ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜಗತ್ತನ್ನು ಗಮನಿಸುವುದು

ಜಗತ್ತನ್ನು ಗಮನಿಸುವುದು

ಜಗತ್ತನ್ನು ಗಮನಿಸುವುದು

“ಬ್ರಿಟನ್‌ನಲ್ಲಿ ಸಾಮಾನ್ಯವಾಗಿ ಮಗುವೊಂದು ಆರು ವರ್ಷ ತುಂಬುವುದರೊಳಗೆ ಒಂದು ಇಡೀ ವರ್ಷವನ್ನು ಟಿವಿ ವಿಕ್ಷಣೆಯಲ್ಲೇ ಕಳೆದಿರುತ್ತದೆ ಮತ್ತು ಮೂರು ವರ್ಷದ ಪುಟಾಣಿಗಳಲ್ಲಿ 50% ಕ್ಕಿಂತ ಹೆಚ್ಚಿನವರ ಬೆಡ್‌ರೂಮ್‌ನಲ್ಲಿ ಟಿವಿ ಇರುತ್ತದೆ.”​⁠ದಿ ಇಂಡಿಪೆಂಡೆಂಟ್‌, ಬ್ರಿಟನ್‌.

ಚೀನಾ ದೇಶದಲ್ಲಿ 16 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ 31.4% ಜನರು ತಾವು ಧಾರ್ಮಿಕ ವ್ಯಕ್ತಿಗಳಾಗಿದ್ದೇವೆಂದು ಮತಹಾಕಿದರು. ಇದು ಇಡೀ ದೇಶದ ಅಂಕಿ-ಅಂಶವಾಗಿದ್ದಲ್ಲಿ, ಈ ಅಧ್ಯಯನದ ಪ್ರಕಾರ ದೇಶದಲ್ಲಿ “ಸುಮಾರು ಮೂವತ್ತು ಕೋಟಿ ಧಾರ್ಮಿಕ ವ್ಯಕ್ತಿಗಳಿದ್ದಾರೆ. . . . ಆದರೆ ಇದನ್ನು ಸರ್ಕಾರದ ಅಧಿಕೃತ ದಾಖಲೆಯಾದ ಹತ್ತು ಕೋಟಿಗೆ ಹೋಲಿಸುವಾಗ ಅಜಗಜಾಂತರ.”​ಚೈನಾ ಡೈಲಿ, ಚೀನಾ.

ಬಯಸಿದ್ದು ಒಳಿತು ಆದದ್ದು ಕೇಡು

ಕೆಲವು ವರ್ಷಗಳ ಹಿಂದೆ ಡಚ್ಚ್‌ ರಾಜಕಾರಣಿಗಳು ಮತ್ತು ​ಪರಿಸರತಜ್ಞರು ನವೀಕರಿಸಬಲ್ಲ ಶಕ್ತಿಯ ಉತ್ಪಾದನೆಗೆ ತಾವು ಸುಲಭೋಪಾಯವನ್ನು ಕಂಡುಕೊಂಡೆವೆಂದು ನೆನೆಸಿದರು. ಅಂದರೆ ಜೈವಿಕ ಇಂಧನದ ಮೂಲಕ ಅದರಲ್ಲೂ ತಾಳೆ ಎಣ್ಣೆಯನ್ನು ಬಳಸಿ ಓಡಿಸುವುದು ಉಚಿತವೆಂದು ಅವರು ಎಣಿಸಿದರು. ಆದರೆ ಅವರ ಹೆಬ್ಬಯಕೆ ಒಂದು “ನೈಸರ್ಗಿಕ ಗಂಡಾಂತರ” ಆಗಿದೆಯೆಂದು ದ ನ್ಯೂ ಯಾರ್ಕ್‌ ಟೈಮ್ಸ್‌ ಪತ್ರಿಕೆ ಹೇಳುತ್ತದೆ. ಅದು ಮುಂದುವರಿಸಿ ಹೇಳಿದ್ದು: “ಯೂರೋಪಿನಲ್ಲಿ ತಾಳೆ ಎಣ್ಣೆಯ ಬೇಡಿಕೆ ಹೆಚ್ಚಿದಂತೆ ಆಗ್ನೇಯ ಏಷ್ಯಾದ ವಿಶಾಲವಾದ ಮಳೆಕಾಡು ಬೋಳಾಗ​ತೊಡಗಿತು. ಅಲ್ಲದೆ ಅಲ್ಲಿ ರಾಸಾಯನಿಕ ರಸಗೊಬ್ಬರಗಳ ಬಳಕೆಗೆ ಮಿತಿಯೇ ಇರಲಿಲ್ಲ.” ತಾಳೆ ತೋಟಗಳನ್ನು ಮಾಡಲಿಕ್ಕಾಗಿ ಭೂಮಿಯನ್ನು ಸುಟ್ಟು ಅದರ ತೇವಾಂಶ ತೆಗೆಯುವುದು ಅಗತ್ಯವಾಗಿದ್ದರಿಂದ “ಭಾರಿ ಪ್ರಮಾಣದ” ಕಾರ್ಬನ್‌ ಅನಿಲಗಳು ವಾತಾವರಣಕ್ಕೆ ಸೇರ್ಪಡೆಯಾದವು. ಪರಿಣಾಮ? “ವಿಜ್ಞಾನಿಗಳು ನಂಬುವಂತೆ ಭೌಗೋಳಿಕ ಕಾವೇರುವಿಕೆಗೆ ಕಾರಣವಾಗಿರುವ ಕಾರ್ಬನ್‌ ಉತ್ಸರ್ಜನೆಯಲ್ಲಿ ಇಂಡೋನೇಷ್ಯವು ಜಗತ್ತಿನಲ್ಲೇ ಮೂರನೆಯ ಸ್ಥಾನಕ್ಕೆ ಬೇಗನೇ ಮಟ್ಟಿತು” ಎಂದು ಟೈಮ್ಸ್‌ ಪತ್ರಿಕೆಯು ತಿಳಿಸುತ್ತದೆ.

“ವಿನಾಶದಿನದ ಗಡಿಯಾರದ” ಮುಳ್ಳನ್ನು ಮುಂದಕ್ಕೆ ತರಲಾಗಿದೆ

ಮಾನವಕುಲವು ಪರಮಾಣು ದುರಂತಕ್ಕೆ ಎಷ್ಟು ಹತ್ತಿರವಾಗಿದೆ ಎಂದು ತೋರಿಸಲು ಬುಲೆಟಿನ್‌ ಆಫ್‌ ಅಟಾಮಿಕ್‌ ಸೈಂಟಿಸ್ಟ್ಸ್‌ (BAS) ರಚಿಸಿದ ವಿನಾಶದಿನದ ಗಡಿಯಾರದ ಮುಳ್ಳನ್ನು ಎರಡು ನಿಮಿಷ ಮುಂದಕ್ಕೆ ತರಲಾಗಿದೆ. ಅದು ಮಧ್ಯರಾತ್ರಿಗೆ ಅಂದರೆ, “ನಾಗರಿಕತೆಯ ಸಾಂಕೇತಿಕ ಅಂತ್ಯ” ಕ್ಕೆ ಇನ್ನು ಐದೇ ನಿಮಿಷ ಉಳಿದಿದೆ ಎಂದು ತೋರಿಸುತ್ತದೆ. ಗಡಿಯಾರದ ಮುಳ್ಳನ್ನು ಅದರ 60 ವರ್ಷಗಳ ಇತಿಹಾಸದಲ್ಲಿ ಕೇವಲ 18 ಸಲ ತಿರುಗಿಸಲಾಗಿದೆ. ಅದನ್ನು ಕೊನೆಯ ಸಲ ತಿರುಗಿಸಿದ್ದು, ನ್ಯೂ ಯಾರ್ಕ್‌ನ ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ನಡೆದ ದಾಳಿಯ ಬಳಿಕ, 2002 ರ ಫೆಬ್ರವರಿ ತಿಂಗಳಲ್ಲಿ. ಮಾರಕ ಅಣ್ವಸ್ತ್ರಗಳ ತಯಾರಿಕೆ, ಸಂಗ್ರಹ ಮತ್ತು ನ್ಯೂಕ್ಲಿಯರ್‌ ಪದಾರ್ಥಗಳ ಸುರಕ್ಷತೆಯನ್ನು ನೋಡಿಕೊಳ್ಳುವುದರಲ್ಲಿನ ವೈಫಲ್ಯವು “ಭೂಮಿಯಲ್ಲಿರುವ ಅತಿ ವಿನಾಶಕರ ತಂತ್ರಜ್ಞಾನವು ಒಡ್ಡಿದ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಸೋತಿರುವುದರ ಲಕ್ಷಣವಾಗಿದೆ” ಎಂದು BAS ನ ವರದಿಯೊಂದು ತಿಳಿಸಿತು. ಅಲ್ಲದೆ “ಹವಾಮಾನದಲ್ಲಿನ ಬದಲಾವಣೆಗಳು ಅಣ್ವಸ್ತ್ರಗಳಷ್ಟೇ ಅಪಾಯಕಾರಿಯಾಗಿವೆ” ಎಂದು ಸಹ ಆ ವರದಿ ತಿಳಿಸಿತು.

ಗರ್ಭಿಣಿಯಾಗಿರುವಾಗ ಒತ್ತಡ

ಗರ್ಭಿಣಿ ಸ್ತ್ರೀ ತನ್ನ ಗಂಡನ ಹಿಂಸೆ ಅಥವಾ ಅವನೊಂದಿಗಿನ ವಾಗ್ವಾದದಿಂದಾಗಿ ಅನುಭವಿಸುವ ಒತ್ತಡವು ಗರ್ಭದಲ್ಲಿರುವ ಮಗುವಿನ ಮಾನಸಿಕ ಬೆಳವಣಿಗೆಯ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ ಎಂದು ಇತ್ತೀಚಿಗಿನ ಸಂಶೋಧನೆಯು ತಿಳಿಸುತ್ತದೆ. ಲಂಡನ್‌ನ ಇಂಪೀರಿಯಲ್‌ ಕಾಲೇಜಿನ ಫ್ರೋ।। ವಿವೆಟ್‌ ಗ್ಲೆವರ್‌ ತಿಳಿಸುವುದು: “ಗರ್ಭಿಣಿಯಾಗಿರುವಾಗ ತನ್ನ ಪತಿಯಿಂದ ಭಾವನಾತ್ಮಕ ನೋವನ್ನು ಅನುಭವಿಸಿದರೆ ಅದು [ಆಕೆಯ] ಮಗುವಿನ ಮುಂದಿನ ಬೆಳವಣಿಗೆಯ ಮೇಲೆ ದೊಡ್ಡ ಪರಿಣಾಮಬೀರುವುದು ಎಂಬದನ್ನು ನಾವು ಕಂಡುಕೊಂಡೆವು. ಆದುದರಿಂದ ತಂದೆಯ ಪಾತ್ರ ತುಂಬ ಪ್ರಾಮುಖ್ಯ.” ದಂಪತಿಗಳ ನಡುವಿನ ಸಂಬಂಧವು “ತಾಯಿಯ ದೇಹದ ಹಾರ್ಮೋನ್‌ ಹಾಗೂ ರಾಸಾಯನಿಕ ಸಮತೋಲನವನ್ನು ಪ್ರಭಾವಿಸುತ್ತದೆ ಮತ್ತು ಇದು ಮಗುವಿನ ಮಿದುಳಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ” ಎಂದು ಅವರು ವಿವರಿಸಿದರು. (g 1/08)

ನಿತ್ಯ ಚಾಲಕರ ನಿರ್ಲಕ್ಷ್ಯ

ಪ್ರತಿ ದಿನ ಒಂದೇ ದಾರಿಯಲ್ಲಿ ಪ್ರಯಾಣಿಸುವ ಚಾಲಕರು ಅನೇಕವೇಳೆ ತಮ್ಮ ಮಿದುಳಿನ ಪ್ರಜ್ಞಾಪೂರ್ವಕ ಯೋಚನೆ ನಡೆಯುವಂಥ ಭಾಗವನ್ನು ಉಪಯೋಗಿಸದೆ ವಾಹನ ಚಲಾಯಿಸುತ್ತಾರೆ ಎಂದು ಜರ್ಮನಿಯ ಡ್ಯುಸ್‌ಬರ್ಗ್‌-ಎಸ್ಸೆನ್‌ ವಿಶ್ವವಿದ್ಯಾನಿಲಯದ ಸಂಚಾರ ವಿಜ್ಞಾನಿ ಮೈಕೇಲ್‌ ಶ್ರೆಕೆನ್‌ಬರ್ಗ್‌ ತಿಳಿಸುತ್ತಾರೆ. ಚಿರಪರಿಚಿತ ರಸ್ತೆಯಲ್ಲಿ ಚಲಿಸುವಾಗ ಚಾಲಕರು, ವಾಹನ ಸಂಚಾರದ ಮೇಲೆ ಗಮನವಿಡುವ ಬದಲು ಬೇರೆ ವಿಷಯಗಳಲ್ಲಿ ತಲ್ಲೀನರಾಗಿರುತ್ತಾರೆ. ಇದರಿಂದಾಗಿ ಚಾಲಕರಿಗೆ ಅಪಾಯವನ್ನು ಕೂಡಲೆ ಗುರುತಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ನಿತ್ಯ ಚಾಲಕರು ಎಚ್ಚರದಿಂದಿರುವ ಆವಶ್ಯಕತೆಯನ್ನು ಸದಾ ನೆನಪಿನಲ್ಲಿಡಬೇಕು. ಅಲ್ಲದೆ ತಮ್ಮ ಗಮನವು ಇತರ ವಿಷಯಗಳ ಕಡೆಗೆ ಓಲದೆ ಕೇವಲ ರಸ್ತೆಯ ಮೇಲೆಯೇ ಇರುವಂತೆ ನಿಗಾವಹಿಸಬೇಕು ಎಂಬುದು ನಿತ್ಯ ಚಾಲಕರಿಗೆ ಶ್ರೆಕೆನ್‌ಬರ್ಗ್‌ರವರ ಕಿವಿಮಾತು. (g 1/08)