ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಶೀಘ್ರದಲ್ಲೇ ಅಪರಾಧಗಳು ಇಲ್ಲದೆ ಹೋಗುವವು

ಶೀಘ್ರದಲ್ಲೇ ಅಪರಾಧಗಳು ಇಲ್ಲದೆ ಹೋಗುವವು

ಶೀಘ್ರದಲ್ಲೇ ಅಪರಾಧಗಳು ಇಲ್ಲದೆ ಹೋಗುವವು

“ಇನ್ನು ಸ್ವಲ್ಪ ಕಾಲದೊಳಗೆ ದುಷ್ಟರು ಇರುವದೇ ಇಲ್ಲ.”​—⁠ಕೀರ್ತನೆ 37:⁠10, ಪರಿಶುದ್ಧ ಬೈಬಲ್‌. *

ನಮ್ಮ ಸೃಷ್ಟಿಕರ್ತನಾದ ಯೆಹೋವ ದೇವರಿಗೆ ತನ್ನ ಮಾನವ ಸೃಷ್ಟಿಯಲ್ಲಿ ಗಾಢಾಸಕ್ತಿಯಿದೆ. ಕೆಲವರು ನೆನಸುವಂತೆ ಆತನು ನಮ್ಮಿಂದ ದೂರವಾಗಿದ್ದು, ನಮ್ಮಲ್ಲಿ ಯಾವುದೇ ಆಸಕ್ತಿ ಇಲ್ಲದವನೆಂಬ ಮಾತು ನಿಜವಲ್ಲ. (ಕೀರ್ತನೆ 11:​4, 5) ಅಷ್ಟುಮಾತ್ರವಲ್ಲದೆ, ಮಾನವರ ಕಣ್ಣಿಗೆ ಬೀಳದಂಥ ಪ್ರತಿಯೊಂದು ಅಪರಾಧವೂ ಪ್ರತಿಯೊಂದು ಅನ್ಯಾಯವೂ ಆತನ ದೃಷ್ಟಿಗೆ ಬೀಳುತ್ತದೆ. “ಯೆಹೋವನ ದೃಷ್ಟಿಯು ಎಲ್ಲೆಲ್ಲಿಯೂ ಇರುವದು; ಆತನು ಕೆಟ್ಟವರನ್ನೂ ಒಳ್ಳೆಯವರನ್ನೂ ನೋಡುತ್ತಲೇ ಇರುವನು.” (ಜ್ಞಾನೋಕ್ತಿ 15:⁠3) ಆದುದರಿಂದ, ದುಷ್ಟರು ನಿಜವಾಗಿಯೂ ‘ಜಾರುವ ಸ್ಥಳದಲ್ಲಿ’ ನಿಂತಿದ್ದಾರೆಂಬ ಭರವಸೆ ನಿಮಗಿರಬಲ್ಲದು.​—⁠ಕೀರ್ತನೆ 73:​12, 18, NIBV.

ಆದರೆ ಒಳ್ಳೇ ನಡತೆಯುಳ್ಳವರೂ ನೈತಿಕವಾಗಿ ಯಥಾರ್ಥರೂ ಆಗಿರುವವರು ಭೌತಿಕ ರೀತಿಯಲ್ಲಿ ಬಡವರಾಗಿದ್ದು, ದಬ್ಬಲ್ಪಟ್ಟವರಾಗಿದ್ದರೂ ಅವರಿಗೊಂದು ಅದ್ಭುತ ಪ್ರತೀಕ್ಷೆ ಇದೆ. ಕೀರ್ತನೆಗಾರ ದಾವೀದನು ಬರೆದದ್ದು: “ನಿರ್ದೋಷಿಯನ್ನು ಗಮನಿಸು, ಯಥಾರ್ಥನನ್ನು ನೋಡು; ಸಮಾಧಾನಕ್ಕೆ ಭವಿಷ್ಯವಿದೆ.” (ಕೀರ್ತನೆ 37:​37, NIBV) ಈ ಮಾತುಗಳು ನಮಗಿಂದು ವಿಶೇಷ ಸಾಂತ್ವನ ತರಬಲ್ಲವು ಏಕೆಂದರೆ ಇವು ಭವಿಷ್ಯತ್ತಿನಲ್ಲಿ ಬಲುಬೇಗನೆ ಜಗತ್ತಿನಾದ್ಯಂತ ನೆರವೇರುವುದನ್ನು ಕಣ್ಣಾರೆ ನೋಡುವೆವು.

ಕಡೇ ದಿವಸಗಳಲ್ಲಿ ಜೀವಿಸುತ್ತಿದ್ದೇವೆ

ಯೇಸು ಕ್ರಿಸ್ತನ ಶಿಷ್ಯರು 2,000 ವರ್ಷಗಳ ಹಿಂದೆ, ಭವಿಷ್ಯತ್ತಿನ ಕುರಿತು ಪ್ರಶ್ನೆಯೊಂದನ್ನು ಅವನಿಗೆ ಕೇಳಿದರು. ಅವರಂದದ್ದು: “ನೀನು ಪ್ರತ್ಯಕ್ಷನಾಗುವದಕ್ಕೂ ಯುಗದ” ಇಲ್ಲವೇ ಈ ಲೋಕ ವ್ಯವಸ್ಥೆಯ “ಸಮಾಪ್ತಿಗೂ ಸೂಚನೆಯೇನು? ನಮಗೆ ಹೇಳು.” (ಮತ್ತಾಯ 24:⁠3) ಯೇಸು ಕೊಟ್ಟ ಉತ್ತರವನ್ನು ಬೈಬಲಿನಲ್ಲಿ ಮತ್ತಾಯ ಅಧ್ಯಾಯ 24, ಮಾರ್ಕ ಅಧ್ಯಾಯ 13 ಮತ್ತು ಲೂಕ ಅಧ್ಯಾಯ 21 ರಲ್ಲಿ ವಿವರವಾಗಿ ದಾಖಲಿಸಲಾಗಿದೆ. ಪರಸ್ಪರ ಪೂರಕವಾಗಿರುವ ಈ ಸುವಾರ್ತಾ ವೃತ್ತಾಂತಗಳು ಸದ್ಯದ ಲೋಕದ ಕಡೇ ದಿವಸಗಳಲ್ಲಿ ಯುದ್ಧ, ಕ್ಷಾಮ, ರೋಗ, ಮಹಾ ಭೂಕಂಪ, ಅಧರ್ಮದ ಗಮನಾರ್ಹ ವೃದ್ಧಿಯನ್ನು ವರ್ಣಿಸುತ್ತವೆ.

ಯೇಸು ಮುಂತಿಳಿಸಿದ್ದ ಈ ಕಠಿನ ಪರಿಸ್ಥಿತಿಗಳು 1914 ರಲ್ಲಿ ಆರಂಭವಾದವು. ಇತಿಹಾಸಕಾರ ಎರಿಕ್‌ ಹೊಬ್ಸ್‌ಬಾವ್ಮ್‌ ​ವೈಪರೀತ್ಯಗಳ ಯುಗ (ಇಂಗ್ಲಿಷ್‌) ಎಂಬ ತನ್ನ ಪುಸ್ತಕದಲ್ಲಿ ಹೇಳಿರುವಂತೆ “ಇತಿಹಾಸದಲ್ಲೇ ಅತ್ಯಂತ ಹೆಚ್ಚು ರಕ್ತಪಾತ ನಡೆದಿರುವುದು” 20 ನೇ ಶತಮಾನದಲ್ಲೇ.

ಇಂದು ನಡೆಯುತ್ತಿರುವ ದುಷ್ಟತನದ ವೃದ್ಧಿಯ ಕುರಿತಾಗಿ ಬೈಬಲ್‌ ತಿಳಿಸುವುದು: “ದುಷ್ಟರು ಹುಲ್ಲಿನಂತೆ ಬೆಳೆಯುವದೂ ಕೆಡುಕರು ಹೂವಿನಂತೆ ಮೆರೆಯುವದೂ ತೀರಾ ಹಾಳಾಗುವದಕ್ಕಾಗಿಯೇ.” (ಕೀರ್ತನೆ 92:⁠7) ಹೌದು, ಇದರ ರುಜುವಾತು ಸ್ಪಷ್ಟವಾಗಿ ತೋರುತ್ತಿದೆ: ಇಂದು ಹುಲ್ಲಿನಂತೆ ಹುಲುಸಾಗಿ ಬೆಳೆಯುತ್ತಿರುವ ಅಧರ್ಮದ ಬಂಪರ್‌ ಫಸಲು, ವಾಸ್ತವದಲ್ಲಿ ದುಷ್ಟರ ನಾಶನ ಹತ್ತಿರ ಇದೆಯೆಂಬುದಕ್ಕೆ ಸೂಚನೆ ಆಗಿದೆ. ಇದೊಂದು ಶುಭವಾರ್ತೆ ಅಲ್ಲವೋ?​—⁠2 ಪೇತ್ರ 3:⁠7.

‘ನೀತಿವಂತರು ಭೂಮಿಯನ್ನು ಸ್ವಾಧೀನಮಾಡಿಕೊಳ್ಳುವರು’

“ನೀತಿವಂತರು ಭೂಮಿಯನ್ನು ಸ್ವಾಧೀನಮಾಡಿಕೊಂಡು ಎಂದೆಂದಿಗೂ ಅದರಲ್ಲಿ ವಾಸವಾಗಿರುವರು” ಎಂದು ಕೀರ್ತನೆ 37:29 (NIBV) ಹೇಳುತ್ತದೆ. ಆಗ ಎಲ್ಲ ಪ್ರಕಾರದ ಅಪರಾಧ ಹಾಗೂ ಅನ್ಯಾಯ ಗತಕಾಲದ ಸಂಗತಿ ಆಗಿರುವುದು. ಆದುದರಿಂದ ಅಪರಾಧಕ್ಕೆ ಸಂಬಂಧಪಟ್ಟ ಎಲ್ಲ ವಿಷಯಗಳು ಸಹ, ಅಂದರೆ ಸೆಕ್ಯೂರಿಟಿ ಅಲಾರ್ಮ್‌ಗಳು, ಬೀಗಗಳು, ಕೋರ್ಟುಗಳು, ವಕೀಲರು, ಪೊಲೀಸರು ಮತ್ತು ಜೈಲುಗಳು ಆ ಸಮಯದಲ್ಲಿ ಇಲ್ಲದಿರುವವು. ಬೈಬಲ್‌ ವಾಗ್ದಾನಿಸುವುದು: “ಮೊದಲಿದ್ದದ್ದನ್ನು ಯಾರೂ ಜ್ಞಾಪಿಸಿಕೊಳ್ಳರು, ಅದು ನೆನಪಿಗೆ ಬಾರದು.”​—⁠ಯೆಶಾಯ 65:⁠17.

ಹೌದು, ಈ ಭೂಮಿ ಮತ್ತು ಮಾನವ ಸಮಾಜದಲ್ಲಿ ಹಿಂದೆಂದೂ ನಡೆದಿರದ ಪರಿವರ್ತನೆ ಆಗಲಿದೆ. (ಯೆಶಾಯ 11:9; 2 ಪೇತ್ರ 3:13) ಭರವಸಾರ್ಹವಾದ ಈ ನಿರೀಕ್ಷೆ ಯೆಹೋವನ ಸಾಕ್ಷಿಗಳಿಗಿದೆ. ಇದು ಬೇಗನೆ ಒಂದು ವಾಸ್ತವಿಕತೆ ಆಗುವುದೆಂಬುದರ ಸಾಕ್ಷ್ಯವನ್ನು ನೀವು ಖುದ್ದಾಗಿ ಪರೀಕ್ಷಿಸಿ ನೋಡುವಂತೆ ಅವರು ನಿಮ್ಮನ್ನು ಆಮಂತ್ರಿಸುತ್ತಾರೆ. ನೆನಪಿಡಿ, ಪವಿತ್ರ ಶಾಸ್ತ್ರಗಳ ಬರೆವಣಿಗೆಯನ್ನು ಪ್ರೇರಿಸಿದಾತನು ‘ಸುಳ್ಳಾಡಲಾರನು.’​—⁠ತೀತ 1:⁠2. (g 2/08)

[ಪುಟ 9ರಲ್ಲಿರುವ ಚೌಕ/ಚಿತ್ರ]

ಸೆರೆವಾಸಿಗಳಿಗೆ ಆಧ್ಯಾತ್ಮಿಕ ಸಹಾಯ

ಕಳೆದ 20-30 ವರ್ಷಗಳಲ್ಲಿ ಅಮೆರಿಕದಲ್ಲಿರುವ ಯೆಹೋವನ ಸಾಕ್ಷಿಗಳ ಆಫೀಸಿಗೆ 4,169 ಸೆರೆಮನೆಗಳು, ಆಸ್ಪತ್ರೆಗಳು, ಮಾದಕದ್ರವ್ಯ ವ್ಯಸನಿಗಳಿಗಾಗಿರುವ ಪುನಶ್ಚೇತನಾ ಕೇಂದ್ರಗಳಿಂದ ಪತ್ರಗಳು ಬಂದಿವೆ. ಕೆಲವು ಸೆರೆವಾಸಿಗಳು ಬೈಬಲ್‌ ಸಾಹಿತ್ಯಕ್ಕಾಗಿ ಕೇಳುತ್ತಾರೆ, ಇನ್ನಿತರರು ಬೈಬಲಿನ ಉಚಿತ ಅಧ್ಯಯನಕ್ಕಾಗಿ ವಿನಂತಿಸುತ್ತಾರೆ. ಅರ್ಹ ಸಾಕ್ಷಿಗಳು ಇಂಥ ವ್ಯಕ್ತಿಗಳನ್ನು ಸಂಪರ್ಕಿಸುತ್ತಾರೆ. ವಾಸ್ತವದಲ್ಲಿ ಲೋಕವ್ಯಾಪಕವಾಗಿ ಸಾಕ್ಷಿಗಳು, ಆಧ್ಯಾತ್ಮಿಕ ನೆರವನ್ನು ಕೋರಿರುವ ಗಂಡು-ಹೆಣ್ಣು ಸೆರೆವಾಸಿಗಳೊಂದಿಗೆ ಬೈಬಲ್‌ ಅಧ್ಯಯನಗಳನ್ನು ನಡೆಸಲಿಕ್ಕಾಗಿ ಕ್ರಮವಾಗಿ ಸೆರೆಮನೆಗಳಿಗೆ ಭೇಟಿನೀಡುತ್ತಾರೆ. ಅಂಥ ಸೆರೆವಾಸಿಗಳಲ್ಲಿ ಹಲವಾರು ಮಂದಿ ತಮ್ಮ ವ್ಯಕ್ತಿತ್ವದಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡಿ, ದೀಕ್ಷಾಸ್ನಾನಪಡೆದ ಕ್ರೈಸ್ತರಾಗಿ ಮುಂದಕ್ಕೆ ನಿಯಮಪಾಲಕರಾಗಿ ಜೀವಿಸಿದ್ದಾರೆ.

[ಪಾದಟಿಪ್ಪಣಿ]

^ Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.