ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸತ್ಯ ಧರ್ಮವನ್ನು ಕಂಡುಕೊಳ್ಳುವ ವಿಧ

ಸತ್ಯ ಧರ್ಮವನ್ನು ಕಂಡುಕೊಳ್ಳುವ ವಿಧ

ಸತ್ಯ ಧರ್ಮವನ್ನು ಕಂಡುಕೊಳ್ಳುವ ವಿಧ

‘ದೇವರಿಂದ ಬಂದ ಸತ್ಯವು ಅಸ್ತಿತ್ವದಲ್ಲಿರುವುದಾದರೆ ಅದನ್ನು ಕಂಡುಕೊಳ್ಳಲು ನಾನು ಹುಡುಕಬೇಕೇಕೆ? ಮಾನವಕುಲಕ್ಕಾಗಿ ದೇವರಲ್ಲಿ ಒಂದು ಮಹತ್ವದ ಸಂದೇಶವಿರುವಲ್ಲಿ ಅದನ್ನು ಸಾಕಷ್ಟು ಸ್ಪಷ್ಟವಾಗಿ ತಿಳಿಸದೆ ಇರುವನೇ? ಆ ಮೂಲಕ ಜನರು ಅದಕ್ಕಾಗಿ ಹುಡುಕಾಡುವ ಅಗತ್ಯವಿಲ್ಲದೆ ಅದನ್ನು ಕೂಡಲೇ ಅರ್ಥಮಾಡಿಕೊಳ್ಳುವರಲ್ಲಾ’ ಎಂದು ಕೆಲವರು ಕೇಳುತ್ತಾರೆ.

ಹಾಗೆ ಮಾಡಲು ದೇವರು ನಿಶ್ಚಯವಾಗಿಯೂ ಶಕ್ತನು. ಆದರೆ ಸತ್ಯವನ್ನು ತಿಳಿಯಪಡಿಸಲು ದೇವರು ಆರಿಸಿಕೊಂಡಿರುವ ಮಾರ್ಗವು ಅದೋ?

ದೇವರು ಸತ್ಯವನ್ನು ತಿಳಿಯಪಡಿಸುವ ವಿಧ

ಕಾರ್ಯತಃ ದೇವರು ತನ್ನ ಸಂದೇಶಗಳನ್ನು ತಿಳಿಯಪಡಿಸುವ ವಿಧಾನವು ಸತ್ಯಾನ್ವೇಷಕರಾದ ಪ್ರಾಮಾಣಿಕ ಜನರು ಅದನ್ನು ಹುಡುಕಿ ತೆಗೆಯುವಂತೆ ಅವಕಾಶ ಕೊಡುವ ಮೂಲಕವೇ. (ಕೀರ್ತನೆ 14:2) ದೇವರು ಶತಮಾನಗಳ ಹಿಂದೆ ತನ್ನ ಪ್ರವಾದಿಯಾದ ಯೆರೆಮೀಯನ ಮೂಲಕ ತಿಳಿಯಪಡಿಸಿದ ಸಂದೇಶವನ್ನು ಪರಿಗಣಿಸಿರಿ. ಅದನ್ನು ದೇವರ ಅವಿಧೇಯ ಜನರಿಗೆ ಕೊಡಲಾಗಿತ್ತು. ಅದು ಯೆರೂಸಲೇಮಿನ ಮೇಲೆ ಬಾಬೆಲಿನವರಿಂದ ಬರಲಿದ್ದ ನಾಶನದ ಕುರಿತು ತಿಳಿಸಿತ್ತು.​—⁠ಯೆರೆಮೀಯ 25:8-11; 52:12-14.

ಆದರೂ ಅದೇ ಸಮಯದಲ್ಲಿ, ಬೇರೆ ಪ್ರವಾದಿಗಳು ಸಹ ತಾವು ದೇವರಿಂದ ಬಂದ ಸಂದೇಶವನ್ನೇ ತಿಳಿಸುತ್ತಿದ್ದೇವೆಂದು ಪ್ರತಿಪಾದಿಸತೊಡಗಿದರು. ಆ ಪ್ರವಾದಿಗಳಲ್ಲಿ ಒಬ್ಬನಾದ ಹನನ್ಯನು ಯೆರೂಸಲೇಮಿನಲ್ಲಿ ಶಾಂತಿಯು ನೆಲೆಸುವುದೆಂದು ಮುಂತಿಳಿಸಿದನು. ಅದು ಯೆರೆಮೀಯನು ತಿಳಿಸಿದ ಸಂದೇಶಕ್ಕಿಂತ ಪೂರ್ತಿ ಭಿನ್ನವಾಗಿತ್ತು. ಹಾಗಾಗಿ ಒಬ್ಬ ವ್ಯಕ್ತಿಯು ಆ ಸಮಯದಲ್ಲಿ ಯಾರನ್ನು ನಂಬಬೇಕಿತ್ತು? ಯೆರೆಮೀಯನನ್ನೋ ಅಥವಾ ಅವನ ಮಾತುಗಳನ್ನು ಪ್ರತಿರೋಧಿಸಿದ್ದ ಆ ಇತರ ಪ್ರವಾದಿಗಳನ್ನೋ?​—⁠ಯೆರೆಮೀಯ 23:16, 17; 28:1, 2, 10-17.

ಯಾರ ಮಾತು ಸರಿಯೆಂಬದನ್ನು ತಿಳಿದುಕೊಳ್ಳಲಿಕ್ಕಾಗಿ ಪ್ರಾಮಾಣಿಕ ಮನಸ್ಸಿನ ಯೆಹೂದ್ಯರು ಯೆಹೋವನನ್ನು ಒಬ್ಬ ವ್ಯಕ್ತಿಯಾಗಿ ತಿಳಿದುಕೊಳ್ಳಬೇಕಿತ್ತು. ಅವರು ಆತನ ನಿಯಮಗಳನ್ನೂ ಮೂಲತತ್ತ್ವಗಳನ್ನೂ ಹಾಗೂ ತಪ್ಪನ್ನು ಆತನು ವೀಕ್ಷಿಸುವ ವಿಧವನ್ನೂ ಅರ್ಥಮಾಡಿಕೊಳ್ಳಬೇಕಿತ್ತು. ಹಾಗೆ ಮಾಡುತ್ತಿದ್ದರೆ, “ಯಾವನೂ ತನ್ನ ಅಧರ್ಮದ ವಿಷಯವಾಗಿ ಪಶ್ಚಾತ್ತಾಪ” ಪಡದೇ ಇದ್ದಾನೆಂದು ದೇವರು ಯೆರೆಮೀಯನ ಮೂಲಕ ಹೇಳಿದ ಮಾತುಗಳನ್ನು ಅವರು ಒಪ್ಪಿಕೊಳ್ಳುತ್ತಿದ್ದರು. (ಯೆರೆಮಿಯ 8:​5-7) ಈ ದುಃಖಕರ ಸನ್ನಿವೇಶವು ಯೆರೂಸಲೇಮಿಗಾಗಲಿ ಅದರ ನಿವಾಸಿಗಳಿಗಾಗಲಿ ಹಿತಕರ​ವಾಗಿರಲಿಲ್ಲವೆಂದು ಅವರು ವಿವೇಚಿಸಿಕೊಳ್ಳುತ್ತಿದ್ದರು.​—⁠ಧರ್ಮೋಪದೇಶಕಾಂಡ 28:​15-68; ಯೆರೆಮೀಯ 52:​4-14.

ಯೆರೂಸಲೇಮಿನ ಕುರಿತಾಗಿ ಯೆರೆಮೀಯನು ನುಡಿದ ಪ್ರವಾದನೆಗಳು ಸತ್ಯವಾಗಿ ನೆರವೇರಿದವು. ಸಾ.ಶ.ಪೂ. 607 ರಲ್ಲಿ ಆ ಪಟ್ಟಣವನ್ನು ಬಾಬೆಲಿನವರು ನೆಲಸಮಮಾಡಿದರು.

ಅವಿಧೇಯತೆಯ ಕೆಟ್ಟ ಫಲಿತಾಂಶಗಳನ್ನು ಬಹಳ ಹಿಂದೆಯೇ ಮುಂತಿಳಿಸಲಾಗಿತ್ತಾದರೂ, ದೇವರು ಕ್ರಮಕೈಕೊಳ್ಳುವ ಸಮಯ ಬಂದಿತ್ತೆಂಬುದನ್ನು ಮನಗಾಣಲು ಪ್ರಯತ್ನದ ಅಗತ್ಯವಿತ್ತು.

ಕ್ರೈಸ್ತ ಸತ್ಯವು ದೇವರ ಸಂದೇಶವೋ?

ಯೇಸು ಕ್ರಿಸ್ತನಿಂದ ಘೋಷಿಸಲಾದ ಸತ್ಯದ ಕುರಿತೇನು? ಅದು ದೇವರಿಂದ ಬಂದ ಸಂದೇಶವೆಂದು ಎಲ್ಲರೂ ಅಂಗೀಕರಿಸಿದರೋ? ಇಲ್ಲ. ಯೇಸು ಅಲ್ಲಿ ಇಸ್ರಾಯೇಲ್‌ ಜನರ ಮಧ್ಯದಲ್ಲೇ ಇದ್ದು ಅವರಿಗೆ ಬೋಧಿಸುತ್ತಾ ಅದ್ಭುತಗಳನ್ನು ನಡಿಸುತ್ತಾ ಇದ್ದಾಗ್ಯೂ, ಅವನಿಗೆ ಕಿವಿಗೊಡುತ್ತಿದ್ದ ಅನೇಕರು ಅವನೇ ಮುಂತಿಳಿಸಲ್ಪಟ್ಟ ಮೆಸ್ಸೀಯನಾದ ಕ್ರಿಸ್ತನು ಅಥವಾ ಅಭಿಷಿಕ್ತನು ಎಂದು ಅರಿತುಕೊಳ್ಳಲಿಲ್ಲ.

ದೇವರ ರಾಜ್ಯವು ಯಾವಾಗ ಬರಲಿತ್ತೆಂದು ಪ್ರಶ್ನಿಸಿದ ಫರಿಸಾಯರಿಗೆ ಯೇಸು ತಾನೇ ಹೇಳಿದ್ದು: “ದೇವರ ರಾಜ್ಯವು ಗಮನ ಸೆಳೆಯುವಷ್ಟು ಪ್ರತ್ಯಕ್ಷವಾಗಿ ಬರುವಂಥದ್ದಲ್ಲ.” ಅವನು ಮತ್ತೂ ಹೇಳಿದ್ದು: “ದೇವರ ರಾಜ್ಯವು ನಿಮ್ಮ ಮಧ್ಯೆಯೇ ಇದೆ.” (ಲೂಕ 17:20, 21, NW) ಆ ಮಾತು ದೇವರ ನೇಮಿತ ಅರಸನಾದ ಯೇಸುವು ಅಲ್ಲಿ ಅವರೊಂದಿಗೇ ಇದ್ದನು ಎಂದು ಸೂಚಿಸಿತು. ಆದರೂ ಆತನು ಮೆಸ್ಸೀಯನ ಪ್ರವಾದನೆಗಳನ್ನು ನೆರವೇರಿಸುತ್ತಿದ್ದಾನೆಂಬ ಪುರಾವೆಗಳನ್ನು ಅಂಗೀಕರಿಸಲು ಮತ್ತು “ಬರಬೇಕಾಗಿರುವ ಕ್ರಿಸ್ತನು, ಜೀವಸ್ವರೂಪನಾದ ದೇವರ ಕುಮಾರನು” ಅವನೆಂದು ಸ್ವೀಕರಿಸಲು ಆ ಫರಿಸಾಯರು ನಿರಾಕರಿಸಿದರು.​—⁠ಮತ್ತಾಯ 16:⁠16.

ಮೊದಲನೆ ಶತಮಾನದಲ್ಲಿದ್ದ ಕ್ರಿಸ್ತನ ಶಿಷ್ಯರು ಸಾರಿದ ಸತ್ಯಕ್ಕೆ ಜನರು ತೋರಿಸಿದ ಪ್ರತಿಕ್ರಿಯೆಯು ಸಹ ಅದೇ ರೀತಿಯದ್ದಾಗಿತ್ತು. ಆ ಶಿಷ್ಯರು ನಡಿಸಿದ್ದ ಅದ್ಭುತ ಕ್ರಿಯೆಗಳು ದೇವರು ಅವರನ್ನು ಬೆಂಬಲಿಸುತ್ತಿದ್ದಾನೆಂದು ತೋರಿಸಿದರೂ, ಹೆಚ್ಚಿನವರು ಸತ್ಯವನ್ನು ಸ್ಪಷ್ಟವಾಗಿ ಇನ್ನೂ ಅಂಗೀಕರಿಸಿರಲಿಲ್ಲ. (ಅ. ಕೃತ್ಯಗಳು 8:1-8; 9:32-41) ಜನರಿಗೆ ಬೋಧಿಸಿ ಅವರನ್ನು “ಶಿಷ್ಯರನ್ನಾಗಿ ಮಾಡಿರಿ” ಎಂದು ಯೇಸು ತನ್ನ ಹಿಂಬಾಲಕರಿಗೆ ಆಜ್ಞಾಪಿಸಿದ್ದನು. ಸತ್ಯಕ್ಕಾಗಿ ಹುಡುಕುತ್ತಿದ್ದ ಪ್ರಾಮಾಣಿಕ ಜನರು ಶಾಸ್ತ್ರಾಧಾರಿತ ಸತ್ಯಕ್ಕೆ ಕಿವಿಗೊಟ್ಟು ಕಲಿಯುವ ಮೂಲಕ ನಂಬುವವರಾದರು.​—⁠ಮತ್ತಾಯ 28:19; ಅ. ಕೃತ್ಯಗಳು 5:42; 17:2-4, 32-34.

ಇಂದು ಸಹ ಅದೇ ರೀತಿ ಇದೆ. “ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ” ಸಾರಲ್ಪಡುತ್ತಾ ಇದೆ. (ಮತ್ತಾಯ 24:14) ಅದನ್ನು ದೇವರ ಸಂದೇಶವೆಂದು ಭೂಮಿಯ ಪ್ರತಿಯೊಬ್ಬನು ಅರಿತುಕೊಳ್ಳುವಂತೆ ಇಂದ್ರಿಯಗೋಚರವಾಗಿ ಅಂದರೆ ‘ಗಮನ ಸೆಳೆಯುವಷ್ಟು ಪ್ರತ್ಯಕ್ಷವಾಗಿ’ ನಡಿಸುವ ಅಗತ್ಯವೇನಿಲ್ಲ. ಆದರೂ ದೇವರ ಸತ್ಯವನ್ನು ಗುರುತಿಸಲು ಸಾಧ್ಯವಿದೆ. ದೇವರನ್ನು ಆತನು ಒಪ್ಪುವ ರೀತಿಯಲ್ಲಿ ಆರಾಧಿಸ ಬಯಸುವ ಪ್ರಾಮಾಣಿಕ ಜನರಲ್ಲಿ ರಾಜ್ಯದ ಸಂದೇಶವು ಮೆಚ್ಚಿನ ಪ್ರತಿಕ್ರಿಯೆಯನ್ನು ಹುಟ್ಟಿಸುತ್ತದೆ.​—⁠ಯೋಹಾನ 10:4, 27.

ಬೈಬಲಿನ ಕುರಿತ ಈ ಪತ್ರಿಕೆಯನ್ನು ನೀವು ಓದುತ್ತಿದ್ದೀರಿ ಎಂಬ ನಿಜತ್ವವು ತಾನೇ ನೀವು ಯಥಾರ್ಥ ಸತ್ಯಾನ್ವೇಷಿಗಳಾಗಿರಬಹುದು ಎಂಬುದನ್ನು ತೋರಿಸುತ್ತದೆ. ಯಾವ ಧರ್ಮವು ಸತ್ಯವನ್ನು ಕಲಿಸುತ್ತದೆಂದು ನೀವು ಹೇಗೆ ನಿರ್ಧರಿಸಬಲ್ಲಿರಿ?

ಅದನ್ನು ಗುರುತಿಸುವ ಸಫಲ ವಿಧಾನ

ಒಂದನೆಯ ಶತಮಾನದ ಬೆರೋಯದ ನಿವಾಸಿಗಳಿಗೆ ಅಪೊಸ್ತಲ ಪೌಲನು ಕಲಿಸಿದಾಗ ಅವರು ತೋರಿಸಿದ ಪ್ರತಿಕ್ರಿಯೆಗಾಗಿ ಅವರನ್ನು ಶ್ಲಾಘಿಸಿದನು. ಪೌಲನು ತಿಳಿಸಿದ ಸಂಗತಿಯು ಸತ್ಯವೆಂದು ಆ ಕೂಡಲೇ ಅವರು ಸ್ವೀಕರಿಸಲಿಲ್ಲ. ಆದರೂ ಅವರು ಆದರಪೂರ್ವಕವಾಗಿ ಕಿವಿಗೊಟ್ಟರು. ಸಂದೇಶಕ್ಕೆ ಕಿವಿಗೊಟ್ಟ ಮೇಲೆ ಆ ಬೆರೋಯದವರು ಏನು ಮಾಡಿದರೋ ಅದರಿಂದ ನಾವು ಕಲಿತುಕೊಳ್ಳಬಲ್ಲೆವು.

ಬೈಬಲು ಅದನ್ನು ವಿವರಿಸುವದನ್ನು ಗಮನಿಸಿರಿ: “ಆ ಸಭೆಯವರು ಥೆಸಲೋನಿಕದವರಿಗಿಂತ ಸದ್ಗುಣವುಳ್ಳವರಾಗಿದ್ದು ದೇವರ ವಾಕ್ಯವನ್ನು ಸಿದ್ಧಮನಸ್ಸಿನಿಂದ ಅಂಗೀಕರಿಸಿ ಇವರು ಹೇಳುವ ಮಾತು ಹೌದೋ ಏನೋ ಎಂಬ ವಿಷಯದಲ್ಲಿ ಪ್ರತಿದಿನವೂ ಶಾಸ್ತ್ರಗ್ರಂಥಗಳನ್ನು ಶೋಧಿಸುತ್ತಿದ್ದರು. ಹೀಗಿರಲಾಗಿ ಅವರಲ್ಲಿ ಬಹಳ ಮಂದಿ ನಂಬಿದರು.” (ಅ. ಕೃತ್ಯಗಳು 17:10-12) ಹೀಗೆ ಅವರ ಹುಡುಕಾಟವು ಮೇಲುಮೇಲಿನದ್ದಾಗಿರದೆ ಆಳವಾಗಿತ್ತು. ಪೌಲನೊಂದಿಗೆ ಮಾಡಿದ ಕೇವಲ ಒಂದೆರಡು ಚಿಕ್ಕ ಚರ್ಚೆಗಳಿಂದಾಗಿಯೇ ನಿರ್ಣಾಯಕ ತೀರ್ಮಾನಗಳನ್ನು ಅವರು ಮಾಡಲಿಲ್ಲ.

ಬೆರೋಯದವರು ‘ದೇವರ ವಾಕ್ಯವನ್ನು ಸಿದ್ಧಮನಸ್ಸಿನಿಂದ ಅಂಗೀಕರಿಸಿದರು’ ಎಂಬುದನ್ನೂ ಗಮನಿಸಿರಿ. ಅವರು ಶಾಸ್ತ್ರಗ್ರಂಥದ ತಮ್ಮ ಅಧ್ಯಯನವನ್ನು ಯಾವ ಮನೋಭಾವದಿಂದ ಪರಿಗಣಿಸಿದರೆಂಬುದರ ಕುರಿತು ಇದು ನಮಗೆ ಏನನ್ನೋ ತಿಳಿಸುತ್ತದೆ. ಪೌಲನು ಹೇಳಿದ ಎಲ್ಲವನ್ನು ಯಾವ ಪ್ರಶ್ನೆಗಳನ್ನೂ ಹಾಕದೆ ಅವರು ಸುಲಭವಾಗಿ ನಂಬಿಬಿಡಲಿಲ್ಲ ಮಾತ್ರವಲ್ಲ ಅವನು ಹೇಳಿದ ವಿಷಯಗಳೆಲ್ಲದರ ಕುರಿತು ಯಾವ ಯೋಚನೆಯನ್ನೂ ಮಾಡದೆ ತಿರಸ್ಕರಿಸಿಯೂ ಬಿಡಲಿಲ್ಲ. ಮಾನವ ಪ್ರತಿನಿಧಿಯಾಗಿ ದೇವರ ಸಂದೇಶವನ್ನು ತಿಳಿಸುತ್ತಿದ್ದ ಪೌಲನ ಮಾತುಗಳನ್ನು ಅವರು ಟೀಕಾತ್ಮಕ ದೃಷ್ಟಿಯಿಂದ ನೋಡಲೂ ಇಲ್ಲ.

ಇದನ್ನು ಸಹ ಪರಿಗಣಿಸಿರಿ: ಬೆರೋಯದವರು ಕ್ರೈಸ್ತತ್ವದ ಕುರಿತು ಕೇಳಿಸಿಕೊಂಡದ್ದು ಅದು ಮೊತ್ತಮೊದಲ ಸಾರಿ. ಅದು ಕೇಳಿಸಿಕೊಳ್ಳಲು ತೀರ ಚೆನ್ನಾಗಿತ್ತು, ಎಷ್ಟು ಚೆನ್ನಾಗಿತ್ತೆಂದರೆ ಪ್ರಾಯಶಃ ನಂಬಲೂ ಕಷ್ಟಕರ. ಆದರೆ ಅದನ್ನು ತಿರಸ್ಕರಿಸಿಬಿಡುವ ಬದಲಿಗೆ ಅವರು ಜಾಗರೂಕತೆಯಿಂದ ಶಾಸ್ತ್ರಗ್ರಂಥವನ್ನು ಪರೀಕ್ಷಿಸಿದರು. ‘ಪೌಲನು ಹೇಳುವ ಮಾತು ಹೌದೋ ಏನೋ ಎಂಬ ವಿಷಯವನ್ನು’ ಅವರು ಪರಿಶೀಲಿಸಿ ನೋಡಿದರು. ಅಂಥ ಪೂರ್ಣ ಪರಿಶೀಲನೆಯನ್ನು ಮಾಡಿದ ಬಳಿಕ ಬೆರೋಯದ ಹಾಗೂ ಥೆಸಲೋನಿಕದ ಆ ಜನರು ನಂಬುವವರಾದರೆಂಬುದನ್ನೂ ಗಮನಿಸಿರಿ. (ಅ. ಕೃತ್ಯಗಳು 17:​4, 12) ಅವರು ಬಿಟ್ಟುಕೊಡಲಿಲ್ಲ. ಸತ್ಯವನ್ನು ಕಂಡುಕೊಳ್ಳಲು ಸಾಧ್ಯವೇ ಇಲ್ಲ ಎಂದು ತೀರ್ಮಾನಿಸಲಿಲ್ಲ. ಅವರು ಸತ್ಯ ಧರ್ಮವನ್ನು ಗುರುತಿಸಿದರು.

ಸತ್ಯವು ಜನರನ್ನು ಪ್ರಭಾವಿಸುವ ವಿಧ

ಬೆರೋಯದವರಂತೆ, ವ್ಯಕ್ತಿಯೊಬ್ಬನಿಗೆ ಸತ್ಯವು ಸಿಕ್ಕಿದಾಗ ಅವನು ಅದನ್ನು ಉತ್ಸಾಹದಿಂದ ಇತರರಿಗೆ ತಿಳಿಸಲು ಪ್ರಚೋದಿಸಲ್ಪಡುತ್ತಾನೆ. ಬೇರೆಯವರಾದರೋ ಅವನು ಸತ್ಯದ ಕುರಿತು ಇತರರಿಗೆ ತಿಳಿಸುವುದನ್ನು ಇಷ್ಟಪಡಲಿಕ್ಕಿಲ್ಲ. ಬೇರೆ ಧರ್ಮಗಳೂ ಸರಿಸಮವಾಗಿ ಸತ್ಯವಾಗಿರಸಾಧ್ಯವಿದೆ ಎಂದು ನೆನಸುವುದು ಅತಿ ದೈನ್ಯತೆಯೆಂದವರ ಮತ. ಆದರೂ ಬೈಬಲ್‌ ಸತ್ಯವನ್ನು ಒಮ್ಮೆ ಕಂಡುಕೊಂಡೆವೆಂದರೆ ಅದು ನಮ್ಮಲ್ಲಿ ದೃಢವಿಶ್ವಾಸವನ್ನು ಬೇರೂರಿಸುವುದಂತೂ ಖಂಡಿತ. ಸತ್ಯವು ಲಭಿಸಸಾಧ್ಯವಿದೆಯೇ ಅಥವಾ ಎಲ್ಲಾ ಧರ್ಮಗಳೂ ರಕ್ಷಣೆಗೆ ನಡಿಸುತ್ತವೆಯೇ ಎಂಬ ವಿಷಯದಲ್ಲಿ ಅದು ಯಾವ ಸಂದೇಹಕ್ಕೂ ಎಡೆಗೊಡುವುದಿಲ್ಲ. ಸತ್ಯವನ್ನು ಕಂಡುಕೊಳ್ಳುವುದು ಶ್ರದ್ಧೆಯುಳ್ಳ ಪರಿಶೀಲನೆಯಿಂದ ಆರಂಭವಾಗುತ್ತದೆ. ಆದರೆ ದೈನ್ಯತೆಯು ಅತ್ಯಾವಶ್ಯಕ.

ಯೆಹೋವನ ಸಾಕ್ಷಿಗಳು ಅಂಥ ಒಂದು ಪರೀಕ್ಷೆಯನ್ನು ಮಾಡಿರುತ್ತಾರೆ. ಆದುದರಿಂದಲೇ ಸತ್ಯ ಧರ್ಮವನ್ನು ಕಂಡುಕೊಂಡಿದ್ದೇವೆಂದು ಅವರು ನಂಬುತ್ತಾರೆ. ಇಂದು ಸತ್ಯ ಧರ್ಮವನ್ನು ಯಾರು ಪಾಲಿಸುತ್ತಿದ್ದಾರೆಂದು ಗುರುತಿಸಲು ಶಾಸ್ತ್ರಗ್ರಂಥವನ್ನು ಪರೀಕ್ಷಿಸುವಂತೆ ಅವರು ನಿಮ್ಮನ್ನು ಆಮಂತ್ರಿಸುತ್ತಾರೆ. ಪರಿಗಣಿಸಲಿಕ್ಕಾಗಿ ಕೇವಲ ವಿಷಯಗಳ ಪರೀಕ್ಷಕ ಪಟ್ಟಿಗಿಂತ ಹೆಚ್ಚಿನದ್ದು ಬೇಕಿದ್ದರೂ, ಒಂದನೆಯ ಶತಮಾನದ ಕ್ರೈಸ್ತರ ಕುರಿತು ಇದೇ ಪುಟದ ಚೌಕದಲ್ಲಿ ಕೊಡಲಾದ ವಿಷಯವು ನಿಮಗೆ ಆರಂಭದ ಹೆಜ್ಜೆಯನ್ನಿಡಲು ನೆರವಾಗಬಲ್ಲದು.

ಯೆಹೋವನ ಸಾಕ್ಷಿಗಳೊಂದಿಗೆ ಒಂದು ಉಚಿತ ಬೈಬಲ್‌ ಅಧ್ಯಯನವನ್ನು ಸ್ವೀಕರಿಸುವ ಮೂಲಕ, ಬೈಬಲ್‌ ನಿಜವಾಗಿಯೂ ಏನನ್ನು ಕಲಿಸುತ್ತದೆಂಬ ವಿಷಯದ ಗಾಢಾಭ್ಯಾಸವನ್ನು ನೀವು ಮಾಡಬಹುದು. ಅದನ್ನು ಕಲಿಯುವುದರಿಂದಾಗಿ ಸತ್ಯ ಧರ್ಮವನ್ನು ಗುರುತಿಸಲು ನೀವು ಶಕ್ತರಾಗುವಿರಿ. (g 3/08)

[ಪುಟ 27ರಲ್ಲಿರುವ ಚೌಕ]

ಸತ್ಯ ಧರ್ಮದ ವೈಶಿಷ್ಟ್ಯಗಳು

ಒಂದನೆಯ ಶತಮಾನದ ಕ್ರೈಸ್ತರ ಆಚರಣೆಗಳನ್ನು ಮತ್ತು ಬೋಧಗಳನ್ನು ಪರಿಗಣಿಸಿ:

ಅವರಿಗೆ ದೇವರ ವಾಕ್ಯವು ಮಾರ್ಗದರ್ಶಕವಾಗಿತ್ತು.​—⁠2 ತಿಮೊಥೆಯ 3:16; 2 ಪೇತ್ರ 1:⁠21.

ಯೇಸು, ದೇವರ ಮಗನೂ ದೇವರಿಂದ ಪ್ರತ್ಯೇಕವಾದ ವ್ಯಕ್ತಿಯೂ ಆತನಿಗೆ ಅಧೀನನೂ ಆಗಿದ್ದನೆಂದು ಬೋಧಿಸಿದರು.​—⁠1 ಕೊರಿಂಥ 11:3; 1 ಪೇತ್ರ 1:⁠3.

ಭವಿಷ್ಯತ್ತಿನಲ್ಲಾಗುವ ಒಂದು ಪುನರುತ್ಥಾನದ ಮೂಲಕ ಸತ್ತವರು ಜೀವಿತರಾಗಿ ಎದ್ದುಬರುವರೆಂದು ಅವರು ಕಲಿಸಿದರು.​—⁠ಅ. ಕೃತ್ಯಗಳು 24:⁠15.

ಅವರ ನಡುವೆ ಅಸ್ತಿತ್ವದಲ್ಲಿದ್ದ ಪರಸ್ಪರ ಪ್ರೀತಿಗಾಗಿ ಅವರು ಪ್ರಖ್ಯಾತರಾಗಿದ್ದರು.​—⁠ಯೋಹಾನ 13:​34, 35.

ಅವರು ಕೇವಲ ವ್ಯಕ್ತಿಪರರಾಗಿ ಆರಾಧನೆ ನಡಿಸದೆ ಸಭೆಗಳಾಗಿ ಸಂಘಟಿಸಲ್ಪಟ್ಟಿದ್ದು, ಯೇಸುವನ್ನು ಶಿರಸ್ಸಾಗಿ ಗೌರವಿಸಿದ ಮೇಲ್ವಿಚಾರಕರ ಹಾಗೂ ಒಂದು ಕೇಂದ್ರಿತ ಹಿರಿಯ ಮಂಡಳಿಯ ಕೆಳಗೆ ಐಕ್ಯರಾಗಿದ್ದರು.​—⁠ ಅ. ಕೃತ್ಯಗಳು 14:21-23; 15:1-31; ಎಫೆಸ 1:22; 1 ತಿಮೊಥೆಯ 3:1-13.

ದೇವರ ರಾಜ್ಯ ಮಾನವರ ಏಕಮಾತ್ರ ನಿರೀಕ್ಷೆಯೆಂದು ಅವರು ಹುರುಪಿನಿಂದ ಸಾರುವವರಾಗಿದ್ದರು. ​—⁠ಮತ್ತಾಯ 24:14; 28:19, 20; ಅ. ಕೃತ್ಯಗಳು 1:⁠8.

[ಪುಟ 25ರಲ್ಲಿರುವ ಚಿತ್ರ]

ಯೆರೆಮೀಯನ ಮಾತುಗಳಿಗೆ ಇತರರು ವಿರುದ್ಧ ನುಡಿದಾಗ ಅವನು ಸತ್ಯ ಪ್ರವಾದಿಯೆಂದು ಜನರಿಗೆ ತಿಳಿಯಲು ಹೇಗೆ ಸಾಧ್ಯವಿತ್ತು?

[ಪುಟ 26ರಲ್ಲಿರುವ ಚಿತ್ರ]

ಮೊದಲನೆಯ ಶತಮಾನದ ಬೆರೋಯದವರು ಪೌಲನಿಗೆ ಕಿವಿಗೊಟ್ಟರು, ಆದರೂ ಅವನು ಹೇಳಿದ್ದು ಸರಿಯೋ ಅಲ್ಲವೋ ಎಂದು ನಿಶ್ಚೈಸಲು ಅನಂತರ ಶಾಸ್ತ್ರಗ್ರಂಥವನ್ನು ಪರೀಕ್ಷಿಸಿ ನೋಡಿದರು

[ಪುಟ 27ರಲ್ಲಿರುವ ಚಿತ್ರ]

ಬೈಬಲನ್ನು ಜಾಗರೂಕತೆಯಿಂದ ಪರೀಕ್ಷಿಸುವದರಿಂದ ಧಾರ್ಮಿಕ ಸತ್ಯವನ್ನು ಗುರುತಿಸಲು ನಿಮಗೆ ಸಹಾಯವಾಗಬಲ್ಲದು