ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವನ್ವಾಟುವಿನಲ್ಲಿ ವಿಹಾರ

ವನ್ವಾಟುವಿನಲ್ಲಿ ವಿಹಾರ

ವನ್ವಾಟುವಿನಲ್ಲಿ ವಿಹಾರ

ನ್ಯೂ ಕ್ಯಾಲೆಡೋನಿಯದ ಎಚ್ಚರ! ಲೇಖಕರಿಂದ

ನೀವು ಮಾನಸಿಕ ಒತ್ತಡದಿಂದ ಬಳಲುತ್ತೀರೋ? ಎಲ್ಲಾದರೂ ಹೋಗಬೇಕೆಂದು ಅನಿಸುತ್ತಿದೆಯೋ? ಹಾಗಿರುವಲ್ಲಿ ಬಿಸಿಲು ತೊಯ್ದಿರುವ ಉಷ್ಣವಲಯದ ಒಂದು ದ್ವೀಪದಲ್ಲಿ ಹಾಯಾಗಿರುವುದನ್ನು ಊಹಿಸಿಕೊಳ್ಳಿ. ಹಸಿರು-ನೀಲಿ ನೀರಿನಲ್ಲಿ ಈಜುವುದನ್ನು, ಸೊಂಪಾದ ವರ್ಷಾರಣ್ಯದಲ್ಲಿ ಅಡ್ಡಾಡುವುದನ್ನು ಅಥವಾ ಸ್ಥಳಿಕ ಮೂಲನಿವಾಸಿಗಳೊಂದಿಗೆ ಬೆರೆಯುವುದನ್ನು ಕಲ್ಪಿಸಿಕೊಳ್ಳಿರಿ. ಇಂಥ ಆನಂದಧಾಮವು ಈಗಲೂ ಭೂಮಿಯ ಮೇಲೆ ಇರಸಾಧ್ಯವೇ? ಹೌದು! ಇದು ದೂರದ ವನ್ವಾಟು ದ್ವೀಪಗಳಲ್ಲಿದೆ.

ಆಸ್ಟ್ರೇಲಿಯ ಮತ್ತು ಫಿಜಿಯ ನಡುವೆ ಸರಿಸುಮಾರು ಅರ್ಧದಾರಿಯಲ್ಲಿ ವನ್ವಾಟು ನೆಲೆಸಿದೆ. ಅದು ಪೆಸಿಫಿಕ್‌ ಸಾಗರದ ನೈಋತ್ಯ ದಿಕ್ಕಿನಲ್ಲಿದ್ದು ಸುಮಾರು 80 ಚಿಕ್ಕ ದ್ವೀಪಗಳಿಂದ ಕೂಡಿದೆ. ಈ ಸ್ಥಳದಲ್ಲಿ ಭೂಮಿಯ ಹೊರಪದರದಲ್ಲಿರುವ ಬೃಹತ್‌ ಗಾತ್ರದ ಟೆಕ್ಟಾನಿಕ್‌ ಫಲಕಗಳು ಒಂದಕ್ಕೊಂದು ಢಿಕ್ಕಿಹೊಡೆದದ್ದರಿಂದ ನೀರಿನಡಿಯಲ್ಲೇ ತುಂಬ ಎತ್ತರವಾದ ಪರ್ವತಗಳು ನಿರ್ಮಾಣಗೊಂಡವು. ಈ ಪರ್ವತಗಳಲ್ಲಿ ಅತೀ ಎತ್ತರದ ಶಿಖರಗಳು ಸಾಗರದ ನೀರಿನ ಮಟ್ಟಕ್ಕಿಂತ ಮೇಲೆದ್ದು ವನ್ವಾಟುವಿನ ಕಲ್ಲುಬಂಡೆಗಳಿರುವ ದ್ವೀಪಗಳನ್ನು ಉಂಟುಮಾಡಿದವು ಎಂದು ಭೂಗರ್ಭಶಾಸ್ತ್ರಜ್ಞರು ತಿಳಿಸುತ್ತಾರೆ. ಇಂದು ಸಹ ಘರ್ಷಿಸುತ್ತಿರುವ ಫಲಕಗಳೇ ಹಲವಾರು ಭೂಕಂಪನಗಳನ್ನು ಉಂಟುಮಾಡುತ್ತವೆ ಮಾತ್ರವಲ್ಲ ಒಂಬತ್ತು ಕ್ರಿಯಾಶೀಲ ಜ್ವಾಲಾಮುಖಿಗಳಿಗೂ ಕಾರಣವಾಗಿರುತ್ತವೆ. ಹರಿಯುತ್ತಿರುವ ಬಿಸಿ ಲಾವಾರಸವನ್ನು, ಪ್ರವಾಸಿಗರಲ್ಲಿ ಹುಚ್ಚುಸಾಹಸಿಗಳು ತೀರ ಹತ್ತಿರದಿಂದಲೂ ನೋಡಸಾಧ್ಯವಿದೆ.

ಈ ದ್ವೀಪಗಳಲ್ಲಿ ಎಲ್ಲೆಲ್ಲೂ ದಟ್ಟವಾದ ವರ್ಷಾರಣ್ಯಗಳಿವೆ. ಇದು ದೈತ್ಯಾಕಾರದ ಆಲದ ಮರಗಳ ರಾಜ್ಯವಾಗಿದೆ. ಎಲೆಗಳಿಂದ ಕೂಡಿದ ಈ ಮರದ ಮೇಲ್ಭಾಗವು ವಿಶಾಲವಾಗಿ ಚಾಚಬಲ್ಲದು. ಈ ಮರಗಳಡಿಯಲ್ಲಿ ಬೆಳೆಯುವ ದಟ್ಟವಾದ ಕುರುಚಲುಗಳನ್ನು, 150ಕ್ಕಿಂತ ಹೆಚ್ಚಿನ ಜಾತಿಯ ಆರ್ಕಿಡ್‌ಗಳು ಮತ್ತು 250 ಬಗೆಗಳ ಜರೀಗಿಡಗಳು ಶೃಂಗರಿಸುತ್ತವೆ. ಬಣ್ಣಬಣ್ಣದ ಮೀನು ಹಾಗೂ ಹವಳಗಳಿರುವ ಸಾಗರದ ಶುದ್ಧ ಜಲದ ಅಂಚಿನಲ್ಲಿ ಭವ್ಯವಾದ ಬೀಚುಗಳು ಮತ್ತು ಏರುತಗ್ಗಿರುವ ಗುಡ್ಡಗಳಿವೆ. ಲೋಕದ ಅನೇಕ ಮೂಲೆಗಳಿಂದ ಬರುವ ಪರಿಸರ-ಪ್ರೇಮಿ ಪ್ರವಾಸಿಗರು ಏಪೀ ದ್ವೀಪದಲ್ಲಿರುವ ಸ್ನೇಹಪರ ಡ್ಯೂಗಾಂಗ್‌ ಸಸ್ತನಿಗಳೊಂದಿಗೆ ಈಜಾಡಲು ಹಾತೊರೆಯುತ್ತಾರೆ. *

ನರಭಕ್ಷಕರು ಮತ್ತು ಸರಕು ಪಂಥಗಳು

ಯೂರೋಪಿಯನ್‌ ಪರಿಶೋಧಕರು ವನ್ವಾಟುವಿಗೆ 1606ರಲ್ಲಿ ಮೊದಲ ಬಾರಿ ಆಗಮಿಸಿದರು. * ಈ ದ್ವೀಪಗಳಲ್ಲಿ ಕ್ರೂರ ಕುಲಗಳಿಗೆ ಸೇರಿದ ಜನರಿದ್ದರು ಮತ್ತು ಅವರು ಹೆಚ್ಚಾಗಿ ನರಭಕ್ಷಕರಾಗಿದ್ದರು. ಏಷ್ಯಾ ಖಂಡದಲ್ಲಿ ಬಹುಮೂಲ್ಯವಾದ ಗಂಧದ ಮರಗಳು ಅಲ್ಲಿ ಸಮೃದ್ಧವಾಗಿ ಬೆಳೆಯುತ್ತಿದ್ದವು. ಸಿಗಬಹುದಾದ ಲಾಭವನ್ನು ಅಂದಾಜುಮಾಡಿ, ಯೂರೋಪಿನ ವ್ಯಾಪಾರಿಗಳು ವ್ಯವಸ್ಥಿತ ರೀತಿಯಲ್ಲಿ ಆ ಮರಗಳನ್ನು ಕಡಿದುಹಾಕಿದರು. ತದನಂತರ ತಮ್ಮ ಗಮನವನ್ನು ಗುಲಾಮಗಿರಿಯ ಕಡೆಗೆ ತಿರುಗಿಸಿದರು.

ಗುಲಾಮಗಿರಿ ಪದ್ಧತಿಯಲ್ಲಿ, ಆ ಬುಡಕಟ್ಟಿನ ದ್ವೀಪನಿವಾಸಿಗಳನ್ನು ಸಮೋವ, ಫಿಜಿ ಮತ್ತು ಆಸ್ಟ್ರೇಲಿಯದಲ್ಲಿನ ಕಬ್ಬು ಹಾಗೂ ಹತ್ತಿ ತೋಟಗಳಲ್ಲಿ ಕೆಲಸಮಾಡಲು ಸೇರಿಸಲಾಗುತ್ತಿತ್ತು. ಒಪ್ಪಂದಕ್ಕನುಸಾರ ಕಾರ್ಮಿಕರು ಮೂರು ವರ್ಷಗಳವರೆಗೆ ಕೆಲಸಮಾಡಲು ಇಚ್ಛಾಪೂರ್ವಕವಾಗಿ ಒಪ್ಪಿಕೊಳ್ಳುತ್ತಿದ್ದರು. ಆದರೆ ನಿಜಾಂಶವೇನೆಂದರೆ ಈ ಕೆಲಸಕ್ಕಾಗಿ ಅನೇಕರನ್ನು ಅಪಹರಿಸಿ ಕೊಂಡೊಯ್ಯಲಾಗುತ್ತಿತ್ತು. 1800ರ ಶತಕದ ಕೊನೆಯ ಭಾಗದಲ್ಲಿ ಅಂದರೆ ಈ ವ್ಯಾಪಾರವು ಉತ್ತುಂಗಕ್ಕೇರಿದಾಗ, ವನ್ವಾಟು ದ್ವೀಪದ ಅರ್ಧಕ್ಕಿಂತ ಹೆಚ್ಚಿನ ಸಂಖ್ಯೆಯ ಪುರುಷರು ಪರದೇಶಗಳಲ್ಲಿ ಕೆಲಸಮಾಡುತ್ತಿದ್ದರು ಮತ್ತು ಇವರಲ್ಲಿ ಅಧಿಕ ಮಂದಿ ಮರಳಿ ಬರಲೇ ಇಲ್ಲ. ಹೀಗೆ ಕೆಲಸಕ್ಕೆ ಸೇರಿದವರಲ್ಲಿ ಸುಮಾರು 10,000 ಜನರು ಆಸ್ಟ್ರೇಲಿಯದಲ್ಲೇ ಸತ್ತು ಹೋದರು ಮತ್ತು ಅವರ ಪೈಕಿ ಹೆಚ್ಚಿನವರು ರೋಗಗಳಿಗೆ ಬಲಿಯಾಗಿದ್ದರು.

ಅಲ್ಲದೆ ಯೂರೋಪಿನ ರೋಗಗಳು ಸಹ ವನ್ವಾಟು ದ್ವೀಪಗಳನ್ನು ಜರ್ಜರಿತಗೊಳಿಸಿದವು. ಈ ದ್ವೀಪ ನಿವಾಸಿಗಳಲ್ಲಿ ದಡಾರ, ವಾಂತಿಭೇದಿ, ಸಿಡುಬು ಮತ್ತು ಇನ್ನಿತರ ರೋಗಗಳ ವಿರುದ್ಧ ನಿರೋಧಕ ಶಕ್ತಿಯಿರಲಿಲ್ಲ. ಒಂದು ಪುಸ್ತಕ ಹೇಳುವಂತೆ: “ಸಾಧಾರಣವಾದ ನೆಗಡಿ ಜನಸಮೂಹಗಳನ್ನೇ ಅಳಿಸಿಹಾಕುತ್ತಿತ್ತು.”

ಕ್ರೈಸ್ತಪ್ರಪಂಚದ ಮಿಷನೆರಿಗಳು ವನ್ವಾಟುವಿಗೆ 1839ರಲ್ಲಿ ಆಗಮಿಸಿದರು. ಆದರೆ ಮೊದಲು ಬಂದ ಇಬ್ಬರು ಮಿಷನೆರಿಗಳನ್ನು ಅಲ್ಲಿಯವರು ಒಂದು ಭೋಜನಕ್ಕೆ ಕರಿಸಿ ಅವರನ್ನೇ ಕೊಯ್ದು ತಿಂದುಬಿಟ್ಟರಂತೆ! ತದನಂತರ ಬಂದ ಅನೇಕ ಮಿಷನೆರಿಗಳಿಗೂ ಅದೇ ಪಾಡಾಯಿತು. ಆದರೆ ಸಮಯದಾಟಿದಂತೆ ಪ್ರಾಟೆಸ್ಟಂಟ್‌ ಮತ್ತು ಕ್ಯಾಥೊಲಿಕ್‌ ಚರ್ಚುಗಳು ದ್ವೀಪಗಳಾದ್ಯಂತ ಮೇಲುಗೈ ಗಿಟ್ಟಿಸಿಕೊಂಡರು. ಇಂದು ವನ್ವಾಟುವಿನ ನಿವಾಸಿಗಳಲ್ಲಿ 80%ಕ್ಕಿಂತಲೂ ಹೆಚ್ಚಿನವರು ತಾವು ಚರ್ಚಿನ ಸದಸ್ಯರೆಂದು ಹೇಳಿಕೊಳ್ಳುತ್ತಾರೆ. ಹಾಗಿದ್ದರೂ, ಲೇಖಕ ಪಾಲ್‌ ರಾಫಾಎಲ್‌ ಗಮನಿಸಿದ್ದು: “ಅನೇಕ ನಿವಾಸಿಗಳು ಇನ್ನೂ ಹಳ್ಳಿಯ ಮಾಂತ್ರಿಕರಿಗೆ ತಲೆಬಾಗುತ್ತಾರೆ. ಈ ಮಾಂತ್ರಿಕರು ಭೂತಶಕ್ತಿಯ ಶಿಲೆಗಳನ್ನು ತಮ್ಮ ಮಾಯಾ ವಿಧಿಗಳಲ್ಲಿ ಬಳಸಿ ಒಬ್ಬ ಹೊಸ ಪ್ರಿಯತಮನನ್ನು/ಳನ್ನು ಸೆಳೆಯುತ್ತಾರೆ, ಹಂದಿಯೊಂದನ್ನು ಇನ್ನಷ್ಟು ಪುಷ್ಠಿಗೊಳಿಸುತ್ತಾರೆ ಅಥವಾ ವೈರಿಯನ್ನು ಕೊಲ್ಲುತ್ತಾರೆ.”

ವನ್ವಾಟು, ಪ್ರಪಂಚದಲ್ಲೇ ಅತಿ ದೀರ್ಘ ಸಮಯ ಉಳಿದಿರುವ ಸರಕು ಪಂಥಗಳ ಬೀಡಾಗಿದೆ. ಎರಡನೇ ಲೋಕ ಯುದ್ಧದ ವೇಳೆ ಅಮೆರಿಕದ 5 ಲಕ್ಷ ಸೈನಿಕರು ಪೆಸಿಫಿಕ್‌ ಯುದ್ಧಭೂಮಿಗೆ ವನ್ವಾಟುವಿನ ದಾರಿಯಾಗಿ ಹೋದರು. ಸೈನಿಕರ ಅಪಾರ ಸಂಪತ್ತು ಯಾ “ಸರಕು”ಗಳನ್ನು ನೋಡಿ ದ್ವೀಪನಿವಾಸಿಗಳು ಮೂಕವಿಸ್ಮಿತರಾದರು. ಯುದ್ಧ ಕೊನೆಗೊಂಡಾಗ ಅಮೆರಿಕದ ಸೈನಿಕರು ಮೂಟೆಕಟ್ಟಿ ತಮ್ಮ ದೇಶಕ್ಕೆ ತೆರಳಿದರು. ಕೋಟ್ಯಂತರ ಡಾಲರ್‌ ಮೌಲ್ಯದ ಸರಕುಗಳನ್ನು ಮತ್ತು ಹೆಚ್ಚುಳಿದ ಸರಬರಾಯಿಗಳನ್ನು ಅವರು ಸಮುದ್ರಕ್ಕೆಸೆದರು. ಸರಕು ಪಂಥಗಳೆಂದು ಕರೆಯಲ್ಪಡುವ ಧಾರ್ಮಿಕ ಗುಂಪುಗಳು ಹಡಗುಕಟ್ಟೆಗಳನ್ನು ಮತ್ತು ವಿಮಾನ-ಹಾದಿಗಳನ್ನು ನಿರ್ಮಿಸಿ ಹುಸಿ ಮಿಲಿಟರಿ ಸರಕುಗಳನ್ನು ಬಳಸಿ ಸೈನಿಕರ ಕಸರತ್ತುಗಳನ್ನು ನಡೆಸಿದರು. ಹೊರಟುಹೋದ ಅಮೆರಿಕನ್‌ ಸಂದರ್ಶಕರು ಮತ್ತೆ ಬರಬೇಕೆಂಬ ಉದ್ದೇಶದಿಂದ ಇದನ್ನು ಮಾಡಿದರು. ಇಂದಿಗೂ ಟಾನಾ ದ್ವೀಪದ ನೂರಾರು ಹಳ್ಳಿಗರು ಜಾನ್‌ ಫ್ರಮ್‌ ಎಂಬ “ಅಮೆರಿಕಾದ ಭೂತ ಮೆಸ್ಸೀಯ”ನಿಗೆ ಪ್ರಾರ್ಥಿಸುತ್ತಾರೆ. ಅವನು ಒಂದು ದಿನ ಹೇರಳ ಸರಕುಗಳನ್ನು ಹೊತ್ತುಕೊಂಡು ಬರುವನೆಂಬುದು ಅವರ ನಂಬಿಕೆ.

ಸಾಂಸ್ಕೃತಿಕ ವೈವಿಧ್ಯ

ಈ ದ್ವೀಪ ಜನಾಂಗದ ಭಾಷೆಗಳು ಹಾಗೂ ಸಂಸ್ಕೃತಿಗಳು ಅಚ್ಚರಿಗೊಳಿಸುವ ವೈವಿಧ್ಯತೆಯನ್ನು ಹೊಂದಿವೆ. ಒಂದು ಮಾರ್ಗದರ್ಶಿ ಪುಸ್ತಕವು ಹೇಳುವುದು: “ಲೋಕದ ಯಾವುದೇ ದೇಶದ ಜನಸಂಖ್ಯೆಯು ಆಡುವ ಭಾಷೆಗಳಿಗಿಂತ ವನ್ವಾಟುವಿನ ಜನರು ಆಡುವ ಭಾಷೆಗಳ ವೈವಿಧ್ಯತೆ ಅತಿ ಹೆಚ್ಚು ಎಂದು ವನ್ವಾಟು ಹೇಳಿಕೊಳ್ಳುತ್ತದೆ.” ಈ ದ್ವೀಪಸಮೂಹದಲ್ಲಿ ಕನಿಷ್ಠಪಕ್ಷ 105 ಭಾಷೆಗಳು ಮತ್ತು ಹಲವಾರು ಉಪಭಾಷೆಗಳು ಆಡಲ್ಪಡುತ್ತವೆ. ಸಾಮಾನ್ಯ ಭಾಷೆಯಾದ ಬಿಸ್ಲಾಮ ಅಲ್ಲದೆ ಇಂಗ್ಲಿಷ್‌ ಮತ್ತು ಫ್ರೆಂಚ್‌ ಭಾಷೆಗಳೂ ರಾಜ್ಯದ ಅಧಿಕೃತ ಭಾಷೆಗಳಾಗಿವೆ.

ಆದಾಗ್ಯೂ ದ್ವೀಪಗಳಾದ್ಯಂತ ಒಂದು ವಿಷಯವು ಸಾಮಾನ್ಯವಾಗಿದೆ: ಮತ ಸಂಸ್ಕಾರಗಳು ಬದುಕಿನ ಪ್ರತಿಯೊಂದು ಅಂಶವನ್ನು ನಿಯಂತ್ರಿಸುತ್ತವೆ. ಪೆಂಟಕೋಸ್ಟ್‌ ದ್ವೀಪದ ಒಂದು ಪ್ರಾಚೀನ ಫಲವಂತಿಕೆಯ ಸಂಸ್ಕಾರವು ‘ಬಂಗೀ ಜಂಪ್ಪಿಂಗ್‌’ ಎಂಬ ಲೋಕವ್ಯಾಪಕ ಹುಚ್ಚು ಸಾಹಸಕ್ಕೂ ಸ್ಫೂರ್ತಿಕೊಟ್ಟಿತು. ಪ್ರತಿ ವರ್ಷ ಗೆಣಸು ಗೆಡ್ಡೆಯ ಸುಗ್ಗಿ ಕಾಲದಲ್ಲಿ, ಗಂಡಸರು ಮತ್ತು ಹುಡುಗರು 20-30 ಮೀಟರ್‌ ಎತ್ತರದ ಮರದ ಗೋಪುರಗಳಿಂದ ಕೆಳಕ್ಕೆ ಧುಮುಕುತ್ತಾರೆ. ಅವರ ಕಾಲಿಗೆ ಉದ್ದುದ್ದ ಬಳ್ಳಿಗಳು ಕಟ್ಟಿರದಿದ್ದಲ್ಲಿ ಅವರಿಗೆ ಸಾವು ನಿಶ್ಚಯ. ಎತ್ತರವಾದ ಸ್ಥಾನದಿಂದ ಧುಮುಕಿ ತಮ್ಮ ತಲೆಗಳನ್ನು ಲಘುವಾಗಿ ನೆಲಕ್ಕೆ ತಾಗಿಸುವ ಮೂಲಕ ಮುಂದಿನ ವರ್ಷದ ಬೆಳೆ “ಫಲವತ್ತಾಗುತ್ತದೆ” ಎಂದವರು ನಿರೀಕ್ಷಿಸುತ್ತಾರೆ.

ಮಲೆಕುಲ ದ್ವೀಪದ ಕೆಲವು ಹಳ್ಳಿಗಳ ಜನರು ತಮ್ಮೂರನ್ನು ಸಂದರ್ಶಿಸುವ ಜನರೊಂದಿಗೆ ಮಾತಾಡಲು ಪ್ರಾರಂಭಿಸಿದ್ದು ಇತ್ತೀಚಿನ ವರ್ಷಗಳಲ್ಲೇ. ಹಿರಿ ನಾಂಬಾಸ್‌ ಮತ್ತು ಕಿರಿ ನಾಂಬಾಸ್‌ ಎಂಬವುಗಳು ಈ ಪ್ರದೇಶದ ಪ್ರಧಾನ ಕುಲಗಳಾಗಿವೆ. ಒಂದು ಕಾಲದಲ್ಲಿ ಈ ಕುಲಗಳ ಜನರು ಕ್ರೂರ ನರಭಕ್ಷಕರಾಗಿದ್ದರು. ಆದರೆ 1974ರಲ್ಲಿ ಅವರು ಈ ಪದ್ಧತಿಗೆ ಕೊನೆಹಾಡಿದರು. ಅಲ್ಲದೆ, ಗಂಡುಕೂಸುಗಳು ಉದ್ದ ತಲೆಬುರುಡೆಯನ್ನು ಹೊಂದಿ “ಆಕರ್ಷಕ”ರಾಗಿ ಕಾಣಿಸುವಂತೆ ಅವರ ತಲೆಗಳನ್ನು ಬಿಗಿಯಾಗಿ ಸುತ್ತುವ ಪದ್ಧತಿ ಸಹ ಅನೇಕ ವರ್ಷಗಳ ಹಿಂದೆಯೇ ನಂದಿಹೋಗಿದೆ. ಇಂದು ನಾಂಬಾಸ್‌ ಗೋತ್ರದ ಜನರು ತುಂಬ ಸ್ನೇಹಶೀಲರಾಗಿದ್ದು ತಮ್ಮ ಸಾಂಸ್ಕೃತಿಕ ಪರಂಪರೆಯ ಕುರಿತು ಸಂದರ್ಶಕರಿಗೆ ತಿಳಿಸಲು ಹರ್ಷಿಸುತ್ತಾರೆ.

ಆನಂದಧಾಮದ ಜನರು

ಅನೇಕ ಸಂದರ್ಶಕರು ಅಲ್ಪಾವಧಿಯ ವಿಹಾರಕ್ಕಾಗಿ ವನ್ವಾಟುವಿಗೆ ಹೋಗುತ್ತಾರೆ. ಆದರೆ ಯೆಹೋವನ ಸಾಕ್ಷಿಗಳೊ ಸುಮಾರು 70 ವರ್ಷಗಳ ಹಿಂದೆಯೇ ಜನರಿಗೆ ಆಧ್ಯಾತ್ಮಿಕ ಸಹಾಯ ನೀಡಲೆಂದು ಇಲ್ಲಿಗೆ ಆಗಮಿಸಿದ್ದರು. ಸಾಕ್ಷಿಗಳು “ಭೂಲೋಕದ” ಈ ‘ಕಟ್ಟಕಡೆಯಲ್ಲಿ’ ಮಾಡಿದ ಪರಿಶ್ರಮವು ಫಲಕೊಟ್ಟಿದೆ. (ಅ. ಕೃತ್ಯಗಳು 1:8) (“ಕಾವ ಚಟದಿಂದ ಕ್ರೈಸ್ತತ್ವಕ್ಕೆ” ಎಂಬ ಚೌಕ ನೋಡಿ.) ಇಸವಿ 2006ರಲ್ಲಿ ಈ ದೇಶದಲ್ಲಿರುವ ಐದು ಸಭೆಗಳ ಸಾಕ್ಷಿಗಳು ಮುಂಬರಲಿರುವ ಭೂಪರದೈಸಿನ ಕುರಿತ ಬೈಬಲ್‌ ಸಂದೇಶವನ್ನು ಸಾರುವುದರಲ್ಲಿ 80,000ಕ್ಕಿಂತಲೂ ಹೆಚ್ಚು ತಾಸುಗಳನ್ನು ಕಳೆದರು. (ಯೆಶಾಯ 65:17-25) ಸಂತೋಷಕರವಾಗಿ, ಭವಿಷ್ಯದ ಆನಂದಧಾಮವಾಗಲಿರುವ ಆ ಪರದೈಸವು ಇಂದಿನ ಒತ್ತಡ ಹಾಗೂ ಚಿಂತೆಗಳಿಗೆ ಶಾಶ್ವತ ಪರಿಹಾರ ತರುವುದು.​—⁠ಪ್ರಕಟನೆ 21:⁠4. (g 9/07)

[ಪಾದಟಿಪ್ಪಣಿಗಳು]

^ ಡ್ಯೂಗಾಂಗ್‌ಗಳು ಸಸ್ಯಹಾರಿ ಜಲ ಸಸ್ತನಿಗಳಾಗಿದ್ದು 11 ಅಡಿ ಉದ್ದ ಬೆಳೆಯಬಲ್ಲವು ಮತ್ತು ಅವುಗಳ ತೂಕ 400 ಕೆ.ಜಿ.ಗಿಂತಲೂ ಹೆಚ್ಚಾಗಿರಬಲ್ಲದು.

^ ಇಸವಿ 1980ರಲ್ಲಿ ದೊರಕಿದ ರಾಷ್ಟ್ರೀಯ ಸ್ವಾತಂತ್ರ್ಯದ ಮುನ್ನ ವನ್ವಾಟುವನ್ನು ನ್ಯೂ ಹೆಬ್ರಿಡಿಸ್‌ ಎಂದು ಕರೆಯಲಾಗುತ್ತಿತ್ತು.

[ಪುಟ 17ರಲ್ಲಿರುವ ಚೌಕ/ಚಿತ್ರ]

ಖುಷಿ ದ್ವೀಪಗಳು

2006ರಲ್ಲಿ ವನ್ವಾಟು ‘ಖುಷಿ ಗ್ರಹ ಪಟ್ಟಿ’ಯಲ್ಲಿ ಮೊದಲ ಸ್ಥಾನ ಗಿಟ್ಟಿಸಿಕೊಂಡಿತು. ನ್ಯೂ ಇಕನೋಮಿಕ್‌ ಫೌಂಡೇಶನ್‌ ಎಂಬ ಬ್ರಿಟಿಷ್‌ ಚಿಂತಕರ ತಂಡವೊಂದು ಹೊರಡಿಸಿದ ಈ ಪಟ್ಟಿಯು 178 ದೇಶಗಳ ರಾಷ್ಟ್ರೀಯ ಖುಷಿ, ದೀರ್ಘಾಯಸ್ಸು ಮತ್ತು ಅವರು ನಿಸರ್ಗದ ಮೇಲೆ ಬೀರಿದ ಪರಿಣಾಮದ ಮೇಲಾಧರಿಸಿ ಮೌಲ್ಯಮಾಪನ ಮಾಡಿದೆ. ಆ ಪಟ್ಟಿಯಲ್ಲಿ “[ವನ್ವಾಟು] ಮೊದಲ ಸ್ಥಾನ ಪಡೆಯಿತು. ಏಕೆಂದರೆ ಅಲ್ಲಿನ ಜನರು ಖುಷಿಯಾಗಿದ್ದಾರೆ, ಅವರು ಸುಮಾರು 70 ವರ್ಷಗಳವರೆಗೆ ಜೀವಿಸುತ್ತಾರೆ ಮತ್ತು ಅವರು ಭೂಗ್ರಹಕ್ಕೆ ಹೆಚ್ಚೇನು ಹಾನಿ ಮಾಡುವುದಿಲ್ಲ” ಎಂದು ವನ್ವಾಟು ಡೇಲಿ ಪೋಸ್ಟ್‌ ಎಂಬ ವಾರ್ತಾ ಪತ್ರಿಕೆಯು ವರದಿಸಿತು.

[ಚಿತ್ರ]

ಸಾಂಸ್ಕೃತಿಕ ಉಡುಗೆ

[ಕೃಪೆ]

© Kirklandphotos.com

[ಪುಟ 17ರಲ್ಲಿರುವ ಚೌಕ/ಚಿತ್ರ]

ಕಾವ ದುಶ್ಚಟದಿಂದ ಕ್ರೈಸ್ತತ್ವಕ್ಕೆ

ಪೆಂಟಕೋಸ್ಟ್‌ ದ್ವೀಪದ ನಿವಾಸಿ ವಿಲೀ ಎಂಬಾತನು ತನ್ನ ಯುವ ಪ್ರಾಯದಿಂದಲೇ ಅತಿಯಾದ ಕಾವ ರಸವನ್ನು ಕುಡಿಯುತ್ತಿದ್ದನು. ಆ ತೀಕ್ಷ್ಣ ನಿದ್ರಾಜನಕ ರಸವನ್ನು ಕರಿಮೆಣಸಿನ ಗಿಡದ ಬೇರುಗಳನ್ನು ಜಜ್ಜಿ ಕುದಿಸುವುದರಿಂದ ತಯಾರಿಸಲಾಗುತ್ತದೆ. ಕಾವ ಬಾರಿನಲ್ಲಿ ಕುಡಿದು ಮತ್ತೇರಿ, ಪ್ರತಿ ರಾತ್ರಿ ತಡಬಡಾಯಿಸುತ್ತಾ ಅವನು ಮನೆ ಸೇರುತ್ತಿದ್ದನು. ಅವನ ಸಾಲವು ಮುಗಿಲೇರಿತು. ಹೆಚ್ಚಿನ ಬಾರಿ ರೋಷಾವೇಶದಿಂದ ತನ್ನ ಪತ್ನಿ ಐಡಾಳನ್ನು ಅವನು ಹೊಡೆಯುತ್ತಿದ್ದನು. ಒಮ್ಮೆ, ಯೆಹೋವನ ಸಾಕ್ಷಿಯಾಗಿದ್ದ ಜೊತೆ ಕಾರ್ಮಿಕನೊಬ್ಬನು ವಿಲೀಯನ್ನು ಬೈಬಲ್‌ ಅಧ್ಯಯನ ಮಾಡುವಂತೆ ಪ್ರೋತ್ಸಾಹಿಸಿದನು. ವಿಲೀ ಅದಕ್ಕೆ ಒಪ್ಪಿಕೊಂಡನು. ಮೊದಮೊದಲು ಐಡಾ ಅಧ್ಯಯನಕ್ಕೆ ಒಪ್ಪಲಿಲ್ಲ. ಆದರೆ ಗಂಡನ ನಡತೆಯು ಉತ್ತಮಗೊಂಡಂತೆ ಅವಳು ತನ್ನ ಮನಸ್ಸನ್ನು ಬದಲಾಯಿಸಿ ಅಧ್ಯಯನ ಮಾಡಲು ಪ್ರಾರಂಭಿಸಿದಳು. ಒಟ್ಟಾಗಿ ಅವರು ಒಳ್ಳೇ ಆಧ್ಯಾತ್ಮಿಕ ಪ್ರಗತಿ ಮಾಡಿದರು. ಸಮಯ ದಾಟಿದಂತೆ ವಿಲೀ ತನ್ನ ದುಶ್ಚಟದ ಮೇಲೆ ಹತೋಟಿ ಸಾಧಿಸಿದನು. 1999ರಲ್ಲಿ ಅವರಿಬ್ಬರೂ ದೀಕ್ಷಾಸ್ನಾನ ಪಡೆದು ಯೆಹೋವನ ಸಾಕ್ಷಿಗಳಾದರು.

[ಪುಟ 15ರಲ್ಲಿರುವ ಭೂಪಟ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ನ್ಯೂ ಸೀಲೆಂಡ್‌

ಆಸ್ಟ್ರೇಲಿಯ

ಪೆಸಿಫಿಕ್‌ ಸಾಗರ

ಫಿಜಿ

[ಪುಟ 16ರಲ್ಲಿರುವ ಚಿತ್ರ]

ಫಲವಂತಿಕೆಯ ಸಂಸ್ಕಾರದ ಭಾಗವಾಗಿ ಇಲ್ಲಿನ ಜನರು ಅತಿ ಎತ್ತರದಿಂದ ಕೆಳಗೆ ಧುಮುಕುವ ಮೂಲಕ ಅಪಾಯಕರ ಆಚಾರಗಳಲ್ಲಿ ಭಾಗವಹಿಸುತ್ತಾರೆ

[ಕೃಪೆ]

© Kirklandphotos.com

[ಪುಟ 15ರಲ್ಲಿರುವ ಚಿತ್ರ ಕೃಪೆ]

© Kirklandphotos.com

[ಪುಟ 15ರಲ್ಲಿರುವ ಚಿತ್ರ ಕೃಪೆ]

© Kirklandphotos.com

[ಪುಟ 16ರಲ್ಲಿರುವ ಚಿತ್ರ ಕೃಪೆ]

© Kirklandphotos.com