ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಹಲ್ಲುನೋವು ಅದರ ಯಾತನಾಮಯ ಚರಿತ್ರೆ

ಹಲ್ಲುನೋವು ಅದರ ಯಾತನಾಮಯ ಚರಿತ್ರೆ

ಹಲ್ಲುನೋವು ಅದರ ಯಾತನಾಮಯ ಚರಿತ್ರೆ

ಕಾಲ: ಮಧ್ಯಯುಗ. ಸ್ಥಳ: ನಗರದ ಚೌಕ. ಆಡಂಬರದ ವಸ್ತ್ರಗಳನ್ನು ಧರಿಸಿರುವ ಖೋಟಾ ವೈದ್ಯನೊಬ್ಬನು ಹಲ್ಲನ್ನು ನೋವಿಲ್ಲದೆ ತೆಗೆಯಬಲ್ಲೆ ಎಂದು ಜಂಬಕೊಚ್ಚುತ್ತಾನೆ. ಅವನ ಸಹಚರ ಸಂಕೋಚವಾದವನಂತೆ ನಟಿಸುತ್ತಾ ಮುಂದೆ ಬರುತ್ತಾನೆ. ಆ ಖೋಟಾವೈದ್ಯನು ಹಲ್ಲನ್ನು ಕೀಳುವ ನಟನೆಮಾಡುತ್ತಾ, ರಕ್ತದಿಂದ ಕೂಡಿದ ಒಂದು ದವಡೆ ಹಲ್ಲನ್ನು ತೆಗೆದು ಎಲ್ಲರು ನೋಡುವಂತೆ ಎತ್ತಿ ಹಿಡಿಯುತ್ತಾನೆ. ಹಲ್ಲುನೋವು ಇದ್ದವರು ಹಣಕೊಟ್ಟು ಹಲ್ಲು ತೆಗೆಸುವಂತೆ ಶಿಫಾರಸ್ಸು ಮಾಡಲಾಗುತ್ತದೆ. ಹಲ್ಲು ತೆಗೆಸಲಾಗುವವರ ನೋವಿನ ಚೀತ್ಕಾರವನ್ನು ಇತರರು ಕೇಳಿಸಿಕೊಂಡು ಹೆದರಿ ಓಡಿಹೋಗದಂತೆ ಡೋಲು ಹೊಡೆದು ತುತೂರಿಯೂದಲಾಗುತ್ತದೆ. ಕೆಲವೊಮ್ಮೆ ಕೆಲವೇ ದಿನಗಳಲ್ಲಿ ಸೆಪ್ಟಿಕ್‌ ಆಗುವ ಅಪಾಯವಿರುವುದಾದರೂ ಅಷ್ಟರಲ್ಲಿ ಆ ಖೋಟಾವೈದ್ಯ ನಾಪತ್ತೆ.

ಹಲ್ಲು ನೋವಿರುವ ಕೆಲವರು ಇಂದು ಸಹ ಇಂಥ ಪಟಿಂಗರ ಮೋಸಕ್ಕೆ ಬಲಿಯಾಗುತ್ತಾರೆ. ಆಧುನಿಕ ದಂತವೈದ್ಯರು ಹಲ್ಲು ನೋವನ್ನು ನಿವಾರಿಸಲು ಮತ್ತು ಹಲ್ಲು ಬಿದ್ದುಹೋಗದಂತೆ ಮಾಡಲು ಶಕ್ತರಾಗಿದ್ದಾರೆ. ಹಾಗಿದ್ದರೂ ಒಬ್ಬ ದಂತವೈದ್ಯನಲ್ಲಿಗೆ ಹೋಗಲು ಅನೇಕರಿಗೆ ಭಯ. ದಂತವೈದ್ಯರು ತಮ್ಮ ರೋಗಿಗಳ ನೋವನ್ನು ನಿವಾರಿಸಲು ಮೊದಲ ಬಾರಿ ಕಲಿತುಕೊಂಡ ವಿಧಾನದ ಕುರಿತ ಕಿರುನೋಟವು, ಆಧುನಿಕ ದಂತಚಿಕಿತ್ಸಾಶಾಸ್ತ್ರವನ್ನು ಗಣ್ಯಮಾಡಲು ನಮಗೆ ಸಹಾಯ ಮಾಡಬಹುದು.

ಮನುಷ್ಯನಿಗೆ ಬರುವ ಅತಿ ಸಾಮಾನ್ಯ ಕಾಯಿಲೆಗಳಲ್ಲಿ ನೆಗಡಿ ಪ್ರಥಮ ಸ್ಥಾನದಲ್ಲಿರುವುದಾದರೆ ದಂತ ಕ್ಷಯವು ದ್ವಿತೀಯ ಸ್ಥಾನದಲ್ಲಿದೆ ಎಂದು ಹೇಳಲಾಗುತ್ತದೆ. ಇದು ಆಧುನಿಕ ಯುಗದಲ್ಲಿ ಮೂಡಿಬಂದ ರೋಗವೇನಲ್ಲ. ಪ್ರಾಚೀನ ಇಸ್ರಾಯೇಲಿನಲ್ಲಿದ್ದ ವೃದ್ಧರ ಹಲ್ಲುಗಳು ಉದುರಿ ಹೋಗುವುದರಿಂದಾಗುವ ತೊಂದರೆಗಳನ್ನು ರಾಜ ಸೊಲೊಮೋನನ ಕಾವ್ಯ ಪ್ರಕಟಪಡಿಸುತ್ತದೆ.​—⁠ಪ್ರಸಂಗಿ 12:⁠3.

ರಾಜ ಮನೆತನದವರಿಗೂ ಸಂಕಟ

Iನೇ ಎಲಿಸಬೇತ್‌ ಇಂಗ್ಲೆಂಡಿನ ರಾಣಿಯಾಗಿದ್ದರೂ ಹಲ್ಲುನೋವಿನಿಂದ ಅವಳಿಗೆ ತಪ್ಪಿಸಿಕೊಳ್ಳಲಾಗಲಿಲ್ಲ. ಅವಳ ಆಸ್ಥಾನಕ್ಕೆ ಬಂದಿದ್ದ ಒಬ್ಬ ಜರ್ಮನ್‌ ಸಂದರ್ಶಕನು ಅವಳ ಕಪ್ಪಾದ ಹಲ್ಲನ್ನು ಗಮನಿಸಿ ಅದು, “ಸಕ್ಕರೆ ಪದಾರ್ಥಗಳ ಅತಿಯಾದ ಸೇವನೆಯಿಂದಾಗಿ ಆಂಗ್ಲರಲ್ಲಿ ಸಾಮಾನ್ಯವಾಗಿ ಕಂಡುಬರುವ ದೋಷ” ಎಂದು ವರದಿಸಿದನು. 1578ರ ಡಿಸೆಂಬರ್‌ ತಿಂಗಳಲ್ಲಿ ರಾಣಿಯು ಹಗಲುರಾತ್ರಿ ಹಲ್ಲುನೋವಿನಿಂದ ನರಳಿದಳು. ಅವಳ ವೈದ್ಯರು ಹುಳುಕು ಹಲ್ಲನ್ನು ತೆಗೆಯುವುದು ಉತ್ತಮವೆಂದು ಹೇಳಿದ್ದರೂ ಅದರಿಂದಾಗುವ ನೋವಿನ ಕುರಿತು ನೆನಸಿ ಹಲ್ಲು ತೆಗೆಸಿಕೊಳ್ಳಲು ಅವಳು ನಿರಾಕರಿಸಿದಳು. ಹಲ್ಲನ್ನು ತೆಗೆಸಿಕೊಳ್ಳುವಂತೆ ಪ್ರೋತ್ಸಾಹಿಸಲು ಲಂಡನ್‌ನ ಬಿಷಪ್‌ ಜಾನ್‌ ಆಲಮರ್‌ ತಮ್ಮ ಹಲ್ಲನ್ನು, ಪ್ರಾಯಶಃ ಹುಳುಕಾಗಿದ್ದ ಹಲ್ಲನ್ನು ಅವಳ ಎದುರಿಗೇ ತೆಗೆಸಿಕೊಂಡರು. ಇದು ಒಂದು ಧೀರ ಕೃತ್ಯವೇ ಸರಿ, ಏಕೆಂದರೆ ಮುದುಕರಾಗಿದ್ದ ಆ ಬಿಷಪ್‌ಗೆ ಕೇವಲ ಕೆಲವೇ ಹಲ್ಲುಗಳು ಉಳಿದಿದ್ದವು!

ಆ ಕಾಲದಲ್ಲಿ, ಸಾಮಾನ್ಯ ಜನರು ಹಲ್ಲು ತೆಗೆಸಿಕೊಳ್ಳಲು ಕ್ಷೌರಿಕನ ಅಥವಾ ಒಬ್ಬ ಕಮ್ಮಾರನ ಬಳಿಗೂ ಹೋಗುತ್ತಿದ್ದರು. ಆದರೆ ಹೆಚ್ಚೆಚ್ಚು ಜನರು ಸಕ್ಕರೆಯನ್ನು ಕೊಂಡುಕೊಳ್ಳಲು ಶಕ್ತರಾದಂತೆ ಹಲ್ಲುನೋವು ಸಹ ಹೆಚ್ಚಾಯಿತು. ನುರಿತ ಹಲ್ಲುತೆಗೆಯುವವರ ಅಗತ್ಯವೂ ಏರತೊಡಗಿತು. ಹೀಗಿರುವುದರಿಂದ ಕೆಲವು ವೈದ್ಯರು ಮತ್ತು ತಜ್ಞರು ಹುಳುಕು ಹಲ್ಲಿನ ಚಿಕಿತ್ಸೆಯಲ್ಲಿ ಆಸಕ್ತಿವಹಿಸಲು ಆರಂಭಿಸಿದರು. ಆದರೆ ಇವರು ತಾವಾಗಿಯೇ ಕಲಿತುಕೊಳ್ಳಬೇಕಿತ್ತು ಏಕೆಂದರೆ ನುರಿತ ವೈದ್ಯರು ತಮಗೆ ತಿಳಿದ ಮಾಹಿತಿ ಇತರರಿಗೂ ತಿಳಿದುಬಂದರೆ ತಮ್ಮ ಹೊಟ್ಟೆಗೆ ಕಲ್ಲುಬೀಳುವುದು ಎಂದು ಆ ಕುರಿತು ಯಾರಿಗೂ ಕಲಿಸಿಕೊಡುತ್ತಿರಲಿಲ್ಲ. ಅಷ್ಟುಮಾತ್ರವಲ್ಲದೆ, ದಂತಚಿಕಿತ್ಸೆಯ ಕುರಿತು ಕೇವಲ ಕೆಲವೇ ಪುಸ್ತಕಗಳಿದ್ದವು.

ರಾಣಿ Iನೇ ಎಲಿಸಬೇತಳ ಆಳಿಕೆಯ ಒಂದು ಶತಮಾನದ ನಂತರ, XIVನೇ ಲೂಯಿ ಫ್ರಾನ್ಸ್‌ ದೇಶದ ಅರಸನಾಗಿ ಆಳಿದನು. ಅವನು ತನ್ನ ಜೀವನದ ಹೆಚ್ಚಿನ ಸಮಯ ತೀವ್ರ ಹಲ್ಲುನೋವಿನಿಂದ ನರಳಿದನು. 1685ರಲ್ಲಿ ಅವನು ತನ್ನ ಎಡಭಾಗದ ಮೇಲ್ದವಡೆಯ ಇಡೀ ಹಲ್ಲು ಪಂಕ್ತಿಯನ್ನೇ ತೆಗೆಸಿಕೊಂಡನು. ಅದೇ ವರ್ಷ ಅವನು ಫ್ರಾನ್ಸ್‌ ದೇಶದ ಆರಾಧನಾ ಸ್ವಾತಂತ್ರ್ಯವನ್ನು ರದ್ದುಗೊಳಿಸುವ ಶಾಸನಕ್ಕೆ ಸಹಿಹಾಕುವ ನಿರ್ಣಯವನ್ನು ತೆಗೆದುಕೊಂಡನು. ಇದರಿಂದಾಗಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಉಗ್ರ ಹಿಂಸೆ ಆರಂಭವಾಯಿತು. ರಾಜನು ಇಂಥ ವಿಪತ್ಕಾರಕ ನಿರ್ಣಯವನ್ನು ತೆಗೆದುಕೊಳ್ಳಲು ಅವನಿಗಿದ್ದ ದಂತ ಸೋಂಕೇ ಕಾರಣವಾಗಿತ್ತೆಂದು ಕೆಲವರು ಹೇಳುತ್ತಾರೆ.

ಆಧುನಿಕ ದಂತಚಿಕಿತ್ಸಾಶಾಸ್ತ್ರದ ಜನನ

XIVನೇ ಲೂಯಿಯ ಅದ್ದೂರಿಯ ಜೀವನಶೈಲಿ ಪ್ಯಾರಿಸ್ಸಿನ ಕುಲೀನರ ಮೇಲೆ ಬೀರಿದ ಪ್ರಭಾವವು ದಂತಚಿಕಿತ್ಸಾಶಾಸ್ತ್ರ ವೃತ್ತಿಗೆ ಆರಂಭವನ್ನು ಕೊಟ್ಟಿತು. ಅರಸನ ಆಸ್ಥಾನದಲ್ಲಿ ಮತ್ತು ಸಮಾಜದಲ್ಲಿ ಯಶಸ್ಸನ್ನು ಗಿಟ್ಟಿಸಿಕೊಳ್ಳುವುದು, ಒಬ್ಬ ವ್ಯಕ್ತಿಯ ತೋರಿಕೆಯ ಮೇಲೆ ಅವಲಂಬಿಸಿತ್ತು. ಆಹಾರ ಜಗಿದು ತಿನ್ನಲು ಸಹಾಯಕವಾಗುವುದಕ್ಕಿಂತ ಹೆಚ್ಚಾಗಿ ಸೌಂದರ್ಯಕ್ಕಾಗಿ ಕೃತಕ ಹಲ್ಲುಗಳ ಬೇಡಿಕೆ ಏರಿದಂತೆ ಶಸ್ತ್ರಚಿಕಿತ್ಸಕರ ಒಂದು ಹೊಸ ತಂಡವು ಜನಿಸಿತು. ಇವರು ಗಣ್ಯ ಗಿರಾಕಿಗಳ ಸೇವೆಮಾಡುತ್ತಿದ್ದ ದಂತವೈದ್ಯರಾಗಿದ್ದರು. ಪಿಯರ್‌ ಫೊಶಾರ್‌ ಎಂಬವರು ಪ್ಯಾರಿಸ್‌ನ ಪ್ರಸಿದ್ಧ ದಂತವೈದ್ಯರಾಗಿದ್ದರು. ಅವರು ಫ್ರೆಂಚ್‌ ನೌಕಾಪಡೆಯಲ್ಲಿದ್ದಾಗ ಶಸ್ತ್ರಚಿಕಿತ್ಸೆಯನ್ನು ಕಲಿತುಕೊಂಡಿದ್ದರು. ಹಲ್ಲು ಕೀಳುವುದನ್ನು ಅನರ್ಹ ಕ್ಷೌರಿಕರಿಗೆ ಮತ್ತು ಖೋಟಾ ವೈದ್ಯರಿಗೆ ಬಿಟ್ಟುಬಿಡುತ್ತಿರುವ ಶಸ್ತ್ರಚಿಕಿತ್ಸಕರನ್ನು ಅವರು ಖಂಡಿಸಿದರು. ಅಷ್ಟೇ ಅಲ್ಲ, ತಮ್ಮನ್ನು ದಂತ ಶಸ್ತ್ರವೈದ್ಯರೆಂದು ಕರೆಸಿಕೊಂಡವರಲ್ಲಿ ಇವರೇ ಮೊದಲಿಗರು.

ವ್ಯಾಪಾರದ ಗುಟ್ಟನ್ನು ಗುಪ್ತವಾಗಿಡುವ ಪದ್ಧತಿಗೆ ಕೊನೆಹಾಡುತ್ತಾ, 1728ರಲ್ಲಿ ಫೊಶಾರ್‌ ಒಂದು ಪುಸ್ತಕವನ್ನು ಬರೆದರು. ಅದರಲ್ಲಿ ಅವರು, ತಮಗೆ ತಿಳಿದಿರುವ ಎಲ್ಲ ಕಾರ್ಯವಿಧಾನಗಳನ್ನು ಬಹಿರಂಗಪಡಿಸಿದರು. ಇದರಿಂದಾಗಿ ಅವರನ್ನು “ದಂತಚಿಕಿತ್ಸಾಶಾಸ್ತ್ರದ ಪಿತಾಮಹ” ಎಂದು ಕರೆಯಲಾಯಿತು. ರೋಗಿಗಳನ್ನು ನೆಲದ ಮೇಲೆ ಕೂರಿಸದೆ ದಂತವೈದ್ಯರ ಕುರ್ಚಿಯಲ್ಲಿ ಮೊತ್ತ ಮೊದಲು ಕೂರಿಸಿದ್ದು ಇವರೇ. ಹಲ್ಲು ತೆಗೆಯಲೆಂದು ಫೊಶಾರ್‌ ಐದು ಉಪಕರಣಗಳನ್ನು ಸಹ ವಿಕಸಿಸಿದರು. ಅವರು ಕೇವಲ ಹಲ್ಲು ಕೀಳುವವರಾಗಿರಲಿಲ್ಲ. ರಂಧ್ರಮಾಡುವ ಚೂಪಾದ ಉಪಕರಣ (ದಂತ ಡ್ರಿಲ್‌) ಮತ್ತು ದಂತ ಕುಳಿಗಳನ್ನು ತುಂಬಿಸುವ ವಿಧಾನಗಳನ್ನು ವಿಕಸಿಸಿದರು. ರೂಟ್‌ ಕನ್ಯಾಲ್‌ ಅನ್ನು ತುಂಬಿಸಲು ಮತ್ತು ದಂತದ ಬೇರಿಗೆ ಕೃತಕ ದಂತವನ್ನು ಜೋಡಿಸಲು ಕಲಿತುಕೊಂಡರು. ಸ್ವತಃ ಅವರ ಕೃತಕ ದಂತಪಂಕ್ತಿಯನ್ನು ಬೆಳೆಬಾಳುವ ಪ್ರಾಣಿದಂತ (ಐವೊರಿ)ದಿಂದ ತಯಾರಿಸಲಾಗಿತ್ತು. ಅಲ್ಲದೆ ಮೇಲ್ಭಾಗದ ದಂತ ಪಂಕ್ತಿಯನ್ನು ಅದರ ಸ್ಥಾನದಲ್ಲೇ ಇರಿಸುವಂತೆ ಒಂದು ಸ್ಪ್ರಿಂಗನ್ನು ಜೋಡಿಸಲಾಗಿತ್ತು. ಫೊಶಾರ್‌ ದಂತಚಿಕಿತ್ಸಾಶಾಸ್ತ್ರವನ್ನು ಒಂದು ವೃತ್ತಿಯಾಗಿ ಸ್ಥಾಪಿಸಿದರು. ಅವರ ಪ್ರಭಾವವು ಅಮೆರಿಕದ ವರೆಗೂ ವ್ಯಾಪಿಸಿತು.

ಪ್ರಥಮ ಯು.ಎಸ್‌. ಅಧ್ಯಕ್ಷನ ಸಂಕಟ

XIVನೇ ಲೂಯಿಯ ಕಾಲದ ಒಂದು ಶತಮಾನದ ಬಳಿಕ ಅಮೆರಿಕಾದಲ್ಲಿ ಜಾರ್ಜ್‌ ವಾಷಿಂಗ್‌ಟನ್‌ ಹಲ್ಲುನೋವಿನಿಂದ ನರಳಿದನು. ಅವನ 22ನೇ ವಯಸ್ಸಿನಲ್ಲಿ ಪ್ರಾರಂಭಿಸಿ ಹೆಚ್ಚುಕಡಿಮೆ ಪ್ರತಿ ವರ್ಷ ಒಂದೊಂದು ಹಲ್ಲನ್ನು ತೆಗೆಯಲಾಯಿತು. ತನ್ನ ಕಾಂಟಿನೆಂಟಲ್‌ ಸೈನ್ಯವನ್ನು ಮುನ್ನಡೆಸುವಾಗ ಹಲ್ಲುನೋವಿನಿಂದಾಗಿ ಅವನು ಅನುಭವಿಸಿದ ಸಂಕಟವನ್ನು ತುಸು ಊಹಿಸಿರಿ! ಇಸವಿ 1789ರಲ್ಲಿ ಯುನೈಟೆಡ್‌ ಸ್ಟೇಟ್ಸ್‌ನ ಪ್ರಪ್ರಥಮ ಅಧ್ಯಕ್ಷನಾಗುವಷ್ಟರಲ್ಲಿ ಹೆಚ್ಚುಕಡಿಮೆ ಅವನ ಎಲ್ಲ ಹಲ್ಲು ಕೀಳಲ್ಪಟ್ಟಿದ್ದವು.

ಹಲ್ಲು ಕೀಳಲ್ಪಟ್ಟು ಅವನ ಮುಖ ಅಂದಗೆಟ್ಟಿದ್ದರಿಂದ ಹಾಗೂ ಸರಿಯಾಗಿ ಕೂರದ ದಂತ ಪಂಕ್ತಿಯಿಂದಾಗಿ ವಾಷಿಂಗ್‌ಟನ್‌ ಮಾನಸಿಕ ಬೇಗುದಿಯನ್ನೂ ಸಹಿಸಬೇಕಾಯಿತು. ಹೊಸ ರಾಷ್ಟ್ರದ ಅಧ್ಯಕ್ಷನಾಗಿ ಸಾರ್ವಜನಿಕರಲ್ಲಿ ಒಳ್ಳೇ ಕಲ್ಪನೆಯನ್ನು ಮೂಡಿಸಲು ತನ್ನ ಉತ್ತಮ ತೋರಿಕೆಯು ಪ್ರಧಾನ ಪಾತ್ರವಹಿಸುತ್ತದೆ ಎಂದು ಅವನಿಗೆ ತಿಳಿದಿತ್ತು. ಆ ದಿನಗಳಲ್ಲಿ ದಂತಪಂಕ್ತಿಗಳನ್ನು ಅಚ್ಚಿನಲ್ಲಿ ಹಾಕಿ ಮಾಡಲಾಗುತ್ತಿರಲಿಲ್ಲ ಬದಲಿಗೆ ಅವುಗಳನ್ನು ಪ್ರಾಣಿದಂತದಿಂದ ಕೆತ್ತಲಾಗುತ್ತಿತ್ತು. ಆದುದರಿಂದ ಅವುಗಳನ್ನು ಬಾಯಿಯಲ್ಲಿ ಇರಿಸಿಕೊಳ್ಳಲು ಕಷ್ಟವಾಗುತ್ತಿತ್ತು. ವಾಷಿಂಗ್‌ಟನ್‌ನಂತೆ ಆಂಗ್ಲರೂ ಅದೇ ಪಾಡನ್ನು ಅನುಭವಿಸಿದರು. ಜೋರಾಗಿ ನಕ್ಕು ತಮ್ಮ ಕೃತಕ ದಂತಗಳನ್ನು ತೋರಿಸದಂತೆ ತಡೆಯುವ ಅಗತ್ಯವೇ ಆಂಗ್ಲರ ನೀರಸ ಹಾಸ್ಯರಸದ ಮೂಲವಾಗಿದೆ ಎಂದು ಹೇಳಲಾಗುತ್ತದೆ.

ವಾಷಿಂಗ್‌ಟನ್‌ ಮರದ ದಂತಪಂಕ್ತಿಗಳನ್ನು ಉಪಯೋಗಿಸುತ್ತಿದ್ದನೆಂದು ಹೇಳುವ ಕಥೆಯು ಸುಳ್ಳೆಂದು ತೋರುತ್ತದೆ. ಅವನು ಮನುಷ್ಯದಂತ, ಪ್ರಾಣಿದಂತ ಮತ್ತು ಸೀಸದಿಂದ ಮಾಡಲ್ಪಟ್ಟ ದಂತಪಂಕ್ತಿಗಳನ್ನು ಬಳಸುತ್ತಿದ್ದನೇ ಹೊರತು ಮರದಿಂದ ಮಾಡಲ್ಪಟ್ಟವುಗಳನ್ನಲ್ಲ. ಪ್ರಾಯಶಃ ಅವನ ದಂತವೈದ್ಯರು ಸಮಾಧಿಗಳ್ಳರಿಂದ ಹಲ್ಲುಗಳನ್ನು ಪಡೆದುಕೊಳ್ಳುತ್ತಿದ್ದರು. ದಂತ ವ್ಯಾಪಾರಿಗಳು ಸೈನ್ಯಗಳನ್ನು ಹಿಂಬಾಲಿಸಿ ಯುದ್ಧದ ಬಳಿಕ ಸತ್ತವರ ಹಾಗೂ ಸಾಯುತ್ತಿರುವವರ ಹಲ್ಲುಗಳನ್ನು ಕಿತ್ತು ತರುತ್ತಿದ್ದರು. ಹಾಗಾಗಿ ದಂತಪಂಕ್ತಿಗಳು ಕೇವಲ ಐಶ್ವರ್ಯವಂತರಿಗೆ ಮಾತ್ರ ನಿಲುಕುವ ದುಬಾರಿ ವಸ್ತುವಾಗಿತ್ತು. ವಲ್ಕನೀಕರಿಸಲ್ಪಟ್ಟ (ಗಂಧಕದಿಂದ ಸಂಸ್ಕರಿಸಲ್ಪಟ್ಟ) ರಬ್ಬರ್‌ ಅನ್ನು ಕಂಡುಹಿಡಿದು ಅದನ್ನು ದಂತಪಂಕ್ತಿಗಳ ತಳಹದಿಯಾಗಿ ಬಳಸಲಾದ ಬಳಿಕವೇ, ಅಂದರೆ 1850ರ ದಶಕದಲ್ಲಿ ದಂತಪಂಕ್ತಿಗಳು ಜನಸಾಮಾನ್ಯರಿಗೆ ನಿಲುಕುವಂಥವುಗಳಾದವು. ವಾಷಿಂಗ್‌ಟನ್‌ನ ದಂತವೈದ್ಯರು ಈ ವೃತ್ತಿಯ ತುತ್ತತುದಿಯಲ್ಲಿದ್ದರೂ ಹಲ್ಲುನೋವು ಏಕೆ ಬರುತ್ತದೆಂದು ಅವರಿಗೆ ಪೂರ್ಣವಾಗಿ ತಿಳಿದಿರಲಿಲ್ಲ.

ಹಲ್ಲುನೋವಿನ ಕುರಿತ ಸತ್ಯ

ಹುಳಗಳಿಂದಾಗಿ ಹಲ್ಲುನೋವು ಬರುತ್ತದೆ ಎಂದು ಪುರಾತನ ಕಾಲದಿಂದಲೂ ಜನರು ಎಣಿಸುತ್ತಿದ್ದರು. ಈ ವಾದವನ್ನು 1700ರ ಶತಕದ ವರೆಗೆ ಅಂಗೀಕರಿಸಲಾಗುತ್ತಿತ್ತು. ಆದರೆ 1890ರಲ್ಲಿ ಜರ್ಮನಿಯ ಬರ್ಲಿನ್‌ ವಿಶ್ವವಿದ್ಯಾನಿಲಯದಲ್ಲಿ ಕೆಲಸಮಾಡುತ್ತಿದ್ದ ವಿಲೆಬಿ ಮಿಲ್ಲರ್‌ ಎಂಬ ಅಮೆರಿಕಾದ ದಂತವೈದ್ಯನು, ಹಲ್ಲು ನೋವಿಗೆ ಮುಖ್ಯ ಕಾರಣವಾಗಿರುವ ದಂತಕುಳಿಯ ಕಾರಣವನ್ನು ಪತ್ತೆಹಚ್ಚಿದನು. ಅವು ಸಕ್ಕರೆ ಅಂಶಗಳಲ್ಲಿ ಚೆನ್ನಾಗಿ ಬೆಳೆದು ಹಲ್ಲನ್ನು ಹಾನಿಗೊಳಿಸುವ ಆ್ಯಸಿಡನ್ನು ಉತ್ಪಾದಿಸುವ ಒಂದು ನಿರ್ದಿಷ್ಟ ಜಾತಿಯ ಬ್ಯಾಕ್ಟೀರಿಯಾಗಳೇ. ಆದರೆ ದಂತಕ್ಷಯವನ್ನು ಹೇಗೆ ತಡೆಯಬಹುದು? ಅದಕ್ಕೊಂದು ಉತ್ತರವು ತೀರ ಅಕಸ್ಮಾತ್ತಾಗಿ ಬೆಳಕಿಗೆ ಬಂತು.

ಹಲವಾರು ದಶಕಗಳಿಂದ ಯು.ಎಸ್‌.ಎ.ಯ ಕೊಲೊರೆಡೊವಿನಲ್ಲಿದ್ದ ದಂತವೈದ್ಯರಿಗೆ, ಅಲ್ಲಿನ ಜನರ ಹಲ್ಲುಗಳಲ್ಲಿ ಏಕೆ ಇಷ್ಟೊಂದು ಕಲೆಗಳಿದ್ದವೆಂದು ಹೊಳೆಯಲಿಲ್ಲ. ಕೊನೆಗೆ, ನೀರಿನ ಸರಬರಾಯಿಯಲ್ಲಿ ಫ್ಲೋರೈಡ್‌ ಅಂಶವು ಅಧಿಕವಾಗಿರುವುದೇ ಅದರ ಕಾರಣವೆಂದು ತಿಳಿದುಬಂತು. ಆದರೆ ಆ ಸ್ಥಳೀಯ ಸಮಸ್ಯೆಯ ಕುರಿತು ಅಧ್ಯಯನ ಮಾಡುತ್ತಿರುವಾಗ ಸಂಶೋಧಕರು, ಹಲ್ಲುನೋವನ್ನು ತಡೆಗಟ್ಟಲು ಲೋಕವ್ಯಾಪಕವಾಗಿ ತುಂಬ ಪ್ರಾಮುಖ್ಯವಾಗಿರುವ ಒಂದು ಅಂಶವನ್ನು ಅಕಸ್ಮಿಕವಾಗಿ ಕಂಡುಹಿಡಿದರು. ಅದೇನೆಂದರೆ, ಕುಡಿಯುವ ನೀರಿನಲ್ಲಿ ಫ್ಲೋರೈಡ್‌ ಅಂಶದ ಕೊರತೆ ಇರುವ ಪ್ರದೇಶಗಳಲ್ಲಿ ಬೆಳೆದವರಿಗೆ ದಂತಕ್ಷಯ ಹೆಚ್ಚಾಗಿರುತ್ತದೆ. ನೀರು ಸರಬರಾಯಿಯ ಹೆಚ್ಚಿನ ಮೂಲಗಳಲ್ಲಿ ಸಹಜವಾಗಿರುವ ಫ್ಲೋರೈಡ್‌ ಅಂಶವು ಹಲ್ಲಿನ ಮೇಲ್ಪದರದ ವಜ್ರಗಾರೆಯ (ಎನಾಮಲ್‌) ಮುಖ್ಯ ಘಟಕಾಂಶವಾಗಿದೆ. ತಮ್ಮ ನೀರಿನ ಸರಬರಾಯಿಯಲ್ಲಿ ಫ್ಲೋರೈಡ್‌ ಅಂಶದ ಕೊರತೆಯಿರುವ ಜನರಿಗೆ ಸೂಕ್ತ ಪ್ರಮಾಣದಲ್ಲಿ ಫ್ಲೋರೈಡ್‌ ಅನ್ನು ಕೊಡುವುದಾದರೆ ದಂತಕ್ಷಯ ಆಗುವುದು 65%ದಷ್ಟು ಕಡಿಮೆಯಾಗುತ್ತದೆ.

ಅಂತೂ ರಹಸ್ಯವು ಬಿಡಿಸಲ್ಪಟ್ಟಿತ್ತು. ಹೆಚ್ಚಿನ ಹಲ್ಲುನೋವುಗಳಿಗೆ ಕಾರಣವು ದಂತಕ್ಷಯವಾಗಿದೆ. ಸಕ್ಕರೆಯಂಶವು ಅದನ್ನು ಆಗಿಸುತ್ತದೆ. ಫ್ಲೋರೈಡ್‌ ಅಂಶವು ಅದನ್ನು ತಡೆಯುತ್ತದೆ. ಹಾಗಿದ್ದರೂ ಫ್ಲೋರೈಡ್‌, ಹಲ್ಲುಜ್ಜುವುದಕ್ಕೆ ಮತ್ತು ಫ್ಲಾಸ್‌ಮಾಡುವುದಕ್ಕೆ ಬದಲಿಯಾಗಿರದು ಎಂಬುದನ್ನು ರುಜುಪಡಿಸಲಾಗಿದೆ.

ನೋವುರಹಿತ ದಂತಚಿಕಿತ್ಸಾಶಾಸ್ತ್ರಕ್ಕಾಗಿ ಹುಡುಕಾಟ

ಅರಿವಳಿಕೆ ಪದಾರ್ಥಗಳನ್ನು ಕಂಡುಹಿಡಿಯುವ ಮುಂಚೆ ದಂತಚಿಕಿತ್ಸಾ ವಿಧಾನಗಳು ರೋಗಿಗಳಿಗೆ ಬಹಳಷ್ಟು ನೋವನ್ನುಂಟುಮಾಡುತ್ತಿದ್ದವು. ದಂತವೈದ್ಯರು ರೋಗಿಗೆ ನೋವನ್ನುಂಟುಮಾಡುವ ಹುಳುಕಾದ ಹಲ್ಲುಗಳ ಮಧ್ಯ ಭಾಗವನ್ನು ಚೂಪಾದ ಉಪಕರಣದಿಂದ ಕೆತ್ತಿ ತೆಗೆದು ಆ ಕುಳಿಗಳಲ್ಲಿ ಬಿಸಿಬಿಸಿ ಲೋಹವನ್ನು ತುಂಬಿಸುತ್ತಿದ್ದರು. ಆ ಕಾಲದಲ್ಲಿ ಬೇರಾವುದೇ ಚಿಕಿತ್ಸೆ ಇಲ್ಲದಿದ್ದ ಕಾರಣ ರೂಟ್‌ ಕನ್ಯಾಲ್‌ನೊಳಗೆ ಬಿಸಿಯಾಗಿ ಕೆಂಪೇರಿದ ಕಬ್ಬಿಣದ ಸಲಾಕೆಯನ್ನು ತೂರಿಸಿ ಸೋಂಕುಗೊಂಡ ಆ ಹಲ್ಲಿನ ಮಧ್ಯ ಭಾಗದ ಅಂಗಾಂಶವನ್ನು ನಾಶಮಾಡುತ್ತಿದ್ದರು. ವಿಶೇಷ ಉಪಕರಣಗಳು ಹಾಗೂ ಅರಿವಳಿಕೆಯ ಪದಾರ್ಥಗಳ ಬಳಕೆಯು ಆರಂಭಗೊಳ್ಳುವ ಮೊದಲು ಹಲ್ಲು ತೆಗೆಯುವುದು ತುಂಬ ಯಾತನಾಭರಿತ ಅನುಭವವಾಗಿರುತ್ತಿತ್ತು. ಹಲ್ಲುನೋವಿನಿಂದ ನರಳುತ್ತಾ ಜೀವಿಸುವುದು ಇನ್ನೂ ಹೆಚ್ಚು ಯಾತನಾಮಯ ಆಗಿದ್ದ ಕಾರಣದಿಂದಲೇ ಜನರು ಈ ಯಾತನೆಗೆ ತಮ್ಮನ್ನು ಒಳಪಡಿಸುತ್ತಿದ್ದರು. ಅಫೀಮು, ಗಾಂಜಾ-ಗಿಡ ಮತ್ತು ಮ್ಯಾಂಡ್ರೇಕ್‌ಗಳಂಥ ಗಿಡಮೂಲಿಕೆಗಳ ತಯಾರಿಕೆಗಳನ್ನು ಶತಮಾನಗಳಿಂದ ಬಳಸಲಾಗಿದೆ ಮತ್ತು ಇವು ನೋವನ್ನು ಕೇವಲ ಮಂದಗೊಳಿಸಿವೆ ಅಷ್ಟೇ. ದಂತವೈದ್ಯರು ಎಂದಾದರೂ ನೋವುರಹಿತ ಶಸ್ತ್ರಚಿಕಿತ್ಸೆಯನ್ನು ಮಾಡಶಕ್ತರಾಗುವರೋ?

ಇಸವಿ 1772ರಲ್ಲಿ ಇಂಗ್ಲಿಷ್‌ ರಸಾಯನ ವಿಜ್ಞಾನಿ ಜೋಸೆಫ್‌ ಪ್ರೀಸ್ಟ್‌ಲಿ ಅವರು ನೈಟ್ರಸ್‌ ಆಕ್ಸೈಡ್‌ ಅಥವಾ ನಗುವ ಅನಿಲ ಎಂಬ ಹೆಸರಿನಿಂದ ಕರೆಯಲಾಗುವ ಅನಿಲವನ್ನು ತಯಾರಿಸಿದ ಕೂಡಲೇ ಅದರ ಅರಿವಳಿಕೆಯ ಗುಣಲಕ್ಷಣಗಳನ್ನು ಅವಲೋಕಿಸಲಾಯಿತು. ಆದರೆ 1844ರ ವರೆಗೆ ಯಾರೂ ಅದನ್ನು ಅರಿವಳಿಕೆಯಾಗಿ ಬಳಸಲಿಲ್ಲ. ಅದೇ ವರ್ಷದ ಡಿಸೆಂಬರ್‌ ತಿಂಗಳ 10ನೇ ತಾರೀಕಿನಂದು ಯು.ಎಸ್‌.ನಲ್ಲಿರುವ ಕನೆಕ್ಟಿಕಟ್‌ನ ಹಾರ್ಟ್‌ಫರ್ಡ್‌ನಲ್ಲಿ ದಂತವೈದ್ಯನಾಗಿದ್ದ ಹೋರೆಸ್‌ ವೆಲ್ಸ್‌ ಒಂದು ಭಾಷಣಕ್ಕೆ ಹಾಜರಾದನು. ಅಲ್ಲಿ ನೆರೆದಿದ್ದ ಜನರನ್ನು ನಗುವ ಅನಿಲದಿಂದ ಮನರಂಜಿಸಲಾಯಿತು. ಅದರ ಪ್ರಭಾವದಡಿಯಿದ್ದ ಒಬ್ಬ ವ್ಯಕ್ತಿಯ ಮೊಣಕಾಲಿನ ಮುಂಭಾಗವು ಭಾರೀ ಬೆಂಚಿಗೆ ಉಜ್ಜಿದರೂ ಅವನು ನೋವಿನ ಸೂಚನೆಯನ್ನು ತೋರಿಸಲಿಲ್ಲ ಎಂಬದನ್ನು ವೆಲ್ಸ್‌ ಗಮನಿಸಿದನು. ದಂತಚಿಕಿತ್ಸೆಯ ವೇಳೆ ತನ್ನ ರೋಗಿಗಳ ನೋವನ್ನು ನೋಡಿ ತುಂಬ ಬೇಸರಪಡುತ್ತಿದ್ದ ಕರುಣಾಮಯಿ ಸ್ವಭಾವದ ವೆಲ್ಸ್‌ ಆ ಅನಿಲವನ್ನು ಅರಿವಳಿಕೆಯ ಪದಾರ್ಥವಾಗಿ ಉಪಯೋಗಿಸಲು ಆ ಕೂಡಲೇ ತೀರ್ಮಾನಿಸಿದನು. ಆದರೆ ಇತರರಿಗೆ ನೀಡುವ ಮೊದಲು ಅವನು ಅದನ್ನು ತನ್ನ ಮೇಲೆಯೇ ಪ್ರಯೋಗಿಸಲು ನಿರ್ಧರಿಸಿದನು. ಮರುದಿನವೇ ಅವನು ತನ್ನ ಚಿಕಿತ್ಸಾ ಕುರ್ಚಿಯ ಮೇಲೆ ಕುಳಿತುಕೊಂಡು ಮೂರ್ಛೆ ತಪ್ಪುವವರೆಗೆ ಆ ಅನಿಲವನ್ನು ಸೇದಿದನು. ತದನಂತರ ಜೊತೆ ಕಾರ್ಮಿಕನು ನೋಯುತ್ತಿರುವ ಅವನ ಬುದ್ಧಿಹಲ್ಲನ್ನು ಕಿತ್ತನು. ಇದೊಂದು ಐತಿಹಾಸಿಕ ಘಟನೆಯಾಗಿತ್ತು. ಕೊನೆಗೂ ನೋವುರಹಿತ ದಂತಚಿಕಿತ್ಸಾಶಾಸ್ತ್ರವು ಆಗಮಿಸಿತ್ತು. *

ಅಂದಿನಿಂದ ದಂತಚಿಕಿತ್ಸಾಶಾಸ್ತ್ರ ವಿದ್ಯೆಯು ತಂತ್ರಜ್ಞಾನ ಸಂಬಂಧಿತವಾದ ಅನೇಕ ಅಭಿವೃದ್ಧಿಗಳನ್ನು ಕಂಡಿದೆ. ಆದುದರಿಂದ ದಂತವೈದ್ಯರ ಬಳಿ ಹೋಗುವುದು ಇಂದು ಇನ್ನಷ್ಟು ಹಿತವಾದ ಅನುಭವವಾಗಿದೆ. (g 9/07)

[ಪಾದಟಿಪ್ಪಣಿ]

^ ಇಂದು ನೈಟ್ರಸ್‌ ಆಕ್ಸೈಡ್‌ನ ಬದಲಿಗೆ ನಿರ್ದಿಷ್ಟ ಭಾಗಗಳನ್ನು ಮಾತ್ರ ಜಡಗೊಳಿಸುವ ಅರಿವಳಿಕೆಗಳನ್ನು ಹೆಚ್ಚು ವ್ಯಾಪಕವಾಗಿ ಬಳಸಲಾಗುತ್ತದೆ.

[ಪುಟ 28ರಲ್ಲಿರುವ ಚಿತ್ರ]

ಪ್ರಪ್ರಥಮ ಯು.ಎಸ್‌. ಅಧ್ಯಕ್ಷ ಜಾರ್ಜ್‌ ವಾಷಿಂಗ್‌ಟನ್‌ರ ಐವೊರಿ ದಂತಪಂಕ್ತಿ

[ಕೃಪೆ]

Courtesy of The National Museum of Dentistry, Baltimore, MD

[ಪುಟ 29ರಲ್ಲಿರುವ ಚಿತ್ರ]

ನೈಟ್ರಸ್‌ ಆಕ್ಸೈಡ್‌ ಅನ್ನು ಅರಿವಳಿಕೆಯಾಗಿ ಬಳಸಿ 1844ರಲ್ಲಿ ನಡೆಸಲಾದ ಮೊದಲ ದಂತ ಶಸ್ತ್ರಚಿಕಿತ್ಸೆಯ ಕುರಿತ ಒಂದು ಕಲಾಕೃತಿ

[ಕೃಪೆ]

Courtesy of the National Library of Medicine

[ಪುಟ 29ರಲ್ಲಿರುವ ಚಿತ್ರ ಕೃಪೆ]

Courtesy of the National Library of Medicine