ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸರಿಸಾಟಿಯಿಲ್ಲದ ಆದರೆ ‘ಮೃತ’ ಸಮುದ್ರ!

ಸರಿಸಾಟಿಯಿಲ್ಲದ ಆದರೆ ‘ಮೃತ’ ಸಮುದ್ರ!

ಸರಿಸಾಟಿಯಿಲ್ಲದ ಆದರೆ ‘ಮೃತ’ ಸಮುದ್ರ!

ಇಸ್ರೇಲಿನ ಎಚ್ಚರ! ಲೇಖಕರಿಂದ

ಅದು ಕಡು ಉಪ್ಪಿನ, ಅತಿ ತಗ್ಗಾದ ಹಾಗೂ ಪೂರ್ತಿ-ಸತ್ತಂಥ ಸಮುದ್ರವಾಗಿದ್ದರೂ ಕೆಲವರಿಗಾದರೋ ಅದರ ಜಲರಾಶಿ ಅತ್ಯಂತ ಆರೋಗ್ಯಕರವಾದ ಸಿದ್ಧೌಷಧ. ಇತಿಹಾಸದ ಉದ್ದಕ್ಕೂ ಅದನ್ನು ದುರ್ಗಂಧದ ಕಡಲು, ಪಿಶಾಚನ ಸಮುದ್ರ ಹಾಗೂ ಡಾಂಬರಿನ ಸರೋವರ ಎಂದು ಕರೆಯಲಾಗಿದೆ. ಬೈಬಲು ಅದನ್ನು ಲವಣ ಸಮುದ್ರವೆಂದೂ ಅರಾಬಾದ ಸಮುದ್ರ ಎಂದೂ ಕರೆಯುತ್ತದೆ. (ಆದಿಕಾಂಡ 14:3; ಯೆಹೋಶುವ 3:16ಧರ್ಮೋ 3:​17-perm) ಅದರ ತಳದ ಆಳದಲ್ಲಿ ಸೊದೋಮ್‌ ಗೊಮೋರಗಳ ಅವಶೇಷಗಳು ಹೂತಿರುತ್ತವೆ ಎಂದು ಅನೇಕ ಬೈಬಲ್‌ ಪಂಡಿತರಿಂದ ದೃಢೀಕರಿಸಲಾದ ಒಂದು ಐತಿಹ್ಯವು ವಾದಿಸುತ್ತದೆ. ಆದುದರಿಂದ ಅದಕ್ಕೆ ಸೊದೋಮಿನ ಸಮುದ್ರ ಹಾಗೂ ಲೋಟನ ಕಡಲು ಎಂಬ ಹೆಸರೂ ಇದೆ. ಯಾಕೆಂದರೆ ಆ ಊರುಗಳನ್ನು ಒಳಗೊಂಡ ಪುರಾತನ ಘಟನೆಗಳಲ್ಲಿ ಆ ಬೈಬಲ್‌ ವ್ಯಕ್ತಿ ಲೋಟನು ಸೇರಿದ್ದನು.​—⁠2 ಪೇತ್ರ 2:6, 7.

ಆ ಹೆಸರುಗಳಲ್ಲಿ ಕೆಲವೊಂದು, ಅದನ್ನು ಸಂದರ್ಶಕರ ಭೇಟಿಗೆ ರಮಣೀಯವಾದ ಸ್ಥಳವಾಗಿ ನೆನಸುವಂತೆ ಮಾಡುವುದಿಲ್ಲ ಖಂಡಿತ. ಆದರೂ ಇಂದು ಸಾಮಾನ್ಯವಾಗಿ ಮೃತ ಸಮುದ್ರ ಅಥವಾ ಲವಣ ಸಮುದ್ರವೆಂದು ಜ್ಞಾತವಾಗಿರುವ ಈ ಅಸಾಮಾನ್ಯ ಜಲರಾಶಿಯು ಪ್ರತಿ ವರ್ಷ ಸಾವಿರಾರು ಜನರನ್ನು ತನ್ನ ಕಡೆಗೆ ಆಕರ್ಷಿಸುತ್ತಾ ಇದೆ. ಅದು ಅಷ್ಟು ಉಪ್ಪಿನಿಂದ ಕೂಡಿರುವುದೇಕೆ? ಅದು ನಿಜವಾಗಿ ಸತ್ತಿರುವ ಸಮುದ್ರವೋ ಮತ್ತು ಹಾಗಿರುವಾಗ ಅದರ ನೀರು ಆರೋಗ್ಯಕರವಾಗಿರುವುದು ಹೇಗೆ?

ಅತ್ಯಂತ ತಗ್ಗಾದ ಹಾಗೂ ಕಡು ಉಪ್ಪಿನ ಸಮುದ್ರ

ಮೃತ ಸಮುದ್ರವು, ದಕ್ಷಿಣಾಭಿಮುಖವಾಗಿ ಪೂರ್ವ ಆಫ್ರಿಕದೊಳಕ್ಕೆ ಚಾಚುವ ಗ್ರೇಟ್‌ ರಿಫ್ಟ್‌ ಕಣಿವೆಯ ಸ್ತರಭಂಗದ ಉತ್ತರ ಭಾಗದಲ್ಲಿ ನೆಲೆಸಿದೆ. ಯೊರ್ದನ್‌ ನದಿಯು, ಉತ್ತರ ದಿಕ್ಕಿನಿಂದ ಕೆಳಗೆ ಸುತ್ತು ಬಳಸುತ್ತಾ ಹರಿದು ಬಂದು, ಭೂಮಿಯ ಅತಿ ತಗ್ಗಾದ ಮೇಲ್ಮೈಗೆ ತಲಪುವ ತನಕ ಅಂದರೆ ಸಮುದ್ರಮಟ್ಟಕ್ಕಿಂತ 418 ಮೀಟರ್‌ ಇಳಿಜಾರಿಗೆ ಇಳಿಯುತ್ತದೆ. ಅಲ್ಲಿ ಒಳನಾಡ ಸಮುದ್ರವು ಎರಡೂ ಪಕ್ಕದಲ್ಲಿ ಕಮರಿ ಗೋಡೆಗಳಿಂದ ಅಂದರೆ ಪಶ್ಚಿಮಕ್ಕೆ ಯೂದಾಯದ ಬೆಟ್ಟಗಳು ಮತ್ತು ಪೂರ್ವಕ್ಕೆ ಯೊರ್ದನ್‌ನ ಮೋವಾಬ್ಯ ಗುಡ್ಡಗಳಿಂದ ಆವರಿಸಲ್ಪಡುತ್ತದೆ.

ಆದರೆ ಮೃತ ಸಮುದ್ರದ ಜಲವನ್ನು ಅಷ್ಟು ಕಡು ಉಪ್ಪಾಗಿ ಮಾಡುವಂಥದ್ದು ಯಾವುದು? ಮುಖ್ಯವಾಗಿ ಮೆಗ್ನೇಶಿಯಮ್‌, ಸೋಡಿಯಂ ಮತ್ತು ಕ್ಯಾಲ್ಸಿಯಂ ಕ್ಲೋರೈಡ್‌ಗಳೆಂಬ ಲವಣಗಳೇ. ಇವು ಯೊರ್ದನ್‌ ನದಿಯಿಂದ ಮತ್ತು ಇತರ ಚಿಕ್ಕ ಪುಟ್ಟ ಹೊಳೆಗಳಿಂದ, ಕೆರೆಗಳಿಂದ ಹಾಗೂ ಸರೋವರಗಳಿಂದ ಮೃತ ಸಮುದ್ರದೊಳಗೆ ಹರಿದುಬರುತ್ತವೆ. ಯೊರ್ದನ್‌ ಹೊಳೆಯೊಂದೇ ಪ್ರತಿ ವರ್ಷ 8,50,000 ಟನ್ನುಗಳಷ್ಟು ಲವಣವನ್ನು ಅದರೊಳಗೆ ಸಂಚಯಿಸುತ್ತದೆಂದು ಅಂದಾಜುಮಾಡಲಾಗಿದೆ. ಸಮುದ್ರವು ಅಷ್ಟು ತಗ್ಗಾದ ಸ್ಥಳದಲ್ಲಿ ನೆಲೆಸಿರುವ ಕಾರಣ ನೀರು ಕೆಳಪ್ರದೇಶಕ್ಕೆ ಹರಿದುಹೋಗುವುದಿಲ್ಲ. ಅದು ಇಂಗಿಹೋಗುವ ಒಂದೇ ಒಂದು ಮಾರ್ಗವು ಬಾಷ್ಪೀಕರಣವೇ. ಬೇಸಗೆಯ ಕಡುಬಿಸಿಲಿಗೆ 70 ಲಕ್ಷ ಟನ್ನುಗಳಷ್ಟು ನೀರಿನ ಅಪಾರ ಪ್ರಮಾಣವು ಆವಿಯಾಗಿ ಮೇಲೇರುವುದರಿಂದ ಆ ಸಮುದ್ರದ ದ್ರವ ಪರಿಮಾಣವು ಹೆಚ್ಚುವುದಿಲ್ಲ. ನೀರು ಆವಿಯಾಗಿ ಹೋದರೂ ಲವಣಗಳು ಮತ್ತು ಖನಿಜಗಳು ಅಲ್ಲೇ ಉಳಿಯುತ್ತವೆ. ಫಲಿತಾಂಶವಾಗಿ ಭೂಮಿಯ ಇತರ ಸಮುದ್ರಗಳಿಗಿಂತ ಹಲವಾರು ಪಟ್ಟು ಹೆಚ್ಚು ಉಪ್ಪಾದ, ಹಾಗೂ ಸುಮಾರು 30 ಶೇಕಡ ಲವಣತ್ವವಿರುವ ಕಡು ಉಪ್ಪು-ನೀರು ಅದರಲ್ಲಿರುತ್ತದೆ.

ಪ್ರಾಚೀನ ಕಾಲದಿಂದ ಈ ಮೃತ ಸಮುದ್ರದ ಅಸದೃಶ ವಿಲಕ್ಷಣಗಳು ಜನರ ಕುತೂಹಲವನ್ನು ಕೆರಳಿಸಿವೆ. ಆ ಸಮುದ್ರದ ನೀರು ಎಷ್ಟು “ಕಹಿಯೂ ಉಪ್ಪೂ ಆಗಿತ್ತೆಂದರೆ ಅದರಲ್ಲಿ ಮೀನೇ ಇಲ್ಲ” ಎಂದು ಗ್ರೀಕ್‌ ತತ್ವಜ್ಞಾನಿ ಅರಿಸ್ಟೋಟಲ್‌ಗೆ ಯಾರೋ ಹೇಳಿದರಂತೆ. ಉಪ್ಪಿನ ಈ ಅಸಾಮಾನ್ಯ ಸಾಂದ್ರೀಕರಣದ ದಟ್ಟಣೆಯು ಸಹಜವಾದ ತೇಲಿಸುವಿಕೆಯನ್ನು ಹೆಚ್ಚಿಸಿ ಈಜಾಡಲು ತಿಳಿಯದವರೂ ನೀರಿನಲ್ಲಿ ಸುಲಭವಾಗಿ ತೇಲಾಡಬಹುದು. ರೋಮನ್‌ ಸೇನಾಪತಿ ವೆಸ್‌ಪೇಸಿಯನ್‌ ತನ್ನ ಯುದ್ಧ ಕೈದಿಗಳನ್ನು ಈ ಸಮುದ್ರದೊಳಗೆ ಎಸೆದು ಈ ಲೋಕೋತ್ತರ ಸಂಗತಿಯ ಸತ್ವ-ಪರೀಕ್ಷೆ ಮಾಡಿದನೆಂದು ಇತಿಹಾಸಕಾರ ಫ್ಲೇವಿಯಸ್‌ ಜೋಸೆಫಸ್‌ ತಿಳಿಸುತ್ತಾನೆ.

ಈ ಹಂತದಲ್ಲಿ ನೀವು ಹೀಗೆ ಯೋಚಿಸುತ್ತಿರಬಹುದು: “ಸತ್ತಂಥ ಈ ಜಲರಾಶಿಯು ಆರೋಗ್ಯಕರವಾಗಿರುವುದಾದರೂ ಹೇಗೆ?”

ಅತ್ಯಂತ ಆರೋಗ್ಯಕರ ಕಡಲೋ?

ಪಕ್ಷಿಗಳಾಗಲಿ ಮೀನುಗಳಾಗಲಿ ಸಸ್ಯಗಳಾಗಲಿ ಇರದಿದ್ದ ಒಂದು ಬರಡು ಕಡಲಿನ ಕುರಿತು ಮಧ್ಯಯುಗದ ಪ್ರಯಾಣಿಕರು ಮನೆಗೆ ಮರಳಿದಾಗ ಕಥೆ ಹೇಳುತ್ತಿದ್ದರು. ಕಡಲಿನಿಂದ ಹೊರಡುತ್ತಿದ್ದ ದುರ್ಗಂಧದ ಆವಿಗಳು ಮಾರಕವಾಗಿದ್ದವೆಂದು ಸಹ ನೆನಸಲಾಗುತ್ತಿತ್ತು. ಇದು, ಆ ಮೃತ ಸಮುದ್ರವು ದುರ್ಗಂಧದ ಕಡಲೆಂಬ ವದಂತಿಯನ್ನು ಹಬ್ಬಿಸಿತು ನಿಶ್ಚಯ. ನೀರಿನ ಲವಣತ್ವದ ಆಧಿಕ್ಯದ ಕಾರಣ, ಚೇತರಿಸಶಕ್ತವಾದ ಕೆಲವೊಂದು ಜಾತಿಯ ಬ್ಯಾಕ್ಟೀರಿಯಗಳಂಥ ಸಾಮಾನ್ಯ ಸೂಕ್ಷ್ಮಜೀವಿಗಳು ಮಾತ್ರ ಅದರಲ್ಲಿ ಜೀವಿಸಸಾಧ್ಯವಿದೆ. ಹರಿಯುವ ನೀರಿನೊಂದಿಗೆ ಸಮುದ್ರದೊಳಗೆ ಕೊಚ್ಚಿಕೊಂಡು ಬರುವ ಯಾವುವೇ ದುರ್ದೈವಿ ಮೀನುಗಳು ಬೇಗನೆ ಸತ್ತುಹೋಗುತ್ತವೆ.

ಈ ಸಮುದ್ರವು ಜೀವ-ಪೋಷಣೆ ಮಾಡಲು ಶಕ್ಯವಲ್ಲದಿದ್ದರೂ ಸುತ್ತಮುತ್ತಣ ಪ್ರದೇಶದ ಕುರಿತು ಹಾಗೆ ಹೇಳಸಾಧ್ಯವಿಲ್ಲ. ಹೆಚ್ಚಿನ ಪ್ರದೇಶವು ಬಂಜರಾಗಿದ್ದರೂ ಜಲಪಾತಗಳು ಮತ್ತು ಉಷ್ಣವಲಯದ ಸಸ್ಯಗಳಿಂದ ಕೂಡಿದ ಸೊಂಪಾದ ಸಮೃದ್ಧ ಹಸುರು ತಾಣಗಳು ಅಲ್ಲಲ್ಲಿ ಕಂಗೊಳಿಸುತ್ತವೆ. ಆ ಪ್ರದೇಶವನ್ನು ಹುಲುಸಾದ ವನ್ಯಜೀವಿ ಇರುನೆಲೆಯಾಗಿಯೂ ಗುರುತಿಸಲಾಗಿದೆ. ಮರಳ ಬೆಕ್ಕು, ಅರಬ್ಬೀ ತೋಳ ಮತ್ತು ಅಡಿಗಡಿಗೆ ಕಾಣಸಿಕ್ಕುವ ಕಾಡು ಮೇಕೆಯಂಥ ಸಸ್ತನಿ ಪ್ರಾಣಿಗಳ 24 ಜಾತಿಗಳು ಸಹ ಸಮುದ್ರದ ಪರಿಸರದಲ್ಲಿ ಜೀವಿಸುತ್ತವೆ. ಸಿಹಿನೀರಿನ ಉಗಮಗಳು ಅನೇಕ ನೆಲಜಲಚರಿಗಳಿಗೆ, ಸರೀಸೃಪಗಳಿಗೆ ಮತ್ತು ಮೀನುಗಳಿಗೆ ಇರುನೆಲೆಯನ್ನು ಒದಗಿಸುತ್ತವೆ. ಮೃತ ಸಮುದ್ರವು ಪಕ್ಷಿಗಳು ವಲಸೆಹೋಗುವ ಪ್ರಧಾನ ಪಥದಲ್ಲಿರುವುದರಿಂದ ಕರಿಕೊಕ್ಕರೆ, ಬಿಳಿಕೊಕ್ಕರೆ ಮುಂತಾದ 90 ಕ್ಕಿಂತಲೂ ಹೆಚ್ಚು ಪಕ್ಷಿಜಾತಿಗಳನ್ನು ಇಲ್ಲಿ ಗುರುತಿಸಲಾಗಿದೆ. ಸಿಂಹಹದ್ದು ಮತ್ತು ಈಜಿಪ್ಶಿಯನ್‌ ರಣಹದ್ದುಗಳನ್ನು ಸಹ ನೀವು ಇಲ್ಲಿ ನೋಡಬಲ್ಲಿರಿ.

ಆದರೆ ಮೃತ ಸಮುದ್ರವು ಅತ್ಯಂತ ಆರೋಗ್ಯಕರ ಜಲರಾಶಿಯಾಗಿರುವುದು ಹೇಗೆ? ಅದರಲ್ಲಿ ವಾಸಿಕಾರಕ ಸಾರಗಳು ಇವೆ ಎಂದು ನಂಬುತ್ತಾ ಪುರಾತನ ಕಾಲದಲ್ಲಿ ಜನರು ಅದರ ನೀರನ್ನು ಕುಡಿಯುತ್ತಿದ್ದರಂತೆ. ಆದರೆ ಇಂದು ಆ ರೀತಿಯ ಸಲಹೆ ನೀಡಲಾಗುವುದಿಲ್ಲ ಎಂಬುದು ಸ್ಪಷ್ಟ. ಉಪ್ಪು ನೀರಿಗೆ ದೇಹವನ್ನು ಶುಚಿಗೊಳಿಸುವ ಶಕ್ತಿಯಿದೆ ಎಂದು ಹೇಳುವದು ಹೆಚ್ಚು ನ್ಯಾಯಸಮ್ಮತ. ಈ ಇಡೀ ಪ್ರದೇಶದ ಚಿಕಿತ್ಸಾತ್ಮಕ ಪ್ರಯೋಜನಗಳನ್ನು ಸಹ ಬಹಳವಾಗಿ ಶ್ಲಾಘಿಸಲಾಗುತ್ತದೆ. ಅದರ ತಗ್ಗು ಪ್ರದೇಶವು ಸಹಜವಾಗಿಯೇ ಆಮ್ಲಜನಕ ಸಮೃದ್ಧ ವಾತಾವರಣವನ್ನು ಸೃಷ್ಟಿಸುತ್ತದೆ. ಗಾಳಿಯಲ್ಲಿ ಬ್ರೋಮೈಡ್‌ ಆಮ್ಲವು ದಟ್ಟವಾಗಿರುವುದರಿಂದ ವಾತಾವರಣವು ಹಾಯಾದ ಪರಿಣಾಮ ಬೀರುತ್ತದೆಂದೂ ಸಮುದ್ರತೀರದ ಉದ್ದಕ್ಕೂ ಇರುವ ಖನಿಜಭರಿತ ಕರಿಮಣ್ಣು ಹಾಗೂ ಗಂಧಕಯುತ ಬಿಸಿ-ನೀರಿನ ಬುಗ್ಗೆಗಳು ಅನೇಕ ತರದ ಚರ್ಮರೋಗಗಳಿಗೆ ಮತ್ತು ಸಂಧಿವಾತಗಳಿಗೆ ಔಷಧೋಪಚಾರವಾಗಿ ಬಳಸಲಾಗುತ್ತದೆಂದೂ ಹೇಳಲಾಗುತ್ತದೆ. ಅಷ್ಟಲ್ಲದೆ ಆ ಕ್ಷೇತ್ರದಲ್ಲಿ ಬೆಳೆಯುತ್ತಿದ್ದ ಬಾಲ್ಸಮ್‌ ಎಂಬ ಮರವನ್ನು ಸೌಂದರ್ಯವರ್ಧಕಗಳು ಹಾಗೂ ಔಷಧಗಳಿಗಾಗಿ ಯಾವಾಗಲೂ ಉಪಯುಕ್ತವಾಗಿ ಬಳಸಲಾಗುತ್ತದೆ.

ಸಮುದ್ರದಿಂದ ಡಾಂಬರು

ಮೃತ ಸಮುದ್ರದ ಅತ್ಯಂತ ಅಪೂರ್ವ ಪ್ರಕೃತಿ ಘಟನೆಯಲ್ಲಿ ಒಂದು ಯಾವುದೆಂದರೆ ಅದು ಹೊರಹಾಕುವ ಕಪ್ಪುರಾಳವೇ (ಡಾಂಬರು) . ಅದು ಆಗಾಗ್ಗೆ ನೀರಿನ ಮೇಲೆ ಮುದ್ದೆ ಮುದ್ದೆಗಳಾಗಿ ತೇಲಾಡುತ್ತಾ ಇರುತ್ತದೆ. * ಇಸವಿ 1834 ರಲ್ಲಿ ಸುಮಾರು 2,700 ಕೆಜಿ ಭಾರವಿದ್ದ ಡಾಂಬರಿನ ತುಂಡು ತೇಲುತ್ತಾ ದಡಸೇರಿತ್ತೆಂದು ದ ಬಿಬ್ಲಿಕಲ್‌ ವರ್ಲ್ಡ್‌ ಎಂಬ ಪತ್ರಿಕೆಯು 1905 ರಲ್ಲಿ ವರದಿಸಿತು. “ಮನುಷ್ಯರು ಬಳಸಿರುವ ಮೊತ್ತಮೊದಲ ಪೆಟ್ರೋಲಿಯಮ್‌ ಉತ್ಪಾದನೆಯೇ” ಡಾಂಬರು ಎಂದು ವರ್ಣಿಸಲಾಗಿದೆ. (ಸೌದೀ ಅರಾಮ್ಕೊ ವರ್ಲ್ಡ್‌, ನವೆಂಬರ್‌/ಡಿಸೆಂಬರ್‌ 1984) ಕೆಲವು ಜನರು ನೆನಸುತ್ತಿದ್ದರೇನಂದರೆ ಭೂಕಂಪಗಳು ಮೃತ ಸಮುದ್ರದ ತಳದಿಂದ ಕಪ್ಪುರಾಳದ ದಪ್ಪ ತುಂಡುಗಳನ್ನು ಬೇರ್ಪಡಿಸಿ ನೀರಿನ ಮೇಲೆ ತೇಲುವಂತೆ ಮಾಡುತ್ತಿದ್ದವು ಎಂಬುದಾಗಿ. ಆದರೆ ಆ ಕಪ್ಪುರಾಳ ಲವಣ ಗುಮ್ಮಟ ಅಥವಾ ಬಿರುಕುಗಳ ಮೂಲಕ ಸೋಸಿಬಂದು ಕಲ್ಲುಪ್ಪುಗಳಿಂದ ಮಿಶ್ರಗೊಂಡು ಸಮುದ್ರ ತಳವನ್ನು ಸೇರುತ್ತದೆಂಬುದು ಹೆಚ್ಚು ಸಂಭವನೀಯ. ಆಮೇಲೆ ಕಲ್ಲುಪ್ಪುಗಳು ನೀರಿನಲ್ಲಿ ಕರಗುವಾಗ ಕಪ್ಪುರಾಳದ ತುಂಡುಗಳು ಮೇಲೆ ಬರುತ್ತವೆ.

ಶತಮಾನಗಳಲ್ಲಿ ಈ ಕಪ್ಪುರಾಳವನ್ನು ಅನೇಕ ವಿಧಗಳಲ್ಲಿ ಅಂದರೆ ದೋಣಿಗಳನ್ನು ಜಲನಿರೋಧಕವನ್ನಾಗಿ ಮಾಡಲು, ಕಟ್ಟಡ ನಿರ್ಮಾಣ ಕೆಲಸದಲ್ಲಿ ಮತ್ತು ಕೀಟನಿರೋಧಕವಾಗಿಯೂ ಉಪಯೋಗಿಸಲಾಗಿದೆ. ಸುಮಾರು ನಾಲ್ಕನೇ ಶತಮಾನದ ಮಧ್ಯದಲ್ಲಿ ಮೃತದೇಹದ ಸಂರಕ್ಷಣೆಗಾಗಿ ಕಪ್ಪುರಾಳವನ್ನು ಈಜಿಪ್ಟಿನವರು ಹೇರಳವಾಗಿ ಬಳಸಲಾರಂಭಿಸಿದ್ದರೆಂದು ನೆನಸಲಾಗಿದೆ, ಆದರೆ ಈ ವಿಚಾರದ ಬಗ್ಗೆ ಕೆಲವು ಪರಿಣಿತರು ಸಂದೇಹ ವ್ಯಕ್ತಪಡಿಸಿದ್ದಾರೆ. ಆ ಸಮಯದಲ್ಲಿ ಮೃತ ಸಮುದ್ರದ ಕ್ಷೇತ್ರದಲ್ಲಿ ನೆಲೆಸಿದ್ದ ಪುರಾತನ ಚರ ಪಶುಪಾಲರಾದ ನೆಬಟಿಯಾನರು ಆ ಪ್ರದೇಶದಲ್ಲಿ ಕಪ್ಪುರಾಳದ ವ್ಯಾಪಾರವನ್ನು ನಡೆಸಿದ್ದರು. ಅವರು ಕಪ್ಪುರಾಳವನ್ನು ದಡಕ್ಕೆ ತಂದು, ಅದನ್ನು ತುಂಡರಿಸಿ ಅನಂತರ ಈಜಿಪ್ಟ್‌ಗೆ ಕೊಂಡೊಯ್ದರು.

ಮೃತ ಸಮುದ್ರವು ಸರಿಸಾಟಿಯಿಲ್ಲದ ಕಡಲೇ ಸರಿ. ಈ ಸಮುದ್ರವನ್ನು ಕಡು ಉಪ್ಪಾದ, ಅತಿ ತಗ್ಗಾದ, ಪೂರ್ತಿ ಸತ್ತಂಥ ಮತ್ತು ಪ್ರಾಯಶಃ ಅತ್ಯಂತ ಆರೋಗ್ಯಕರ ಸಮುದ್ರವನ್ನಾಗಿ ವರ್ಣಿಸುವುದು ಅತಿಶಯೋಕ್ತಿಯಲ್ಲ. ಅದು ನಮ್ಮ ಭೂಗ್ರಹದ ಅತ್ಯಂತ ಕುತೂಹಲಭರಿತ ಸಮುದ್ರಗಳಲ್ಲೊಂದು ಎಂಬುದು ಖಂಡಿತ! (g 1/08)

[ಪಾದಟಿಪ್ಪಣಿ]

^ ಪೆಟ್ರೋಲಿನಿಂದ ತೆಗೆದ ಕಪ್ಪುರಾಳವನ್ನು ಡಾಂಬರು ಎಂದೂ ಕರೆಯಲಾಗುತ್ತದೆ. ಆದರೂ ಅನೇಕ ಸ್ಥಳಗಳಲ್ಲಿ ಡಾಂಬರು ಅಂದರೆ ರಸ್ತೆಗೆ ನೆಲಗಟ್ಟನ್ನು ಹಾಸುವಾಗ ಹೆಚ್ಚಾಗಿ ಬಳಸಲಾಗುವ ಕಪ್ಪುರಾಳ ಮಿಶ್ರಿತ ಖನಿಜ ಗಾರೆಗಳಾದ ಮರಳು ಅಥವಾ ಜಲ್ಲಿಕಲ್ಲಿಗೆ ಸೂಚಿಸುತ್ತದೆ. ಈ ಲೇಖನದ ಸಲುವಾಗಿ ನಾವು ಕಪ್ಪುರಾಳ ಮತ್ತು ಡಾಂಬರನ್ನು ಅವುಗಳ ಕಚ್ಚಾಸ್ಥಿತಿಯನ್ನು ಸೂಚಿಸಲಿಕ್ಕಾಗಿ ಅದಲುಬದಲಾಗಿ ಉಪಯೋಗಿಸಿದ್ದೇವೆ.

[ಪುಟ 27ರಲ್ಲಿರುವ ಚೌಕ/ಚಿತ್ರ]

ಲವಣಜಲದಲ್ಲಿ ರಕ್ಷಿಸಿಟ್ಟದ್ದು

ಪುರಾತನ ಕಾಲದಲ್ಲಿ ಲವಣ ಸಮುದ್ರವು ಬಹಳ ಸಡಗರದ ವ್ಯಾಪಾರ ಹಾದಿಯಾಗಿತ್ತೆಂದು ಇತಿಹಾಸಕಾರರು ವರದಿ ಮಾಡುತ್ತಾರೆ. ಇತ್ತೀಚೆಗೆ ಕಂಡುಹಿಡಿಯಲಾದ ಮರದ ಎರಡು ಲಂಗರುಗಳು ಈ ವಾದವನ್ನು ಬೆಂಬಲಿಸುತ್ತವೆ.

ಈ ಲಂಗರುಗಳು ಪುರಾತನ ಬಂದರಾದ ಏಂಗೆದೀ ಹಿಂದೆ ಎಲ್ಲಿ ನೆಲೆಸಿತ್ತೋ ಅದಕ್ಕೆ ಸಮೀಪದಲ್ಲಿ ಅಂದರೆ ಮೃತ ಸಮುದ್ರದ ಇಳಿಜಾರು ತೀರಗಳಲ್ಲಿ ಕಂಡುಬಂದವು. ಇವುಗಳಲ್ಲಿ ಒಂದು ಲಂಗರು ಸುಮಾರು 2,500 ವರ್ಷ ಪುರಾತನದೆಂದು ನೆನಸಲಾಗಿರುವುದರಿಂದ ಅದು ಮೃತ ಸಮುದ್ರದ ಕ್ಷೇತ್ರದಲ್ಲಿ ಕಂಡುಹಿಡಿಯಲಾದ ಅತ್ಯಂತ ಹಳೆಯ ಲಂಗರು. ಎರಡನೆಯದ್ದು ಸುಮಾರು 2,000 ವರ್ಷ ಹಳೆಯದೆಂದು ಎಣಿಸಲಾಗಿದೆ ಮತ್ತು ಆ ಕಾಲದ ಅತ್ಯುತ್ತಮ ರೋಮನ್‌ ತಂತ್ರ-ಕೌಶಲದಿಂದ ರಚಿಸಲ್ಪಟ್ಟದೆಂದು ನಂಬಲಾಗಿದೆ.

ಮರದ ಲಂಗರುಗಳು ಸಾಮಾನ್ಯವಾದ ಸಮುದ್ರ ಜಲದಲ್ಲಿ ಸಾಧಾರಣವಾಗಿ ವಿಭಜಿತವಾಗಿ ಹೋಗುತ್ತವೆ ಮತ್ತು ಲೋಹದಿಂದ ಮಾಡಲ್ಪಟ್ಟವುಗಳು ಹಾಳಾಗದೆ ಉಳಿಯುತ್ತವೆ. ಆದರೂ ಮೃತ ಸಮುದ್ರದಲ್ಲಿ ಆಮ್ಲಜನಕದ ಕೊರತೆ ಮತ್ತು ಅದರಲ್ಲಿರುವ ಲವಣತ್ವದ ಕಾರಣ ಆ ಲಂಗರುಗಳ ಮರ ಹಾಗೂ ಅವುಗಳಿಗೆ ಬಿಗಿಯಲಾದ ಹಗ್ಗಗಳೂ ಗಮನಾರ್ಹ ಸುಸ್ಥಿತಿಯಲ್ಲಿ ರಕ್ಷಿತವಾಗಿವೆ.

[ಚಿತ್ರ]

ಸಾ.ಶ.ಪೂ. 7 ಮತ್ತು 5 ನೇ ಶತಮಾನಗಳ ನಡುವಿನ ಕಾಲದಷ್ಟು ಹಿಂದಿನ ಮರದ ಲಂಗರು

[ಕೃಪೆ]

Photograph © Israel Museum, Courtesy of Israel Antiquities Authority

[ಪುಟ 26ರಲ್ಲಿರುವ ಚಿತ್ರ]

ಬಿಸಿನೀರಿನ ಬುಗ್ಗೆಗಳು

[ಪುಟ 26ರಲ್ಲಿರುವ ಚಿತ್ರ]

ಕಾಡು ಮೇಕೆ

[ಪುಟ 26ರಲ್ಲಿರುವ ಚಿತ್ರ]

ತೇಲಾಡುತ್ತಾ ವಾರ್ತಾಪತ್ರಿಕೆಯನ್ನು ಓದುವುದು