ಮನೆಯಲ್ಲಿ ಪ್ರೀತಿಯ ಪರಿಸರ ಸೃಷ್ಟಿಸಿ
ಹೆಜ್ಜೆ 2
ಮನೆಯಲ್ಲಿ ಪ್ರೀತಿಯ ಪರಿಸರ ಸೃಷ್ಟಿಸಿ
ಏಕೆ ಅಗತ್ಯ? ಮಕ್ಕಳಿಗೆ ಪ್ರೀತಿ ಬೇಕು. ಅದಿಲ್ಲದಿದ್ದರೆ ಅವರು ಮುದುರಿಹೋಗುತ್ತಾರೆ. 1950ರ ದಶಕದಲ್ಲಿ, ಮಾನವಶಾಸ್ತ್ರಜ್ಞರಾದ ಎಮ್.ಎಫ್. ಆ್ಯಶ್ಲೀ ಮೊಂಟಗು ಬರೆದುದು: “ಮಾನವನೆಂಬ ಜೀವಿಯ ಬೆಳವಣಿಗೆಗೆ ಅತೀ ಆವಶ್ಯಕ ಪೌಷ್ಟಿಕಾಂಶವು ಪ್ರೀತಿ; ಒಳ್ಳೇ ಆರೋಗ್ಯದ ಮೂಲವೂ ಪ್ರೀತಿಯೇ. ಇದು ವಿಶೇಷವಾಗಿ ಜೀವನದ ಮೊದಲ ಆರು ವರ್ಷಗಳಲ್ಲಿ ಸಿಗಬೇಕು.” ಮೊಂಟಗು ಈ ತೀರ್ಮಾನಕ್ಕೆ ಬಂದರು: “ಮಕ್ಕಳಿಗೆ ಸಿಗಬೇಕಾದ ಪ್ರೀತಿಯ ಪಥ್ಯವು ಕಡಿಮೆಯಾದರೆ ಪರಿಣಾಮಗಳು ಹಾನಿಕರವಾಗಿರುತ್ತವೆ.” ಅವರ ಈ ತೀರ್ಮಾನವನ್ನು ಆಧುನಿಕ ಸಂಶೋಧಕರು ಸಮ್ಮತಿಸುತ್ತಾರೆ.
ಸಮಸ್ಯೆ: ಈ ಪ್ರೀತಿರಹಿತವಾದ ಸ್ವಾರ್ಥ ಲೋಕದಲ್ಲಿನ ಜೀವನವು ಕುಟುಂಬ ಬಂಧಗಳ ಮೇಲೆ ಒತ್ತಡ ತರುತ್ತದೆ. (2 ತಿಮೊಥೆಯ 3:1-5) ಮಕ್ಕಳನ್ನು ಬೆಳೆಸುವ ಆರ್ಥಿಕ ಹಾಗೂ ಭಾವನಾತ್ಮಕ ಒತ್ತಡಗಳಿಂದಾಗಿ ವೈವಾಹಿಕ ಸಮಸ್ಯೆಗಳು ಹೆಚ್ಚುತ್ತಿರುವುದನ್ನು ದಂಪತಿಗಳು ಕಾಣಬಹುದು. ಉದಾಹರಣೆಗಾಗಿ, ಒಂದು ದಂಪತಿ ಸರಿಯಾಗಿ ಸಂವಾದಿಸುವುದಿಲ್ಲ ಎಂದಿಟ್ಟುಕೊಳ್ಳಿ. ತಮ್ಮ ಮಕ್ಕಳನ್ನು ಹೇಗೆ ಶಿಸ್ತುಗೊಳಿಸಬೇಕು ಮತ್ತು ಅವರ ಒಳ್ಳೇ ನಡತೆಗೆ ಹೇಗೆ ಪ್ರತಿಫಲ ಕೊಡಬೇಕು ಎಂಬುದರ ಬಗ್ಗೆ ಅವರಲ್ಲಿ ಭಿನ್ನಾಭಿಪ್ರಾಯಗಳೇಳುವಾಗ ಅವರ ನಡುವಿನ ಟೆನ್ಶನ್ ಇನ್ನಷ್ಟು ಹೆಚ್ಚಾಗಬಲ್ಲದು.
ಪರಿಹಾರ: ಇಡೀ ಕುಟುಂಬವು ಕ್ರಮವಾಗಿ ಒಟ್ಟುಗೂಡಿ ಸಮಯ ಕಳೆಯಲು ಯೋಜಿಸಿರಿ. ದಂಪತಿಗಳು ಸಹ ಏಕಾಂತವಾಗಿ ಪರಸ್ಪರರೊಂದಿಗೆ ಸಮಯ ಕಳೆಯಲು ಯೋಜಿಸಬೇಕು. (ಆಮೋಸ 3:3) ಮಕ್ಕಳು ನಿದ್ದೆಹೋದ ಬಳಿಕ ಸಿಗುವ ಸಮಯವನ್ನು ವಿವೇಕಯುತವಾಗಿ ಬಳಸಿರಿ. ಈ ಅಮೂಲ್ಯ ಕ್ಷಣಗಳನ್ನು ಟಿ.ವಿ. ನುಂಗಿಬಿಡುವಂತೆ ಬಿಡಬೇಡಿ. ಪರಸ್ಪರರಿಗಾಗಿ ಪ್ರೀತಿಯನ್ನು ಆಗಾಗ್ಗೆ ವ್ಯಕ್ತಪಡಿಸುವ ಮೂಲಕ ನಿಮ್ಮ ವೈವಾಹಿಕ ಜೀವನದಲ್ಲಿ ಪ್ರಣಯವನ್ನು ಜೀವಂತವಾಗಿರಿಸಿ. (ಜ್ಞಾನೋಕ್ತಿ 25:11; ಪರಮ ಗೀತ 4:7-10) ‘ಯಾವಾಗಲೂ ತಪ್ಪುಹುಡುಕುವ’ ಬದಲು, ಪ್ರತಿದಿನವೂ ನಿಮ್ಮ ಬಾಳಸಂಗಾತಿಯನ್ನು ಪ್ರಶಂಸಿಸಲು ಅವಕಾಶಗಳನ್ನು ಹುಡುಕಿರಿ.—ಕೀರ್ತನೆ 103:9, 10; ಜ್ಞಾನೋಕ್ತಿ 31:29.
‘ನಿನ್ನನ್ನು ಪ್ರೀತಿಸುತ್ತೇನೆ’ ಎಂದು ನಿಮ್ಮ ಮಕ್ಕಳಿಗೆ ಆಗಾಗ್ಗೆ ಹೇಳಿ. ಇದನ್ನು ಮಾಡುವುದರಲ್ಲಿ ಯೆಹೋವ ದೇವರು ಹೆತ್ತವರಿಗಾಗಿ ಮಾದರಿಯನ್ನಿಟ್ಟನು. ತನ್ನ ಮಗನಾದ ಯೇಸುವಿನ ಮೇಲೆ ಆತನಿಗಿದ್ದ ವಾತ್ಸಲ್ಯವನ್ನು ಆತನು ಬಹಿರಂಗವಾಗಿ ಮಾತುಗಳಲ್ಲಿ ವ್ಯಕ್ತಪಡಿಸಿದನು. (ಮತ್ತಾಯ 3:17; 17:5) ಆಸ್ಟ್ರಿಯದಲ್ಲಿ ವಾಸಿಸುತ್ತಿರುವ ಫ್ಲೆಕ್ ಎಂಬ ತಂದೆಯೊಬ್ಬನು ಹೇಳುವುದು: “ಮಕ್ಕಳು ಸ್ವಲ್ಪಮಟ್ಟಿಗೆ ಕೆಲವೊಂದು ಹೂವುಗಳಂತಿದ್ದಾರೆಂದು ನಾನು ಕಂಡುಕೊಂಡಿದ್ದೇನೆ. ಈ ಹೂಗಿಡಗಳು, ಬೆಳಕು ಹಾಗೂ ಕಾವಿಗಾಗಿ ಸೂರ್ಯನ ಕಡೆಗೆ ತಿರುಗುವಂತೆಯೇ ಮಕ್ಕಳು ಸಹ ಪ್ರೀತಿಗಾಗಿ ಹಾಗೂ ತಾವು ಕುಟುಂಬದ ಅಮೂಲ್ಯ ಸದಸ್ಯರಾಗಿದ್ದೇವೆಂಬ ಎಂಬ ಭರವಸೆಯ ಮಾತಿಗಾಗಿ ತಮ್ಮ ಹೆತ್ತವರತ್ತ ನೋಡುತ್ತಾರೆ.”
ನೀವು ವಿವಾಹಿತರಾಗಿರಲಿ ಒಂಟಿ ಹೆತ್ತವರಾಗಿರಲಿ, ನಿಮ್ಮ ಕುಟುಂಬ ಸದಸ್ಯರಲ್ಲಿ ಪರಿಸ್ಪರರಿಗಾಗಿ ಹಾಗೂ ದೇವರಿಗಾಗಿ ಪ್ರೀತಿಯನ್ನು ಬೆಳೆಸಲು ನೀವು ಸಹಾಯಮಾಡಿದರೆ ನಿಮ್ಮ ಸಂಸಾರವು ಉತ್ತಮಗೊಳ್ಳುವುದು.
ಆದರೆ ಹೆತ್ತವರಿಗಿರುವ ಅಧಿಕಾರದ ಬಳಕೆಯ ಕುರಿತಾಗಿ ದೇವರ ವಾಕ್ಯ ಏನನ್ನುತ್ತದೆ? (g 8/07)
[ಪುಟ 4ರಲ್ಲಿರುವ ಸಂಕ್ಷಿಪ್ತ ವಿವರಣೆ]
“[ಪ್ರೀತಿ] ಸಮಸ್ತವನ್ನು ಸಂಪೂರ್ಣ ಮಾಡುವ ಬಂಧವಾಗಿದೆ.”—ಕೊಲೊಸ್ಸೆ 3:14