ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ವೈದ್ಯಕೀಯ ವಿಜ್ಞಾನಕ್ಕೊಂದು ಮಹತ್ತಮ ಕೊಡುಗೆ”

“ವೈದ್ಯಕೀಯ ವಿಜ್ಞಾನಕ್ಕೊಂದು ಮಹತ್ತಮ ಕೊಡುಗೆ”

“ವೈದ್ಯಕೀಯ ವಿಜ್ಞಾನಕ್ಕೊಂದು ಮಹತ್ತಮ ಕೊಡುಗೆ”

ಮೆಕ್ಸಿಕೊದ ಎಚ್ಚರ! ಲೇಖಕರಿಂದ

ಯೆಹೋವನ ಸಾಕ್ಷಿಗಳು ತಮ್ಮ ಔಷಧೋಪಚಾರದಲ್ಲಿ ರಕ್ತ-ರಹಿತ ಚಿಕಿತ್ಸೆಯ ಉಪಯೋಗಕ್ಕೆ ಲೋಕದಾದ್ಯಂತ ಪ್ರಖ್ಯಾತರು. ಅವರ ಈ ಬೈಬಲಾಧಾರಿತ ನಿಲುವನ್ನು ಕೆಲವು ಜನರು ಟೀಕಿಸುತ್ತಾರೆ ನಿಜ. ಆದರೂ, ವ್ಯಾಪಕವಾದ ಪ್ರಸಾರವಿರುವ ಮೆಕ್ಸಿಕೊ ಸಿಟಿಯ ವಾರ್ತಾಪತ್ರಿಕೆ ರಿಫಾರ್ಮಾದಲ್ಲಿ, ನ್ಯಾಷನಲ್‌ ಇನ್‌ಸ್ಟಿಟ್ಯುಟ್‌ ಆಫ್‌ ಆಂಕಾಲಜಿಯ ಮುಖ್ಯ ಸರ್ಜನ್ನರಾದ ಡಾಕ್ಟರ್‌ ಆ್ಯಂಕೆಲ್‌ ಹರ್ರೇರಾ ಅಂದದ್ದು: “ಸಾಕ್ಷಿಗಳೇನೂ ತಿಳಿಗೇಡಿಗಳಲ್ಲ. ಮತಭ್ರಾಂತರೂ ಅಲ್ಲ. . . . ರಕ್ತನಷ್ಟವನ್ನು ಕಡಿಮೆಗೊಳಿಸುವ ಅಗತ್ಯವನ್ನು ವೈದ್ಯವೃತ್ತಿಯು ಪರಿಗಣಿಸುವಂತೆ ಮಾಡುವ ಮೂಲಕ [ಅವರು] ವೈದ್ಯಕೀಯ ವಿಜ್ಞಾನಕ್ಕೊಂದು ಮಹತ್ತಮ ಕೊಡುಗೆಯನ್ನು ನೀಡಿದ್ದಾರೆ.”

ಡಾಕ್ಟರ್‌ ಹರ್ರೇರಾ ಹದಿನೈದು ವರ್ಷಗಳ ಹಿಂದೆ ರಕ್ತ ಬಳಸದೆ ಆಪರೇಷನ್‌ಗಳನ್ನು ನಡಿಸಲು ಅರಿವಳಿಕೆಯ ತಜ್ಞರ ಮತ್ತು ಸರ್ಜನ್ನರ ಒಂದು ತಂಡವನ್ನು ಸಂಘಟಿಸಿದರು. ಆ ತಂಡದ ಅರಿವಳಿಕೆ ತಜ್ಞರಲ್ಲಿ ಒಬ್ಬರಾದ ಡಾಕ್ಟರ್‌ ಈಸಿಡ್ರೊ ಮಾರ್ಟಿನಾಸ್‌ ಹೇಳಿದ್ದು: “ಒಂದು ಸೂಕ್ತವಾದ ಅರಿವಳಿಕೆಯ ಕಾರ್ಯವಿಧಾನವು ರಕ್ತನಷ್ಟವನ್ನು ಕಡಿಮೆಗೊಳಿಸುವ ಎಲ್ಲ ವಿಧಾನಗಳನ್ನು ಅನ್ವಯಿಸಲು ಅವಕಾಶ ಕೊಡುತ್ತದೆ. ಆದುದರಿಂದ ಯೆಹೋವನ ಸಾಕ್ಷಿಗಳ ಧಾರ್ಮಿಕ ನಿಲುವನ್ನು ಗೌರವಿಸುತ್ತಾ, ಅವರಿಗೆ ನಿಶ್ಚಯವಾಗಿಯೂ ನಾವು ಸಹಾಯವನ್ನು ನೀಡಬಲ್ಲೆವು.”

ರಕ್ತಪೂರಣಕ್ಕೆ ಬದಲಾಗಿ ನೀಡಸಾಧ್ಯವಿರುವ 30ಕ್ಕಿಂತಲೂ ಹೆಚ್ಚಿನ ಬದಲಿ ಚಿಕಿತ್ಸೆಗಳಿವೆಯೆಂದು ಅಕ್ಟೋಬರ್‌ 2006ರಲ್ಲಿ ರಿಫಾರ್ಮಾ ವರದಿಸಿತು. ಈ ಬದಲಿ ಚಿಕಿತ್ಸೆಗಳಲ್ಲಿ, ರಕ್ತಸ್ರಾವವನ್ನು ನಿಲ್ಲಿಸಲು ರಕ್ತನಾಳಗಳನ್ನು ಸುಟ್ಟು ಜಡ್ಡುಗಟ್ಟಿಸುವುದು ಇಲ್ಲವೆ ರಸಾಯನಿಕಗಳನ್ನು ಹೊರಸೂಸುವ ಹತ್ತಿಜಾಲರಿಗಳಿಂದ ಅಂಗಗಳನ್ನು ಸುತ್ತುವುದು ಮತ್ತು ರಕ್ತದ ವಾಲ್ಯುಮ್‌ ಎಕ್ಸ್‌ಪಾಂಡರ್ಸ್‌ ಬಳಸುವುದೇ ಮುಂತಾದವುಗಳು ಸೇರಿವೆ. *

ಮೆಕ್ಸಿಕೊ ಸಿಟಿಯ ಲಾ ರೈಸಾ ಜನರಲ್‌ ಹಾಸ್ಪಿಟಲ್‌ನ ಮುಖ್ಯ ಹೃದಯ ಸರ್ಜನ್ನರಾದ ಡಾಕ್ಟರ್‌ ಮೈಸೆಸ್‌ ಕಾಲ್ಡರಾನ್‌ರು ರೂಢಿಯಾಗಿ ರಕ್ತರಹಿತ ಶಸ್ತ್ರಚಿಕಿತ್ಸೆಗಳನ್ನು ಮಾಡುತ್ತಾರೆ. ರಿಫಾರ್ಮಾದಲ್ಲಿ ಅವರು ಹೇಳಿದ್ದು: “ರಕ್ತಪೂರಣವು ನಿರಪಾಯಕರ ಕಾರ್ಯವಿಧಾನವಲ್ಲ. ಅದರ ಮೂಲಕ ವೈರಸ್‌, ರೋಗಾಣು, ಪರೋಪಜೀವಿಗಳು ಹರಡಿಕೊಳ್ಳುವ ಅಪಾಯವಿದೆ. ಅಲ್ಲದೆ ಅಲರ್ಜಿಗಳು ಉಂಟಾಗಿ ಮೂತ್ರಪಿಂಡ ಮತ್ತು ಪುಪ್ಪುಸಗಳಿಗೆ ಹಾನಿಯುಂಟಾಗಬಹುದು.” ಈ ಅಪಾಯಗಳ ಕಾರಣದಿಂದ, ಡಾಕ್ಟರ್‌ ಕಾಲ್ಡರಾನ್‌ ಹೇಳಿದ್ದು: “ಎಲ್ಲ ರೋಗಿಗಳು ಯೆಹೋವನ ಸಾಕ್ಷಿಗಳೋ ಎಂಬಂತೆ ನಾವು ಶಸ್ತ್ರಚಿಕಿತ್ಸೆ ಮಾಡುತ್ತೇವೆ. ರಕ್ತಸ್ರಾವ ಆದಷ್ಟು ಕಡಿಮೆಯಾಗುವಂತೆ ಮಾಡಿ, ನಷ್ಟವಾಗುವ ರಕ್ತವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತೇವೆ ಹಾಗೂ ರಕ್ತಸ್ರಾವವನ್ನು ತಗ್ಗಿಸುವ ಔಷಧಿಗಳನ್ನು ಬಳಸುತ್ತೇವೆ.”

ಯೆಹೋವನ ಸಾಕ್ಷಿಗಳ ಈ ನಿಲುವಿಗೆ ಆಧಾರವಾಗಿರುವ ಒಂದು ಮುಖ್ಯ ಬೈಬಲ್‌ ವಚನವಾದ ಅಪೊಸ್ತಲರ ಕೃತ್ಯಗಳು 15:​28, 29ನ್ನು ಆ ವಾರ್ತಾಪತ್ರಿಕೆ ಉಲ್ಲೇಖಿಸಿತ್ತು. ಆ ವಚನದಲ್ಲಿ ಅಪೊಸ್ತಲರು ಈ ಆದೇಶವನ್ನಿತ್ತರು: “ವಿಗ್ರಹಕ್ಕೆ ನೈವೇದ್ಯಮಾಡಿದ್ದನ್ನೂ ರಕ್ತವನ್ನೂ ಕುತ್ತಿಗೆಹಿಸುಕಿ ಕೊಂದದ್ದನ್ನೂ ಹಾದರವನ್ನೂ ವಿಸರ್ಜಿಸುವದು ಅವಶ್ಯವಾಗಿದೆ. ಇದಕ್ಕೆ ಹೆಚ್ಚಿನ ಭಾರವನ್ನು ನಿಮ್ಮ ಮೇಲೆ ಹಾಕಬಾರದೆಂದು ಪವಿತ್ರಾತ್ಮನಿಗೂ ನಮಗೂ ವಿಹಿತವಾಗಿ ತೋರಿತು.”

ಮೆಕ್ಸಿಕೊ ದೇಶದಲ್ಲಿ 950 ಸ್ವಯಂಸೇವಕರಿರುವ 75 ಹಾಸ್ಪಿಟಲ್‌ ಲಿಯೆಸಾನ್‌ ಕಮಿಟಿಗಳಿವೆ. ಈ ಸ್ವಯಂಸೇವಕರು ರಕ್ತದ ಬದಲಿಗಳ ಕುರಿತ ಮಾಹಿತಿಯನ್ನು ಕೊಡಲು ಡಾಕ್ಟರರನ್ನು ಭೇಟಿಮಾಡುತ್ತಾರೆಂದು ಯೆಹೋವನ ಸಾಕ್ಷಿಗಳ ಮೆಕ್ಸಿಕೊ ಬ್ರಾಂಚ್‌ ಆಫೀಸಿನಲ್ಲಿರುವ ಹಾಸ್ಪಿಟಲ್‌ ಇನ್‌ಫರ್ಮೇಷನ್‌ ಡೆಸ್ಕ್‌ ವರದಿಸುತ್ತದೆ. ಮೆಕ್ಸಿಕೊ ದೇಶದ ಸುಮಾರು 2,000 ಡಾಕ್ಟರರು ರಕ್ತವನ್ನು ಬಳಸದೆ ಯೆಹೋವನ ಸಾಕ್ಷಿಗಳಿಗೆ ಔಷಧೋಪಚಾರ ನಡಿಸಲು ಸಿದ್ಧರಾಗಿದ್ದಾರೆ. ಈ ಡಾಕ್ಟರರ ಸಹಕಾರವನ್ನು ಸಾಕ್ಷಿಗಳು ಅತಿಯಾಗಿ ಗಣ್ಯಮಾಡುತ್ತಾರೆ. ಹೀಗೆ ಡಾಕ್ಟರರು ಸಾಕ್ಷಿಗಳಲ್ಲದ ಬೇರೆ ರೋಗಿಗಳಿಗೂ ನೆರವಾಗಲು ಉತ್ತಮವಾಗಿ ಸನ್ನದ್ಧರಾಗಿದ್ದಾರೆ. (g 9/07)

[ಪಾದಟಿಪ್ಪಣಿ]

^ ಇದು ವೈಯಕ್ತಿಕ ನಿರ್ಣಯಕ್ಕೆ ಸೇರಿದ ವಿಷಯವೆಂದು ಎಚ್ಚರ! ಅಂಗೀಕರಿಸುವುದರಿಂದ ಯಾವುದೇ ನಿರ್ದಿಷ್ಟ ರಕ್ತರಹಿತ ಚಿಕಿತ್ಸಾಕ್ರಮವನ್ನೂ ಅದು ಅನುಮೋದಿಸುವುದಿಲ್ಲ.

[ಪುಟ 30ರಲ್ಲಿರುವ ಚಿತ್ರ]

ಡಾಕ್ಟರ್‌ ಆ್ಯಂಕೆಲ್‌ ಹರ್ರೇರಾ

[ಪುಟ 30ರಲ್ಲಿರುವ ಚಿತ್ರ]

ಡಾಕ್ಟರ್‌ ಈಸಿಡ್ರೊ ಮಾರ್ಟಿನಾಸ್‌

[ಪುಟ 30ರಲ್ಲಿರುವ ಚಿತ್ರ]

ಡಾಕ್ಟರ್‌ ಮೈಸೆಸ್‌ ಕಾಲ್ಡರಾನ್‌