ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರಾಚೀನ ಹಸ್ತಪ್ರತಿಗಳು ಬರೆಯಲ್ಪಟ್ಟ ಕಾಲವನ್ನು ಹೇಗೆ ದೃಢೀಕರಿಸಲಾಯಿತು?

ಪ್ರಾಚೀನ ಹಸ್ತಪ್ರತಿಗಳು ಬರೆಯಲ್ಪಟ್ಟ ಕಾಲವನ್ನು ಹೇಗೆ ದೃಢೀಕರಿಸಲಾಯಿತು?

ಪ್ರಾಚೀನ ಹಸ್ತಪ್ರತಿಗಳು ಬರೆಯಲ್ಪಟ್ಟ ಕಾಲವನ್ನು ಹೇಗೆ ದೃಢೀಕರಿಸಲಾಯಿತು?

ಬೈಬಲ್‌ ತಜ್ಞರಾಗಿದ್ದ ಕಾನ್‌ಸ್ಟಾಂಟೀನ್‌ ಫಾನ್‌ ಟಿಷನ್‌ಡಾರ್ಫ್‌ 1844 ರಲ್ಲಿ ಈಜಿಪ್ಟಿನ ಸೈನಾಯ್‌ ಬೆಟ್ಟದ ಕೆಳಭಾಗದಲ್ಲಿರುವ ಸೆಂಟ್‌ ಕ್ಯಾಥರಿನ್ಸ್‌ ಸಂನ್ಯಾಸಿ ಮಠಕ್ಕೆ ಭೇಟಿ ನೀಡಿದರು. ಅಲ್ಲಿನ ಪುಸ್ತಕ ಭಂಡಾರಗಳನ್ನು ಪರೀಕ್ಷಿಸುತ್ತಿದ್ದಾಗ ಅವರಿಗೆ ಕೆಲವು ಗಮನಾರ್ಹವಾದ ಚರ್ಮಕಾಗದಗಳು ದೊರೆತವು. ಲಿಪಿಶಾಸ್ತ್ರ * ವಿದ್ಯಾರ್ಥಿಯಾಗಿದ್ದ ಅವರು ಅವನ್ನು ಹೀಬ್ರು ಶಾಸ್ತ್ರಗಳ ಇಲ್ಲವೆ “ಹಳೆಯ ಒಡಂಬಡಿಕೆ” ಯ ಗ್ರೀಕ್‌ ಭಾಷಾಂತರವಾದ ಸೆಪ್ಟ್ಯೂಅಜಂಟ್‌ನ ಹಾಳೆಗಳೆಂದು ಗುರುತಿಸಿದರು. ಅವರು ಬರೆದುದು: “ಸೀನಾಯಿಯಲ್ಲಿ ಕಂಡುಕೊಂಡ ಈ ಪುಟಗಳಿಗಿಂತ ಹೆಚ್ಚು ಪುರಾತನವಾದದ್ದನ್ನು ನಾನು ನೋಡಿರಲಿಲ್ಲ.”

ತರುವಾಯ ಸೈನಾಯ್ಟಿಕ್‌ ಮ್ಯಾನ್ಯುಸ್ಕ್ರಿಪ್ಟ್‌ (ಕೋಡೆಕ್ಸ್‌ ಸೈನಾಯ್ಟಿಕಸ್‌) ಎಂಬುದರ ಭಾಗವಾದ ಆ ಚರ್ಮಕಾಗದಗಳು ಸಾ.ಶ. 4 ನೇ ಶತಮಾನದ್ದೆಂದು ಲೆಕ್ಕ ಹಾಕಲಾಯಿತು. ಈ ಸೈನಾಯ್ಟಿಕ್‌ ಹಸ್ತಪ್ರತಿಯು ಹೀಬ್ರು ಮತ್ತು ಗ್ರೀಕ್‌ ಶಾಸ್ತ್ರಗಳ ಸಾವಿರಾರು ಪ್ರಾಚೀನ ಹಸ್ತಪ್ರತಿಗಳಲ್ಲಿ ಕೇವಲ ಒಂದಾಗಿದೆ. ನಿಜವಾಗಿಯೂ ತಜ್ಞರ ಅಧ್ಯಯನಕ್ಕೆ ವಿಶಾಲ ಕ್ಷೇತ್ರವೇ ಸರಿ!

ಗ್ರೀಕ್‌ ಲಿಪಿಶಾಸ್ತ್ರದ ಇತಿಹಾಸ

ಬರ್ನಾರ್‌ ಡ ಮಾನ್‌ಫೋಕನ್‌ (1655-1741) ಎಂಬ ಬೆನಡಿಕ್ಟೀನ್‌ ಪಂಥದ ಸಂನ್ಯಾಸಿ, ಗ್ರೀಕ್‌ ಹಸ್ತಪ್ರತಿಗಳ ಕ್ರಮಬದ್ಧ ಅಧ್ಯಯನಕ್ಕೆ ಬುನಾದಿ ಹಾಕಿದರು. ತರುವಾಯ ಇತರ ತಜ್ಞರು ತಮ್ಮ ಸ್ವಂತ ಅಧ್ಯಯನದ ಫಲಿತಾಂಶಗಳನ್ನು ಅದಕ್ಕೆ ಕೂಡಿಸಿದರು. ಟಿಷನ್‌ಡಾರ್ಫ್‌, ಯೂರೋಪಿನ ಗ್ರಂಥಾಲಯಗಳಲ್ಲಿ ಬೈಬಲಿನ ಅತಿ ಹಳೆಯ ಗ್ರೀಕ್‌ ಹಸ್ತಪ್ರತಿಗಳ ಪಟ್ಟಿಯನ್ನು ತಯಾರಿಸುವ ಭಾರಿ ಕೆಲಸವನ್ನು ವಹಿಸಿಕೊಂಡರು. ಅನೇಕಾವರ್ತಿ ಅವರು ಮಧ್ಯಪೂರ್ವ ದೇಶಗಳಿಗೆ ಪ್ರಯಾಣಿಸಿ, ನೂರಾರು ದಾಖಲೆಗಳನ್ನು ಅಧ್ಯಯನ ಮಾಡಿ, ತಮ್ಮ ಆವಿಷ್ಕಾರಗಳನ್ನು ಪ್ರಕಟಪಡಿಸಿದರು.

ಇಪ್ಪತ್ತನೆಯ ಶತಮಾನದಲ್ಲಿ ಲಿಪಿಶಾಸ್ತ್ರಜ್ಞರಿಗೆ ಇನ್ನೂ ಹೆಚ್ಚು ಸಹಾಯಕಗಳು ಲಭ್ಯವಾದವು. ಅವುಗಳಲ್ಲಿ ಒಂದು ಸುಮಾರು 900 ಸೂಚಿಗಳಿದ್ದ ಮಾರ್ಸೆಲ್‌ ರೀಶಾರ್‌ ಪಟ್ಟಿಯಾಗಿದೆ. ಇದು 820 ಗ್ರಂಥಾಲಯಗಳಿಗೆ ಇಲ್ಲವೆ ಖಾಸಗಿ ಒಡೆಯರಿಗೆ ಸೇರಿದ್ದಾಗಿದೆ. ಮಾತ್ರವಲ್ಲ, ಬೈಬಲ್‌ ಸಂಬಂಧಿತ ಮತ್ತು ಬೈಬಲ್‌ ಸಂಬಂಧಿತವಲ್ಲದ 55,000 ಗ್ರೀಕ್‌ ಹಸ್ತಪ್ರತಿಗಳನ್ನು ವಿವರಿಸುತ್ತದೆ. ಇಂಥ ಮಾಹಿತಿಯ ಮಹಾಪೂರವು ಭಾಷಾಂತರಕಾರರಿಗೆ ನೆರವು ನೀಡುತ್ತದಲ್ಲದೆ, ಹಸ್ತಪ್ರತಿಗಳು ಯಾವಾಗ ಬರೆಯಲ್ಪಟ್ಟಿವೆಯೆಂದು ಹೆಚ್ಚು ನಿಷ್ಕೃಷ್ಟವಾಗಿ ಹೇಳಲು ಲಿಪಿಶಾಸ್ತ್ರಜ್ಞರಿಗೆ ಸಹಾಯಮಾಡುತ್ತದೆ.

ಹಸ್ತಪ್ರತಿಗಳ ಕಾಲವನ್ನು ದೃಢೀಕರಿಸುವ ರೀತಿ

ನೀವು ಒಂದು ಹಳೇಮನೆಯ ಅಟ್ಟವನ್ನು ಶುಚಿಮಾಡುತ್ತಿದ್ದೀರೆಂದು ಭಾವಿಸಿರಿ. ಆಗ ನಿಮಗೆ ಕೈಬರಹದ ಪತ್ರವೊಂದು ಸಿಗುತ್ತದೆ. ಅದರಲ್ಲಿ ಯಾವುದೇ ತಾರೀಖು ಇಲ್ಲ, ತೀರಾ ಹಳೆಯದಾಗಿರುವ ಆ ಪತ್ರವು ಹಳದಿ ಬಣ್ಣಕ್ಕೆ ತಿರುಗಿರುತ್ತದೆ. ‘ಇದು ಎಷ್ಟು ಹಳೆಯದ್ದು?’ ಎಂದು ನೀವು ಹುಬ್ಬೇರಿಸುತ್ತೀರಿ. ಅದೇ ಸಮಯದಲ್ಲಿ ಇನ್ನೊಂದು ಹಳೆಯ ಪತ್ರ ನಿಮ್ಮ ಕಣ್ಣಿಗೆ ಬೀಳುತ್ತದೆ. ಅದರ ಶೈಲಿ, ಕೈಬರಹ, ಸ್ವರ ಚಿಹ್ನೆಯ ಬಳಕೆ ಮತ್ತು ಇತರ ಸಂಗತಿಗಳು ಪ್ರಥಮ ಪತ್ರವನ್ನು ಹೋಲುತ್ತವೆ. ಅಲ್ಲದೆ ನಿಮ್ಮ ನೋಟವನ್ನು ಸೆರೆಹಿಡಿದ ಇನ್ನೊಂದು ವಿಷಯವೂ ಆ ಎರಡನೇ ಪತ್ರದಲ್ಲಿದೆ. ಅದರಲ್ಲಿ ತಾರೀಖಿದೆ! ಪ್ರಥಮ ಪತ್ರ ಬರೆಯಲಾದ ವರ್ಷವನ್ನು ನಿರ್ಧರಿಸಲು ನಿಮಗೆ ಸಾಧ್ಯವಿಲ್ಲದಿದ್ದರೂ, ಆ ಪತ್ರ ಬರೆದ ಕಾಲವನ್ನು ಅಂದಾಜುಮಾಡಲು ಈಗ ಉಪಯುಕ್ತ ಸುಳಿವು ಸಿಕ್ಕಿದೆ ಎನ್ನಬಹುದು.

ಹಿಂದಿನ ಕಾಲದ ಅನೇಕ ಬರಹಗಾರರು ಬೈಬಲ್‌ ಹಸ್ತಪ್ರತಿಗಳ ತಮ್ಮ ಪ್ರತಿಗಳಲ್ಲಿ ಅವನ್ನು ಬರೆದು ಮುಗಿಸಿದ ತಾರೀಖನ್ನು ಸೂಚಿಸಲಿಲ್ಲ. ಅಂದಾಜಿನ ಸಮಯವನ್ನು ನಿರ್ಧರಿಸಲು, ತಜ್ಞರು ಆ ಹಸ್ತಪ್ರತಿಗಳ ಗ್ರಂಥಪಾಠಗಳನ್ನು ಇತರ ಬರಹಗಳೊಂದಿಗೆ ಸರಿಹೋಲಿಸುತ್ತಾರೆ. ಹೀಗೆ ಹೋಲಿಸುವ ಬರಹಗಳಲ್ಲಿ, ಬೈಬಲಿಗೆ ಸಂಬಂಧವಿರದ ಆದರೆ ತಾರೀಖುಗಳು ಗುರುತಿಸಲ್ಪಟ್ಟಿರುವ ಪ್ರಾಚೀನ ದಾಖಲೆಗಳೂ ಸೇರಿರುತ್ತವೆ. ಅವರು ಅವುಗಳ ಕೈಬರಹ, ಸ್ವರಚಿಹ್ನೆ, ಸಂಕ್ಷೇಪ-ಸಂಕೇತಾಕ್ಷರಗಳು ಇತ್ಯಾದಿಗಳಿಂದ ಬೈಬಲ್‌ ಹಸ್ತಪ್ರತಿಗಳ ಕಾಲವನ್ನು ನಿರ್ಧರಿಸುತ್ತಾರೆ. ಹಾಗಿದ್ದರೂ, ಕಾಲ ಸೂಚಿಸಲ್ಪಟ್ಟಿರುವ ನೂರಾರು ಬೈಬಲ್‌ ಹಸ್ತಪ್ರತಿಗಳನ್ನು ಕಂಡುಕೊಳ್ಳಲಾಗಿದೆ. ಗ್ರೀಕ್‌ ಕೈಬರಹವನ್ನು ಹೊಂದಿರುವ ಅವು ಸುಮಾರು ಸಾ.ಶ. 510 ರಿಂದ ಸಾ.ಶ. 1593 ರ ವರೆಗಿನ ಕಾಲದಲ್ಲಿ ಬರೆಯಲ್ಪಟ್ಟವುಗಳು.

ಕೈಬರಹಗಳಿಂದ ಸುಳಿವು

ಪ್ರಾಚೀನ ಗ್ರೀಕ್‌ ಬರೆವಣೆಗೆಯನ್ನು ಲಿಪಿಶಾಸ್ತ್ರಜ್ಞರು ಎರಡು ಮೂಲ ವರ್ಗಗಳಾಗಿ ವಿಭಾಗಿಸುತ್ತಾರೆ. ಲಲಿತವೂ ಔಪಚಾರಿಕವೂ ಆದ ಬುಕ್‌ ಹ್ಯಾಂಡ್‌ ಶೈಲಿ ಒಂದು ವರ್ಗವಾದರೆ, ಅಸಾಹಿತ್ಯಕ ದಾಖಲೆಗಳಲ್ಲಿ ಬಳಸುವ ಕೂಡುಬರೆವಣೆಗೆ ಅಥವಾ ನಿರರ್ಗಳವಾದ ಕರ್ಸಿವ್‌ ಶೈಲಿ ಇನ್ನೊಂದು. ಗ್ರೀಕ್‌ ಬರಹಗಾರರು ವಿವಿಧ ಶೈಲಿಯ ಅಕ್ಷರಗಳನ್ನು ಬಳಸಿದ್ದಾರೆ. ಅವನ್ನು, ಕ್ಯಾಪಿಟಲ್ಸ್‌ (ದೊಡ್ಡಕ್ಷರಗಳು), ಅನ್‌ಷಲ್ಸ್‌ (ಇನ್ನೊಂದು ಬಗೆಯ ದೊಡ್ಡಕ್ಷರಗಳು), ಕರ್ಸಿವ್ಸ್‌ (ಮೋಡಿಅಕ್ಷರಗಳು), ಮತ್ತು ಮಿನಸ್ಕ್ಯೂಲ್ಸ್‌ (ಸಣ್ಣಕ್ಷರಗಳು) ಶೈಲಿಗಳೆಂದು ವರ್ಗೀಕರಿಸಲಾಗಿದೆ. ಬುಕ್‌ ಹ್ಯಾಂಡ್‌ನ ಒಂದು ರೂಪವಾದ ಅನ್‌ಷಲ್‌ ಬರವಣಿಗೆಯನ್ನು ಸಾ.ಶ.ಪೂ. ನಾಲ್ಕನೆಯ ಶತಮಾನದಿಂದ ಸಾ.ಶ. ಎಂಟನೆಯ ಅಥವಾ ಒಂಬತ್ತನೆಯ ಶತಮಾನದ ವರೆಗೆ ಬಳಸಲಾಯಿತು. ಬುಕ್‌ ಹ್ಯಾಂಡ್‌ನ ಸಣ್ಣರೂಪವಾದ ಮಿನಸ್ಕ್ಯೂಲ್‌ ಬರವಣಿಗೆಯನ್ನು ಸಾ.ಶ. ಎಂಟು ಅಥವಾ ಒಂಬತ್ತನೆಯ ಶತಮಾನದಿಂದ ಹಿಡಿದು 15 ನೆಯ ಶತಮಾನದ ತನಕ ಬಳಸಲಾಯಿತು. ಅಂದರೆ ಯೂರೋಪಿನಲ್ಲಿ ಚರಅಚ್ಚುಮೊಳೆಯ ಮೂಲಕ ಮುದ್ರಣ ಆರಂಭವಾಗುವ ವರೆಗೆ ಅದನ್ನು ಬಳಸಲಾಯಿತು. ಮಿನಸ್ಕ್ಯೂಲ್‌ ಬರಹವನ್ನು ಶೀಘ್ರವಾಗಿಯೂ ಒತ್ತೊತ್ತಾಗಿಯೂ ಬರೆಯಸಾಧ್ಯವಿತ್ತು. ಇದರಿಂದ ಸಮಯ ಮತ್ತು ಚರ್ಮದಹಾಳೆಗಳು ಉಳಿತಾಯವಾಗುತ್ತಿದ್ದವು.

ಹಸ್ತಪ್ರತಿಗಳ ಕಾಲವನ್ನು ಕಂಡುಹಿಡಿಯಲು ಲಿಪಿಶಾಸ್ತ್ರಜ್ಞರು ತಮ್ಮದೇ ಆದ ವಿಧಾನಗಳನ್ನು ಬಳಸುತ್ತಾರೆ. ಸಾಮಾನ್ಯವಾಗಿ ಅವರು ಮೊದಲು ಕೈಬರವಣಿಗೆಯ ಆದ್ಯಂತ-ಪರೀಕ್ಷೆಯನ್ನು ಮಾಡುತ್ತಾರೆ. ಆ ಬಳಿಕ ಅವರು ಹೆಚ್ಚು ಸೂಕ್ಷ್ಮ ಪರೀಕ್ಷೆಯನ್ನು ಮಾಡುತ್ತಾರೆ. ಅಂದರೆ ಒಂದೊಂದು ಅಕ್ಷರವನ್ನು ವಿಶ್ಲೇಷಿಸುತ್ತಾರೆ. ಸಾಮಾನ್ಯವಾಗಿ ಒಂದು ಬರವಣಿಗೆಯ ಶೈಲಿಯಲ್ಲಿ ಗಮನಾರ್ಹವಾದ ಬದಲಾವಣೆಗಳಾಗಲು ದೀರ್ಘಕಾಲವೇ ಬೇಕಾಗುತ್ತದೆ. ಆದುದರಿಂದ, ಆ ಬರಹದ ಸೂಕ್ಷ್ಮ ಪರೀಕ್ಷೆಯು ಉಪಯುಕ್ತವಾಗಿದೆಯಾದರೂ, ಬರವಣಿಗೆಯ ಸರಿಸುಮಾರಾದ ಕಾಲವನ್ನು ಮಾತ್ರ ಅದು ಸೂಚಿಸುತ್ತದೆ.

ಆದರೆ ಸಂತೋಷದ ವಿಷಯವೇನೆಂದರೆ, ಆ ಸಮಯಾವಧಿಯನ್ನು ಹೆಚ್ಚು ನಿಷ್ಕೃಷ್ಟವಾಗಿ ಅಂದಾಜುಮಾಡಲು ಬೇರೆ ವಿಧಾನಗಳಿವೆ. ಅವುಗಳಲ್ಲಿ, ಕೆಲವು ಕೈಬರವಣಿಗೆಗಳ ಶೈಲಿಗಳನ್ನು ಯಾವಾಗ ಆರಂಭಿಸಲಾಯಿತು ಎಂದು ಗುರುತಿಸಿ ಅವುಗಳ ಕಾಲವನ್ನು ಸೂಚಿಸುವುದೂ ಸೇರಿದೆ. ಉದಾಹರಣೆಗೆ, ಸಾ.ಶ. 900 ನೆಯ ​ವರುಷಾನಂತರದ ಗ್ರೀಕ್‌ ಗ್ರಂಥಪಾಠಗಳಲ್ಲಿ ನಕಲುಗಾರರು ಕೂಡಕ್ಷರಗಳ (ಎರಡು ಅಥವಾ ಮೂರು ಅಕ್ಷರ ಜೋಡಣೆ) ಉಪಯೋಗವನ್ನು ಹೆಚ್ಚಿಸಲು ಆರಂಭಿಸಿದರು. ನಕಲುಗಾರರು ಅಧಃರೇಖಾತ್ಮಕ (ಕೆಲವು ಗ್ರೀಕ್‌ ಅಕ್ಷರಗಳನ್ನು ರೇಖೆಯ ಕೆಳಗೆ ಬರೆಯುವುದು) ಬರವಣಿಗೆಯನ್ನು ಹಾಗೂ ಉಸಿರಾಟದ ಗುರುತುಗಳೆಂದು ಕರೆಯಲ್ಪಡುವ ಸರಿಯಾದ ಉಚ್ಚಾರಣೆಯ ಸಹಾಯಕಗಳನ್ನು ಸಹ ಆರಂಭಿಸಿದರು.

ಸಾಮಾನ್ಯವಾಗಿ ಒಬ್ಬ ವ್ಯಕ್ತಿಯ ಕೈಬರಹ ಅವನ ಜೀವನವಿಡೀ ಬದಲಾಗದೆ ಅದೇ ಶೈಲಿಯಲ್ಲಿರುತ್ತದೆ. ಆದಕಾರಣ, ಒಂದು ಗ್ರಂಥಪಾಠವನ್ನು 50 ವರುಷಗಳ ನಿರ್ದಿಷ್ಟ ಅವಧಿಯಲ್ಲಿ ಬರೆಯಲಾಯಿತ್ತೆಂದಷ್ಟೇ ಹೇಳಸಾಧ್ಯವಿದೆ. ಇದಲ್ಲದೆ, ನಕಲುಗಾರರು ಕೆಲವು ಬಾರಿ ಹಿಂದಿನ ಹಸ್ತಪ್ರತಿಗಳನ್ನು ಮಾದರಿಯಾಗಿ ತೆಗೆದುಕೊಳ್ಳುತ್ತಿದ್ದುದರಿಂದ, ಹೊಸ ನಕಲುಪ್ರತಿಗಳು ಹಿಂದಿನ ಪ್ರತಿಗಳಷ್ಟೇ ಹಳೆಯದಾಗಿ ಕಂಡುಬರುತ್ತಿದ್ದವು. ಇಂಥ ಅನೇಕ ಸಮಸ್ಯೆಗಳ ಎದುರಿನಲ್ಲಿಯೂ, ಹಲವಾರು ಪ್ರಮುಖ ಬೈಬಲ್‌ ಹಸ್ತಪ್ರತಿಗಳು ಬರೆಯಲ್ಪಟ್ಟ ಕಾಲವನ್ನು ನಿರ್ಧರಿಸಲಾಗಿದೆ.

ಪ್ರಮುಖ ಗ್ರೀಕ್‌ ಬೈಬಲ್‌ ಹಸ್ತಪ್ರತಿಗಳ ಕಾಲವನ್ನು ನಿರ್ಧರಿಸುವುದು

ತಜ್ಞರಿಗೆ ಲಭ್ಯವಾದ ಪ್ರಮುಖ ಬೈಬಲ್‌ ಹಸ್ತಪ್ರತಿಗಳಲ್ಲಿ ಮೊದಲನೆಯದ್ದು ಅಲೆಗ್ಸಾಂಡ್ರೀನ್‌ ಹಸ್ತಪ್ರತಿ (ಕೋಡೆಕ್ಸ್‌ ಅಲೆಗ್ಸಾಂಡ್ರಿನಸ್‌) ಆಗಿತ್ತು. ಇದು ಈಗ ಬ್ರಿಟಿಷ್‌ ಲೈಬ್ರರಿಯಲ್ಲಿದೆ. ಇದರಲ್ಲಿ ಬೈಬಲಿನ ಹೆಚ್ಚಿನ ಭಾಗಗಳಿವೆ ಮತ್ತು ಅದನ್ನು ಉತ್ತಮ ದರ್ಜೆಯ ಚರ್ಮದೋಲೆಯಲ್ಲಿ ಗ್ರೀಕ್‌ ದೊಡ್ಡಕ್ಷರ ಶೈಲಿಯಲ್ಲಿ (ಅನ್‌ಷಲ್ಸ್‌) ಬರೆಯಲಾಗಿದೆ. ಈ ಕೋಡೆಕ್ಸ್‌ ಸಾ.ಶ. ಐದನೆಯ ಶತಮಾನದ ಆದಿಭಾಗಕ್ಕೆ ಸೇರಿದ್ದೆಂದು ಹೇಳಲಾಗಿದೆ. ಕಾರಣವೇನೆಂದರೆ, ಐದು ಮತ್ತು ಆರನೆಯ ಶತಮಾನಗಳ ಮಧ್ಯೆದಲ್ಲಿಯೇ ಅನ್‌ಷಲ್ಸ್‌ ಬರವಣಿಗೆಯಲ್ಲಿ ಬದಲಾವಣೆ ಸಂಭವಿಸಿತ್ತು. ಇದಕ್ಕೆ ಒಂದು ಉದಾಹರಣೆ, ವೀಎನದ ಡೈಅಸ್‌ಕೋರಡೀಸ್‌ ಎಂಬ ತಾರೀಖು ಹೊಂದಿರುವ ದಾಖಲೆ​ಪತ್ರವಾಗಿದೆ. *

ತಜ್ಞರಿಗೆ ಲಭ್ಯವಾದ ಎರಡನೆಯ ಪ್ರಮುಖ ಹಸ್ತಪ್ರತಿಯು, ಸೆಂಟ್‌ ಕ್ಯಾಥರಿನ್ಸ್‌ ಸಂನ್ಯಾಸಿ ಮಠದಲ್ಲಿ ಟಿಷನ್‌ಡಾರ್ಫ್‌ ಪಡೆದ ಸೈನಾಯ್ಟಿಕ್‌ ಹಸ್ತಪ್ರತಿ (ಕೋಡೆಕ್ಸ್‌ ಸೈನಾಯ್ಟಿಕಸ್‌) ಆಗಿತ್ತು. ಚರ್ಮಕಾಗದದ ಮೇಲೆ ಗ್ರೀಕ್‌ ಅನ್‌ಷಲ್‌ ಬರೆವಣಿಗೆಯಲ್ಲಿರುವ ಈ ಹಸ್ತಪ್ರತಿಯಲ್ಲಿ, ಗ್ರೀಕ್‌ ಸೆಪ್ಟ್ಯೂಅಜಂಟ್‌ ಭಾಷಾಂತರದಿಂದ ತೆಗೆಯಲ್ಪಟ್ಟಿರುವ ಹೀಬ್ರು ಶಾಸ್ತ್ರಗಳ ಭಾಗ ಹಾಗೂ ಎಲ್ಲ ಕ್ರೈಸ್ತ ಗ್ರೀಕ್‌ ಶಾಸ್ತ್ರಗಳು ಇವೆ. ಈ ಕೋಡೆಕ್ಸ್‌ನ 43 ಹಾಳೆಗಳನ್ನು ಜರ್ಮನಿಯ ಲೈಪ್‌ಸಿಗ್‌ನಲ್ಲಿ; 347 ಹಾಳೆಗಳನ್ನು ಲಂಡನ್‌ನ ಬ್ರಿಟಿಷ್‌ ಲೈಬ್ರರಿಯಲ್ಲಿ; ಮತ್ತು ಮೂರು ಹಾಳೆಗಳ ಭಾಗಗಳನ್ನು ರಷ್ಯಾದ ಸೆಂಟ್‌ ಪೀಟರ್ಸ್‌ಬರ್ಗ್‌ನಲ್ಲಿ ಇಡಲಾಗಿದೆ. ಈ ಹಸ್ತಪ್ರತಿ ಸಾ.ಶ. ನಾಲ್ಕನೆಯ ಶತಮಾನದ ಕೊನೆಭಾಗದ್ದೆಂದು ಹೇಳಲಾಗಿದೆ. ಈ ಕಾಲನಿರ್ದೇಶಕ್ಕೆ, ನಾಲ್ಕನೆಯ ಶತಮಾನದ ಇತಿಹಾಸಕಾರ ಯೂಸೀಬೀಅಸ್‌ನದ್ದೆಂದು ಹೇಳಲಾಗುವ ಸುವಾರ್ತೆಗಳಲ್ಲಿನ ಪಕ್ಕಟಿಪ್ಪಣಿಯು ಬೆಂಬಲ ನೀಡುತ್ತದೆ. *

ಮೂರನೆಯ ಪ್ರಮುಖ ಹಸ್ತಪ್ರತಿ ವ್ಯಾಟಿಕನ್‌ ಹಸ್ತಪ್ರತಿ ನಂ. 1209 (ಕೋಡೆಕ್ಸ್‌ ವ್ಯಾಟಿಕೇನಸ್‌) ಆಗಿದೆ. ಮೂಲತಃ ಇದರಲ್ಲಿ ಗ್ರೀಕ್‌ ಭಾಷೆಯ ಇಡೀ ಬೈಬಲ್‌ ಇತ್ತು. ಈ ಕೋಡೆಕ್ಸ್‌ ಅನ್ನು ವ್ಯಾಟಿಕನ್‌ ಲೈಬ್ರರಿಯ ಪೂರ್ಣಪಟ್ಟಿಯಲ್ಲಿ ಪ್ರಥಮ ಬಾರಿ 1475 ರಲ್ಲಿ ಸೇರಿಸಲಾಯಿತು. ಈ ಕೋಡೆಕ್ಸ್‌ ಅನ್ನು ಉತ್ತಮ ಗುಣಮಟ್ಟದ 759 ಚರ್ಮಕಾಗದ ಅಥವಾ ಚರ್ಮದೋಲೆಯ ಮೇಲೆ ಗ್ರೀಕ್‌ ಅನ್‌ಷಲ್ಸ್‌ ಶೈಲಿಯಲ್ಲಿ ಬರೆಯಲಾಗಿದೆ. ಇದರಲ್ಲಿ, ಆದಿಕಾಂಡದ ಹೆಚ್ಚಿನ ಭಾಗ, ಕೀರ್ತನೆಗಳ ಕೆಲವು ಭಾಗ ಮತ್ತು ಕ್ರೈಸ್ತ ಗ್ರೀಕ್‌ ಶಾಸ್ತ್ರಗಳ ಕೆಲವು ಭಾಗಗಳನ್ನು ಬಿಟ್ಟರೆ ಬೈಬಲಿನ ಹೆಚ್ಚಿನ ಭಾಗ ಅಡಕವಾಗಿದೆ. ಈ ಹಸ್ತಪ್ರತಿಯು ಸಾ.ಶ. ನಾಲ್ಕನೆಯ ಶತಮಾನದ ಆರಂಭ ಕಾಲಕ್ಕೆ ಸೇರಿದ್ದೆಂದು ವಿದ್ವಾಂಸರು ಹೇಳಿದ್ದಾರೆ. ಅವರು ಈ ಕಾಲವನ್ನು ನಿರ್ಧರಿಸಿದ್ದು ಹೇಗೆ? ಇದರ ಬರವಣಿಗೆ ಸೈನಾಯ್ಟಿಕ್‌ ಹಸ್ತಪ್ರತಿಯನ್ನು ಹೋಲುತ್ತಿದ್ದು, ಈ ಸೈನಾಯ್ಟಿಕ್‌ ಹಸ್ತಪ್ರತಿಯು ನಾಲ್ಕನೆಯ ಶತಮಾನಕ್ಕೆ ಸೇರಿದ್ದಾಗಿದೆ. ಆದರೆ ವ್ಯಾಟಿಕೇನಸ್‌ ಹಸ್ತಪ್ರತಿಯು ತುಸು ಹೆಚ್ಚು ಹಳೆಯದ್ದೆಂದು ಹೇಳಲಾಗುತ್ತದೆ. ಇದಕ್ಕಿರುವ ಹಲವಾರು ಕಾರಣಗಳಲ್ಲಿ ಒಂದು, ಯೂಸೀಬಿಯಸ್‌ ಕ್ಯಾನನ್ಸ್‌ನಲ್ಲಿರುವ ಅಡ್ಡ ಉಲ್ಲೇಖವು ಇದರಲ್ಲಿ ಇಲ್ಲದಿರುವುದೇ.

ಕಸಗುಪ್ಪೆಯಲ್ಲಿ ದೊರೆತ ನಿಧಿ

1920 ರಲ್ಲಿ ಇಂಗ್ಲೆಂಡಿನ ಮ್ಯಾಂಚೆಸ್ಟರ್‌ನಲ್ಲಿರುವ ಜಾನ್‌ ರೈಲಂಡ್ಸ್‌ ಲೈಬ್ರರಿ ಪಪೈರಸ್‌ಗಳ ಒಂದು ದೊಡ್ಡ ರಾಶಿಯನ್ನೇ ಪಡೆದುಕೊಂಡಿತು. ಇದನ್ನು ಈಜಿಪ್ಟಿನ ಪ್ರಾಚೀನ ಕಸದ ಗುಪ್ಪೆಯಲ್ಲಿ ಅಗೆದು ತೆಗೆಯಲಾಗಿತ್ತು. ಪತ್ರಗಳು, ರಶೀತಿಗಳು ಮತ್ತು ಜನಗಣನೆಯ ದಾಖಲೆಪತ್ರಗಳು ಇದ್ದ ಈ ಪಪೈರಸ್‌ಗಳನ್ನು ವಿದ್ವಾಂಸ ಕಾಲಿನ್‌ ರಾಬರ್ಟ್ಸ್‌ ಪರೀಕ್ಷಿಸುತ್ತಿದ್ದಾಗ ತನಗೆ ಪರಿಚಯವಿದ್ದ ಗ್ರಂಥಪಾಠದ ಅವಶೇಷವನ್ನು ಪತ್ತೆಹಚ್ಚಿದರು. ಅದು ಯೋಹಾನ 18 ನೆಯ ಅಧ್ಯಾಯದ ಕೆಲವು ವಚನಗಳಾಗಿತ್ತು. ಅದು ಆ ವರೆಗೆ ಗುರುತಿಸಲ್ಪಟ್ಟಿದ್ದ ಕ್ರೈಸ್ತ ಗ್ರೀಕ್‌ ಗ್ರಂಥಪಾಠಗಳಲ್ಲೇ ಅತಿ ಪ್ರಾಚೀನವಾದದ್ದಾಗಿತ್ತು.

ಈ ಅವಶೇಷ ಭಾಗವು ಜಾನ್‌ ರೈಲಂಡ್ಸ್‌ ಪಪೈರಸ್‌ 457 ಎಂದು ಪ್ರಸಿದ್ಧವಾಯಿತು. ಇದನ್ನು ಅಂತಾರಾಷ್ಟ್ರೀಯವಾಗಿ P52 ಎಂದು ಹೆಸರಿಸಲಾಗಿದೆ. ಗ್ರೀಕ್‌ ಅನ್‌ಷಲ್ಸ್‌ ಶೈಲಿಯಲ್ಲಿ ಬರೆಯಲ್ಪಟ್ಟಿರುವ ಇದನ್ನು ಎರಡನೆಯ ಶತಮಾನದ ಆದಿಭಾಗಕ್ಕೆ ಸೇರಿದ್ದೆಂದು ಗುರುತಿಸಲಾಗಿದೆ. ಅಂದರೆ ಯೋಹಾನನ ಸುವಾರ್ತೆಯ ಮೂಲ ಪ್ರತಿ ಬರೆಯಲ್ಪಟ್ಟು ಕೆಲವೇ ದಶಕಗಳಲ್ಲಿ ಬರೆಯಲಾಗಿತ್ತು! ಗಮನಾರ್ಹವಾಗಿ, ಈ ವಚನಗಳು ತುಂಬ ಸಮಯಾನಂತರ ಕಂಡುಹಿಡಿಯಲ್ಪಟ್ಟ ಹಸ್ತಪ್ರತಿಗಳಿಗೆ ಹೆಚ್ಚುಕಡಮೆ ನಿಷ್ಕೃಷ್ಟವಾಗಿ ಹೋಲುತ್ತವೆ.

ಪ್ರಾಚೀನವಾದರೂ ನಿಖರ!

ದ ಬೈಬಲ್‌ ಆ್ಯಂಡ್‌ ಆರ್ಕಿಯಾಲಜಿ ಎಂಬ ಪುಸ್ತಕದಲ್ಲಿ ಬ್ರಿಟಿಷ್‌ ಗ್ರಂಥ ಪಾಠದ ವಿಮರ್ಶಕರಾದ ಸರ್‌ ಫ್ರೆಡ್ರಿಕ್‌ ಕೆನ್ಯನ್‌ ಕ್ರೈಸ್ತ ಗ್ರೀಕ್‌ ಶಾಸ್ತ್ರಗಳ ವಿಷಯದಲ್ಲಿ ಬರೆದುದು: “ಹೊಸ ಒಡಂಬಡಿಕೆಯ ಪುಸ್ತಕಗಳು ಭರವಸಾರ್ಹವಾಗಿವೆ ಮತ್ತು ಯಾವುದೇ ರೀತಿಯಲ್ಲಿ ಬದಲಾವಣೆಗೊಂಡಿಲ್ಲ ಎಂಬ ಎರಡು ವಿಷಯಗಳು ಕೊನೆಗೂ ಸಾಬೀತಾದವು ಎಂದು ಹೇಳಬಹುದು.” ತದ್ರೀತಿ, ಹೀಬ್ರು ಶಾಸ್ತ್ರಗಳ ಸಮಗ್ರತೆಯ ಕುರಿತು ವಿದ್ವಾಂಸ ವಿಲ್ಯಮ್‌ ಎಚ್‌. ಗ್ರೀನ್‌ ಹೇಳಿದ್ದು: “ಇನ್ನಾವ ಪ್ರಾಚೀನ ಕೃತಿಯೂ ಇಷ್ಟು ನಿಷ್ಕೃಷ್ಟವಾಗಿ ದಾಖಲೆಗೊಂಡು ವಿತರಿಸಲ್ಪಟ್ಟಿಲ್ಲ ಎಂದು ವಿಶ್ವಸನೀಯವಾಗಿ ಹೇಳಬಹುದು.”

ಈ ಅವಲೋಕನಗಳು ಅಪೊಸ್ತಲ ಪೇತ್ರನ ಮಾತುಗಳನ್ನು ಮನಸ್ಸಿಗೆ ತರುತ್ತವೆ: “ನರಜಾತಿಯೆಲ್ಲಾ ಹುಲ್ಲಿನ ಹಾಗಿದೆ, ಅದರ ಪ್ರಭಾವವೆಲ್ಲಾ ಹುಲ್ಲಿನ ಹೂವಿನಂತದೆ. ಹುಲ್ಲು ಒಣಗಿಹೋಗುವದು, ಹೂವು ಉದುರಿಹೋಗುವದು; [ಯೆಹೋವನ] ಮಾತೋ ಸದಾಕಾಲವೂ ಇರುವದು.”​—⁠1 ಪೇತ್ರ 1:​24, 25. (g 2/08)

[ಪಾದಟಿಪ್ಪಣಿಗಳು]

^ “ಲಿಪಿಶಾಸ್ತ್ರವು . . . ಪ್ರಾಚೀನ ಹಾಗೂ ಮಧ್ಯಯುಗದ ಕೈಬರಹಗಳ ಅಧ್ಯಯನವಾಗಿದೆ. ಅದು ಪ್ರಧಾನವಾಗಿ ಪಪೈರಸ್‌, ಚರ್ಮಕಾಗದ ಮತ್ತು ಕಾಗದಗಳಂಥ ಹಾಳಾಗುವ ವಸ್ತುಗಳ ಮೇಲೆ ಬರೆಯಲ್ಪಟ್ಟದ್ದನ್ನು ಪರೀಕ್ಷಿಸುತ್ತದೆ.”​—⁠ದ ವರ್ಲ್ಡ್‌ಬುಕ್‌ ಎನ್‌ಸೈಕ್ಲಪೀಡಿಯ.

^ ವೀಎನದ ಡೈಅಸ್‌ಕೋರಡೀಸ್‌ ದಾಖಲೆಪತ್ರವು ಜೂಲಿಯಾನ ಆನೀಸಿಆ ಎಂಬ ಮಹಿಳೆಗೆ ಬರೆಯಲ್ಪಟ್ಟಿತು. ಅವಳು ಸಾ.ಶ. 527 ರಲ್ಲಿ ಇಲ್ಲವೆ 528 ರಲ್ಲಿ ಮೃತಳಾದಳು. ಈ ದಾಖಲೆಪತ್ರವು, “ಚರ್ಮದೋಲೆಯ ಮೇಲೆ ಅನ್‌ಷಲ್‌ ಬರವಣಿಗೆಯ ಪ್ರಪ್ರಥಮ ಮಾದರಿಯಾಗಿದೆ. ಇದಕ್ಕೆ ​ಸರಿಸುಮಾರಿನ ಕಾಲವನ್ನು ಸೂಚಿಸಸಾಧ್ಯವಿದೆ.”​—⁠ಆ್ಯನ್‌ ಇಂಟ್ರಡಕ್ಷನ್‌ ಟು ಗ್ರೀಕ್‌ ಆ್ಯಂಡ್‌ ಲ್ಯಾಟಿನ್‌ ಪ್ಯಾಲಿಆಗ್ರಫಿ, ಇ. ಎಮ್‌ ಥಾಮ್ಸನ್‌ ಅವರಿಂದ.

^ ಯೂಸೀಬೀಅನ್‌ ಕ್ಯಾನನ್ಸ್‌ ಎನ್ನಲಾಗುವ ಈ ಪಕ್ಕಟಿಪ್ಪಣಿಗಳು, ಟಿಪ್ಪಣಿಗಳ ಅಥವಾ ಅಡ್ಡ ಉಲ್ಲೇಖದ ಒಂದು ವ್ಯವಸ್ಥೆಯಾಗಿದೆ. ಇದು, “ಪ್ರತಿ ಸುವಾರ್ತೆಯಲ್ಲಿರುವ ಭಾಗಗಳು ಇತರ ಸುವಾರ್ತೆಗಳ ಯಾವ ಭಾಗಗಳನ್ನು ಹೋಲುತ್ತವೆ ಎಂಬುದನ್ನು ತೋರಿಸುವುದಕ್ಕಾಗಿದೆ.”​—⁠ಮ್ಯಾನ್ಯುಸ್ಕ್ರಿಪ್ಟ್ಸ್‌ ಆಫ್‌ ದ ಗ್ರೀಕ್‌ ಬೈಬಲ್‌, ಬ್ರೂಸ್‌ ಬಿ. ಮೆಟ್ಸ್‌ಗರ್‌ ಅವರಿಂದ.

[ಪುಟ 17ರಲ್ಲಿರುವ ಸಂಕ್ಷಿಪ್ತ ವಿವರಣೆ]

ತಾರೀಖನ್ನು ಹೊಂದಿರುವ ಹಸ್ತಪ್ರತಿಗಳನ್ನು ಜಾಗರೂಕತೆಯಿಂದ ಪರೀಕ್ಷಿಸುವ ಮೂಲಕ ಲಿಪಿಶಾಸ್ತ್ರಜ್ಞರು ತಾರೀಖು ಇಲ್ಲದಿರುವ ಕೃತಿಗಳ ಕಾಲವನ್ನು ಸೂಚಿಸಶಕ್ತರಾಗಿದ್ದಾರೆ

[ಪುಟ 16ರಲ್ಲಿರುವ ಚೌಕ]

ಯೆಶಾಯ ಪುಸ್ತಕದ ಮೃತ ಸಮುದ್ರ ಸುರುಳಿಯ ಕಾಲವನ್ನು ಗುರುತಿಸುವುದು

ಬೈಬಲಿನ ಯೆಶಾಯ ಪುಸ್ತಕದ ಮೃತ ಸಮುದ್ರ ಸುರುಳಿಯನ್ನು 1947 ರಲ್ಲಿ ಕಂಡುಹಿಡಿಯಲಾಯಿತು. ಇದನ್ನು ಮ್ಯಾಸರಾ ಟಿಪ್ಪಣಿಗೆ ಪೂರ್ವದಲ್ಲಿದ್ದ ಹೀಬ್ರು ಲಿಪಿಗಳಲ್ಲಿ ಚರ್ಮಕಾಗದದ ಮೇಲೆ ಬರೆಯಲಾಗಿತ್ತು. ಅದನ್ನು ಸಾ.ಶ.ಪೂ. ಎರಡನೆಯ ಶತಮಾನದ ಅಂತ್ಯದ್ದೆಂದು ಹೇಳಲಾಗಿದೆ. ಆ ತೀರ್ಮಾನಕ್ಕೆ ತಜ್ಞರು ಹೇಗೆ ಬಂದರು? ಅವರು ಅದನ್ನು ಇತರ ಹೀಬ್ರು ಬರಹ ಮತ್ತು ಸ್ಮಾರಕ ಲೇಖನಗಳಿಗೆ ಹೋಲಿಸಿ ನೋಡಿದರು. ಅನಂತರ ಅದಕ್ಕೆ ಸಾ.ಶ.ಪೂ. 125 ಮತ್ತು ಸಾ.ಶ.ಪೂ. 100 ರ ಮಧ್ಯದ ಲಿಪಿಶಾಸ್ತ್ರೀಯ ತಾರೀಖನ್ನು ಕೊಟ್ಟರು. ಈ ಸುರುಳಿಯ ಕಾರ್ಬನ್‌-14 ಕಾಲಗಣನೆ ಇನ್ನೂ ಹೆಚ್ಚಿನ ಸಾಕ್ಷ್ಯವನ್ನು ಒದಗಿಸಿತು.

ಆಶ್ಚರ್ಯಕರವಾಗಿ, ಈ ಮೃತ ಸಮುದ್ರ ಸುರುಳಿಗಳನ್ನು ಅದಕ್ಕಿಂತ ಅನೇಕ ಶತಮಾನಗಳಿಗೆ ಅನಂತರ ಮ್ಯಾಸರೀಟ್ಸ್‌ ಎಂದು ಕರೆಯಲ್ಪಟ್ಟಿದ್ದ ಟಿಪ್ಪಣಿಕಾರರಿಂದ ತಯಾರಿಸಲ್ಪಟ್ಟ ಮ್ಯಾಸರೆಟಿಕ್‌ ಗ್ರಂಥಪಾಠಕ್ಕೆ ಹೋಲಿಸುವಾಗ ಅದರಲ್ಲಿ ಯಾವುದೇ ತಾತ್ತ್ವಿಕ ಬದಲಾವಣೆ ಕಂಡುಬರುವುದಿಲ್ಲ. * ಕಂಡುಬರುವ ವ್ಯತ್ಯಾಸವೆಂದರೆ ಕಾಗುಣಿತ ಮತ್ತು ವ್ಯಾಕರಣಗಳಷ್ಟೇ. ಇನ್ನೊಂದು ಗಮನಾರ್ಹ ಸಂಗತಿಯೇನೆಂದರೆ, ದೈವಿಕ ನಾಮವಾದ ಯೆಹೋವ ಎಂಬುದರ ಟೆಟ್ರಗ್ಯಾಮಟಾನ್‌ ಎಂಬ ನಾಲ್ಕು ಹೀಬ್ರು ವ್ಯಂಜನಾಕ್ಷರಗಳು ಆ ಯೆಶಾಯನ ಸುರುಳಿಯಲ್ಲಿ ಏಕಪ್ರಕಾರವಾಗಿ ತೋರಿಬರುತ್ತವೆ.

[ಪಾದಟಿಪ್ಪಣಿ]

^ ಯೆಹೂದ್ಯರಲ್ಲಿ ಮ್ಯಾಸರೀಟ್ಸ್‌ ಎಂದು ಕರೆಯಲ್ಪಡುತ್ತಿದ್ದ ಈ ಸೂಕ್ಷ್ಮರೀತಿಯ ನಕಲುಗಾರರು ಸಾ.ಶ. 500 ರಿಂದ ಹಿಡಿದು ಸಾ.ಶ. 1000 ವರೆಗೆ ಜೀವಿಸುತ್ತಿದ್ದರು.

[ಪುಟ 16, 17ರಲ್ಲಿರುವ ಚಾರ್ಟು/ಚಿತ್ರಗಳು]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಗ್ರೀಕ್‌ ಕೈಬರಹ

ಬುಕ್‌ ಹ್ಯಾಂಡ್‌ (ಅನ್‌ಷಲ್‌)

ಸಾ.ಶ.ಪೂ. 4 ನೆಯ ಶತಮಾನದಿಂದ ಸಾ.ಶ. 8 ಅಥವಾ 9 ನೆಯ ಶತಮಾನದ ವರೆಗೆ

ಮಿನಸ್ಕ್ಯೂಲ್‌

ಸಾ.ಶ. 8 ನೆಯ ಅಥವಾ 9 ನೆಯ ಶತಮಾನದಿಂದ ಸಾ.ಶ. 15 ನೆಯ ಶತಮಾನದ ವರೆಗೆ

ಪ್ರಮುಖ ಹಸ್ತಪ್ರತಿಗಳು

400

200

ಮೃತ ಸಮುದ್ರ ಸುರುಳಿ

ಸಾ.ಶ.ಪೂ. 2 ನೆಯ ಶತಮಾನದ ಕೊನೆಯಲ್ಲಿ

ಸಾ.ಶ.ಪೂ.

ಸಾ.ಶ.

100

ಜಾನ್‌ ರೈಲಂಡ್ಸ್‌ ಪಪೈರಸ್‌ 457

 ಸಾ.ಶ. 125

300

ವ್ಯಾಟಿಕನ್‌ ಹಸ್ತಪ್ರತಿ ನಂ. 1209

4 ನೆಯ ಶತಮಾನದ ಆರಂಭದಲ್ಲಿ

ಸೈನಾಯ್ಟಿಕ್‌ ಹಸ್ತಪ್ರತಿ

4 ನೆಯ ಶತಮಾನ

400

ಅಲೆಗ್ಸಾಂಡ್ರೀನ್‌ ಹಸ್ತಪ್ರತಿ

5 ನೆಯ ಶತಮಾನದ ಆರಂಭದಲ್ಲಿ

500

700

800

[ಪುಟ 15ರಲ್ಲಿರುವ ಚಿತ್ರ]

ಮೇಲೆ: ಕಾನ್‌ಸ್ಟಾಂಟೀನ್‌ ಫಾನ್‌ ಟಿಷನ್‌ಡಾರ್ಫ್‌

ಬಲಕ್ಕೆ: ಬರ್ನಾರ್‌ ಡ ಮಾನ್‌ಫೋಕನ್‌

[ಕೃಪೆ]

© Réunion des Musées Nationaux/ Art Resource, NY

[ಪುಟ 16ರಲ್ಲಿರುವ ಚಿತ್ರ ಕೃಪೆ]

ಮೃತ ಸಮುದ್ರ ಸುರಳಿ: ಷ್ರೈನ್‌ ಆಫ್‌ ದ ಬುಕ್‌, ಇಸ್ರೇಲ್‌ ಮ್ಯೂಸಿಯಂ, ಯೆರೂಸಲೇಮ್‌

[ಪುಟ 17ರಲ್ಲಿರುವ ಚಿತ್ರ ಕೃಪೆ]

Typographical facsimile of Vatican Manuscript No. 1209: From the book Bibliorum Sacrorum Graecus Codex Vaticanus, 1868; Reproduction of Sinaitic Manuscript: 1 Timothy 3:​16, as it appears in the Codex Sinaiticus, 4th century C.E.; Alexandrine Manuscript: From The Codex Alexandrinus in Reduced Photographic Facsimile, 1909, by permission of the British Library