ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗರಿಗಳು ಅದ್ಭುತವಾದೊಂದು ವಿನ್ಯಾಸ

ಗರಿಗಳು ಅದ್ಭುತವಾದೊಂದು ವಿನ್ಯಾಸ

ಗರಿಗಳು ಅದ್ಭುತವಾದೊಂದು ವಿನ್ಯಾಸ

ಕಡಲಕಾಗೆಯೊಂದು ತನ್ನ ರೆಕ್ಕೆಗಳನ್ನು ಕೆಳಮುಖವಾಗಿ ಬಡಿದಾಗ ಬಾನಿನೆಡೆಗೆ ಹಾರುತ್ತದೆ. ಮೇಲೇರಿದೊಡನೆ ಗಾಳಿಯಲ್ಲಿ ಸಲೀಸಾಗಿ ಸುತ್ತುತ್ತಾ ತಿರುಗುತ್ತಾ ಎತ್ತರ ಎತ್ತರಕ್ಕೇರುತ್ತದೆ. ರೆಕ್ಕೆಗಳನ್ನು ಮತ್ತು ಬಾಲವನ್ನು ಸ್ವಲ್ಪ ಆಚೀಚೆ ಬಾಗಿಸಿಕೊಂಡು ಅದು ರೆಕ್ಕೆಬಡಿಯದೆ ಅಂತರಿಕ್ಷದಲ್ಲಿ ನಿಲ್ಲುತ್ತದೆ. ಅಷ್ಟು ಬೆಡಗಿನಿಂದ ನಿಖರವಾಗಿ ಹಾರಲು ಅದಕ್ಕೆ ನೆರವಾಗುವುದು ಯಾವುದು? ಹೆಚ್ಚಾಗಿ ಅದರ ಗರಿಗಳೇ.

ಇಂದು ಜೀವಿಸಂಕುಲಗಳಲ್ಲಿ ಪಕ್ಷಿಗಳಿಗೆ ಮಾತ್ರವೇ ಗರಿಗಳು ಬೆಳೆಯುತ್ತವೆ. ಹೆಚ್ಚಿನ ಪಕ್ಷಿಗಳಿಗೆ ನಾನಾ ರೀತಿಯ ಗರಿಗಳಿವೆ. ನಮ್ಮ ಕಣ್ಣಿಗೆ ಹೆಚ್ಚಾಗಿ ಕಾಣುವಂಥದು ಸಾಮಾನ್ಯವಾದ ಮೈ ಹೊದಿಕೆ ಗರಿಗಳು. ಇವು ಪಕ್ಷಿಗಳಿಗೆ ನುಣುಪಿನ ಹಾಗೂ ಗಾಳಿಯಲ್ಲಿ ಹಾರುವ ಆಕಾರವನ್ನು ಕೊಡುತ್ತವೆ. ರೆಕ್ಕೆಯಲ್ಲೂ ಬಾಲದಲ್ಲೂ ಇರುವ ಮೈ ಹೊದಿಕೆ ಗರಿಗಳು ಪಕ್ಷಿಗಳ ಹಾರಾಟಕ್ಕೆ ಅತ್ಯಗತ್ಯ. ಝೇಂಕಾರ ಹಕ್ಕಿ (humming bird) ಹೆಚ್ಚುಕಡಿಮೆ ಇಂಥ 1,000 ಗರಿಗಳನ್ನೂ ಹಂಸವು 25,000ಕ್ಕಿಂತಲೂ ಹೆಚ್ಚು ಗರಿಗಳನ್ನೂ ಹೊಂದಿರಬಹುದು.

ಗರಿಗಳ ವಿನ್ಯಾಸವು ಅದ್ಭುತವಾಗಿದೆ. ಗರಿಯ ಕಾಂಡ ಅಥವಾ ಪಕ್ಷದಂಡವನ್ನು ರೇಕಿಸ್‌ ಎಂದು ಕರೆಯಲಾಗುತ್ತದೆ. ಅದನ್ನು ಬಗ್ಗಿಸಬಹುದಾದರೂ ಬಹಳ ಗಟ್ಟಿಯಾಗಿರುತ್ತದೆ. ಪಕ್ಷದಂಡದಿಂದ, ಬಾರ್ಬ್‌ ಎಂಬ ಒಂದಕ್ಕೊಂದು ಎಣೆದುಕೊಂಡಿರುವ ಕವಲುಗಳು ಹೊರಬಂದು ವೇನ್‌ ಎಂಬ ಚಪ್ಪಟೆಯಾಕಾರದ ಗರಿಯ ಒಳ ಮತ್ತು ಹೊರಮುಖಗಳನ್ನು ರೂಪಿಸುತ್ತವೆ. ಬಾರ್ಬ್‌ಗಳೆಂಬ ಈ ಕವಲುಗಳು ಬಾರ್ಬ್ಯೂಲ್‌ಗಳೆಂಬ ಅತಿ ಸೂಕ್ಷ್ಮವಾದ ನೂರಾರು ಅಡ್ಡಕವಲುಗಳ ಶ್ರೇಣಿಗಳ ಮೂಲಕ ಒಂದಕ್ಕೊಂದು ಎಣೆದುಕೊಂಡಿರುತ್ತವೆ. ಅಕ್ಕಪಕ್ಕದಲ್ಲಿರುವ ಬಾರ್ಬ್ಯೂಲ್‌ಗಳು ಪರಸ್ಪರ ಜೋಡಿಸಲ್ಪಟ್ಟು ‘ಜಿಪ್‌’ ಹಾಕಿದಂತೆ ಕಾಣುತ್ತವೆ. ಬಾರ್ಬ್ಯೂಲ್‌ಗಳು ಬೇರ್ಪಟ್ಟಾಗ ಪಕ್ಷಿಯು ಅದನ್ನು ‘ಜಿಪ್‌’ ಹಾಕುವಂತೆ ಹಿಂದಕ್ಕೆ ಎಳೆದು ಒಪ್ಪಮಾಡಿಕೊಳ್ಳುತ್ತದೆ. ಎಳೆ ಬಿಟ್ಟುಕೊಂಡಿರುವ ಒಂದು ಗರಿಯನ್ನು ನಿಮ್ಮ ಬೆರಳುಗಳ ಮಧ್ಯೆಯಿಟ್ಟು ನಯವಾಗಿ ಎಳೆಯುವ ಮೂಲಕ ನೀವೂ ಇದನ್ನು ಮಾಡಬಲ್ಲಿರಿ.

ಹಾರಾಟದ ಗರಿಗಳು ಮುಖ್ಯವಾಗಿ ಅಸಮಪಾರ್ಶ್ವವಾಗಿರುತ್ತವೆ. ಅಂದರೆ ಅದರ ವೇನ್‌ನ ಮುನ್ನಂಚು ತೀರಾ ಹಿಂಭಾಗಕ್ಕಿಂತ ಕಿರಿದಾಗಿರುತ್ತದೆ. ವಿಮಾನದ ರೆಕ್ಕೆಯಂತಿರುವ ಈ ಶ್ರೇಷ್ಠ ವಿನ್ಯಾಸವು, ಪ್ರತಿಯೊಂದು ಹಾರಾಟ ಗರಿಯು ತಾನೇ ಒಂದು ಚಿಕ್ಕ ರೆಕ್ಕೆಯ ಹಾಗೆ ಕಾರ್ಯವೆಸಗುವಂತೆ ಮಾಡುತ್ತದೆ. ಮಾತ್ರವಲ್ಲದೆ, ದೊಡ್ಡದಾದ ಒಂದು ಹಾರಾಟದ ಗರಿಯನ್ನು ನೀವು ಸೂಕ್ಷ್ಮವಾಗಿ ಗಮನಿಸುವುದಾದರೆ, ರೇಕಿಸ್‌ನ ಕೆಳತಳದಲ್ಲಿ ಉದ್ದಕ್ಕೂ ಒಂದು ಗಾಡಿಯಿರುವುದನ್ನು ನೋಡುವಿರಿ. ಈ ಸರಳ ವಿನ್ಯಾಸವು ಪಕ್ಷದಂಡಕ್ಕೆ ಬಲವನ್ನು ಒದಗಿಸಿ, ಬಗ್ಗಿಸಿದರೂ ತಿರುಚಿದರೂ ಮುರಿದುಹೋಗದಂತೆ ಮಾಡುತ್ತದೆ.

ಗರಿಗಳ ಕಾರ್ಯಗಳು ಅನೇಕ

ಅನೇಕ ಪಕ್ಷಿಗಳ ಮೈ ಹೊದಿಕೆ ಗರಿಗಳ ಮಧ್ಯದಲ್ಲಿ ಫಿಲೋಪ್ಲೂಮ್‌ ಎಂಬ ತೆಳುವಾದ ಉದ್ದ ಗರಿಗಳೂ ಮತ್ತು ತುಪ್ಪುಳು ಗರಿಗಳೂ ಇವೆ. ಫಿಲೋಪ್ಲೂಮ್‌ಗಳ ಬುಡದಲ್ಲಿರುವ ಸಂವೇದಕಗಳು (sensors), ಪಕ್ಷಿಗಳ ಹೊರಮೈ ಗರಿಗಳಿಗೆ ಯಾವುದೇ ಅಡ್ಡಿಯಾದರೂ ಅವುಗಳನ್ನು ಎಚ್ಚರಿಸುತ್ತವೆ; ಹಾಗೆಯೇ ಗಾಳಿಯ ವೇಗವನ್ನೂ ತಿಳಿದುಕೊಳ್ಳಲು ಅವುಗಳಿಗೆ ಸಹಾಯಮಾಡಬಹುದು ಎಂದು ನಂಬಲಾಗುತ್ತದೆ. ತುಪ್ಪುಳು ಗರಿಗಳು ಮಾತ್ರವೇ ಯಾವಾಗಲೂ ಬೆಳೆಯುತ್ತಿರುತ್ತವೆ ಹಾಗೂ ಎಂದಿಗೂ ಉದುರುವುದಿಲ್ಲ. ಈ ಗರಿಗಳಲ್ಲಿರುವ ಬಾರ್ಬ್‌ಗಳು ಒಡೆದು ನುಣ್ಣನೆಯ ಪುಡಿಯಾಗುತ್ತವೆ. ಇದು ಹಕ್ಕಿಯ ಗರಿಗಳು ನೀರಿನಿಂದ ತೋಯ್ದುಹೋಗದಂತೆ ಸಹಾಯಮಾಡುತ್ತದೆ ಎಂದು ಭಾವಿಸಲಾಗಿದೆ.

ಗರಿಗಳ ಇತರ ಕಾರ್ಯಗಳಲ್ಲಿ ಪಕ್ಷಿಗಳನ್ನು ಶಾಖದಿಂದ, ಚಳಿಯಿಂದ ಮತ್ತು ನೇರಾಳಾತೀತ ಕಿರಣಗಳಿಂದ ಸಂರಕ್ಷಿಸುವುದು ಸೇರಿದೆ. ಉದಾಹರಣೆಗೆ, ಕಡಲ ಬಾತುಗಳು ಸಮುದ್ರದಲ್ಲಿ ಕೊರೆಯುವ ಶೀತಲ ಗಾಳಿ ಬೀಸುವ ಸಮಯದಲ್ಲೂ ಬಹಳ ಹಾಯಾಗಿ ವೃದ್ಧಿಯಾಗುತ್ತವೆ. ಹೇಗೆ? ಶೀತಲ ಗಾಳಿಯನ್ನು ಒಳನುಸುಳಲು ಬಿಡದಿರುವ ಅವುಗಳ ಮೈ ಹೊದಿಕೆ ಗರಿಗಳ ಕೆಳಗೆ ಮೃದುವಾದ ತುಪ್ಪುಳುತುಪ್ಪುಳಾಗಿರುವ ಪುಕ್ಕಗಳಿವೆ. ಈ ದಪ್ಪ ಹೊದಿಕೆಯಂತಿರುವ ಪುಕ್ಕಗಳನ್ನು ಒಳಮೈ ಗರಿಗಳೆಂದು ಕರೆಯುತ್ತಾರೆ. ಇದು 1.7 ಸೆಂ.ಮೀ. ದಪ್ಪವಾಗಿದ್ದು ಕಡಲ ಬಾತಿನ ಬಹುತೇಕ ಪೂರ್ತಿ ಮೈಯನ್ನು ಮುಚ್ಚುತ್ತದೆ. ಈ ನೈಸರ್ಗಿಕ ಒಳಮೈ ಎಷ್ಟು ಶಾಖ ನಿರೋಧಕವೆಂದರೆ, ಇದಕ್ಕೆ ಸರಿಸಾಟಿಯಾದ ಇನ್ನೊಂದು ಕೃತಕ ಪದಾರ್ಥ ಇಷ್ಟರ ತನಕ ತಯಾರಾಗಿಲ್ಲ.

ಗರಿಗಳು ಕಾಲಕ್ರಮೇಣ ಸವೆದು ಹೋಗುತ್ತವೆ. ಆದುದರಿಂದಲೇ ಪಕ್ಷಿಗಳು ಗರಿಗಳ ಉದುರಿಸುವಿಕೆಯ ಮೂಲಕ ಹೊಸ ಗರಿಗಳನ್ನು ಹೊಂದುತ್ತವೆ. ಅಂದರೆ, ಹಳೆಯ ಗರಿಗಳು ಉದುರಿಹೋಗಿ ಹೊಸತು ಬೆಳೆಯುತ್ತವೆ. ಹೆಚ್ಚಿನ ಪಕ್ಷಿಗಳು ತಮ್ಮ ರೆಕ್ಕೆ ಮತ್ತು ಬಾಲದ ಗರಿಗಳನ್ನು ನಿಯಮಿತ ಸಮಯದಲ್ಲಿ ನಿಗದಿತ ಕ್ರಮದಲ್ಲಿ ಕಳಚಿಕೊಳ್ಳುತ್ತವೆ. ಹೀಗೆ ಅವು ಹಾರುವ ಸಾಮರ್ಥ್ಯವನ್ನು ಸದಾ ಹೊಂದಿರುತ್ತವೆ.

“ಪೂರ್ಣವಾಗಿ ರೂಪುಗೊಂಡಿವೆ”

ಸುರಕ್ಷಿತ ವಿಮಾನಗಳನ್ನು ತಯಾರಿಸುವುದಕ್ಕೆ ತುಂಬಾ ಶ್ರಮಭರಿತ ವಿನ್ಯಾಸ, ಯಂತ್ರಕಲೆ ಹಾಗೂ ಕೌಶಲ ಅಗತ್ಯ. ಹಾಗಾದರೆ, ಪಕ್ಷಿಗಳು ಮತ್ತು ಗರಿಗಳ ಕುರಿತೇನು? ಗರಿಗಳು ವಿಕಾಸಗೊಂಡವು ಎಂಬುದನ್ನು ಆಧಾರಿಸಲು ಪಳೆಯುಳಿಕೆಗಳ ಸಾಕ್ಷ್ಯಗಳೇ ಇಲ್ಲ. ಆದುದರಿಂದಲೇ, ಅವು ಹೇಗೆ ಅಸ್ತಿತ್ವಕ್ಕೆ ಬಂದವು ಎಂಬುದರ ಕುರಿತು ವಿಕಾಸವಾದಿಗಳ ನಡುವೆ ವಿಪರೀತ ವಾಗ್ವಾದಗಳು ಹುಟ್ಟಿಕೊಂಡಿವೆ. “ಮೂಲಭೂತವಾದಿಗಳ ಭಾವಾತಿರೇಕ,” “ದುರ್ಭಾಷೆಗಳ ಪ್ರಹಾರ” ಮತ್ತು “ಪ್ರಾಚೀನ ಜೀವಶಾಸ್ತ್ರಜ್ಞರ ಮನೋವಿಕಾರ”​—⁠ಇವೇ ಅವರ ಕಟು ಚರ್ಚೆಯ ಸಾಮಾನ್ಯ ವಿಷಯಗಳೆಂದು ಸೈಯನ್ಸ್‌ ನ್ಯೂಸ್‌ ಪತ್ರಿಕೆಯು ತಿಳಿಸುತ್ತದೆ. ಗರಿಗಳು ವಿಕಾಸಗೊಂಡದರ ಕುರಿತು ಸೆಮಿನರಿಯನ್ನು ಏರ್ಪಡಿಸಿದ ಒಬ್ಬ ವಿಕಾಸವಾದಿ ಜೀವವಿಜ್ಞಾನಿಯು ಒಪ್ಪಿಕೊಂಡದ್ದು: “ವಿಜ್ಞಾನದ ಕುರಿತಾದ ಯಾವುದೋ ಒಂದು ವಿಷಯವು ಅಂಥ ಅಯೋಗ್ಯವರ್ತನೆ ಮತ್ತು ಕೋಪವನ್ನು ಉದ್ರೇಕಿಸುತ್ತದೆಂದು ನಾನು ಕನಸುಮನಸ್ಸಿನಲ್ಲೂ ನೆನಸಿರಲಿಲ್ಲ.” ಗರಿಗಳು ವಿಕಾಸಗೊಂಡದ್ದೇ ಆಗಿರುವುದಾದರೆ, ಅದರ ಕುರಿತಾದ ಚರ್ಚೆಯು ಇಷ್ಟೊಂದು ಕಚ್ಚಾಟದ ವಿಷಯವಾಗಿರುವುದೇಕೆ?

“ಗರಿಗಳು ಪೂರ್ಣವಾಗಿ ರೂಪುಗೊಂಡಿವೆ​—⁠ಅದೇ ಸಮಸ್ಯೆ” ಎಂದು ಯೇಲ್‌ ಯೂನಿವರ್ಸಿಟಿಯ, ಪಕ್ಷಿಗಳ ರಚನೆ ಮತ್ತು ಸ್ವಭಾವ​—⁠ಪಕ್ಷಿ ವಿಜ್ಞಾನದ ಕೈಪಿಡಿ (ಇಂಗ್ಲಿಷ್‌) ತಿಳಿಸುತ್ತದೆ. ಹೆಚ್ಚು ಪ್ರಗತಿಯಾಗಬೇಕೆಂಬ ಯಾವುದೇ ಸೂಚನೆಯನ್ನು ಗರಿಗಳು ಕೊಡುವುದಿಲ್ಲ. ವಾಸ್ತವದಲ್ಲಿ, “ಅತಿ ಹಳೆಯದೆಂದು ಹೇಳಲ್ಪಡುವ ಗರಿಯ ಪಳೆಯುಳಿಕೆಯು ಇಂದು ಹಾರಾಡುತ್ತಿರುವ ಪಕ್ಷಿಗಳ ಗರಿಗಳನ್ನೇ ಸ್ವಲ್ಪವೂ ವ್ಯತ್ಯಾಸವಿಲ್ಲದೆ ಹೋಲುತ್ತದೆ.” * ಆದರೂ, ಆದಿಯಲ್ಲಿ ಚರ್ಮದ ಬಾಹ್ಯವೃದ್ಧಿಯಲ್ಲಿ ಬದಲಾವಣೆಯಾಗಿ ಕ್ರಮೇಣ ಗರಿಗಳು ಮೆಲ್ಲಮೆಲ್ಲನೆ ಮೂಡಿಬಂದಿರಬೇಕು ಎಂದು ವಿಕಾಸವಾದ ಸಿದ್ಧಾಂತ ಕಲಿಸುತ್ತದೆ. ಅಷ್ಟಲ್ಲದೆ, “ವಂಶಾನುಕ್ರಮದಲ್ಲಿ ಬಂದ ಪ್ರತಿಯೊಂದು ಪೀಳಿಗೆ ಅದರ ಹಿಂದಿನದಕ್ಕಿಂತ ಹೆಚ್ಚು ಸಶಕ್ತವಾಗಿರದೇ ಇದ್ದಲ್ಲಿ, ಗರಿಗಳು ವಿಕಾಸಹೊಂದಲು ಸಾಧ್ಯವೇ ಆಗುತ್ತಿರಲಿಲ್ಲ” ಎಂದು ಆ ಕೈಪಿಡಿ ಹೇಳುತ್ತದೆ.

ಸರಳವಾಗಿ ಹೇಳುವುದಾದರೆ, ವಿಕಾಸವಾದಕ್ಕನುಸಾರ ಸಹ ಒಂದು ಗರಿ ತನ್ನಿಂದ ತಾನೇ ಸೃಷ್ಟಿಯಾಗಸಾಧ್ಯವಿಲ್ಲ. ಏಕೆಂದರೆ, ಗರಿಯ ರಚನೆಯಲ್ಲಿ ದೀರ್ಘಕಾಲದಿಂದ ನಡೆದ ಅನುವಂಶಿಕ ಬದಲಾವಣೆಗಳಲ್ಲಿ ಪ್ರತಿಯೊಂದು ಹಂತವೂ ಆ ಜೀವಿಯ ಬದುಕಿ ಉಳಿಯುವಿಕೆಯ ಸಾಧ್ಯತೆಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ ಎಂದು ವಿಕಾಸವಾದ ಹೇಳುತ್ತದೆ. ಗರಿಯಷ್ಟು ಜಟಿಲವಾದ ಮತ್ತು ಸಂಪೂರ್ತಿ ಕಾರ್ಯಕ್ಷಮತೆ ಹೊಂದಿರುವ ಯಾವುದೋ ಒಂದು ವಿಷಯ ಈ ರೀತಿಯಲ್ಲಿ ಉದ್ಭವಿಸಿತ್ತು ಎಂದು ಊಹಿಸುವುದೇ ಅಸಾಧ್ಯವೆಂದು ಅನೇಕ ವಿಕಾಸವಾದಿಗಳೇ ಹೇಳುತ್ತಾರೆ.

ಮಾತ್ರವಲ್ಲ, ಗರಿಯು ಒಂದು ದೀರ್ಘಕಾಲದ ಅವಧಿಯಲ್ಲಿ ಹಂತ ಹಂತವಾಗಿ ಅಭಿವೃದ್ಧಿಯಾಗಿದ್ದಲ್ಲಿ, ಅಂಥ ಒಂದು ಯಾವುದೊ ಹಂತದ ಗರಿಯನ್ನು ಪಳೆಯುಳಿಕೆಯ ದಾಖಲೆಯು ಹೊಂದಿರಲೇಬೇಕು. ಆದರೆ ಅಂಥದ್ದೇನೂ ಈ ವರೆಗೂ ದೊರೆತಿಲ್ಲ. ಬದಲಿಗೆ ದೊರೆತಿರುವುದೆಲ್ಲವೂ ಪೂರ್ಣವಾಗಿ ರೂಪುಗೊಂಡಿದ್ದ ಗರಿಗಳೇ ಆಗಿವೆ. “ವಿಕಾಸವಾದದ ವಿಷಾದನೀಯ ಸಂಗತಿ ಏನೆಂದರೆ, ಗರಿಗಳು ತುಂಬಾ ಜಟಿಲವಾಗಿವೆ” ಎಂದು ಆ ಕೈಪಿಡಿ ತಿಳಿಸುತ್ತದೆ.

ಪಕ್ಷಿಗಳ ಹಾರಾಟಕ್ಕೆ ಗರಿಗಳಿಗಿಂತ ಹೆಚ್ಚಿನದ್ದು ಬೇಕು

ಗರಿಗಳು ಪೂರ್ಣವಾಗಿ ರೂಪುಗೊಂಡ ವಿಷಯ ಮಾತ್ರವೇ ವಿಕಾಸವಾದಿಗಳ ಸಮಸ್ಯೆಯಲ್ಲ. ಏಕೆಂದರೆ, ಪಕ್ಷಿಗಳ ಪ್ರತಿಯೊಂದು ಅಂಗವೂ ಅವುಗಳ ಹಾರಾಟಕ್ಕಾಗಿ ವಿನ್ಯಾಸಿಸಲ್ಪಟ್ಟಿದೆ. ಉದಾಹರಣೆಗೆ, ಹಗುರವಾದ ಟೊಳ್ಳು ಎಲುಬುಗಳು ಪಕ್ಷಿಗಳಿಗಿವೆ. ಅವುಗಳ ಉಸಿರಾಟದ ವ್ಯವಸ್ಥೆ ಅಸಾಧಾರಣ ಸಾಮರ್ಥ್ಯವನ್ನು ಹೊಂದಿವೆ. ರೆಕ್ಕೆಗಳನ್ನು ಬಡಿಯಲು ಮತ್ತು ನಿಯಂತ್ರಿಸಲು ವಿಶೇಷ ರೀತಿಯ ಸ್ನಾಯುಗಳು ಅವಕ್ಕಿವೆ. ಪ್ರತಿಯೊಂದು ಗರಿಯ ಸ್ಥಾನವನ್ನು ನಿಯಂತ್ರಿಸಲಿಕ್ಕೂ ಅನೇಕ ಸ್ನಾಯುಗಳನ್ನು ಅವು ಹೊಂದಿವೆ. ಪ್ರತಿಯೊಂದು ಸ್ನಾಯುವನ್ನು ಮೆದುಳಿಗೆ ಜೋಡಿಸುವ ನರತಂತುಗಳು ಅವಕ್ಕಿವೆ. ಸಣ್ಣ ಗಾತ್ರದ ಆದರೆ ಬೆರಗುಗೊಳಿಸುವ ಕಾರ್ಯಕ್ಷಮತೆ ಹೊಂದಿರುವ ಆ ಮೆದುಳು ಈ ಎಲ್ಲ ವ್ಯವಸ್ಥೆಯನ್ನು ಒಂದೇ ಸಮಯದಲ್ಲಿ, ತನ್ನಷ್ಟಕ್ಕೆ ತಾನೇ ಹಾಗೂ ಖಚಿತವಾಗಿ ನಿಯಂತ್ರಿಸುವಂತೆ ಮುಂಚೆಯೇ ಪ್ರೋಗ್ರ್ಯಾಮ್‌ ಮಾಡಲಾಗಿದೆ. ಹೌದು, ಹಾರಾಟಕ್ಕಾಗಿ ಈ ವಿವಿಧ ಅಂಗಗಳೆಲ್ಲವೂ ಒಟ್ಟಾಗಿ ಕಾರ್ಯನಡಿಸಬೇಕು, ಬರಿಯ ಗರಿಗಳು ಮಾತ್ರ ಸಾಲದು.

ಮುಂದೊಂದು ದಿನ ಆಕಾಶದಲ್ಲಿ ಹಾರಾಡಲಿಕ್ಕಾಗಿ ಆವಶ್ಯಕವಾದ ಹುಟ್ಟರಿವು ಹಾಗೂ ಬೆಳವಣಿಗೆಯ ಸಂಪೂರ್ಣ ಮಾಹಿತಿಗಳು ಅಡಗಿರುವ ಒಂದು ಸಣ್ಣ ಜೀವಕೋಶದಿಂದ ಪಕ್ಷಿಯು ಹುಟ್ಟಿ ಬರುತ್ತದೆ ಎಂಬುದನ್ನು ನೆನಪಿನಲ್ಲಿಡಿರಿ. ಇವೆಲ್ಲವೂ ಅನುಕೂಲಕರವಾದ ಆಕಸ್ಮಿಕ ಘಟನೆಗಳ ಶ್ರೇಣಿಯ ಮೂಲಕ ಸೃಷ್ಟಿಯಾದವೋ? ಅಥವಾ “ಸರಳ ವಿವರಣೆ”ಯೇ ವೈಜ್ಞಾನಿಕವಾಗಿಯೂ ತಾರ್ಕಿಕವಾಗಿಯೂ ಇರುವುದೋ? ಅಂದರೆ, ಪಕ್ಷಿಗಳು ಮತ್ತು ಅವುಗಳ ಗರಿಗಳು ಅತಿ ಶ್ರೇಷ್ಠ ವಿವೇಕಿಯಾದ ನಿರ್ಮಾಣಿಕನಿಗೆ ಸಾಕ್ಷಿಕೊಡುತ್ತವೋ? ಸಾಕ್ಷ್ಯವು ತಾನೇ ಉತ್ತರ ಕೊಡುತ್ತದೆ.​—⁠ರೋಮಾಪುರ 1:20. (g 7/07)

[ಪಾದಟಿಪ್ಪಣಿ]

^ ಆ ಗರಿಯ ಪಳೆಯುಳಿಕೆಯು, ಒಂದು ಕಾಲದಲ್ಲಿ ಜೀವಿಸಿತ್ತು ಎಂದು ಕೆಲವೊಮ್ಮೆ ಹೇಳಲಾದ ಆರ್ಕಿಯಾಪ್ಟರಿಕ್ಸ್‌ ಎಂಬ ಜೀವಿಯದ್ದಾಗಿದೆ. ಇದನ್ನು ಈಗ ಜೀವಿಸುತ್ತಿರುವ ಪಕ್ಷಿಗಳ ವಂಶಾನುಕ್ರಮದಲ್ಲಿ “ಬಿಟ್ಟುಹೋಗಿರುವ ಕೊಂಡಿ” (missing link) ಎಂದು ಪ್ರಸ್ತುತಪಡಿಸಲಾಗಿದೆ. ಆದರೆ, ಇದನ್ನು ಈಗಿರುವ ಪಕ್ಷಿಗಳ ಪೂರ್ವಜ ಎಂದು ಹೆಚ್ಚಿನ ಪ್ರಾಚೀನ ಜೀವಶಾಸ್ತ್ರಜ್ಞರು ಪರಿಗಣಿಸುವುದಿಲ್ಲ.

[ಪುಟ 24ರಲ್ಲಿರುವ ಚೌಕ/ಚಿತ್ರ]

ಸುಳ್ಳು “ಸಾಕ್ಷ್ಯ”

ಪಕ್ಷಿಗಳು ಬೇರೆ ಜೀವಿಗಳಿಂದ ವಿಕಾಸಗೊಂಡವು ಎಂಬುದಕ್ಕೆ ರುಜುವಾತನ್ನು ಕೊಡುವ ಪಳೆಯುಳಿಕೆಯ “ಸಾಕ್ಷ್ಯ” ದೊರೆತಿದೆ ಎಂದು ಘಂಟಾಘೋಷ ಮಾಡಲಾಗಿತ್ತು. ಆದರೆ ಅನಂತರದ ದಿನದಲ್ಲಿ ಅದು ಸುಳ್ಳೆಂದು ಬಯಲಾಯಿತು. ಉದಾಹರಣೆಗೆ, ನ್ಯಾಷನಲ್‌ ಜಿಯಗ್ರಾಫಿಕ್‌ ಪತ್ರಿಕೆಯು 1999ರಲ್ಲಿ ಡೈನಾಸಾರ್‌ನ ಬಾಲವಿದ್ದು ಗರಿಗಳಿಂದ ಕೂಡಿದ್ದ ಒಂದು ಜೀವಿಯ ಪಳೆಯುಳಿಕೆಯ ಕುರಿತು ಲೇಖನವೊಂದನ್ನು ಪ್ರಕಟಿಸಿತ್ತು. “ಡೈನಾಸಾರ್‌ಗಳನ್ನು ಪಕ್ಷಿಗಳಿಗೆ ಜೋಡಿಸುವ ಜಟಿಲ ಸರಪಳಿಯಲ್ಲಿ ನಿಜವಾಗಿಯೂ ಬಿಟ್ಟುಹೋಗಿರುವ ಕೊಂಡಿ” ಆ ಜೀವಿಯಾಗಿದೆ ಎಂದು ಆ ಪತ್ರಿಕೆಯು ಘೋಷಿಸಿತ್ತು. ಆದರೆ, ಆ ಪಳೆಯುಳಿಕೆಯು ಸುಳ್ಳೆಂದು ಅನಂತರ ಗೊತ್ತಾಯಿತು. ಅದರಲ್ಲಿ ಎರಡು ವಿಭಿನ್ನ ಪ್ರಾಣಿಗಳ ಪಳೆಯುಳಿಕೆಗಳನ್ನು ಒಂದಕ್ಕೊಂದು ಸೇರಿಸಲಾಗಿತ್ತು. ವಾಸ್ತವದಲ್ಲಿ ಅಂಥ ಒಂದು “ಬಿಟ್ಟುಹೋಗಿರುವ ಕೊಂಡಿ” ದೊರೆತೇ ಇರಲಿಲ್ಲ.

[ಕೃಪೆ]

O. Louis Mazzatenta/National Geographic Image Collection

[ಪುಟ 25ರಲ್ಲಿರುವ ಚಿತ್ರ]

ಪಕ್ಷಿ-ನೋಟ

ಗರಿಗಳ ಉಜ್ವಲವಾದ ವರ್ಣವೈವಿಧ್ಯಗಳು ಮಾನವರನ್ನು ಮಂತ್ರಮುಗ್ಧರನ್ನಾಗಿಸುತ್ತವೆ. ಆದರೆ ಇತರ ಪಕ್ಷಿಗಳಿಗೋ ಈ ಗರಿಗಳು ಇನ್ನಷ್ಟು ಆಸಕ್ತಿದಾಯಕ. ಕೆಲವು ಪಕ್ಷಿಗಳ ಕಣ್ಣುಗಳಲ್ಲಿ ಬಣ್ಣವನ್ನು ಗುರುತಿಸುವಂಥ ನಾಲ್ಕು ವಿಧದ ಶಂಕಾಕಾರದ ಜೀವಕೋಶಗಳಿವೆ. ಆದರೆ ಮನುಷ್ಯರಿಗಿರುವುದು ಕೇವಲ ಮೂರು ಮಾತ್ರ. ಈ ಹೆಚ್ಚಿನ ದೃಷ್ಟಿಸಾಧನವು ಪಕ್ಷಿಗಳಿಗೆ ನೇರಾಳಾತೀತ ಕಿರಣಗಳನ್ನು ನೋಡುವ ಸಾಮರ್ಥ್ಯವನ್ನು ಕೊಡುತ್ತದೆ. ಆದರೆ ಈ ಕಿರಣಗಳು ಮಾನವ ಕಣ್ಣಿಗೆ ಗೋಚರಿಸುವುದಿಲ್ಲ. ಆದುದರಿಂದಲೇ ಕೆಲವು ಬಗೆಯ ಗಂಡು-ಹೆಣ್ಣು ಪಕ್ಷಿಗಳು ಮಾನವರ ಕಣ್ಣಿಗೆ ಒಂದೇ ರೀತಿ ಇರುವಂತೆ ಕಾಣುತ್ತವೆ. ಆದರೆ, ಗಂಡು ಪಕ್ಷಿಯ ಗರಿಗಳು ಹೆಣ್ಣು ಪಕ್ಷಿಯ ಗರಿಗಳಿಗಿಂತ ವಿಭಿನ್ನ ರೀತಿಯಲ್ಲಿ ನೇರಾಳಾತೀತ ಕಿರಣಗಳನ್ನು ಪ್ರತಿಫಲಿಸುತ್ತವೆ. ಈ ವ್ಯತ್ಯಾಸವನ್ನು ಪಕ್ಷಿಗಳು ಗುರತಿಸಬಲ್ಲವು ಮತ್ತು ತಮ್ಮ ಭಾವಿ ಸಂಗಾತಿಗಳನ್ನು ಕಂಡುಕೊಳ್ಳಲು ಅದು ಅವುಗಳಿಗೆ ನೆರವಾಗಬಹುದು.

[ಪುಟ 23ರಲ್ಲಿರುವ ರೇಖಾಕೃತಿ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಬಾರ್ಬ್‌

ಬಾರ್ಬ್ಯೂಲ್‌

ರೇಕಿಸ್‌

[ಪುಟ 24ರಲ್ಲಿರುವ ಚಿತ್ರ]

ಮೈ ಹೊದಿಕೆ ಗರಿಗಳು

[ಪುಟ 24ರಲ್ಲಿರುವ ಚಿತ್ರ]

ಫಿಲೋಪ್ಲೂಮ್‌

[ಪುಟ 25ರಲ್ಲಿರುವ ಚಿತ್ರ]

ತುಪ್ಪುಳು ಗರಿ

[ಪುಟ 25ರಲ್ಲಿರುವ ಚಿತ್ರ]

ಒಳಮೈ ಗರಿ

[ಪುಟ 25ರಲ್ಲಿರುವ ಚಿತ್ರ]

ಕಡಲ ಹಕ್ಕಿ (ಗ್ಯಾನಿಟ್‌)