ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ಅಧಿಕಾರವನ್ನು ಬಳಸಿರಿ

ನಿಮ್ಮ ಅಧಿಕಾರವನ್ನು ಬಳಸಿರಿ

ಹೆಜ್ಜೆ 3

ನಿಮ್ಮ ಅಧಿಕಾರವನ್ನು ಬಳಸಿರಿ

ಏಕೆ ಅಗತ್ಯ? “ಕೆಲವು ಹೆತ್ತವರು ಪ್ರೀತಿತೋರಿಸುತ್ತಾರೆ ಆದರೆ ಅದೇ ಸಮಯದಲ್ಲಿ ತಮ್ಮ ಅಧಿಕಾರವನ್ನು ಬಳಸುತ್ತಾರೆ. ಅಂದರೆ ತಮ್ಮ ಮಕ್ಕಳ ಮೇಲೆ ಮಮತೆಯಿದ್ದರೂ ಅವರಿಗಾಗಿ ದೃಢವಾದ ಮಿತಿಗಳನ್ನೂ ಇಡುತ್ತಾರೆ. ಇಂಥವರ ಮಕ್ಕಳು ವಿದ್ಯಾಭ್ಯಾಸದಲ್ಲಿ ಮುಂದಿರುತ್ತಾರೆ, ಜನರೊಂದಿಗೆ ಬೆರೆಯುವ ಉತ್ತಮ ಕೌಶಲಗಳನ್ನು ಹೊಂದಿರುತ್ತಾರೆ, ಆತ್ಮವಿಶ್ವಾಸವುಳ್ಳವರಾಗಿರುತ್ತಾರೆ ಮತ್ತು ಹೆಚ್ಚು ಸಂತೋಷದಿಂದಿರುತ್ತಾರೆ. ಇಂಥ ಮಕ್ಕಳು, ತೀರ ಹೆಚ್ಚು ಸಲಿಗೆಕೊಟ್ಟ ಇಲ್ಲವೇ ವಿಪರೀತವಾಗಿ ಕಠೋರವಾಗಿದ್ದ ಹೆತ್ತವರ ಮಕ್ಕಳಿಗಿಂತಲೂ ಉತ್ತಮರಾಗಿರುತ್ತಾರೆ” ಎಂದು ಅಧ್ಯಯನಗಳು ತೋರಿಸುತ್ತವೆ ಎಂಬುದಾಗಿ ಪೇರೆಂಟ್ಸ್‌ ಪತ್ರಿಕೆಯು ಹೇಳುತ್ತದೆ.

ಸಮಸ್ಯೆ: ಶೈಶವದಿಂದ ಹಿಡಿದು ಹದಿವಯಸ್ಸಿನ ವರೆಗೆ ಮಕ್ಕಳು ತಮ್ಮ ಮೇಲೆ ನಿಮಗಿರುವ ಅಧಿಕಾರವನ್ನು ಪ್ರತಿರೋಧಿಸುತ್ತಾ ಇರುವರು. “ಹೆತ್ತವರು ತಮ್ಮ ಅಧಿಕಾರವನ್ನು ಬಳಸಲು ಯಾವಾಗ ಹೆದರುತ್ತಾರೆ ಮತ್ತು ಯಾವಾಗ ತಮಗೆ ಬಾಗುತ್ತಾರೆ ಎಂಬುದನ್ನು ಮಕ್ಕಳು ಬೇಗನೇ ತಿಳಿದುಕೊಳ್ಳುತ್ತಾರೆ” ಎಂದು ಪೇರೆಂಟ್‌ ಪವರ್‌! ಎಂಬ ಪುಸ್ತಕದ ಕರ್ತೃವಾದ ಜಾನ್‌ ರೋಸ್‌ಮಂಡ್‌ ಬರೆಯುತ್ತಾರೆ. “ಯಾರ ಅಧಿಕಾರ ನಡೆಯಬೇಕೆಂಬ ಪ್ರಶ್ನೆ ಎದ್ದಾಗ ಒಂದುವೇಳೆ ಹೆತ್ತವರು ನಿಯಂತ್ರಣ ವಹಿಸದೇ ಹೋದರೆ, ಮಕ್ಕಳೇ ಅದನ್ನು ಸಲೀಸಾಗಿ ಕಸಿದುಕೊಳ್ಳುತ್ತಾರೆ” ಎಂದವರು ಹೇಳುತ್ತಾರೆ.

ಪರಿಹಾರ: ನಿಮ್ಮ ಅಧಿಕಾರವನ್ನು ಬಳಸಿದರೆ ನಿಮ್ಮ ಮಕ್ಕಳು ನಿಮ್ಮಿಂದ ದೂರವಾಗುವರು ಇಲ್ಲವೆ ಎದೆಗುಂದುವರೆಂದು ಹೆದರಬೇಡಿ. ಕುಟುಂಬ ಜೀವನದ ಮೂಲಕರ್ತನಾದ ಯೆಹೋವ ದೇವರು, ಕುಟುಂಬವು ಹೇಗೆ ನಡೆಯಬೇಕೆಂದು ತಿಳಿಸುವ ಹಕ್ಕನ್ನು ಮಕ್ಕಳಿಗೆ ಕೊಡುವುದಿಲ್ಲ. ಬದಲಾಗಿ, ಆತನು ಹೆತ್ತವರನ್ನು ಅಧಿಕಾರದ ಸ್ಥಾನಕ್ಕೆ ನೇಮಿಸುತ್ತಾನೆ ಮತ್ತು ಮಕ್ಕಳಿಗೆ ಹೀಗೆ ಅಪ್ಪಣೆ ಕೊಡುತ್ತಾನೆ: “ನಿಮ್ಮ ತಂದೆತಾಯಿಗಳ ಮಾತನ್ನು ಕೇಳಬೇಕು.”​—⁠ಎಫೆಸ 3:14, 15; 6:1-4.

ನೀವು ದಬ್ಬಾಳಿಕೆಮಾಡದೆ ನಿಮ್ಮ ಅಧಿಕಾರವನ್ನು ಬಳಸಬಲ್ಲಿರಿ. ಹೇಗೆ? ಯೆಹೋವನ ಮಾದರಿಯನ್ನು ಅನುಸರಿಸುವ ಮೂಲಕವೇ. ತನ್ನ ಭೂಮಕ್ಕಳು ಆತನ ಚಿತ್ತವನ್ನು ಮಾಡಬೇಕೆಂದು ಬಲವಂತಮಾಡುವ ಶಕ್ತಿ ಆತನಿಗಿದೆ. ಆದರೆ ಆತನು ಹಾಗೆ ಮಾಡದೆ, ನಮ್ಮ ಸದ್ಗುಣಗಳೆಡೆಗೆ ಗಮನಸೆಳೆದು ನಾವು ವಿಧೇಯರಾಗುವಂತೆ ಕೇಳಿಕೊಳ್ಳುತ್ತಾನೆ. ಆತನ ವಾಕ್ಯವು ಹೀಗನ್ನುತ್ತದೆ: “ನೀನು ನನ್ನ ಆಜ್ಞೆಗಳನ್ನು ಕೇಳಿದ್ದರೆ ಎಷ್ಟೋ ಚೆನ್ನಾಗಿತ್ತು! ನಿನ್ನ ಸುಖವು ದೊಡ್ಡ ನದಿಯಂತೆಯೂ ನಿನ್ನ ಕ್ಷೇಮವು ಸಮುದ್ರದ ಅಲೆಗಳ ಹಾಗೂ ಇರುತ್ತಿದ್ದವು.” (ಯೆಶಾಯ 48:18) ನಾವು ಭೀತಿಯಿಂದಲ್ಲ ಬದಲಾಗಿ ಆತನ ಮೇಲಣ ಪ್ರೀತಿಯಿಂದಾಗಿ ವಿಧೇಯರಾಗಬೇಕೆಂದು ಯೆಹೋವನು ಬಯಸುತ್ತಾನೆ. (1 ಯೋಹಾನ 5:⁠3) ಆತನು ನಮ್ಮಿಂದ ಅಪೇಕ್ಷಿಸುವಂಥ ವಿಷಯಗಳು ನ್ಯಾಯಸಮ್ಮತವಾಗಿವೆ ಮತ್ತು ನಾವಾತನ ನೈತಿಕ ಮಟ್ಟಗಳಿಗನುಸಾರ ಬದುಕುವಲ್ಲಿ ಪ್ರಯೋಜನ ಹೊಂದುವೆವೆಂದು ಆತನಿಗೆ ತಿಳಿದಿದೆ.​—⁠ಕೀರ್ತನೆ 19:​7-11.

ಹೆತ್ತವರಾದ ನಿಮಗಿರುವ ಅಧಿಕಾರವನ್ನು ಸಮತೂಕದಿಂದ ಬಳಸಲು ಬೇಕಾದ ಭರವಸೆಯನ್ನು ನೀವು ಹೇಗೆ ಗಳಿಸಬಲ್ಲಿರಿ? ಮೊದಲನೆಯದಾಗಿ, ನಿಮ್ಮ ಅಧಿಕಾರವನ್ನು ನೀವು ಬಳಸಲೇಬೇಕೆಂದು ದೇವರು ಅವಶ್ಯಪಡಿಸುತ್ತಾನೆ ಎಂಬ ಮನವರಿಕೆ ನಿಮಗಿರಬೇಕು. ಎರಡನೆಯದಾಗಿ, ದೇವರ ನೈತಿಕ ಮಟ್ಟಗಳಿಗನುಸಾರ ಜೀವಿಸುವುದು ನಿಮಗೂ ನಿಮ್ಮ ಮಕ್ಕಳಿಗೂ ಅತ್ಯುತ್ತಮವೆಂಬ ನಿಶ್ಚಯ ನಿಮಗಿರಬೇಕು.​—⁠ರೋಮಾಪುರ 12:⁠2.

ಆದರೆ ನಿಮ್ಮ ಅಧಿಕಾರವನ್ನು ಬಳಸಲು ನೀವು ನಿರ್ದಿಷ್ಟವಾಗಿ ಏನು ಮಾಡಬೇಕು? (g 8/07)

[ಪುಟ 5ರಲ್ಲಿರುವ ಸಂಕ್ಷಿಪ್ತ ವಿವರಣೆ]

“ನಿಮ್ಮ ಮಕ್ಕಳಿಗೆ ಶಿಸ್ತು ಕೊಡಿರಿ . . . ಅವರು ನಿಮ್ಮ ಹೃದಯಕ್ಕೆ ಹರ್ಷ ತರುವರು.” ​—⁠ಜ್ಞಾನೋಕ್ತಿ 29:​17, ನ್ಯೂ ರಿವೈಸ್ಡ್‌ ಸ್ಟ್ಯಾಂಡರ್ಡ್‌ ವರ್ಷನ್‌