ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸ್ತ್ರೀಯರ ಕುರಿತು ದೇವರ ಹಾಗೂ ಕ್ರಿಸ್ತನ ನೋಟವೇನು?

ಸ್ತ್ರೀಯರ ಕುರಿತು ದೇವರ ಹಾಗೂ ಕ್ರಿಸ್ತನ ನೋಟವೇನು?

ಸ್ತ್ರೀಯರ ಕುರಿತು ದೇವರ ಹಾಗೂ ಕ್ರಿಸ್ತನ ನೋಟವೇನು?

ಸ್ತ್ರೀಯರ ಕುರಿತು ದೇವರ ನೋಟವೇನಾಗಿದೆ ಎಂಬದರ ಸಂಪೂರ್ಣ ಚಿತ್ರಣ ನಮಗೆ ಹೇಗೆ ಸಿಗಬಲ್ಲದು? ಒಂದು ವಿಧವು ಯೇಸು ಕ್ರಿಸ್ತನ ಮನೋಭಾವ ಹಾಗೂ ನಡೆನುಡಿಗಳನ್ನು ಪರಿಶೀಲಿಸುವ ಮೂಲಕವೇ. ಏಕೆಂದರೆ, ಅವನು ‘ಅದೃಶ್ಯನಾದ ದೇವರ ಪ್ರತಿರೂಪನಾಗಿದ್ದು’ ಒಂದೊಂದು ವಿಷಯದಲ್ಲೂ ದೇವರ ನೋಟವನ್ನು ಪರಿಪೂರ್ಣವಾಗಿ ಪ್ರತಿಬಿಂಬಿಸುತ್ತಾನೆ. (ಕೊಲೊಸ್ಸೆ 1:15) ಯೇಸು ಭೂಮಿಯಲ್ಲಿದ್ದಾಗ ಸ್ತ್ರೀಯರೊಂದಿಗೆ ನಡೆದುಕೊಂಡ ರೀತಿಯು, ಯೆಹೋವನು ಮತ್ತು ಯೇಸುವು ಮಹಿಳೆಯರನ್ನು ಗೌರವದಿಂದ ಕಾಣುತ್ತಾರೆ ಹಾಗೂ ಇಂದು ಅನೇಕ ದೇಶಗಳಲ್ಲಿ ಸರ್ವಸಾಮಾನ್ಯವಾಗಿರುವ ಸ್ತ್ರೀ ದಬ್ಬಾಳಿಕೆಯನ್ನು ಅವರಿಬ್ಬರೂ ಸಮ್ಮತಿಸುವುದೇ ಇಲ್ಲ ಎಂಬುದನ್ನು ತೋರಿಸುತ್ತದೆ.

ಉದಾಹರಣೆಗಾಗಿ, ಬಾವಿಯ ಬಳಿಯಲ್ಲಿದ್ದ ಒಬ್ಬಾಕೆಯೊಂದಿಗೆ ಯೇಸು ಮಾತಾಡಿದ ಸಂದರ್ಭವನ್ನು ಪರಿಗಣಿಸಿರಿ. ಈ ಕುರಿತು ಯೋಹಾನನ ಸುವಾರ್ತಾ ವೃತ್ತಾಂತ ತಿಳಿಸುವುದು: “ಸಮಾರ್ಯದವಳಾದ ಒಬ್ಬ ಹೆಂಗಸು ನೀರು ಸೇದುವದಕ್ಕೆ ಬಂದಳು. ಯೇಸು ಆಕೆಯನ್ನು​—⁠ಅಮ್ಮಾ, ನೀರು ಕುಡಿಯುವದಕ್ಕೆ ಕೊಡು ಎಂದು ಕೇಳಿದನು.” ಆ ಸಮಯದಲ್ಲಿ ಸಮಾರ್ಯದವರೊಂದಿಗೆ ಹೆಚ್ಚಿನ ಯೆಹೂದ್ಯರು ಯಾವುದೇ ವ್ಯವಹಾರಗಳನ್ನು ಇಟ್ಟುಕೊಳ್ಳುತ್ತಿರಲಿಲ್ಲ. ಆದರೂ ಯೇಸು ಸಾರ್ವಜನಿಕ ಸ್ಥಳದಲ್ಲಿ ಆ ಸಮಾರ್ಯದ ಸ್ತ್ರೀಯೊಂದಿಗೆ ಮಾತಾಡಲು ಸಿದ್ಧನಿದ್ದನು. ದಿ ಇಂಟರ್‌ನ್ಯಾಷನಲ್‌ ಸ್ಟ್ಯಾಂಡರ್ಡ್‌ ಬೈಬಲ್‌ ಎನ್‌ಸೈಕ್ಲಪೀಡಿಯ ದ ಪ್ರಕಾರ ಯೆಹೂದ್ಯರಿಗೆ “ಸಾರ್ವಜನಿಕ ಸ್ಥಳದಲ್ಲಿ ಸ್ತ್ರೀಯೊಂದಿಗೆ ಮಾತಾಡುವುದೇ ಅಶ್ಲೀಲವಾಗಿತ್ತು.” ಆದರೆ ಯೇಸು ಜಾತಿ ಇಲ್ಲವೆ ಲಿಂಗಾಧಾರದ ದುರಭಿಪ್ರಾಯವನ್ನು ಇಟ್ಟುಕೊಳ್ಳದೆ ಸ್ತ್ರೀಯರನ್ನು ಗೌರವ ಆದರದಿಂದ ಕಂಡನು. ಎಷ್ಟೆಂದರೆ, ತಾನೇ ಮೆಸ್ಸೀಯನೆಂದು ಯೇಸು ಮೊತ್ತ​ಮೊದಲ ಬಾರಿ ನೇರವಾಗಿ ಹೇಳಿದ್ದು ಆ ಸಮಾರ್ಯದ ಸ್ತ್ರೀಗೇ ಆಗಿತ್ತು.​—⁠ಯೋಹಾನ 4:7-9, 25, 26.

ಇನ್ನೊಂದು ಸಂದರ್ಭದಲ್ಲಿ 12 ವರ್ಷಗಳಿಂದಲೂ ರಕ್ತಸ್ರಾವ ರೋಗದಿಂದ ಬಳಲುತ್ತಿದ್ದ ಮಹಿಳೆಯೊಬ್ಬಳು ಯೇಸುವಿನ ಸಮೀಪಕ್ಕೆ ಬಂದಳು. ನಿತ್ರಾಣಗೊಳಿಸುವಂಥ ಆ ರೋಗವು ಅವಳನ್ನು ಮುಜುಗರಕ್ಕೀಡುಮಾಡಿತ್ತು. ಆದರೆ ಅವಳು ಯೇಸುವನ್ನು ಮುಟ್ಟಿದೊಡನೆಯೇ ವಾಸಿಯಾದಳು. “ಯೇಸು ಹಿಂತಿರುಗಿ ಆಕೆಯನ್ನು ನೋಡಿ​—⁠ಮಗಳೇ, ಧೈರ್ಯವಾಗಿರು; ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥಮಾಡಿತು ಅಂದನು.” (ಮತ್ತಾಯ 9:22) ಮೋಶೆಯ ಧರ್ಮಶಾಸ್ತ್ರದ ಮೇರೆಗೆ ರಕ್ತಸ್ರಾವವಿರುವ ಸ್ತ್ರೀಯು ಬೇರೆಯವರನ್ನು ಮುಟ್ಟುವುದು ಬಿಡಿ, ಜನ​ಸಂದಣಿ ಇರುವಲ್ಲಿ ಹೋಗುವುದು ಸಹ ತಪ್ಪಾಗಿತ್ತು. ಹಾಗಿದ್ದರೂ ಯೇಸು ಅವಳನ್ನು ಕೋಪದಿಂದ ಗದರಿಸಲಿಲ್ಲ. ಬದಲಿಗೆ “ಮಗಳೇ” ಎಂದು ಕರೆಯುತ್ತಾ ಆಕೆಯನ್ನು ವಾತ್ಸಲ್ಯದಿಂದ ಸಂತೈಸಿದನು. ಮಗಳೇ ಎಂದು ಕರೆದಾಗ ಅವಳಿಗೆಷ್ಟು ನೆಮ್ಮದಿಯಾಗಿದ್ದಿರಬೇಕು! ಅಲ್ಲದೆ ಅವಳನ್ನು ಗುಣಪಡಿಸಿದ್ದಕ್ಕಾಗಿ ಯೇಸುವಿಗೆ ಎಷ್ಟು ಸಂತೋಷವಾಗಿದ್ದಿರಬೇಕು!

ಯೇಸು ಪುನರುತ್ಥಾನಗೊಂಡ ಬಳಿಕ ಮೊತ್ತಮೊದಲು ಕಾಣಿಸಿಕೊಂಡದ್ದು, ಮಗ್ದಲದ ​ಮರಿಯ​ಳಿಗೆ ಮತ್ತು ‘ಬೇರೆ ಮರಿಯಳು’ ಎಂದು ಬೈಬಲ್‌ ಹೆಸರಿಸುವ ಮತ್ತೊಬ್ಬಳು ಶಿಷ್ಯೆಗೆ. ಅವನು ಪೇತ್ರ, ಯೋಹಾನ ಅಥವಾ ತನ್ನ ಶಿಷ್ಯರಲ್ಲಿ ಇತರ ಪುರುಷರಿಗೆ ಮೊದಲು ಕಾಣಿಸಿಕೊಳ್ಳಬಹುದಿತ್ತು. ಆದರೆ ತನ್ನ ಪುನರುತ್ಥಾನಕ್ಕೆ ಪ್ರತ್ಯಕ್ಷ ಸಾಕ್ಷಿಗಳಾಗುವ ಮೊದಲ ಅವಕಾಶವನ್ನು ಮಹಿಳೆಯರಿಗೆ ಕೊಡುವ ಮೂಲಕ ಯೇಸು ಅವರನ್ನು ಗೌರವಿಸಿದನು. ಈ ಚಕಿತಗೊಳಿಸುವ ಘಟನೆಗೆ ಸಾಕ್ಷಿಗಳಾಗಿದ್ದ ಆ ಸ್ತ್ರೀಯರು ತಾವು ಕಂಡದ್ದನ್ನು ಯೇಸುವಿನ ಶಿಷ್ಯರಲ್ಲಿದ್ದ ಪುರುಷರಿಗೆ ತಿಳಿಸುವಂತೆ ಒಬ್ಬ ದೇವದೂತನು ಆದೇಶವನ್ನಿತ್ತನು. ಬಳಿಕ ಯೇಸು ಆ ಸ್ತ್ರೀಯರಿಗೆ, ‘ನನ್ನ ಸಹೋದರರ ಬಳಿಗೆ ಹೋಗಿ ಹೇಳಿರಿ’ ಎಂದು ತಿಳಿಸಿದನು. (ಮತ್ತಾಯ 28:1, 5-10) ಯೇಸುವಿನ ಸಮಯದಲ್ಲಿ ಮಹಿಳೆಯರು ನ್ಯಾಯಸ್ಥಾನದಲ್ಲಿ ಸಾಕ್ಷಿನೀಡುವುದನ್ನು ನಿಷೇಧಿಸಲಾಗಿತ್ತು. ಆದರೆ ಆಗಿನ ಯೆಹೂದ್ಯರಲ್ಲಿ ಸರ್ವಸಾಮಾನ್ಯವಾಗಿದ್ದ ಆ ತಪ್ಪಭಿಪ್ರಾಯದಿಂದ ಯೇಸು ಖಂಡಿತವಾಗಿಯೂ ಪ್ರಭಾವಿತನಾಗಿರಲಿಲ್ಲ.

ಹಾಗಾಗಿ ಗಂಡಸರನ್ನು ಪ್ರಧಾನವಾಗಿ ಕಂಡು ಹೆಂಗಸರನ್ನು ಕೀಳಾಗಿ ನೋಡುವಂಥ ಯಾವುದೇ ಮನೋಭಾವವನ್ನು ತೋರಿಸುವ ಬದಲು ಯೇಸು ತಾನು ಸ್ತ್ರೀಯರನ್ನು ಗೌರವಿಸಿ ಮಾನ್ಯಮಾಡಿದನೆಂದು ತೋರಿಸಿಕೊಟ್ಟನು. ಸ್ತ್ರೀ ದೌರ್ಜನ್ಯ ಯೇಸುವಿನ ಬೋಧನೆಗೆ ತೀರಾ ವಿರುದ್ಧವಾಗಿತ್ತು. ಯೇಸುವಿನ ಈ ಮನೋಭಾವವು ಪ್ರತಿಯೊಂದು ವಿಷಯದಲ್ಲೂ ತನ್ನ ತಂದೆಯಾದ ಯೆಹೋವನಿಗಿರುವ ನೋಟವನ್ನೇ ಪ್ರತಿಬಿಂಬಿಸಿತು ಎಂಬುದರಲ್ಲಿ ನಮಗೆ ಖಾತರಿಯಿರಬಲ್ಲದು.

ದೇವರ ಸಂರಕ್ಷಣೆಯಲ್ಲಿ ಸ್ತ್ರೀಯರು

“ಆಧುನಿಕ ಪಾಶ್ಚಾತ್ಯ ಸಮಾಜದಲ್ಲಿನ ಮಹಿಳೆಗಿರುವಷ್ಟು ಸ್ವಾತಂತ್ರ್ಯ, ಪ್ರಾಚೀನ ಮೆಡಿಟರೇನಿಯನ್‌ ಅಥವಾ ಸಮೀಪಪ್ರಾಚ್ಯ ಪ್ರದೇಶದ ಸ್ತ್ರೀಯರಿಗೆ ಇರಲಿಲ್ಲ. ಆಳು ಯಜಮಾನ ಕೈಕೆಳಗಿರುವ ಹಾಗೆ, ಕಿರಿಯರು ಹಿರಿಯರ ಹದ್ದುಬಸ್ತಿನಲ್ಲಿರುವಂತೆ ಸ್ತ್ರೀಯರು ಪುರುಷರ ಅಡಿಯಾಳಾಗಿರುವುದು ಒಂದು ಸಾಮಾನ್ಯ ಪದ್ಧತಿಯಾಗಿತ್ತು. . . . ಗಂಡು ಮಕ್ಕಳೇ ಹೆಣ್ಣು ಮಕ್ಕಳಿಗಿಂತ ಶ್ರೇಷ್ಠರೆಂದು ಎಣಿಸುತ್ತಿದ್ದರು. ಹೆಣ್ಣು ಕೂಸುಗಳನ್ನು ಕೆಲವೊಮ್ಮೆ ಸಾಯುವಂತೆ ಹೊರಗೆ ಚಳಿಯಲ್ಲಿ ಬಿಟ್ಟದ್ದೂ ಉಂಟು.” ಹೀಗೆಂದು ಒಂದು ಬೈಬಲ್‌ ಶಬ್ದಕೋಶವು ಪುರಾತನ ಕಾಲದ ಹೆಣ್ಣಿನ ಪಾಡನ್ನು ವರ್ಣಿಸುತ್ತದೆ. ಅನೇಕ ವಿದ್ಯಮಾನಗಳಲ್ಲಿ ಅವರನ್ನು ಗುಲಾಮರ ಸ್ಥಾನದಲ್ಲಿಡಲಾಗುತ್ತಿತ್ತು.

ಇಂಥ ಪದ್ಧತಿಗಳು ಚಾಲ್ತಿಯಲ್ಲಿದ್ದ ಕಾಲದಲ್ಲೇ ಬೈಬಲನ್ನು ಬರೆಯಲಾಗಿತ್ತು. ಆದಾಗ್ಯೂ ಬೈಬಲಿನಲ್ಲಿರುವ ದೇವರ ನಿಯಮವು ಮಹಿಳೆಯರಿಗೆ ಆದರಾಭಿಮಾನವನ್ನು ಕೊಟ್ಟಿತು. ಬೈಬಲಿನ ಈ ನೋಟವು ಅನೇಕ ಪ್ರಾಚೀನ ಸಂಸ್ಕೃತಿಗಳಲ್ಲಿದ್ದ ಮನೋಭಾವಕ್ಕಿಂತ ತೀರ ವ್ಯತಿರಿಕ್ತವಾಗಿ ಎದ್ದುಕಾಣುತ್ತದೆ.

ಮಹಿಳೆಯರ ಹಿತಕ್ಷೇಮದ ಕುರಿತು ಯೆಹೋವನಿಗಿರುವ ಕಾಳಜಿಯು ಆತನು ತನ್ನ ಆರಾಧಕರಾಗಿದ್ದ ಮಹಿಳೆಯರ ಪರವಾಗಿ ಅನೇಕ ಬಾರಿ ಕ್ರಿಯೆಗೈದದ್ದರಿಂದ ವ್ಯಕ್ತವಾಗುತ್ತದೆ. ಅಬ್ರಹಾಮನ ಸುಂದರ ಪತ್ನಿಯಾಗಿದ್ದ ಸಾರಳನ್ನು ಅತ್ಯಾಚಾರದಿಂದ ಯೆಹೋವನು ಎರಡು ಸಲ ತಪ್ಪಿಸಿದನು. (ಆದಿಕಾಂಡ 12:14-20; 20:1-7) ಯಾಕೋಬನು ಅಷ್ಟಾಗಿ ಪ್ರೀತಿಸದ ಅವನ ಹೆಂಡತಿ ಲೇಯಳಿಗೆ ದೇವರು ಅನುಗ್ರಹ ತೋರಿಸಿದನು. ಅವಳು ‘ಬಸುರಾಗಿ’ ಗಂಡು​ಮಗುವಿಗೆ ಜನ್ಮನೀಡುವಂತೆ ಆತನು ಆಶೀರ್ವದಿಸಿದನು. (ಆದಿಕಾಂಡ 29:31, 32) ಐಗುಪ್ತ್ಯದಲ್ಲಿ ದೇವಭಕ್ತರಾದ ಇಬ್ಬರು ಇಸ್ರಾಯೇಲ್‌ ಸೂಲಗಿತ್ತಿಯರು ಶಿಶುಹತ್ಯೆಯಿಂದ ಇಬ್ರಿಯ ಗಂಡುಮಕ್ಕಳನ್ನು ಕಾಪಾಡಲು ತಮ್ಮ ಜೀವವನ್ನೇ ಅಪಾಯಕ್ಕೊಡ್ಡಿದಕ್ಕಾಗಿ ಯೆಹೋವನು ಅವರ “ವಂಶಾಭಿವೃದ್ಧಿಯನ್ನುಂಟು ಮಾಡಿದನು.” (ವಿಮೋಚನಕಾಂಡ 1:17, 20, 21) ಹನ್ನಳ ಕಟ್ಟಾಸಕ್ತಿಯ ಪ್ರಾರ್ಥನೆಗೆ ಸಹ ಆತನು ಉತ್ತರ ಕೊಟ್ಟನು. (1 ಸಮುವೇಲ 1:10, 20) ಒಬ್ಬ ಪ್ರವಾದಿಯ ವಿಧವೆಗೆ ಸಾಲಕೊಟ್ಟವನು ಅವಳ ಇಬ್ಬರು ಮಕ್ಕಳನ್ನು ದಾಸರನ್ನಾಗಿ ತೆಗೆದುಕೊಂಡು ಹೋಗುವುದಕ್ಕೆ ಬಂದಾಗ ದಿಕ್ಕೆಟ್ಟ ಸ್ಥಿತಿಯಲ್ಲಿದ್ದ ಅವಳನ್ನು ಯೆಹೋವನು ಕೈಬಿಡಲಿಲ್ಲ. ಪ್ರವಾದಿ ಎಲೀಷನ ಮೂಲಕ ಆಕೆಯ ಬಳಿಯಲ್ಲಿದ್ದ ಎಣ್ಣೆಯನ್ನು ಅಧಿಕಗೊಳಿಸಿ ಅವಳ ಸಾಲವನ್ನೆಲ್ಲ ತೀರಿಸುವಂತೆ ಯೆಹೋವನು ಸಹಾಯಮಾಡಿದನು. ಅಷ್ಟಲ್ಲದೆ, ಅವಳ ಕುಟುಂಬಕ್ಕೂ ಸಾಕಷ್ಟು ಎಣ್ಣೆಯನ್ನು ಹೊಂದುವಂತೆ ಮಾಡುವ ಮೂಲಕ ಅವಳಿಗೆ ಪ್ರೀತಿ ತೋರಿಸಿದನು. ಹೀಗೆ ಅವಳು ತನ್ನ ಕುಟುಂಬವನ್ನೂ ತನ್ನ ಮರ್ಯಾದೆಯನ್ನೂ ಉಳಿಸಿಕೊಂಡಳು.​—⁠ವಿಮೋಚನಕಾಂಡ 22:22, 23; 2 ಅರಸುಗಳು 4:1-7.

ಪ್ರವಾದಿಗಳು ಸ್ತ್ರೀಯರ ಮೇಲೆ ನಡೆಯುತ್ತಿದ್ದ ಶೋಷಣೆ ಅಥವಾ ದೌರ್ಜನ್ಯವನ್ನು ಪದೇ ಪದೇ ಖಂಡಿಸಿದರು. ಯೆಹೋವನ ಹೆಸರಿನಲ್ಲಿ ಪ್ರವಾದಿ ಯೆರೆಮೀಯನು ಇಸ್ರಾಯೇಲ್ಯರಿಗೆ ಹೇಳಿದ್ದು: “ನೀತಿನ್ಯಾಯಗಳನ್ನು ಆಚರಿಸಿರಿ, ಸುಲಿಗೆಯಾದವನನ್ನು ದೋಚಿಕೊಂಡವನ ಕೈಯಿಂದ ಬಿಡಿಸಿರಿ; ವಿದೇಶಿ, ಅನಾಥ, ವಿಧವೆ, ಇವರಿಗೆ ಯಾವ ಅನ್ಯಾಯವನ್ನೂ ಹಿಂಸೆಯನ್ನೂ ಮಾಡಬೇಡಿರಿ; ನಿರ್ದೋಷಿಯ ರಕ್ತವನ್ನು ಈ ಸ್ಥಳದಲ್ಲಿ ಸುರಿಸದಿರಿ.” (ಯೆರೆಮೀಯ 22:2, 3) ಅದಕ್ಕೆ ಮುಂಚೆ, ಧನಿಕರೂ ಪ್ರಬಲರೂ ಆಗಿದ್ದ ಇಸ್ರಾಯೇಲ್ಯರು ಸ್ತ್ರೀಯರನ್ನು ತಮ್ಮ ಮನೆಗಳಿಂದ ಅಟ್ಟಿಬಿಟ್ಟದ್ದಕ್ಕೆ ಮತ್ತು ಅವರ ಮಕ್ಕಳನ್ನು ದುರುಪಚರಿಸಿದ್ದಕ್ಕೆ ಅವರನ್ನು ಖಂಡಿಸಲಾಗಿತ್ತು. (ಮೀಕ 2:9) ಮಹಿಳೆಯರಿಗೆ ಮತ್ತು ಅವರ ಮಕ್ಕಳಿಗಾಗುವ ಇಂಥ ದುಷ್ಕಾರ್ಯಗಳನ್ನು ನ್ಯಾಯವಂತನಾದ ದೇವರು ಗಮನಿಸುತ್ತಾನೆ ಮಾತ್ರವಲ್ಲ ಅದನ್ನು ಖಂಡಿಸುತ್ತಾನೆ.

“ಗುಣವತಿಯಾದ ಸತಿ”

ಗುಣವತಿಯಾದ ಸಮರ್ಥ ಪತ್ನಿಯ ಕುರಿತ ಯೋಗ್ಯ ನೋಟವನ್ನು ಜ್ಞಾನೋಕ್ತಿಗಳ ಪುರಾತನ ಬರಹಗಾರನು ಪ್ರಸ್ತುತಪಡಿಸಿದ್ದಾನೆ. ಒಬ್ಬಾಕೆ ಪತ್ನಿಯ ಪಾತ್ರ ಹಾಗೂ ಆಕೆಯ ಸ್ಥಾನದ ಕುರಿತ ಸುಂದರ ಬನ್ನಣೆಯು ಯೆಹೋವನ ವಾಕ್ಯದಲ್ಲಿರುವುದರಿಂದ ಅದಕ್ಕೆ ಆತನ ಸಮ್ಮತಿಯಿದೆ ಎಂಬುದರಲ್ಲಿ ಎರಡುಮಾತಿಲ್ಲ. ಇಂಥ ಸ್ತ್ರೀಯನ್ನು ದಬ್ಬಾಳಿಕೆಗೊಳಪಡಿಸುವ ಅಥವಾ ತುಚ್ಛವಾಗಿ ಕಡೆಗಣಿಸುವ ಬದಲಿಗೆ ಅವಳನ್ನು ಪ್ರಶಂಸಿಸಲಾಗಿದೆ, ಗೌರವಿಸಲಾಗಿದೆ ಮತ್ತು ನೆಚ್ಚಲಾಗಿದೆ.

ಜ್ಞಾನೋಕ್ತಿ 31 ನೇ ಅಧ್ಯಾಯದಲ್ಲಿ ವರ್ಣಿಸಲಾಗಿರುವ “ಗುಣವತಿಯಾದ ಸತಿ” ಚುರುಕಾದ ಶ್ರಮಶೀಲ ಕೆಲಸಗಾರ್ತಿಯಾಗಿದ್ದಾಳೆ. ಅವಳು ಕಷ್ಟಪಟ್ಟು ತನ್ನ ‘ಕೈಗೆಲಸವನ್ನೆಸಗುತ್ತಾಳೆ.’ ವ್ಯಾಪಾರ ಹಾಗೂ ಆಸ್ತಿ ವ್ಯವಹಾರಗಳನ್ನೂ ನೋಡಿಕೊಳ್ಳುತ್ತಾಳೆ. ಅವಳು ಹೊಲವೊಂದನ್ನು ನೋಡಿ, ಯೋಚಿಸಿ ಕೊಂಡುಕೊಳ್ಳುತ್ತಾಳೆ. ಒಳಉಡುಪುಗಳನ್ನು ತಯಾರಿಸಿ ಮಾರುತ್ತಾಳೆ. ವರ್ತಕರಿಗೆ ನಡುಕಟ್ಟುಗಳನ್ನು ಒದಗಿಸುತ್ತಾಳೆ. ಅವಳು ಲವಲವಿಕೆಯಿಂದ ಕೆಲಸಕಾರ್ಯಗಳನ್ನು ಮಾಡುತ್ತಾಳೆ. ಅವಳ ಜ್ಞಾನವೂ ಪ್ರೀತಿಪೂರ್ವಕ ದಯೆಯೂ ಮೆಚ್ಚತಕ್ಕದ್ದೇ. ಇದರಿಂದಾಗಿ ಅವಳ ಪತಿ, ಮಕ್ಕಳು ಮತ್ತು ಹೆಚ್ಚು ಮುಖ್ಯವಾಗಿ ಯೆಹೋವನು ಅವಳನ್ನು ತುಂಬ ಗೌರವದಿಂದ ಕಾಣುತ್ತಾನೆ.

ಹೆಣ್ಣೊಬ್ಬಳು ತನ್ನಿಂದ ಲಾಭಪಡೆಯುವ, ತನ್ನನ್ನು ದುರುಪಚರಿಸುವ ಅಥವಾ ಬೇರಾವುದೇ ರೀತಿಯ ದೌರ್ಜನ್ಯಕ್ಕೆ ಒಳಪಡಿಸುವ ಪುರುಷರ ಕೈಗೊಂಬೆಯಲ್ಲ. ಅದರ ಬದಲು ವಿವಾಹಿತ ಸ್ತ್ರೀ ತನ್ನ ಗಂಡನಿಗೆ ಗುಣವತಿಯಾದ, ಸಂತುಷ್ಟ ‘ಸಹಕಾರಿಯಾಗಿದ್ದಾಳೆ.’​—⁠ಆದಿಕಾಂಡ 2:18.

ಅವರಿಗೆ ಮಾನ ಸಲ್ಲಿಸಿರಿ

ಕ್ರೈಸ್ತ ಗಂಡಂದಿರು ತಮ್ಮ ಪತ್ನಿಯರನ್ನು ಹೇಗೆ ಉಪಚರಿಸ​ಬೇಕೆಂದು ಪ್ರೇರಿತ ಲೇಖಕನಾದ ಪೇತ್ರನು ಬರೆದಾಗ, ಯೆಹೋವನ ಹಾಗೂ ಯೇಸು ಕ್ರಿಸ್ತನ ಮನೋಭಾವವನ್ನು ಅವರು ಅನುಕರಿಸುವಂತೆ ಉತ್ತೇಜಿಸಿದನು. “ಪುರುಷರೇ, . . . ಅವರಿಗೆ ಮಾನವನ್ನು ಸಲ್ಲಿಸಿರಿ” ಎಂದವನು ಬರೆದನು. (1 ಪೇತ್ರ 3:7) ಒಬ್ಬ ವ್ಯಕ್ತಿಗೆ ಮಾನ ಸಲ್ಲಿಸುವುದೆಂದರೆ ಅವನನ್ನು ಯಾ ಅವಳನ್ನು ಅಮೂಲ್ಯವೆಂದೆಣಿಸಿ ತುಂಬ ಗೌರವದಿಂದ ಕಾಣುವುದಾಗಿದೆ. ಆದುದರಿಂದ ಮಾನ ಸಲ್ಲಿಸುವ ಪತಿಯು ತನ್ನ ಪತ್ನಿಯನ್ನು ಅವಮಾನಿಸುವುದಿಲ್ಲ, ಕೀಳಾಗಿ ನೋಡುವುದಿಲ್ಲ ಅಥವಾ ಹಿಂಸಿಸುವುದಿಲ್ಲ. ಬದಲಿಗೆ ಅವನು ಅವಳನ್ನು ಅಮೂಲ್ಯವೆಂದೆಣಿಸಿ ಪ್ರೀತಿಸುತ್ತಾನೆಂಬದನ್ನು ತನ್ನ ನಡೆನುಡಿಯಲ್ಲಿ ಮನೆಯ ಒಳಗೂ ಹೊರಗೂ ತೋರಿಸಿಕೊಡುತ್ತಾನೆ.

ಪತ್ನಿಗೆ ಮಾನ ಸಲ್ಲಿಸುವುದು ದಾಂಪತ್ಯ ಜೀವನದ ಸಂತೋಷಕ್ಕೆ ಮೆರುಗು ನೀಡುತ್ತದೆ. ಕಾರ್ಲೂಷ್‌ ಮತ್ತು ಸಾಸೀಲ್ಯಾ ಎಂಬ ದಂಪತಿಯ ಉದಾಹರಣೆಯನ್ನು ಪರಿಗಣಿಸಿರಿ. ಮದುವೆ​ಯಾದ ಸ್ವಲ್ಪ ಕಾಲದೊಳಗೆ ಅವರಿಬ್ಬರು ಕಚ್ಚಾಡಲು ಪ್ರಾರಂಭಿಸಿದರು. ಯಾವುದೇ ಇತ್ಯರ್ಥಕ್ಕೆ ಬರುತ್ತಿರಲಿಲ್ಲ. ಕೆಲವೊಮ್ಮೆ ಅವರು ಪರಸ್ಪರರೊಂದಿಗೆ ಮಾತಾಡುವುದನ್ನೇ ಬಿಟ್ಟುಬಿಡುತ್ತಿದ್ದರು. ತಮ್ಮ ಸಮಸ್ಯೆಗಳನ್ನು ಹೇಗೆ ಪರಿಹರಿಸುವುದೆಂಬುದೇ ಅವರಿಗೆ ಗೊತ್ತಿರಲಿಲ್ಲ. ಅವನು ಮುಂಗೋಪಿಯಾದರೆ ಅವಳು ತಗಾದೆ ಮಾಡುವವಳೂ ಅಹಂಕಾರಿಯೂ ಆಗಿದ್ದಳು. ಆದರೆ ಬೈಬಲನ್ನು ಅಧ್ಯಯನಮಾಡಲು ಮತ್ತು ಕಲಿತ ವಿಷಯಗಳನ್ನು ಅನ್ವಯಿಸಲು ಆರಂಭಿಸಿದಾಗ ಸನ್ನಿವೇಶವು ಉತ್ತಮವಾಗತೊಡಗಿತು. ಸಾಸೀಲ್ಯಾ ಹೇಳುವುದು: “ಯೇಸುವಿನ ಬೋಧನೆಗಳಿಂದಾಗಿ ಮತ್ತು ಅವನ ಮಾದರಿಯಿಂದಾಗಿ ನನ್ನ ಹಾಗೂ ನನ್ನ ಪತಿಯ ವ್ಯಕ್ತಿತ್ವವು ಬದಲಾಯಿತು. ಯೇಸುವಿನ ಮಾದರಿಯನ್ನು ಅನುಸರಿಸುವುದರಿಂದ ನಾನು ದೀನಳಾಗಿ, ಅರ್ಥಮಾಡಿಕೊಂಡು ಹೋಗುವುದನ್ನು ಕಲಿತುಕೊಂಡೆ. ಯೇಸುವಿನಂತೆ ನಾನು ಸಹಾಯಕ್ಕಾಗಿ ಯೆಹೋವನಿಗೆ ಮೊರೆಯಿಡುವುದನ್ನು ಕಲಿತೆ. ನನ್ನ ಪತಿ ಹೆಚ್ಚು ಸಹಿಷ್ಣುತೆ ಹಾಗೂ ಸ್ವನಿಯಂತ್ರಣವನ್ನು ತೋರಿಸಲು ಕಲಿತುಕೊಂಡರು. ಹೀಗೆ, ಯೆಹೋವನು ಬಯಸುವಂತೆ ಅವರು ನನಗೆ ಮಾನ ಸಲ್ಲಿಸುತ್ತಾರೆ.”

ಅವರ ವಿವಾಹವು ತೊಂದರೆಮುಕ್ತವೇನಲ್ಲ, ಆದರೂ ಅದು ಅನೇಕ ವರ್ಷಗಳಿಂದ ಬಾಳಿದೆ. ಇತ್ತೀಚಿನ ವರ್ಷಗಳಲ್ಲಿ ಅವರು ಗಂಭೀರ ಸಮಸ್ಯೆಗಳನ್ನು ಎದುರಿಸ​ಬೇಕಾಯಿತು. ಕಾರ್ಲೋಸ್‌ ತನ್ನ ಉದ್ಯೋಗವನ್ನು ಕಳಕೊಂಡನು ಮತ್ತು ಕ್ಯಾನ್ಸರ್‌ ರೋಗದಿಂದಾಗಿ ಅವನು ಶಸ್ತ್ರಚಿಕಿತ್ಸೆಗೊಳಗಾಗಬೇಕಾಯಿತು. ಹಾಗಿದ್ದರೂ ಇಂಥ ಎಡರುತೊಡರುಗಳು ಅವರ ವಿವಾಹ ಬಂಧವನ್ನು ಅಲುಗಾಡಿಸುವ ಬದಲಿಗೆ ಇನ್ನಷ್ಟು ಬಲಪಡಿಸಿತು.

ಮಾನವಕುಲವು ಪಾಪಮಾಡಿ ಅಪರಿಪೂರ್ಣವಾದಂದಿನಿಂದ ಅನೇಕ ಸಂಸ್ಕೃತಿಗಳಲ್ಲಿ ಸ್ತ್ರೀಯರನ್ನು ಅಗೌರವದಿಂದ ಉಪಚರಿಸಲಾಗಿದೆ. ಅವರಿಗೆ ದೈಹಿಕ, ಮಾನಸಿಕ ಹಾಗೂ ಲೈಂಗಿಕ ಕಿರುಕುಳ ಕೊಡಲಾಗಿದೆ. ಆದರೆ ಅವರನ್ನು ಹಾಗೆ ಉಪಚರಿಸುವುದು ಯೆಹೋವನ ಉದ್ದೇಶವಾಗಿರಲಿಲ್ಲ. ಸ್ತ್ರೀಯರ ಕುರಿತು ಸಮಾಜದ ಪ್ರಚಲಿತ ನೋಟ ಏನೇ ಆಗಿರಲಿ ಎಲ್ಲ ಸ್ತ್ರೀಯರನ್ನು ಗೌರವ ​ಆದರದಿಂದ ಉಪಚರಿಸಬೇಕೆಂದು ಬೈಬಲ್‌ ದಾಖಲೆಯು ಸ್ಪಷ್ಟವಾಗಿ ತೋರಿಸುತ್ತದೆ. ಅದನ್ನು ಪಡೆದುಕೊಳ್ಳುವ ಹಕ್ಕನ್ನು ದೇವರು ಅವರಿಗೆ ಕೊಟ್ಟಿದ್ದಾನೆ. (g 1/08)

[ಪುಟ 4, 5ರಲ್ಲಿರುವ ಚಿತ್ರ]

ಸಮಾರ್ಯದ ಸ್ತ್ರೀ

[ಪುಟ 4, 5ರಲ್ಲಿರುವ ಚಿತ್ರ]

ರೋಗಗ್ರಸ್ಥ ಮಹಿಳೆ

[ಪುಟ 4, 5ರಲ್ಲಿರುವ ಚಿತ್ರ]

ಮಗ್ದಲದ ಮರಿಯ

[ಪುಟ 6ರಲ್ಲಿರುವ ಚಿತ್ರ]

ಯೆಹೋವನು ಸಾರಳನ್ನು ಎರಡು ಸಲ ಸಂರಕ್ಷಿಸಿದನು

[ಪುಟ 7ರಲ್ಲಿರುವ ಚಿತ್ರ]

ಕಾರ್ಲೂಷ್‌ ಮತ್ತು ಸಾಸೀಲ್ಯಾರ ದಾಂಪತ್ಯದಲ್ಲಿ ಬಿರುಕುಬಂದಾಗ

[ಪುಟ 7ರಲ್ಲಿರುವ ಚಿತ್ರ]

ಇಂದು ಕಾರ್ಲೂಷ್‌ ಮತ್ತು ಸಾಸೀಲ್ಯಾ