ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕಡೇ ದಿವಸಗಳು ಯಾವಾಗ?

ಕಡೇ ದಿವಸಗಳು ಯಾವಾಗ?

ಕಡೇ ದಿವಸಗಳು ಯಾವಾಗ?

“ನೂರು ಕೋಟಿ ವರ್ಷಗಳ ನಂತರ ಭೂಮಿಯು ಸಂಪೂರ್ಣವಾಗಿ ಬೆಂದು, ಬರಡಾಗಿ, ಮರುಭೂಮಿಯಾಗಲಿದೆ. ಆಗ ಬಹುಕೋಶೀಯ ಜೀವಿಗಳು ಹೇಗೆ ಬದುಕಿ ಉಳಿಯುವವೋ ಗೊತ್ತಿಲ್ಲ” ಎಂದು ಸ್ಕೈ ಆ್ಯಂಡ್‌ ಟೆಲಿಸ್ಕೋಪ್‌ ಎಂಬ ಪತ್ರಿಕೆಯ ಇತ್ತೀಚಿನ ಸಂಚಿಕೆ ತಿಳಿಸುತ್ತದೆ. ಹೀಗೇಕೆ ಆಗುವುದಂತೆ? “ಸೂರ್ಯನು ಹೆಚ್ಚು ತೀಕ್ಷ್ಣವಾಗಿ ಉರಿಯುವುದರಿಂದ ಸಮುದ್ರಗಳು ಕುದಿಯುವವು ಮತ್ತು ಭೂಖಂಡಗಳು ಬೆಂದುಹೋಗುವವು” ಎಂದು ಎಸ್ಟ್ರೋನಮಿ ಪತ್ರಿಕೆ ಹೇಳುತ್ತದೆ. ಅದು ಮುಂದುವರಿಸುವುದು: “ಈ ಬೀಭತ್ಸ ದೃಶ್ಯವು ಕಹಿಯಾದ ಸತ್ಯಾಂಶವಾಗಿದೆ ಮಾತ್ರವಲ್ಲ ತಪ್ಪಿಸಲಾಗದ ನಮ್ಮ ಅಂತ್ಯಾವಸ್ಥೆಯೂ ಆಗಿದೆ.”

ಆದರೆ ಬೈಬಲ್‌ ತಿಳಿಸುವುದು: ‘ಭೂಮಿಯು ಯುಗಯುಗಾಂತರಕ್ಕೂ ಕದಲದ ಹಾಗೆ [ದೇವರು] ಅದನ್ನು ದೃಢವಾದ ಅಸ್ತಿವಾರದ ಮೇಲೆ ಸ್ಥಾಪಿಸಿದ್ದಾನೆ.’ (ಕೀರ್ತನೆ 104:5) ಭೂಮಿ ಸದಾ ಅಸ್ತಿತ್ವದಲ್ಲಿರುವಂತೆ ನೋಡಿಕೊಳ್ಳಲು ಸೃಷ್ಟಿಕರ್ತನು ಖಂಡಿತ ಸಮರ್ಥನು. ನಿಜ ಏನೆಂದರೆ ಆತನು ಅದನ್ನು “ಜನನಿವಾಸಕ್ಕಾಗಿಯೇ ರೂಪಿಸಿದನು.” (ಯೆಶಾಯ 45:18) ಆದರೆ ಅದರಲ್ಲಿ ದುಷ್ಟ ಹಾಗೂ ಮರ್ತ್ಯ ಮಾನವರು ವಾಸಿಸಬೇಕೆಂಬದು ಆತನ ಉದ್ದೇಶವಾಗಿರಲಿಲ್ಲ. ಆದುದರಿಂದ ದೇವರು, ತನ್ನ ಆಡಳಿತದ ಪುನಃಸ್ಥಾಪನೆಗೆಂದು ಒಂದು ಸಮಯವನ್ನು ಗೊತ್ತುಪಡಿಸಿದನು. ದಾನಿಯೇಲ 2:44ರಲ್ಲಿ ತಿಳಿಸಲಾಗಿರುವ ರಾಜ್ಯದ ಮೂಲಕ ಇದನ್ನು ಮಾಡಲು ಆತನು ನಿಶ್ಚಯಿಸಿದನು.

ಯೇಸು ಕ್ರಿಸ್ತನು ದೇವರ ರಾಜ್ಯದ ಕುರಿತು ಎಲ್ಲರಿಗೆ ತಿಳಿಸಿದನು. ಜನಾಂಗಗಳ ಮತ್ತು ಜನರ ನ್ಯಾಯತೀರ್ಪಾಗುವ ಸಮಯದ ಬಗ್ಗೆ ಆತನು ಮಾತಾಡಿದನು. ಅಷ್ಟರವರೆಗೆ ಲೋಕವು ಅನುಭವಿಸಿರದಂಥ ಒಂದು ಮಹಾ ಸಂಕಟದ ಕುರಿತು ಆತನು ಎಚ್ಚರಿಸಿದನು. ಅಲ್ಲದೆ ಈ ದುಷ್ಟ ವ್ಯವಸ್ಥೆಯ ಅಂತ್ಯ ಯಾವಾಗ ಸಂಭವಿಸುವುದೆಂಬದನ್ನು ಗುರುತಿಸಲು ಒಂದು ಸೂಚನೆಯನ್ನು ಕೊಟ್ಟನು. ಈ ಸೂಚನೆಯಲ್ಲಿ ಅನೇಕ ಅಂಶಗಳಿವೆ.—ಮತ್ತಾಯ 9:35; ಮಾರ್ಕ 13:19; ಲೂಕ 21:7-11; ಯೋಹಾನ 12:31.

ಇಂಥ ವಿಷಯಗಳ ಕುರಿತು ಮಹಾನ್‌ ವ್ಯಕ್ತಿಯಾದ ಯೇಸುವೇ ತಿಳಿಸಿರುವುದರಿಂದ ಅನೇಕ ಜನರು ಅವುಗಳ ಬಗ್ಗೆ ಯೋಚಿಸಲಾರಂಭಿಸಿದ್ದಾರೆ. ಆತನು ತಿಳಿಸಿದಂಥ ಘಟನೆಗಳು ಯಾವಾಗ ಸಂಭವಿಸಲಿದ್ದವು? ಬೈಬಲಿನ ಪ್ರವಾದನೆಗಳು ಮತ್ತು ಕಾಲಗಣನೆಯನ್ನು ಅಧ್ಯಯನ ಮಾಡುವ ಮೂಲಕ ಕೆಲವರು ಅಂತ್ಯ ಯಾವಾಗ ಬರುವುದೆಂಬದನ್ನು ನಿಖರವಾಗಿ ತಿಳಿದುಕೊಳ್ಳಲು ಪ್ರಯತ್ನಿಸಿದ್ದಾರೆ. ಈ ವಿಷಯದ ಕುರಿತು ಸಂಶೋಧನೆ ಮಾಡಿದವರಲ್ಲಿ, ಗುರುತ್ವಾಕರ್ಷಣಾ ಶಕ್ತಿ ಕಂಡುಹಿಡಿದವನೂ ಕಲನಶಾಸ್ತ್ರದ ಆವಿಷ್ಕಾರ ಮಾಡಿದವನೂ ಆಗಿದ್ದ 17ನೇ ಶತಮಾನದ ಗಣಿತಶಾಸ್ತ್ರಜ್ಞ ಸರ್‌ ಐಸಾಕ್‌ ನ್ಯೂಟನ್‌ ಒಬ್ಬನು.

ಯೇಸು ತನ್ನ ಶಿಷ್ಯರಿಗೆ ಹೀಗಂದಿದ್ದನು: “ತಂದೆಯು ಸ್ವಂತ ಅಧಿಕಾರದಲ್ಲಿಟ್ಟುಕೊಂಡಿರುವ ಕಾಲಗಳನ್ನೂ ಸಮಯಗಳನ್ನೂ ತಿಳುಕೊಳ್ಳುವದು ನಿಮ್ಮ ಕೆಲಸವಲ್ಲ.” (ಅ. ಕೃತ್ಯಗಳು 1:7) ಅಲ್ಲದೆ ಯೇಸು ತನ್ನ ‘ಪ್ರತ್ಯಕ್ಷತೆ ಹಾಗೂ ಯುಗದ ಸಮಾಪ್ತಿಯ’ ಸೂಚನೆ ಕೊಡುತ್ತಿದ್ದಾಗ ಹೇಳಿದ್ದು: “ಆ ದಿನದ ವಿಷಯವೂ ಆ ಗಳಿಗೆಯ ವಿಷಯವೂ ನನ್ನ ತಂದೆಯೊಬ್ಬನಿಗೆ ತಿಳಿಯುವದೇ ಹೊರತು ಮತ್ತಾರಿಗೂ ತಿಳಿಯದು; ಪರಲೋಕದಲ್ಲಿರುವ ದೂತರಿಗೂ ತಿಳಿಯದು, ಮಗನಿಗೂ ತಿಳಿಯದು.” (ಮತ್ತಾಯ 24:3, 36) ಯೇಸು, ನೋಹನ ದಿನದ ದುಷ್ಟರ ನಾಶನವನ್ನು “ಮನುಷ್ಯಕುಮಾರನು ಪ್ರತ್ಯಕ್ಷನಾಗುವ ಕಾಲದಲ್ಲಿ” ಆಗುವ ನಾಶನಕ್ಕೆ ಹೋಲಿಸಿದನು. ತದನಂತರ ಅವನಂದದ್ದು: “ನಿಮ್ಮ ಕರ್ತನು ಬರುವ ದಿನವು ನಿಮಗೆ ಗೊತ್ತಿಲ್ಲವಾದದರಿಂದ ಎಚ್ಚರವಾಗಿರ್ರಿ.”—ಮತ್ತಾಯ 24:39, 42.

ಈ ದುಷ್ಟ ವ್ಯವಸ್ಥೆಗೆ ಅಂತ್ಯ ನಿಖರವಾಗಿ ಯಾವ ಸಮಯದಲ್ಲಿ ಬರುವುದೆಂದು ನಮಗೆ ತಿಳಿಸಲಾಗಿಲ್ಲವಾದರೂ ಯೇಸು ಕೊಟ್ಟ ಸೂಚನೆಯು ‘ಕಡೇ ದಿವಸಗಳು’ ಎಂದು ಕರೆಯಲಾಗುವ ಸಮಯಾವಧಿಯಲ್ಲಿ ನಾವಿದ್ದೇವೆಂದು ತೋರಿಸಿಕೊಡುವುದು. (2 ತಿಮೊಥೆಯ 3:1) ‘ಬರುವದಕ್ಕಿರುವ ಇವೆಲ್ಲವುಗಳೊಳಗಿಂದ ತಪ್ಪಿಸಿಕೊಳ್ಳಲು’ ನಾವು ‘ಎಚ್ಚರದಿಂದಿರುವ’ ಸಮಯ ಇದಾಗಿರುವುದು.—ಲೂಕ 21:36.

ಆ ಸೂಚನೆಯನ್ನು ಕೊಡುವ ಮುಂಚೆ ಯೇಸು ಎಚ್ಚರಿಸಿದ್ದು: “ನೀವು ಮೋಸಹೋಗದಂತೆ ನೋಡಿಕೊಳ್ಳಿರಿ. ಯಾಕಂದರೆ ಅನೇಕರು ಬಂದು ನನ್ನ ಹೆಸರನ್ನು ಎತ್ತಿಕೊಂಡು ನಾನು ಕ್ರಿಸ್ತನು ನಾನು ಕ್ರಿಸ್ತನು ಎಂತಲೂ ಆ ಕಾಲ ಹತ್ತಿರವಾಯಿತು ಎಂತಲೂ ಹೇಳುವರು; ಅವರ ಹಿಂದೆ ಹೋಗಬೇಡಿರಿ. ಇದಲ್ಲದೆ ಯುದ್ಧಗಳೂ ಗಲಿಬಿಲಿಗಳೂ ಆಗುವದನ್ನು ನೀವು ಕೇಳುವಾಗ ದಿಗಿಲುಪಡಬೇಡಿರಿ; ಯಾಕಂದರೆ ಇದೆಲ್ಲಾ ಮೊದಲು ಆಗುವದು ಅಗತ್ಯ; ಆದರೂ ಕೂಡಲೆ ಅಂತ್ಯ ಬರುವದಿಲ್ಲ.”—ಲೂಕ 21:8, 9.

ಆ ಸೂಚನೆ ಏನು?

ನಾವು ಕಡೇ ದಿವಸಗಳಲ್ಲಿ ಜೀವಿಸುತ್ತಿದ್ದೇವೆ ಎಂದು ಗುರುತಿಸುವ ಘಟನೆಗಳ ಬಗ್ಗೆ ಯೇಸು ಹೇಳಿದ್ದು: “ಜನಕ್ಕೆ ವಿರೋಧವಾಗಿ ಜನವೂ ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಏಳುವವು; ಮತ್ತು ಮಹಾಭೂಕಂಪಗಳಾಗುವವು; ಅಲ್ಲಲ್ಲಿ ಬರಗಳೂ ಉಪದ್ರವಗಳೂ ಬರುವವು; ಉತ್ಪಾತಗಳೂ ಆಕಾಶದಲ್ಲಿ ಮಹಾ ಸೂಚನೆಗಳೂ ತೋರುವವು.” (ಲೂಕ 21:10, 11) ಯೇಸು ಇದನ್ನೂ ಹೇಳಿದನು: “ಇದಲ್ಲದೆ ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು; ಆಗ ಅಂತ್ಯವು ಬರುವದು.” (ಮತ್ತಾಯ 24:14) ಆತನು ತಿಳಿಸಿದ ಘಟನೆಗಳು ಅಂದರೆ ಯುದ್ಧಗಳು, ಭೂಕಂಪಗಳು, ಉಪದ್ರವಗಳು, ಬರಗಳು ಹೊಸದಾದ ಸಂಗತಿಗಳಲ್ಲ ಬದಲಾಗಿ ಮಾನವ ಇತಿಹಾಸದ ಆರಂಭದಿಂದಲೇ ಇದ್ದ ಸಂಗತಿಗಳಾಗಿದ್ದವು. ಆದರೆ ವ್ಯತ್ಯಾಸವೇನೆಂದರೆ ಈ ಎಲ್ಲ ಘಟನೆಗಳು ಭೌಗೋಳಿಕವಾಗಿ ಒಂದು ನಿರ್ದಿಷ್ಟ ಸಮಯಾವಧಿಯೊಳಗೇ ಸಂಭವಿಸಲಿದ್ದವು.

ನಿಮ್ಮನ್ನೇ ಹೀಗೆ ಕೇಳಿಕೊಳ್ಳಿ: ‘ಯೇಸು ಮುಂತಿಳಿಸಿದ ಎಲ್ಲ ಘಟನೆಗಳು ಯಾವ ಸಮಯದಂದಿನಿಂದ ನಡೆದಿವೆ?’ ಇಸವಿ 1914ರಂದಿನಿಂದ ಧ್ವಂಸಕಾರಕ ಲೋಕ ಯುದ್ಧಗಳು; ಸುನಾಮಿಯಂಥ ದುರಂತಕರ ಫಲಿತಾಂಶಗಳನ್ನು ತಂದ ಮಹಾ ಭೂಕಂಪಗಳು; ಎಲ್ಲೆಲ್ಲಿಯೂ ಹರಡಿರುವ ಮಲೇರಿಯಾ, ಸ್ಪ್ಯಾನಿಷ್‌ ಫ್ಲೂ ಮತ್ತು ಏಡ್ಸ್‌ನಂಥ ಮಾರಣಾಂತಿಕ ರೋಗಗಳು; ಆಹಾರದ ಅಭಾವದಿಂದ ಲಕ್ಷಾಂತರ ಜನರ ಸಾವು; ಭಯೋತ್ಪಾದನೆ ಹಾಗೂ ಸಮೂಹ-ನಾಶದ ಶಸ್ತ್ರಾಸ್ತ್ರಗಳ ಅಪಾಯದಿಂದಾಗಿ ಜಗತ್ತಿನಾದ್ಯಂತ ಕವಿದಿರುವ ಭಯ-ಭ್ರಾಂತಿ ಮತ್ತು ಯೆಹೋವನ ಸಾಕ್ಷಿಗಳು ಲೋಕವ್ಯಾಪಕವಾಗಿ ದೇವರ ಸ್ವರ್ಗೀಯ ರಾಜ್ಯದ ಸುವಾರ್ತೆಯನ್ನು ಸಾರುತ್ತಿರುವುದನ್ನು ಮಾನವಕುಲ ನೋಡಿದೆ. ಯೇಸು ಮುಂತಿಳಿಸಿದಂತೆಯೇ ಇವೆಲ್ಲವೂ ಸಂಭವಿಸುತ್ತಲಿವೆ.

ಅಪೊಸ್ತಲ ಪೌಲನು ಬರೆದ ಈ ವಿಷಯವನ್ನೂ ಮನಸ್ಸಿನಲ್ಲಿಡಿ: “ಕಡೇ ದಿವಸಗಳಲ್ಲಿ ಕಠಿನಕಾಲಗಳು ಬರುವವೆಂಬದನ್ನು ತಿಳಿದುಕೋ. ಮನುಷ್ಯರು ಸ್ವಾರ್ಥಚಿಂತಕರೂ ಹಣದಾಸೆಯವರೂ ಬಡಾಯಿ ಕೊಚ್ಚುವವರೂ ಅಹಂಕಾರಿಗಳೂ ದೂಷಕರೂ ತಂದೆತಾಯಿಗಳಿಗೆ ಅವಿಧೇಯರೂ ಉಪಕಾರ​ನೆನಸದವರೂ ದೇವಭಯವಿಲ್ಲದವರೂ ಮಮತೆಯಿಲ್ಲದವರೂ ಸಮಾಧಾನವಾಗದವರೂ ಚಾಡಿಹೇಳುವವರೂ ದಮೆಯಿಲ್ಲದವರೂ ಉಗ್ರತೆಯುಳ್ಳವರೂ ಒಳ್ಳೇದನ್ನು ಪ್ರೀತಿಸದವರೂ ದ್ರೋಹಿಗಳೂ ದುಡುಕಿನವರೂ ಉಬ್ಬಿಕೊಂಡವರೂ ದೇವರನ್ನು ಪ್ರೀತಿಸದೆ ಭೋಗಗಳನ್ನೇ ಪ್ರೀತಿಸುವವರೂ ಭಕ್ತಿಯ ವೇಷವಿದ್ದು ಅದರ ಬಲವನ್ನು ಬೇಡವೆನ್ನುವವರೂ ಆಗಿರುವರು.” (2 ತಿಮೊಥೆಯ 3:1-5) ಹೌದು, ಹರಡುತ್ತಿರುವ ನಿಯಮರಾಹಿತ್ಯತೆ, ಭಕ್ತಿಹೀನತೆ, ಕ್ರೂರತನ ಮತ್ತು ಸ್ವಹಿತಸಾಧನೆಯಿಂದಾಗಿ ‘ಕಠಿನಕಾಲಗಳು’ ಬಂದಿವೆಯೆಂದು ಇಡೀ ಲೋಕಕ್ಕೆ ವ್ಯಕ್ತವಾಗುವುದು. *

ಆದರೆ ಅಂತ್ಯದ ಮುಂಚೆ ಬರುವ ಈ ‘ಕಡೇ ದಿವಸಗಳು’ ಭವಿಷ್ಯತ್ತಿನಲ್ಲಿ ಆರಂಭವಾಗುವ ಸಾಧ್ಯತೆಯಿದೆಯೋ? ಕಡೇ ದಿವಸಗಳು 1914 ರಲ್ಲೇ ಆರಂಭವಾದವೆಂದು ಸೂಚಿಸಲು ಹೆಚ್ಚಿನ ಪುರಾವೆಗಳಿವೆಯೋ?

ಹೆಚ್ಚಿನ ಪುರಾವೆಗಳು

ಪ್ರವಾದಿ ದಾನಿಯೇಲನಿಗೆ ಎಷ್ಟೋ ವರ್ಷಗಳ ನಂತರ ಸಂಭವಿಸಲಿದ್ದ ಘಟನೆಗಳ ಮುನ್ನೋಟ ಸಿಕ್ಕಿದ ಬಳಿಕ, “ನಿನ್ನ ಜನರ ಪಕ್ಷವನ್ನು ಹಿಡಿದಿರುವ ಮಹಾ ಪಾಲಕನಾದ ಮೀಕಾಯೇಲನು [ಯೇಸು ಕ್ರಿಸ್ತನು] ಆ ಕಾಲದಲ್ಲಿ [ದಾನಿಯೇಲ 11:40ರಲ್ಲಿ ತಿಳಿಸಲಾದ “ಅಂತ್ಯಕಾಲ”] ಏಳುವನು” ಎಂದು ಹೇಳಲಾಯಿತು. (ದಾನಿಯೇಲ 12:1) ಮೀಕಾಯೇಲನು ಏನು ಮಾಡಲಿದ್ದನು?

ಮೀಕಾಯೇಲನು ರಾಜನಾಗಿ ಕ್ರಮಗೈಯುವ ಸಮಯದ ಕುರಿತು ಪ್ರಕಟನೆ ಪುಸ್ತಕ ತಿಳಿಸುತ್ತದೆ. ಅದು ಹೇಳುವುದು: “ಪರಲೋಕದಲ್ಲಿ ಯುದ್ಧ ನಡೆಯಿತು. ಮೀಕಾಯೇಲನೂ ಅವನ ದೂತರೂ ಘಟಸರ್ಪನ ಮೇಲೆ ಯುದ್ಧಮಾಡುವದಕ್ಕೆ ಹೊರಟರು. ಘಟಸರ್ಪನೂ ಅವನ ದೂತರೂ ಯುದ್ಧಮಾಡಿ ಸೋತುಹೋದರು, ಮತ್ತು ಪರಲೋಕದೊಳಗೆ ಅವರಿಗೆ ಸ್ಥಾನವು ತಪ್ಪಿಹೋಯಿತು. ಭೂಲೋಕದವರನ್ನೆಲ್ಲಾ ಮರುಳುಗೊಳಿಸುವ ಆ ಮಹಾ ಘಟಸರ್ಪನು ಅಂದರೆ ಪಿಶಾಚನೆಂತಲೂ ಸೈತಾನನೆಂತಲೂ ಹೆಸರುಳ್ಳ ಪುರಾತನ ಸರ್ಪವು ದೊಬ್ಬಲ್ಪಟ್ಟು ಭೂಮಿಗೆ ಬಿದ್ದನು; ಅವನ ದೂತರೂ ಅವನೊಂದಿಗೆ ದೊಬ್ಬಲ್ಪಟ್ಟರು. ಪರಲೋಕವೇ, ಅದರಲ್ಲಿ ವಾಸಮಾಡುವವರೇ, ಹರ್ಷಗೊಳ್ಳಿರಿ. ಭೂಮಿಯೇ, ಸಮುದ್ರವೇ, ನಿಮ್ಮ ದುರ್ಗತಿಯನ್ನು ಏನು ಹೇಳಲಿ; ಸೈತಾನನು ತನಗಿರುವ ಕಾಲವು ಸ್ವಲ್ಪವೆಂದು ತಿಳಿದು ಮಹಾ ರೌದ್ರವುಳ್ಳವನಾಗಿ ನಿಮ್ಮ ಕಡೆಗೆ ಇಳಿದುಬಂದಿದ್ದಾನೆ.”—ಪ್ರಕಟನೆ 12:7-9, 12.

ಬೈಬಲ್‌ ಪ್ರವಾದನೆಗಳು ಸೂಚಿಸುವಂತೆ ಸೈತಾನನನ್ನು ಮತ್ತು ಅವನ ದೆವ್ವಗಳನ್ನು ಹೊರದೊಬ್ಬಿ ಪರಲೋಕವನ್ನು ಸ್ವಚ್ಛಗೊಳಿಸುವ ಈ ಯುದ್ಧದಿಂದಾಗಿ ಭೂಮಿಗೆ ದುರ್ಗತಿ ಉಂಟಾಗಲಿತ್ತು. ಏಕೆಂದರೆ ಸೈತಾನನು, ತನಗಿನ್ನು ಭೂಮಿಯನ್ನು ಆಳಲು ಸ್ವಲ್ಪವೇ ಕಾಲ ಉಳಿದಿದೆ ಎಂದು ತಿಳಿದು ಕೋಪೋದ್ರಿಕ್ತನಾಗಲಿದ್ದನು. ಕಡೇ ದಿವಸಗಳಲ್ಲಿ ಅವನ ಕೋಪ ಹೆಚ್ಚೆಚ್ಚಾಗುತ್ತಾ ಹೋಗಿ ಅರ್ಮಗೆದೋನ್‌ ಯುದ್ಧದಲ್ಲಿ ಅವನು ಸಂಪೂರ್ಣ ಸೋಲುಣ್ಣುವನು.—ಪ್ರಕಟನೆ 16:14, 16; 19:11, 15; 20:1-3.

ಸ್ವರ್ಗದಲ್ಲಿ ನಡೆದ ಆ ಯುದ್ಧದ ಫಲಿತಾಂಶವನ್ನು ತಿಳಿಸಿದ ಬಳಿಕ ಅಪೊಸ್ತಲ ಯೋಹಾನನು ಘೋಷಿಸಿದ್ದು: “ಆಗ ಪರಲೋಕದಲ್ಲಿ ಮಹಾ ಶಬ್ದವನ್ನು ಕೇಳಿದೆನು, ಅದು—ಈಗ ಜಯವೂ ಶಕ್ತಿಯೂ ರಾಜ್ಯವೂ ನಮ್ಮ ದೇವರಿಗೆ ಉಂಟಾಯಿತು; ಆತನು ಅಭಿಷೇಕಿಸಿದವನ ಅಧಿಕಾರವು ಈಗ ಸ್ಥಾಪಿತವಾಯಿತು; ಹಗಲಿರುಳು ನಮ್ಮ ಸಹೋದರರ ಮೇಲೆ ನಮ್ಮ ದೇವರ ಮುಂದೆ ದೂರು ಹೇಳಿದ ದೂರುಗಾರನು ದೊಬ್ಬಲ್ಪಟ್ಟಿದ್ದಾನೆ” ಎಂದು ಹೇಳಿತು. (ಪ್ರಕಟನೆ 12:10) ಈ ವಚನದಲ್ಲಿ, ಕ್ರಿಸ್ತನು ರಾಜನಾಗಿರುವ ದೇವರ ರಾಜ್ಯ ಈಗಾಗಲೇ ಸ್ಥಾಪನೆಯಾಗಿದೆ ಎಂಬ ಘೋಷಣೆಯನ್ನು ನೀವು ಗಮನಿಸಿದಿರೋ? ಹೌದು, ಆ ಸ್ವರ್ಗೀಯ ರಾಜ್ಯವು 1914ರಲ್ಲಿ ಸ್ಥಾಪನೆಗೊಂಡಿತು. * ಹಾಗಿದ್ದರೂ ಯೇಸು “[ತನ್ನ] ವೈರಿಗಳ ಮಧ್ಯದಲ್ಲಿ” ದೊರೆತನಮಾಡುವನೆಂದು ಕೀರ್ತನೆ 110:2 ಸೂಚಿಸುತ್ತದೆ. ಇದನ್ನು, ಆ ರಾಜ್ಯವು ಪರಲೋಕದಲ್ಲಿ ಆಳುವಂತೆ ಭೂಮಿಯಲ್ಲೂ ಅಧಿಪತ್ಯ ನಡೆಸುವ ತನಕ ​ಮಾಡುವನು.—ಮತ್ತಾಯ 6:10.

ಸ್ವಾರಸ್ಯದ ಸಂಗತಿಯೇನೆಂದರೆ, ಮುಂದೆ ಆಗಲಿರುವ ಘಟನೆಗಳ ಕುರಿತು ದಾನಿಯೇಲನಿಗೆ ತಿಳಿಸಿದ ದೇವದೂತನು ಇದನ್ನೂ ಹೇಳಿದನು: “ದಾನಿಯೇಲನೇ, ನೀನು ಈ ಮಾತುಗಳನ್ನು ಮುಚ್ಚಿಡು, ಅವುಗಳನ್ನು ಬರೆಯುವ ಗ್ರಂಥಕ್ಕೆ ಮುದ್ರೆಹಾಕು, ಅಂತ್ಯಕಾಲದ ವರೆಗೆ ಮರೆಯಾಗಿರಲಿ; ಬಹು ಜನರು ಅತ್ತಿತ್ತ ತಿರುಗುವರು, ತಿಳುವಳಿಕೆಯು ಹೆಚ್ಚುವದು.” (ದಾನಿಯೇಲ 12:4) ಇದು, ನಾವೀಗ ‘ಅಂತ್ಯಕಾಲದಲ್ಲಿ’ ಜೀವಿಸುತ್ತಿದ್ದೇವೆ ಎಂಬದಕ್ಕೆ ಅತ್ಯಧಿಕ ಸಾಕ್ಷ್ಯ ಕೊಡುತ್ತದೆ. ಏಕೆಂದರೆ ಈ ಪ್ರವಾದನೆಗಳ ಕುರಿತ ತಿಳುವಳಿಕೆ ಈಗಾಗಲೇ ಸ್ಪಷ್ಟವಾಗಿದೆ ಮತ್ತು ಲೋಕವ್ಯಾಪಕವಾಗಿ ಅದನ್ನು ಘೋಷಿಸಲಾಗುತ್ತಿದೆ. *

‘ಕಡೇ ದಿವಸಗಳು’ ಯಾವಾಗ ಕೊನೆಗೊಳ್ಳುವವು?

ಕಡೇ ದಿವಸಗಳು ನಿಖರವಾಗಿ ಎಷ್ಟು ದೀರ್ಘವಾಗಿರುವವು ಎಂದು ಬೈಬಲಿನಲ್ಲಿ ಹೇಳಲಾಗಿಲ್ಲ. ಆದರೆ ಸೈತಾನನಿಗಿರುವ ಸಮಯ ಕಡಿಮೆಯಾಗುತ್ತಾ ಹೋದಂತೆ ಈ ಕಡೇ ದಿವಸಗಳಲ್ಲಿ ಭೂಮಿಯ ಪರಿಸ್ಥಿತಿ ತುಂಬ ಹದಗೆಡುವುದು ಖಂಡಿತ. ಅಪೊಸ್ತಲ ಪೌಲನು ಮುಂತಿಳಿಸಿದ್ದು: “ದುಷ್ಟರೂ ವಂಚಕರೂ ಇತರರನ್ನು ಮೋಸಮಾಡುತ್ತಾ ತಾವೇ ಮೋಸಹೋಗುತ್ತಾ ಹೆಚ್ಚಾದ ಕೆಟ್ಟತನಕ್ಕೆ ಹೋಗುವರು.” (2 ತಿಮೊಥೆಯ 3:13) ಮುಂಬರುವ ಘಟನೆಗಳ ಕುರಿತು ಹೇಳುತ್ತಿರುವಾಗ ಯೇಸು ಅಂದದ್ದು: “ಅಂಥ ಸಂಕಟವು ದೇವರು ಮಾಡಿದ ಸೃಷ್ಟಿಮೊದಲುಗೊಂಡು ಇಂದಿನ ವರೆಗೂ ಆಗಲಿಲ್ಲ; ಇನ್ನು ಮೇಲೆಯೂ ಆಗುವದಿಲ್ಲ. ಕರ್ತನು ಆ ದಿನಗಳನ್ನು ಕಡಿಮೆಮಾಡದಿದ್ದರೆ ಒಂದು ನರಪ್ರಾಣಿಯಾದರೂ ಉಳಿಯದು; ಆದರೆ ತಾನು ಆದುಕೊಂಡವರಿಗೋಸ್ಕರ ಆ ದಿನಗಳನ್ನು ಕಡಿಮೆಮಾಡಿದ್ದಾನೆ.”—ಮಾರ್ಕ 13:18-20.

ಮುಂಬರುವ ಘಟನೆಗಳಲ್ಲಿ ಅರ್ಮಗೆದೋನ್‌ ಯುದ್ಧವನ್ನು ಒಳಗೊಂಡಿರುವ ‘ಮಹಾ ಸಂಕಟ,’ ಮತ್ತು ಸೈತಾನನೂ ಅವನ ದೆವ್ವಗಳೂ ಭೂಮಿಯನ್ನು ಇನ್ನು ಮೇಲೆ ಬಾಧಿಸದಂತೆ ಅವರನ್ನು ನಿರ್ಬಂಧಿಸುವುದು ಸೇರಿದೆ. (ಮತ್ತಾಯ 24:20, 21) ಈ ಸಂಗತಿಗಳು ಸಂಭವಿಸಲಿವೆ ಎಂದು “ಸುಳ್ಳಾಡದ ದೇವರು” ಮಾತುಕೊಟ್ಟಿದ್ದಾನೆ. (ತೀತ 1:1-4) ಅರ್ಮಗೆದೋನ್‌ ಯುದ್ಧ ಮತ್ತು ಅಧೋಲೋಕಕ್ಕೆ ಸೈತಾನನ ದೊಬ್ಬುವಿಕೆಯು ದೇವರು ತೆಗೆದುಕೊಳ್ಳಲಿರುವ ಕ್ರಮವಾಗಿದೆ.

ದೇವರಿಂದ ಬರುವ ನಾಶನದ ತುಸು ಮುಂಚೆ ನಿಖರವಾಗಿ ಏನಾಗಲಿದೆ ಎಂಬದನ್ನು ಅಪೊಸ್ತಲ ಪೌಲನು ದೇವ ಪ್ರೇರಣೆಯಿಂದ ತಿಳಿಸಿದನು. “ಕಾಲಗಳನ್ನೂ ಗಳಿಗೆಗಳನ್ನೂ” ಕುರಿತು ಆತನು ಹೇಳಿದ್ದು: “ರಾತ್ರಿಯಲ್ಲಿ ಕಳ್ಳನು ಬರುವಂತೆ ಕರ್ತನ [ಯೆಹೋವನ] ದಿನವು ಬರುವದೆಂದು ನೀವೇ ಚೆನ್ನಾಗಿ ಬಲ್ಲಿರಿ. ‘ಸಮಾಧಾನ, ಸುರಕ್ಷಿತ’ ಎಂದು ಜನರು ಹೇಳುತ್ತಿರುವಾಗಲೇ ಅವರ ಮೇಲೆ ವಿನಾಶವು ಗರ್ಭಿಣಿಗೆ ಪ್ರಸವವೇದನೆ ಬರುವಂತೆ ಫಕ್ಕನೆ ಬರುವದು. ಅವರು ಹೇಗೂ ತಪ್ಪಿಸಿಕೊಳ್ಳಲಾರರು.” (1 ಥೆಸಲೊನೀಕ 5:1-3, NIBV) ‘ಸಮಾಧಾನ ಮತ್ತು ಸುರಕ್ಷತೆ’ ಎಂಬ ಆ ಹುಸಿ ಕೂಗಿಗೆ ಕಾರಣ ಏನಾಗಿರುವುದೆಂದು ತಿಳಿಸಲಾಗಿಲ್ಲ; ಕಾಲವೇ ಅದನ್ನು ತಿಳಿಸುವುದು. ಆದರೆ ಈ ಕೂಗು, ಬರಲಿರುವ ಯೆಹೋವನ ನ್ಯಾಯತೀರ್ಪಿನ ದಿನವನ್ನು ತಡೆಯುವುದಿಲ್ಲ.

ಈ ಪ್ರವಾದನೆಗಳು ನೈಜವಾಗಿವೆ ಎಂಬ ಖಾತ್ರಿ ನಮಗಿರುವಲ್ಲಿ ಸತ್ಯಾಂಶಗಳ ಕುರಿತ ಜ್ಞಾನವು ನಮ್ಮನ್ನು ಕ್ರಿಯೆಗೈಯುವಂತೆ ಪ್ರಚೋದಿಸಬೇಕು. ಹೇಗೆ? ಇದಕ್ಕೆ ಅಪೊಸ್ತಲ ಪೇತ್ರನು ಉತ್ತರ ಕೊಡುವುದು: “ಇವೆಲ್ಲವುಗಳು ಹೀಗೆ ಲಯವಾಗಿ ಹೋಗುವದರಿಂದ ನೀವು ದೇವರ ದಿನದ ಪ್ರತ್ಯಕ್ಷತೆಯನ್ನು ಎದುರು ನೋಡುತ್ತಾ ಹಾರೈಸುತ್ತಾ ಎಷ್ಟೋ ಪರಿಶುದ್ಧವಾದ ನಡವಳಿಕೆಯೂ ಭಕ್ತಿಯೂ ಉಳ್ಳವರಾಗಿರಬೇಕಲ್ಲಾ.” (2 ಪೇತ್ರ 3:11, 12) ಆದರೆ ‘ಇದರಿಂದ ನನಗೇನು ಪ್ರಯೋಜನ?’ ಎಂದು ನೀವು ಕೇಳಬಹುದು. ಮುಂದಿನ ಲೇಖನ ಅದನ್ನು ತಿಳಿಸುವುದು. (g 4/08)

[ಪಾದಟಿಪ್ಪಣಿಗಳು]

^ “ಕಡೇ ದಿವಸಗಳ” ಹೆಚ್ಚಿನ ಪುರಾವೆಗಳಿಗಾಗಿ ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತವಾದ ಎಚ್ಚರ! 2007, ಜುಲೈ-ಸೆಪ್ಟೆಂಬರ್‌ ಪುಟ 8-10; ಕಾವಲಿನಬುರುಜು 2006, ಸೆಪ್ಟೆಂಬರ್‌ 15, ಪುಟ 4-7 ಮತ್ತು 2005 ಅಕ್ಟೋಬರ್‌ 1, ಪುಟ 4-7 ನೋಡಿ.

^ ಬೈಬಲ್‌ ಕಾಲಗಣನೆಯ ಕುರಿತ ಹೆಚ್ಚಿನ ಮಾಹಿತಿಗಾಗಿ ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಎಂಬ ಪುಸ್ತಕದ 215-18 ಪುಟಗಳನ್ನು ನೋಡಿ. ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.

^ ದಾನಿಯೇಲನ ಪ್ರವಾದನೆಗೆ ಗಮನಕೊಡಿರಿ! ಮತ್ತು ಯೆಹೋವನ ಸಾಕ್ಷಿಗಳ ವರ್ಷ ಪುಸ್ತಕ-2008 (ಇಂಗ್ಲಿಷ್‌) ಪುಟಗಳು 31-9 ನೋಡಿ. ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.

[ಪುಟ 5ರಲ್ಲಿರುವ ಸಂಕ್ಷಿಪ್ತ ವಿವರಣೆ]

‘ಆ ದಿನ ಮತ್ತು ಗಳಿಗೆಯ ವಿಷಯ’ ದೇವರಿಗೆ ಮಾತ್ರ ತಿಳಿದಿದೆ ಅಂದನು ಯೇಸು

[ಪುಟ 4ರಲ್ಲಿರುವ ಚಿತ್ರ]

ಸರ್‌ ಐಸಾಕ್‌ ನ್ಯೂಟನ್‌

[ಕೃಪೆ]

© A. H. C./age fotostock

[ಪುಟ 7ರಲ್ಲಿರುವ ಚಿತ್ರಗಳು]

ಯೇಸು ಕೊಟ್ಟ ಸೂಚನೆಯು 1914ರಿಂದ ಸ್ಪಷ್ಟವಾಗಿ ತೋರಿಬರುತ್ತಿದೆ

[ಕೃಪೆ]

© Heidi Bradner/Panos Pictures

© Paul Smith/Panos Pictures