ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿತ್ಯಕ್ರಮಗಳನ್ನು ಗೊತ್ತುಪಡಿಸಿ ಪಾಲಿಸಿರಿ

ನಿತ್ಯಕ್ರಮಗಳನ್ನು ಗೊತ್ತುಪಡಿಸಿ ಪಾಲಿಸಿರಿ

ಹೆಜ್ಜೆ 5

ನಿತ್ಯಕ್ರಮಗಳನ್ನು ಗೊತ್ತುಪಡಿಸಿ ಪಾಲಿಸಿರಿ

ಏಕೆ ಅಗತ್ಯ? ನಿತ್ಯಕ್ರಮಗಳು ಪ್ರೌಢ ಜೀವನದ ಒಂದು ಪ್ರಧಾನ ಭಾಗವಾಗಿವೆ. ಸಾಮಾನ್ಯವಾಗಿ ಕೆಲಸ, ಆರಾಧನೆ ಮತ್ತು ವಿನೋದಾವಳಿಗಳೂ ನಿತ್ಯಕ್ರಮದಲ್ಲಿ ನಡೆಯುತ್ತವೆ. ಒಂದುವೇಳೆ ಹೆತ್ತವರು ತಮ್ಮ ಮಕ್ಕಳಿಗೆ ಸಮಯವನ್ನು ಸಂಘಟಿಸುವುದು ಮತ್ತು ಒಂದು ಕಾರ್ಯತಖ್ತೆಗೆ ಅಂಟಿಕೊಳ್ಳುವುದು ಹೇಗೆಂಬುದನ್ನು ಕಲಿಸದೇ ಹೋದರೆ ಮಕ್ಕಳಿಗೇ ನಷ್ಟವಾಗುವುದು. “ನಿಯಮಗಳು ಮತ್ತು ಸಮಯ-ಸಂಘಟನೆ ಮಗುವಿಗೆ ಸುರಕ್ಷೆಯ ಭಾವನೆಯನ್ನು ಕೊಡುತ್ತದೆ ಮತ್ತು ಸ್ವನಿಯಂತ್ರಣ ಹಾಗೂ ಸ್ವಾವಲಂಬನೆಯನ್ನು ಕಲಿಸಿಕೊಡುತ್ತದೆಂದು ಅಧ್ಯಯನಗಳು ತೋರಿಸುತ್ತವೆ” ಎಂದು ಮನಶ್ಶಾಸ್ತ್ರದ ಪ್ರೊಫೆಸರರಾದ ಡಾಕ್ಟರ್‌ ಲಾರೆನ್ಸ್‌ ಸ್ಟೀನ್‌ಬರ್ಗ್‌ ಹೇಳುತ್ತಾರೆ.

ಸಮಸ್ಯೆ: ಜೀವನಗತಿಯು ಅತಿವೇಗದಿಂದ ಸಾಗುತ್ತಿದೆ. ಬೆಳಗ್ಗೆ ಬೇಗ ಕೆಲಸಕ್ಕೆ ಹೋಗುವ ಅನೇಕ ಹೆತ್ತವರು ಮನೆಗೆ ಬರುವಾಗ ರಾತ್ರಿಯಾಗುತ್ತದೆ. ಹೀಗಿರುವುದರಿಂದ ತಮ್ಮ ಮಕ್ಕಳೊಂದಿಗೆ ಕ್ರಮವಾಗಿ ಕಳೆಯಲು ಸಿಗುವ ಸಮಯ ಕೊಂಚ. ಆದುದರಿಂದ ನಿತ್ಯಕ್ರಮವನ್ನು ಸ್ಥಾಪಿಸಿ, ಅದನ್ನು ಪಾಲಿಸಲು ಸ್ವ-ಶಿಸ್ತು ಹಾಗೂ ದೃಢಸಂಕಲ್ಪ ಅಗತ್ಯ. ಹೀಗೆ, ಮಗು ಆರಂಭದಲ್ಲಿ ನಿತ್ಯಕ್ರಮವನ್ನು ಪಾಲಿಸಲು ತೋರಿಸುವ ವಿರೋಧವನ್ನು ಜಯಿಸಸಾಧ್ಯವಿದೆ.

ಪರಿಹಾರ: “ಎಲ್ಲವೂ ಮರ್ಯಾದೆಯಿಂದಲೂ ಕ್ರಮದಿಂದಲೂ ನಡೆಯಲಿ” ಎಂಬ ಬೈಬಲ್‌ ಸಲಹೆಯ ಮೂಲತತ್ತ್ವವನ್ನು ಅನ್ವಯಿಸಿರಿ. (1 ಕೊರಿಂಥ 14:40) ಉದಾಹರಣೆಗಾಗಿ, ತಮ್ಮ ಮಕ್ಕಳು ಅತಿ ಚಿಕ್ಕವರಿರುವಾಗಲೇ ರಾತ್ರಿ ಇಂತಿಷ್ಟು ಸಮಯಕ್ಕೆ ಮಲಗಬೇಕು ಎಂದು ಅನೇಕ ಹೆತ್ತವರು ವಿವೇಕಯುತವಾಗಿ ನಿರ್ಧರಿಸುತ್ತಾರೆ. ಆದರೆ ಮಲಗುವ ಹೊತ್ತನ್ನು ಅವರು ಆಸಕ್ತಿಕರವನ್ನಾಗಿ ಮಾಡಬೇಕು. ಇಬ್ಬರು ಚಿಕ್ಕ ಹುಡುಗಿಯರ ತಾಯಿಯಾದ ಗ್ರೀಸ್‌ ದೇಶದ ಟಾಟ್ಯಾನ ಹೇಳುವುದು: “ಮಕ್ಕಳು ಹಾಸಿಗೆಯಲ್ಲಿ ಮಲಗಿರುವಾಗ ನಾನವರ ಮೈದಡವುತ್ತಾ, ಅವರು ಶಾಲೆಯಲ್ಲಿದ್ದಾಗ ನಾನು ದಿನವಿಡೀ ಏನೇನು ಮಾಡಿದೆನೆಂದು ಹೇಳುತ್ತೇನೆ. ನಂತರ, ಅವರು ಆ ದಿನ ಏನೇನು ಮಾಡಿದರೆಂದು ಹೇಳಲಿಚ್ಛಿಸುತ್ತಾರೋ ಎಂದು ಕೇಳುತ್ತೇನೆ. ಅವರ ಮನಸ್ಸು ಹಾಯಾಗಿರುವುದರಿಂದ ಎಲ್ಲವನ್ನೂ ಮನಬಿಚ್ಚಿ ಹೇಳುತ್ತಾರೆ.”

ಟಾಟ್ಯಾನಳ ಗಂಡ ಕೊಸ್ಟಾಸ್‌ ತನ್ನ ಪುತ್ರಿಯರಿಗೆ ಮಲಗುವ ಹೊತ್ತಿನಲ್ಲಿ ಕಥೆಗಳನ್ನು ಓದಿಹೇಳುತ್ತಾನೆ. “ಅವರು ಪ್ರತಿಯೊಂದು ಕಥೆಯ ಕುರಿತಾಗಿ ಏನಾದರೂ ಹೇಳುತ್ತಾರೆ. ಎಷ್ಟೋ ಸಲ ಈ ಚರ್ಚೆಗಳು ಅವರಿಗಿರುವ ವೈಯಕ್ತಿಕ ಸಮಸ್ಯೆಗಳತ್ತ ಸಾಗುತ್ತವೆ. ಅವರಿಗೆ ಏನಾದರೂ ಸಮಸ್ಯೆಗಳಿವೆಯೊ ಎಂದು ನಾನು ಒತ್ತಾಯಿಸಿ ಕೇಳುವಲ್ಲಿ ಅವರು ಬಾಯಿಬಿಡುವುದೇ ಇಲ್ಲ.” ಮಕ್ಕಳು ದೊಡ್ಡವರಾಗುತ್ತಾ ಹೋದಂತೆ, ಮಲಗುವ ಹೊತ್ತನ್ನು ಅವರ ವಯಸ್ಸಿಗೆ ತಕ್ಕಂತೆ ಹೊಂದಿಸಿಕೊಳ್ಳುವುದು ಖಂಡಿತವಾಗಿಯೂ ಸೂಕ್ತ. ಈ ನಿತ್ಯಕ್ರಮಕ್ಕೆ ನೀವು ಅಂಟಿಕೊಂಡರೆ ಮಾತ್ರ ನಿಮ್ಮ ಮಕ್ಕಳು ಮಲಗುವ ಹೊತ್ತನ್ನು ನಿಮ್ಮೊಂದಿಗೆ ಮಾತಾಡಲು ಬಳಸುತ್ತಾ ಇರುವರು.

ಇದಕ್ಕೆ ಕೂಡಿಸುತ್ತಾ, ದಿನಕ್ಕೆ ಒಮ್ಮೆಯಾದರೂ ಕುಟುಂಬವಾಗಿ ಊಟಮಾಡುವ ನಿತ್ಯಕ್ರಮವಿರುವುದು ಒಳ್ಳೇದು. ಈ ನಿತ್ಯಕ್ರಮವನ್ನು ಸ್ಥಾಪಿಸಲಿಕ್ಕಾಗಿ, ಊಟದ ಸಮಯಗಳಲ್ಲಿ ಸ್ವಲ್ಪ ಏರುಪೇರು ಮಾಡುತ್ತಾ ಇರಬೇಕಾದೀತು. ಇಬ್ಬರು ಹುಡುಗಿಯರ ತಂದೆ ಚಾರ್ಲ್ಸ್‌ ಹೇಳುವುದು: “ಕೆಲವೊಮ್ಮೆ ನಾನು ಕೆಲಸದಿಂದ ಬರುವಾಗ ತಡವಾಗುತ್ತದೆ. ಆಗ ನನ್ನ ಹೆಂಡತಿ, ನಾನು ಮನೆಗೆ ಬರುವ ತನಕ ತುಸು ಹೆಚ್ಚು ಸಮಯ ಕಾಯುವಂತೆ ಮಕ್ಕಳಿಗೆ ಸ್ವಲ್ಪ ತಿಂಡಿ ಕೊಡುತ್ತಾಳೆ. ಕುಟುಂಬವು ಒಟ್ಟಾಗಿ ಊಟಮಾಡಲು ಸಾಧ್ಯವಾಗುವಂತೆ ಆಕೆ ಯಾವಾಗಲೂ ಪ್ರತಿಯೊಬ್ಬರೂ ಕಾಯುವಂತೆ ಮಾಡುತ್ತಾಳೆ. ಊಟದ ಸಮಯದಲ್ಲಿ ನಾವು ಇಡೀ ದಿನ ನಡೆದಂಥ ವಿಷಯಗಳ ಕುರಿತು ಚರ್ಚಿಸುತ್ತೇವೆ, ಬೈಬಲ್‌ ವಚನವೊಂದನ್ನು ಪರಿಶೀಲಿಸುತ್ತೇವೆ, ಸಮಸ್ಯೆಗಳ ಕುರಿತು ಮಾತಾಡುತ್ತೇವೆ ಮತ್ತು ಯಾವುದಾದರೂ ಮೋಜಿನ ಸಂಗತಿಯನ್ನು ಹೇಳಿ ನಗಾಡುತ್ತೇವೆ. ಈ ನಿತ್ಯಕ್ರಮವು ನಮ್ಮ ಕುಟುಂಬದ ಸಂತೋಷಕ್ಕೆ ಎಷ್ಟು ಮಹತ್ವದ್ದಾಗಿದೆ ಎಂದು ವರ್ಣಿಸಲು ಮಾತೇ ಸಾಲದು.”

ಈ ಹೆಜ್ಜೆಯಲ್ಲಿ ನುರಿತವರಾಗಬೇಕಾದರೆ, ಭೌತಿಕ ಸ್ವತ್ತುಗಳ ಬೆನ್ನಟ್ಟುವಿಕೆಯು ಕುಟುಂಬದ ನಿತ್ಯಕ್ರಮಕ್ಕೆ ಅಡ್ಡಬರುವಂತೆ ಬಿಡಬೇಡಿ. ‘ಉತ್ತಮ’ ಇಲ್ಲವೆ ಹೆಚ್ಚು ಪ್ರಮುಖ ‘ಕಾರ್ಯಗಳು ಯಾವವೆಂದು ವಿವೇಚಿಸಿ’ ತಿಳಿದುಕೊಳ್ಳುವಂತೆ ಬೈಬಲ್‌ ಕೊಡುವ ಬುದ್ಧಿವಾದವನ್ನು ಅನ್ವಯಿಸಿರಿ.​—⁠ಫಿಲಿಪ್ಪಿ 1:⁠10.

ಹೆತ್ತವರು ತಮ್ಮ ಮಕ್ಕಳೊಂದಿಗಿನ ಸಂವಾದವನ್ನು ಉತ್ತಮಗೊಳಿಸಲಿಕ್ಕಾಗಿ ಇನ್ನೇನು ಮಾಡಬಲ್ಲರು? (g 8/07)

[ಪುಟ 7ರಲ್ಲಿರುವ ಸಂಕ್ಷಿಪ್ತ ವಿವರಣೆ]

“ಎಲ್ಲವೂ ಮರ್ಯಾದೆಯಿಂದಲೂ ಕ್ರಮದಿಂದಲೂ ನಡೆಯಲಿ.” ​—⁠1 ಕೊರಿಂಥ 14:⁠40