ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಾದರಿ ಮೂಲಕ ಕಲಿಸಿರಿ

ಮಾದರಿ ಮೂಲಕ ಕಲಿಸಿರಿ

ಹೆಜ್ಜೆ 7

ಮಾದರಿ ಮೂಲಕ ಕಲಿಸಿರಿ

ಏಕೆ ಅಗತ್ಯ? ಮಾತುಗಳು ಹೆಚ್ಚಾಗಿ ಮಾಹಿತಿಯನ್ನು ಮಾತ್ರ ಕೊಡುತ್ತವೆ. ಆದರೆ ಒಬ್ಬನ ಕ್ರಿಯೆಗಳು, ಹೇಗೆ ವರ್ತಿಸಬೇಕೆಂಬುದನ್ನು ಬೇರೆಯವರಿಗೆ ಕಲಿಸಬಲ್ಲವು. ಉದಾಹರಣೆಗಾಗಿ, ಮಕ್ಕಳು ಗೌರವ ತೋರಿಸಬೇಕೆಂದೂ ಸತ್ಯವನ್ನೇ ಆಡಬೇಕೆಂದೂ ಹೆತ್ತವರು ಹೇಳಬಹುದು. ಆದರೆ ಅವರೇ ಪರಸ್ಪರ ಕಿರುಚಾಡುತ್ತಾ ಅಥವಾ ಮಕ್ಕಳ ಮೇಲೆ ರೇಗಾಡುತ್ತಾ ಇರುವುದಾದರೆ ಮತ್ತು ಅನನುಕೂಲ ಸ್ಥಿತಿಗಳಿಂದ ತಪ್ಪಿಸಿಕೊಳ್ಳಲಿಕ್ಕಾಗಿ ಸುಳ್ಳು ಹೇಳುವುದಾದರೆ, ದೊಡ್ಡವರು ನಡೆದುಕೊಳ್ಳಬೇಕಾದ ರೀತಿ ಇದೇ ಎಂದು ಮಕ್ಕಳಿಗೆ ಕಲಿಸಿಕೊಡುತ್ತಿದ್ದಾರೆ. ಹೆತ್ತವರು ಮಾಡಿದಂತೆಯೇ ಮಾಡುವುದು, “ಮಕ್ಕಳ ಕಲಿಕೆಯ ಅತ್ಯಂತ ಪ್ರಭಾವಶಾಲಿ ವಿಧಾನಗಳಲ್ಲಿ ಒಂದಾಗಿದೆ” ಎಂದು ಗ್ರಂಥಕರ್ತ ಡಾಕ್ಟರ್‌ ಸಾಲ್‌ ಸೆವಾರ್‌ ಹೇಳುತ್ತಾರೆ.

ಸಮಸ್ಯೆ: ಹೆತ್ತವರು ಅಪರಿಪೂರ್ಣರು. ಅಪೊಸ್ತಲ ಪೌಲನು ಬರೆದುದು: “ಎಲ್ಲರೂ ಪಾಪಮಾಡಿ ದೇವರ ಮಹಿಮೆಯನ್ನು ಹೊಂದದೆ ಹೋಗಿದ್ದಾರೆ.” (ರೋಮಾಪುರ 3:23) ನಮ್ಮ ಮಾತನ್ನು ನಿಯಂತ್ರಿಸುವ ಬಗ್ಗೆ ಶಿಷ್ಯ ಯಾಕೋಬನು ಬರೆದುದು: “ನಾಲಿಗೆಯನ್ನು ಯಾವ ಮಾನವನೂ ಹತೋಟಿಗೆ ತರಲಾರನು.” (ಯಾಕೋಬ 3:8) ಅಷ್ಟುಮಾತ್ರವಲ್ಲದೆ, ಮಕ್ಕಳು ತಮ್ಮ ಹೆತ್ತವರ ತಾಳ್ಮೆ ಎಷ್ಟಿದೆಯೆಂದು ಪರೀಕ್ಷಿಸುವುದು ಹೊಸ ಸಂಗತಿಯೇನಲ್ಲ. ಇಬ್ಬರು ಹೆಣ್ಣುಮಕ್ಕಳ ತಂದೆಯಾದ ಲ್ಯಾರಿ, ಪ್ರಶಾಂತಸ್ವಭಾವದವನೂ ತುಂಬ ಸಂಯಮವುಳ್ಳವನೂ ಆಗಿದ್ದಾನೆ. ಆದರೆ ಅವನು ಹೇಳಿದ್ದು: “ನನ್ನ ಮಕ್ಕಳು ಎಷ್ಟು ಬೇಗ ನನ್ನ ಕೋಪಕೆರಳಿಸಶಕ್ತರು ಎಂಬುದನ್ನು ನೋಡಿ ನನಗೇ ಆಶ್ಚರ್ಯವಾಯಿತು.”

ಪರಿಹಾರ: ನೀವು ಪರಿಪೂರ್ಣ ಮಾದರಿಗಳಾಗಲು ಅಲ್ಲ ಬದಲಾಗಿ ಒಳ್ಳೇ ಮಾದರಿಗಳಾಗಿರಲು ಪ್ರಯತ್ನಿಸಿರಿ. ಕೆಲವೊಮ್ಮೆ ನೀವು ಮಾಡುವ ತಪ್ಪುಗಳಿಂದ ಮಕ್ಕಳಿಗೆ ಒಂದು ಧನಾತ್ಮಕ ಪಾಠವನ್ನು ಕಲಿಸಿರಿ. ಇಬ್ಬರು ಹೆಣ್ಣುಮಕ್ಕಳ ತಂದೆಯಾದ ಕ್ರಿಸ್‌ ಹೇಳಿದ್ದು: “ಮಕ್ಕಳ ಮೇಲೆ ಸಿಟ್ಟುತೋರಿಸಿದಾಗಲೆಲ್ಲ ಇಲ್ಲವೇ ಅವರ ಮೇಲೆ ಪ್ರತಿಕೂಲ ಪರಿಣಾಮ ತಂದ ಒಂದು ಕೆಟ್ಟ ನಿರ್ಣಯವನ್ನು ನಾನು ಮಾಡಿದಾಗಲೆಲ್ಲ, ತಪ್ಪನ್ನು ಒಪ್ಪಿಕೊಂಡು ಕ್ಷಮೆಯಾಚಿಸುತ್ತಿದ್ದೆ. ಇದರಿಂದಾಗಿ, ಹೆತ್ತವರು ಸಹ ತಪ್ಪುಗಳನ್ನು ಮಾಡುತ್ತಾರೆ ಮತ್ತು ಎಲ್ಲರೂ ತಮ್ಮ ತಮ್ಮ ನಡತೆಯನ್ನು ಉತ್ತಮಗೊಳಿಸುತ್ತಾ ಇರುವ ಅಗತ್ಯವಿದೆ ಎಂಬುದನ್ನು ನನ್ನ ಮಕ್ಕಳು ಕಲಿತರು.” ಈ ಹಿಂದೆ ತಿಳಿಸಲಾಗಿರುವ ಕೋಸ್ಟಾಸ್‌ ಎಂಬವರು ಹೇಳುವುದು: “ನಾನು ಸಿಟ್ಟುತೋರಿಸಿದಾಗಲೆಲ್ಲ ಕ್ಷಮೆಯಾಚಿಸುತ್ತೇನೆ. ಇದರಿಂದ ನನ್ನ ಮಕ್ಕಳು ಸಹ, ಅವರು ತಪ್ಪು ಮಾಡುವಾಗ ಕ್ಷಮೆಕೇಳಲು ಕಲಿತಿರುವುದನ್ನು ನೋಡಿದ್ದೇನೆ.”

ಯೆಹೋವ ದೇವರು ಹೇಳುವುದು: “ತಂದೆಗಳೇ, ನಿಮ್ಮ ಮಕ್ಕಳಿಗೆ ಕೋಪವನ್ನೆಬ್ಬಿಸದೆ ಕರ್ತನಿಗೆ ಮೆಚ್ಚಿಗೆಯಾಗಿರುವ ಬಾಲಶಿಕ್ಷೆಯನ್ನೂ ಬಾಲೋಪದೇಶವನ್ನೂ ಮಾಡುತ್ತಾ ಅವರನ್ನು ಸಾಕಿ ಸಲಹಿರಿ.” (ಎಫೆಸ 6:4) ಅಧಿಕಾರವಿರುವ ಒಬ್ಬ ವ್ಯಕ್ತಿ ‘ಹೇಳುವುದೊಂದು ಮಾಡುವುದೊಂದಾದರೆ’ ಇದರಿಂದ ಮಕ್ಕಳಿಗೆ ವಯಸ್ಕರಷ್ಟೇ ಅಥವಾ ಅವರಿಗಿಂತಲೂ ಹೆಚ್ಚು ಸಿಟ್ಟುಬರುತ್ತದೆ. ಆದುದರಿಂದ ಪ್ರತಿಯೊಂದು ದಿನದ ಅಂತ್ಯದಲ್ಲಿ ಈ ಪ್ರಶ್ನೆಗಳನ್ನು ಕೇಳಿ: ಒಂದುವೇಳೆ ನಾನು ಇಡೀ ದಿನ ಒಂದೇ ಒಂದು ಮಾತನ್ನಾಡದೇ ಇರುತ್ತಿದ್ದಲ್ಲಿ, ಕೇವಲ ನನ್ನ ಕೃತ್ಯಗಳನ್ನು ನೋಡಿ ನನ್ನ ಮಕ್ಕಳು ಯಾವ ಪಾಠಗಳನ್ನು ಕಲಿಯುತ್ತಿದ್ದರು? ಅವು ನಾನು ಮಾತಿನಲ್ಲಿ ಕಲಿಸಲು ಪ್ರಯತ್ನಿಸುವಂಥದ್ದೇ ಪಾಠಗಳಾಗಿವೆಯೊ? (g 8/07)

[ಪುಟ 9ರಲ್ಲಿರುವ ಸಂಕ್ಷಿಪ್ತ ವಿವರಣೆ]

“ಮತ್ತೊಬ್ಬನಿಗೆ ಉಪದೇಶಮಾಡುವ ನೀನು ನಿನಗೆ ಉಪದೇಶಮಾಡಿಕೊಳ್ಳದೆ ಇದ್ದೀಯೋ?” ​—⁠ರೋಮಾಪುರ 2:⁠21

[ಪುಟ 9ರಲ್ಲಿರುವ ಚಿತ್ರಗಳು]

ಹೆತ್ತವರು ಕ್ಷಮೆಯಾಚಿಸುವಾಗ, ಮಕ್ಕಳು ಸಹ ಅದನ್ನು ಮಾಡಲು ಕಲಿಯುತ್ತಾರೆ