ ಹಣದಿಂದ ಆಹಾರ, ಬಟ್ಟೆ ಮತ್ತು ವಸತಿಯನ್ನು ಖರೀದಿಸಲು ಸಾಧ್ಯವಿರುವುದರಿಂದ ಅದು ಬಡತನಕ್ಕೆ ಸಂಬಂಧಿಸಿದ ಪ್ರತಿಕೂಲ ಪರಿಣಾಮಗಳಿಂದ ಆಶ್ರಯವನ್ನು ಅಥವಾ ಸಂರಕ್ಷಣೆಯನ್ನು ಕೊಡುತ್ತದೆ. ನಿಶ್ಚಯವಾಗಿ, ಹಣದಿಂದ ಯಾವುದೇ ಭೌತಿಕ ವಸ್ತುಗಳನ್ನು ಖರೀದಿಸಬಹುದು. ಪ್ರಸಂಗಿ 10:19 ಹೇಳುವುದು: “ಧನವು ಎಲ್ಲವನ್ನೂ ಒದಗಿಸಿಕೊಡುವದು.”

ನಮ್ಮ ಹಾಗೂ ನಮ್ಮ ಕುಟುಂಬದ ಅಗತ್ಯಗಳನ್ನು ಪೂರೈಸಲು ಬೇಕಾದ ಹಣ ಲಭ್ಯವಾಗುವಂತೆ ಶ್ರಮಪಟ್ಟು ದುಡಿಯಲು ದೇವರ ವಾಕ್ಯವು ನಮ್ಮನ್ನು ಉತ್ತೇಜಿಸುತ್ತದೆ. (1 ತಿಮೊಥೆಯ 5:⁠8) ಪ್ರಾಮಾಣಿಕವಾಗಿ, ಕಷ್ಟಪಟ್ಟು ದುಡಿಯುವುದು ಖಂಡಿತವಾಗಿ ಸಂತೃಪ್ತಿ, ಗೌರವ ಮತ್ತು ಭದ್ರತೆಯ ಅನಿಸಿಕೆಗಳನ್ನು ಸಹ ಉಂಟುಮಾಡುತ್ತದೆ.​—⁠ಪ್ರಸಂಗಿ 3:​12, 13.

ಇದಕ್ಕೆ ಕೂಡಿಸುತ್ತಾ, ಕಷ್ಟಪಟ್ಟು ಕೆಲಸಮಾಡುವುದು ನಾವು ಹಣಕಾಸಿನ ವಿಷಯದಲ್ಲಿ ಉದಾರಿಗಳಾಗಿರಲು ಶಕ್ತರನ್ನಾಗಿಸುತ್ತದೆ. ಯೇಸು ಹೇಳಿದ್ದು: ‘ತೆಗೆದುಕೊಳ್ಳುವದಕ್ಕಿಂತ ಕೊಡುವುದರಲ್ಲೇ ಹೆಚ್ಚಿನ ಭಾಗ್ಯ’ ಅಥವಾ ಸಂತೋಷವಿದೆ. (ಅ. ಕೃತ್ಯಗಳು 20:35) ನಮ್ಮ ಹಣವನ್ನು ಅಗತ್ಯದಲ್ಲಿರುವವರಿಗೆ, ಅದರಲ್ಲೂ ಮುಖ್ಯವಾಗಿ ಜೊತೆ ಕ್ರೈಸ್ತರಿಗೆ ಸಹಾಯಮಾಡಲು ಅಥವಾ ನಾವು ಪ್ರೀತಿಸುವ ಯಾರಾದರೊಬ್ಬರಿಗೆ ಉಡುಗೊರೆಯನ್ನು ಖರೀದಿಸಲು ಮನಃಪೂರ್ವಕವಾಗಿ ವ್ಯಯಿಸುವಾಗ ಅಂತಹ ಸಂತೋಷ ಸಿಗುತ್ತದೆ.​—⁠2 ಕೊರಿಂಥ 9:7; 1 ತಿಮೊಥೆಯ 6:​17-19.

ಕೇವಲ ಅಪರೂಪವಾಗಿ ಮಾತ್ರ ಉದಾರಿಗಳಾಗಿರಬೇಕೆಂದು ಯೇಸು ತನ್ನ ಹಿಂಬಾಲಕರಿಗೆ ಹೇಳಲಿಲ್ಲ. ಅದಕ್ಕೆ ಬದಲಾಗಿ ಅವರು ಅದನ್ನು ತಮ್ಮ ರೂಢಿಯನ್ನಾಗಿ, ಅವರ ಜೀವನರೀತಿಯಾಗಿ ಮಾಡಿಕೊಳ್ಳುವಂತೆ ಪ್ರೋತ್ಸಾಹಿಸಿದನು. ಅವನು ಹೇಳಿದ್ದು: “ಕೊಡುವುದನ್ನು ಅಭ್ಯಾಸಮಾಡಿಕೊಳ್ಳಿರಿ.” (ಲೂಕ 6:​38, NW) ದೇವರ ರಾಜ್ಯದ ಅಭಿರುಚಿಗಳ ಅಭಿವೃದ್ಧಿಗಾಗಿ ದಾನಗಳನ್ನು ಕೊಡುವಾಗಲೂ ಇದೇ ಮೂಲತತ್ತ್ವವು ಅನ್ವಯವಾಗುತ್ತದೆ. (ಜ್ಞಾನೋಕ್ತಿ 3:9) ನಿಶ್ಚಯವಾಗಿಯೂ, ಈ ವಿಷಯದಲ್ಲಿ ನಾವು ತೋರಿಸುವ ಉದಾರತೆಯು ಯೆಹೋವನನ್ನು ಮತ್ತು ಆತನ ಮಗನನ್ನು ನಮ್ಮ ‘ಸ್ನೇಹಿತರನ್ನಾಗಿ ಮಾಡಿಕೊಳ್ಳಲು’ ಸಾಧ್ಯಮಾಡುತ್ತದೆ.​—⁠ಲೂಕ 16:⁠9.

‘ಹಣದಾಸೆಯ’ ಕುರಿತು ಎಚ್ಚರದಿಂದಿರ್ರಿ

ಸ್ವಾರ್ಥಿಗಳಾದ ಜನರು ಕೊಡುವುದು ತೀರಾ ವಿರಳ, ಮತ್ತು ಒಂದುವೇಳೆ ಅವರು ಏನಾದರೂ ಕೊಟ್ಟರೂ ಅದರ ಹಿಂದೆ ಯಾವುದಾದರೂ ದುರುದ್ದೇಶವಿರುತ್ತದೆ. ಅವರಿಗಿರುವ ಹಣದಾಸೆಯ ಕಾರಣದಿಂದಲೇ ಅವರು ಕೊಡಲು ಹಿಂಜರಿಯುತ್ತಾರೆ. ಆದರೆ ಇದು ಅವರು ನಿರೀಕ್ಷಿಸಿದಂಥ ಸಂತೋಷವನ್ನಲ್ಲ ಬದಲಾಗಿ ಅನೇಕ ವೇಳೆ ಅಸಂತೋಷವನ್ನೇ ತರುತ್ತದೆ. 1 ತಿಮೊಥೆಯ 6:10 ತಿಳಿಸುವುದು: “ಹಣದಾಸೆಯು ಸಕಲವಿಧವಾದ ಕೆಟ್ಟತನಕ್ಕೆ ಮೂಲವಾಗಿದೆ. ಕೆಲವರು ಅದಕ್ಕಾಗಿ ಆತುರಪಟ್ಟು ಅದರಿಂದ ಕ್ರಿಸ್ತನಂಬಿಕೆಯನ್ನು ಬಿಟ್ಟು ಅಲೆದಾಡಿ ಅನೇಕ ವೇದನೆಗಳಿಂದ ತಮ್ಮನ್ನು ತಿವಿಸಿಕೊಳ್ಳುತ್ತಾರೆ.” ಆದರೆ ಹಣದಾಸೆಯು ಅಸಂತೃಪ್ತಿಕರ ಮತ್ತು ಹಾನಿಕಾರಕವಾಗಿರುವುದು ಏಕೆ?

ಒಂದು ಕಾರಣವೇನೆಂದರೆ, ಅತ್ಯಾಶೆಯುಳ್ಳ ವ್ಯಕ್ತಿಯೊಬ್ಬನಲ್ಲಿ ಐಶ್ವರ್ಯಕ್ಕಾಗಿರುವ ದಾಹವನ್ನು ಎಂದೂ ತಣಿಸಲಾಗದು. “ಬೆಳ್ಳಿಯನ್ನು ಆಶಿಸುವವನಿಗೆ ಎಷ್ಟು ಬೆಳ್ಳಿಯಿಂದಲೂ ತೃಪ್ತಿಯಾಗದು,” ಎನ್ನುತ್ತದೆ ಪ್ರಸಂಗಿ 5:10. ಇದರ ಪರಿಣಾಮವಾಗಿ ಹಣದಾಸೆಯುಳ್ಳವರು ಸದಾ ಆಶಾಭಂಗದ ಭಾವನೆಗಳಿಂದ ‘ತಮ್ಮನ್ನು ತಿವಿಸಿಕೊಳ್ಳುತ್ತಾರೆ.’ ಜೊತೆಗೆ ಅವರ ಅತ್ಯಾಶೆಯು ಅಸಮಾಧಾನಕರ ಸಂಬಂಧಗಳು, ಅಸಂತುಷ್ಟ ಕುಟುಂಬ ಜೀವನ ಮತ್ತು ಸಾಕಷ್ಟು ವಿಶ್ರಾಂತಿಯ ಕೊರತೆಗೂ ಕಾರಣವಾಗಿರುತ್ತದೆ. “ದುಡಿಯುವವನು ಸ್ವಲ್ಪವೇ ಉಣ್ಣಲಿ ಹೆಚ್ಚೇ ಉಣ್ಣಲಿ ಹಾಯಾಗಿ ನಿದ್ರಿಸುವನು; ಐಶ್ವರ್ಯವಂತನ ಸಮೃದ್ಧಿಯೋ ಅವನಿಗೆ ನಿದ್ರೆ ಬರಲೀಸದು.” (ಪ್ರಸಂಗಿ 5:12) ಎಲ್ಲಕ್ಕಿಂತ ಮಿಗಿಲಾಗಿ ಹಣದಾಸೆಯು ಒಬ್ಬ ವ್ಯಕ್ತಿ ದೇವರ ಅನುಗ್ರಹವನ್ನು ಕಳೆದುಕೊಳ್ಳುವಂತೆ ಮಾಡುತ್ತದೆ.​—⁠ಯೋಬ 31:24, 28.

ಬೈಬಲ್‌ ಹಾಗೂ ಪ್ರಾಪಂಚಿಕ ಇತಿಹಾಸವು ಹಣಕ್ಕಾಗಿ ಕಳ್ಳತನ ಮಾಡಿದ, ನ್ಯಾಯವನ್ನು ತಿರುಚಿದ, ತಮ್ಮನ್ನು ವೇಶ್ಯಾವಾಟಿಕೆಗೆ ಒಪ್ಪಿಸಿಕೊಂಡ, ಕೊಲೆ ಮಾಡಿದ, ಇತರರಿಗೆ ದ್ರೋಹಬಗೆದ ಮತ್ತು ಸುಳ್ಳಾಡಿದ ಅನೇಕ ಜನರ ಉದಾಹರಣೆಗಳನ್ನು ಹೊಂದಿದೆ. (ಯೆಹೋಶುವ 7:1, 20-26; ಮೀಕ 3:11; ಮಾರ್ಕ 14:10, 11; ಯೋಹಾನ 12:6) ಯೇಸು ತನ್ನ ಭೂಶುಶ್ರೂಷೆಯ ಸಮಯದಲ್ಲಿ “ಬಹಳ ಐಶ್ವರ್ಯವಂತನಾದ” ಒಬ್ಬ ಯುವ ಅಧಿಕಾರಿಗೆ ತನ್ನನ್ನು ಹಿಂಬಾಲಿಸುವಂತೆ ಆಮಂತ್ರಿಸಿದನು. ದುಃಖಕರವಾಗಿ, ಆ ವ್ಯಕ್ತಿಯು ಈ ಅದ್ಭುತಕರ ಆಮಂತ್ರಣವನ್ನು ನಿರಾಕರಿಸಿದನು ಏಕೆಂದರೆ ಅದು ಆತನ ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಲಿತ್ತು. ಅವನ ನಿರಾಕರಣೆಗೆ ಪ್ರತಿಕ್ರಿಯಿಸುತ್ತಾ ಯೇಸು ಉದ್ಗರಿಸಿದ್ದು: “ಧನವಂತರು ದೇವರ ರಾಜ್ಯದಲ್ಲಿ ಸೇರುವದು ಎಷ್ಟೋ ಕಷ್ಟ.”​—⁠ಲೂಕ 18:23, 24.

ಮುಂತಿಳಿಸಲ್ಪಟ್ಟಂತೆಯೇ, ಇಂದಿನ “ಕಡೇ ದಿವಸಗಳಲ್ಲಿ” ಹೆಚ್ಚಿನ ಜನರು “ಹಣದಾಸೆ”ಯುಳ್ಳವರಾಗಿರುವುದರಿಂದ ಕ್ರೈಸ್ತರಾದರೋ ವಿಶೇಷವಾಗಿ ಎಚ್ಚರಿಕೆಯಿಂದಿರಬೇಕು. (2 ತಿಮೊಥೆಯ 3:1, 2) ತಮ್ಮ ಆಧ್ಯಾತ್ಮಿಕ ಅಗತ್ಯಗಳ ಅರಿವುಳ್ಳ ನಿಜ ಕ್ರೈಸ್ತರು ಅತ್ಯಾಶೆಯ ಪ್ರವೃತ್ತಿಯಿಂದ ಪ್ರಭಾವಿಸಲ್ಪಡುವುದಿಲ್ಲ ಏಕೆಂದರೆ ಅವರು ಹಣಕ್ಕಿಂತ ಎಷ್ಟೋ ಹೆಚ್ಚು ಶ್ರೇಷ್ಠವಾದುದನ್ನು ಹೊಂದಿದ್ದಾರೆ.

ಹಣಕ್ಕಿಂತ ಶ್ರೇಷ್ಠವಾದುದು

ಹಣವು ಆಶ್ರಯವಾಗಿದೆ ಎಂದು ರಾಜ ಸೊಲೊಮೋನನು ಹೇಳಿದರೂ ಅದೇ ಸಮಯದಲ್ಲಿ, “ಜ್ಞಾನವೂ [“ವಿವೇಕವೂ,” NW] ಆಶ್ರಯ” ಏಕೆಂದರೆ “ತನ್ನನ್ನು ಹೊಂದಿದವನಿಗೆ ಅದು ಜೀವದಾಯಕ” ಎಂದವನು ಕೂಡಿಸಿ ಹೇಳಿದನು. (ಪ್ರಸಂಗಿ 7:12) ಅವನ ಅರ್ಥವೇನಾಗಿತ್ತು? ಸೊಲೊಮೋನನು ಇಲ್ಲಿ, ಶಾಸ್ತ್ರವಚನಗಳ ನಿಷ್ಕೃಷ್ಟ ಜ್ಞಾನ ಮತ್ತು ಹಿತಕರ ದೇವಭಯದ ಮೇಲೆ ಆಧರಿತವಾದ ವಿವೇಕಕ್ಕೆ ಸೂಚಿಸುತ್ತಿದ್ದನು. ಅಂಥ ದೈವಿಕ ವಿವೇಕವು ಹಣಕ್ಕಿಂತ ಶ್ರೇಷ್ಠವಾಗಿದ್ದು, ಜೀವನದಲ್ಲಿ ಎದುರಾಗುವ ಅಸಂಖ್ಯಾತ ಅಪಾಯಗಳಿಂದ ಹಾಗೂ ಅಕಾಲಿಕ ಮರಣದಿಂದಲೂ ಒಬ್ಬನನ್ನು ಸಂರಕ್ಷಿಸಬಲ್ಲದು. ಅಷ್ಟುಮಾತ್ರವಲ್ಲದೆ ನಿಜ ವಿವೇಕವು ಅದನ್ನು ಹೊಂದಿರುವವರಿಗೆ ಕಿರೀಟದಂತೆ ಘನತೆಗೇರಿಸುತ್ತದೆ ಮತ್ತು ಗೌರವವನ್ನು ತರುತ್ತದೆ. (ಜ್ಞಾನೋಕ್ತಿ 2:10-22; 4:5-9) ಮತ್ತು ನಿಜ ವಿವೇಕವು ಒಬ್ಬ ವ್ಯಕ್ತಿಗೆ ದೇವರ ಅನುಗ್ರಹವನ್ನು ಪಡೆಯಲು ಸಾಧ್ಯಮಾಡುವುದರಿಂದ “ಜೀವದ ಮರ” ಎಂಬುದಾಗಿ ಕರೆಯಲ್ಪಡುತ್ತದೆ.​—⁠ಜ್ಞಾನೋಕ್ತಿ 3:18.

ಯಾರು ಈ ವಿವೇಕವನ್ನು ನಿಜವಾಗಿ ಅಪೇಕ್ಷಿಸುತ್ತಾರೋ ಮತ್ತು ಅದನ್ನು ಹುಡುಕಲು ಸಿದ್ಧರಿದ್ದಾರೋ ಅಂಥವರು ಇದು ಸುಲಭವಾಗಿ ಲಭ್ಯವಿರುವುದನ್ನು ಕಂಡುಕೊಳ್ಳುವರು. “ಕಂದಾ, . . . ಬುದ್ಧಿಗಾಗಿ ಮೊರೆಯಿಟ್ಟು ವಿವೇಕಕ್ಕಾಗಿ ಕೂಗಿಕೊಂಡು ಅದನ್ನು ಬೆಳ್ಳಿಯಂತೆಯೂ ನಿಕ್ಷೇಪದಂತೆಯೂ ಹುಡುಕು; ಆಗ ನೀನು ಯೆಹೋವನ ಭಯವನ್ನು ಅರಿತು ದೈವಜ್ಞಾನವನ್ನು ಪಡೆದುಕೊಳ್ಳುವಿ. ಯೆಹೋವನೇ ಜ್ಞಾನವನ್ನು ಕೊಡುವಾತನು, ಆತನ ಬಾಯಿಂದಲೇ ತಿಳುವಳಿಕೆಯೂ ವಿವೇಕವೂ ಹೊರಟು ಬರುತ್ತವೆ.”​—⁠ಜ್ಞಾನೋಕ್ತಿ 2:1-6.

ನಿಜ ಕ್ರೈಸ್ತರು ಹಣಕ್ಕಿಂತ ವಿವೇಕಕ್ಕೆ ಹೆಚ್ಚಿನ ಮೌಲ್ಯ ಕೊಡುವುದರಿಂದ ಹಣದಾಸೆಯುಳ್ಳವರಿಗೆ ಎಟುಕದ ಸಮಾಧಾನ, ಸುಖ ಮತ್ತು ಭದ್ರತೆಯನ್ನು ತಕ್ಕ ಮಟ್ಟಿಗೆ ಅನುಭವಿಸುತ್ತಾರೆ. ಇಬ್ರಿಯ 13:5 ತಿಳಿಸುವುದು: “ದ್ರವ್ಯಾಶೆ [ಹಣದಾಸೆ]ಯಿಲ್ಲದವರಾಗಿರಿ; ನಿಮಗಿರುವವುಗಳಲ್ಲಿ ತೃಪ್ತರಾಗಿರಿ; ನಾನು ನಿನ್ನನ್ನು ಎಂದಿಗೂ ಕೈಬಿಡುವದಿಲ್ಲ, ಎಂದಿಗೂ ತೊರೆಯುವದಿಲ್ಲವೆಂದು ದೇವರು ತಾನೇ ಹೇಳಿದ್ದಾನೆ.” ಇಂತಹ ಭದ್ರತೆಯನ್ನು ಹಣ ಎಂದೂ ಖರೀದಿಸಲಾರದು. (g 6/07)

ಇದರ ಬಗ್ಗೆ ನೀವು ಯೋಚಿಸಿದ್ದುಂಟೋ?

◼ ಯಾವ ರೀತಿಯಲ್ಲಿ ಹಣವು ಆಶ್ರಯವಾಗಿದೆ?​—⁠ಪ್ರಸಂಗಿ 7:⁠12.

◼ ದೈವಿಕ ವಿವೇಕವು ಹಣಕ್ಕಿಂತಲೂ ಶ್ರೇಷ್ಠವಾಗಿದೆ ಏಕೆ?​—⁠ಜ್ಞಾನೋಕ್ತಿ 2:10-22; 3:13-18.

◼ ನಾವು ಹಣದಾಸೆಯಿಂದ ಏಕೆ ದೂರವಿರಬೇಕು?​—⁠ಮಾರ್ಕ 10:23, 25; ಲೂಕ 18:23, 24; 1 ತಿಮೊಥೆಯ 6:9, 10.