ಗಂಭೀರ ಪಾಪಗಳನ್ನು ದೇವರು ಕ್ಷಮಿಸುತ್ತಾನೋ?
ಬೈಬಲಿನ ದೃಷ್ಟಿಕೋನ
ಗಂಭೀರ ಪಾಪಗಳನ್ನು ದೇವರು ಕ್ಷಮಿಸುತ್ತಾನೋ?
ದೇವರ ಪ್ರಧಾನ ಗುಣಗಳಲ್ಲಿ ಒಂದು ಕರುಣೆಯಾಗಿದೆ. (ಕೀರ್ತನೆ 86:15) ಆತನ ಕರುಣೆ ಎಷ್ಟು ವ್ಯಾಪಕವಾಗಿದೆ? ಕೀರ್ತನೆಗಾರನೊಬ್ಬನು ಬರೆದುದು: “ಕರ್ತನೇ, ಯಾಹುವೇ, ನೀನು ಪಾಪಗಳನ್ನು ಎಣಿಸುವದಾದರೆ ನಿನ್ನ ಮುಂದೆ ಯಾರು ನಿಂತಾರು? ನೀನು ಪಾಪವನ್ನು ಕ್ಷಮಿಸುವವನಾದ್ದರಿಂದ ಮನುಷ್ಯರ ಭಯಭಕ್ತಿಗೆ ನೀನೇ ಪಾತ್ರನು.” (ಕೀರ್ತನೆ 130:3, 4) ಇನ್ನೊಂದು ಕಡೆ ನಾವು ಓದುವುದು: “ಪೂರ್ವಕ್ಕೂ ಪಶ್ಚಿಮಕ್ಕೂ ಎಷ್ಟು ದೂರವೋ ನಮ್ಮ ದ್ರೋಹಗಳನ್ನು ನಮ್ಮಿಂದ ತೆಗೆದು ಅಷ್ಟು ದೂರ ಮಾಡಿದ್ದಾನೆ. ತಂದೆಯು ಮಕ್ಕಳನ್ನು ಕನಿಕರಿಸುವಂತೆ ಯೆಹೋವನು ತನ್ನಲ್ಲಿ ಭಯಭಕ್ತಿಯುಳ್ಳವರನ್ನು ಕನಿಕರಿಸುತ್ತಾನೆ. ಆತನು ನಮ್ಮ ಪ್ರಕೃತಿಯನ್ನು ಬಲ್ಲನು; ನಾವು ಧೂಳಿಯಾಗಿದ್ದೇವೆಂಬದನ್ನು ನೆನಪುಮಾಡಿಕೊಳ್ಳುತ್ತಾನೆ.”—ಕೀರ್ತನೆ 103:12-14.
ಯೆಹೋವನ ಕರುಣೆ ಸಂಪೂರ್ಣವೂ ಉದಾರ ಹೃದಯದ್ದೂ ಆಗಿದೆ. ಮತ್ತು ನಮ್ಮ ಇತಿಮಿತಿಗಳನ್ನೂ ಅಪರಿಪೂರ್ಣತೆಗಳನ್ನೂ ಅಂದರೆ ನಾವು ಧೂಳಿಯಾಗಿದ್ದೇವೆಂಬುದನ್ನು ಗಣನೆಗೆ ತೆಗೆದುಕೊಳ್ಳುತ್ತದೆ. ದೇವರ ಕರುಣೆ ಎಷ್ಟು ವ್ಯಾಪಕವೆಂಬುದನ್ನು ತೋರಿಸುವಂಥ ಕೆಲವು ಬೈಬಲ್ ದೃಷ್ಟಾಂತಗಳನ್ನು ಪರಿಗಣಿಸಿರಿ.
ಅಪೊಸ್ತಲ ಪೇತ್ರನು ಯೇಸುವನ್ನು ಮೂರು ಬಾರಿ ಅಲ್ಲಗಳೆದನು. (ಮಾರ್ಕ 14:66-72) ಅಪೊಸ್ತಲ ಪೌಲನು ಅವಿಶ್ವಾಸಿಯಾಗಿದ್ದಾಗ ಕ್ರಿಸ್ತನ ಅನುಯಾಯಿಗಳನ್ನು ಹಿಂಸಿಸಿದನು. ಅವರಲ್ಲಿ ಅನೇಕರಿಗೆ ಮರಣದ ತೀರ್ಪಾದಾಗ ಅದಕ್ಕೆ ಸಮ್ಮತಿಸಿದನು. ಅಷ್ಟೇಕೆ, ಅವರಲ್ಲಿ ಒಬ್ಬನ ಕೊಲೆಗೂ ಒಪ್ಪಿಗೆ ಕೊಟ್ಟನು. (ಅ. ಕೃತ್ಯಗಳು 8:1, 3; 9:1, 2, 11; 26:10, 11; ಗಲಾತ್ಯ 1:13) ಕೊರಿಂಥ ಸಭೆಯ ಕೆಲವು ಸದಸ್ಯರು ಕ್ರೈಸ್ತರಾಗುವುದಕ್ಕೆ ಮೊದಲು ಕುಡುಕರೂ ಸುಲಿಗೆ ಮಾಡುವವರೂ ಕಳ್ಳರೂ ಆಗಿದ್ದರು. (1 ಕೊರಿಂಥ 6:9-11) ಆದರೂ ಕೂಡ ಅವರೆಲ್ಲರು ದೇವರ ಅನುಗ್ರಹಕ್ಕೆ ಪಾತ್ರರಾದರು. ದೇವರು ಅವರನ್ನು ಕ್ಷಮಿಸಿದ್ದೇಕೆ?
ದೇವರ ಕರುಣೆಯನ್ನು ಪಡೆಯಲು ಮೂರು ಹೆಜ್ಜೆಗಳು
“ನಾನು ಅವಿಶ್ವಾಸಿಯಾಗಿ ತಿಳಿಯದೆ ಹಾಗೆ ಮಾಡಿದ್ದರಿಂದ ನನ್ನ ಮೇಲೆ ಕರುಣೆ ಉಂಟಾಯಿತು” ಎಂದು ಪೌಲನು ಬರೆದನು. (1 ತಿಮೊಥೆಯ 1:13) ಅವನ ಈ ಯಥಾರ್ಥ ಮಾತುಗಳು ದೇವರ ಕ್ಷಮಾಪಣೆ ಪಡೆಯಲು ಅಗತ್ಯವಿರುವ ಪ್ರಥಮ ಹೆಜ್ಜೆಯನ್ನು ನಮಗೆ ತೋರಿಸುತ್ತದೆ. ಅದಾವುದೆಂದರೆ, ಯೆಹೋವನ ಮತ್ತು ಬೈಬಲಿನಲ್ಲಿರುವ ಆತನ ಮಟ್ಟಗಳ ನಿಷ್ಕೃಷ್ಟ ಜ್ಞಾನವನ್ನು ತಿಳಿದುಕೊಳ್ಳುವುದಾಗಿದೆ. (2 ತಿಮೊಥೆಯ 3:16, 17) ನಮ್ಮ ಸೃಷ್ಟಿಕರ್ತನನ್ನು ನಾವು ಚೆನ್ನಾಗಿ ತಿಳಿಯದಿರುವಲ್ಲಿ ಆತನನ್ನು ಮೆಚ್ಚಿಸುವುದು ಅಸಾಧ್ಯವೆಂಬುದು ನಿಶ್ಚಯ. ಯೇಸು ತನ್ನ ತಂದೆಗೆ ಪ್ರಾರ್ಥಿಸುವಾಗ ಹೇಳಿದ್ದು: “ಒಬ್ಬನೇ ಸತ್ಯದೇವರಾಗಿರುವ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವದೇ ನಿತ್ಯಜೀವವು.”—ಯೋಹಾನ 17:3.
ಪ್ರಾಮಾಣಿಕ ಹೃದಯದವರು ಆ ಜ್ಞಾನವನ್ನು ಪಡೆಯುವಾಗ ಅವರು ತಮ್ಮ ಗತ ಪಾಪಗಳಿಗಾಗಿ ತೀರ ವಿಷಾದಪಟ್ಟು, ಹೃತ್ಪೂರ್ವಕವಾದ ಪಶ್ಚಾತ್ತಾಪವನ್ನು ತೋರಿಸುವಂತೆ ಪ್ರೇರಿಸಲ್ಪಡುತ್ತಾರೆ. ಇದು, ದೇವರ ಕ್ಷಮಾಪಣೆ ಪಡೆಯುವ ದ್ವಿತೀಯ ಹೆಜ್ಜೆ ಆಗಿದೆ. ಅ. ಕೃತ್ಯಗಳು 3:19 ಹೇಳುವುದು: “ದೇವರು ನಿಮ್ಮ ಪಾಪಗಳನ್ನು ಅಳಿಸಿಬಿಡುವ ಹಾಗೆ ನೀವು ಪಶ್ಚಾತ್ತಾಪಪಟ್ಟು ಆತನ ಕಡೆಗೆ ತಿರುಗಿಕೊಳ್ಳಿರಿ.”
ಆ ವಚನವು ಮೂರನೆಯ ಹೆಜ್ಜೆಯ ಬಗ್ಗೆಯೂ ತಿಳಿಸುತ್ತದೆ. ಅದು, ದೇವರ ಕಡೆಗೆ ತಿರುಗಿಕೊಳ್ಳುವುದಾಗಿದೆ. ಅಂದರೆ ಹಳೇ ಸ್ವಭಾವ ಮತ್ತು ಮನೋಭಾವಗಳನ್ನು ತ್ಯಜಿಸಿ, ದೇವರ ಮಟ್ಟಗಳನ್ನೂ ವೀಕ್ಷಣಗಳನ್ನೂ ಅಂಗೀಕರಿಸುವುದೆಂದು ಅರ್ಥ. (ಅ. ಕೃತ್ಯಗಳು 26:20) ಸರಳವಾಗಿ ಹೇಳುವುದಾದರೆ ಒಬ್ಬನು ದೇವರಿಗೆ, “ನನ್ನನ್ನು ಕ್ಷಮಿಸು” ಎಂದು ಬೇಡಿದ್ದನ್ನು ತನ್ನ ನೂತನ ಜೀವನಶೈಲಿಯ ಮೂಲಕ ತೋರಿಸಿಕೊಡುತ್ತಾನೆ.
ದೇವರ ಕ್ಷಮಾಪಣೆಗೆ ಮಿತಿಯಿದೆ
ದೇವರು ಕೆಲವರ ಪಾಪಗಳನ್ನು ಕ್ಷಮಿಸುವುದಿಲ್ಲ. ಪೌಲನು ಬರೆದುದು: ‘ಸತ್ಯದ ಪರಿಜ್ಞಾನವನ್ನು ನಾವು ಹೊಂದಿದ ಮೇಲೆ ಬೇಕೆಂದು ಪಾಪಮಾಡಿದರೆ ಪಾಪಪರಿಹಾರಕ್ಕಾಗಿ ಇನ್ನಾವ ಯಜ್ಞವೂ ಇರುವದಿಲ್ಲ; ಅತ್ಯಂತ ಭಯದಿಂದ ಎದುರುನೋಡತಕ್ಕ ನ್ಯಾಯತೀರ್ಪು ನಮ್ಮ ಮುಂದೆ ಇರುವದು.’ (ಇಬ್ರಿಯ 10:26, 27) “ಬೇಕೆಂದು ಪಾಪಮಾಡಿದರೆ,” ಎಂಬುದು ಆಳವಾಗಿ ಬೇರುಬಿಟ್ಟಿರುವ ಕೆಟ್ಟತನವನ್ನು, ನಿಜವಾಗಿಯೂ ಕೆಟ್ಟದ್ದಾಗಿರುವ ಹೃದಯವನ್ನು ಸೂಚಿಸುತ್ತದೆ.
ಇಸ್ಕರಿಯೋತ ಯೂದನು ಅಂಥ ಹೃದಯವನ್ನು ಬೆಳೆಸಿಕೊಂಡನು. “ಆ ಮನುಷ್ಯನು ಹುಟ್ಟದಿದ್ದರೆ ಅವನಿಗೆ ಒಳ್ಳೇದಾಗಿತ್ತು” ಎಂದನು ಯೇಸು. (ಮತ್ತಾಯ 26:24, 25) ತನ್ನ ದಿನಗಳ ಕೆಲವು ಧಾರ್ಮಿಕ ಮುಖಂಡರ ವಿಷಯದಲ್ಲಿ ಯೇಸು ಹೇಳಿದ್ದು: “ಸೈತಾನನು ನಿಮ್ಮ ತಂದೆ; . . . ಅವನು ಸುಳ್ಳಾಡುವಾಗ ಸ್ವಭಾವಾನುಸಾರವಾಗಿ ಆಡುತ್ತಾನೆ; ಅವನು ಸುಳ್ಳುಗಾರನೂ ಸುಳ್ಳಿಗೆ ಮೂಲಪುರುಷನೂ ಆಗಿದ್ದಾನೆ.” (ಯೋಹಾನ 8:44) ಸೈತಾನನಂತೆ ಆ ಜನರ ಅಂತರಂಗವೂ ತೀರ ಕೆಟ್ಟದ್ದಾಗಿತ್ತು. ತಮ್ಮ ಪಾಪಗಳಿಗೆ ಅವರು ವಿಷಾದಪಡದೆ, ಇನ್ನಷ್ಟೂ ದುಷ್ಟ ಕಾರ್ಯಗಳನ್ನು ನಡೆಸಿದರು. * ಅಪರಿಪೂರ್ಣತೆ ಮತ್ತು ಬಲಹೀನತೆಗಳ ಕಾರಣ ಯಥಾರ್ಥ ಕ್ರೈಸ್ತರು ಸಹ ಪಾಪಮಾಡುತ್ತಾರೆ, ಕೆಲವೊಮ್ಮೆ ಗಂಭೀರ ಪಾಪಗಳನ್ನೂ ಮಾಡುತ್ತಾರೆಂಬುದು ನಿಜ. ಆದರೆ ಅವರ ಬಲಹೀನತೆಗಳು ಬೇರೂರಿರುವ ದುಷ್ಪ್ರವೃತ್ತಿಯನ್ನು ತೋರಿಸುವುದಿಲ್ಲ.—ಗಲಾತ್ಯ 6:1.
ಕೊನೆವರೆಗೂ ಕರುಣೆತೋರಿಸಿದನು
ಯೆಹೋವನು ಪಾಪವನ್ನು ಮಾತ್ರವಲ್ಲ, ಪಾಪಿಯ ಮನೋಭಾವವನ್ನೂ ಗಮನಿಸುತ್ತಾನೆ. (ಯೆಶಾಯ 1:16-19) ಯೇಸುವಿನ ಪಕ್ಕಗಳಲ್ಲಿ ಶೂಲಕ್ಕೇರಿಸಲ್ಪಟ್ಟಿದ್ದ ದುಷ್ಕರ್ಮಿಗಳ ಕುರಿತು ಒಂದು ಕ್ಷಣ ಆಲೋಚಿಸಿರಿ. ಅವರಿಬ್ಬರೂ ಗಂಭೀರ ಪಾಪಗಳನ್ನು ಮಾಡಿದ್ದರೆಂಬುದು ವ್ಯಕ್ತ. ಏಕೆಂದರೆ, ಅವರಲ್ಲಿ ಒಬ್ಬನು ಹೇಳಿದ್ದು: “ನಾವು ಮಾಡಿದ್ದಕ್ಕೆ ತಕ್ಕ ಪ್ರತಿಫಲವನ್ನು ಹೊಂದುತ್ತಾ ಇದ್ದೇವೆ; ಈತನಾದರೋ [ಯೇಸು] ಅಲ್ಲದ್ದೇನೂ ಮಾಡಲಿಲ್ಲ.” ಆ ದುಷ್ಕರ್ಮಿಯ ಮಾತುಗಳು ಅವನಿಗೆ ಯೇಸುವಿನ ಬಗ್ಗೆ ಸ್ಪಲ್ಪ ತಿಳಿದಿತ್ತು ಎಂದು ಸೂಚಿಸುತ್ತವೆ. ಆ ಜ್ಞಾನವು ಅವನ ಮನೋಭಾವದಲ್ಲಿ ಬದಲಾವಣೆಯನ್ನು ತಂದದ್ದು ಸಂಭಾವ್ಯ. ಅವನು ಆ ಬಳಿಕ ಯೇಸುವನ್ನು ಹೀಗೆ ಬೇಡಿಕೊಂಡದ್ದರಿಂದಲೂ ಇದು ತಿಳಿದುಬರುತ್ತದೆ: “ನೀನು ನಿನ್ನ ರಾಜ್ಯವನ್ನು ಪಡೆದವನಾಗಿ ಬರುವಾಗ ನನ್ನನ್ನು ನೆನಸಿಕೋ.” ಆ ಹಾರ್ದಿಕ ಬೇಡಿಕೆಗೆ ಯೇಸುವಿನ ಪ್ರತಿಕ್ರಿಯೆ ಏನಾಗಿತ್ತು? ಅವನು ತಿಳಿಸಿದ್ದು: “[ನೀನು] ನನ್ನ ಸಂಗಡ ಪರದೈಸಿನಲ್ಲಿರುವಿ ಎಂದು ನಿನಗೆ ಸತ್ಯವಾಗಿ ಹೇಳುತ್ತೇನೆ.”—ಲೂಕ 23:41-43.
ಅದರ ಕುರಿತು ಯೋಚಿಸಿ: ಮರಣದಂಡನೆಗೆ ಯೋಗ್ಯನೆಂದು ಒಪ್ಪಿಕೊಂಡ ಒಬ್ಬ ಮನುಷ್ಯನಿಗೆ ಯೇಸು ಮಾನವನಾಗಿದ್ದಾಗ ಹೇಳಿದ ಕೊನೆಯ ಮಾತುಗಳಲ್ಲಿ ಕರುಣೆಯ ಅಭಿವ್ಯಕ್ತಿ ಒಳಗೂಡಿತ್ತು. ಇದು ಎಷ್ಟು ಪ್ರೋತ್ಸಾಹನೀಯ! ಹೀಗೆ, ನಿಜ ಪಶ್ಚಾತ್ತಾಪವನ್ನು ತೋರಿಸುವ ಎಲ್ಲರಿಗೆ, ಅವರ ಗತಕೃತ್ಯಗಳು ಏನೇ ಆಗಿದ್ದಿರಲಿ, ಯೇಸು ಕ್ರಿಸ್ತನೂ ಯೆಹೋವ ದೇವರೂ ಅನುತಾಪವನ್ನು ತೋರಿಸುವರೆಂಬ ಖಾತರಿ ನಮಗಿರಬಲ್ಲದು.—ರೋಮಾಪುರ 4:7. (g 2/08)
ಇದರ ಬಗ್ಗೆ ನೀವು ಯೋಚಿಸಿದ್ದುಂಟೋ?
◼ ದೇವರ ಕರುಣೆಯನ್ನು ನೀವು ಹೇಗೆ ವಿವರಿಸುವಿರಿ?—ಕೀರ್ತನೆ 103:12-14; 130:3, 4.
◼ ದೇವರ ಅನುಗ್ರಹವನ್ನು ಪಡೆಯಲು ಒಬ್ಬನು ಯಾವ ಹೆಜ್ಜೆಗಳನ್ನು ತೆಗೆದುಕೊಳ್ಳಬೇಕು?—ಯೋಹಾನ 17:3; ಅ. ಕೃತ್ಯಗಳು 3:19.
◼ ಶೂಲಕ್ಕೇರಿಸಲ್ಪಟ್ಟಿದ್ದ ದುಷ್ಕರ್ಮಿಗೆ ಯೇಸು ಯಾವ ವಚನ ಕೊಟ್ಟನು?—ಲೂಕ 23:43.
[ಪಾದಟಿಪ್ಪಣಿ]
^ 2007, ಆಗಸ್ಟ್ 1 ರ ಕಾವಲಿನಬುರುಜು, ಪುಟ 12-16 ರಲ್ಲಿರುವ “ನೀವು ಪವಿತ್ರಾತ್ಮಕ್ಕೆ ವಿರುದ್ಧವಾಗಿ ಪಾಪಮಾಡಿದ್ದೀರೋ?” ಎಂಬ ಲೇಖನವನ್ನು ನೋಡಿ.