ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮೀನುಗಾರಿಕೆಯ ಗ್ರಾಮದಿಂದ ಬೆಳೆದುನಿಂತ ಮಹಾ ನಗರ!

ಮೀನುಗಾರಿಕೆಯ ಗ್ರಾಮದಿಂದ ಬೆಳೆದುನಿಂತ ಮಹಾ ನಗರ!

ಮೀನುಗಾರಿಕೆಯ ಗ್ರಾಮದಿಂದ ಬೆಳೆದುನಿಂತ ಮಹಾ ನಗರ!

ಜಪಾನ್‌ನ ಎಚ್ಚರ! ಲೇಖಕರಿಂದ

ಇಸವಿ 1590 ರ ಆಗಸ್ಟ್‌ ತಿಂಗಳು. ಅದೊಂದು ಬೇಸಿಗೆ ಕಾಲದ ಸುಂದರ ದಿನ. ಇಯೆಯಾಸು ಟೋಕುಗಾವಾ (ಬಲ) ಎಂಬವರು ಜಪಾನಿನ ಆಗ್ನೇಯದಲ್ಲಿರುವ ಎಡೋ ಎಂಬ ಮೀನುಗಾರಿಕೆಯ ಗ್ರಾಮಕ್ಕೆ ಕಾಲಿಟ್ಟರು. ಕಾಲಾನಾಂತರ ಅವರು ಟೋಕುಗಾವಾದ ಮೊದಲ ಷೋಗನ್‌ ಆದರು. * ಆಗ “ಎಡೋ ಗ್ರಾಮದಲ್ಲಿ ಬೇಸಾಯಗಾರರ ಮತ್ತು ಬೆಸ್ತರ ಗುಡಿಸಲನ್ನೂ ಸೇರಿಸಿ ಹಾಳಾದ ಸ್ಥಿತಿಯಲ್ಲಿದ್ದ ಕೇವಲ ನೂರು ಮನೆಗಳಿದ್ದವು” ಎಂದು ದ ಷೋಗನ್ಸ್‌ ಸಿಟಿ​—⁠ಎ ಹಿಸ್ಟರಿ ಆಫ್‌ ಟೋಕಿಯೋ ಎಂಬ ಪುಸ್ತಕ ತಿಳಿಸುತ್ತದೆ. ಸಮೀಪದಲ್ಲೇ ನೂರಕ್ಕಿಂತ ಹೆಚ್ಚು ವರ್ಷದ ಹಿಂದೆ ಕಟ್ಟಿದ ಒಂದು ಕೋಟೆ ಹಾಳುಬಿದ್ದಿತ್ತು.

ಶತಮಾನಗಳ ವರೆಗೆ ಅಜ್ಞಾತವಾಗಿದ್ದ ಈ ಗ್ರಾಮವು ಜಪಾನ್‌ ದೇಶದ ರಾಜಧಾನಿ ಟೋಕಿಯೋ ಆಗಿ ಬೆಳೆಯಿತು ಮಾತ್ರವಲ್ಲ ಜನರಿಂದ ಗಿಜಿಗುಟ್ಟುವ ಮಹಾ ನಗರವೂ ಆಯಿತು. ಈಗ ಟೋಕಿಯೋ ನಗರದ ಆಡಳಿತ ಪ್ರಾಂತದಲ್ಲಿ 1,20,00,000 ಕ್ಕಿಂತಲೂ ಹೆಚ್ಚು ಜನರು ಜೀವಿಸುತ್ತಿದ್ದಾರೆ. ಟೋಕಿಯೋ ನಗರವು ತಂತ್ರಜ್ಞಾನ, ಸಂಪರ್ಕ ಮಾಧ್ಯಮ, ಸಾರಿಗೆ ವ್ಯವಸ್ಥೆ ಮತ್ತು ವಾಣಿಜ್ಯ ಕ್ಷೇತ್ರಗಳಲ್ಲಿ ಜಗತ್ತಿನಲ್ಲೇ ಉತ್ತುಂಗ ಸ್ಥಾನದಲ್ಲಿದೆ. ಅಲ್ಲದೆ ಅತಿ ದೊಡ್ಡ ಹಣಕಾಸು ಸಂಸ್ಥೆಗಳ ಮುಖ್ಯಕಾರ್ಯಾಲಯಗಳು ಅಲ್ಲಿವೆ. ಇಂಥ ವಿಸ್ಮಯಕಾರಿ ಬದಲಾವಣೆಗಳು ಆದದ್ದಾದರೂ ಹೇಗೆ?

ಮೀನುಗಾರಿಕೆಯ ಗ್ರಾಮದಿಂದ ಷೋಗನ್‌ ನಗರ

ಇಸವಿ 1467 ರಿಂದ ಹಿಡಿದು ಸುಮಾರು ನೂರು ವರ್ಷ ಕಾಲ ಯುದ್ಧನಿರತರಾದ ಪಾಳೆಯಗಾರರು ಜಪಾನನ್ನು ಅನೇಕ ಊಳಿಗಮಾನ್ಯ ಕ್ಷೇತ್ರಗಳಾಗಿ ವಿಭಜಿಸಿದರು. ಕೊನೆಗೆ, ಒಬ್ಬ ಸಾಧಾರಣ ಪಾಳೆಯಗಾರನಾದ ಹಿದಯೋಷಿ ಟೋಯೋಟೋಮಿ ದೇಶವನ್ನು ಭಾಗಶಃ ಪುನಃ ಒಟ್ಟುಗೂಡಿಸಿ 1585 ರಲ್ಲಿ ಚಕ್ರವರ್ತಿಯ ರಾಜ್ಯಪ್ರತಿನಿಧಿಯಾದನು. ಮೊದಮೊದಲು ಇಯೆಯಾಸು ಬಲಿಷ್ಠನಾದ ಈ ಹಿದಯೋಷಿಯೊಂದಿಗೆ ಕಾಳಗಕ್ಕಿಳಿದನು. ಆದರೆ ತರುವಾಯ ಅವರಿಬ್ಬರೂ ಒಂದಾದರು. ಜೊತೆಗೂಡಿ ಅವರು ಬಲಿಷ್ಠ ಹೋಜೋ ಗೋತ್ರದ ನೆಲೆಯಾಗಿದ್ದ ಓಡಾವಾರಾದ ದುರ್ಗಕ್ಕೆ ಮುತ್ತಿಗೆಹಾಕಿ ಅದನ್ನು ಸೋಲಿಸಿದರು. ಹೀಗೆ ಅವರು ಪೂರ್ವ ಜಪಾನಿನ ಕಾಂಟೋ ಪ್ರದೇಶವನ್ನು ವಶಪಡಿಸಿಕೊಂಡರು.

ಹಿದಯೋಷಿ, ಕಾಂಟೋವಿನ ಎಂಟು ಪ್ರಾಂತಗಳಿರುವ ವಿಶಾಲ ಭೂಮಿಯನ್ನು ಅಂದರೆ ಹೋಜೋ ಗೋತ್ರಕ್ಕೆ ಸೇರಿದ್ದ ಹೆಚ್ಚಿನ ಪ್ರದೇಶವನ್ನು ಇಯೆಯಾಸುವಿಗೆ ಕೊಟ್ಟನು. ಹೀಗೆ ಇಯೆಯಾಸುವನ್ನು ಅವನಿದ್ದ ಕ್ಷೇತ್ರದಿಂದ ಪೂರ್ವಕ್ಕೆ ಕಳುಹಿಸಿಬಿಟ್ಟನು. ಇದು ಹಿದಯೋಷಿ ಮುಂದಾಲೋಚಿಸಿಯೇ ತೆಗೆದುಕೊಂಡ ನಿರ್ಣಯವಾಗಿತ್ತು. ಜಪಾನಿನ ನಾಮಮಾತ್ರ ಸಾಮ್ರಾಟನು ವಾಸವಾಗಿದ್ದ ಕೀಯೋಟೋದಿಂದ ಇಯೆಯಾಸುವನ್ನು ಆದಷ್ಟು ದೂರವಿಡುವುದೇ ಅವನ ಇಚ್ಛೆಯಾಗಿತ್ತು. ಹೀಗೆಲ್ಲಾ ಇದ್ದರೂ, ಇಯೆಯಾಸು ಆ ಪ್ರದೇಶಕ್ಕೆ ಹೋಗಲು ಒಪ್ಪಿದನು. ಆರಂಭದಲ್ಲಿ ತಿಳಿಸಿದಂತೆ ಅವನು ಎಡೋಗೆ ಕಾಲಿಟ್ಟದ್ದು ಆಗಲೇ. ಮೀನುಗಾರಿಕೆಯ ಒಂದು ಸಾಧಾರಣ ಗ್ರಾಮವನ್ನು ತನ್ನ ಮುಖ್ಯ ಕ್ಷೇತ್ರವನ್ನಾಗಿ ಮಾಡಲು ಅವನು ಹೊರಟನು.

ಹಿದಯೋಷಿಯ ಮರಣದ ಅನಂತರ ಇಯೆಯಾಸು ಪೂರ್ವ ಜಪಾನಿನ ಸೈನ್ಯಗಳನ್ನೆಲ್ಲಾ ಒಟ್ಟುಗೂಡಿಸಿ ಪಶ್ಚಿಮ ಜಪಾನಿನ ಸೈನ್ಯದ ವಿರುದ್ಧ ಯುದ್ಧಕ್ಕೆ ಹೋದನು. ಫಲಿತಾಂಶವಾಗಿ 1600 ರಲ್ಲಿ ಅವರನ್ನು ಪರಾಜಯಗೊಳಿಸಿದನು, ಅದು ಸಹ ಒಂದೇ ದಿನದೊಳಗೆಯೇ. 1603 ರಲ್ಲಿ ಇಯೆಯಾಸು ಷೋಗನನಾಗಿ ಪಟ್ಟಕ್ಕೇರಿದನು. ಹೀಗೆ ಅವನು ದೇಶದ ಸರ್ವಾಧಿಕಾರವನ್ನು ಪಡಕೊಂಡನು ಮತ್ತು ಎಡೋ ಜಪಾನಿನ ನೂತನ ಆಡಳಿತ ಕೇಂದ್ರವಾಯಿತು.

ಬೃಹತ್‌ಗಾತ್ರದ ದುರ್ಗವೊಂದನ್ನು ಕಟ್ಟಲು ಬೇಕಾದ ಗಂಡಸರನ್ನು ಮತ್ತು ಸಾಮಾಗ್ರಿಗಳನ್ನು ಒದಗಿಸುವಂತೆ ಇಯೆಯಾಸು ಪಾಳೆಯಗಾರರಿಗೆ ಆಜ್ಞಾಪಿಸಿದನು. ಒಮ್ಮೆ ಸುಮಾರು 100 ಕಿ.ಮೀ. ದಕ್ಷಿಣದಲ್ಲಿದ್ದ ಈಜೂ ಎಂಬ ಪರ್ಯಾಯದ್ವೀಪದ ಕಡಿಬಂಡೆಗಳಿಂದ ಕೊರೆದು ತೆಗೆದ ದೈತ್ಯಾಕಾರದ ಗ್ರ್ಯಾನೈಟ್‌ಗಳನ್ನು ಸಾಗಿಸಲು ಸುಮಾರು 3,000 ಹಡಗುಗಳನ್ನು ಬಳಸಲಾಗಿತ್ತು. ಬಂದರಿನಲ್ಲಿ ಗ್ರ್ಯಾನೈಟ್‌ಗಳನ್ನು ಹಡಗಿನಿಂದ ಕೆಳಗಿಳಿಸಿದಾಗ ನೂರಾರು ಜನರ ಗುಂಪು ಅವುಗಳನ್ನು ನಿರ್ಮಾಣ ಸ್ಥಳಕ್ಕೆ ಎಳೆದೊಯ್ಯಿತು.

ಜಪಾನಿನಲ್ಲೇ ಅತಿ ದೊಡ್ಡದಾದ ಈ ದುರ್ಗವನ್ನು 50 ವರ್ಷಗಳ ತರುವಾಯ ಅಂದರೆ ಮೂರನೇ ಷೋಗನ್‌ನ ಆಳ್ವಿಕೆಯ ​ಸಮಯದಲ್ಲಿ ಕಟ್ಟಿ ಮುಗಿಸಲಾಯಿತು. ಅದು ಟೋಕುಗಾವಾದ ಪ್ರಬಲ ಆಳಿಕೆಯ ಅಚ್ಚಳಿಯದ ಪ್ರತೀಕವಾಗಿತ್ತು. ಷೋಗನ್‌ನ ರಕ್ಷಣಾಪಡೆಯಲ್ಲಿದ್ದ ಸಾಮುರೈಗಳು ಯಾ ಯೋಧರು ದುರ್ಗದ ಆಸುಪಾಸಿನಲ್ಲೇ ನೆಲೆಗೊಂಡಿದ್ದರು. ಪಾಳೆಯಗಾರರು ತಮ್ಮ ಕ್ಷೇತ್ರದಲ್ಲಿದ್ದ ದುರ್ಗಗಳನ್ನು ಮಾತ್ರವಲ್ಲ ಎಡೋನಲ್ಲಿನ ಭವನಗಳನ್ನೂ ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕೆಂದು ಷೋಗನ್‌ ಆಜ್ಞೆಯಿತ್ತನು.

ಸಾಮುರೈಗಳ ಅಗತ್ಯಗಳನ್ನು ಪೂರೈಸಲು ದೇಶದ ಎಲ್ಲೆಡೆಗಳಿಂದ ವ್ಯಾಪಾರಿಗಳು ಮತ್ತು ಸಕಲ ವಿಧದ ಕುಶಲಕರ್ಮಿಗಳು ಆ ಬೃಹತ್‌ ದುರ್ಗದೆಡೆಗೆ ಹಿಂಡು ಹಿಂಡಾಗಿ ಪ್ರವಹಿಸಿದರು. ಇಯೆಯಾಸು ಆ ಪ್ರದೇಶಕ್ಕೆ ಕಾಲಿಟ್ಟ ಸುಮಾರು ನೂರು ವರ್ಷಗಳ ಬಳಿಕ ಅಂದರೆ 1695 ರಲ್ಲಿ ಎಡೋನ ಜನಸಂಖ್ಯೆ 10 ಲಕ್ಷಕ್ಕೇರಿತು! ಹೀಗೆ ಎಡೋ ಲೋಕದಲ್ಲೇ ಅತ್ಯಂತ ಜನನಿಬಿಡ ಪಟ್ಟಣವೆನಿಸಿಕೊಂಡಿತು.

ಖಡ್ಗದಿಂದ ಗಣಕಯಂತ್ರಕ್ಕೆ

ಶಾಂತಿ ಕಾಪಾಡಿಕೊಳ್ಳುವುದರಲ್ಲಿ ಷೋಗನ್‌ ಸರಕಾರವು ಎಷ್ಟು ಸಮರ್ಥವಾಗಿತ್ತೆಂದರೆ ಯೋಧರಿಗೆ ಅಷ್ಟೇನೂ ಕಸುಬಿರಲಿಲ್ಲ. ಹಾಗಿದ್ದರೂ ಈ ಸಾಮುರೈಗಳಿಗಂತೂ ತಮ್ಮ ವೃತ್ತಿಯ ಕುರಿತು ಭಾರಿ ಜಂಬವಿತ್ತು. ಆದರೆ ಖಡ್ಗಗಳನ್ನು ಬಳಸುತ್ತಿದ್ದ ಯೋಧರ ಪ್ರಾಬಲ್ಯ ​ಕಡಿಮೆಯಾದಂತೆ ಪೌರಸ್ತ್ಯ ದೇಶಗಳಲ್ಲಿ ಪ್ರಸಿದ್ಧವಾದ ಕೈಬಳಕೆಯ ​ಗಣಕಯಂತ್ರದ (ಆ್ಯಬಕಸ್‌) ವ್ಯಾಪಾರಿಗಳ ಪ್ರಾಬಲ್ಯವು ಹೆಚ್ಚಾಗ ತೊಡಗಿತು. ಸುಮಾರು 250 ವರ್ಷಕ್ಕಿಂತ ಹೆಚ್ಚು ಕಾಲದ ವರೆಗೆ ದೇಶದಲ್ಲೆಲ್ಲಾ ಶಾಂತಿಯಿತ್ತು. ಸಾಮಾನ್ಯ ನಾಗರಿಕರು ಅದರಲ್ಲೂ ವಿಶೇಷವಾಗಿ ವ್ಯಾಪಾರಿಗಳು ಹೆಚ್ಚೆಚ್ಚು ಶ್ರೀಮಂತರಾಗುತ್ತಾ ಅಧಿಕ ಸ್ವಾತಂತ್ರ್ಯವನ್ನು ಅನುಭವಿಸಿದರು. ಒಂದು ವಿಶಿಷ್ಟ ಸಂಸ್ಕೃತಿಯು ಚಿಗುರಿತು.

ಸುಪ್ರಸಿದ್ಧ ಕಬುಕಿ ನಾಟಕ (ಸಾಂಪ್ರದಾಯಿಕ ನಾಟಕ), ಬುನ್‌ರಕು (ಬೊಂಬೆಯಾಟ) ಮತ್ತು ರಾಕೂಗೋಗಳನ್ನು (ಹಾಸ್ಯಮಯ ಕಥಾನಿರೂಪಣೆ) ವೀಕ್ಷಿಸಲೆಂದು ಜನರು ನೆರೆದುಬರುತ್ತಿದ್ದರು. ಬೇಸಿಗೆಯ ಸಾಯಂಕಾಲಗಳಂದು ಎಡೋ ನೆಲೆಸಿದ್ದ ತಂಪಾದ ಸುಮೀಡ ನದೀ ತೀರದಲ್ಲಿ ಜನರು ಒಟ್ಟುಸೇರುತ್ತಿದ್ದರು. ಅಲ್ಲಿ ಪಟಾಕಿ ಹಾರಿಸುವ ಪ್ರದರ್ಶನಗಳು ಸಹ ಇರುತ್ತಿದ್ದವು. ಇಂದಿಗೂ ಈ ಪದ್ಧತಿ ಜೀವಂತವಾಗಿದೆ.

ಆದರೂ, ಎಡೋ ಲೋಕದ ಇತರ ಭಾಗಗಳಿಗೆ ಅಜ್ಞಾತವಾಗಿತ್ತು. ಡಚ್ಚರು, ಚೀನಿಯರು ಮತ್ತು ಕೊರಿಯಾದವರೊಂದಿಗಿದ್ದ ಅಲ್ಪಸ್ವಲ್ಪ ವ್ಯವಹಾರಗಳನ್ನು ಬಿಟ್ಟರೆ ಇನ್ನಾರೊಂದಿಗೂ ಸಂಪರ್ಕವನ್ನಿಟ್ಟುಕೊಳ್ಳುವ ವಿಷಯದಲ್ಲಿ ಅಲ್ಲಿನ ಸರಕಾರವು ಸುಮಾರು 200 ಕ್ಕಿಂತಲೂ ಹೆಚ್ಚು ವರ್ಷಗಳಿಂದ ನಿಷೇಧ ಹೇರಿತ್ತು. ಕಾಲಾನಂತರ ಒಂದು ದಿನ ನಡೆದ ಅಸಾಮಾನ್ಯ ಘಟನೆಯಿಂದಾಗಿ ಪಟ್ಟಣದ ಹಾಗೂ ದೇಶದ ಇತಿಹಾಸದಲ್ಲೇ ಒಂದು ಹೊಸ ಅಧ್ಯಾಯ ಆರಂಭವಾಯಿತು.

ಎಡೋವಿನಿಂದ ಟೋಕಿಯೋ

ಇದ್ದಕ್ಕಿದ್ದಂತೆ ಒಂದು ದಿನ ಕಪ್ಪು ಹೊಗೆಯನ್ನು ಉಗುಳುತ್ತಾ ವಿಚಿತ್ರವಾಗಿ ಕಾಣುವ ಹಡಗುಗಳು ಎಡೋ ತೀರದತ್ತ ಬರುತ್ತಿದ್ದವು. ಚಕಿತರಾದ ಬೆಸ್ತರು ಅವು ತೇಲುವ ಜ್ವಾಲಾಮುಖಿಗಳಾಗಿರಬೇಕೆಂದು ಭಾವಿಸಿದರು! ಇಲ್ಲಸಲ್ಲದ ಗಾಳಿಸುದ್ದಿಗಳೂ ಹಬ್ಬಿದವು. ಫಲಿತಾಂಶವಾಗಿ ಅನೇಕರು ನಗರವನ್ನೇ ಬಿಟ್ಟು ಓಡಿಹೋದರು.

1853 ರ ಜುಲೈ 8 ರಂದು, ಅಮೆರಿಕದ ನೌಕಾಧಿಕಾರಿ ಮ್ಯಾಥ್ಯು ಸಿ. ಪೆರಿ ಎಂಬವರ ನೇತೃತ್ವದಡಿ ನಾಲ್ಕು ಹಡಗುಗಳುಳ್ಳ ಆ ನೌಕಾಪಡೆಯು ಎಡೋ ಕೊಲ್ಲಿಯಲ್ಲಿ ಲಂಗಾರು ಇಳಿಸಿತು (ಎಡ). ಪೆರಿ, ತನ್ನ ದೇಶದೊಂದಿಗೆ ವ್ಯಾಪಾರ ವ್ಯವಹಾರಗಳನ್ನು ಆರಂಭಿಸಲು ದೇಶದ ಕದಗಳನ್ನು ತೆರೆದು ಅನುವು ಮಾಡಿಕೊಡುವಂತೆ ಷೋಗನ್‌ ಸರಕಾರಕ್ಕೆ ವಿನಂತಿಸಿಕೊಂಡನು. ಪೆರಿಯವರ ಭೇಟಿಯಿಂದಾಗಿಯೇ ಮಿಲಿಟರಿ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ತಾವು ಇತರ ದೇಶಗಳಿಗಿಂತ ಎಷ್ಟು ಹಿಂದುಳಿದಿದ್ದೇವೆಂಬ ಮನವರಿಕೆ ಜಪಾನೀಯರಿಗಾಯಿತು.

ಇದು ಘಟನೆಗಳ ಸರಮಾಲೆಯನ್ನೇ ಪುಟಿದೆಬ್ಬಿಸಿತು. ಷೋಗನ್‌ ತನ್ನ ಅಧಿಕಾರವನ್ನೆಲ್ಲ ಚಕ್ರವರ್ತಿಗೆ ಬಿಟ್ಟುಕೊಡಬೇಕಾಯಿತು. 1868 ರಲ್ಲಿ ಎಡೋಗೆ ಟೋಕಿಯೋ ಎಂಬ ಹೊಸ ಹೆಸರಿಡಲಾಯಿತು. ಈ ಹೆಸರಿನ ಅರ್ಥ “ಆಗ್ನೇಯ ರಾಜಧಾನಿ” ಎಂದಾಗಿದೆ. ರಾಜಧಾನಿಯು ಕೀಯೋಟೋವಿನ ಆಗ್ನೇಯ ದಿಕ್ಕಿನಲ್ಲಿದೆ ಎಂಬದನ್ನು ಈ ಹೆಸರು ಸೂಚಿಸಿತು. ಚಕ್ರವರ್ತಿಯು ತನ್ನ ನಿವೇಶನವನ್ನು ಕೀಯೋಟೋ ಭವನದಿಂದ ಎಡೋ ದುರ್ಗಕ್ಕೆ ಸ್ಥಳಾಂತರಿಸಿದನು. ಸಮಯಾನಂತರ ಈ ದುರ್ಗವನ್ನೇ ಚಕ್ರವರ್ತಿಯ ನೂತನ ಅರಮನೆ​ಯಾಗಿ ಬದಲಾಯಿಸಲಾಯಿತು.

ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದಾಗಿ ಜಪಾನ್‌ ದೇಶವನ್ನು ಆಧುನೀಕರಿಸುವ ಯೋಜನೆಯನ್ನು ನೂತನ ಸರ್ಕಾರವು ಕೈಗೆತ್ತಿಕೊಂಡಿತು. ಇದಕ್ಕಾಗಿ ಅನೇಕ ಸುಧಾರಣೆಗಳನ್ನು ಮಾಡುವ ಅಗತ್ಯವಿತ್ತು. ಈ ಸಮಯಾವಧಿಯನ್ನು ಕೆಲವರು ಪವಾಡಕಾಲ ಎಂದು ಕರೆಯುತ್ತಾರೆ. 1869 ರಲ್ಲಿ ಟೋಕಿಯೋ ಮತ್ತು ಯೋಕೊಹಾಮ ನಗರದ ಮಧ್ಯೆ ಟೆಲಿಗ್ರಾಫ್‌ ವ್ಯವಸ್ಥೆಯನ್ನು ಉದ್ಘಾಟಿಸಲಾಯಿತು. ಇದನ್ನು ಹಿಂಬಾಲಿಸಿ ಈ ಎರಡು ನಗರಗಳನ್ನು ಜೋಡಿಸುವ ಮೊತ್ತಮೊದಲ ರೈಲು ಹಳಿಯನ್ನು ಹಾಕಲಾಯಿತು. ಮರದ ಮನೆಗಳ ಮಧ್ಯೆ ಇಟ್ಟಿಗೆಯ ಕಟ್ಟಡಗಳು ಅಲ್ಲಲ್ಲಿ ತಲೆದೋರಿದವು. ಬ್ಯಾಂಕ್‌, ಹೋಟೇಲು, ಅಂಗಡಿ ಮಳಿಗೆಗಳು ಆರಂಭಗೊಂಡವು. ವಿಶ್ವವಿದ್ಯಾನಿಲಯಗಳು ಸ್ಥಾಪನೆಗೊಂಡವು. ಕೊಳಕು ಬೀದಿಗಳು ಸಜ್ಜುಗೊಳಿಸಿದ ರಸ್ತೆಗಳಾಗಿ ಕಂಗೊಳಿಸಿದವು. ಹುಟ್ಟುಗಳಿರುವ ಉಗಿದೋಣಿಗಳು ಸುಮೀಡ ನದಿಯ ಉದ್ದಗಲಕ್ಕೂ ಸಂಚರಿಸತೊಡಗಿದವು.

ಜನರ ವೇಷಭೂಷಣವೂ ಬದಲಾಗತೊಡಗಿತು. ಅಧಿಕಾಂಶ ಜಪಾನೀಯರು ತಮ್ಮ ಸಾಂಪ್ರದಾಯಿಕ ಕಿಮೋನೋ ವಸ್ತ್ರಗಳನ್ನು ಧರಿಸುತ್ತಿದ್ದರಾದರೂ ಹೆಚ್ಚೆಚ್ಚು ಮಂದಿ ಪಾಶ್ಚಾತ್ಯ ಉಡುಪುಗಳಿಗೆ ಮಾರುಹೋದರು. ಪುರುಷರಲ್ಲಿ ಗಡ್ಡ ಬೆಳೆಸುವ ಶೈಲಿಯು ಜನಪ್ರಿಯವಾಯಿತು. ಅವರು ಕೊಳಗದಾಕಾರದ ರೇಷ್ಮೆಯ ಹ್ಯಾಟ್‌ ಮತ್ತು ವಾಕಿಂಗ್‌ ಸ್ಟಿಕ್‌ ಬಳಸಲಾರಂಭಿಸಿದರೆ ಸ್ತ್ರೀಯರಲ್ಲಿ ಕೆಲವರು ಪಾಶ್ಚಾತ್ಯ ಉಡುಪುಗಳನ್ನು ಧರಿಸಿ ವಾಲ್‌ಟ್ಸ್‌ ನೃತ್ಯವನ್ನೂ ಕಲಿತರು.

ಜಪಾನೀಯರು ತಮಗೆ ಪ್ರಿಯವಾದ ‘ಸಾಕಿ’ ಎಂಬ ಅಕ್ಕಿ ಮದ್ಯದೊಂದಿಗೆ ಬಿಯರನ್ನೂ ಇಷ್ಟಪಟ್ಟರು. ಸುಮೊ ಪಂದ್ಯಾಟದೊಂದಿಗೆ ಬೇಸ್‌ಬಾಲ್‌ ಆಟವು ಪೈಪೋಟಿ ನಡೆಸಿ ದೇಶದ ಅಚ್ಚುಮೆಚ್ಚಿನ ಕ್ರೀಡೆಯಾಯಿತು. ಆ ಸಮಯದಲ್ಲಿ ಪ್ರಸಿದ್ಧವಾಗಿದ್ದ ಸಂಸ್ಕೃತಿ ಹಾಗೂ ರಾಜಕೀಯ ವಿಚಾರಗಳನ್ನೆಲ್ಲ ಟೋಕಿಯೋ ಅರಗಿಸಿಕೊಂಡಿತು. ಹೀಗೆ ನಗರದ ಅಭಿವೃದ್ಧಿಯು ಎತ್ತರೆತ್ತರಕ್ಕೆ ಏರುತ್ತಿದ್ದಾಗ ಒಂದು ದಿನ ದಿಢೀರೆಂದು ವಿಪತ್ತು ಬಂದಪ್ಪಳಿಸಿತು!

ಅವನತಿಯಿಂದ ಅತ್ಯುನ್ನತಿಗೆ

ಇಸವಿ 1923 ರ ಸೆಪ್ಟೆಂಬರ್‌ 1 ರಂದು ಅನೇಕರು ಮಧ್ಯಾಹ್ನದೂಟಕ್ಕೆ ಅಣಿಮಾಡುತ್ತಿದ್ದಾಗ ಒಂದು ಭೀಕರ ಭೂಕಂಪವು ಇಡೀ ಕಾಂಟೋ ಪ್ರದೇಶವನ್ನು ನಡುಗಿಸಿತು. ಇದನ್ನು ಹಿಂಬಾಲಿಸಿ ನೂರಾರು ಚಿಕ್ಕ ಕಂಪನಗಳು ಮತ್ತು 24 ಗಂಟೆಗಳ ನಂತರ ಒಂದು ಉಗ್ರ ಕಂಪನವು ಸ್ಫೋಟಿಸಿತು. ಭೂಕಂಪದಿಂದಾದ ವಿನಾಶವೇ ವಿಪರೀತವಾಗಿತ್ತಾದರೂ ಅದರಿಂದಾಗಿ ಹೊತ್ತಿಕೊಂಡ ಬೆಂಕಿಯು ಇನ್ನೂ ಅಧಿಕ ಹಾನಿಯನ್ನುಂಟುಮಾಡುತ್ತಾ ಟೋಕಿಯೋ ಪಟ್ಟಣದ ಬಹುಭಾಗವನ್ನು ನೆಲಸಮಮಾಡಿತು. ಸಾವನ್ನಪ್ಪಿದ 1,00,000 ಕ್ಕಿಂತಲೂ ಹೆಚ್ಚು ಜನರಲ್ಲಿ 60,000 ಮಂದಿ ಟೋಕಿಯೋ ನಿವಾಸಿಗಳೇ ಆಗಿದ್ದರು.

ಟೋಕಿಯೋ ನಿವಾಸಿಗಳು ತಮ್ಮ ನಗರವನ್ನು ಪುನರ್ನಿರ್ಮಿಸುವ ಬೃಹತ್‌ ಯೋಜನೆಯನ್ನು ಕೈಗೆತ್ತಿಕೊಂಡರು. ನಗರವು ತಕ್ಕಷ್ಟು ಮಟ್ಟಿಗೆ ಚೇತರಿಸಿಕೊಂಡಾಗ ಇನ್ನೊಂದು ವಿಪತ್ಕಾರಕ ಆಘಾತವು ಕಾದಿತ್ತು. ಎರಡನೇ ಲೋಕ ಯುದ್ಧದ ಸಮಯದಲ್ಲಿ ನಡೆದ ವಿಮಾನ​ದಾಳಿಯಿಂದಾಗಿ ಇಡೀ ಟೋಕಿಯೋ ನಗರವು ತತ್ತರಿಸಿತು. ಮುಖ್ಯವಾಗಿ 1945, ಮಾರ್ಚ್‌ 9/10 ರ ಮಧ್ಯರಾತ್ರಿಯಿಂದ ಬೆಳಗ್ಗೆ ಮೂರು ಗಂಟೆ ವರೆಗೆ ನಡೆದ ಬಾಂಬ್‌ಗಳ ಸುರಿಮಳೆಯು ಅತ್ಯಂತ ಧ್ವಂಸಕಾರಿಯಾಗಿತ್ತು. ಅಂದು ಸುಮಾರು 7,00,000 ಬಾಂಬ್‌ಗಳನ್ನು ಹಾಕಲಾಗಿತ್ತೆಂದು ಅಂದಾಜುಮಾಡಲಾಗಿದೆ. ಆ ಬಾಂಬ್‌ಗಳಲ್ಲಿ ನೇಪಾಮ್‌ (ಬೆಂಕಿ ಹರಡಿಸುವಂತೆ ಬಳಸಲಾದ ಪೆಟ್ರೋಲು) ಅಡಕವಾಗಿತ್ತು. ಅಲ್ಲದೆ, ಮೆಗ್ನೀಸಿಯಮ್‌ ಹಾಗೂ ಲೋಳೆಯಾದ ಪೆಟ್ರೋಲ್‌ ಒಳಗೊಂಡ ಹೊಸ ಅಗ್ನಿ ಸ್ಫೋಟಕವೂ ಇತ್ತು. ಇದು ಹೆಚ್ಚಾಗಿ ಮರದಿಂದ ನಿರ್ಮಾಣಗೊಂಡಿದ್ದ ಮನೆಗಳನ್ನು ತನ್ನ ರಕ್ಕಸ ಜ್ವಾಲೆಯಿಂದ ಕಬಳಿಸುತ್ತಾ ಜನಸಂದಣಿಯಿಂದ ಕಿಕ್ಕಿರಿದಿದ್ದ ಪ್ರದೇಶವನ್ನು ಧ್ವಂಸಮಾಡಿತು. ಈ ದಾಳಿಯಿಂದ 77,000 ಕ್ಕಿಂತಲೂ ಹೆಚ್ಚು ಜನರು ಬೆಂಕಿಗೆ ಆಹುತಿಯಾದರು. ಇತಿಹಾಸದಲ್ಲಿ, ಪರಮಾಣು ಶಸ್ತ್ರಾಸ್ತ್ರಗಳಿಲ್ಲದೆ ನಡೆಸಿದ ಅತಿ ವಿನಾಶಕ ಬಾಂಬ್‌ದಾಳಿ ಅದಾಗಿತ್ತು.

ಇಷ್ಟೆಲ್ಲಾ ವಿಪತ್ತುಗಳು ಸಂಭವಿಸಿದರೂ ಬೂದಿಯಾದ ಟೋಕಿಯೋ ನಗರವು ಯುದ್ಧದ ಬಳಿಕ ಅಸಾಮಾನ್ಯ ರೀತಿಯಲ್ಲಿ ಚೇತರಿಸಿಕೊಂಡಿತು. ಈ ದುರ್ಘಟನೆಯು ಸಂಭವಿಸಿ 20 ವರ್ಷಗಳೊಳಗೆ ಅಂದರೆ 1964 ರಷ್ಟಕ್ಕೆ ಟೋಕಿಯೋ ನಗರವು ಬೇಸಿಗೆಯ ಒಲಂಪಿಕ್‌ ಕ್ರೀಡೆಗಳನ್ನು ನಡೆಸುವ ಹಂತಕ್ಕೆ ಬಂದು ಮುಟ್ಟಿತು. ತದನಂತರದ ನಾಲ್ಕು ದಶಕಗಳಿಂದ, ಪಟ್ಟಣದಲ್ಲಿ ದಟ್ಟವಾಗಿ ತಲೆಯೆತ್ತಿ ನಿಂತಿರುವ ಕಾಂಕ್ರಿಟ್‌ ಕಟ್ಟಡಗಳು ಇನ್ನಷ್ಟೂ ವಿಸ್ತಾರಗೊಳ್ಳುತ್ತಾ ​ಆಗಸದೆತ್ತರಕ್ಕೆ ಬೆಳೆಯುತ್ತಲಿವೆ.

ಬಿಟ್ಟುಕೊಡದ ಮನೋಭಾವದಿಂದ ಪ್ರಗತಿಗೆ

ಟೋಕಿಯೋ ಎಂದು ಈಗ ಜ್ಞಾತವಾಗಿರುವ ನಗರದ ಇತಿಹಾಸವು 400 ವರ್ಷ ಹಳೆಯದ್ದು. ಆದರೆ ಪ್ರಪಂಚದ ಇತರ ಮಹಾ ನಗರಗಳ ಇತಿಹಾಸಗಳೊಂದಿಗೆ ಹೋಲಿಸುವಾಗ ಅದು ಅಷ್ಟೇನೂ ​ಪುರಾತನವೇನಲ್ಲ. ನಗರದ ಕೆಲವು ಭಾಗಗಳಲ್ಲಿ ಗತಕಾಲದ ಲಕ್ಷಣಗಳು ಇನ್ನೂ ಅಸ್ತಿತ್ವದಲ್ಲಿವೆಯಾದರೂ ಅಧಿಕಾಂಶ ಕಟ್ಟಡ ಹಾಗೂ ರಚನಾಕ್ರಮಗಳಲ್ಲಿ ಹಳೇ ನಿರ್ಮಾಣ ಶೈಲಿಯು ಕಾಣಸಿಗುವುದಿಲ್ಲ. ಹಾಗಿದ್ದರೂ ನಗರವನ್ನು ಸೂಕ್ಷ್ಮವಾಗಿ ಪರಿಶೀಲಿಸುವಾಗ ಪ್ರಾಚೀನ ಎಡೋದಲ್ಲಿ ಮೊಳಕೆಗೊಂಡ ರಚನೆಯು ವ್ಯಕ್ತವಾಗುತ್ತದೆ.

ಟೋಕಿಯೋ ಮಹಾನಗರದ ಕೇಂದ್ರ ಭಾಗದಲ್ಲಿ ವಿಸ್ತಾರವಾದ ಒಂದು ಹಸಿರು ಪ್ರದೇಶವಿದೆ. ಪ್ರಾಚೀನ ಎಡೋ ದುರ್ಗವು ಇದ್ದ ನಿವೇಶನದಲ್ಲಿಯೇ ಈಗಲೂ ಚಕ್ರವರ್ತಿಯ ಅರಮನೆ ಮತ್ತು ಅದರ ಆಸುಪಾಸಿನ ಜಮೀನು ನೆಲೆಸಿದೆ. ಅಲ್ಲಿಂದ ಜೇಡರ​ಬಲೆಯ ಎಳೆಗಳಂತೆ ತೋರುವ ಮುಖ್ಯ ರಸ್ತೆಗಳು ನಗರದ ಹೊರವಲಯಕ್ಕೆ ನಡೆಸುತ್ತವೆ. ಇವೂ ಮೂಲತಃ ಎಡೋನಲ್ಲಿದ್ದ ನಮೂನೆಯನ್ನೇ ಹೋಲುತ್ತವೆ. ಅಲ್ಲದೆ ನಗರದಲ್ಲೆಲ್ಲಾ ಅಡ್ಡಾದಿಡ್ಡಿಯಾಗಿ ರಚಿಸಿದ ಗೊಂದಲಮಯವಾದ ಬೀದಿಗಳಿಂದ ಸಹ ಪ್ರಾಚೀನ ಎಡೋವಿನ ನೆನಪಾಗುತ್ತದೆ. ನಿಜ ಹೇಳಬೇಕಾದರೆ, ಅಧಿಕಾಂಶ ಬೀದಿಗಳಿಗೆ ಹೆಸರುಗಳೂ ಇಲ್ಲ! ಪ್ರಪಂಚದ ಇತರ ಮಹಾನಗರಗಳಲ್ಲಿ ಕಂಡುಬರುವ ಚೌಕಟ್ಟಿನ ವ್ಯವಸ್ಥೆಗೆ ಅಸದೃಶ್ಯವಾಗಿ ಟೋಕಿಯೋದಲ್ಲಿ ವಿಭಿನ್ನ ಆಕಾರ ಹಾಗೂ ಗಾತ್ರದ ಜಮೀನುಗಳನ್ನು ಕಾಣಬಹುದು.

ಎಲ್ಲಕ್ಕಿಂತ ಮಿಗಿಲಾಗಿ ಪುರಾತನ ಕಾಲದಿಂದಲೂ ಉಳಿದಿರುವ ಸಂಗತಿ ಟೋಕಿಯೋ ನಾಗರಿಕರ ಬಿಟ್ಟುಕೊಡದ ಮನೋಭಾವವೇ! ಅಂದರೆ ನೂತನವಾದದ್ದನ್ನು ಅದರಲ್ಲೂ ವಿಶೇಷವಾಗಿ ಪರಕೀಯವಾದದ್ದನ್ನು ಮೈಗೂಡಿಸಿಕೊಳ್ಳುವ ಸಾಮರ್ಥ್ಯವಾಗಿದೆ. ಮಾತ್ರವಲ್ಲ ಭೂಕಂಪ, ದೀರ್ಘಸಮಯದ ವರೆಗಿದ್ದ ಆರ್ಥಿಕ ಮುಗ್ಗಟ್ಟು ಮತ್ತು ಅತಿಜನಸಾಂದ್ರತೆಯಂಥ ಸಮಸ್ಯೆಗಳಿದ್ದರೂ ಪ್ರಗತಿಮಾಡಬೇಕೆಂಬ ಸ್ಥಿರಸಂಕಲ್ಪ ಹಾಗೂ ಚೇತರಿಸಿಕೊಳ್ಳಲೇಬೇಕೆಂಬ ಛಲ ಅವರಲ್ಲಿದೆ. ಒಂದು ಚಿಕ್ಕ ಮೀನುಗಾರಿಕೆಯ ಗ್ರಾಮವೆಂಬ ಮುಸುಕಿನ ಮರೆಯಿಂದ ಅಂತರರಾಷ್ಟ್ರೀಯ ಪ್ರಸಿದ್ಧಿಗೇರಿಸಿದ ಟೋಕಿಯೋ ನಿವಾಸಿಗಳ ಹುರುಪು ಉತ್ಸಾಹವನ್ನು ಸಾಕ್ಷಾತ್‌ ನೀವೇ ಬಂದು ನೋಡಿ! (g 1/08)

[ಪಾದಟಿಪ್ಪಣಿ]

^ ಷೋಗನ್‌ ಎಂಬುದು ವಂಶಪಾರಂಪರ್ಯವಾಗಿ ಬಂದ ಜಪಾನಿನ ಸೈನ್ಯಾಧಿಕಾರಿಗಳ ಬಿರುದು. ಅವರು ಚಕ್ರವರ್ತಿಯ ನೇತೃತ್ವದಡಿ ಸಂಪೂರ್ಣ ಅಧಿಕಾರ ಹೊಂದಿದ್ದರು.

[ಪುಟ 11ರಲ್ಲಿರುವ ಭೂಪಟ]

ಜಪಾನ್‌

ಒಸಾಕಾ

ಕೀಯೋಟೊ

ಯೋಕೋಹಾಮಾ

ಟೋಕಿಯೋ (ಎಡೋ)

[ಪುಟ 12, 13ರಲ್ಲಿರುವ ಚಿತ್ರ]

ಇಂದು ಟೋಕಿಯೋ

[ಕೃಪೆ]

Ken Usami/photodisc/age fotostock

[ಪುಟ 11ರಲ್ಲಿರುವ ಚಿತ್ರ ಕೃಪೆ]

© The Bridgeman Art Library

[ಪುಟ 13ರಲ್ಲಿರುವ ಚಿತ್ರ ಕೃಪೆ]

The Mainichi Newspapers