ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗಂಡನು ಕುಟುಂಬದ ಯಜಮಾನನಾಗಿರುವುದರ ಅರ್ಥವೇನು?

ಗಂಡನು ಕುಟುಂಬದ ಯಜಮಾನನಾಗಿರುವುದರ ಅರ್ಥವೇನು?

ಬೈಬಲಿನ ದೃಷ್ಟಿಕೋನ

ಗಂಡನು ಕುಟುಂಬದ ಯಜಮಾನನಾಗಿರುವುದರ ಅರ್ಥವೇನು?

ಅನೇಕ ದೇಶಗಳಲ್ಲಿ ಗಂಡುಹೆಣ್ಣು ವಿವಾಹವಾಗುವಾಗ ಪ್ರತಿಜ್ಞೆ ಮಾಡುವುದು ವಾಡಿಕೆ. ಆ ಪ್ರಮಾಣ​ವಚನದಲ್ಲಿ ಮದುಮಗಳು ತನ್ನ ಪತಿಗೆ ವಿಧೇಯಳಾಗಿರುತ್ತೇನೆ ಎಂದು ಮಾತುಕೊಡುತ್ತಾಳೆ. ಹಾಗಿದ್ದರೂ, ಕುಟುಂಬದಲ್ಲಿ ಗಂಡಸರು ಯಜಮಾನರಾಗಿರುವ ವಿಷಯದಲ್ಲಿ ಅಂದರೆ ಗಂಡಸರು ತಲೆತನವನ್ನು ನಿರ್ವಹಿಸುವುದರ ಬಗ್ಗೆ ಅನೇಕ ಸ್ತ್ರೀಯರು ಸಿಡಿಮಿಡಿಗೊಳ್ಳುತ್ತಾರೆ. ಆದರೆ, ಈ ವಿಷಯವಾಗಿ ಬೈಬಲ್‌ ಏನನ್ನು ಬೋಧಿಸುತ್ತದೆ ಎಂಬುದನ್ನು ಪರಿಗಣಿಸಿರಿ. ಬೈಬಲ್‌ ತಿಳಿಸುವ ವಿಷಯವು ನ್ಯಾಯಸಮ್ಮತವೂ ಪ್ರಾಯೋಗಿಕವೂ ಆಗಿದೆಯೆಂದು ನೀವು ಕಂಡುಕೊಳ್ಳುವಿರಿ.

ದೇವರು ವಿಶದೀಕರಿಸಿದ ತಲೆತನ

ತಲೆತನದ ಕುರಿತ ಬೈಬಲಿನ ಪ್ರಾಮುಖ್ಯ ವಿವರಣೆಯು ಎಫೆಸ 5:​22-24 ರಲ್ಲಿದೆ. ಅದು ತಿಳಿಸುವುದು: “ಸ್ತ್ರೀಯರೇ, ನೀವು ಕರ್ತನಿಗೆ ಹೇಗೋ ಹಾಗೆಯೇ ನಿಮ್ಮನಿಮ್ಮ ಗಂಡಂದಿರಿಗೆ ಅಧೀನರಾಗಿರ್ರಿ. ಕ್ರಿಸ್ತನು ಸಭೆಗೆ ತಲೆಯಾಗಿರುವ ಪ್ರಕಾರವೇ ಗಂಡನು ಹೆಂಡತಿಗೆ ತಲೆಯಾಗಿದ್ದಾನೆ. . . . ಸಭೆಯು ಕ್ರಿಸ್ತನಿಗೆ ಹೇಗೆ ಅಧೀನವಾಗಿದೆಯೋ ಹಾಗೆಯೇ ಸ್ತ್ರೀಯರು ತಮ್ಮತಮ್ಮ ಗಂಡಂದಿರಿಗೆ ಎಲ್ಲಾ ವಿಷಯಗಳಲ್ಲಿ ಅಧೀನರಾಗಿರಬೇಕು.” ಗಂಡನು “ಹೆಂಡತಿಗೆ ತಲೆಯಾಗಿ” ರುವ ಕಾರಣ ಕುಟುಂಬದ ನೇತೃತ್ವವನ್ನು ವಹಿಸಬೇಕು ಹಾಗೂ ಹೆಂಡತಿಯು ಅವನ ನೇತೃತ್ವವನ್ನು ಅನುಸರಿಸುತ್ತಾ ಅವನ ತಲೆತನವನ್ನು ಗೌರವಿಸಬೇಕು.​—⁠ಎಫೆಸ 5:​33, NIBV.

ಒಬ್ಬ ಗಂಡನು ದೇವರಿಗೂ ಕ್ರಿಸ್ತನಿಗೂ ಅಧೀನನಾಗಿರುವುದರಿಂದ ಅವನ ಅಧಿಕಾರಕ್ಕೂ ಒಂದು ಪರಿಮಿತಿಯಿದೆ. ಹೆಂಡತಿಯು ದೇವರ ನಿಯಮಗಳನ್ನು ಮುರಿಯುವಂತೆ ಇಲ್ಲವೆ ತನ್ನ ಬೈಬಲ್‌ ಶಿಕ್ಷಿತ ಮನಸ್ಸಾಕ್ಷಿಗೆ ವಿರುದ್ಧವಾದುದ್ದನ್ನು ಮಾಡುವಂತೆ ಆಕೆಯ ಮೇಲೆ ಅಧಿಕಾರ ಚಲಾಯಿಸುವ ಹಕ್ಕು ಅವನಿಗಿಲ್ಲ. ಆದರೆ, ಈ ಪರಿಮಿತಿಯೊಳಗೆ ಇದ್ದುಕೊಂಡೇ ಕುಟುಂಬಕ್ಕಾಗಿ ಪ್ರಾಮುಖ್ಯ ನಿರ್ಣಯಗಳನ್ನು ಮಾಡುವ ಜವಾಬ್ದಾರಿಯನ್ನು ದೇವರು ಅವನಿಗೆ ವಹಿಸಿದ್ದಾನೆ.​—⁠ರೋಮಾಪುರ 7:2; 1 ಕೊರಿಂಥ 11:⁠3.

ಗಂಡನು ತನಗಿಂತಲೂ ತನ್ನ ಹೆಂಡತಿಯ ಹಿತಕ್ಷೇಮವನ್ನು ಮೊದಲು ಆಲೋಚಿಸುತ್ತಾ ತಲೆತನವನ್ನು ನಿಸ್ವಾರ್ಥದಿಂದ ನಿರ್ವಹಿಸುವಂತೆ ಬೈಬಲ್‌ ಆಜ್ಞಾಪಿಸುತ್ತದೆ. ಎಫೆಸ 5:​25, 26 ಹೇಳುವುದು: “[ಗಂಡಂದಿರೇ,] ಕ್ರಿಸ್ತನು ಸಭೆಯನ್ನು ಪ್ರೀತಿಸಿದ ಪ್ರಕಾರವೇ ನಿಮ್ಮ ನಿಮ್ಮ ಹೆಂಡತಿಯರನ್ನು ಪ್ರೀತಿಸಿರಿ. ಆತನು . . . [ಅದಕ್ಕಾಗಿ] ತನ್ನನ್ನು ಒಪ್ಪಿಸಿಕೊಟ್ಟನು.” ಕ್ರಿಸ್ತನ ಪ್ರೀತಿಯ ಅತ್ಯುತ್ಕೃಷ್ಟ ಮಾದರಿಯನ್ನು ಅನುಸರಿಸುವ ಗಂಡನೊಬ್ಬನು ತನಗಿರುವ ಅಧಿಕಾರವನ್ನು ಸ್ವಾರ್ಥಕ್ಕಾಗಿ ಬಳಸುವುದಿಲ್ಲ.

ಅಷ್ಟಲ್ಲದೆ, ಪುರುಷನು ತನ್ನ ಹೆಂಡತಿಯೊಂದಿಗೆ “ವಿವೇಕದಿಂದ” ನಡಕೊಳ್ಳುವಂತೆ ಬೈಬಲ್‌ ಸಲಹೆ ನೀಡುತ್ತದೆ. (1 ಪೇತ್ರ 3:7) ಇದು, ಕೇವಲ ಸ್ತ್ರೀಪುರುಷರ ನಡುವಿನ ಶಾರೀರಿಕ ಹಾಗೂ ಭಾವನಾತ್ಮಕ ವ್ಯತ್ಯಾಸಗಳ ಅರಿವನ್ನು ಹೊಂದಿರುವುದಕ್ಕಿಂತಲೂ ಎಷ್ಟೋ ಹೆಚ್ಚಿನ ವಿಷಯವಾಗಿದೆ. ಅಂದರೆ, ಅವನು ತನ್ನ ಹೆಂಡತಿಯ ಅಗತ್ಯಗಳನ್ನು ಅರ್ಥಮಾಡಿಕೊಳ್ಳಬೇಕು.

ಆಕೆ “ನಿನ್ನ ಸಹಚಾರಿಣಿ”

ಹೆಂಡತಿಯ ಅಧೀನತೆಯು ಆಕೆ ಎಲ್ಲವನ್ನು ಸಹಿಸಿಕೊಳ್ಳಬೇಕೆಂಬುದನ್ನು ಅರ್ಥೈಸುತ್ತದೋ? ಉದಾಹರಣೆಗೆ ಸಾರಳನ್ನು ಪರಿಗಣಿಸಿರಿ. ಆಕೆ ತನ್ನ ಗಂಡನಾದ ಅಬ್ರಹಾಮನಿಗೆ ವಿಧೇಯತೆ ತೋರಿಸಿದರಲ್ಲಿ ಮಾದರಿಯಾಗಿದ್ದಾಳೆ ಎಂದು ಬೈಬಲ್‌ ತಿಳಿಸುತ್ತದೆ. (1 ಪೇತ್ರ 3:5, 6) ಆಕೆಯು ಸುಖಸೌಕರ್ಯಗಳ ಮನೆಯನ್ನು ಬಿಟ್ಟು ಗುಡಾರದಲ್ಲಿ ಅಲೆಮಾರಿಯಾಗಿ ಬದುಕುವಂಥ ದೊಡ್ಡ ವಿಷಯಗಳಿಂದ ಹಿಡಿದು ಅನಿರೀಕ್ಷಿತ ಅತಿಥಿಗಳಿಗೆ ಅಡಿಗೆಮಾಡಿ ಬಡಿಸುವ ಸಣ್ಣ ವಿಷಯಗಳ ವರೆಗೆ ಎಲ್ಲದರಲ್ಲೂ ಅಬ್ರಹಾಮನಿಗೆ ಅಧೀನಳಾಗಿದ್ದಳು. (ಆದಿಕಾಂಡ 12:5-9; 18:6) ಆದರೆ, ಒಮ್ಮೆ ಗಂಭೀರವಾದ ಸನ್ನಿವೇಶವೊಂದು ಉದ್ಭವಿಸಿತು. ಸಾರಳು ಅಬ್ರಹಾಮನ ದಾಸಿಯಾದ ಹಾಗರಳನ್ನು ಮತ್ತು ಅವನ ಚೊಚ್ಚಲ ಮಗನಾದ ಇಷ್ಮಾಯೇಲನನ್ನು ಮನೆಯಿಂದ ಹೊರಗೆ ಹಾಕಲು ಬಯಸಿದಳು. ಇದು ಅಬ್ರಹಾಮನಿಗೆ ಇಷ್ಟವಾಗಲಿಲ್ಲ. ಆದರೂ, ಈ ಕುರಿತು ಆಕೆ ಪದೇ ಪದೇ ತನ್ನ ಗಂಡನಿಗೆ ತಿಳಿಸಿದಳು. ಈ ವಿಷಯದಲ್ಲಿ ದೇವರು ಸಾರಳನ್ನು ತಿದ್ದಲಿಲ್ಲ, ಬದಲಿಗೆ “ಸಾರಳು ಹೇಳಿದಂತೆಯೇ ಮಾಡು” ಎಂದು ಅಬ್ರಹಾಮನಿಗೆ ಹೇಳಿದನು. ಈ ಸಂದರ್ಭದಲ್ಲಿ, ಅಬ್ರಹಾಮನು ನಿರ್ಣಯ ತೆಗೆದುಕೊಳ್ಳುವ ವರೆಗೆ ಸಾರಳು ಅವನಿಗೆ ಅಧೀನಳಾಗಿ ತಾಳ್ಮೆಯಿಂದ ಕಾದುಕೊಂಡಿದ್ದಳೇ ಹೊರತು ತಾನೇ ಹಾಗರಳನ್ನೂ ಇಷ್ಮಾಯೇಲನನ್ನೂ ಓಡಿಸಿಬಿಡಲು ಪ್ರಯತ್ನಿಸಲಿಲ್ಲ.​—⁠ಆದಿಕಾಂಡ 21:8-14.

ಗಂಡನು ಹೇಳುವುದನ್ನು ಕೇಳಿ ಸುಮ್ಮನಿರುವುದೇ ಹೆಂಡತಿಯೊಬ್ಬಳ ಧರ್ಮ ಎಂಬುದರ ಬದಲಿಗೆ, ಅವಳು ತನ್ನ ಗಂಡನಿಗೆ “ಸಹಚಾರಿಣಿ” ಅಥವಾ ಸಹಭಾಗಿಯಾಗಿದ್ದು ಗೌರವಕ್ಕೆ ಪಾತ್ರಳಾಗಿದ್ದಾಳೆ ಎಂದು ಸಾರಳ ಉದಾಹರಣೆ ತೋರಿಸಿಕೊಡುತ್ತದೆ. (ಮಲಾಕಿಯ 2:14) ಗಂಡನಿಗೆ ಸಹಭಾಗಿಯಾಗಿರುವ ಆಕೆ, ಕುಟುಂಬದಲ್ಲಿ ಅವನು ನಿರ್ಣಯಗಳನ್ನು ಮಾಡುವಾಗ ತನ್ನ ಅತ್ಯಮೂಲ್ಯ ಸಲಹೆಗಳನ್ನು ಕೊಡುತ್ತಾಳೆ. ಕೆಲವೊಂದು ಹಣಕಾಸಿನ ವಿಷಯಗಳನ್ನು ಒಳಗೊಂಡು ಹಲವಾರು ರೀತಿಯಲ್ಲಿ ಕುಟುಂಬವನ್ನು ನಿಭಾಯಿಸುವ ಸ್ವಲ್ಪ ಅಧಿಕಾರವೂ ಆಕೆಗೆ ಇದೆ. ಹಾಗಿದ್ದರೂ, ಅಂತಿಮ ತೀರ್ಮಾನ ಮಾಡುವುದು ಕುಟುಂಬದ ತಲೆಯಾಗಿರುವ ಇಲ್ಲವೆ ಯಜಮಾನನಾಗಿರುವ ಗಂಡನ ಜವಾಬ್ದಾರಿಯಾಗಿದೆ.​—⁠ಜ್ಞಾನೋಕ್ತಿ 31:10-31; 1 ತಿಮೊಥೆಯ 5:14.

ಸೃಷ್ಟಿಕರ್ತನಿಗೆ ಗೌರವ

ಯೆಹೋವ ದೇವರು ಗಂಡು ಹೆಣ್ಣನ್ನು ಸೃಷ್ಟಿಸಿ ವಿವಾಹವೆಂಬ ಪವಿತ್ರ ಬಂಧದಲ್ಲಿ ಐಕ್ಯಗೊಳಿಸಿದನು. (ಆದಿಕಾಂಡ 2:18-24) ಆತನು ಪತಿಪತ್ನಿಯರಿಗೆ ಹೇರಳ ಸಂತೋಷವನ್ನು ತರುವ ಪಾತ್ರಗಳನ್ನು ಸಹ ಸ್ಪಷ್ಟವಾಗಿ ತಿಳಿಸಿದನು.​—⁠ಧರ್ಮೋಪದೇಶಕಾಂಡ 24:5; ಜ್ಞಾನೋಕ್ತಿ 5:18.

ಯೆಹೋವನು ವಿವಾಹದ ಮೂಲ ಸ್ಥಾಪಕನಾಗಿರುವುದರಿಂದ ವೈವಾಹಿಕ ಜೀವನಕ್ಕೆ ಬೇಕಾದ ಮಟ್ಟಗಳನ್ನಿಡಲು ಹಕ್ಕುಳ್ಳವನು ಹಾಗೂ ಸಮರ್ಥನು ಆಗಿದ್ದಾನೆ. ದಂಪತಿಗಳು ದೇವರ ಏರ್ಪಾಡಾಗಿರುವ ತಲೆತನವನ್ನು ಅನುಸರಿಸುವುದಾಗಲಿ, ತಮ್ಮ ತಮ್ಮ ಪಾತ್ರಗಳನ್ನು ನಿರ್ವಹಿಸುವುದಾಗಲಿ ಕೇವಲ ಅದು ಪ್ರಾಯೋಗಿಕವಾಗಿದೆ ಎಂಬ ಕಾರಣಕ್ಕಾಗಿ ಮಾತ್ರವಲ್ಲ ಬದಲಿಗೆ ದೇವರ ಅಧಿಕಾರಕ್ಕೆ ಗೌರವ ತೋರಿಸುವುದಕ್ಕಾಗಿ ಮತ್ತು ಆತನ ಮೆಚ್ಚುಗೆ ಹಾಗೂ ಬೆಂಬಲವನ್ನು ಪಡೆದುಕೊಳ್ಳಲಿಕ್ಕಾಗಿದೆ. (g 1/08)

ಇದರ ಬಗ್ಗೆ ನೀವು ಯೋಚಿಸಿದ್ದುಂಟೋ?

ತಲೆತನದ ಕುರಿತು ಉತ್ತಮ ಮಾದರಿಯನ್ನಿಟ್ಟವನು ಯಾರು?​—⁠ಎಫೆಸ 5:⁠25.

ದೇವರು ಗಂಡನೊಬ್ಬನ ಅಧಿಕಾರಕ್ಕೆ ಮಿತಿಯನ್ನಿಟ್ಟಿದ್ದಾನೋ?​—⁠1 ಕೊರಿಂಥ 11:⁠3.

ವಿವಾಹ ಮತ್ತು ತಲೆತನದ ಉದ್ದೇಶವೇನಾಗಿದೆ?​—⁠ಜ್ಞಾನೋಕ್ತಿ 5:18.

[ಪುಟ 28ರಲ್ಲಿರುವ ಚಿತ್ರ]

ಕ್ರಿಸ್ತನ ಮಾದರಿಗನುಸಾರ ತಲೆತನವನ್ನು ನಿರ್ವಹಿಸುವುದರಿಂದ ಪತಿಪತ್ನಿಯರಿಬ್ಬರು ಹರ್ಷೋಲ್ಲಾಸ ಮತ್ತು ಸಂತೃಪ್ತಿಯಿಂದಿರುವರು