ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಪರಾಧಗಳ ಸಮಸ್ಯೆಗೆ ಪರಿಹಾರವಿದೆಯೋ?

ಅಪರಾಧಗಳ ಸಮಸ್ಯೆಗೆ ಪರಿಹಾರವಿದೆಯೋ?

ಅಪರಾಧಗಳ ಸಮಸ್ಯೆಗೆ ಪರಿಹಾರವಿದೆಯೋ?

“ಹಲವಾರು ಅಪರಾಧಗಳನ್ನು ಎಸಗಿರುವವರು ಜೈಲಿಗೆ ಹೋಗಿಬಂದ ನಂತರವೂ ಸಮಾಜದಲ್ಲಿ ಅಪರಾಧಗಳನ್ನು ನಡೆಸುವರು. ಇದಕ್ಕಾಗಿ ಸಮಾಜವು ತೆರಬೇಕಾದ ಬೆಲೆ ಬಹಳಷ್ಟು ದೊಡ್ಡದಾಗಿದ್ದು, ಇದನ್ನು ಕೇವಲ ಹಣದಿಂದ ಅಳೆಯಲಾಗುವುದಿಲ್ಲ.”—⁠ಡಾಕ್ಟರ್‌ ಸ್ಟಾಂಟನ್‌ ಇ. ಸಾಮಿನೊರವರ, ಪಾತಕಿಯ ಮನಸ್ಸಿನೊಳಗೆ ಎಂಬ ಪುಸ್ತಕ.

ನೀವು ಲೋಕದ ಯಾವುದೇ ಭಾಗದಲ್ಲಿ ವಾಸಿಸುತ್ತಿರಲಿ, ಪ್ರತಿ ದಿನವೂ ಹೊಸಹೊಸ ವಿಧದ ಅಪರಾಧಗಳು ಶಿಖರಕ್ಕೇರುತ್ತಿರುವಂತೆ ತೋರುತ್ತದೆ. ಹೀಗಿರುವುದರಿಂದ ಈ ಪ್ರಶ್ನೆಗಳು ಮನಸ್ಸಿಗೆ ಬರುವುದು ತರ್ಕಸಂಗತ: ಸದ್ಯದ ಅಪರಾಧ-ತಡೆಗಳಾದ ಕಠಿನ ದಂಡಗಳು, ಸೆರೆವಾಸಗಳು ಇತ್ಯಾದಿ ನಿಜವಾಗಿ ಏನನ್ನಾದರೂ ಸಾಧಿಸುತ್ತಿವೆಯೋ? ಸೆರೆಮನೆವಾಸದಿಂದಾಗಿ ಪಾತಕಿಗಳು ಸುಧಾರಣೆಹೊಂದುತ್ತಾರೋ? ಇವುಗಳಿಗಿಂತ ಮಹತ್ವದ ಸಂಗತಿಯೇನೆಂದರೆ, ಸಮಾಜವು ಅಪರಾಧದ ಮೂಲ ಕಾರಣವನ್ನು ನಿಭಾಯಿಸುತ್ತಿದೆಯೋ?

ಸದ್ಯದ ಅಪರಾಧ-ತಡೆಗಳ ಕುರಿತಾಗಿ ಡಾಕ್ಟರ್‌ ಸ್ಟಾಂಟನ್‌ ಇ. ಸಾಮಿನೊ ಬರೆಯುವುದು: “ಒಮ್ಮೆ ಜೈಲುವಾಸದ ರುಚಿ ಸಿಕ್ಕಿದ ಬಳಿಕ [ಒಬ್ಬ ಪಾತಕಿಯು] ಹೆಚ್ಚು ಚಾಣಾಕ್ಷನೂ ಹೆಚ್ಚು ಎಚ್ಚರಿಕೆಯುಳ್ಳವನೂ ಆಗುತ್ತಾನಾದರೂ ಅಪರಾಧಗಳನ್ನು ನಡೆಸುತ್ತಾ ಇತರರನ್ನು ದುರುಪಯೋಗಿಸಿಕೊಳ್ಳುವ ತನ್ನ ಜೀವನ ರೀತಿಯನ್ನು ಮುಂದುವರಿಸುತ್ತಾನೆ. ಪುನಃ ಅಪರಾಧ ಮಾಡುವವರ ಕುರಿತ ಅಂಕಿಅಂಶಗಳು, ಆ ವ್ಯಕ್ತಿ ಅಪರಾಧಮಾಡುವಾಗ ಅಜಾಗರೂಕನಾಗಿದ್ದರಿಂದಲೇ [ಪುನಃ] ಸಿಕ್ಕಿಬಿದ್ದನು ಎಂಬುದನ್ನು ಸೂಚಿಸುತ್ತವೆ ಅಷ್ಟೇ.” ಹಾಗಾದರೆ, ಸೆರೆಮನೆಗಳು ಅಪರಾಧಿಗಳಿಗೆ ಕಾರ್ಯತಃ ಒಂದು ಪಾಠಶಾಲೆಯಾಗುತ್ತಾ, ಅವರು ಸಮಾಜಘಾತುಕ ಕೌಶಲಗಳಲ್ಲಿ ಹೆಚ್ಚು ನಿಷ್ಣಾತರಾಗುವಂತೆ ಪರೋಕ್ಷವಾಗಿ ಸಹಾಯಮಾಡುತ್ತಿವೆ.​—⁠ಪುಟ 7 ರಲ್ಲಿ, “ಪಾತಕದ ಪಾಠಶಾಲೆಗಳೋ?” ರೇಖಾಚೌಕ ನೋಡಿ.

ಅಷ್ಟುಮಾತ್ರವಲ್ಲದೆ, ಅನೇಕ ಅಪರಾಧಗಳಿಗೆ ಶಿಕ್ಷೆಯೇ ಸಿಗುವುದಿಲ್ಲ. ಇದು, ಪಾತಕಿಗಳಿಗೆ ತಮ್ಮ ಅಪರಾಧವು ಲಾಭಕರವೆಂದು ನೆನಸುವಂತೆ ಮಾಡಿದೆ. ಅವರ ಈ ಎಣಿಕೆಯೇ ಅವರು ಹೆಚ್ಚೆಚ್ಚು ಭಂಡರಾಗುವಂತೆಯೂ, ಅದೇ ಮಾರ್ಗದಲ್ಲಿ ತಳವೂರುವಂತೆಯೂ ಮಾಡಬಲ್ಲದು. ಬುದ್ಧಿವಂತ ರಾಜನೊಬ್ಬನು ಒಮ್ಮೆ ಬರೆದದ್ದು: “ಅಪರಾಧಕ್ಕೆ ವಿಧಿಸಿದ ದಂಡನೆಯು ಕೂಡಲೆ ನಡೆಯದಿರುವ ಕಾರಣ ಅಪರಾಧಮಾಡಬೇಕೆಂಬ ಯೋಚನೆಯು ನರಜನ್ಮದವರ ಹೃದಯದಲ್ಲಿ ತುಂಬಿ ತುಳುಕುವದು.”​—⁠ಪ್ರಸಂಗಿ 8:⁠11.

ಅಪರಾಧಿಗಳಾಗಲು ಕಾರಣ ಪರಿಸ್ಥಿತಿಗಳೋ ಸ್ವಂತ ಆಯ್ಕೆಯೋ?

ಕೆಲವು ಜನರಿಗೆ ಬದುಕುಳಿಯಲಿಕ್ಕಾಗಿ ಅಪರಾಧವಲ್ಲದೆ ಬೇರಾವ ಮಾರ್ಗವೇ ಇಲ್ಲವೋ? ಸಾಮಿನೊ ಒಪ್ಪಿಕೊಳ್ಳುವುದು: “ಕಿತ್ತುತಿನ್ನುವ ಬಡತನ, ಅಸ್ಥಿರತೆ ಹಾಗೂ ಹತಾಶೆತುಂಬಿದ ಬದುಕಿನಿಂದಾಗಿ ಜನರು ಅಪರಾಧದ ಮಾರ್ಗಕ್ಕಿಳಿಯುವುದು ಬಹುಮಟ್ಟಿಗೆ ಸಹಜ ಹಾಗೂ ಸಮರ್ಥನೀಯವೆಂದು ನಾನೆಣಿಸುತ್ತಿದ್ದೆ.” ಆದರೆ ವಿಸ್ತೃತ ಸಂಶೋಧನೆಯ ಬಳಿಕ ಅವನು ತನ್ನ ಈ ಅಭಿಪ್ರಾಯವನ್ನು ಬದಲಾಯಿಸಿದನು. ಅವನು ಯಾವ ತೀರ್ಮಾನಕ್ಕೆ ಬಂದನು? “ಅಪರಾಧಗಳನ್ನು ನಡೆಸುವುದು ಪಾತಕಿಗಳು ಮಾಡಿರುವ ಆಯ್ಕೆ ಆಗಿದೆ. ಅಪರಾಧಕ್ಕೆ ‘ಕಾರಣ’ . . . ಒಬ್ಬ ವ್ಯಕ್ತಿಯ ಪರಿಸ್ಥಿತಿಗಳಲ್ಲ ಬದಲಾಗಿ ಅವನು ಯೋಚಿಸುವ ರೀತಿಯೇ.” ಸಾಮಿನೊ ಮತ್ತೆ ಕೂಡಿಸಿ ಹೇಳಿದ್ದು: “ಒಬ್ಬ ವ್ಯಕ್ತಿಯ ಯಾವುದೇ ನಡವಳಿಕೆಗೆ ಮುಖ್ಯ ಕಾರಣ ಅವನು ಯೋಚಿಸುವ ರೀತಿಯೇ. ಏಕೆಂದರೆ ಯಾವುದೇ ಕೆಲಸವನ್ನು ಮಾಡುವ ಮುಂಚೆ, ಮಾಡುವಾಗ ಹಾಗೂ ಮಾಡಿದ ನಂತರವೂ ನಾವು ಯೋಚಿಸುತ್ತೇವೆ.” ಆದುದರಿಂದ, ಅಪರಾಧಿಗಳನ್ನು ಪರಿಸ್ಥಿತಿಗಳಿಗೆ ಬಲಿಯಾದವರೆಂದು ಎಣಿಸುವ ಬದಲಿಗೆ, ಅವರು “ತಮ್ಮ ಜೀವನರೀತಿಯನ್ನು ತಾವಾಗಿಯೇ ಆಯ್ಕೆಮಾಡಿದ ಠಕ್ಕರು” ಎಂಬ ತೀರ್ಮಾನಕ್ಕೆ ಅವನು ಬಂದನು. *

ಇಲ್ಲಿ, ‘ಆಯ್ಕೆಮಾಡಿದ’ ಎಂಬ ಪದವು ಮುಖ್ಯವಾಗಿದೆ. ಇತ್ತೀಚೆಗೆ ಬ್ರಿಟಿಷ್‌ ವಾರ್ತಾಪತ್ರಿಕೆಯೊಂದರ ತಲೆಬರಹವು ಹೀಗಂದಿತು: “ಹೆಚ್ಚೆಚ್ಚು ಉತ್ತಮ ವಸ್ತುಗಳಿಗಾಗಿ ಆಸೆಪಡುವಂಥ ನಗರದ ಯುವಕರಿಗೆ ಅಪರಾಧವು ಸ್ವಯಂ-ಆಯ್ಕೆಯ ವೃತ್ತಿಯಾಗಿದೆ.” ಎಲ್ಲರಿಗೆ ಇಚ್ಛಾಸ್ವಾತಂತ್ರ್ಯವಿದೆ ಮತ್ತು ಪರಿಸ್ಥಿತಿ ಎಷ್ಟೇ ಕಷ್ಟಕರವಾಗಿರಲಿ ತಾವು ಯಾವ ಮಾರ್ಗವನ್ನು ಅನುಸರಿಸುವೆವೆಂಬ ಆಯ್ಕೆಯನ್ನು ಎಲ್ಲರೂ ಮಾಡಶಕ್ತರು. ಇಂದು, ಸಾಮಾಜಿಕ ಅನ್ಯಾಯ ಹಾಗೂ ಬಡತನದಿಂದ ಕಷ್ಟಕ್ಕೀಡಾಗುತ್ತಿರುವುದು ಇಲ್ಲವೇ ಅಸಮಾಧಾನಭರಿತ ಕುಟುಂಬಗಳಲ್ಲಿ ಜೀವಿಸುತ್ತಿರುವ ಲಕ್ಷಾಂತರ ಮಂದಿ ಇದ್ದಾರೆಂಬುದು ಅಲ್ಲಗಳೆಯಲಾಗದ ಮಾತು. ಆದರೆ ಇವರೆಲ್ಲರೂ ಪಾತಕಿಗಳಾಗುವುದಿಲ್ಲವಲ್ಲ. ಸಾಮಿನೊ ಹೇಳುವುದು: “ಅಪರಾಧಕ್ಕೆ ಕಾರಣರು ಸ್ವತಃ ಅಪರಾಧಿಗಳೇ ಹೊರತು ಕೆಟ್ಟ ನೆರೆಹೊರೆ, ಅಸಮರ್ಥ ಹೆತ್ತವರು . . . ಇಲ್ಲವೇ ನಿರುದ್ಯೋಗ ಅಲ್ಲ. ಅಪರಾಧವು ಮನುಷ್ಯರ ಮನಸ್ಸಿನೊಳಗೆ ನೆಲೆಸಿದೆ ಹೊರತು ಸಾಮಾಜಿಕ ಪರಿಸ್ಥಿತಿಗಳಿಂದಾಗಿ ಉಂಟಾಗುವುದಿಲ್ಲ.”

ಅಪರಾಧವು ಮನಸ್ಸಿನೊಳಗೆ ಆರಂಭವಾಗುತ್ತದೆ

ಬೈಬಲು, ಒಬ್ಬ ವ್ಯಕ್ತಿಯ ಪರಿಸ್ಥಿತಿಗಳ ಮೇಲಲ್ಲ ಬದಲಾಗಿ ಅವನ ಆಂತರ್ಯದ ಮೇಲೆ ಗಮನ ಕೇಂದ್ರೀಕರಿಸುತ್ತದೆ. ಯಾಕೋಬ 1:​14, 15 ಹೇಳುವುದು: “ಪ್ರತಿಯೊಬ್ಬನೂ ತನ್ನಲ್ಲಿರುವ ಆಶಾ ಪಾಶದಿಂದ ಎಳೆಯಲ್ಪಟ್ಟು ಮರುಳುಗೊಂಡವನಾಗಿ ಪ್ರೇರೇಪಿಸಲ್ಪಡುತ್ತಾನೆ. ಆ ಮೇಲೆ ಆಶೆಯು ಬಸುರಾಗಿ ಪಾಪವನ್ನು ಹೆರುತ್ತದೆ.” ಒಬ್ಬ ವ್ಯಕ್ತಿಯು ಕೆಟ್ಟ ವಿಚಾರಗಳ ಬಗ್ಗೆ ಯೋಚಿಸುತ್ತಾ ಇದ್ದರೆ, ಅವನು ದುರಾಶೆಗಳಿಗೆ ನೀರೆರೆದು ಪೋಷಿಸುತ್ತಿದ್ದಾನೆ. ಈ ಆಶೆಗಳು ಹಾನಿಕರ ಕೃತ್ಯಗಳಿಗೆ ನಡೆಸಬಲ್ಲವು. ಉದಾಹರಣೆಗೆ, ಅಶ್ಲೀಲಚಿತ್ರಗಳನ್ನು ಒಮ್ಮೊಮ್ಮೆ ನೋಡಲು ಒಬ್ಬ ವ್ಯಕ್ತಿಗಿರುವ ಆಸಕ್ತಿಯು ಬೆಳೆದು ಹೆಮ್ಮರವಾಗಿ ಕಾಮದ ಗೀಳಾಗಿಬಿಡಬಹುದು. ಇದು ಅವನ ಮನೋಕಲ್ಪನೆಗಳನ್ನು ಕೃತಿಗಿಳಿಸಿ, ಬಹುಶಃ ದುಷ್ಕರ್ಮವನ್ನೂ ನಡೆಸಲು ಅವನನ್ನು ಪ್ರೇರಿಸೀತು.

ಪರಿಗಣಿಸಬೇಕಾದ ಇನ್ನೊಂದು ಅಂಶವು, ಒಬ್ಬ ವ್ಯಕ್ತಿ ಸ್ವತಃ ತನಗೆ, ಹಣಕ್ಕೆ, ಸುಖಭೋಗಕ್ಕೆ ಹಾಗೂ ತನ್ನ ಆಸೆಗಳನ್ನು ತಕ್ಷಣವೇ ಪೂರೈಸಲು ಲೋಕವು ಕೊಡುವ ಮಹತ್ವವೇ. ನಮ್ಮ ಸಮಯದ ಬಗ್ಗೆ ಬೈಬಲ್‌ ಮುಂತಿಳಿಸುವುದು: ‘ಕಡೇ ದಿವಸಗಳಲ್ಲಿ ಮನುಷ್ಯರು ಸ್ವಾರ್ಥಚಿಂತಕರೂ ಹಣದಾಸೆಯವರೂ ಉಗ್ರತೆಯುಳ್ಳವರೂ ಒಳ್ಳೇದನ್ನು ಪ್ರೀತಿಸದವರೂ ದೇವರನ್ನು ಪ್ರೀತಿಸದೆ ಭೋಗಗಳನ್ನೇ ಪ್ರೀತಿಸುವವರೂ ಆಗಿರುವರು.’ (2 ತಿಮೊಥೆಯ 3:1-5) ದುಃಖದ ಸಂಗತಿಯೇನೆಂದರೆ ಸಿನೆಮಾಗಳು, ವಿಡಿಯೋ ಗೇಮ್ಸ್‌, ಸಾಹಿತ್ಯ ಹಾಗೂ ಆದರ್ಶ ವ್ಯಕ್ತಿಗಳೆಂದು ಎಣಿಸಲಾಗುವವರ ಕೆಟ್ಟ ಮಾದರಿಯ ಮೂಲಕ ಈ ಲೋಕವು ಇಂಥ ಗುಣಗಳನ್ನೇ ಪ್ರವರ್ಧಿಸುತ್ತಿದೆ ಮತ್ತು ಇದು ಅಪರಾಧವನ್ನು ಇನ್ನಷ್ಟು ಹೆಚ್ಚಿಸುತ್ತದೆ. * ಆದರೆ ವೈಯಕ್ತಿಕವಾಗಿ ಎಲ್ಲರೂ ಈ ಪ್ರಭಾವಗಳಿಗೆ ತುತ್ತಾಗಲೇಬೇಕೆಂದಿಲ್ಲ. ವಾಸ್ತವಾಂಶವೇನೆಂದರೆ, ಒಂದುಕಾಲದಲ್ಲಿ ಇಂಥ ಪ್ರಭಾವಕ್ಕೆ ತುತ್ತಾದವರು ಈಗ ತಮ್ಮ ಹೊರನೋಟವನ್ನೂ ಜೀವನಶೈಲಿಯನ್ನೂ ಪೂರ್ಣವಾಗಿ ಬದಲಾಯಿಸಿದ್ದಾರೆ.

ಜನರು ಬದಲಾಗಬಲ್ಲರು!

ಒಮ್ಮೆ ಅಪರಾಧಿ ಆಗಿರುವ ವ್ಯಕ್ತಿ ಯಾವಾಗಲೂ ಅಪರಾಧಿ ಆಗಿರಬೇಕೆಂದಿಲ್ಲ. ಪಾತಕಿಯ ಮನಸ್ಸಿನೊಳಗೆ ಎಂಬ ಪುಸ್ತಕ ತಿಳಿಸುವುದೇನೆಂದರೆ, ಒಬ್ಬ ವ್ಯಕ್ತಿ ಅಪರಾಧಗಳನ್ನು ಮಾಡಲು ಹೇಗೆ ಸ್ವತಃ ಆಯ್ಕೆ ಮಾಡಿದ್ದಿರಬಹುದೊ ಹಾಗೆಯೇ “ಒಂದು ಹೊಸ ದಿಕ್ಕಿನಲ್ಲಿ ಸಾಗುವ ಆಯ್ಕೆಗಳನ್ನು ಮಾಡಿ ಜವಾಬ್ದಾರಿಯುತ ಜೀವನ ನಡೆಸಲು ಕಲಿಯಬಹುದು.”

ಎಲ್ಲ ವಿಧದ ಹಿನ್ನೆಲೆಗಳ ಜನರು ಬದಲಾಗಬಲ್ಲರೆಂದು ಅನುಭವವು ತೋರಿಸಿದೆ. * ಇದನ್ನು ಮಾಡಲು ಒಬ್ಬನು ತನ್ನ ಮನೋಭಾವ, ಪ್ರಚೋದನೆ ಮತ್ತು ಯೋಚನಾಧಾಟಿಯನ್ನು ಬದಲಾಗುತ್ತಿರುವ ಮಾನವ-ಮೌಲ್ಯಗಳಿಗೆ ತಕ್ಕಂತೆ ಅಲ್ಲ ಬದಲಾಗಿ ನಮ್ಮ ಸೃಷ್ಟಿಕರ್ತನ ಸ್ಥಿರ ಮಟ್ಟಗಳಿಗೆ ಸರಿಹೊಂದಿಸುವ ಸಿದ್ಧಮನಸ್ಸುಳ್ಳವನಾಗಿರಬೇಕು. ಸೃಷ್ಟಿಕರ್ತನಲ್ಲದೆ ಬೇರೆ ಯಾರಿಗೆ ನಮ್ಮ ಉತ್ತಮ ಪರಿಚಯ ಇದೆ? ಅಲ್ಲದೆ, ಮಾನವ ಕುಟುಂಬಕ್ಕೆ ಯಾವುದು ಒಳ್ಳೇದು ಯಾವುದು ಕೆಟ್ಟದ್ದೆಂದು ನಿರ್ಧರಿಸುವ ಹಕ್ಕು ದೇವರಿಗಿಲ್ಲವೇ? ಆದ್ದರಿಂದಲೇ ಆತನು ಸುಮಾರು 40 ಮಂದಿ ದೇವಭೀರು ಪುರುಷರನ್ನು ತನ್ನ ಪವಿತ್ರಾತ್ಮದಿಂದ ಪ್ರೇರಿಸಿ, ನಮಗಿಂದು ಪವಿತ್ರ ಬೈಬಲ್‌ ಎಂದು ಪರಿಚಯವಿರುವ ಪುಸ್ತಕವನ್ನು ಬರೆಸಿದನು. ಈ ವಿಸ್ಮಯಕಾರಿ ಪುಸ್ತಕವನ್ನು, ಮಾನವಕುಲದ ಸಂತೋಷ ಹಾಗೂ ಉದ್ದೇಶಭರಿತ ಜೀವನಕ್ಕಾಗಿರುವ ಕೈಪಿಡಿ ಎಂದು ಸೂಕ್ತವಾಗಿ ಕರೆಯಬಹುದು.​—⁠2 ತಿಮೊಥೆಯ 3:​16, 17.

ದೇವರನ್ನು ಮೆಚ್ಚಿಸಲಿಕ್ಕಾಗಿ ಅಗತ್ಯವಿರುವ ಬದಲಾವಣೆಗಳನ್ನು ಮಾಡುವುದು ಸುಲಭ ಆಗಿರಲಿಕ್ಕಿಲ್ಲ ಏಕೆಂದರೆ ನಮ್ಮ ಪಾಪಪೂರ್ಣ ಪ್ರವೃತ್ತಿಗಳ ಪ್ರಭಾವವನ್ನು ನಾವು ಪ್ರತಿರೋಧಿಸಬೇಕು. ಒಬ್ಬ ಬೈಬಲ್‌ ಲೇಖಕನು ತನ್ನ ಈ ಆಂತರಿಕ ಸಂಘರ್ಷವನ್ನು ‘ಕಾದಾಟ’ ಎಂದು ಕರೆದನು. (ರೋಮಾಪುರ 7:​21-25) ಆದರೆ ಅವನು ಈ ಕಾದಾಟವನ್ನು ಗೆದ್ದದ್ದು ತನ್ನ ಸ್ವಂತ ಬಲದಿಂದಲ್ಲ ಬದಲಾಗಿ ದೇವರಲ್ಲಿ ಭರವಸೆಯಿಟ್ಟದ್ದರಿಂದಲೇ. ಯಾಕೆಂದರೆ ದೇವರ ಪ್ರೇರಿತ ವಾಕ್ಯವು “ಸಜೀವವಾದದ್ದು, ಕಾರ್ಯಸಾಧಕವಾದದ್ದು.”​—⁠ಇಬ್ರಿಯ 4:⁠12.

ಒಳ್ಳೇ “ಪಥ್ಯ” ಬೀರುವ ಪ್ರಭಾವ

ದೇಹದ ಆರೋಗ್ಯಕ್ಕಾಗಿ ಪೌಷ್ಟಿಕ ಆಹಾರ ಅಗತ್ಯ. ಅಲ್ಲದೆ, ಆ ಆಹಾರವನ್ನು ಚೆನ್ನಾಗಿ ಅಗಿದು ಸರಿಯಾಗಿ ಜೀರ್ಣಿಸಿಕೊಳ್ಳಬೇಕು. ಇದಕ್ಕಾಗಿ ಸಮಯ ಹಾಗೂ ಪ್ರಯತ್ನ ಅವಶ್ಯ. ಹಾಗೆಯೇ ಆಧ್ಯಾತ್ಮಿಕ ರೀತಿಯಲ್ಲಿ ಸ್ವಸ್ಥರಾಗಿರಬೇಕಾದರೆ, ನಾವು ದೇವರ ಮಾತುಗಳನ್ನು ಮನನಮಾಡಬೇಕು. ಆಗ ನಮ್ಮ ಹೃದಮನಗಳು ಅವುಗಳನ್ನು ಹೀರಿಕೊಳ್ಳುವವು. (ಮತ್ತಾಯ 4:⁠4) ಬೈಬಲ್‌ ಹೀಗನ್ನುತ್ತದೆ: “ಕಡೆಯದಾಗಿ ಸಹೋದರರೇ, ಯಾವುದು ಸತ್ಯವೂ, ಯಾವುದು ಮಾನ್ಯವೂ, ಯಾವುದು ನ್ಯಾಯವೂ, ಯಾವುದು ಶುದ್ಧವೂ, ಯಾವುದು ಪ್ರೀತಿಕರವೂ, ಯಾವುದು ಮನೋಹರವೂ, ಯಾವುದು ಸದ್ಗುಣವೂ, ಯಾವುದು ಸ್ತುತ್ಯವಾದದ್ದೋ ಇವುಗಳನ್ನೇ ಆಲೋಚಿಸಿರಿ. . . . ಆಗ ಸಮಾಧಾನದ ದೇವರು ನಿಮ್ಮೊಂದಿಗಿರುವನು.”​—⁠ಫಿಲಿಪ್ಪಿ 4:8, 9, NIBV.

ಹಳೇ ಸ್ವಭಾವವು ಹೊಸ ಸ್ವಭಾವಕ್ಕೆ ದಾರಿಮಾಡಿ ಕೊಡಬೇಕಾದರೆ ನಾವು ದೇವರ ವಿಚಾರಗಳನ್ನೇ ‘ಆಲೋಚಿಸಬೇಕು’ ಎಂದು ತಿಳಿಸಲಾಗಿರುವುದನ್ನು ಗಮನಿಸಿ. ತಾಳ್ಮೆ ಅಗತ್ಯ ಏಕೆಂದರೆ ಆಧ್ಯಾತ್ಮಿಕ ಬೆಳವಣಿಗೆಯು ದಿನಬೆಳಗಾಗುವುದರೊಳಗೆ ಸಂಭವಿಸುವುದಿಲ್ಲ.​—⁠ಕೊಲೊಸ್ಸೆ 1:​9, 10; 3:​8-10.

ಒಬ್ಬ ಮಹಿಳೆಯ ಉದಾಹರಣೆಯನ್ನು ತೆಗೆದುಕೊಳ್ಳಿ. ಅವಳು ಚಿಕ್ಕವಳಿದ್ದಾಗ ಲೈಂಗಿಕ ದುರುಪಯೋಗಕ್ಕೆ ಒಳಗಾಗಿದ್ದಳು; ದೊಡ್ಡವಳಾಗಿ ಅಮಲೌಷಧ, ಮದ್ಯ, ತಂಬಾಕು ಚಟಕ್ಕೆ ದಾಸಿಯಾದಳು; ಈಗ ಅವಳು ಅನೇಕ ಅಪರಾಧಗಳಿಗಾಗಿ ಜೈಲಿನಲ್ಲಿ ಜೀವಾವಧಿಯ ಶಿಕ್ಷೆ ಅನುಭವಿಸುತ್ತಿದ್ದಾಳೆ. ಜೈಲಿನಲ್ಲಿ ಯೆಹೋವನ ಸಾಕ್ಷಿಗಳು ಅವಳೊಂದಿಗೆ ಬೈಬಲ್‌ ಅಧ್ಯಯನ ಆರಂಭಿಸಿದರು. ಕಲಿತಂಥ ಸತ್ಯಗಳನ್ನು ಅವಳು ಅನ್ವಯಿಸತೊಡಗಿದಳು. ಪರಿಣಾಮ? ನಿಧಾನವಾಗಿ ಅವಳ ಹಳೇ ಸ್ವಭಾವವು ಬದಲಾಯಿತು; ಹೊಸದಾದ ಕ್ರಿಸ್ತನಂಥ ಸ್ವಭಾವವನ್ನು ಬೆಳೆಸಿಕೊಂಡಳು. ಈಗ ಅವಳು ವಿನಾಶಕಾರಿ ಯೋಚನಾಧಾಟಿ ಹಾಗೂ ದುಶ್ಚಟಗಳಿಗೆ ದಾಸಿ ಆಗಿರುವುದಿಲ್ಲ. ಅವಳ ಅಚ್ಚುಮೆಚ್ಚಿನ ಬೈಬಲ್‌ ವಚನಗಳಲ್ಲೊಂದು 2 ಕೊರಿಂಥ 3:17 ಆಗಿದೆ. ಅದು ತಿಳಿಸುವುದು: ‘ಕರ್ತನು [“ಯೆಹೋವನು,” NW] ಆತ್ಮಸ್ವರೂಪಿಯಾಗಿದ್ದಾನೆ, ಆತನ ಆತ್ಮವು ಎಲ್ಲಿರುತ್ತದೋ ಅಲ್ಲಿ ಬಿಡುಗಡೆ ಇರುವುದು’ (NIBV) . ಈಗಲೂ ಅವಳು ಸೆರೆಯಲ್ಲಿದ್ದರೂ, ಹಿಂದೆಂದೂ ಅನುಭವಿಸಿರದಂಥ ಬಿಡುಗಡೆ ಇಲ್ಲವೇ ಸ್ವಾತಂತ್ರ್ಯದಲ್ಲಿ ಆನಂದಿಸುತ್ತಿದ್ದಾಳೆ.

ದೇವರು ಕರುಣಾಮಯಿ

ಯೆಹೋವ ದೇವರ ದೃಷ್ಟಿಯಲ್ಲಿ ಯಾರೂ ಸರಿಪಡಿಸಿಕೊಳ್ಳಲಾಗದವರು ಆಗಿರುವುದಿಲ್ಲ. * ದೇವರ ಮಗನಾದ ಯೇಸು ಕ್ರಿಸ್ತನು ಹೇಳಿದ್ದು: “ನೀತಿವಂತರನ್ನು ಕರೆಯುವದಕ್ಕೆ ನಾನು ಬಂದವನಲ್ಲ, ಪಾಪಿಗಳನ್ನು ಕರೆಯುವದಕ್ಕೆ ಬಂದವನು.” (ಲೂಕ 5:32) ಬೈಬಲ್‌ ಮಟ್ಟಗಳಿಗನುಸಾರ ಜೀವಿಸಲು ಹೊಂದಾಣಿಕೆಗಳನ್ನು ಮಾಡುವುದು ಕಷ್ಟಕರವಾಗಿರಬಲ್ಲದು ನಿಜ. ಆದರೆ ತಾಳ್ಮೆಯಿಂದಿದ್ದು, ದೇವರು ಕೊಡುವ ಸಹಾಯ ಹಾಗೂ ಆಧ್ಯಾತ್ಮಿಕ-ಮನಸ್ಸಿನ ಕ್ರೈಸ್ತರ ಪ್ರೀತಿಪರ ಬೆಂಬಲವನ್ನು ಸ್ವೀಕರಿಸುವವರಿಗೆ ಯಶಸ್ಸು ಖಂಡಿತ. (ಲೂಕ 11:​9-13; ಗಲಾತ್ಯ 5:​22, 23) ಇದಕ್ಕಾಗಿಯೇ, ಯೆಹೋವನ ಸಾಕ್ಷಿಗಳು ಲೋಕವ್ಯಾಪಕವಾಗಿ ಸೆರೆಮನೆಗಳಿಗೆ ಭೇಟಿನೀಡಿ, ಎಲ್ಲ ತರದ ಅಪರಾಧಗಳನ್ನು ನಡೆಸಿರುವ ಪ್ರಾಮಾಣಿಕ ಮನಸ್ಸಿನ ಸ್ತ್ರೀಪುರುಷರೊಂದಿಗೆ ಉಚಿತ ಬೈಬಲ್‌ ಅಧ್ಯಯನಗಳನ್ನು ನಡೆಸುತ್ತಾರೆ. * ಹಲವಾರು ಸೆರೆಮನೆಗಳಲ್ಲಿ ಸಾಕ್ಷಿಗಳು ಸಾಪ್ತಾಹಿಕ ಕ್ರೈಸ್ತ ಕೂಟಗಳನ್ನೂ ನಡೆಸುತ್ತಾರೆ.​—⁠ಇಬ್ರಿಯ 10:​24, 25.

ಹಿಂದೆ ಪಾತಕಿಗಳಾಗಿದ್ದವರು ತಮ್ಮ ದುರ್ಮಾರ್ಗಗಳನ್ನು ಬಿಟ್ಟು ಸತ್ಯ ಕ್ರೈಸ್ತರಾಗಿದ್ದರೂ, ‘ಅಧರ್ಮವು ಹೆಚ್ಚಾಗುವುದರ’ ಬಗ್ಗೆ ಬೈಬಲ್‌ ನೇರವಾಗಿ ತಿಳಿಸುತ್ತದೆ. (ಮತ್ತಾಯ 24:12) ಈ ಕಾಲಜ್ಞಾನವು ತುಂಬ ಒಳ್ಳೇ ಸಂದೇಶವುಳ್ಳ ಒಂದು ದೊಡ್ಡ ಪ್ರವಾದನೆಯ ಭಾಗವಾಗಿದೆ. ಇದನ್ನೇ ನಾವು ಮುಂದಿನ ಲೇಖನದಲ್ಲಿ ನೋಡಲಿದ್ದೇವೆ. (g 2/08)

[ಪಾದಟಿಪ್ಪಣಿಗಳು]

^ ಕೆಲವೊಂದು ಅಪರಾಧಗಳಿಗೆ ಮಾನಸಿಕ ಕಾಯಿಲೆಯೂ ಕಾರಣವಾಗಿರಬಹುದು. ಇದು ವಿಶೇಷವಾಗಿ, ಭಾವನಾತ್ಮಕವಾಗಿ ಅಸ್ವಸ್ಥರಾಗಿರುವ ಜನರನ್ನು ಬೀದಿಗಳಲ್ಲಿ ಅಡ್ಡಾಡಲು ಮತ್ತು ಶಸ್ತ್ರಗಳನ್ನು ಇಟ್ಟುಕೊಳ್ಳಲು ಬಿಡಲಾಗುವಂಥ ದೇಶಗಳಲ್ಲಿ ನಡೆಯುತ್ತದೆ. ಆದರೆ ಈ ಲೇಖನವು ಈ ಸಂಕೀರ್ಣ ವಿಷಯದ ಮೇಲೆ ಗಮನ ಕೇಂದ್ರೀಕರಿಸುವುದಿಲ್ಲ.

^ ಪಾತಕ ಎಂಬ ವಿಷಯದ ಮೇಲೆ ಹೆಚ್ಚಿನ ಮಾಹಿತಿಗಾಗಿ ಫೆಬ್ರವರಿ 22, 1998 ರ ಎಚ್ಚರ! (ಇಂಗ್ಲಿಷ್‌) ಪತ್ರಿಕೆಯ 3-9 ನೇ ಪುಟಗಳು “ಪಾತಕವಿಲ್ಲದ ಜಗತ್ತು​—⁠ಯಾವಾಗ?” ಮತ್ತು “ನಮ್ಮ ಬೀದಿಗಳು ಎಂದಾದರೂ ಪಾತಕ-ಮುಕ್ತವಾಗುವವೊ?” ಎಂಬ ಶೀರ್ಷಿಕೆಯ ಕೆಳಗೆ ಆಗಸ್ಟ್‌ 8, 1985 ರ ಎಚ್ಚರ! (ಇಂಗ್ಲಿಷ್‌) ಪತ್ರಿಕೆಯನ್ನು ನೋಡಿ.

^ ಈ ಪತ್ರಿಕೆ ಮತ್ತು ಇದರ ಜೊತೆ ಪತ್ರಿಕೆಯಾದ ಕಾವಲಿನಬುರುಜು, ಪಾತಕ ಜೀವನವನ್ನು ತೊರೆಯುವಂತೆ ಬೈಬಲ್‌ ಸತ್ಯದಿಂದ ಪ್ರಚೋದಿತರಾದ ವ್ಯಕ್ತಿಗಳ ಬಗ್ಗೆ ಅನೇಕವೇಳೆ ವರದಿಸಿವೆ. ಎಚ್ಚರ! (ಇಂಗ್ಲಿಷ್‌) ಪತ್ರಿಕೆಯ ಜುಲೈ 2006, ಪುಟ 11-13; ಅಕ್ಟೋಬರ್‌ 8, 2005 ಪುಟ 20-1 ನೋಡಿ; ಕಾವಲಿನಬುರುಜು ಜನವರಿ 1, 2000, ಪುಟ 4-5; ಅಕ್ಟೋಬರ್‌ 15, 1998, ಪುಟ 27-9 ಮತ್ತು ಫೆಬ್ರವರಿ 15, 1997 ಪುಟ 21-4.

^ ಪುಟ 29 ರಲ್ಲಿ, “ಬೈಬಲಿನ ದೃಷ್ಟಿಕೋನ: ದೇವರು ಗಂಭೀರ ಪಾಪಗಳನ್ನು ಕ್ಷಮಿಸುತ್ತಾನೊ?” ಎಂಬ ಲೇಖನವನ್ನು ನೋಡಿ.

^ ಪುಟ 9 ರಲ್ಲಿ, “ಸೆರೆವಾಸಿಗಳಿಗೆ ಆಧ್ಯಾತ್ಮಿಕ ನೆರವು” ಎಂಬ ರೇಖಾಚೌಕ ನೋಡಿ.

[ಪುಟ 5ರಲ್ಲಿರುವ ಸಂಕ್ಷಿಪ್ತ ವಿವರಣೆ]

ಬಡತನದಲ್ಲಿರುವ ಲಕ್ಷಾಂತರ ಜನರು ಅಪರಾಧಗಳ ಮೊರೆಹೋಗುವುದಿಲ್ಲ

[ಪುಟ 6, 7ರಲ್ಲಿರುವ ಚೌಕ/ಚಿತ್ರ]

“ಎರಡು ವರ್ಷಗಳೊಳಗೆ ಮರಳಿ ಜೈಲಿಗೆ”

ಈ ತಲೆಬರಹದೊಂದಿಗೆ ಲಂಡನ್‌ನ ವಾರ್ತಾಪತ್ರಿಕೆ ದ ಟೈಮ್ಸ್‌ ವರದಿಸಿದ್ದೇನೆಂದರೆ, ಬ್ರಿಟನಿನಲ್ಲಿ ಕನ್ನಗಳ್ಳತನ ಹಾಗೂ ಇತರ ಕಳ್ಳತನಗಳಿಗಾಗಿ ಶಿಕ್ಷೆ ಅನುಭವಿಸಿರುವವರಲ್ಲಿ 70 ಪ್ರತಿಶತಕ್ಕಿಂತ ಹೆಚ್ಚು ಮಂದಿ ಎರಡೇ ವರ್ಷಗಳಲ್ಲಿ ಪುನಃ ಶಿಕ್ಷೆಗೆ ಗುರಿಯಾಗುತ್ತಾರೆ. ಹೆಚ್ಚಿನ ಅಪರಾಧಗಳನ್ನು ಅಮಲೌಷಧ ವ್ಯಸನಿಗಳು ನಡೆಸುತ್ತಾರೆ. ಅವರಿಗೆ ಹೇಗಾದರೂ ಮಾಡಿ, ತಮ್ಮ ದುಬಾರಿಯಾದ, ಸ್ವ-ಘಾತಕ ಚಟಕ್ಕಾಗಿ ಹಣ ಬೇಕಾಗಿರುತ್ತದೆ.

[ಪುಟ 7ರಲ್ಲಿರುವ ಚೌಕ]

‘ಪಾತಕದ ಪಾಠಶಾಲೆಗಳೋ?’

“ಸೆರೆಮನೆಗಳು ಪಾತಕದ ಪಾಠಶಾಲೆಗಳು” ಎಂದು ಯುಸಿಎಲ್‌ಎ ಲಾ ರಿವ್ಯೂ ದಲ್ಲಿ ಪ್ರೊಫೆಸರ್‌ ಜಾನ್‌ ಬ್ರೇತ್‌ವೇಟ್‌ ಬರೆದರು. ಪಾತಕಿಯ ಮನಸ್ಸಿನೊಳಗೆ ಎಂಬ ತನ್ನ ಪುಸ್ತಕದಲ್ಲಿ ಡಾಕ್ಟರ್‌ ಸ್ಟಾಂಟನ್‌ ಇ. ಸಾಮಿನೊ ಹೇಳುವುದೇನೆಂದರೆ “ಹೆಚ್ಚಿನ ಅಪರಾಧಿಗಳು ಅನುಭವದಿಂದ ಕಲಿಯುತ್ತಾರೆ” ನಿಜ, ಆದರೆ ಅವರೇನು ಕಲಿಯಬೇಕೆಂದು ಸಮಾಜವು ಬಯಸುತ್ತದೊ ಅದನ್ನಲ್ಲ. ಅವನು ಬರೆದದ್ದು: “ಜೈಲಿನಲ್ಲಿರುವಾಗ ಒಬ್ಬ ವ್ಯಕ್ತಿಗೆ, ಹೆಚ್ಚು ಕುಶಲ ಪಾತಕಿಯಾಗುವುದು ಹೇಗೆಂದು ಕಲಿಯಲು ಸಾಕಷ್ಟು ಸಮಯವೂ ಅವಕಾಶವೂ ಸಿಗುತ್ತದೆ. . . . ವಾಸ್ತವದಲ್ಲಿ ಕೆಲವರು ಹೆಚ್ಚು ಸಫಲ ಪಾತಕಿಗಳಾಗುತ್ತಾರೆ, ಅಂದರೆ ಪೂರ್ಣವಾಗಿ ಅಪರಾಧ ಕೃತ್ಯಗಳಲ್ಲೇ ಮುಳುಗಿದ್ದು, ಸಿಕ್ಕಿಬೀಳದಷ್ಟು ಚತುರರಾಗಿ​ಬಿಡುತ್ತಾರೆ.”

ಇನ್ನೊಂದು ಅಧ್ಯಾಯದಲ್ಲಿ ಸಾಮಿನೊ ಹೇಳುವುದು: “ಸೆರೆಮನೆವಾಸವು ಒಬ್ಬ ಅಪರಾಧಿಯ ಮೂಲ ವ್ಯಕ್ತಿತ್ವವನ್ನು ಬದಲಾಯಿಸುವುದಿಲ್ಲ. ಅವನು ಹೊರಗೆ ಬೀದಿಯಲ್ಲಿರಲಿ ಇಲ್ಲವೇ ಸೆರೆಮನೆಯೊಳಗಿರಲಿ, ಅವನು ಹೊಸಹೊಸ ನಂಟುಗಳನ್ನು ಬೆಳೆಸುತ್ತಾನೆ, ಅಪರಾಧ ಕೃತ್ಯಗಳ ನವನವೀನ ಉಪಾಯಗಳನ್ನು ಕಲಿಯುತ್ತಾನೆ, ಮತ್ತು ತನ್ನ ಸಲಹೆಗಳನ್ನು ಇತರ ಅಪರಾಧಿಗಳಿಗೆ ಕೊಡುತ್ತಾನೆ.” ಒಬ್ಬ ಯುವ ಅಪರಾಧಿ ಹೇಳಿದ್ದು: “ಸೆರೆಮನೆವಾಸವು, ನಾನೊಬ್ಬ ಪಾತಕ-ಶಿಕ್ಷಕನಾಗಲಿಕ್ಕಾಗಿ ಬೇಕಾದ ಅರ್ಹತೆಗಳನ್ನು ಕೊಟ್ಟಿದೆ.”