ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕಡೇ ದಿವಸಗಳು ಅನಂತರ ಏನು?

ಕಡೇ ದಿವಸಗಳು ಅನಂತರ ಏನು?

ಕಡೇ ದಿವಸಗಳು ಅನಂತರ ಏನು?

“ಕಡೇ ದಿವಸಗಳ” ಬಗ್ಗೆ ನೆನಸಿದರೇ ಕೆಲವರಿಗೆ ಭಯ. (2 ತಿಮೊಥೆಯ 3:1) ಏಕೆಂದರೆ ಆ ಕಾಲ ಕಠಿನವಾಗಿರುವುದು ಎಂಬದನ್ನು ಬಿಟ್ಟು ಇನ್ನೇನೂ ಅವರ ಮನಸ್ಸಿಗೆ ಬರುವುದಿಲ್ಲ. ಹಾಗಾದರೆ ಹಲವಾರು ಶತಮಾನಗಳಿಂದ ಎಷ್ಟೋ ಜನರು ಅದಕ್ಕಾಗಿ ಕಾದಿರುವುದಾದರೂ ಏಕೆ? ಏಕೆಂದರೆ, ಒಳ್ಳೇ ಸಮಯ ಬರಲಿದೆ ಎಂಬದನ್ನೂ ಈ ಕಡೇ ದಿವಸಗಳು ಸೂಚಿಸುತ್ತವೆ.

ಉದಾಹರಣೆಗೆ ಸರ್‌ ಐಸಾಕ್‌ ನ್ಯೂಟನ್‌ರಿಗೆ, ಅಂತ್ಯಕಾಲದ ನಂತರ ದೇವರ ರಾಜ್ಯದ ಸಹಸ್ರ ವರ್ಷದ ಆಳ್ವಿಕೆಯಲ್ಲಿ ಜಾಗತಿಕ ಶಾಂತಿ ಹಾಗೂ ಸಮೃದ್ಧಿಯ ಹೊಸ ಯುಗ ಆರಂಭವಾಗುವುದೆಂಬ ನಿಶ್ಚಯವಿತ್ತು. ಆ ಸಮಯದಲ್ಲೇ, ಜನರು “ತಮ್ಮ ಕತ್ತಿಗಳನ್ನು ಕುಲುಮೆಗೆ ಹಾಕಿ ಗುಳಗಳನ್ನಾಗಿಯೂ ಬರ್ಜಿಗಳನ್ನು ಕುಡುಗೋಲುಗಳನ್ನಾಗಿಯೂ ಮಾಡುವರು; ಜನಾಂಗವು ಜನಾಂಗಕ್ಕೆ ವಿರುದ್ಧವಾಗಿ ಕತ್ತಿಯನ್ನೆತ್ತದು, ಇನ್ನು ಯುದ್ಧಾಭ್ಯಾಸವು ನಡೆಯುವದೇ ಇಲ್ಲ” ಎಂಬ ಮೀಕ 4:3 ಮತ್ತು ಯೆಶಾಯ 2:4ರಲ್ಲಿರುವ ಪ್ರವಾದನೆ ನೆರವೇರುವುದೆಂದು ಅವನು ಹೇಳಿದನು.

ಯೇಸು ಅಂತ್ಯಕಾಲದ ಬಗ್ಗೆ ಮಾತಾಡಿದಾಗ ತನ್ನ ಶಿಷ್ಯರು ಸಕಾರಾತ್ಮಕ ಮನೋಭಾವವನ್ನು ಬೆಳೆಸುವಂತೆ ಉತ್ತೇಜಿಸಿದನು. ಮಹಾ ಸಂಕಟದ ಸಮಯದಲ್ಲಿರುವ ಕಷ್ಟ, ವ್ಯಾಕುಲತೆ ಮತ್ತು ಭಯದ ಕುರಿತು ತಿಳಿಸಿದ ಬಳಿಕ ಆತನಂದದ್ದು: “ಇವು ಸಂಭವಿಸುವದಕ್ಕೆ ತೊಡಗುವಾಗ ಮೇಲಕ್ಕೆ ನೋಡಿರಿ, ನಿಮ್ಮ ತಲೆ ಎತ್ತಿರಿ; ನಿಮ್ಮ ಬಿಡುಗಡೆಯು ಸಮೀಪವಾಗಿದೆ.” (ಲೂಕ 21:28) ಯಾವುದರಿಂದ ಬಿಡುಗಡೆ?

ದೇವರ ವಾಗ್ದಾನಗಳು

ಯುದ್ಧ, ಆಂತರಿಕ ಕಲಹ, ಪಾತಕ, ಹಿಂಸಾಚಾರ ಮತ್ತು ಹಸಿವು ಮನುಷ್ಯರನ್ನು ಇಂದು ಕಾಡುತ್ತಿರುವ ಕೆಲವು ಸಮಸ್ಯೆಗಳು. ಲಕ್ಷಾಂತರ ಮಂದಿ ಇವುಗಳ ಭೀತಿಯಿಂದ ಜೀವಿಸುತ್ತಾರೆ. ಈ ಸಮಸ್ಯೆಗಳಲ್ಲಿ ಯಾವುದಾದರೂ ನಿಮ್ಮನ್ನು ಬಾಧಿಸಿದೆಯೋ? ಹಾಗಿರುವಲ್ಲಿ ದೇವರ ಈ ವಾಗ್ದಾನಗಳನ್ನು ಗಮನಿಸಿ:

“ಇನ್ನು ಸ್ವಲ್ಪಕಾಲದೊಳಗೆ ದುಷ್ಟನು ಕಾಣಿಸದೆ ಹೋಗುವನು . . . ಆದರೆ ದೀನರು ದೇಶವನ್ನು ಅನುಭವಿಸುವರು; ಅವರು ಮಹಾಸೌಖ್ಯದಿಂದ ಆನಂದಿಸುವರು.”—ಕೀರ್ತನೆ 37:10, 11.

“ನನ್ನ ಜನರು ಸಮಾಧಾನನಿವಾಸದಲ್ಲಿಯೂ ನಿರ್ಭಯನಿಲಯಗಳಲ್ಲಿಯೂ ನೆಮ್ಮದಿಯ ಆಶ್ರಯಗಳಲ್ಲಿಯೂ ನೆಲೆಗೊಳ್ಳುವರು.”—ಯೆಶಾಯ 32:18.

“ಲೋಕದ ಎಲ್ಲಾ ಭಾಗದಲ್ಲೂ ಯುದ್ಧವನ್ನು [ಯೆಹೋವನು] ನಿಲ್ಲಿಸಿಬಿಟ್ಟಿದ್ದಾನೆ; ಬಿಲ್ಲುಗಳನ್ನೂ ಭಲ್ಲೆಯಗಳನ್ನೂ ಮುರಿದುಹಾಕಿದ್ದಾನೆ; ರಥಗಳನ್ನು ದಹಿಸಿಬಿಟ್ಟಿದ್ದಾನೆ.”—ಕೀರ್ತನೆ 46:9.

“ಒಬ್ಬೊಬ್ಬನು ತನ್ನ ತನ್ನ ದ್ರಾಕ್ಷಾಲತೆ, ಅಂಜೂರಗಿಡ, ಇವುಗಳ ನೆರಳಿನಲ್ಲಿ ಕೂತುಕೊಳ್ಳುವನು; ಅವರನ್ನು ಯಾರೂ ಹೆದರಿಸರು.”—ಮೀಕ 4:4.

‘ದೇಶದಲ್ಲಿ ಬೆಟ್ಟಗಳ ಮೇಲೆಲ್ಲಾ ಬೆಳೆಯು ಸಮೃದ್ಧವಾಗಿರುವುದು.’—ಕೀರ್ತನೆ 72:16.

“ನನ್ನ ಮಾತಿಗೆ ಕಿವಿಗೊಡುವವನಾದರೋ ಸ್ವಸ್ಥವಾಗಿರುತ್ತಾ ಯಾವ ಕೇಡಿಗೂ ಭಯಪಡದೆ ಸುರಕ್ಷಿತನಾಗಿರುವನು.”—ಜ್ಞಾನೋಕ್ತಿ 1:33.

ನಾವು ವಾಸ್ತವ್ಯ ಹೂಡಿರುವ ಪ್ರದೇಶದಲ್ಲಿ ಸಾಧಾರಣ ಮಟ್ಟಿಗೆ ಶಾಂತಿಭರಿತ ಪರಿಸ್ಥಿತಿ ಇರಬಹುದಾದರೂ ರೋಗ ಮತ್ತು ಮರಣವಂತೂ ಯಾರಿಗೂ ತಪ್ಪಿದ್ದಲ್ಲ. ಆದರೆ ಇದು ಸಹ ದೇವರ ನೂತನ ಲೋಕದಲ್ಲಿ ಇಲ್ಲದೆ ಹೋಗುವುದು. ಮೃತರಾದ ನಮ್ಮ ಪ್ರಿಯ ಜನರು ಪುನಃ ಜೀವಿತರಾಗುವುದನ್ನೂ ನಾವು ನೋಡಬಲ್ಲೆವು. ಈ ಕೆಳಗಿನ ವಾಗ್ದಾನಗಳನ್ನು ಗಮನಿಸಿ:

“ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು.”—ಯೆಶಾಯ 33:24.

“ಅವರ ಕಣ್ಣೀರನ್ನೆಲ್ಲಾ [ದೇವರು] ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು.”—ಪ್ರಕಟನೆ 21:4.

“ಮರಣವು ಕಡೇ ಶತ್ರುವಾಗಿ ನಿವೃತ್ತಿಯಾಗುವದು.”—1 ಕೊರಿಂಥ 15:26.

“ಸಮಾಧಿಗಳಲ್ಲಿರುವವರೆಲ್ಲರು ಆತನ [ಯೇಸುವಿನ] ಧ್ವನಿಯನ್ನು ಕೇಳಿ ಎದ್ದು ಹೊರಗೆ ಬರುವ ಕಾಲ ಬರುತ್ತದೆ.”—ಯೋಹಾನ 5:28, 29.

ಇದೆಲ್ಲವನ್ನು ಅಪೊಸ್ತಲ ಪೇತ್ರನು ಕೆಲವೇ ಮಾತುಗಳಲ್ಲಿ ಸೊಗಸಾಗಿ ಹೇಳಿಬಿಡುತ್ತಾನೆ. ಅವನು ಬರೆದದ್ದು: “ನಾವು ದೇವರ ವಾಗ್ದಾನವನ್ನು ನಂಬಿ ನೂತನಾಕಾಶಮಂಡಲವನ್ನೂ ನೂತನಭೂಮಂಡಲವನ್ನೂ ಎದುರುನೋಡುತ್ತಾ ಇದ್ದೇವೆ; ಅವುಗಳಲ್ಲಿ ನೀತಿಯು ವಾಸವಾಗಿರುವದು.” (2 ಪೇತ್ರ 3:13) ನೀತಿಯು ಭೂವ್ಯಾಪಕವಾಗಿ ಇರಬೇಕಾದರೆ ಅದನ್ನು ಭಂಗಪಡಿಸಲು ಪ್ರಯತ್ನಿಸುವವರನ್ನು ತೆಗೆದುಹಾಕುವುದು ಅವಶ್ಯ. ಸ್ವಾರ್ಥ ಸಾಧನೆಗಾಗಿ ಹಿಂಸೆ ಹಾಗೂ ರಕ್ತಾಪರಾಧವನ್ನು ನಡೆಸುತ್ತಿರುವ ಈಗಿನ ರಾಷ್ಟ್ರಗಳನ್ನೂ ತೆಗೆದುಹಾಕಬೇಕಾಗಿದೆ. ಭೂಮಿಯಲ್ಲಿರುವ ಎಲ್ಲ ಆಡಳಿತಗಳು ಇಲ್ಲವಾಗಿ ಅವುಗಳ ಸ್ಥಾನದಲ್ಲಿ ಕ್ರಿಸ್ತನು ರಾಜನಾಗಿರುವ ದೇವರ ರಾಜ್ಯವು ಆಳ್ವಿಕೆ ನಡೆಸುವುದು. ಆ ಆಳ್ವಿಕೆಯ ಕುರಿತು ನಮಗೆ ಈ ಆಶ್ವಾಸನೆ ಕೊಡಲಾಗಿದೆ: “ಅವನ ಮುಖಾಂತರ ದಾವೀದನ ಸಿಂಹಾಸನದ ಆಡಳಿತವು ಅಭಿವೃದ್ಧಿಯಾಗುವದು, ದಾವೀದನ ರಾಜ್ಯದಲ್ಲಿ ನಿತ್ಯ ಸಮಾಧಾನವಿರುವದು, ಆ ರಾಜ್ಯವು ಇಂದಿನಿಂದ ಯಾವಾಗಲೂ ನೀತಿನ್ಯಾಯಗಳ ಮೂಲಕ ಸ್ಥಾಪಿತವಾಗಿ ಸ್ಥಿರಗೊಳ್ಳುವದು; ಸೇನಾಧೀಶ್ವರನಾದ ಯೆಹೋವನ ಆಗ್ರಹವು ಇದನ್ನು ನೆರವೇರಿಸುವದು.”—ಯೆಶಾಯ 9:7.

ಇಂಥ ಪರಿಸ್ಥಿತಿಯಲ್ಲಿ ನೀವು ಸಹ ಇರಬಲ್ಲಿರಿ. ಅದಕ್ಕಾಗಿಯೇ ಬೈಬಲ್‌ ನಮಗೆ ಈ ಆಶ್ವಾಸನೆ ಕೊಡುತ್ತದೆ: “ಎಲ್ಲಾ ಮನುಷ್ಯರು ರಕ್ಷಣೆಯನ್ನು ಹೊಂದಿ ಸತ್ಯದ ಜ್ಞಾನಕ್ಕೆ ಸೇರಬೇಕೆಂಬದು ಆತನ [ದೇವರ] ಚಿತ್ತವಾಗಿದೆ.” ​(1ತಿಮೊಥೆಯ 2:4) ತಡಮಾಡದೆ ನಿತ್ಯಜೀವಕ್ಕೆ ನಡೆಸಬಲ್ಲ ಜ್ಞಾನವನ್ನು ಪಡೆದುಕೊಳ್ಳಿರಿ. (ಯೋಹಾನ 17:3) ಮೊತ್ತಮೊದಲಾಗಿ ಈ ಪತ್ರಿಕೆಯ ಪ್ರಕಾಶಕರನ್ನು ಸಂಪರ್ಕಿಸಿ, ನಿಮಗೆ ಮನೆಯಲ್ಲಿಯೇ ಬೈಬಲಿನ ಉಚಿತ ಅಧ್ಯಯನ ಬೇಕೆಂದು ಕೇಳಿಕೊಳ್ಳಿ. (g 4/08)

[ಪುಟ 8, 9ರಲ್ಲಿರುವ ಚಿತ್ರಗಳು]

ಈ ಭೂಮಿಯಲ್ಲೇ ಬರಲಿರುವ ಪರದೈಸಿನಲ್ಲಿ ಶಾಂತಿ ಹಾಗೂ ಪರಿಪೂರ್ಣ ಆರೋಗ್ಯದಿಂದ ಸದಾಕಾಲ ಜೀವಿಸಲು ನೀವು ಎದುರುನೋಡಬಲ್ಲಿರಿ