ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕುಟುಂಬದ ನಿಯಮಗಳನ್ನು ಸ್ಪಷ್ಟವಾಗಿ ತಿಳಿಸಿ ತಡಮಾಡದೆ ಜಾರಿಗೆತನ್ನಿ

ಕುಟುಂಬದ ನಿಯಮಗಳನ್ನು ಸ್ಪಷ್ಟವಾಗಿ ತಿಳಿಸಿ ತಡಮಾಡದೆ ಜಾರಿಗೆತನ್ನಿ

ಹೆಜ್ಜೆ 4

ಕುಟುಂಬದ ನಿಯಮಗಳನ್ನು ಸ್ಪಷ್ಟವಾಗಿ ತಿಳಿಸಿ ತಡಮಾಡದೆ ಜಾರಿಗೆತನ್ನಿ

ಏಕೆ ಅಗತ್ಯ? “ಸ್ಪಷ್ಟವಾದ ನಿಯಮಗಳಿರುವುದು ಮತ್ತು ಅವುಗಳನ್ನು ಮುರಿದದ್ದಕ್ಕೆ ತಪ್ಪದೇ ಶಿಕ್ಷೆ ಕೊಡುವುದು ಮಕ್ಕಳಿಗೆ ಹಿತಕರ ಎಂಬುದು ವಾಸ್ತವಾಂಶ. ಹಾಗೆ ಮಾಡದಿರುವಾಗ ಮಕ್ಕಳು ಸದಾ ಸ್ವಹಿತದಲ್ಲೇ ಆಸಕ್ತರು, ಸ್ವಾರ್ಥಿಗಳು ಮತ್ತು ಅಸಂತುಷ್ಟರೂ ಆಗುತ್ತಾರೆ. ಅಲ್ಲದೆ, ತಮ್ಮ ಸುತ್ತಲಿರುವವರ ಬದುಕನ್ನೂ ದುಃಖಾರ್ತವಾಗಿ ಮಾಡುತ್ತಾರೆ.” ಹೀಗಂದವರು ಯೂನಿವರ್ಸಿಟಿ ಆಫ್‌ ಜಾರ್ಜಿಯಾದಲ್ಲಿ ಸಮಾಜಶಾಸ್ತ್ರಜ್ಞರಾದ ರೊನಾಲ್ಡ್‌ ಸೈಮನ್ಸ್‌ ಎಂಬವರು. ದೇವರ ವಾಕ್ಯವು ಆ ಮಾತನ್ನೇ ತೀರ ಸರಳವಾಗಿ ಹೀಗೆ ತಿಳಿಸುತ್ತದೆ: “ನಿಮ್ಮ ಮಕ್ಕಳನ್ನು ನೀವು ಪ್ರೀತಿಸುತ್ತಿರುವಲ್ಲಿ ಅವರನ್ನು ತಿದ್ದುವಿರಿ.”​—⁠ಜ್ಞಾನೋಕ್ತಿ 13:​24, ನ್ಯೂ ಸೆಂಚುರಿ ವರ್ಷನ್‌.

ಸಮಸ್ಯೆ: ನಿಮ್ಮ ಮಕ್ಕಳ ನಡವಳಿಕೆಯ ವಿಷಯದಲ್ಲಿ ನ್ಯಾಯವಾದ ಮೇರೆಗಳನ್ನು ಸ್ಥಾಪಿಸಲು ಮತ್ತು ಅವುಗಳನ್ನು ಜಾರಿಗೆತರಲು ಸಮಯ, ಪ್ರಯತ್ನ ಹಾಗೂ ಪಟ್ಟುಹಿಡಿಯುವಿಕೆ ಆವಶ್ಯಕ. ಅಂಥ ಯಾವುದೇ ಮೇರೆಗಳನ್ನು ಎಷ್ಟರ ಮಟ್ಟಿಗೆ ಮೀರಬಹುದೆಂದು ಪರೀಕ್ಷಿಸುವ ಆಸೆ ಮಕ್ಕಳಿಗಿರುವುದು ಸಹಜವೆಂದು ತೋರುತ್ತದೆ. ಇಬ್ಬರು ಮಕ್ಕಳ ಹೆತ್ತವರಾದ ಮೈಕ್‌ ಹಾಗೂ ಸೋನ್ಯಾ ಎಂಬವರು ಈ ಸಮಸ್ಯೆಯನ್ನು ಚೆನ್ನಾಗಿ ವರ್ಣಿಸುತ್ತಾರೆ. “ಚಿಕ್ಕ ಮಕ್ಕಳು, ತಮ್ಮದೇ ಆದ ಮನಸ್ಸು, ಆಸೆಗಳು ಮತ್ತು ಪಾಪಮಾಡುವ ಅಂತರ್ಗತ ಪ್ರವೃತ್ತಿಯುಳ್ಳ ಪುಟ್ಟ ಜನರು” ಆಗಿದ್ದಾರೆಂದು ಅವರು ಹೇಳುತ್ತಾರೆ. ಈ ಹೆತ್ತವರಿಗೆ ತಮ್ಮ ಪುತ್ರಿಯರೆಂದರೆ ಪ್ರಾಣ. ಆದರೂ “ಮಕ್ಕಳು ಕೆಲವೊಮ್ಮೆ ಹಠಮಾರಿಗಳೂ ಸ್ವಾರ್ಥಿಗಳೂ ಆಗಿರುತ್ತಾರೆ” ಎಂದು ಅವರು ಒಪ್ಪಿಕೊಳ್ಳುತ್ತಾರೆ.

ಪರಿಹಾರ: ಯೆಹೋವನು ಇಸ್ರಾಯೇಲ್‌ ಜನಾಂಗದೊಂದಿಗೆ ವ್ಯವಹರಿಸಿದ ರೀತಿಯನ್ನು ಅನುಕರಿಸಿರಿ. ತನ್ನ ಜನರ ಮೇಲಿದ್ದ ಪ್ರೀತಿಯನ್ನು ಆತನು ವ್ಯಕ್ತಪಡಿಸಿದ ಒಂದು ವಿಧವು, ಅವರು ಯಾವ ನಿಯಮಗಳನ್ನು ಪಾಲಿಸಬೇಕೆಂದು ಆತನು ನಿರೀಕ್ಷಿಸಿದನೊ ಅವುಗಳನ್ನು ಸ್ಪಷ್ಟವಾಗಿ ತಿಳಿಸಿದ ಮೂಲಕವೇ. (ವಿಮೋಚನಕಾಂಡ 20:​2-17) ಆ ನಿಯಮಗಳಿಗೆ ಅವಿಧೇಯರಾಗುವುದರ ಫಲಿತಾಂಶಗಳನ್ನೂ ಆತನು ಸ್ಪಷ್ಟವಾಗಿ ನಮೂದಿಸಿದನು.​—⁠ವಿಮೋಚನಕಾಂಡ 22:​1-9.

ಆದುದರಿಂದ ನಿಮ್ಮ ಮಕ್ಕಳು ಪಾಲಿಸಲೇಬೇಕೆಂದು ನಿಮಗನಿಸುವಂಥ “ಕುಟುಂಬ ನಿಯಮಗಳ” ಅಥವಾ ಸೂತ್ರಗಳ ಒಂದು ಲಿಖಿತ ಪಟ್ಟಿಯನ್ನು ಏಕೆ ಮಾಡಬಾರದು? ಈ ಪಟ್ಟಿಯಲ್ಲಿ ಕೆಲವೇ​—⁠ಬಹುಶಃ ಐದರಷ್ಟು​—⁠ನಿಯಮಗಳಿರುವುದು ಒಳ್ಳೇದೆಂದು ಕೆಲವು ಹೆತ್ತವರು ಸಲಹೆಕೊಡುತ್ತಾರೆ. ಚೆನ್ನಾಗಿ ಆಯ್ದ ಕುಟುಂಬ ನಿಯಮಗಳ ಪಟ್ಟಿ ಚಿಕ್ಕದ್ದಾಗಿದ್ದರೆ ಅದನ್ನು ಜಾರಿಗೆತರುವುದು ಮಾತ್ರವಲ್ಲ ನೆನಪಿನಲ್ಲಿಡುವುದೂ ಸುಲಭ. ಒಂದೊಂದೂ ನಿಯಮದ ಪಕ್ಕದಲ್ಲಿ, ಅದನ್ನು ಮುರಿದರೆ ದೊರೆಯುವ ಶಿಕ್ಷೆಯನ್ನೂ ಬರೆದಿಡಿರಿ. ಶಿಕ್ಷೆ ಅತಿರೇಕವಾಗಿರದಂತೆ ಮತ್ತು ನೀವು ಹೇಳಿದ ಹಾಗೆಯೇ ಶಿಕ್ಷೆಕೊಡಲು ಸಿದ್ಧರಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ಈ ನಿಯಮಗಳನ್ನು ಕ್ರಮವಾಗಿ ಮರುಜ್ಞಾಪಿಸುತ್ತಾ ಇರ್ರಿ. ಹೀಗೆ, ಅಪ್ಪಅಮ್ಮಂದಿರಾದ ನಿಮ್ಮನ್ನು ಸೇರಿಸಿ ಕುಟುಂಬದ ಪ್ರತಿಯೊಬ್ಬ ಸದಸ್ಯರಿಂದ ಏನನ್ನು ನಿರೀಕ್ಷಿಸಲಾಗುತ್ತದೆಂದು ಎಲ್ಲರಿಗೂ ಸರಿಯಾಗಿ ತಿಳಿದಿರುತ್ತದೆ.

ನಿಯಮಗಳು ಮುರಿಯಲ್ಪಟ್ಟಾಗ ಮುಂದಾಗಿ ತಿಳಿಸಲ್ಪಟ್ಟಂತೆಯೇ ಕೂಡಲೇ ಶಾಸ್ತಿಕೊಡಿ, ಆದರೆ ಶಾಂತವಾಗಿ ಹಾಗೂ ದೃಢತೆಯಿಂದ ಮತ್ತು ತಪ್ಪದೇ ಕೊಡಿರಿ. ಒಂದು ಸೂಚನೆ: ನಿಮಗೆ ತುಂಬ ಕೋಪ ಬಂದಿರುವಲ್ಲಿ, ಮೊದಲು ಶಾಂತರಾಗಿರಿ. ತದನಂತರವೇ ಶಿಕ್ಷೆ ಕೊಡಿ. (ಜ್ಞಾನೋಕ್ತಿ 29:22) ಆದರೆ ಅದನ್ನು ಮುಂದೂಡಬೇಡಿ ಇಲ್ಲವೇ ಈ ವಿಷಯದಲ್ಲಿ ಚೌಕಾಸಿ ಮಾಡಬೇಡಿ. ಹೀಗೆ ಮಾಡಿದರೆ, ಆ ನಿಯಮಗಳನ್ನು ಅಷ್ಟು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲವೆಂದು ನಿಮ್ಮ ಮಕ್ಕಳು ನೆನಸುವರು. ಇದು ಬೈಬಲ್‌ ಹೇಳುವ ಮಾತಿನಂತಿರುವುದು: “ಅಪರಾಧಕ್ಕೆ ವಿಧಿಸಿದ ದಂಡನೆಯು ಕೂಡಲೆ ನಡೆಯದಿರುವ ಕಾರಣ ಅಪರಾಧಮಾಡಬೇಕೆಂಬ ಯೋಚನೆಯು ನರಜನ್ಮದವರ ಹೃದಯದಲ್ಲಿ ತುಂಬಿ ತುಳುಕುವದು.”​—⁠ಪ್ರಸಂಗಿ 8:⁠11.

ನಿಮ್ಮ ಮಕ್ಕಳಿಗೆ ಪ್ರಯೋಜನ ತರುವಂಥ ಬೇರಾವ ವಿಧಗಳಲ್ಲಿ ನಿಮ್ಮ ಅಧಿಕಾರವನ್ನು ನೀವು ಬಳಸಬಲ್ಲಿರಿ? (g 8/07)

[ಪುಟ 6ರಲ್ಲಿರುವ ಸಂಕ್ಷಿಪ್ತ ವಿವರಣೆ]

“ನಿಮ್ಮ ಮಾತು ಹೌದಾದರೆ ಹೌದು, ಅಲ್ಲವಾದರೆ ಅಲ್ಲ, ಎಂದಿರಲಿ.” ​—⁠ಮತ್ತಾಯ 5:⁠37